ಲಲಿತ ಪ್ರಬಂಧ

ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

                                                    

ಒಂದು ಕಾಲ ಇತ್ತು. ನೌಕರದಾರರಿಗೆ ಅಂದ್ರ ಭಾರಿ ಮರ್ಯಾದೆ. ಅದರಲ್ಲಿ ಶಿಕ್ಷಕರಿಗಂತೂ ಮನೆ-ಗಿನೆನ ಪ್ರತಿಫಲಾಕ್ಷೆ ಇಲ್ಲದೆ  ಕೊಡೋರು. ಊರಾಗ ಹೊಸದಾಗಿ ನೌಕರದಾರರು ವರ್ಗವಾಗಿ ಬಂದರ ಅಂದ್ರ ಸಾಕು ಎಷ್ಟು ಇಂತಿಜಾಮ್ ಮಾಡೋರು. `ನಮ್ಮ ಮನಿಗೆ ಬರ್ರೀ, ಇಲ್ಲ ನಮ್ಮನಿಗೆ ಬರ್ರೀ’ ಅಂತ ದುಂಬಾಲು ಬಿಳೋದು ಎಷ್ಟು ಮಂದಿ! ಬಾಡಿಗೆ ಕೇಳಿದ್ರ `ಅಯ್ಯ ನಿಮಗ ತಿಳಿದಷ್ಟ ಕೊಡ್ರಿ ಒತ್ತಾಯ ಇಲ್ಲ’ ಅನ್ನೊರು, ಅವ ಸಿಂಗಲ್ ಇದ್ರಂತೂ ಅವರ ಮನೆಯಿಂದನ ಎಲ್ಲಾ ವ್ಯವಸ್ಥಾ ಸರಬರಾಜು ಆಗೋದು. ನೌಕರದಾರು ಮನ್ಯಾಗ ಬಾಡಿಗೆ ಇದ್ದಾರಂದ್ರ ಆ ಮನೆ ಮಾಲಿಕರ ಹೆಮ್ಮೆ ಅಂತ ಆಗ ತಿಳಿದುಕೊಂಡಿದ್ರು. ನನಗ ಇನ್ನೂ ನೆನಪದ ಹಳ್ಳಿಯಾಗಿನ ನಮ್ಮ ಮನಿಯ ಒಂದು ಭಾಗನ ನಮ್ಮಪ್ಪ ನೌಕÀದಾರÀರಿಗೆ ಮೀಸಲಿಟ್ಟದ್ದರು. ಅದು ಹ್ಯಾಂಗಂದ್ರಿ ಬಾಡಿಗೆ ಇಲ್ಲದನ. ಇವರ ಮೇಲಾಗಿ ಸುಣ್ಣ ಬಣ್ಣ ಮಾಡಿಸಿ ಕೊಡೋರು. ಅವರು ಈಗ ಅಂತವರು, ಅಂತಹ ಮನಿಗಳು ಸಿಗತಾವೇನ್ರಿ. ಈಗ ಅದ ಹಳ್ಯಾಗ ಹೋಗ್ರಿ `ಅವರಿಗೇನು ಕಮ್ಮಿ ಅಗ್ಯಾದಲೇ ಹಾಂಗ ಕೋಡಾಕ. ಉದ್ರಿ ಪಗಾರ ಬರುತ್ತ. ಹೇಳೋದೇಳ್ತಿ ಒಂದೂ ನೂರು ಹೆಚ್ಚಿಗೆ ಹೇಳು ಕೊಟ್ಟ ಕೊಡ್ತಾರ’ ಅನ್ನುವಂತ ಮಂದಿ ಹುಟ್ಟಿಕೊಂಡಾರ ಅಂದ ಮ್ಯಾಲಿ ನಾನು ಇಷ್ಟೋತನ ಹೇಳಿದ ವಿಷಯ ಒಂದು ದಂತಕಥೆ ಅನಸ್ತ ಅಷ್ಟೆ.

