ಬಾಲ್ಯದಲ್ಲಿ ಪ್ರಭಾವಿತವಾದ ಯಕ್ಷಗಾನ ಕಲೆ-ಕರ್ನಾಟಕದ ಜಾನಪದ ಕಲೆ: ಚಂದ್ರಿಕಾ ಆರ್ ಬಾಯಿರಿ

ಕಂಬಳಿ ಹೊದ್ದು ತೆಂಗಿನ ಗರಿಯ ಚಾಪೆಯ ಮೇಲೆ ಕುಳಿತು ತೂಕಡಿಸುತ್ತ ಕಡಲೆಬೀಜ, ಚುರುಮುರಿ ತಿನ್ನುತ್ತ ಯಕ್ಷಗಾನ ನೋಡುವ ಪರಿ ಆಹಾ! ಎಷ್ಟು ಸುಂದರ. ರಾತ್ರಿ 7 ಗಂಟೆಗೆ ಊರಿನವರೆಲ್ಲಾ ಸೇರಿ ಕಿಲೋಮೀಟರ್ ಗಟ್ಟಲೆ ಟಾರ್ಚ್ ಹಿಡಿದು ನಡೆದೇ ಹೋಗುವುದು ನನಗಿನ್ನೂ ನೆನಪಿದೆ. ಹಾಗೆಯೇ ಅಪ್ಪನೊಂದಿಗೆ ಯಕ್ಷಗಾನ ತರಗತಿಗೆ ಹೋಗಿ ಅವರೊಂದಿಗೆ ಒಂದೆರಡು ಹೆಜ್ಜೆ ಹಾಕಿದ ಆ ರಸಮಯ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಇಂತಹ ಬಾಲ್ಯ ಖಂಡಿತ ಇನ್ನೊಮ್ಮೆ ಸಿಗದು. ಆ ಕಾಲಘಟ್ಟದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕಂಬಳ, ಹೋಳಿಹಬ್ಬ, ಹಾಲಬ್ಬ, ಊರ ಜಾತ್ರೆ, ಯಕ್ಷಗಾನ ಬಯಲಾಟ, ತೊಗಲುಗೊಂಬೆಯಾಟ, ಢಕ್ಕೆಬಲಿ, ನಾಗಮಂಡಲ, ಕೋಲ, ಕೋಳಿಪಡೆ, ಹೂಕೋಲು, ತಾಳಮದ್ದಳೆ ಹೀಗೆ ಒಂದೇ ಎರಡೇ ನಮ್ಮನ್ನು ರಂಜಿಸುವ ಗ್ರಾಮೀಣ ಸೊಗಡಿನ ಆಟಗಳು. ಸಂಸ್ಕೃತಿಯ ತೇರು ಎಳೆಯುವ ಸೌಭಾಗ್ಯ ನಮಗೂ ಸಿಕ್ಕಿದೆ ಎಂದರೆ ತಪ್ಪಾಗಲಾರದು.

ನನ್ನ ಬಾಲ್ಯದಲ್ಲಿ ತುಂಬಾ ಪ್ರಭಾವಿತವಾದುದು ಎಂದರೆ ಯಕ್ಷಗಾನ. ಅದರಲ್ಲೂ ಸ್ತ್ರೀ ವೇಷ ಪಾತ್ರಗಳು. ಅವರ ವೇಷಭೂಷಣ, ಹಾವಭಾವ, ರೂಪಲಾವಣ್ಯಗಳು ಹೆಂಗಸರನ್ನೇ ಮೀರಿಸುವಂತಿತ್ತು. ಇವರು ಸೀರೆ ಉಡುವ ರೀತಿ, ಮಾತಿನ ಧಾಟಿ ಮಹಿಳೆಯರನ್ನೇ ಬೆರಗುಗೊಳಿಸುತ್ತಿತ್ತು.
ಇನ್ನು ಹಾಸ್ಯಗಾರರ ವೇಷ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದೆವು. ನಿದ್ದೆಯೆಲ್ಲ ಮೂರು ಮೈಲಿ ಆಚೆ ಓಡಿಹೋಗುತ್ತಿತ್ತು. ರಕ್ಕಸರ ವೇಷ ಅಂತೂ ಭಯಾನಕ. ಕನಸಲ್ಲೂ ಬೆಚ್ಚಿ ಬೀಳಿಸುವಂತೆ ಇರುತ್ತಿತ್ತು. ಒಂದಕ್ಕಿಂತ ಒಂದು ವೇಷ ಅತ್ಯದ್ಭುತವಾಗಿರುತ್ತಿತ್ತು. ಇನ್ನು ಹಿಮ್ಮೇಳವಂತೂ ಕೇಳುವುದೇ ಬೇಡ. ಭಾಗವತರ ಕಂಠಸಿರಿಗೆ ತಲೆದೂಗದವರಿಲ್ಲ. ಚಂಡೆ ಸದ್ದಿಗೆ ತಾಳ ಹಾಕದವರಿಲ್ಲ. ಮದ್ದಳೆ ಶಬ್ದಕ್ಕೆ ಮನಸೋಲದವರಿಲ್ಲ. ಅಂತೂ ಮುಮ್ಮೇಳಕ್ಕೆ ತಕ್ಕ ಹಿಮ್ಮೇಳ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಿತ್ತು.

