‘ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನಿಮ್ಮ ವೀಸಾಕ್ಕೆ ‘ಆನ್ ಅರೈವಲ್ ವೀಸಾ’ದಂತೆ ತಲಾ 35 ಡಾಲರ್ ಕೊಡಬೇಕು,’ ಎಂದು ಮೇಕ್‍ಮೈಟ್ರಿಪ್‍ನವರು ತಪ್ಪಾಗಿ ಹೇಳುತ್ತಲೆ ನನ್ನ ತಲೆ ಬಿಸಿಯಾಗಿತ್ತು. ನೂರರ ನಾಲ್ಕು, ಅಂದರೆ ನಾಲ್ಕು ನೂರು ಡಾಲರ್ (ಅಮೆರಿಕದ್ದು) ಖರೀದಿಸಿದ್ದೆ. ತೆರಿಗೆ, ಕಮಿಷನ್ ಇತ್ಯಾದಿ ಸೇರಿ ಪ್ರತೀ ಡಾಲರ್‍ನ ವಿನಿಯಮ ಬೆಲೆ ರೂ. 65.79 ಆಗಿತ್ತು. ಒಬ್ಬರಿಗೆ ಮೂವತ್ತೈದು ಡಾಲರ್ ಎಂದರೆ ಮೂವರಿಗೆ ನೂರೈದು ಡಾಲರ್. ಅಕಸ್ಮಾತ್ ವೀಸಾ ಕೊಡುವಾತ ಚಿಲ್ಲರೆ ಇಲ್ಲ ಎಂದು ಐದು ಡಾಲರ್ ಚಿಲ್ಲರೆ ಕೊಡಿ ಎಂದರೆ? ನಮ್ಮ ದೇಶದಲ್ಲಿ ಹೀಗೇ ಆಗುವುದು. ಸರಿಯಾದ ಚಿಲ್ಲರೆ ಕೊಡಿ ಎನ್ನುತ್ತಾರೆ ಅಥವಾ ಕೊಟ್ಟ ಹಣಕ್ಕೆ ಸರಿಹೋಗುವಷ್ಟು ಸಾಮಾನು ಕೊಡುತ್ತಾರೆ ಅಥವಾ ಚಾಕಲೇಟ್ ಕೊಡುತ್ತಾರೆ. ತೊಂಭತ್ತೈದು ಡಾಲರ್ ಇಲ್ಲ, ಇನ್ನೊಂದು ವೀಸಾ ತೆಗೆದುಕೊಳ್ಳಿ ಎಂತಲೋ, ಅಥವಾ ಜೊತೆಯಲ್ಲಿ ಬರುವ ಇನ್ನಾರಿಗೋ ವೀಸಾ ಕೊಟ್ಟು, ಅವರಿಂದ ನಿಮ್ಮ ಹಣ ತೆಗೆದುಕೊಳ್ಳಿ ಎಂದರೇನು ಮಾಡುವುದು? ಯೋಚಿಸಿದೆ, ಯೋಚಿಸಿದೆ. ಕೊನೆಗೆ ವಿಮಾನ ನಿಲ್ದಾಣದಲ್ಲಿಯೇ ನೂರು ಡಾಲರ್‍ಗೆ ಚಿಲ್ಲರೆ ತೆಗೆದುಕೊಂಡಿದ್ದೆ! ಅದು ನಾನು ಮಾಡಿದ ತಪ್ಪು.
ಮೇಕ್‍ಮೈಟ್ರಿಪ್‍ನವರು ತಮ್ಮ ದಾಖಲೆಗಳನ್ನು ಸರಿಯಾಗಿ ಅಪ್‍ಗ್ರೇಡ್ ಮಾಡಿರಲಿಲ್ಲ. ಹೋಗುವಾಗ ಕೊಡುವಂತೆಯೇ ಹಿಂತಿರುಗಿ ಬರುವಾಗಲೂ ಡಿಪಾರ್ಚರ್ ಟ್ಯಾಕ್ಸ್ ಎಂದು ತಲಾ ಒಂದು ಲಕ್ಷ ಇಂಡೋನೇಶಿಯನ್ ರುಪಯಾ ಕೊಡಬೇಕು ಎಂದೂ ತಿಳಿಸಿದ್ದರು. ಮೂವರಿಗೆ ಮೂರು ಲಕ್ಷ ರುಪಯಾ (ಐಡಿಆರ್ ಎಂದು ಕರೆಯುತ್ತಾರೆ).
ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿದು ಎಮಿಗ್ರೇಶನ್ ಕೌಂಟರ್‍ಗೆ ಹೋದರೆ ಇಂಡಿಯನ್ಸ್? ಎಂದು ಕೇಳಿದ. ಹೂಂ ಎಂದೆ. ‘ನೋ ವೀಸಾ ನೆಸಸರಿ. ಯೂ ಕ್ಯಾನ್ ಗೋ,’ ಎಂದು ಪಾಸ್‍ಪೋರ್ಟ್‍ಗಳ ಮೇಲೆ ಮುದ್ರೆಯೊತ್ತಿದ ಅಲ್ಲಿದ್ದ ಆಸಾಮಿ. ಕುಣಿದು ಕುಪ್ಪಳಿಸುವಷ್ಟು ಖುಷಿಯಾಯಿತು. ನೂರೈದು ಡಾಲರ್ ಉಳಿತಾಯ, ಅಂದರೆ ಸುಮಾರಾಗಿ ನಮ್ಮ ಏಳುಸಾವಿರ ರೂಪಾಯಿಗಳು (ಐಎನ್‍ಆರ್). ಭಾರತೀಯರಿಗೆ ಡಿಪಾರ್ಚರ್ ಟ್ಯಾಕ್ಸ್ ಕೂಡಾ ಇಲ್ಲ ಎಂದು ನಂತರ ತಿಳಿಯಿತು. ಎಷ್ಟು ಉಳಿತಾಯ? ಲೆಕ್ಕ ಹಾಕೋಣ.
ಬಾಲಿಯಲ್ಲಿಯೂ ನಮ್ಮ ರೂಪಾಯಿಯನ್ನು ಅಲ್ಲಿನ ರುಪಯಾಗೆ ಬದಲಿಸಿಕೊಳ್ಳಬಹುದು. ಅವರು ಅದಕ್ಕೆ ನೂರೈವತ್ತು ಐಡಿಆರ್ ಕೊಡುತ್ತಾರೆ. ಆದರೆ ನಮ್ಮ ರೂಪಾಯಿಯನ್ನು ಡಾಲರ್‍ಗೆ ಬದಲಿಸಿಕೊಂಡರೆ: 1) ನಮ್ಮ ಹೋಟೆಲಿನವನು ಪ್ರತೀ ಡಾಲರ್‍ಗೆ 12,600 (ಐಡಿಆರ್) ಕೊಡುತ್ತಾನೆ, 2) ಹೊರಗೆ 13,500ದಿಂದ 13,999 ತನಕ ಕೊಡುತ್ತಾರೆ. ಮೊದಲನೆಯದಕ್ಕೆ ರಸೀದಿ ಇರುವುದರಿಂದ ಆ ನೋಟುಗಳು ಖೋಟಾ ಅಲ್ಲ ಎಂದು ನಂಬಬಹುದು. ಎರಡನೆಯದು ನಿಮ್ಮ ಅದೃಷ್ಟವನ್ನು ಅವಲಂಬಿಸಿದೆ. 100 ಡಾಲರ್ ಎಂದರೆ 1,350,000 ಐಡಿಆರ್. ನಾವು ನೂರು ಡಾಲರ್‍ಗಳ ಎರಡು ನೋಟು ಕೊಟ್ಟು ಐಡಿಆರ್ ತೆಗೆದುಕೊಂಡೆವು. ನಮಗೆ ಸಿಕ್ಕ ಮೊತ್ತ ಎಷ್ಟು? ಅದು 2,700,000. ಈ ಲೆಕ್ಕಾಚಾರದ ಪ್ರಕಾರ ನಾವು ಡಾಲರ್ ಖರೀದಿಸಿ, ಅದನ್ನು ಅಲ್ಲಿನ ಹಣಕ್ಕೆ ಬದಲಿಸಿಕೊಂಡರೆ ನಮ್ಮ ರೂಪಾಯಿಗೆ ಸುಮಾರು 210 ಐಡಿಆರ್ ಸಿಗುತ್ತದೆ.
