ಚಂದ್ರನಿಗೆ ರೋಹಿಣಿಯೂ, ಉಳಿದ ಇಪ್ಪತ್ತಾರು ಪತ್ನಿಯರೂ, ಸುತ್ತಮುತ್ತ ರಾರಾಜಿಸುವ ಇನ್ನುಳಿದ ತಾರೆಯರೂ, ಜಲದ ನೈದಿಲೆಯೂ, ಮರದ ಆಕಾಶಮಲ್ಲಿಗೆಯೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತ್ಯರ್ಹರೇ. ಅಲ್ಲದೆ ಅವನು ಅವರೊಬ್ಬೊಬ್ಬರ ಜೊತೆಗೂ ಹೆಣೆದುಕೊಂಡ ಅನುಬಂಧದ ಪರಿಗೆ ಸರಿಯಾಗಿ ಒಬ್ಬೊಬ್ಬರೂ ಅವರವರದೇ ರೀತಿಯಲ್ಲಿ ಅವನ ಸಂತೋಷವನ್ನು ಪರಿಪೂರ್ಣವಾಗಿಸುತಿದ್ದರು. ಅವರಲ್ಲೊಬ್ಬರ ಕೊಡುಗೆಯ ವಿನಃವೂ ಅವನ ಸಂತೋಷ ಅಪರಿಪೂರ್ಣ. ಮತ್ತಾಗ ಚಂದ್ರ ಹುಣ್ಣಿಮೆ ಬಂದರೂ ತನ್ನ ತಾನು ಪೂರ್ಣವಾಗಿ ಕಂಡುಕೊಳ್ಳಲಾರ. ಇದು ಅವನ ಬಲಹೀನತೆಯೆಂದರೂ ಸರಿಯೇ, ಮತ್ತೆ ಮತ್ತೆ ಅಳಿಯುತ್ತ ಬೆಳೆಯುತ್ತ ಅದೆಷ್ಟೋ ಬಾರಿ ಪುನರ್ಜನಿಸುವ ಅವನ ಅಪರೂಪದ ತುಂಬುಬಾಳಿನ ಸಮೃದ್ಧಿಯೆಂದರೂ ಸರಿಯೇ..
ರೋಹಿಣಿ ಮತ್ತವಳ ತಾರಾಸಹೋದರಿಯರ ಬಾಳಿನಲ್ಲಿ ಚಂದ್ರನ ಪತ್ನಿಯರೆಂಬ ಸತ್ಯದ್ದೇ ಕಾರುಬಾರು. ಅವರ ಅನುಭವಗಳೆಲ್ಲ ಈ ಸತ್ಯದ ಆಧಾರದ ಮೇಲೆ ಮತ್ತು ಸುಖಸಂತೋಷದ ಮುಖವಾಡದ ಅಡಿ ಅರಳುತಿದ್ದವು, ಬಾಡುತಿದ್ದವು. ತಲೆಯೆತ್ತಿ ಹಿಡಿಯಬಲ್ಲಂಥದ್ದೊಂದು ಮುಖವಿದೆ ಅನ್ನುವದ್ದೇ ದೊಡ್ಡ ವಿಷಯ ಅಲ್ಲಿ. ಯಾಕಂದರೆ ಚಂದ್ರ ಜಗದೇಕ ಸುಂದರ, ನಿಲುಕದ ಆಕಾಶದಲ್ಲಿರುವವ, ಕಡ ತಂದ ಬೆಳಕಲ್ಲೂ ಕಡವಿತ್ತವನಿಗಿಂತ ಹೆಚ್ಚು ಶಾಂತವಾಗಿ ತನ್ನ ಪ್ರಭೆಯನ್ನು ತಾನು ಬಿಂಬಿಸಿಕೊಳ್ಳಬಲ್ಲ ಆತ್ಮವಿಶ್ವಾಸಿ, ಎಲ್ಲಕ್ಕೂ ಮೀರಿ ತನ್ನೊಡಲ ಕುಳಿಗಳಿಗೂ ಚಂದಾತಿಚಂದದ ಮೊಲದಾಕಾರವಿತ್ತು ಅದನ್ನೂ ಆಕರ್ಷಣೆಯ ವಿಷಯವಾಗಿಸಿರುವ ಧನಾತ್ಮಕ ವ್ಯಕ್ತಿತ್ವ. ಅಂಥವನ ಪತ್ನಿಯರ ಪಟ್ಟವೆಂದರೆ ಅದೆಷ್ಟೇ ನಿರೀಕ್ಷೆ- ಉಪೇಕ್ಷೆ, ಅತೃಪ್ತಿ, ನಿರಾಸೆಗಳ ಹೊರೆ ಹೊರಬೇಕಾದರೂ ತಲೆಯೆತ್ತಿಯೇ ಬಾಳಬೇಕಾದ ಸ್ಥಾನ! ಹಾಗಾಗಿ ಅವರು ಬಾಳಿನ ಶುಕ್ಲಪಕ್ಷದಲ್ಲಿ ನಗುತ್ತಾರೆ, ಕೃಷ್ಣಪಕ್ಷದಲ್ಲಿ ಅಳುವುದಿಲ್ಲ, ಅಳಲಾರರು ಯಾಕಂದರೆ ನಗದಿದ್ದರೂ ಸರಿಯೇ, ಮಿನುಗಲಿಕ್ಕಾಗಿಯೇ ಇರುವವರವರು, ತಾರೆಗಳು, ಅವರಂಥವರು ಅಳಬಾರದಲ್ಲಾ…
ಆಕಾಶದ ಮಿಕ್ಕ ತಾರೆಗಳ ಕತೆಯೇನು ಹೇಳುವುದು! ಹೊಳೆಹೊಳೆಯುತಾ ಅವನ ಕುಡಿಗಣ್ಣ ನೋಟವೊಂದಕಾಗಿನ ಹಂಬಲಿಕೆಯನ್ನೇ ಅವು ಉಸಿರಾಡುವುದು. ಅದೋ! ಚಂದ್ರನೊಮ್ಮೆ ನೋಡಿಬಿಟ್ಟನೆಂದರೆ ಸಾಕು, ಝಿಲ್ಲನೇ ಚಿಮ್ಮುತ್ತದೆ ಅವುಗಳೊಳಗೆ ಪ್ರಭಾರಸ! ಇನ್ನೊಮ್ಮೆ ಆ ಕುಡಿನೋಟ ದೊರಕುವವರೆಗೂ ಮಿನುಗಿಸಬಲ್ಲ ಬೆಳಕಿನೊಂದು ತೊರೆಯೇ ಅಲ್ಲಿ ಹರಿದುಬಿಡುತ್ತದೆ. ಅಲ್ಪಸುಖವನ್ನು ಬರೆಯಿಸಿಕೊಂಡು ಬಂದವರು ಅಲ್ಪತೃಪ್ತಿಯನ್ನೂ ಬರೆಯಿಸಿಕೊಂಡು ಬಂದಿರುತ್ತಾರೇನೋ!
ಜಲದ ನೈದಿಲೆಗಾದರೂ ಹುಣ್ಣಿಮೆ ಅಮಾವಾಸ್ಯೆಗಳ ಪರಿವೆಯೇ ಇಲ್ಲದಷ್ಟು ಚಂದ್ರನ ನಿರಂತರ ನಿರೀಕ್ಷೆ. ಪ್ರತಿರಾತ್ರಿ ಅರಳುವುದು ಅವನಿಗಾಗಿ ಕಾಯುವುದು. ಅವ ಕಂಡನೋ ನಗುನಗುತ್ತಾ ಪಕಳೆ ಮುಚ್ಚಿಕೊಳುವುದು, ಕಾಣಲಿಲ್ಲವೋ ನಗದೆಯೇ ಪಕಳೆ ಮುಚ್ಚಿಕೊಳುತಾ ನಾಳಿನ ರಾತ್ರಿಗಾಗಿ ತಯಾರಾಗುವುದು, ನಿನ್ನೆಗಿಂತ ಒಂದು ಚಿಟಿಕೆ ತೂಕ ಜಾಸ್ತಿಯಾದ ನಿರೀಕ್ಷೆಯಲ್ಲಿ ಹಾಗೂ ಬಹುಶಃ ಅಷ್ಟೇ ತೂಕದಷ್ಟು ಕಡಿಮೆಯಾದ ಭರವಸೆಯಲ್ಲಿ. ಅವ ತನ್ನಂದ ಕಂಡನೋ ಇಲ್ಲವೋ ಎಂಬುದು ಗಣನೆಗೇ ಬರದಷ್ಟು ಅವನನ್ನ ಕಾಣುವ ಧಾವಂತ ಇವಳಿಗೆ! ಅಥವಾ ಕೆಲವೊಮ್ಮೆ ಇಲ್ಲಗಳ ನೆರಳಲೇ ಬಾಳುತಾ ಜಾಣಕುರುಡು, ಜಾಣಕಿವುಡುಗಳ ಜತೆ ಜಾಣಪೆದ್ದುತನವೂ ಮೈಗೂಡುವುದೋ ಏನೋ!