ಬಯಲಿನಲ್ಲಿ ನಡೆಯುವ ಯಕ್ಷಗಾನ ನೋಡುವುದರಲ್ಲಿ ಸಿಗುವ ಮಜ, ಸಂತೋಷ, ಸಡಗರ ಬಹುಶಃ ಕಟ್ಟಡದ ಒಳಗಡೆ ಕುಳಿತು ನೋಡುವ ಯಕ್ಷಗಾನದಲ್ಲಿ ಸಿಗುವುದಿಲ್ಲ. ಮೊದಲೆಲ್ಲ ರಾತ್ರಿಯಿಂದ ಬೆಳಗಿನ ಜಾವದವರೆಗೂ ಜನ ಶೃದ್ಧೆಯಿಂದ ಕುಳಿತು ಯಕ್ಷಗಾನ ನೋಡುತ್ತಿದ್ದರು. ಕಾರಣ ಇಷ್ಟೇ ಆ ಕಾಲದಲ್ಲಿ ಬೇರೆ ಮನರಂಜನೆಗಳು ಇರಲಿಲ್ಲ. ಯಾರ ಕೈಯಲ್ಲಿಯೂ ಮೊಬೈಲ್ ಕಾಣಸಿಗುತ್ತಿರಲಿಲ್ಲ. ಅಲ್ಲದೇ “ದೇವಿಯ ಹರಕೆ ಆಟ” ಆದ್ದರಿಂದ ಜನರಲ್ಲಿ ಭಯ ಭಕ್ತಿ ಎದ್ದು ಕಾಣುತ್ತಿತ್ತು. ಹಾಗೆಯೇ ಪುರಾಣ ಕಥೆಗಳು ಜನರನ್ನು ಆ ಕಾಲಕ್ಕೆ ಕೊಂಡೊಯ್ಯುವಂತಿತ್ತು. ಆದರೆ ಇತ್ತೀಚಿನ ಕಾಲದಲ್ಲಿ ಯಕ್ಷಗಾನ ಇನ್ನೂ ವಿಜ್ರಂಭಣೆಯಿಂದ, ವೈಭವೋಪೇತವಾಗಿ ನಡೆದರೂ ಕೂಡ ಈ ಕಾಲದ ಯುವಜನರನ್ನು ಸೆಳೆಯಲು ವಿಫಲವಾಗಿದೆಯೇನೋ? ಹೊಸ ಹೊಸ ಕಥೆಗಳನ್ನು ಬರೆದು ಜನರನ್ನು ತನ್ನತ್ತ ಗಮನ ಹರಿಸುವಂತೆ ಮಾಡಲು ಪ್ರಯತ್ನಿಸಿದರೂ ಕೂಡ ಯುವಜನರನ್ನು ಆಕರ್ಷಿಸಲಾಗುತ್ತಿಲ್ಲ. ಏಕೆಂದರೆ ಈಗಿನ ಸಿನೇಮಾ, ಧಾರವಾಹಿ, ರಿಯಾಲಿಟಿ ಶೋಗಳು ಹಳೆ ಕಾಲದ ಯಕ್ಷಗಾನ, ಗೊಂಬೆಯಾಟಗಳನ್ನು ನುಂಗಿ ಹಾಕಿದವೆಂದರೆ ತಪ್ಪಾಗಲಾರದು. ಆದರೂ ಕೂಡ ಈ ಕಾಲದಲ್ಲಿ “ಗಂಡು ಮೆಟ್ಟಿದ ಕಲೆ”ಯೆಂದೇ ಪ್ರಖ್ಯಾತವಾದ ಯಕ್ಷಗಾನದಲ್ಲಿ ಮಹಿಳೆಯರೂ ಕೂಡಾ ಆಸಕ್ತಿ ತೋರುತ್ತಿರುವುದು ಸೋಜಿಗವೇ ಸರಿ. ಕೇವಲ ಮುಮ್ಮೇಳದಲ್ಲಿ ಅಷ್ಟೇ ಅಲ್ಲದೇ ಹಿಮ್ಮೇಳದಲ್ಲೂ ಕೂಡ ಸ್ತ್ರೀಯರು ಇಂದು ರಾರಾಜಿಸುತ್ತಿದ್ದಾರೆ. ತಾಳಮದ್ದಳೆ ಕೂಡಾ ಈಗ ಪ್ರಸಿದ್ಧಿ ಪಡೆಯುತ್ತಿದೆ. ಅನೇಕ ಮಕ್ಕಳ ಮೇಳಗಳು ಹುಟ್ಟಿಕೊಂಡಿವೆ.

ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಶೃಮವಹಿಸುತ್ತಿವೆ. ಏಕೆಂದರೆ ಇದು ನಮ್ಮ ಕರ್ನಾಟಕದ ಪ್ರಸಿದ್ಧ ಜಾನಪದ ಹಾಗೂ ಶಾಸ್ತ್ರೀಯ ಕಲೆ. ಯಾವುದೇ ತಂತ್ರಜ್ಞಾನದ ಬಳಕೆ ಇಲ್ಲದೇ ವ್ಯಕ್ತಿಯ ಪ್ರತಿಭೆಗೆ ಸಂಪೂರ್ಣ ಪ್ರೋತ್ಸಾಹ ಕೊಡುವ ಅತ್ಯದ್ಭುತ ಕಲೆಯೆಂದರೆ ಯಕ್ಷಗಾನ. ಇದರಲ್ಲಿ ಗಾನ, ನಾಟ್ಯ, ಮಾತುಗಾರಿಕೆ, ಹಾಸ್ಯ ಎಲ್ಲದಕ್ಕೂ ಅವಕಾಶ ಇದೆ. ಜೊತೆಗೆ ಶೃಂಗಾರ, ಹಾಸ್ಯ, ವೀರ, ಕರುಣ, ಶಾಂತ ಬೀಭತ್ಸ, ಭಯಾನಕ, ರೌದ್ರ, ಅದ್ಭುತ ಹೀಗೆ ನವರಸಗಳನ್ನು ನಾವು ಆಸ್ವಾದಿಸಬಹುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿರುವ ಕಲೆ ಇದಾಗಿದೆ. ಈಗಷ್ಟೇ ಹುಟ್ಟಿದ ಮಗುವೂ ಕೂಡಾ ಚಂಡೆ ಮದ್ದಲೆ ಸದ್ದಿಗೆ ರೋಮಾಂಚನಗೊಳ್ಳುತ್ತದೆ.

ಇನ್ನು ಯಕ್ಷಗಾನದಲ್ಲಿ ಎರಡು ವಿಧ. ತೆಂಕುತಿಟ್ಟು ಹಾಗೂ ಬಡಗುತಿಟ್ಟು. ವೇಷಭೂಷಣ ಹಾಗೂ ಹಿಮ್ಮೇಳದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ವೇಷಧಾರಿಗಳು ಧರಿಸುವ ಒಂದೊಂದು ಉಡುಗೆ ತೊಡುಗೆಗೂ ವಿಭಿನ್ನವಾದ ಹೆಸರಿದೆ. ಒಡ್ಯಾಣ, ಭುಜಕೀರ್ತಿ, ಎದೆಪಟ್ಟಿ, ವೀರಗಾಸೆ,, ಗೆಜ್ಜೆ, ಕಾಲ್ಕಡಗ, ದಟ್ಟಿ, ದಗಲೆ, ಹೆಗಲುವಲ್ಲಿ, ಕೊರಳದ್ದಿಗೆ, ಕರ್ಣಪಾತ್ರೆ, ಮುಡಿ, ಕೇದಿಗೆ, ಮುಂಡಲೆ, ಹೂಚೆಂಡು, ತುರಾಯಿ, ಪಾಗಸೀರೆ ಇತ್ಯಾದಿ. ಯಕ್ಷಗಾನದಲ್ಲಿ ವೇಷ ಧರಿಸುವ ಸ್ಥಳಕ್ಕೆ ‘ಚೌಕಿ’ ಎಂದು ಹೆಸರು.

