ಅದೊಂದು ಚರ್ಚ್. ಚರ್ಚಿನಲ್ಲೊಬ್ಬ ಉದಾರವಾದಿ ಪಾದ್ರಿ. ಕೇವಲ ಧರ್ಮಪ್ರಚಾರವಷ್ಟೇ ತನ್ನ ಜೀವನದ ಉದ್ದೇಶವೆಂದು ಭಾವಿಸದವನು. ತನ್ನ ಚರ್ಚಿನ ಸುತ್ತ ಮುತ್ತ ಇದ್ದ ಬಡ ಕೂಲಿ ಕಾರ್ಮಿಕರ ಮನೆಮನೆಗೆ ಹೋಗಿ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದ. ಅಂತಹ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನೂ ಸಹ ಚರ್ಚ್ನ ಕೆಳಭಾಗದ ಒಂದು ಪುಟ್ಟ ಕೊಠಡಿಯಲ್ಲಿ ನಡೆಸುತ್ತಿದ್ದ. ಅಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಸುತ್ತಿದ್ದ. ಅವರಿಗೆ ಲಘು ಉಪಹಾರ, ಪುಸ್ತಕ, ಬಟ್ಟೆ ಎಲ್ಲವನ್ನೂ ನೀಡಿ, ಅವರು ಭವಿಷ್ಯದ ಉತ್ತಮ ನಾಗರಿಕರಾಗಲು ಬೇಕಾದ ವಾತಾವರಣವನ್ನು ಸೃಷ್ಟಿಸಿದ್ದ. ಹೀಗಾಗಿ ಆತ ಆ ಪ್ರದೇಶದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದ್ದ. ಜನ ಅವನಿಗೆ ಎಲ್ಲ ರೀತಿಯ ನೆರವನ್ನೂ ನೀಡುತ್ತಿದ್ದರು. ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದರು. ಆತನ ಹೆಸರು ಡಾ.ರುಸೆಲ್ ಹರ್ಮನ್ ಕಾನ್ವೆಲ್ ಎಂದು. ಯೇಲ್ ವಿಶ್ವ ವಿದ್ಯಾಲಯದ ಪದವೀಧರನಾದ ಆತ ಫಿಲಿಡೆಲ್ಫಿಯಾದ ಚರ್ಚ್ ಒಂದರಲ್ಲಿ ಪಾದ್ರಿಯಾಗಿ ಬಂದಾಗ ಸಮಾಜ ಸುಧಾರಣೆ ಮಾಡಬೇಕೆಂಬ ಒತ್ತಾಸೆ ಇತ್ತು.
ಒಮ್ಮೆ ಒಂದು ಭಾನುವಾರ ಚರ್ಚಿನಲ್ಲಿ ಪ್ರಾರ್ಥನೆ ಎಲ್ಲ ಮುಗಿದ ಚರ್ಚ್ ಕೆಲಭಾಗದಲ್ಲಿದ್ದ ಒಂದು ಕೊಠಡಿಯಲ್ಲಿ ಹರ್ಮನ್ ಶಾಲೆ ಪ್ರಾರಂಭವಾಯಿತು. ಮಕ್ಕಳ ಗಮನ ಸೆಳೆಯಲು ಒಂದು ಸ್ವಾರಸ್ಯಕರ ಕಥೆಯನ್ನು ಹೇಳುತ್ತಾ ಅವರ ಮನಸ್ಸನ್ನು ಕಲಿಕೆಗೆ ಸಿದ್ಧ ಪಡಿಸುತ್ತಿದ್ದ. ಆತ ಹೇಳುವ ಕಥೆಯನ್ನು ಮಕ್ಕಳು ಕುತೂಹಲದಿಂದ ಕೇಳುತ್ತಿದ್ದರು. ಶಾಲೆಯ ಆವರಣದಲ್ಲಿ ಸ್ವಲ್ಪವೂ ಶಬ್ದವಿಲ್ಲದೆ, ಮಕ್ಕಳು