ಹಿಂದೆ ಈಗಿನಂತೆ ಯಾವುದೇ ಕ್ಷೇತ್ರದಲ್ಲಿ ಬದಲಾವಣೆಗಳು ಅಷ್ಟಾಗಿ ಆಗದ ಕಾರಣ ‘ಬಾಡಿಗೆ ಮನೆ’ ಎಂಬುವುಗಳಿಗೆ ಅಷ್ಟೊಂದು ಮಹತ್ವ ಇರಲಿಲ್ಲ. ಅಧುನಿಕ ಕಾರಣದಿಂದಗಿ ಉದ್ಯೋಗಕ್ಕಾಗಿ, ಒಳ್ಳೆಯ ಸೌಲಭ್ಯಕ್ಕಾಗಿ ಪಟ್ಟಣಗಳತ್ತ ಜನ ಧಾವಿಸುತ್ತಿರುವುದರಿಂದ ನಗರಗಳ ಜೊತೆ ಬಾಡಿಗೆ ಮನೆಗಳ ಸಂಖ್ಯೆಯೂ ಬೆಳೆಯುತ್ತಿವೆ. ಬಾಡಿಗೆ ಮನೆಗಳಲ್ಲೂ ನನ್ನ ಅನು¨sವÀಕ್ಕ ಬಂದಾಂಗ ಮೂರು ದರ್ಜೆ ಮಾಡಬಹುದು. ಎಲ್ಲಾ ಅನುಕೂಲತೆಗಳು ಇರುವಂತಹ ಮನೆ ಪ್ರಥಮ ದರ್ಜೆಗೆ ಸೇರುತ್ತೆ ಅಂತ ನಾನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಆದರೆ ಮದ್ಯಮ ವರ್ಗದ ನಮ್ಮಂಥಹ ನೌಕರರಿಗಾಗಲಿ, ಮಧ್ಯಮ ವರ್ಗದ ಜನರ ಬಜಟ್‍ಗಾಗಲಿ ಸಮ ದೂಗವಂತದಲ್ಲ. ಮಧ್ಯಮ ವರ್ಗದವರ ಜೀವನ ಅಂದ್ರನ ಆರಕ್ಕೆರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ. ಸದಾ ಚಿಂತೆಯಲ್ಲೆ ತೇಲೇಳುವ ಬದುಕು.

ನೌಕರರಲ್ಲಿ ಒಳ್ಳಯ ಆದಾಯ ಇರೋ ಇಲಾಖೆಯ ಗುಮಾಸ್ತರಗಲಿ ಪೋಲಿಸರೋ, ಕುಲಕರ್ಣಿಗಳೇ ಆಗಲಿ ಅವರನ್ನು ಮಧ್ಯಮ ವರ್ಗದವರು ಅಂದ್ರೆ ಪ್ರಮಾದವಾದಿತು. ಇರಲಿಬಿಡಿ ಇನ್ನೂ ಕೆಲ ಮನೆಗಳು ಇರತಾವೆ, ಮಾತಾಡಿದ್ರೆ ಸಾಕು ಮಣ್ಣು ಸುರು ಸುರು ಅಂತ ಉದುರುವಂತಹವು. ಎಲ್ಲಾ ಮೂಲ ಸೌಕರ್ಯಗಳಿಂದ ವಂಚಿತವಾದಂತಹವು. ಇವು ಮೂರನೇ ದರ್ಜೆಯಲ್ಲಿ ಬರತಾವೆ ಅಂತ ಅವುಗಳ ವರ್ಣನೆ ತೋರಸ್ತಾದೆ. ಅದನ್ನ ಹಿಡಿಯಬೇಕಂದ್ರ ಮರ್ಯಾದೆ ಪ್ರಶ್ನೆ. ಇನ್ನೂ ನಮ್ಮ ಗ್ರೇಡ್‍ಗೆ ತಕ್ಕಂತಹ ಮನೆಗಳು ಇರತಾವೆ, ಒಂದು ಇದ್ರ ಇನ್ನೂಂದು ಇರಲ್ಲ. ಎಸ್ಸೇಷಲಿ ಮೇಡ್ ಫಾರ್ ಮಿಡಲ್ ಕ್ಲಾಸ್ ವೇಪಲ್ಸ್ ಓನ್ಲಿ, ವಠಾರಗಳು ಅಂತ ಇರತಾವಲ್ಲ. ಅವು ನಮಗೆ ಸೆಟ್ ಆಗುವಂತಹವು. ಆಗುವಂತಹವು ಏಕೆ ಆ ಓನರ್‍ಗಳು ನಮ್ಮಂಥವÀರ ಸಲುವಾಗಿಯೇ ಕಟ್ಟಸಿದಂತವು. ನಾಲ್ಕು ಮಂದಿ ಬಂದ್ರ ಸಾಕು ಹೆಚ್ಚಿನವರು ಹೊರಗೆ ಇರಬೇಕು. ಮಳಿ ಬಂದ್ರ ಒಂದು ಮೂಲೆಯಲ್ಲಿ ಕೂಡಬೇಕು. ನೀರಿಗಂತೂ ಭಗಿರಥನ ಸಾಹಸವೇ ಮಾಡಬೇಕು. ಕಕ್ಕಸಗಳಂತೂ ಒಳಗೆ ಹೊಕ್ಕವರು ವಾಂತಿ ಮಾಡದೆ ಅಥವಾ `ಪಿಚಕ್,ಪಿಚಕ್’ ಅಂತ ಉಗಳದೆ ಬಂದರೆ ಅದೊಂದು ಪವಾಡ.  ಹಿಂದೆ ನೆಲಸಿದ ಮಹನೀಯರ ಪಾರಂಪರ್ಯದ ಪಟ್ಟಿ ಮನೆಯ ತೊಲೆಯಲ್ಲಿ. ಗೋಡೆಯ ಮೇಲೊ. ಹೊರಗಡೆಯಲ್ಲೋ. ಕಕ್ಕಸಿನಲ್ಲೋ ದಾಖಲಾಗಿರುತ್ತೆ. ತಿಂಗಳಿಗೊಮ್ಮೆ ಮನೆಮಾಲಿಕ ಬಂದ ಚೇರ್ ಹಾಕಿಕೊಂಡು ಕುಳಿತಾನಂದ್ರ ಕೊಡಲೇಬೇಕು ಬಾಡಿಗೆ. ಇಲ್ಲಂದ್ರೆ ಸಾಮಾನುಗಳು ಬೀದಿಗೆ. ಹೆಚ್ಚಿನ ಸೌಲಭ್ಯ ಕೇಳಿದ್ರೆಬೇಕಿದ್ದರೆ ಇರಿ ಇಲ್ಲದಿರೆ ಬಿಡ್ರಿ. ಹೊಸದಾಗಿ ಬಂದೋರಿಗೆ ನೂರು ರೂಪಾಯಿ ಹೆಚ್ಚಿಗೆ ಏರಿಸೋಕಾದ್ರೂ ಬರುತ್ತೆ ಅನ್ನೋರು. ಈ ವಠಾರದ ಮಾಲಿಕರಿಗೆ ಮನೆ ಬಿಟ್ರೂ,ಬಂದ್ರುನೂ ಲಾಭ.