ಆದರೆ ಈ ಮೊತ್ತ ನಿಮ್ಮ ನೂರು ಡಾಲರ್ ನೋಟಿಗೆ ಮಾತ್ರ ಸೀಮಿತ. ಚಿಲ್ಲರೆ ಕೊಟ್ಟರೆ, ಅಂದರೆ ನೂರು ಡಾಲರ್ ಅಲ್ಲದ ನೋಟಗಳನ್ನು ಕೊಟ್ಟರೆ, ಪ್ರತೀ ಡಾಲರ್‍ನ ಅಪಮೌಲ್ಯವಾಗಿ ಒಂದಕ್ಕೆ ಐಡಿಆರ್ 13,200ದಿಂದ 13,500 ತನಕ ಸಿಗುತ್ತದೆ. ಇದನ್ನು ವಿವರಿಸಿ ಹೀಗೆ ಹೇಳಬಹುದು. ನಿಮ್ಮ ಹತ್ತಿರ ನೂರು ರೂಪಾಯಿ ನೋಟು ಇದೆ. ನೀವು ಅಂಗಡಿಗೆ ಹೋಗಿ ತಲಾ ಐವತ್ತು ರೂಪಾಯಿಗಳಂತೆ ಎರಡು ಕಿಲೋ ಅಕ್ಕಿ ಖರೀದಿಸಬಹುದು. ಅದೇ ನಿಮ್ಮ ಹತ್ತಿರ ಐವತ್ತು ರೂಪಾಯಿಗಳ ಎರಡು ನೋಟುಗಳಿದ್ದರೆ ನಿಮಗೆ ಒಂದೂವರೆ ಕಿಲೋ ಅಕ್ಕಿ ಸಿಗುತ್ತದೆ. ಅದರ ಇನ್ನೊಂದು ರೂಪವೆಂದರೆ ನೀವು ನೂರು ರೂಪಾಯಿ ಕೊಟ್ಟು ಒಂದು ಕಿಲೋ ಅಕ್ಕಿ ಖರೀದಿಸುತ್ತೀರಿ ಮತ್ತು ಐವತ್ತು ರೂಪಾಯಿಯನ್ನು ಕೊಟ್ಟು ಮತ್ತೆ ಅಕ್ಕಿ ಕೊಂಡರೆ 750 ಗ್ರಾಂ ಮಾತ್ರ ಸಿಗುತ್ತದೆ. ಲೆಕ್ಕಾಚಾರ ವಿಚಿತ್ರವಾಗಿದೆಯೇ? ನಮಗೆ ಬಾಲಿಯಲ್ಲಿ ಆಗಿದ್ದು ಹಾಗೆಯೇ.
ಬಾಲಿಯಲ್ಲಿ ನಮ್ಮಲ್ಲಿಯಂತೆ ಲಕ್ಷ ಮತ್ತು ಕೋಟಿಗಳನ್ನು ಬಳಸುವುದಿಲ್ಲ, ಬದಲಿಗೆ ನಮಗೆ ಗೊಂದಲ ಮೂಡಿಸುತ್ತಾ ಮಿಲಿಯನ್, ಬಿಲಿಯನ್, ಇತ್ಯಾದಿ ಹೇಳುತ್ತಾರೆ. ಅಲ್ಲಿ ನಮ್ಮಲ್ಲಿಯಂತೆ ಬಲಭಾಗದಿಂದ ಮೊದಲ ಮೂರು ಅಂಕಿಗಳ ನಂತರ ಕೊಮ, ನಂತರದ ಎರಡೆರಡು ಅಂಕಿಗಳಿಗೆ ಕೊಮಗಳನ್ನು ಹಾಕುವುದಿಲ್ಲ. ಬದಲಿಗೆ ಮೂರು ಮೂರು ಅಂಕಿಗಳ ನಂತರ ಫುಲ್‍ಸ್ಟಾಪ್ ಹಾಕುತ್ತಾರೆ. ಆದರೆ ನೋಟುಗಳಲ್ಲಿ ಅದೂ ಇರದು. ಹೆಚ್ಚೆಂದರೆ ಮೂರು ಸೊನ್ನೆಗಳಿರುವ ಸಾವಿರದ ನೋಟುಗಳನ್ನು ಮಾತ್ರ ಕಂಡ ನಮಗೆ ಬರೀ ಗೊಂದಲವೋ ಗೊಂದಲ. ಒಂದು ಮಿಲಿಯದ ನೋಟಿನಲ್ಲಿ ಎಷ್ಟು ಸೊನ್ನೆಗಳಿರುತ್ತವೆ? ಉತ್ತರಿಸುವಾಗ ಸಮಯ ತೆಗೆದುಕೊಳ್ಳುತ್ತೇವೆ. ಅದು ಹತ್ತು ಲಕ್ಷ, ಅಂದರೆ ಆರು ಸೊನ್ನೆಗಳಿರುತ್ತವೆ. ದೊಡ್ಡ ಮೊತ್ತದಲ್ಲಿ ವಿನಿಮಯ ಮಾಡಿಕೊಂಡರೆ ಚೀಲದ ತುಂಬಾ ಹಣ ಬರುತ್ತದೆಯೇನೋ ಸರಿ, ಆದರೆ ಅದನ್ನು ಕೂಡಿಸಿ ಇಟ್ಟುಕೊಳ್ಳುವುದು ತಾಪತ್ರಯ. ಆ ಹಂತದಲ್ಲಿ ವಿನಿಯಮ ಮಾಡಿಕೊಡುವ ಏಜೆಂಟರು ಮೋಸ ಮಾಡುತ್ತಾರೆ. ಹೆಚ್ಚೆಂದರೆ ಸಾವಿರದ ನೋಟನ್ನು ಕಂಡ ನಮಗೆ ಮಿಲಿಯ, ಲಕ್ಷ, 50 ಸಾವಿರ, 20 ಸಾವಿರ, 10 ಸಾವಿರದಂತಹ ಮುಖಬೆಲೆಯ ನೋಟುಗಳನ್ನು ಕೂಡಿಸುವಾಗ ತುಂಬಾ ತೊಂದರೆ ಆಗುತ್ತದೆ.
ನಂತರ ನಾನು 50 ಡಾಲರ್‍ಗಳಿಗೆ ಐಡಿಆರ್ ತೆಗೆದುಕೊಂಡೆ. ಸಿಕ್ಕಿದ್ದು 660,000 ಐಡಿಆರ್‍ಗಳು. ಈಗ ನಾನೆಷ್ಟು ಶ್ರೀಮಂತ? ಮೂವತ್ತಮೂರು ಲಕ್ಷದ ಅರವತ್ತು ಸಾವಿರ ರೂಪಯಾಗಳು. ಅದೇ ಹಣ ಭಾರತದ ರೂಪಾಯಿಯಾಗಿದ್ದರೆ ನಾನೆಷ್ಟು ಶ್ರೀಮಂತ ಅಲ್ಲವೇ?
ಬಾಲಿಯಲ್ಲಿ ವಸ್ತುಗಳ ದರ ಕೇಳಿದರೆ ಹೃದಯಾಘಾತವಾಗುತ್ತದೆ. ಒಂದು ಸೀಯಾಳದ ಬೆಲೆ 15 ಸಾವಿರದಿಂದ 25 ಸಾವಿರ, ಒಂದು ಚಪಾತಿಯ ಬೆಲೆ 22,000. ಒಂದು ಲೀಟರ್ ಕುಡಿಯುವ ನೀರಿನ ಬೆಲೆ 20 ಸಾವಿರ. (ಇಲ್ಲಿ ಹೋಟೆಲಿನಲ್ಲಿಯೂ ಕೂಡ ಕುಡಿಯುವ ನೀರನ್ನು ಖರೀದಿಸಬೇಕು. ನಗರವು ಸಮುದ್ರದ ಪಕ್ಕದಲ್ಲಿಯೇ ಇದ್ದರೂ ವಾಸನೆ ಭರಿತ ನಲ್ಲಿಯ ನೀರು ಕುಡಿಯಲಿಕ್ಕಿರಲಿ, ಸ್ನಾನಕ್ಕೂ ಅಯೋಗ್ಯವಾಗಿದೆ). ಹೋಟೆಲಿನಲ್ಲಿ ಮಸಾಜ್‍ಗೆ ಒಂದೂವರೆ ಲಕ್ಷ ರೂಪಯಾಗಳು. ಪಕ್ಕದ ಬೀದಿಗೆ ಹೋಗಲೂ ಟ್ಯಾಕ್ಸಿಯವನು ಕೇಳುವುದು ಐವತ್ತು. ಐವತ್ತೆಂದರೆ ಐವತ್ತುಸಾವಿರ ಎಂದು ಪರಿಗಣಿಸಬೇಕು. ಕೆಲವೊಮ್ಮೆ 50ಕೆ ಎಂದು ಬರೆಯುತ್ತಾರೆ. ಅಲ್ಲಿನ ಕಾಫಿ ಎಸ್ಟೇಟ್ ಒಂದರಲ್ಲಿ ನಾನು ಅರ್ಧ ಕಿಲೋ ಕಾಫಿಪುಡಿ ಖರೀದಿಸಿದೆ. ಕಾಫಿ ಪುಡಿಯ ಬೆಲೆ ಎಷ್ಟು ಗೊತ್ತಾ? ಕಿಲೋಗೆ ಎಂಟು ಲಕ್ಷದ ಇಪ್ಪತ್ತು ಸಾವಿರ ರೂಪಯಾಗಳು. ಅಂಕಿಗಳ ನಂತರ ಎಷ್ಟು ಸೊನ್ನೆಗಳಿವೆ ಎಂದು ಪುನಃ ಪುನಃ ನೊಡಿಕೊಳ್ಳುತ್ತಾ ಒಂದು ಕಂತೆ ನೋಟುಗಳನ್ನು ಎಣಿಸಿ ಕೊಟ್ಟೆ.