ಶಾಂತರೀತಿಯಿಂದ ಶಿಸ್ತಾಗಿ ಕುಳಿತು ಆಲಿಸುತ್ತಿದ್ದರು. ಅಷ್ಟರಲ್ಲಿ ಆ ಕೊಠಡಿಯ ಬಾಗಿಲಿನಿಂದಾಚೆ ಒಬ್ಬ ಬಾಲಕಿ, ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತು ಬಿಕ್ಕುತ್ತಿದ್ದಳು. ಕಾನ್ವೆಲ್ ಅಳುವ ಶಬ್ದ ಕೇಳಿ ಬಾಗಿಲಿನೆಡೆ ನೋಡಿದಾಗ, ಒಬ್ಬ ಪುಟ್ಟ ಬಾಲಕಿ ನಿಂತಿರುವುದು ಕಣ್ಣಿಗೆ ಬಿತ್ತು. ತೇಪೆ ಹಾಕಿದ ಆಕೆಯ ಲಂಗ, ಹಸಿದ ಮುಖ, ಪಾದರಕ್ಷೆಯಿಲ್ಲದ ಆಕೆಯ ಕಾಲುಗಳು ಆಕೆ ಅದೆಷ್ಟು ಬಡವಳು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ದಯಾಮಯನಾದ ಪಾದ್ರಿ ಎದ್ದು ಹೊರಬಂದು, ‘ಮಗೂ ಏಕೆ ಅಳುತ್ತಿದ್ದೀಯೆ? ನಿನಗೇನು ಬೇಕು?’ ಎಂದು ತಲೆ ನೇವರಿಸುತ್ತಾ ಕೇಳಿದ. ಆಗ ಆ ಬಾಲಕಿ ಅಳುತ್ತಾ, ತನಗೆ ಕಲಿಯಲು ತುಂಬಾ ಆಸೆ ಯಿದೆ ಆದರೆ, ಒಳಗೆ ಬಂದು ಕುಳಿತುಕೊಳ್ಳಲು ಜಾಗವೇ ಇಲ್ಲ ಎಂದು ತಿಳಿದು ದುಃಖಿಸುತ್ತಿದ್ದೇನೆ ಎಂದು ಉತ್ತರಿಸಿದಳು. ಆಗ ಆ ಪಾದ್ರಿ ಆಕೆಯ ಕೈಯನ್ನು ಮೃದುವಾಗಿ ಹಿಡಿದು ಶಾಲೆಯ ಒಳಗೆ ಕರೆತಂದು ಜಾಗ ಮಾಡಿ ಕೂಡಿಸಿದ. ಪ್ರತಿ ದಿನ ಬಂದು ಕಲಿಯಲು ತಿಳಿಸಿದ. ಆಕೆಗೆ ಆಗ ಸಂತೋಷವಾಯಿತು.
ಪ್ರತಿದಿನ ಶಾಲೆಗೆ ತಪ್ಪಿಸದೆ ಬರುತ್ತಿದ್ದ ಆ ಬಾಲಕಿ ಓದಿನಲ್ಲಿ ತುಂಬ ಚುರುಕು. ಒಮ್ಮೆ ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ಒಪ್ಪಿಸುತ್ತಿದ್ದಳು. ಆಕೆಯ ಆಸಕ್ತಿ, ಬುದ್ಧಿವಂತಿಕೆ ಮತ್ತು ಶಿಸ್ತು ಪಾದ್ರಿಗೆ ತುಂಬ ಇಷ್ಟವಾಯಿತು. ಆಕೆಯನ್ನು ಮುಂದಿನ ಸಾಲಿನಲ್ಲೇ ಕೂಡಿಸಿ, ಪಾಠ ಹೇಳುತ್ತಿದ್ದ. ಹೀಗೆ ಎರಡು ವರ್ಷಗಳು ಕಳೆದವು. ಆ ಬಾಲಕಿ ಮತ್ತು ಪಾದ್ರಿಯ ನಡುವೆ ಒಂದು ರೀತಿಯ ತಂದೆ ಮಗಳ ಅವಿನಾಭಾವ ಸಂಬಂಧ ಬೆಸೆಯಿತು. ಆಕೆ ಬರುವುದು ಸ್ವಲ್ಪ ತಡವಾದರೂ ಸಾಕು, ಪಾದ್ರಿಯ ಚಡಪಡಿಕೆ ಹೆಚ್ಚಾಗುತ್ತಿತ್ತು. ಇಂತಹ ಬಾಲಕಿ ಒಮ್ಮೆ ಶಾಲೆಗೆ ಬರಲೇ ಇಲ್ಲ, ಒಂದು ದಿನವಾಯಿತು, ಎರಡು ದಿನವಾಯಿತು ಬಾಲಕಿ ಮಾತ್ರ ಪತ್ತೆಯೇ ಇಲ್ಲ. ಆಗ ಅವನಿಗೆ ತಡೆಯದಾಯಿತು. ಶಾಲೆ ಮುಗಿದ ಕೂಡಲೇ ಆ ಬಾಲಕಿಯನ್ನು ಹುಡುಕಿಕೊಂಡು ಆಕೆಯ ಮನೆಗೇ ಹೋದ. ಮನೆಯಲ್ಲಿ ಮೌನವಾವರಿಸಿದೆ. ಯಾರೊಬ್ಬರೂ ಮಾತನಾಡುತ್ತಿಲ್ಲ, ಆ ಹುಡುಗಿ ಅಲ್ಲಿ ಕಾಣಸದಿದ್ದಾಗ ಪಾದ್ರಿ ಬಾಲಕಿಯ ಬಗ್ಗೆ ವಿಚಾರಿಸಿದ. ಆಗ ಆ ಬಾಲಕಿಯ ತಾಯಿ ಕೊಠಡಿಯೊಂದಕ್ಕೆ ಕರೆದೊಯ್ದಾಗ ತಿಳಿಯಿತು. ಆ ಮುದ್ದು ಕಿಶೋರಿ ಡಿಫ್ತೀರಿಯಾದಿಂದ ಬಳಲಿ ಈಗಲೋ ಆಗಲೋ ಪ್ರಾಣ ಬಿಡುವ ಸ್ಥಿತಿಯಲ್ಲಿದ್ದಾಳೆ ಎಂದು. ಆಕೆಯ ಸ್ಥಿತಿ ನೋಡಿ ಕಣ್ಣೀರಿಟ್ಟರು ಕಾನ್ವೆಲ್. ಸ್ವಲ್ಪ ಸಮಯದಲ್ಲಿಯೇ ಆ ಮಗುವಿನ ಪ್ರಾಣ ಪಕ್ಷಿ ಹಾರಿಹೋಯಿತು. ಕಾನ್ವೆಲ್‌ರ ನೇತೃತ್ವದಲ್ಲಿ ಆಕೆಯ ಅಂತ್ಯ ಸಂಸ್ಕಾರವೆಲ್ಲ ನಡೆದು, ಮನೆಯವರಿಗೆ ಸಮಾಧಾನ ಮಾಡಿ ತೆರಳುವ ಸಂದರ್ಭದಲ್ಲಿ ಬಾಲಕಿಯ ತಾಯಿ ಕಾನ್ವೆಲ್ಲರನ್ನು ಒಳಕರೆದು, ಒಂದು ಪುಟ್ಟ ಚೀಲವನ್ನು ನೀಡಿದಳು. ಅದನ್ನು ತೆರೆದು ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅದರಲ್ಲಿ ೫೭ ಸೆಂಟ್‌ಗಳು ಮತ್ತು ಒಂದು ಪುಟ್ಟ ಚೀಟಿ. ಆ ಚೀಟಿಯಲ್ಲಿ ಹೀಗೆ ಬರೆದಿತ್ತು, “ಮಾನ್ಯರೇ, ಹೆಚ್ಚು ಮಕ್ಕಳು ಕುಳಿತುಕೊಳ್ಳುವ ಒಂದು ದೊಡ್ಡ ಸಭಾಂಗಣವನ್ನು ನಿರ್ಮಿಸಲು ನಾನು ಕೂಡಿಟ್ಟ ಈ ಹಣವನ್ನು ದಯಮಾಡಿ ವಿನಿಯೋಗಿಸಿ” ಅದನ್ನು ಓದಿ ಕಾನ್ವೆಲ್ಲರ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಿತು. ಆ ಪುಟ್ಟ ಹೃದಯದ ಆಶಯ, ಅದಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ ಹಣ ನಗಣ್ಯವಾದರೂ ಅದರ ಹಿಂದಿನ ಉದ್ದೇಶ ಹಿರಿದಾಗಿತ್ತು. ಈ ಘಟನೆ ನಡೆದದ್ದು ೧೮೮೪ರಲ್ಲಿ.
