ಇಡೀ ನಗರ ತಲ್ಲಣಿಸಿದಂತೆ ಕಂಡಿತು. ದೇಹಗಳನ್ನ ಬಾಡಿಗೆ ನೀಡಲು ಅವರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಒಂದು ಕಾಲದಲ್ಲಿ ನಗರದ ಯೌವ್ವನವನ್ನೇ ಆಳಿದವರು ಈಗ ಗಿರಾಕಿಗಳಿಲ್ಲದೇ ಅಂಡಲೆದು ಹೊಸಬರನ್ನ ದಂಧೆಗೆ ಇಳಿಸುತ್ತಿದ್ದರು. ದೇಹದ ಸೌಂದರ್ಯ, ಎಳಸುತನ ನೋಡಿ ದೇಹಗಳು ಗಂಟೆ ಲೆಕ್ಕದಲ್ಲಿ ಬಾಡಿಗೆ ನೀಡಲಾಗುತ್ತಿತ್ತು. ದೊಡ್ಡ ದೊಡ್ಡ ಕುಳಗಳು ತಿಂಗಳಿಗೊಮ್ಮೆ ಮೋಜಿಗಾಗಿ ಬಾಡಿಗೆ ಪಡೆದವರನ್ನು ಹೂವಿನಷ್ಟೆ ಮೃದುವಾಗಿ ಎತ್ತಿಕೊಂಡು ಹೋಗುತ್ತಿದ್ದರು. ಇದಕ್ಕಾಗಿ ನಗರದ ರಸ್ತೆಗಳು ಸಾಕ್ಷಿಯಾಗುತ್ತಿದ್ದವು. ಎಷ್ಟು ಸಲೀಸಾಗಿ ಈ ವ್ಯಾಪಾರ ನಡೆದುಹೋಗುತ್ತಿತ್ತು. ನಗರವೂ ಕಮ್ಮಿಯೇನಿಲ್ಲ. ಅದು ಕಳೆದ 20 ವರ್ಷಗಳಲ್ಲಿ ಸಾಕಷ್ಟು ರೂಪಾಂತರವಾಗಿತ್ತು. ಪೊರೆ ಕಳಚಿಕೊಂಡ ಹಾವಿನಂತೆ ಚಲನೆಯಲ್ಲಿ ವೇಗ ಪಡೆದುಕೊಂಡಿತ್ತು. ಹಗಲು ರಾತ್ರಿಗಳನ್ನು ಕಳೆದು ಪ್ರತಿ ಬೆಳಕಿಗೂ ಹೊಸತಾಗಿ ತೆರೆದುಕೊಳ್ಳುವ ಮಾಯಾ ನಗರಿ ಅಂತೂ ಹೊರಳುದಾರಿಯಲ್ಲಿತ್ತು. ಈ ಮಾಯಾನಗರಿಯ ಬೀದಿಯೊಂದರ ಬ್ಯೂಟಿಪಾರ್ಲರ್ ನಿಂದ ಹೊರಬಂದ ಬಣ್ಣಗಳು ಬೀದಿಗಳನ್ನು ತುಂಬಿಕೊಂಡು ಬಿಡುತ್ತಿದ್ದವು. ಹಾಗೆಯೇ ಬಣ್ಣಗಳನ್ನು ತುಂಬಿಕೊಂಡ ಕಣ್ಣುಗಳು ಹೊಸದನ್ನು ಆನಂದಿಸುತ್ತಲೇ ಸಂಚನ್ನು ರೂಪಿಸುತ್ತಿದ್ದವು. ನಗರದ ರಸ್ತೆಗಳು, ಕಟ್ಟಡಗಳು ದಿನಕ್ಕೊಂದು ರೂಪಪಡೆಯುತ್ತಿದ್ದವು.