ಅಲ್ಲಿನ ಹಣವನ್ನು ಡಾಲರ್‍ಗೆ ಬದಲಿಸಿಕೊಂಡು, ನಂತರ ನಮ್ಮ ಹಣಕ್ಕೆ ಮತ್ತೆ ಬದಲಿಸಿಕೊಂಡರೆ ಮತ್ತೆ ಗೊಂದಲವಾಗುವುದೇ ಹೆಚ್ಚು. ನಾನು ಸುಮಾರಿಗೆ ಹೊಂದಿಕೆಯಾಗುವಂತೆ ಅವರ ರೂಪಯಾಗಳನ್ನು ಇನ್ನೂರರಿಂದ ಭಾಗಿಸತೊಡಗಿದೆ. ಆಗ ನನಗೆ ಒಂದಿಷ್ಟು ಹತ್ತಿರ ಮೊತ್ತ ಅರಿವಾಗತೊಡಗಿತು. ಆಗ ಎಳನೀರಿಗೆ 75 ರೂಪಾಯಿ, ಲೀಟರ್ ನೀರಿಗೆ 35 ರೂಪಾಯಿ, ಚಪಾತಿಯ ಬೆಲೆ 110 ರೂಪಾಯಿ, ಇತ್ಯಾದಿ. ಪ್ರಯಾಣದ ಕೊನೆಯ ದಿನ ನನ್ನ ಜೇಬಿನಲ್ಲಿ ಇಪ್ಪತ್ತು ಸಾವಿರ ಐಡಿಆರ್ ಇತ್ತು. ಅಂದರೆ ಸುಮಾರಾಗಿ ನಮ್ಮ 100 ರೂಪಾಯಿ. ಅದನ್ನು ಟ್ಯಾಕ್ಸಿಯ ಚಾಲಕನಿಗೆ ಕೊಡುಗೆಯಾಗಿ ಕೊಟ್ಟೆ. ಯಾಕೆಂದರೆ ಬಾಲಿ ಬಿಟ್ಟಮೇಲೆ ಆ ಕಾಸಿಗೆ ಕಾಸಿನ ಬೆಲೆಯೂ ಇಲ್ಲ. ಡಿಪಾರ್ಚರ್ ಟ್ಯಾಕ್ಸ್‍ಗಾಗಿ ಮೂರು ಲಕ್ಷ ಕೊಡಬೇಕಿಲ್ಲವಲ್ಲ!