ಡಾ.ರುಸೆಲ್ ಹರ್ಮನ್ ಬಾಲಕಿಯ ಈ ಉದಾತ್ತ ಧ್ಯೇಯವನ್ನು ಎಲ್ಲರಿಗೂ ತಿಳಿಸಿದರು. ಪ್ರಾರ್ಥನಾ ಸಭೆಯಲ್ಲಿದ್ದ ಎಲ್ಲರೂ ತಾವೂ ಸಹ ಯಥಾಶಕ್ತಿ ಸಹಾಯ ಮಾಡಿದರು. ಆ ಬಾಲಕಿಯ ಸಹಾಯ ಮತ್ತು ಆಶಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಒಬ್ಬ ಶ್ರೀಮಂತ ಸಭಾಂಗಣಕ್ಕಾಗಿ ವಿಶಾಲವಾದ ಜಾಗವನ್ನು ಮಾರಲು ಆಸಕ್ತಿ ತೋರಿದರು. ಆದರೆ ಅದಕ್ಕೆ ಬೇಕಾಗುವಷ್ಟು ಹಣ ಎಲ್ಲಿಂದ ತರಬೇಕು? ಆದ್ದರಿಂದ ಕಾನ್ವೆಲ್ ಶ್ರೀಮಂತನ ಜಾಗವನ್ನು ಕೊಳ್ಳುವಷ್ಟು ಹಣ ಇಲ್ಲವಲ್ಲಾ? ಎಂದು ಪೇಚಾಡಿದರು. ಅದಕ್ಕೆ ಆ ಶ್ರೀಮಂತ ಹೇಳಿದ, “ಅದಕ್ಕಾಗಿ ಏಕೆ ಯೋಚಹಿಸುತ್ತೀರಿ? ನಿಮ್ಮಲ್ಲಿ ಆ ಬಾಲಕಿ ಕೊಟ್ಟ ೫೭ ಸೆಂಟ್ ಹಣವಿದೆಯಲ್ಲಾ? ಅದನ್ನೇ ಕೊಡಿ ಸಾಕು”. ಈ ಮಾತನ್ನು ಕೇಳಿ ಕಾನ್ವೆಲ್ ಅವರ ಹೃದಯ ತುಂಬಿ ಬಂತು. ಆ ಶ್ರೀಮಂತನಿಗೆ ಧನ್ಯವಾದಗಳನ್ನು ಅರ್ಪಿಸಿ, ಬೆಲೆಬಾಳುವ ಆತನ ಜಾಗವನ್ನು ವಶಕ್ಕೆ ತೆಗೆದುಕೊಂಡರು. ಇದನ್ನು ತಿಳಿದ ಜನ ಶ್ರೀಮಂತನ ಹೃದಯ ಶ್ರೀಮಂತಿಕೆಗೆ ಮನಸೋತರು. ದೇಣಿಗೆಯ ಮಹಾಪೂರವೇ ಹರಿದು ಬಂತು. ಮುಂದೆ ಅದು ಅಮೇರಿಕದ ಸುಪ್ರಸಿದ್ಧ “ಟೆಂಪಲ್ ವಿಶ್ವ ವಿದ್ಯಾಲಯ” ಎಂಬ ಹೆಸರಿನಿಂದ ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬ ಹೆಸರು ಗಳಿಸಿತು. ಈ ವಿಶ್ವ ವಿದ್ಯಾಲಯದಿಂದ ಇಲ್ಲಿಯ ವರೆಗೆ ಸುಮಾರು ಮೂರು ಲಕ್ಷ, ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇಂದಿಗೂ ಇಲ್ಲಿ ಸುಮಾರು ದೇಶ ವಿದೇಶಗಳ ೩೭ ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲಿಯ ಒಂದು ಕೋಣೆಯಲ್ಲಿ ಇಂದಿಗೂ ಆ ಬಾಲಕಿಯ ಭಾವಚಿತ್ರವಿದೆ.
-ಎಂ. ಎನ್. ಸುಂದರ ರಾಜ್