ಯಕ್ಷಗಾನ ಮೇಳದವರು ಬೆಳಿಗ್ಗೆ ದೇವರ ವಿಗ್ರಹ ಸಮೇತ ಸೇವೆ ಕೊಟ್ಟವರ ಮನೆಯಲ್ಲಿ ಬಿಡಾರ ಹೂಡುತ್ತಾರೆ. ಸಂಜೆ ‘ಚೌಕಿ’ಯಲ್ಲಿ ಗಣಪತಿ ಪೂಜೆಯಾದ ನಂತರ ಯಕ್ಷಗಾನ ಪ್ರಾರಂಭವಾಗುತ್ತದೆ. ಪ್ರಥಮವಾಗಿ ‘ರಂಗಸ್ಥಳ’ದಲ್ಲಿ ಬಾಲಗೋಪಾಲರು ಸ್ತ್ರೀ ವೇಷಗಳು ಕುಣಿದ ನಂತರ ರಾಜನ ಒಡ್ಡೋಲಗವಿರುತ್ತದೆ. ನಂತರ ಪ್ರಸಂಗ ಅಥವಾ ಕಥೆ ಪ್ರಾರಂಭ. ಬೆಳಗಿನ ಜಾವದವರೆಗೂ ಯಕ್ಷಗಾನ ನಡೆಯುತ್ತದೆ. ಹೀಗೆ ಯಕ್ಷಗಾನ ಮೇಳದವರು ಒಂದು ಮನೆಯಿಂದ ಇನ್ನೊಂದು ಮನೆಗೆ ಸಂಚಾರ ಮಾಡುತ್ತಿರುತ್ತಾರೆ. ಇವರಿಗೆ ಸಂಬಳವೂ ಕೂಡ ಹೇಳಿಕೊಳ್ಳುವಷ್ಟು ಇರುವುದಿಲ್ಲ.
ಬೇರೆ ಯಾವ ಕೆಲಸವನ್ನು ಮಾಡಲೂ ಇವರಿಗೆ ಸಾಧ್ಯವಿಲ್ಲ. ಜೊತೆಗೆ ಕೈಕಾಲುಗಳಲ್ಲಿ ಶಕ್ತಿ ಇಲ್ಲದವರೆಂದರೆ ಕುಣಿಯಲು ಅಸಾಧ್ಯ ವೆಂದರೆ ಅಂತಹ ಕಲಾವಿದರನ್ನು ಮಾತನಾಡಿಸುವರೇ ಇಲ್ಲ. ಇದೇ ತಾನೇ ಕಲಾವಿದರ ಜೀವನ. ಇನ್ನು ಯಾವಾಗಲಾದರೂ ಬಿಡುವಾದಾಗ ಮನೆಗೆ ಹೋಗಿ ಬರಬಹುದು ಅಷ್ಟೇ. ಅನೇಕ ಕಲಾವಿದರು ಗೆಜ್ಜೆ ಕಟ್ಟಿ ಕುಣಿದು ಜನಮನ ತಣಿಸುವ ಜೊತೆಗೆ ಕಲಾದೇವಿಯ ಸೇವೆಗೆಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಂತಹ ಮಹನೀಯರನ್ನು ಸ್ಮರಿಸಿ ಅಶಕ್ತ ಕಲಾವಿದರನ್ನು ಗೌರವಿಸಿ ‘ಮಾಸಿಕ ಪಿಂಚಣಿ’ ನೀಡುವ ಕೆಲಸ ಆಗಬೇಕಾಗಿದೆ. ಹೀಗೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

-ಚಂದ್ರಿಕಾ ಆರ್ ಬಾಯಿರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x