ಸುಮ್ ಸುಮನಾ ಅಂಕಣ

ಬಾದಾಮಿಯ ಬನಶಂಕರಿ ಜಾತ್ರಿ ಸಂಭ್ರಮ: ಸುಮನ್ ದೇಸಾಯಿ

     

'ಬನದಹುಣ್ಣಿಮಿ’ ಮುಂದ ಬನಶಂಕರಿ ಜಾತ್ರಿ ಭಾಳ ದೊಡ್ಡ ಪ್ರಮಾಣದಾಗ ಆಗತದ, 1 ತಿಂಗಳ ತನಕಾ ಇರ್ತದ,ಎಲ್ಲೆಲ್ಲಿಂದೊ ಜನಾ ಬರ್ತದ,ನೋಡಬೇಕ ಆ ಛಂದಾನ, ಸುತ್ತಮುತ್ತಲ ಹಳ್ಳ್ಯಾಗಿನ ಮಂದಿ ಬಂಡಿ ಕಟಗೊಂಡ ಜಾತ್ರಿ ಮಾಡಲಿಕ್ಕೆ ಬರತಾರ. ಬಂಡಿಯೊಳಗ ವ್ಯವಸ್ಥಾ ಹೆಂಗಿರತದ ಗೊತ್ತೇನ ಈಗಿನ ನಿಮ್ಮ ವಿಮಾನದಾಗ ಹೊದ್ರು ಅದರಷ್ಟ ಆರಾಮ ಅನಸಂಗಿಲ್ಲ, ಬಂಡ್ಯಾಗ ಮೆತ್ತಗ ಹುಲ್ಲ ಹಾಸಿ ಮ್ಯಾಲೆ ಜಮಖಾನಿ ಹಾಸಿ ಕುಡಲಿಕ್ಕೆ ಎಷ್ಟ ಮಸ್ತ ಮೆತ್ತಗ ಹಾಸಿಗಿ ಮಾಡಕೊಂಡಿರತಾರ ಮತ್ತ ಅಡಗಿ ಮಾಡಲಿಕ್ಕೆ ಎನೇನು ಸಾಮಾನು ಬೇಕಾಗಗ್ತದ ಅದನ್ನೆಲ್ಲಾ ವ್ಯವಸ್ಥಿರ ಕಟಗೊಂಡ ಹೋಗಿರತಾರ. ಅಲ್ಲೆ 3 ಕಲ್ಲ ಇಟ್ಟು ಒಲಿ ಹೂಡಿ ಅಡಗಿ ಮಾಡ್ಕೊತಾರ, ಸರಸ್ವತಿ ಹಳ್ಳದಾಗ ಸ್ನಾನಾ ಮಾಡತಾರ, ಮುಂಜಾನೆಲ್ಲಾ ಜಾತ್ರ್ಯಾಗ ಅಡ್ಡ್ಯಾಡಿ ತಮಗ ಎನೇನ ಬೇಕ ಖರಿದಿ ಮಾಡ್ತಾರ ಮತ್ತ ರಾತ್ರಿ ನಾಟಕ, ಟೆಂಟ್ನ್ಯಾಗ ಸಿನೇಮಾ ನೋಡ್ತಾರ. 