ಮರದ ಆಕಾಶಮಲ್ಲಿಗೆಯೋ, ಆಶಾವಾದಿ. ಭೂಮಿತೂಕದ ತಾಳ್ಮೆಯವಳದು. ಅದೆಷ್ಟೋ ದಿನ ಹಸಿರು ಅರಳಲು ಮುಡಿಪಾದ ಸಮಯದಲ್ಲಿ ತಾನು ಅಪ್ರಕಟವುಳಿಯುತ್ತಾಳೆ. ಕಾದು ಕೂತಿದ್ದೆಲ್ಲ ಕ್ಷಣಗಳಲ್ಲಿನ ವಿರಹವನ್ನು ಗಾಳಿಗೆ ತೂರಿಬಿಡುತ್ತಾಳೆ, ಆಸೆಯಲೆ ತಂದೆಲ್ಲ ಹುಮ್ಮಸ್ಸನ್ನು ಒಟ್ಟುಗೂಡಿಸಿಡುತ್ತಾಳೆ. ಸಕಾಲ, ಝಗ್ಗನೇ ಹುಮ್ಮಸ್ಸಿನ ಬುಗ್ಗೆ ಚಿಮ್ಮಗೊಡುತ್ತಾಳೆ, ಅದರ ಸಮೃದ್ಧಿಯಲ್ಲಿ ಗೊಂಚಲುಗೊಂಚಲಾಗಿ ಅರಳುತ್ತಾಳೆ. ಅಪೂರ್ಪ ಸಿಕ್ಕಿದ ಸಖಿಗೆ ಅನುಪಮ ಗಮನವೀಯುತ್ತಾನೆ ಚಂದ್ರಮ. ಮತ್ತೊಂದಷ್ಟು ದಿನಕ್ಕೆ ಕಾಣೆಯಾಗಿಬಿಡುವಳಲ್ಲಾ ಅನ್ನುವ ಆತಂಕ ಅವನದು. ಯಾರ ಪಕ್ಕದಲಿದ್ದರೂ ಹುಚ್ಚು ಹುಚ್ಚಾಗಿ ತನ್ನೆದೆನೆಲ ಬಗೆಬಗೆದು ಅವಳಿಗೇ ಬೆಳಕೆರೆಯುತ್ತಾನೆ. ಹಾಗಾಗಿ ಕೃಷ್ಣಪಕ್ಷದುದ್ದ ಕೂಡ ಆಕಾಶಮಲ್ಲಿಗೆಯ ಬಿಳುಪಿನಲಿ, ಹೊಳಪಿನಲಿ ಒಂದಿಷ್ಟೂ ಕೊರತೆ ಕಾಣುವುದಿಲ್ಲ. ಆದರೆ ಹಾಗೆ ಕಾಣಿಸಿಕೊಳ್ಳದೆ, ಯಾರನೂ ಕಾಣಲಾಗದೆ ಒಂದಷ್ಟು ಹೊತ್ತು ಜಗಕೆ ಅಪ್ರಕಟವುಳಿಯುವುದು ಒಂದು ವರವೋ, ಶಾಪವೋ, ಆಕಾಶಮಲ್ಲಿಗೆಯನೇ ಕೇಳಬೇಕು!