ಈ ರೂಪಾಂತರಗಳು ಅಸಂಖ್ಯೆ ಹೊಂಚುಗಳನ್ನು ಟಿಸಿಲೊಡೆದುಕೊಂಡು ಬೆಳೆಯುತ್ತಿದ್ದವು. ಅದೆಷ್ಟೋ ಕನಸುಗಳನ್ನು ಹೊಸಕಿಹಾಕಿ, ಅನೇಕ ಕುಟುಂಬಗಳನ್ನು ಒಡೆದು, ನುಚ್ಚು ನೂರು ಮಾಡಿದ್ದವು. ಮೊದಲಿದ್ದ ಗುಡಿಸಲುಗಳು, ಹೆಂಚಿನ ಮನೆಗಳು ಅಲ್ಲಿದ್ದವು ಎಂಬ ಅಸ್ತಿತ್ವವನ್ನೇ ಅಳಿಸಿಹಾಕುವಂತೆ ಕಟ್ಟಡಗಳು ದಿನಬೆಳಗಾಗುವುದರಲ್ಲಿ ಎದ್ದು ನಿಲ್ಲುತ್ತಿದ್ದವು. ಅದೆಷ್ಟೋ ಉಸಿರುಗಳು ಆ ದೈತ್ಯಕಾರಾದ ಕಟ್ಟಡ ಎಂಬ ರಾಕ್ಷಸನ ಅಡಿಯಲ್ಲಿ ಉಸಿರಾಡಲಾಗದೇ ಸಿಕ್ಕಿಹಾಕಿಕೊಂಡಿದ್ದವು. ಹೀಗೆ ರಾಕ್ಷಸ ಕಟ್ಟಡಗಳೆಂಬೋ ನಗರವೆಂಬೋ ನಗರದಲ್ಲಿ ಮುಗ್ಧರು, ಒಳ್ಳೆಯವರು, ಕೆಟ್ಟವರು , ರೌಡಿಗಳು, ತಲೆಹಿಡುಕರು, ಮೋಸಮಾಡುವವರು, ಮೋಸಹೋಗುವವರು ದಿನಕ್ಕೊಂದು ವೇಷ ತೊಟ್ಟು ದಿನಗಳನ್ನು ನೋಡುತ್ತಿದ್ದರು. ನೋಡುನೋಡುತ್ತಿದ್ದಂತೆ ಅಲ್ಲಿನ ಜನ ಬದಲಾಗುತ್ತಿದ್ದರು. ಇಡೀ ನಗರ ಒಮೆ್ಮೂಮ್ಮೆ ಬಣ್ಣ ಬದಲಿಸುವ ಪ್ರಾಣಿಯಂತೆ ಕಾಣತೊಡಗಿತು. ಜನರು ಬೆತ್ತಲಾದಂತೆ, ಬಟ್ಟೆತೊಟ್ಟಂತೆ, ತೊಟ್ಟರು ಮತ್ತೆ ಬೆತ್ತಲಾದಂತೆ ವಿಚಿತ್ರವಾಗಿ ಆಡತೊಡಗಿದರು. ಕಪ್ಪು ಬಿಳುಪಿನ ದಿನಹಗಲಿನ ನಡುವೆ ಕಲರ್ ಕಲರ್ ಬಟ್ಟೆ ತೊಟ್ಟ ಜನ ಬಾಡಿಗೆ ದೇಹಗಳನ್ನು ನೋಡಲು ಸಾಲುಗಟ್ಟಿ , ಕೆಲವೊಮ್ಮೆ ಗುಂಪು ಗುಂಪಾಗಿ ನಿಲ್ಲತೊಡಗಿದರು. ಈ ಎಲ್ಲಕ್ಕೂ ಸಾಕ್ಷಿಯಾಗಿದ್ದ ಗಾಂಧಿ ಮಾರ್ಕೆಟ್ ನ ಕೊನೆಯ ಗೂಡಂಗಡಿಯ ಶೇಷಜ್ಜ ತನ್ನ ಕಣ್ಣಳತೆಯಲ್ಲಿ ಎಲ್ಲವನ್ನು ತುಂಬಿಕೊಳ್ಳತೊಡಗಿದ. ಎಂದೂ ಏನು ಮಾತನಾಡದೇ ಮೌನಿಯಾಗಿದ್ದ ಶೇಷಜ್ಜ ತನ್ನ ಎದೆಯ ಡೈರಿಯಲ್ಲಿ ಈ ನಗರದ ರೂಪಾಂತರವನ್ನ ತುಂಬಿಕೊಂಡಿದ್ದ. ಬರೆಯಲಾಗದ ಆತನ ಡೈರಿಯಲ್ಲಿ ಬಾಡಿಗೆ ದೇಹಗಳ ದೊಡ್ಡ ಪಟ್ಟಿಯೇ ಇತ್ತು. ಅದು ತೆರೆಗಳನ್ನು ಲೆಕ್ಕ ಇಡದ ದಂಡೆಯಂತೆ.