ಈ ಹಳ್ಳಿ ಮಂದಿ ಭಾಳ ಮುಗ್ಧ ಇರತಾರ ಇವರ ಜೀವನಾ ಭಾಳ ಸೀಮಿತ ಇರ್ತದ,ಮತ್ತ ಇವರಿಗೆಲ್ಲಾ ಹಗಲೆಲ್ಲಾ ಪ್ಯಾಟಿಗೆ ಹೋಗಬೇಕು, ಶಾಪಿಂಗ ಮಾಡಬೇಕು,ಬ್ಯಾರೆ ಬ್ಯಾರೆ ಊರಿಗೆ ಹೋಗಬೇಕು ಎನರೆ ಹೊಸಾದನ್ನ ನೋಡಬೇಕು, ಅನ್ನೊಹಂತಾ ಯಾವ ಆಶಾನು ಇರಂಗಿಲ್ಲಾ ತಾವಾತು ತಮ್ಮ ದುಡಕ್ಯಾತು ನಿಶ್ಚಿಂತಿಯಿಂದ ಅರಾಮಾಗಿ ಇರ್ತಾರ. ಅವರೆಲ್ಲಾ ತಮ್ಮ ಸಣ್ಣ ಪುಟ್ಟ ಆಸೆಗಳನ್ನೆಲ್ಲಾ ತೀರಿಸಿಕೊಳ್ಳೊದು ಈ ಬನಶಂಕರಿ ಜಾತ್ರಿಯೊಳಗನ, ಮನಿಗೆ ಎನರೆ ತಗೊಳೊದ ಇರಲಿ, ಹೊಲಮನಿಗೆ ಬೇಕಾದ ಸಾಮಾನ ಇರಲಿ, ಅರವಿ ಅಂಚಡಿ ಆಗಲಿ, ಮತ್ತ ಹೆಣ್ಣ ಮಕ್ಕಳ ಅಲಂಕಾರದ ವಸ್ತುಗಳಾಗಲಿ, ಸಣ್ಣ ಮಕ್ಕಳ ಆಟಿಗಿಸಾಮಾನು, ಅದೇನ ಅವರ ಜೀವನಾವಶ್ಯಕ ವಸ್ತುಗಳ ಖರೀದಿ ಅವರು ಈ ಶಂಕರಿ ಜಾತ್ರಯೋಳಗ ಮಾಡ್ತಾರ, ಮತ್ತ ವರ್ಷಪೂರ್ತಿ ದುಡದದ್ದರಾಗ ಸ್ವಲ್ಪ ರೊಕ್ಕಾ ಬನಶಂಕರಿ ಜಾತ್ರ್ಯಾಗ ಖರ್ಚ ಮಾಡಬೇಕಂತ ಕೂಡಿಸಿಟ್ಟಿರತಾರ. ಮಕ್ಕಳೇನರ ಹಟಾ ಮಾಡ್ಲಿಕತ್ತಿದ್ರ ಶಂಕರಿ ಜಾತ್ರ್ಯಾಗ ಕೊಡಸ್ತೆನೇಳ ಅಂತ ರಮಸ್ತಾರ.