ವಠಾರದ ಪರಿಸ್ಥಿತಿ ಹಿಂಗಿದ್ರ ಮನೆಕಟ್ಟಿಸಿ ಬಾಡಿಗೆ ಕೊಡೋ ಮಾಹನುಭಾವರ ಗುಣನೇ ಬೇರೆ. ವಠಾರದ ಮಾಲಿಕರು ಬಾಡಗೆದಾರಿಗೆ ಅಲ್ಪ ಸ್ವಲ್ಪ ಬೆಲೆ, ಗೌರವವಾದರೂ ಕೊಡಬಹುದು ಇವರು ಹಾಗಲ್ಲ ಖಡಾಖಂಡಿತವಾದಿಗಳು. ಕಡ್ಡಿಗೀಚಿದಾಂಗ ಗೀಚಿ ಹಾಕೋರು. ಇಷ್ಟವಾದರೆ, ನಮ್ಮ ಕಂಡಿಷನ್‍ನಳಿಗೆ ಒಪ್ಪೊದಾದರೆ ಬನ್ನಿ, ಇಲ್ಲಂದ್ರೆ ಮುಂದೆ ಹೋಗಿ ಎಂದು ಭಿಕ್ಷುಕರಿಗೆ ಹೇಳೋ ತರಹ ಹೇಳೋರು. ಆಯ್ತು. ಅವರ ಮಾಡಿದ ಕರಾರುಗಳಿಗೆ ಸೊಪ್ಪು ಹಾಕಿ ಮನೆ ಹಿಡಿದಿರೆನ್ನಿ, ಮುಂದಿನ ಅಧ್ಯಾಯನ ಬೇರೆ, ಅವರಿಗೆ ಹೊಂದಿಕೊಂಡು ಅವರ ಹೇಳದ್ದಕ್ಕೆಲ್ಲ ಹೂಂಗುಟ್ಟುತಾ ಹೋಗಬೇಕು. ಆಗಾಗ ದುಡ್ಡು ಕೇಳಕಾ ಬಂದ್ರ ಕೊಡಬೇಕು. ಮನೆಯಲ್ಲಿ ಮಾಡುವಂತಾಹ ತಿಂಡಿ ತೀರ್ಥಗಳನ್ನೆಲ್ಲ ಅವರ ಮನೆಗೆ ಪಾರ್ಸಲ್ ಮಾಡಬೇಕು, ನಮ್ಮ ಗಾಡಿ ಇದ್ರ  ಕೇಳಿದಾಗೊಮ್ಮೆ ಇಲ್ಲನ್ನೆದೆ ಕೊಡಬೇಕು, ಪ್ಯಾಮಿಲಿ ಕೂಡ ಟುರೋ ಪಿಕ್‍ನಿಕ್ಕೊ ಹೊಂಟಿದ್ರ    ಕಾಟಾಚಾರಕ್ಕಾದ್ರು ಅವರಿಗೂ ಬುಲಾವ್ ನೀಡಬೇಕು. ಅವರ ಮನ್ಯಾಗ ಕಾರ್ಯಕ್ರಮ ಆತು. ಹೆಚ್ಚಿನ ಜನ ಬಂದ್ರೂ ಅಂದ್ರ, ನಮ್ಮನ್ಯಾಗ ಅವರಿಗೆ ಆತಿಥ್ಯ ಕೊಡಬೇಕು.  ನಿಮ್ಮ ಮಕ್ಕಳಿಗೆ ಏನಾದ್ರೂ ತಂದ್ರ, ಕೊಡಿಸಿದ್ರ ಅವರ ಮಕ್ಕಳಿಗೂ ಕೊಡಿಸಬೇಕು ಇಲ್ಲದಿದ್ದರೆ ನಿಮ್ಮ ಹುಡುಗರಿಗೆ ಏನೆಲ್ಲಾ ಯಾಕ ಕೊಡಸ್ತಿರಿ. ನಮ್ಮ ಮಕ್ಕಳಾ ಪಿಡಸ್ತಾವೆ ಎನ್ನುವಂತಹ ಅಪವಾದ ಹೊರಬೇಕು. ಅವರಿಗಾಗದವರ ಕೂಡ ಮಾತನಾಡಬಾರದು. ನಿರ್ವಹನೆ ಇಲ್ಲ ಅವರ ಮನೆ ಹಿಡಿದ ತಪ್ಪಿಗೆ ಬಂದದ್ದನ್ನಲ್ಲಾ ಅನುಭವಿಸಬೇಕಲ್ಲ.