ಹೀಗಿರಲಾಗಿ ಒಂದೊಮ್ಮೆ ಚಂದ್ರನ ಕಣ್ಣು ಅದೋ ಆ ಮೂಲೆಯ ತಾರೆಯೊಂದರ ಮೇಲೆ ಬಿತ್ತು. ಎಲ್ಲ ತಾರೆಗಳಂತೆ ಸ್ವಂತಿಕೆಯಲೇ ಬೆಳಗಬಲ್ಲ ಪುಟ್ಟ ತಾರೆ. ಹೆಸರಾಂತ ಹೆಸರಿಲ್ಲದ, ಗುರುತಿಸಲ್ಪಡುವಂಥ ಗುರುತಿಲ್ಲದ, ಆದರೂ ರೋಹಿಣಿಯೇ ಮುಂತಾದವರು ಎಷ್ಟರ ಮಟ್ಟಿಗೆ ತಾರೆಯರೋ ಅಷ್ಟರ ಮಟ್ಟಿಗೆಯೇ ತಾರೆಯೆನಿಸಿಕೊಳ್ಳಬಲ್ಲ ಒಂದು ಮಿನುಗುತಾರೆ. ತನ್ನ ಕುಡಿನೋಟದೊಂದು ಚಿಟಿಕೆ ಬೆಳಕು ಆ ಕಣ್ಣ ಹೊಕ್ಕ ಕ್ಷಣ, ಅದನೇ ನೂರ್ಮಡಿಸಿ ಫಳ್ಳೆಂದು ಪ್ರತಿಫಲಿಸಿ ಕೃತಜ್ಞತೆ ಸೂಸುವ, ಕೃತಾರ್ಥತೆ ವ್ಯಕ್ತಪಡಿಸುವ ತಾರೆಗಳ ನಡುವೆ ಮೆರೆವ ಸುಂದರಗೊಂದು ಅಚ್ಚರಿ ಕಾದಿತ್ತು ಇಂದು. ಈ ಕಣ್ಣು ತನ್ನ ನೋಟದ ಹಾದಿಯಲಿ ಕದ ತೆರೆದು ಕಾದಿಲ್ಲ. ಬದಲಿಗದು ಅಷ್ಟಗಲ ಆಗಸ ಬಿಟ್ಟು ಇನ್ನೆಲ್ಲೋ ಶೂನ್ಯದೆಡೆ ಮುಖ ಮಾಡಿದೆ.
“ಇನ್ನೊಬ್ಬ ಶಶಾಂಕ ಹುಟ್ಟಿದನೇ ಜಗದಲ್ಲಿ?! ” ಮೊದಲಬಾರಿ ಅತಂಕಿತ ರಾತ್ರಿಯೊಡೆಯ. ಬಿಡದೇ ನಿರುಕಿಸುತ್ತಾನೆ. ಇಲ್ಲದ ಪ್ರತಿಕ್ರಿಯೆಗಂಜಿ ಕಣ್ತಪ್ಪಿಸುತ್ತಾನೆ, ಮರುಕ್ಷಣ ಅಪನಂಬಿಕೆಯಲಿ ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ಆ ಕಡೆಗೇ ಕಣ್ಹಾಯಿಸುತ್ತಾನೆ. ಊಹೂಂ… ಆಕೆಯಿನ್ನೂ ದಿಗಂತಮುಖಿಯೇ… ನೋಡಿಯೇ ನೋಡುತಾನೆ ಚಂದ್ರ. ನೋಡುತಾ ಅವಳಂಥ ಆಕರ್ಷಣೆ ಇನ್ನೆಲ್ಲೂ ಇಲ್ಲ ಅನಿಸುತ್ತದೆ ಅವನಿಗೆ. ಹೇಗಾದರೂ ಅವಳ ಕಣ್ಸೆಳೆದರೂ ಸಾಕು, ತನ್ನ ಚೆಲುವಿನ ಬಲೆಗೆ ಬಿದ್ದೇಬೀಳುವಳೆನ್ನುವ ನಂಬಿಕೆಯವನದು. ಭೂಮಿ ಸುತ್ತುವ ಹೆಳೆಯಲಿ ಒಂದು ಪರಿಧಿಯ ಮೇಲಿನ ದಶದಿಕ್ಕಿನೆಲ್ಲ ಬಿಂದುವಲೂ ಚಲಿಸಬಲ್ಲ ಗಂಡು ಚಂದ್ರ. ಹಾಗೆ ಸುತ್ತುತಾ ಅವಳ ನೇರನೋಟ ನೆಟ್ಟ ರೇಖೆಯ ಮೇಲಿವನು ಬಂದಾಗಲೊಮ್ಮೆ ಗಡಬಡಿಸಿ ಎಚ್ಚೆತ್ತುಕೊಳುತಾಳೆ, ಚಂದ್ರನ ಬಿಡುಗಣ್ಣ ನೋಟದ ಪ್ರಶ್ನೆಗೋ, ಅಲ್ಲಿದ್ದ ಆತುರಕೋ ಬೆಚ್ಚಿಬಿದ್ದಳೇನೋ ಎಂಬಂತೆ ಫಳಕ್ಕನೇ ಒಮ್ಮೆ ಮಿಂಚುತಾಳೆ.