ಜಾತ್ರಿ ಪೂರ್ತಿ ಭರ್ಜರಿಯಾಗಿ ತುಂಬಿ ತುಳಕಾಡತಿರ್ತದ. ಎಲ್ಲೆ ನೋಡಿದ್ರು ಜನಾ ಜಾತ್ರಿ. ಎಲ್ಲೇಲ್ಲಿಂದನೊ ಮಂದಿ ತಾಯಿ ಬನಶಂಕರಿ ದರ್ಶನಕ್ಕ ಬರ್ತಾರ. ಭಜಿ ಮಿರ್ಚಿ ಅಂಗಡಿ,ಅವರದಂತು ಜೋರ ವ್ಯಾಪಾರ ನಡದಿರ್ತದ. ಒಂದ ಏಳೆಂಟ ಪ್ರಸಿದ್ಧ ಚಿಂದೊಡಿಲೀಲಾ, ರಾಜು ತಾಲಿಕೋಟಿಯವರ ನಾಟಕ ಕಂಪನಿಗೊಳ ಬಂದಿರತಾವ, ಸ್ಟೆಷನರಿ ಅಂಗಡಿ,ಭಾಂಡಿಸಾಮಾನ ಅಂಗಡಿ,ಅರವಿ ಅಂಗಡಿ,ಮಕ್ಕಳಿಗೆ ಆಡ್ಲಿಕ್ಕೆ ಜೋಕಾಲಿ,ಚಕ್ರ,ಮತ್ತ ಒಂದೆರಡ ಸಿನೇಮಾ ಟೆಂಟ್ ಗೊಳು, ಮತ್ತ ಇದೆಲ್ಲಾದರ ನಡುವ ಹಳ್ಳಿ ಹೆಣ್ಣಮಕ್ಕಳು ತಲಿ ಮ್ಯಾಲೆ ರೊಟ್ಟಿ,ಪಲ್ಲೆ ಬುಟ್ಟಿ ಇಟಗೊಂಡ ಊಟಾ ಮಾಡಬರ್ರಿ ಅಂತ ಕರಿಲಿಕತ್ತಿರತಾರ. ಹಿಂಗ  ಜಾತ್ರಿಗೆ ಬಂದವರ ಊಟಾ ಮಾಡಬರ್ರಿ ಅಂತ ಕಾಡಿಸಿ ಕರಕೊಂಡ ಹೋಗಿ ಒಂದ ಕಡೆ ನೆರಳ ಇದ್ದ ಜಾಗಾ ನೋಡಿ ಕುಡಿಸಿ  ರೊಟ್ಟಿ ಬುಟ್ಟಿ ಬಿಚ್ಚಿ ಊಟಕ್ಕ ಕೋಡತಾರ. ಜ್ವಾಳದ ರೊಟ್ಟಿ ಎರಡ ಥರದ ಪಲ್ಯಾ, ಎಳ್ಳ ಹೊಳಿಗಿ, ಕೆಂಪಚಟ್ನಿ, ಗುರೆಳ್ಳಹಿಂಡಿ, ಅಗಸಿಹಿಂಡಿ, ಶೇಂಗಾಹಿಂಡಿ ಜೊಡಿ ಹಸಿಮೆಂತೆ ಪಲ್ಯಾ,ಮೂಲಂಗಿ,ಇಷ್ಟೆಲ್ಲಾದರ ಜೊಡಿಗೆ ಮೊಸರಿನ ಗಡಗಿ ತಂದಿರತಾರ. ಮಸ್ತ ಜವಾರಿ ಊಟಾ ಇರತದ. ಮನ್ಯಾಗ ಕೂತ ಊಟಾಮಾಡಿಧಂಗ ಅನಿಸ್ತಿರತದ. ಜಾತ್ರ್ಯಾಗ ಶೇ75% ರಷ್ಟು ಸುತ್ತಮುತ್ತಲಿನ ಹಳ್ಳಿ ಮಂದಿನ ಇರತಾರ ಅವರ ಮುಖದಾಗಿನ ಸಡಗರ ನೋಡಿದ್ರ ಭಾಳ ಖುಷಿ ಅನಿಸ್ತದ.

ಗುಡಿ ಹಿಂದ ಹೊದ್ರ ಅಲ್ಲೇ ಭಾಳಷ್ಟ ಟೆಂಟ್ ಗುಡಸಲಾ ಹಾಕ್ಕೊಂಡ ಮಂದಿ ಇರತಾರ. ಅವರ ಹತ್ರ ಹೋಗಿ ಮಾತಾಡಿಸಿದ್ರ ಗೊತ್ತಾತು ಅವರು ಜಾತ್ರ್ಯಾಗ ಅಂಗಡಿ ಹಾಕಿದವರು ಅಂತ. ಎಲ್ಲಿಂದೊ ದೂರದ ಊರಿಂದ ಸಂಸಾರ ಸಮೇತ ಬಂದು ಇಲ್ಲೇ ಆಟಗಿ ಸಾಮಾನು,ಬಳೆ ಸರಗಳ ,ಭಾಂಡಿಸಾಮಾನು,ಬಟ್ಟಿ,ರಗ್ಗುಚಾದರ ಅಂಗಡಿ,ಚಹಾದಂಗಡಿಗಳನ್ನ ಹಾಕಿ ಜಾತ್ರ್ಯಾಗ ವ್ಯಾಪಾರಮಾಡ್ಕೊತ ತಿಂಗಳಾನಗಟ್ಟಲೆ ಜಾತ್ರ್ಯಗ ದಿನ ಕಳಿತಾರ ಈ ಮಂದಿ. ಅಲ್ಲೇ ಟೆಂಟ್ ನ್ಯಾಗ ಅಡಗಿ ಮಾಡ್ಕೊಂಡ ಅಲ್ಲೆ ಹಳ್ಳದಾಗ ತಮ್ ದಿನ ನಿತ್ಯದ ಕಾರ್ಯಗಳನ್ನ ಮುಗಿಸಿಕೊಂಡ ಭಾಳ ಖುಷಿಯಿಂದ ಇರತಾರ.ತನ್ನ ಮಡಿಲಿಗೆ ಬಂದ ಯಾರನ್ನು ಆ ತಾಯಿ ಬನಶಂಕರಿ ನಿರಾಶೆ ಮಾಡಿ ಬರೆ ಕೈಯಿಂದ ಕಳಸಂಗಿಲ್ಲಾ. ಜಾತ್ರಿಗೆ ಬಂದು ಮಿರ್ಚಿ ಮತ್ತ ಚುನಮರಿ ಗಿರಮಿಟ್ಟ್ ತಿನ್ಲಿಲ್ಲಂದ್ರ ಅದು ಜಾತ್ರಿ ಮಾಡಿಧಂಗ ಅಲ್ಲೆ ಅಲ್ಲಾ ಮತ್ತ, ಬಿಸಿ ಬಿಸಿ ಮಿರ್ಚಿ ತಿಂದು ಚಹಾ ಕುಡದು ಸಂಜಿಮುಂದ ನಾಟಕ ನೋಡಿದ್ರನಾ ಪೂರ್ತಿ ಜಾತ್ರಿಯ ಮಜಾ ಅನುಭವಿಸಿಧಂಗ.