 ಇನ್ನೂ ಅಡ್ವಾನ್ಸ್ ಎಂಬ ಅಂಟುರೋಗನ ಈ ಮನೆ ಮಾಲಿಕರುಗಳಿಗೆ ಯಾರು ತಂದು ಹಚ್ಚಿದರೋ ಈಗಂತೂ ಎಲ್ಲ ಓನರ್‍ಗಳಿಗೂ ಬೆಂಬಿಡದೆ ಕಾಡಕತಾದ. ಏಡ್ಸ, ಕ್ಯಾನ್ಸ್‍ರ್‍ಗಳಂತೆ. ಬಾಡಿಗೆದಾರರಿಗೆ ಇದನ್ನು ಓಡಿಸಲು ಔಷದಾನೆ ಸಿಗವಲ್ದಾಗಿದೆ. ಅಡ್ವಾನ್ಸ್ ಇಲ್ಲದ ಮಾತಿಲ್ಲ. ಬಾಡಿಗೆದಾರರು ಹಣಕೊಡದೆ ಮನೆ ಖಾಲಿಮಾಡಿದೆರ ತೊಂದರೆ ಅನ್ನೋ ದೃಷ್ಟಿಯಿಂದ ಈ ರೀತಿಯ ಪ್ಲಾನ್ ಏನೋ ಚೆನ್ನಾಗಿದೆ, ಆದರೆ ಅದಕ್ಕೊಂದು ಮಾನದಂಡ ಬೇಡವೆ? ಮನೆ ಬಾಡಿಗೆಯ ಹತ್ತು ಹದಿನೈದು ಪಟ್ಟ ಮುಂಗಡ ಹಣ ವಸೂಲಿ ಮಾಡುವುದೇ? ಕೆಲವು ಸೀಟಿಗಳಲ್ಲಿ ನೋಡಬೇಕು ಮನೆ ವ್ಯಾಲುವೇಷನ್ ಅರ್ಧ ರೇಟ್ ಅಡ್ವಾನ್ಸ್ ಆಗಿರುತ್ತೆ. ಈಗ ಮುಂಗಡ ಕೇಳೋದೊಂದು ಬಿಜಿನೆಸ್ ಆಗಿಬಿಟ್ಟಿದೆ. ಸಾವಿರಾರು ರೂಪಾಯಿ ಬ್ಯಾಂಕಿನಲ್ಲಿ ಪಡೆದರೆ ಬಡ್ಡಿ ಕಟ್ಟಬೇಕಲ್ಲ. ಆದರೆ ಬಾಡಿಗೆದಾರರಿಂದ ಹಿರಿದರೆ ಎಲ್ಲ ಉಳಿಯುತ್ತಲ್ಲ. ಮನ್ಯಾಗ ಸೇರಿಸಿಕೊಳ್ಳವಾಗ ಅಡ್ವಾನ್ಸ್ ಮುಲಾಜಿ ಇಲ್ಲದೆ ಪಡೆದಿರುತ್ತಾರೋ ಹಾಗೆ ಬಿಡವಾಗ ಕೊಡಬೇಕು ಎಂಬ ಖಬರು ಇವರಿಗೆ ಇರದು. ಮೊದಲು ಕೊಡ್ತಿವಿ ಮನಿವೊಂದರ ಮೊದಲ ಬಿಡ್ರಿ ಅನ್ನೋರು. ಹಾಗೆ ಅಡ್ವಾನ್ಸ್ ಮರಳಿ ಪಡಿಲಾರದ ನೀವು ಬಿಡ್ರಿ ಅಂತ. ತಿರುಗಾಡಿಸಿ ತಿರುಗಾಡಿಸಿ ಹಣ್ಣುಗಾಯಿ ನೀರಗಾಯಿ ಮಾಡತಾರೆ… ಇನ್ನೂ ಕೆಲವರು ಕಿಡಕಿ ಒಡದಿರಿ, ಸುಣ್ಣ ಹಚ್ಚಿಲ್ಲ, ಗೋಡೆ ಡ್ಯಾಮೇಜ್ ಆಗ್ಯಾದ. ಫ್ಯಾನ್ ಕೆಡಿಸಿರಿ ಅಂತ ಅರ್ಧಕ್ಕರ್ಧ ಮುರಿದುಕೊಂಡೆ ಅಡ್ವಾನ್ಸ್ ಹಣ ಕೈಗೆ ಹತ್ತದೆ ಇರೋ ಹಾಗೆ ಮಾಡೋರು. ಇನ್ನೂ ಅಡ್ವಾನ್ಸ್ ನಮಗೆ ಕೊಟ್ಟ ಇಲ್ಲವಲ್ಲ ಅನ್ನುವಂತ ನಿಷ್ಠಾವಂತರೂ ಇರತಾರೆ. ಮನೆ ಹಿಡಿಯುವಾಗ ಹಣ ಕೊಟ್ಟದ್ದಕ್ಕೆ ಪತ್ರ ಕೇಳಿದ್ದರೆ ‘ಅಲ್ರೀ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಮನೆನ ನಿಮ್ಮ ಕೈಯಾಗ ಕೊಟ್ಟಿರುವಾಗ ಪತ್ರ ಗಿತ್ರ ಅಂತಿರಲ್ರಿ ನಮ್ಮ ಮ್ಯಾಲ ನಿಮಗ ವಿಶ್ವಾಸ ಇಲ್ವೇನ್ರಿ’ ಎಂದು ಕೇಳಿದ್ದಕ್ಕೆ ಮುಖಕ್ಕೆ ಹೊಡೆದಾಂಗೆ `ಯಾಕರ ಕೇಳಿದನಪ’ ಅಂತ ಕಜೀಲ್ ಆಗಿರಬೇಕು ಹಾಗೆ ಮಾಡತಾರೆ. ಮುಗ್ದರಾಗಿದ್ದರಂತೂ ಇವರು ಕೊಟ್ಟಾಗ ಇಲ್ಲವೇ ತಿಮ್ಮಪ್ಪನ ಹುಂಡಿಗೆ ಹಾಕಿನಿ ಅಂತ ತಿಳಿದು ಕೈ ಬಿಡಬೇಕು. ಕೆಲವೊಂದು ಸಾರಿ ಸಾಮೋಪಾಯಕ್ಕಿಂತ ಬೇಧೋಪಾಯ ಮಿಕ್ಕಿದರ ದಂಡೋಪಾವನ್ನೇ ಕೈಗೊಳ್ಳಬೇಕಾಗುತ್ತೆ.

 ಮನೆಮಾಲಿಕರ ಅವಕೃಪೆಗೆ ನಾವು ಒಳಗಾಗಿದ್ದೆ ಆದರೆ ನಮ್ಮನ್ನು ಮನೆಖಾಲಿಮಾಡಿಸೊಕೆ ನೂರೆಂಟು ಕಾರಣ ಹುಡುಕುತಾರೆ. ನನ್ನನ್ನು ಹಲವೆಡೆ ಅನೇಕರು ಬಿಡಿಸಲು ಕಾರಣಗಳನ್ನು ನೀವು ಕೇಳಿದರೆ ನಗು ಬರಬಹುದು. ಸುಳ್ಳು ಅನಿಸಬಹುದು ಆದರೆ ಇದು ಸತ್ಯ.  ಓನರ್ ಮಕ್ಕಳಿಗೆ ಪುಕ್ಕಟೆ ಟ್ಯೂಷನ್ ಹೇಳದೆ ಇದ್ದುದ್ದಕ್ಕೆ.  ಮನಿಯಿಂದ ನನ್ನವಳು ಅವರ ಮನೆಗೆ ಮಾಡಿದ ತಿಂಡಿಯನ್ನು ಶೇರ್ ಮಾಡಿಕೊಳ್ಳದೆ ಇದ್ದುದ್ದಕ್ಕೆ. ಒಂದೆಡೆ ಮನೆಮಾಲಿಕರ ಬ್ಯಾಂಕಿನ ಸಾಲಕ್ಕಾಗಿ ಸ್ಯುರಿಟಿಗಾಗಿ ಸಹಿ ಹಾಕದೆ ಇದ್ದುದ್ದಕ್ಕೆ. ನನ್ನ ಮಗಳು ಅವರ ಮಗಳಿಗಿಂತಲೂ ಶಾಲೆಯಲ್ಲಿ ಮುಂದೆ ಬರುತ್ತಿದ್ದುದಕ್ಕೆ. ‘ಅವರಿಗಾಗದವರ ಹತ್ತಿರ ಸಲುಗೆಯಿಂದ ಮಾತಾಡಿದ್ದಕ್ಕೆ. ಹೀಗೆ ಕಾರಣಗಳನ್ನು ಹೇಳತಾ ಹೋದರೆ ಪಟ್ಟಿ ಬೆಳಿತಾನೆ ಹೋಗುತ್ತೆ.