ಪ್ರವಾಸದ ಕೊನೆಯ ದಿನ ನಾವು ಬಾಲಿಯ ನೈಟ್ ಸಫಾರಿಗೆ ಹೋಗಬೇಕೆಂದು ನಿರ್ಧರಿಸಿದೆವು. ಹೋಟೆಲಿನಲ್ಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಸಿದೆ. ಶುಲ್ಕ ತಲಾ 70 ಡಾಲರ್. ಬೇರೆ ಕಡೆ 65 ಡಾಲರ್ ಇದೆ ಎಂದು ತಿಳಿಯಿತು. ಮರುದಿನ ನಾವು ಕೇಳಿದಾಗ ನೀವು ಚೌಕಾಶಿ (ಬಾರ್ಗೈನ್) ಮಾಡಿಲ್ಲ, ಮಾಡಿದ್ದರೆ ಮಾಡಿದ್ದರೆ 65ಕ್ಕೇ ನೀಡುತ್ತಿದ್ದೆ. ಈಗ ಹಿಂದಿರುಗಿಸುವಂತಿಲ್ಲ ಎಂದ ಟ್ರಾವೆಲ್ ಡೆಸ್ಕ್‍ನ ಮಹಾಶಯ. ಆ ಹೋಟೆಲಿನ ಹೆಸರು ಆಲ್ ಸೀಸನ್ಸ್ ಲೆಜೆನ್ಸಿ ಹೋಟೆಲ್. ಬಾಲಿಯ ಎಲ್ಲಾ ಕಡೆಯಲ್ಲಿಯೂ ಹೆಚ್ಚಿನ ಬೆಲೆ ಹೇಳುತ್ತಾರೆ, ಚೌಕಾಶಿ ಮಾಡಿದರೆ ಮಾತ್ರ ಸರಿಯಾದ ದರಕ್ಕೆ ವಸ್ತುಗಳು, ಸೇವೆಗಳು ಸಿಗುತ್ತವೆ ಎಂದು ನಂತರ ತಿಳಿಯಿತು.
ನೈಟ್ ಸಫಾರಿಗೆ ಬುಕ್ ಮಾಡುವಾಗ ನಾವು 210 ಡಾಲರ್ ಕೊಡಬೇಕಿತ್ತು. ಆದರೆ ನಾವು ಅದಾಗಲೇ ಬದಲಿಸಿಕೊಂಡ ಐಡಿಆರ್ ಕೊಟ್ಟರೆ ಅಲ್ಲಿನ ಲೆಕ್ಕಾಚಾರವೇ ಬೇರೆ. ಅವರು ಪರಿಗಣಿಸಿದ್ದು ಒಂದು ಡಾಲರ್‍ಗೆ 14,000 ಐಡಿಆರ್. ನಾನು 2,940,000 (ಎರಡು ಮಿಲಿಯ ಒಂಭೈನೂರ ನಲವತ್ತು ಸಾವಿರ) ಐಡಿಆರ್ ಕೊಟ್ಟೆ.
ಈಗ ಈ ಪಜಲ್ ಬಿಡಿಸಿ. ಬಾಲಿ ಸಫಾರಿಗೆ ನಾನು ಭಾರತೀಯ ಕರೆನ್ಸಿಯಲ್ಲಿ ಖರ್ಚು ಮಾಡಿದ್ದು ಎಷ್ಟು? ಅಕಸ್ಮಾತ್ ನಾನು ಅಲ್ಲಿಯೇ ರೂಪಾಯಿಯನ್ನು ಐಡಿಆರ್‍ಗೆ ಬದಲಿಸಿದ್ದರೆ ನನ್ನ ಖರ್ಚೆಷ್ಟು? ನಾನು ಚೌಕಾಶಿ ಮಾಡಿ 65 ಡಾಲರ್‍ಗೇ ಹೋಗಬಹುದಾಗಿದ್ದರೆ ಆಗಿರಬಹುದಾದ ನನ್ನ ವೆಚ್ಚವೆಷ್ಟು?
ನನಗೆ ಇನ್ನೂ ಕೂಡಾ ಸರಿಯಾದ ಉತ್ತರ ಸಿಗಲಿಲ್ಲ. ಸಹಾಯ ಮಾಡುವಿರಾ?