ಚಂದ್ರ ಇಲ್ಲದ ಬಿಗು ತೋರುತಲೇ ಕೇಳುತ್ತಾನೆ. “ಏನಂಥ ಸೆಳೆತವಿತ್ತೋ ಅಲ್ಲಿ?! ನಾ ನಿನ್ನನೇ ನೋಡುತಿದ್ದ ಅಷ್ಟೊಂದು ಕ್ಷಣಗಳೂ ಬಿಡದೆ ನಿನ್ನನ್ನು ತನ್ನೊಳಗೆ ಬಂಧಿಸಿಟ್ಟದ್ದು ಎಂಥಾದ್ದು, ಏನದು?!”
“ಕನಸು..” ಚಂದ್ರನಿಗೆ ಉತ್ತರಿಸುತ್ತಾಳೆ ಮೆಲ್ಲಗೆ ಅವಳು.
“ಹೋ.. ನನ್ನ ಗಮನಿಸದೇ ಇವಳು ಇದ್ದದ್ದಾದರೂ ನನ್ನ ಕನಸೊಳಗೇ..” ತುಸು ನಿರಾಳವಾದ ಚಂದ್ರ. ಉಪೇಕ್ಷೆ ಜಗತ್ತಲ್ಲಿ ಯಾರಿಗೆ ಪಥ್ಯವೆನಿಸೀತು? ಅದೂ ಕಣ್ಮಣಿಗಳೆನಿಸಿಕೊಂಡವರಿಗೆ ಸಣ್ಣ ಮಟ್ಟಿನ ಉದಾಸೀನದ ಸುಳಿವನ್ನೂ ಸಹಿಸಲಾಗುವುದಿಲ್ಲ. ಅಪ್ರಯತ್ನ ಪ್ರಶ್ನೆಯಿನ್ನೊಂದು ಹೊರಟೇಬಿಟ್ಟಿತು, “ಯಾರಿದ್ದರೋ ಕನಸಲ್ಲಿ?”
“ನಾನಿದ್ದೆ…” ಅವಳಿನ್ನೂ ಮುಗಿಸಿರಲಿಲ್ಲ…
ಚಂದ್ರಗೆ ಅತ್ಯಾತುರ, “ಜೊತೆಯಲ್ಲಿ?”
“ಲೆಕ್ಕವಿಲ್ಲದಷ್ಟು ಜೀವಂತಿಕೆಯ ಚಿಲುಮೆಗಳು, ಅದೂ ಬಣ್ಣಬಣ್ಣದ ಜೀವಂತಿಕೆ. ಒಂದಷ್ಟು ಹಸಿರು, ಹಸಿರ ಮುಡಿಯಲಿ ಕೆಂಪು, ಹಳದಿ, ನೀಲಿ..ಒಂದಷ್ಟು ಕಪ್ಪು-ಬಿಳಿ… ಹೀಗೇ… ಮತ್ತವುಗಳ ನಡುವೆ ರಾಗದ್ವೇಷ, ಪ್ರೇಮಾನುರಾಗ, ವಿರಹ-ಮಿಲನಗಳು.. ಹೀಗೆ ಅವುಗಳ ಅಳತೆಗೂ ಮೀರಿದ ಭಾವಾತಿರೇಕಗಳು. ಮಾತೃತ್ವ, ಪಿತೃತ್ವ, ಭ್ರಾತೃತ್ವ, ಸ್ನೇಹ-ಸಖ್ಯವೇ ಮುಂತಾದ ಬಂಧಗಳು ಮತ್ತವುಗಳ ನಡುವಿನ ಸರಸ-ವಿರಸಗಳು. ತ್ಯಾಗ ಮತ್ತದರ ಪಕ್ಕ ಸ್ವಾರ್ಥ, ಶಾಂತಿ ಮತ್ತದರ ಪಕ್ಕವೇ ಹೊಡೆದಾಟ ಬಡಿದಾಟ…”
“ಹೋ ಭೂಮಿಯೆದೆ ಹೊಕ್ಕಿದ್ದಳು ಈ ತಾರೆ ಕನಸಲ್ಲಿ. ಎಷ್ಟಂದರೂ ಪುಟ್ಟದೊಂದು ಅಸ್ತಿತ್ವ ಇವಳದು, ಈಕೆ ಬಾನಿನ ವೈಶಾಲ್ಯವೇನು ಗಣಿಸಿಯಾಳು? ಅವಳ ಲೆಕ್ಕಕ್ಕೆ ದಕ್ಕಿದ್ದು ಜಗದ ಕಾಲಡಿಯ ಭೂಮಿ! ಭೂಮಿಯೋ, ನನ್ನ ಅಭಿಮಾನಿ. ನಾ ಕಂಡರೆ ರಾತ್ರಿಯೂ ನಳನಳಿಸುತ್ತಾಳೆ, ಕಾಣದಿದ್ದರೆ ಕರಿ ಮುಸುಕೊಳಗೆ ಮರೆಸಿಕೊಳ್ಳುತ್ತಾಳೆ, ಯಾರಿಗೆ ಗೊತ್ತು ಮುಸುಮುಸು ಅಳುತ್ತಿದ್ದರೂ ಇರಬಹುದು..”
ಅಬ್ಬ! ಚಂದ್ರನ ಯೋಚನೆಯೇ! ಇದು ಆತ್ಮಾಭಿಮಾನವೆನ್ನೋಣವೇ?
“ಆದರೂ ಇವಳ ಕನಸಲಿ ನಾನಿಲ್ಲ..” ಚಂದ್ರನಿಗಿನ್ನು ಸಹಿಸಲಾಗುತ್ತಿಲ್ಲ. “ಎಲೈ ಪುಟ್ಟ ಸೌಂದರ್ಯವೇ, ಈ ಹೊತ್ತು ನಾ ನಿನ್ನಲಿ ಆಸಕ್ತ. ಕನಸನ್ನ ಬಿಟ್ಟು ಬಾ ಇತ್ತ. ತಡಮಾಡಬೇಡ. ನೂರು ನನ್ನ ಕಾರ್ಯಗಳಿವೆ, ನಾನು ಜಗಕೊಬ್ಬನೇ ಚಂದ್ರ. ಕೆಲಕಾಲವಷ್ಟೇ ಇದ್ದೇನು, ಜಗವೇ ಹಾತೊರೆವ ಬಿಳುಪಿನಲಿ ನಿನ್ನನಾವರಿಸಿಯೇನು”
ತಾರೆ ನಗುತಾಳೆ, “ಎಲೈ ಜಗದೇಕ ಸುಂದರನೇ, ಕ್ಷಮಿಸು ಬರಲಾರೆ. ಆಸೆ-ನಿರಾಸೆ ಮಿಳಿತದಲಿ ಕನಸ ಕೂಸಾಗಿದೆ. ಮನಸ ಜೋಲಿಯಲೆದ್ದೆದ್ದು ಅಳುತಿದೆ. ನಾನೇ ಓಲೈಸಬೇಕು, ಸುಮ್ಮನಾಗಿಸಬೇಕು. ನೀನು ತಪ್ಪು ತಿಳಿದಿರುವೆ, ನಾ ಕಾಯುತಿಲ್ಲ ಬಿಳುಪಿಗೆ. ಬಿಳುಪು ನನ್ನಲಿದೆ, ನನ್ನದೇ ಇದೆ. ನನ್ನಿಂದ ಎಂದೂ ಮರೆಯಾಗದಷ್ಟು ಸ್ನೇಹಮಯವೂ ನಂಬಿಕಸ್ಥವೂ ಆಗಿದೆ. ನಾ ಕಾಯುವುದೇನಿದ್ದರೂ ಕತ್ತಲಿಗೆ, ನನ್ನ ಅಸ್ತಿತ್ವವನ್ನು ಮಿನುಗಿಸಬಲ್ಲ, ನನ್ನ ಮಿನುಗಿಗೊಂದು ಅಸ್ತಿತ್ವ ಒದಗಿಸಬಲ್ಲ ಕಡುಗತ್ತಲಿಗೆ.ಹೋಗು ನಿನ್ನನ್ನು ಕಾರ್ಯ ಕರೆಯುತಿದೆ.”
ಮೊತ್ತಮೊದಲಸಲ ಚಂದ್ರನೊಳಗೊಂದು ಅಕಾಲ ಅಮಾವಾಸ್ಯೆ ಕವಿಯಿತು…