ಓವರ್‍ಗಳು ಮಂಡರಿದ್ದಾಂಗೆ ಮನೆ ಬಾಡಿಗೆದಾರರಲ್ಲಿ ಜಗಮಂಡರೂ ಇರುತ್ತಾರೆ. ಅವರನ್ನು ಖಾಲಿ ಮಾಡಿಸಲು ಹುಡುಕೊ ಮಾರ್ಗೋಪಾಯಗಳೇ ಬೇರೆ. ನಳದ ಪೈಪನ್ನು ಕತ್ತರಿಸೋದು, ಲ್ಯಾಟ್ರೀನ್ ಬಾಗಿಲು ಮುರಿಯೋದು. ಮನೆ ಮುಂದೆ ಕಸ ತಂದು ಹಾಕೋದು ಕೇಳಿಸುವಂತೆ ಅವಾಚ್ಯ ಶಬ್ದಗಳಿಂದ ಬಯ್ಯುವುದು. ಆಫಿಸಿನ್ಯಾಗ ಬಂದ ಬಾಸ್‍ಗಳಿಗೆ ಪಿತೂರಿ ಉದೋದು. ನಿಂಬೆ ಹಣ್ಣು, ಮೇಣಸಿನಕಾಯಿ ಏನೇನೋ ಇಟ್ಟು ಭಯ ಹುಟ್ಟಿಸೋದು. ಇಷ್ಟೇಲ್ಲ ಮಾಡಿದಾಗ್ಯೂ ಜಗ್ಗದ ‘ನಾ ಈ ಮನೆ ಖಾಲಿ ಮಾಡಲ್ಲ ನೋಡ ಏನ್ ಮಾಡಿಕೊಂತಿ ಹೋಗು’ ಅಂತ ಗರ್ಜಿಸುವ ಹುರಿಯಾಳುಗಳು ಇರತಾರೆ. ಗೊಳಾಡಿಸುವಂತ ಮನೆಮಾಲಿಕರಿಗೆ ಇಂತಹ ಬಂಧುಗಳೇ ಉತ್ತಮ. ನಿವೇನಂತಿರಿ?