****
ಶೇಷಜ್ಜನ ಎದುರು ಕುಳ್ಳ ಗಿರಿಯ ಹಾದುಹೋದ. ಎಂದಿನಂತೆ ಗಡಿಬಿಡಿಯಲ್ಲಿದ್ದ. ಅವನ ನಾಟಕ ಅವನು ತಿರಿಗಾಡುವ ಬೀದಿಯವರಿಗೆ ಗೊತ್ತೇ ಇತ್ತು. ಸದಾ ಮೊಬೈಲ್ನ್ನು ಕಿವಿಯಲ್ಲಿಟ್ಟು ಮಾತನಾಡುತ್ತಾ ನಿಂತಲ್ಲೇ ಆಡುತ್ತಿದ್ದ ಯಕ್ಷಗಾನ ನೋಡಿ ತುಟಿಯರಳಿಸಿ ನಗದವರೇ ಕಮ್ಮಿ . ನಾಲ್ಕು ಅಡಿ ಎತ್ತರವಿದ್ದ ಕಾರಣ ಗಿರಿಯನಿಗೆ ಕುಳ್ಳಗಿರಿ ಅಂತಲೇ ಹೆಸರು ಬಿದ್ದಿತ್ತು. ಯಾರೋ ಹಾಕಿ ಬಿಟ್ಟ ಜೀನ್ಸ ಪ್ಯಾಂಟ್ ಹಾಕಿ, ಆಫ್ ತೋಳಿನ ರಂಗು ರಂಗಿನ ಟೀ-ಶರ್ಟತೊಟ್ಟು, ಕತ್ತಿಗೆ ತ್ರಿಕೋನಾಕಾರಾದ ಕರ್ಛೀಫ್ ಮಡಿಚಿ, ಆಗಾಗ ಬೋಳಾದ ಅರ್ದ ತಲೆಯ ಉಳಿದ ನಾಲ್ಕು ಕೂದಲನ್ನು ಬಾಚುತ್ತಾ ರಸ್ತೆಯಲ್ಲಿ ಯಾವುದೋ ಗಮ್ಮತ್ತಿನಲ್ಲಿ ತಿರುಗುವುದು ಮಾಮೂಲಾಗಿತ್ತು. ಕಿಸೆಯಲ್ಲಿ ಒಂದು ಪಾಕೆಟ್ ಡೈರಿ. ಅದರ ತುಂಬಾ ಯಾರ್ಯಾರದೋ ನಂಬರ್ ಹುಡುಕುತ್ತಾ, ಅವರ ನಂಬರ್ ಗಳಿಗೆ ಮಿಸ್ ಕಾಲ್ ಕೊಡುವುದು, ಬಂದ ಕಾಲ್ ಗಳನ್ನ ಸ್ವೀಕರಿಸುವುದು , ಅತ್ತಿಂದಿತ್ತ ತಿರುಗಾಡುತ್ತಾ ಮಾತನಾಡುವುದು, ತಾನು ತುಂಬಾ ಬ್ಯುಜಿ ಮನುಷ್ಯ ಎಂದು ನೋಡಿದವರಿಗೆ ತೋರಿಸಿಕೊಳ್ಳುವುದು ಗಿರಿಯ ಗಿಮಿಕ್ ಆಗಿತ್ತು.
ಅಂಕೋಲಾದ ಅಚವೆ ಭಾಗದ ಕಾಡಿನ ಗಂಗಾವಳಿ ನದಿದಂಡೆಯ ಅದ್ಯಾವುದೋ ಹ್ಯಾಮ್ಲೆಟ್ನಿಂದ ಈ ನಗರ ಸೇರಿಕೊಂಡು ನಾಲ್ಕು ದಶಕಗಳೇ ಗತಿಸಿದ್ದವು. ಮೊರಬದ ಕಡೆಯ ಅವನ ಬೀಗರು ಕೂಡ್ಲಗದ್ದೆಯ ಬದಿಯ ದಟ್ಟಕಾಡೊಂದರಲ್ಲಿ ಅಡಗಿದ್ದ ಮಜಿರೆಯ ಹೆಣ್ಣೊಂದನ್ನು ಗಿರಿಗೆ ಮದ್ವೆ ಮಾಡಿಸಿದ್ರು. ಚೆಂದಕ್ಕೆ ಬಾಳ್ವಿ ಮಾಡದ ಕುಳ್ಳಬಡ್ಡಿಮಗ ನಗರದ ತೀಟೆಗೆ ಬಿದ್ದು ಸಂಬಂಧ ಹರಕೊಂಡು ಬಂದಿದ್ದ. ಅಲ್ಲಿಂದ ಗಿರಿಯದ ಬದುಕಿನ ಬಂಡಿಯ ಗತಿ ಬದಲಾಯಿತು. ನಗರದಲ್ಲಿ ಅಂವ್ಹ ಮಾಡದ ಕೆಲ್ಸಗಳೇ ಉಳಿಯಲಿಲ್ಲ. ಕಾಂಕ್ರಿಟ್ ಮನೆಗಳ ಮುಂದಿನ ಕಂಪೌಂಡ್ ಸುತ್ತ ಹುಲ್ಲು ಕೆತ್ತೋದು, ಗ್ವಾಡಿಮ್ಯಾಲೆ ಮಳೆನೀರಿಗೆ ಪಾಚಿಗಟ್ಟಿದ ಕಲೆ ತಿಕ್ಳಿ ತೆಗೆದು ಉಜ್ಜಿ ಸುಣ್ಣಬಣ್ಣ ಹಚ್ಚೋದು, ಮದ್ವಿ ಮನೆಗಳ ಹುಡುಕಿ ಮುಸುರಿ ತಿಕ್ಕೊದು, ಅಡುಗೆಗೆ ತರ್ಕಾರಿ ಹೆಚ್ಚಿಕೊಡೋದು, ಹೋಟೆಲ್ಗಳಲ್ಲಿ ಸಪ್ಲೈಯರ್ ಆಗೋದು, ಬಾರ್ ಗಳಲ್ಲಿ ವೇಟರ್ ಆಗೋದು ಹಿಂಗಾ ದಿನ ದೂಡಿದ. ಎಲ್ಲಿಯೂ ನೆಟ್ಟಗ ತಿಂಗಳೋಪ್ಪತ್ತು ನಿಲ್ಲುತ್ತಿದ್ದಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡನ್ಹಂಗಾ ತಿರುಗುವ ಹುಚ್ಚು ಗಿರಿಗೆ ಹತ್ತಿಕೊಂಡು ಬಿಡ್ತು. ಅದ್ಯಾವುದೋ ಘಳಿಗೆಯಲ್ಲಿ ವಾಡೆಗಳ ರಾತ್ರಿದಂಧೆಯನ್ನು ನೋಡಿಕೊಂಡ. ಬಾಡಿಗೆ ಮನಿ ಕೊಡಿಸಿ ಮನಿ ಮಾಲಕರು ಕಡೆಯಿಂದಲೂ, ಮನಿ ಬಾಡ್ಗಿ ಬೇಕಾದವ್ರ ಕಡೆಯಿಂದಲೂ ಒಟ್ಟೊಟ್ಟಿಗೆ ಎರಡೆರಡು ಕಡೆ ಕಮಿಷನ್ ಗಿಟ್ಟಿಸುವ ಚಾಲಾಕಿತನಕ್ಕೂ ಗಿರಿಯಾ ಇಳಿದಿದ್ದ. ಎರಡೂ ಕಡೆ ಕಮಿಷನ್ ಹೊಡಿತಿಯಲ್ಲೋ ಗಿರಿಯಾ ಅಂದ್ರೆ `ಎಲ್ಲಾ ದುಬಾರಿ ಯಲ್ಲಣ್ಣಾ….ಸಿಟಿಲಿ ಬಾಳ್ವಿ ಮಾಡ್ಬೇಕಲ್ಲಾ' ಅಂತ ಹಲ್ಲುಗಿಂಜುತ್ತಿದ್ದ. ಹೀಗಿರುವಾಗ್ಲೇ ಹೊಸ ದಂಧೆಯ ಮಾರ್ಗಗಳು ಅವನೆದುರು ತೆರೆದುಕೊಂಡವು. ಹಣ ಮಾಡುವ ನಾನಾ ದಾರಿಗಳು ಗಿರಿಯನ್ನು ಎಳೆದುಕೊಂಡವು.
ಅವತ್ತೊಂದಿನ ಮಯೂರ್ ಲಾಡ್ಜ್ನ ಹಳೆಯ ಸ್ನೇಹಿತ ರಮೇಶ್ ಸಿಕ್ಕ. ರಮೇಶ್ ಸಹ ಮನೆಬಿಟ್ಟು ಓಡಿಬಂದವ್ನೇ. ಅವನು ಮಯೂರ್ ಲಾಡ್ಜ್ ನಲ್ಲಿ ರೂಂಬಾಯ್ ಆಗಿ ನಿಂತವನು.ವರ್ಷಕ್ಕೊಮ್ಮೆ ಊರಿಗೆ ಮುಖತೋರ್ಸಿ ಬಂದ್ರ ಆತು. ಮಯೂರ್ ಲಾಡ್ಜ್ ಅವನ ಖಾಯಂ ನೆಲೆಯಾಗಿತ್ತು. ಮಾಲಕರ ನಂಬಿಕೆಗೆ ಗಿಟ್ಟಿಸಿದ್ದ ರಮೇಶ್ ಲಾಡ್ಜ್ನ ಆಗುಹೋಗುಗಳನ್ನ ನೋಡಿಕೊಳ್ಳುತ್ತಿದ್ದ. ನೋಡಿಕೊಳ್ಳುತ್ತಿದ್ದ ಅಂದ್ರೆ ರೂಂ ಸ್ವಚ್ಛತಾ ವಿಭಾಗದ ಮ್ಯಾನೇಜರ್ ಆಗಿಬಿಟ್ಟಿದ್ದ. ತನ್ನ ಜೊತೆ ಇದ್ದ ರೂಮ್ ಬಾಯ್ಸ ಆಂಡ್ ಸ್ವೀಪರ್ಸ ಕಮ್ ನೆಲದ ಕ್ಲೀನಿಂಗ್ ಡಿಪಾರ್ಟಮೆಂಟ್ ಪದ್ದಿ ಬಳಗಕ್ಕೂ ಹೆಡ್ ಅವನು. ಮಾಲಕರಿಲ್ಲದ ವೇಳೆ ಅವರ ಧ್ವನಿಗೆ ಒಡೆಯನಾಗಿದ್ದ ರಮೇಶ್ ಮಯೂರ ಸಾಮ್ರಾಜ್ಯಕ್ಕೆ ರಾತ್ರಿವೇಳೆ ದೊರೆಯಾಗಿದ್ದ. ರಾತ್ರಿಯ ರಂಗುಗಳು ರಮೇಶ್ನನ್ನು ಹಿಡಿದಿಟ್ಟುಕೊಂಡಿದ್ದವು. ಲಾಡ್ಜ್ ನಲ್ಲಿ ಉಳಿದ ಜೋಡಿಗಳ ರಾತ್ರಿಗಳನ್ನ ಕದದ ಕಿಂಡಿಯಿಂದಲೋ, ಬಾತ್ ರೂಂನ ಸಂದುಗೊಂದುಗಳಿಂದ ಕದ್ದು ನೋಡುವ ಚಟವಿದ್ದ ರಮೇಶ್ ಲಾಡ್ಜ್ನ ಗೋಡೆಗಳ ನೆನಪುಗಳಲ್ಲಿ ಹುದುಗಿಹೋಗಿದ್ದ.
****
ಬೆತ್ತಲೆ ಆಕಾಶ ಕೆಳಗೆ ಕುಳಿತಿದ್ದ ಆತ ಒಂಟಿಯಾಗಿ ಧ್ಯಾನದಲ್ಲಿ ನಿರತನಾಗಿದ್ದ. ಕೆಲ ಗಂಟೆಗಳ ವರೆಗೆ. ರಾತ್ರಿ ಕಳೆಯಿತು. ರಾತ್ರಿ ಒಂಟಿಯಾಗಿ ಮಲಗಿದ್ದ ರಸ್ತೆಗಳ ಮೇಲೆ ಮತ್ತೆ ಹೆಜ್ಜೆ ಇರಿಸಲು ಸಜ್ಜಾದ. ತನ್ನ ಮಾಮೂಲಿ ದಿನಚರಿಯಲ್ಲಿ ರಸ್ತೆಗಳ ಮೇಲೆ ಭಾರ ಹೆಜ್ಜೆ ಇಡುವುದು ಅವನಿಗೆ ರೂಢಿಯಾಗಿತ್ತು. ಬದುಕು ಮುಗಿದೇ ಹೋಯ್ತು ಅಂದು ಕೊಂಡಿದ್ದ ಆತನಿಗೆ ಪಕ್ಕದಲ್ಲಿ ಬೆಳಕೊಂದು ಮಿಂಚಿ ನಗುತ್ತಿರುವುದು ಕಂಡು ಹಿಗ್ಗಿದ. ಗಿರಿಯಾ ಹೊಸ ಅವಕಾಶವೊಂದನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದನ್ನು ನೆನೆದ ಮಿಸ್ಟರ್ `ಎಕ್ಸ್ ' ಮನದೊಳಗೆ ನಕ್ಕ. ಸರ್ಕಾರಿ ನೌಕರಿಯಂಬೋ ನೌಕರಿಯಲ್ಲಿದ್ದು, ಬೆಂಗಳೂರಿನ ಕಲಾಸಿಪಾಳ್ಯದ ಎಲ್ಲಾ ನೆನಪುಗಳನ್ನು ಹರಿದುಕೊಂಡು ಬಂದ ನಂತರ ಈ ಪುಟ್ಟ ಕಡ್ಡಿಪೆಟ್ಟಿಗೆಯಂತಾ ನಗರದಲ್ಲಿ ನೆಲೆನಿಂತಾಗಿದೆ. ರಕ್ತ ಸಂಬಂಧಗಳನ್ನು ಬಿಸಾಡಿಯಾಗಿದೆ. ಬಾಲ್ಯದ ಯಾವ ನಂಟುಗಳು ಉಳಿದಿಲ್ಲ. ಮದ್ವಿನೂ ಆಗಿಲ್ಲ. ಅದು ಆಗಬೇಕಾದ ಕಾಲದಲ್ಲಿ ಆಗಲಿಲ್ಲ. ಆಗಲಿಲ್ಲ ಅನ್ನುವುದಕ್ಕಿಂತ ಹೆಣ್ಣು ಸಿಗಲಿಲ್ಲ. ಜೊತೆಗೆ ಸಕ್ಕರೆ ಕಾಯಿಲೆಯೂ ಬರುವ ಸುಳಿವು ನೀಡಿದೆ. ಇರುವಷ್ಟು ಬದುಕನ್ನು ಬದುಕುವ ನಿರ್ಧಾರಕ್ಕೆ ಬಂದಾಗಿದೆ. ಹೀಗೆ ಇರುವವನ ಮನ ಅರಳಲು ಕಾರಣನಾದ ಗಿರಿಯ ಅದೇನೋ ಹೊಸದನ್ನು ಕರೆತರುತ್ತೇನೆ ಎಂದಿದ್ದನ್ನು ನೆನೆದು ಹಿಗ್ಗಿದ. ಮೂರು ದಿನ ರಂಗ ಸ್ಥಳದಲ್ಲಿ ಹೊಸ ನರ್ತನ. ಹೊಸತನ ತರಲಿರುವ ಆಕೆಯನ್ನು ಕಲ್ಪಿಸಿಕೊಳ್ಳುತ್ತಾ , ಕಣ್ಣ ಕನಸಿನಲ್ಲಿ ರೇಖೆಗಳನ್ನು ಎಳೆದು ಬಣ್ಣ ಎರಚಿದ. ಅಲ್ಲಿ ಅದ್ಬುತ ಚಿತ್ರವೊಂದು ಮೂಡಿಬರಲಿದೆ. ಆ ಚಿತ್ರ ಎಂದೂ ಅಳಿಯದಂತೆ ಉಳಿಯಲಿದೆ. ಹಾಗೆ ಈ ರಾತ್ರಿಯ ಚಿತ್ರಗಳನ್ನು ಕಟ್ಟಿಬಿಡಬೇಕೆಂದು ಆತ ಅಂದುಕೊಂಡ. ಆ ರಾತ್ರಿಗಳು ಚಲಿಸಿಯೂ ಚಲಿಸದಂತೆ ನಿಲ್ಲಬೇಕಾದರೆ ಏನೇನು ಮಾಡುವುದು ಎಂದು ಲೆಕ್ಕಚಾರ ಹಾಕತೊಡಗಿದ. ಕೈಕಾಲು ಮುಖವಿಲ್ಲದ ಕತ್ತಲು ಭೂಮಿಯನ್ನು ಆವರಿಸಿಕೊಳ್ಳುವ ಬಗೆ ಬೆಳಕಿನಷ್ಟೇ ಅಚ್ಚರಿಯದ್ದು. ಕತ್ತಲು ಬಟ್ಟೆ ಹೊದ್ದ ಭೂಮಿ ಮೇಲಿನ ಹಾಡು ಮತ್ತು ಅಲ್ಲಿ ಹುಟ್ಟವ ರಾಗಗಳು ಇನ್ನು ಬೆರಗಿನದ್ದು ಎಂದು ಕೊಳ್ಳತೊಡಗಿದ ಮಿಸ್ಟರ್ ಎಕ್ಸ್ . ಕತ್ತಲಲ್ಲಿ ಬೆಳಕಿನ ರಾಗ ಹಾಡಲು, ಆ ಹಾಡನ್ನು ಜಗತ್ತು ಎಂದೂ ಮರೆಯದ ಚಿತ್ರವಾಗಿಸಬೇಕೆಂದುಕೊಂಡ. ಆ ಕ್ಷಣಗಳಿಗಾಗಿ ಆತ ಕಾಯತೊಡಗಿದ.
ಬರುವವಳು ಬೆಂಗಾಳಿ ಹುಡುಗಿ ಎಂದು, ತೀರಾ ಚಿಕ್ಕವಯಸ್ಸಿನವಳು. ಹೊಸದಾಗಿ ಫೀಲ್ಡ್ಗೆ ಬಂದಿದಾಳೆ. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದ ಗಿರಿಯಾ. `ಆಯ್ಯೋ ಕಳ್ಳಬಡ್ಡಿ ಮಗನೆ ನೊಡಿದಿನಿ ಹೋಗ್ಲಾ. ನಂಗೆ ಇದೇನು ಹೊಸದಾ…ಜಾಸ್ತಿ ಕಿರಿಕ್ ಮಾಡ್ಬೇಡ. ಬೇಕಾದ್ರೆ ಕರಕಂಡ್ ಬಾ. ಇಲ್ಲಂದ್ರ ಬಿಡು. ಹಣ ಕೀಳಲ್ವಾ ನನ್ ಮಗ್ನೇ' ಎಂದು ಎಕ್ಸ ರೇಗಿದ್ದ. `ಆಯ್ತು ಬಿಡ್ರಿ ಮಾತ್ಗೆ ಹೇಳ್ದೆ' ಎಂದ ಗಿರಿಯಾ ಮುಂದಿನ ಹೆಜ್ಜೆಗೆ ಅಣಿಯಾದ.