**
ಈ ಪಜಲ್ ಬಿಡಿಸಲು ಪ್ರಯತ್ನಿಸಿದ್ದೇನೆ
೧. ಬಾಲಿ ಸಫಾರಿಗೆ ನೀವು ಭಾರತೀಯ ಕರೆನ್ಸಿಯಲ್ಲಿ ಖರ್ಚು ಮಾಡಿದ್ದು ಎಷ್ಟು? – ರೂ ೧೪,೦೦೦/- (೭೦ x ೩ = ೨೧೦ ಡಾಲರ್ ಲೆಕ್ಕದಲ್ಲಿ ) ರೂ ೧೩,೦೦೦/- =(೬೫x ೩=೧೯೫ ಡಾಲರು ಲೆಕ್ಕದಲ್ಲಿ )
ವಿವರಣೆ : ಒಂದು ರೂ ಸಿಕ್ಕ ಐ ಡಿ ಅರ್ ೨೧೦ . ಒಂದು ಡಾಲರ್ಗೆ ೧೩೮೧೬ ಐ ಡಿ ಅರ್ (ರೂ ೬೫. =ಡಾಲರ್ )
ಬಾಲಿ ಸಫಾರಿಯಲ್ಲಿ ಸಿಕ್ಕಿದ್ದು =೧ ಡಾಲರ್=೧೪೦೦೦ ಐ ಡಿ ಅರ್ – ೨೯,೪೦,೦೦೦ ಐ ಡಿ ಅರ್ ಅಂದರೆ ೨೧೨.೭೯ ಡಾಲರ್ =ರೂ ೧೪,೦೦೦/-(೨೧೦ ಡಾಲರ್ ಲೆಕ್ಕದಲ್ಲಿ)
ಬಾಲಿ ಸಫಾರಿಯಲ್ಲಿ ಸಿಕ್ಕಿದ್ದು =೧ ಡಾಲರ್=೧೪೦೦೦ ಐ ಡಿ ಅರ್ – ೨೭,೩೦,೦೦೦ ಐ ಡಿ ಅರ್ ಅಂದರೆ ೧೯೭. ೬ ಡಾಲರ್ =ರೂ ೧೩,೦೦೦/-(೧೯೫ ಡಾಲರ್ ಲೆಕ್ಕದಲ್ಲಿ)
೨ಅಕಸ್ಮಾತ್ ನೀವು ಅಲ್ಲಿಯೇ ರೂಪಾಯಿಯನ್ನು ಐಡಿಆರ್‍ಗೆ ಬದಲಿಸಿದ್ದರೆ ನಿಮ್ಮ ಖರ್ಚೆಷ್ಟು? : ರೂ ೧೯,೬೦೦/-
ವಿವರಣೆ : ಒಂದು ರೂ ಸಿಕ್ಕ ಐ ಡಿ ಅರ್ ೧೫೦ – ೨೯,೪೦,೦೦೦ ಐ ಡಿ ಅರ್ -ರೂ ೧೯,೬೦೦/-
೩ ನೀವು ಚೌಕಾಶಿ ಮಾಡಿ 65 ಡಾಲರ್‍ಗೇ ಹೋಗಬಹುದಾಗಿದ್ದರೆ ಆಗಿರಬಹುದಾದ ನಿಮ್ಮ ವೆಚ್ಚವೆಷ್ಟು?: ರೂ ೧೮೨೦೦/-
ವಿವರಣೆ : ಒಂದು ರೂ ಸಿಕ್ಕ ಐ ಡಿ ಅರ್ ೧೫೦ – ೨೭,೩೦,೦೦೦ ಐ ಡಿ ಅರ್ -ರೂ ೧೮೨೦೦/-
ಉತ್ತರ ಸರಿಯೇ ?
ಪಜಲ್ ಗೆ ಉತ್ತರ
೧. ಬಾಲಿ ಸಫಾರಿಗೆ ನೀವು ಭಾರತೀಯ ಕರೆನ್ಸಿಯಲ್ಲಿ ಖರ್ಚು ಮಾಡಿದ್ದು ಎಷ್ಟು? – ರೂ ೧೪,೦೦೦/- (೨೧೦ ಡಾಲರ್ ತರಹ ) ರೂ ೧೩,೦೦೦/- (೧೯೫ ಡಾಲರ್ ತರಹ )
೨. ಅಕಸ್ಮಾತ್ ನೀವು ಅಲ್ಲಿಯೇ ರೂಪಾಯಿಯನ್ನು ಐಡಿಆರ್‍ಗೆ ಬದಲಿಸಿದ್ದರೆ ನಿಮ್ಮ ಖರ್ಚೆಷ್ಟು? – ರೂ ೧೯,೬೦೦/- (೨೯,೪೦,೦೦೦ ಐ ಡಿ ಅರ್ )
೩ ನೀವು ಚೌಕಾಶಿ ಮಾಡಿ 65 ಡಾಲರ್‍ಗೇ ಹೋಗಬಹುದಾಗಿದ್ದರೆ ಆಗಿರಬಹುದಾದ ನಿಮ್ಮ ವೆಚ್ಚವೆಷ್ಟು?- ರೂ ೧೮,೨೦೦/-( ೨೭,೩೦,೦೦೦ ಐ ಡಿ ಅರ್ )