ಇನ್ನೂ ಒಂದು ವಿಷಯ ಬಾಡಿಗೆದಾರ ಬಂಧುಗಳಲ್ಲಿ ಹೇಳೋದದ. ಅಪ್ಪಿ ತಪ್ಪಿಯಾಗಿಯು ಹೆಂಡರ ಕಾಟಕ್ಕೊ, ಪ್ರಸ್ರೀಜ್‍ಗೊ ಜೋತುಬಿದ್ದು ನಿಮಗೆ ಒಗ್ಗದ ಮನೆಗಳನ್ನ ಮಾತ್ರ ಹಿಡಿಯೋ ಪ್ರಯತ್ನ ಮಾಡಬೇಡಿ. ಹಿಡಿದ್ರೂ ದಂಪತಿಗಳಿಬ್ಬರೂ ಹೈಲಿ ಮೆಂಟನೆನ್ಸ್ ಮಾಡುವಂತಹರು ನಿವಾಗಿರಬೇಕು. ಮಕ್ಕಳು ಮುದುಕರು ಇದ್ರನೂ ತ್ರಾಸ. ಏಕೆಂದರೆ ಇಂತಹ ಮನೆಗಳಲ್ಲಿ ಓನರ್‍ಗಳಿಂದ ನಿತ್ಯ ಕಿರಿಕಿರಿ. ಅವರ ಸ್ಟೇಟಸ್ ನೋರ ಬಾಡಿಗೆ ಬಂದ್ರ ಆ ಮಂದಿ ಚಕಾರ ಎತ್ತಲ್ಲ. ಅದ ನಮ್ಮಂತವರನ್ನು ನೋಡಿದ್ರ ಅವರಿಗೇನೋ ಒಂದು ತೆರನಾದ ಧೋರಣೆ ತಾಳತಾರ. ರೊಕ್ಕಾನು ಬರಬೇಕೂ, ಮನಿನೂ ಸ್ವಲ್ಪವೂ ಅಂಗಗೆಡಬಾರದು ಅನ್ನೂ ಮನೋಭಾವ ಬೆಳಸಿಕೊಳ್ಳತ್ತಾರೆ. ಮನಿ ಬಂಡಿ ಕ್ಲೀನಾಗಿರಲಿಕ್ರೆ ಕಿರಿಕಿರಿ. ಕಕ್ಕಸವನ್ನೂ ಕ್ಲೀನ್ ಮೆಂಟೆನ್ ಮಾಡಿದ್ರು. ಮಾಡದೆ ಇದ್ರು ಕಿರಿಕಿರಿ. ಮನಿಗೆ ಬಾಳ ಜನ ಬಂದ್ರೂ ಕಾಟ. ಆ ಮನೆ ಜನರೊ ಅಥವಾ ಆಕೆಯೋ ಆಕಸ್ಮಿಕ ಮನೆಯೊಳಕ್ಕಾ ಭೇಟಿಕೊಟ್ರಂತೂ ಗೋಡೆಗೆ ಇಷ್ಟಾಕ ಮಳಿ ಹೊಡದ್ರಿ ಬಂಡಿ ಎಷ್ಟು ಹೋಲಸು ಮಾಡಿದ್ದಿರಿ. ಚೀಲಗಳನ್ನು ಹಿಂಗ್ಯಾಕ ತೂಗ ಬಿಟ್ಟಿರಿ. ಮಂಚ ಇಲ್ಲ್ಯಾಕ ಹಾಕಿರಿ. ಹೀಗೆ ಏನೋ ತಕರಾರು ತೆಗಿತಿರತಾರೆ. ನಮ್ಮ ಗೊಡವಿ ಇವರಿಗೇಕೊ? 
    ಈ ಮಂದ್ಯಾಗ ಕೆಲವರು ಇರತಾರ ಅರ್ಧ ಸಮಾನ ಬಾಡಿಗೆ ಮನ್ಯಾಗ ಇರಿಸಿ ಬಾಡಿಗೆ ಕೊಡತಾರ. ಬಹುಶಃ ಇದು ತಮ್ಮ ವಸ್ತುಗಳ ಸೇಫ್‍ಗೋಸ್ಕರವೇನೋ? ನೀವು ಬಹಳ: ನಂಬಲಕ್ಕಿಲ್ಲ. ಒಂದು ಇಂತಹ ಮನೆಯಲ್ಲಿದ್ದಾಗ ಆ ಮನೆಯಾಕೆ ನಾವಿರುವ ಮನೆಯಲ್ಲಿನ ಗೊಡೆಯಲ್ಲಿಯ ಲಾಕರ್‍ನಲ್ಲಿ ಬೆಳ್ಳಿ ಸಾಮಾನ, ಹಣ ಎಲ್ಲಾ ಇಟ್ಟು ಹೋಗುತ್ತಿದ್ದಳು. ಈ ಬಗ್ಗೆ ನಾನು ತಕರಾರು ತೆಗೆದಾಗ `ನೋಡಿ ನಾನೊಬ್ಬಳೇ ಮನೆಯಲ್ಲಿ, ಕಾಯೋಕಾಗಲ್ಲ. ನಿಮ್ಮನೇಲಿ ಬಹಳ ಜನ ಇದ್ದಿರಿ. ಇಲ್ಲೆ ಹಾಯಾಗಿರುತ್ತೆ. ಅಲ್ಲದ ನಿಮ್ಮ ದೃಷ್ಟಿಯಿಂದಾರೂ ಅವು ಸೇಫಾಗಿರುತ್ತೆ’ ಅನ್ನಬೇಕೆ? ನಮಗೆ ಯಾವುದರ ಬಗ್ಗೆ ಇರದ ಚಿಂತೆ ಆ ಮನೆ ಬಾಡಿಗೆ ಹಿಡಿದಾಗಿನಿಂದ ಶುರುವಾಗಿತ್ತು. ಊರಿಗೆ ಹೋಗಬೇಕಾದರೂ ಕಳವು. ಎಲ್ಲಿ ಅವನ್ನು ಕಳ್ಳರು ಅಪಹರಿಸಿದರೆ ಅಪವಾದ ನಮ್ಮ ಮೇಲೆ ಬರುವುದೆಂದು. ಆ ಮನೆ ಕೊನೆ `ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಪದಾನ ನಂಬಿ ಮಿಡಲ್ ಕ್ಲಾಸ್ ಮನೆಲೇ ಜೀವನ ಸಾಗಸ್ತಿದ್ದಿನಿ.