*****
ಮಿಸ್ಟರ್ ಎಕ್ಸ್ ಕುತೂಹಲದಿಂದ ಕಾದಿದ್ದ ಆ ಘಳಿಗೆ ಬಂತು. ಗ್ರೇ ಬಣ್ಣದ ಜೀನ್ಸ, ಅದಕ್ಕೊಂದುವ ಬಣ್ಣದ ಚೆಂದದ ಟಾಪ್ ಹಾಕಿದ್ದ ಅವಳು ಮಾಡೆಲಿಂಗ್ ಶೋಗೆ ಹೊರಟವಳಂತಿದ್ದಳು . ಆ ಯುವತಿ ರಾತ್ರಿ ಒಂಬತ್ತಕ್ಕೆ ಎಕ್ಸ್ ವಾಸಿಸುತ್ತಿದ್ದ ಆ ಮನೆಯನ್ನ ಪ್ರವೇಶಿಸಿದ್ಲು. ಜೊತೆಗೆ ಬಂದ ಗಿರಿಯಾ `ಸರ್ ನನ್ ಕೆಲ್ಸ ಮುಗಿತು. ಮುಂದಿನದು ನಿಮ್ಮದು. ಏನಾದ್ರೂ ಪಾರ್ಸಲ್ ತಂದು ಕೊಡ್ಲಾ ಅಂದ'. ಒಂದು ನಿಮಿಷ ಇರು ಎಂದು ಕಣ್ಣಲ್ಲೇ ಮಿಸ್ಟರ್ ಎಕ್ಸ್ ಸನ್ನೆ ಮಾಡಿದ.
ಏನು ನಿನ್ನ ಹೆಸರು ?
ಇದು ಪ್ರತಿ ಗಂಡಸು ಅಪರಿಚಿತ ಹೆಣ್ಣನ್ನು ಮೊದಲು ಕೇಳುವ ಪ್ರಶ್ನೆ ಎಂದು ಮನದಲ್ಲಿ ಅಂದು ಕೊಂಡ ಆಕೆ, `ಮೇರಾ ನಾಮ್ ಲೇಕರ್ ಕ್ಯಾ ಕತರ್ಿ ಸಾಬ್. ಛೋಡೋನಾ ಎಂದು ಮುಟ್ಟಲು ಬಂದ ಮಿಸ್ಟರ್ ಎಕ್ಸ್ನ ಕೈ ತಡೆದ್ಲು. ಅಪ್ಕಾ ಕ್ಯಾ ಪಸಂದ್ ಆತಾಹೈ ವಹೀ ನಾಮ್ಸೆ ಪುಕಾರ್ಲೋ…..'
ಸ್ವಲ್ಪ ಗಮಿಂಡಿ ತರ ಇರ್ಬೇಕು ಅಂದುಕೊಂಡ ಮಿಸ್ಟರ್ ಎಕ್ಸ್ ….ಹೇಗೆ ಇವಳನ್ನ ಹ್ಯಾಂಡ್ಲ ಮಾಡ್ಬೇಕು ಅಂತ ಲೆಕ್ಕಾಚಾರ ಹಾಕತೊಡಗಿ…`ಕುಚ್ ಪೀತೆ ಹೈ ಕ್ಯಾ' ಎಂದ. ಆಕೆ ಗಿರಿಯನ ಮುಖ ನೋಡಿದ್ಲು…`ಸರ್…ಅದು ಸ್ವಲ್ಪ ಬೀರ್ ತಗೋತಾಳೆ….ಬಿರಾನಿ ಕಟ್ಸಗೊಂಡು, ಅದನ್ನು ತಗಂಡ ಬರ್ಲಾ ಎಂದು ರಾಗ ಎಳೆದ ಗಿರಿಯಾ'. ಮಿಸ್ಟರ್ ಎಕ್ಸ್ ಮುಖಭಾವದಿಂದಲೇ ಸಮ್ಮತಿ ಸೂಚಿಸಿ, ಯುವತಿ ಜೊತೆ ಮಾತಿಗಿಳಿದ.
`ಆಪ್ ತುಮ್ಹಾರ್ ನಾಮ್ ಬತಯಾ ನಹೀ….'