ರಾತ್ರಿ ಬೆಳತನಕಾ ಮಂದಿ ಜಾತ್ರ್ಯಾಗ ಅಡ್ಡ್ಯಾಡತಾರ. ಹಳ್ಳಿಯ ಮಂದಿ ವರ್ಷಕ್ಕೊಮ್ಮೆ ಸಿಗುವ ಈ ಮನರಂಜನೆಯ ಅವಕಾಶಾನ ಮನಃಸ್ಪೂರ್ತಿ ಅನುಭವಿಸ್ತಾರ. ಪ್ರತಿ ವರ್ಷ ಅದ ಜಾತ್ರಿನ ಇರ್ತದ ಆದ್ರ ಮತ್ತು ಎನೋ ಹೊಸಾದ ಅನಿಸ್ತದ. ಎಷ್ಟ ಹೇಳಿದ್ರು ಮುಗಿಯಂಗಿಲ್ಲಾ ಈ ಜಾತ್ರಿ ಸಂಭ್ರಮಾ ಮತ್ತ ಅವಕಾಶ ಸಿಕ್ರ ನಿಮ ಜೋತಿ ಎಲ್ಲಾನು ಹಂಚ್ಕೊತೇನಿ. ನೀವು ಎಲ್ಲಾರು ಬರ್ರಿ ನಮ್ಮ ಬದಾಮಿ ಶ್ರೀ ಬನಶಂಕರಿ ಜಾತ್ರಿಗೆ.ಬಂದ ನೊಡ್ರಿ ಇಲ್ಲಿಯ ಜಾತ್ರಿ ಗಮ್ಮತ್ತು….  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಬಾದಾಮಿಯ ಬನಶಂಕರಿ ಜಾತ್ರಿ ಸಂಭ್ರಮ: ಸುಮನ್ ದೇಸಾಯಿ

  1. ಹಳ್ಳಿ ಜನರ ಆಸೆಗಳು ಸೀಮಿತವಾಗಿರೋದಕ್ಕೆ ಅವರು ಯಾವಾಗಲೂ ನೆಮ್ಮದಿ ಜೀವನ ನಡೆಸುತ್ತಾರೆ….ಆಸೆಗಳ ಮೂಟೆ ಕಟ್ಕೊಂಡಿರೋ ಈ ಪಟ್ಟಣದ ಜನರಿಗೆ ನೆಮ್ಮದಿ ಅನ್ನೋದು ಮರೀಚಿಕೆಯಾಗಿದೆ …..:)

Leave a Reply

Your email address will not be published. Required fields are marked *