ಇತ್ತಿಚಿಗಂತೂ ಅವು ಇವು ನೇಮಕಾತಿ ಆಗಿ ಪ್ರತಿಯೊಂದು ಊರಾಗೂ ಬಾಡಿಗೆ ಮನೆಗಳ ಡಿಮ್ಯಾಂಡ್ ಏರಾಕತದ. ನಮ್ಮೂರಾಗ ಹೊಸದಾಗಿ ಬಂದಂತಹ ಶಿಕ್ಷಕರು, ಪೋಲಿಸರು, ಇತರ ಇಲಾಖೆಯವರು ಈ ಎಲ್ಲಾ ಮಂದಿಯಿಂದ ಬಾಡಿಗೆ ಈ ಪರಿ ಏರ್ಯಾವ ಅಂದ್ರ ಅದನ್ನ ಹೇಳೋದ ಬ್ಯಾಡ. ನಾಲ್ಕೈದು ಮಂದಿ ಬ್ಯಾಚುಲರ್ಸು ಕೂಡಿದ್ರನ, ಮನಿಹುಡುಕ್ಕೊಂತ ಬಂದ್ರನ. ಮನಿ ಸಿಕ್ರ ಅವಕ್ಕ ಸಾಕಾಗಿರೋ ಹೊತ್ತಿನ್ಯಾಗ ಈ ಓನರ್ ಗಳು ಬಾಯಿಗೆ ಬಂದಂಗ ಹೇಳೋವು. ಹೊಸ ಮಂದಿ ಕೊಡುವ ಬಾಡಿಗೆ ಆಶಾಕ್ಕ ಹಳೆಮಂದಿನ ಹೇಳಿದಷ್ಟು ಕೊಡಬೇಕು ಇಲ್ಲ ಬಿಡಬೇಕು. ಆ ಮಟ್ಟಕ್ಕ ಬಂದಾದ ಸ್ಥಿತಿ. 

ಏನೇ ಹೇಳಿ ಬಾಡಿಗೆದಾರರ ಗೋಳು ಸೂರ್ಯ ಚಂದ್ರ ಇರೋವರೆಗೂ ತಪ್ಪಿದ್ದಲ್ಲ. ಇವರ ಕಟಕಟಿ ತಪ್ಪಿಸಿಕೊಳ್ಳಬೇಕಂದರ ಇರುವುದೊಂದೆ ಮಾರ್ಗ ಹೋದಲ್ಲೇಡೆ ಸ್ವಂತಮನಿ ಖರಿದಿಸಬೇಕು. ಇಲ್ಲವೇ ಹಾಳು ಮುರುಕು ಮನ್ಯಾಗ ಇರಬೇಕು. ಅದ್ದೇಂಗ ಆಗತ್ತರಿ ಅದು ಸಾಧ್ಯವಾಗದ ಮಾತು ಅಂದ್ರಾ! ಇಲ್ಲದಿದ್ರ ಬಾಡಿಗಾದಾರರ ಒಕ್ಕೂಟ ಕಟ್ಟಿ ಕೊಳ್ಳಬೇಕು. ಬಾಡಿಗೆದಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಬೇಕು. ಅಡ್ವಾನ್ಸ್‍ನ್ನು ಜಾಯಿಂಟ್ ಖಾತೆಯಲ್ಲಿ ಇರಿಸೋ ಹಾಗೆ. ಮನೆಗೆ ತಕ್ಕಾಂತೆ ಬಾಡಿಗೆ ನಿಗದಿಪಡಿಸೋ ಕ್ರಮ ಕೈಗೊಳ್ಳಬೇಕು. ತೊಂದರೆ ಕೊಡೋ ಮಾಲಿಕರಿಗೆ ತಪ್ಪುದಂಡಕೊಡಿಸೋ ಹಾಗೆ ವ್ಯವಸ್ಥೆ ಮಾಡಬೇಕು.. ಅಯ್ಯೋ ರಾಮರಾಮ ಅದು ಯಾವಾಗ ಸಾಧ್ಯವಾಗುತೋ? ಬೆಕ್ಕಿಗೆ ಗಂಟೆ ಕಟ್ಟೊ ಸಮಸ್ಯ ಉದ್ವವಿಸುತ್ತ ಅಂದ್ರಾ? ನಾ ಈ ಮನೆ ಮಾಲಿಕರ ಕಾಟಕ್ಕೆ ಬೇಸತ್ತು ಎಲ್ಲಕ್ಕೂ ಸಿದ್ಧನಾಗಿರುವೆ. ವಿಷಯ ತಿಳಿದು ಮನಿ ಓನರ್ ತೊಂದರೆ ಕೊಟ್ಟು ಪರ್ವಾಗಿಲ್ಲ ಬಾಡಿಗೆದಾರರ ಶ್ರೇಯಸ್ಸಿಗೆ ಹೋರಾಡಬೇಕೆಂದಿರುವೆ,  ನೀವು ಬೆಂಬಲಕೊಟ್ಟರೆ! ನೀವು ಸಿದ್ಧರಾಗತಿರಲ್ಲ….?      


                                

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

Leave a Reply

Your email address will not be published. Required fields are marked *