`ತಾನಿಯಾ'
`ತಾನಿಯಾ…ಅಚ್ಚಾ ನಾಮ್. ಆಪ್ ಖೂಬಸೂರತ್ ಹೈ…'
ಮಿಸ್ಟರ್ ಎಕ್ಸ್ ಮಾತು ಕೇಳಿ ನಸುನಕ್ಕಳು..ಇಂಥ ವರ್ಣನೆಯ ಮಾತುಗಳು ಆಕೆಗೆ ಹಳೆಯವು. ತನ್ನ ಬಳಿ ಬರುವ ಪ್ರತಿ ಗಂಡಸು ಹೇಳುವ ಎರಡನೇ ಮಾತಿದು. ನೀನು ತುಂಬಾ ಚೆಂದ ಇದ್ದೀ ಅನ್ನುವುದು. ಹಾಗಾಗಿ ಗಿರಾಕಿಗಳನ್ನ ಪಳಗಿಸುವ ಕಲೆ ಸಹ ತಾನಿಯಾಗೆ ರೂಢಿಯಾಗಿತ್ತು. ಶ್ರೀಮಂತ ಗಿರಾಕಿಗಳ ಹತ್ತಿರ ಹೇಗಿರಬೇಕು. ಪಿಂಪ್ ಮನೆಗೆ ಆ ಕ್ಷಣಕ್ಕೆ ಬಂದು ಹೋಗುವ ಗಿರಾಕಿಗಳನ್ನ ಹೇಗೆ ನಿಭಾಯಿಸಬೇಕು ಎಂಬುದನ್ನು ಈ ದಂಧೆ ಕಲಿಸಿಬಿಟ್ಟಿರುತ್ತದೆ. ತಾನಿಯಾ ಸಹ ಪಳಗಿಬಿಟ್ಟಿದ್ದಳು. ಹಾಗೆ ನೋಡಿದರೆ ತಾನಿಯಾ ಈ ಕತ್ತಲ ಲೋಕಕ್ಕೆ ಬಂದು ಭಾಳ ದಿನಗಳೇನು ಆಗಿರಲಿಲ್ಲ. ಕೊಲ್ಕೋತ್ತ ದಿಂದ ಬಂಗಾರದ ಆಭರಣ ತಯಾರಿಸಲು ಪೆಟ್ಟಿಗೆ ತರಹ ಇರುವ ನಗರಕ್ಕೆ ಬಂದಿದ್ದಳು. ಅಪ್ಪ ಅಮ್ಮನನ್ನು ಕಳೆದು ಕೊಂಡು ಸಂಬಂಧಿಕರ ಮನೆಯಲ್ಲಿ ಬೆಳೆದಿದ್ದ ಅವಳು ಈ ನಗರಕ್ಕೆ ಬಂದ ತಮ್ಮೂರಿನ ಕಡೆಯ ನೂರಾರು ಬಂಗಾರದ ಕುಶಲಕರ್ಮಿಗಳ ಜೊತೆ ಬಂದು ಬಂಗಾರದ ಆಭರಣ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಆಗ ಪರಿಚಯವಾದವನೇ ಸೌರವ್ ಮುಖರ್ಜಿ. ಸೌರವ್ ಸುರದ್ರೂಪಿ ಯುವಕ. ಬಗೆ ಬಗೆಯ ಕುಸುರಿ ಕೆಲಸದಲ್ಲಿ ನಿಷ್ಣಾತ. ಊರಕಡೆಯವನು ಅಂತಾ ಪರಿಚಯದಲ್ಲೇ ಸ್ನೇಹಿತನಾಗಿದ್ದ. ತಾನಿಯಾ ಆತನೊಂದಿಗೆ ಬೆರೆಯಲು ಹೆಚ್ಚು ಸಮಯವೂ ಆಗಲಿಲ್ಲ. ಅಪಾರವಾಗಿ ನಂಬಿದ ತಾನಿಯಾ ಸೌರವ್ ಜೊತೆ ವರ್ಷ ಕಾಲ ಉಳಿದಳು. ನಂತರ ತಾಯಿಯ ಕಾಣಲು ಕೊಲ್ಕೋತ್ತಾಗೆ ಹೋದ ಸೌರವ್ ಮರಳಿ ಬರಲಿಲ್ಲ. ಇತ್ತ ಕೆಲಸವೂ ಇಲ್ಲದೆ, ಸೌರವನ ಆಸರೆಯೂ ಇಲ್ಲದೆ ವಂಚನೆಗೆ ತುತ್ತಾಗಿದ್ದ ತಾನಿಯಾ ಊರಿನವರಿಂದಲೂ ಸಹಾಯದ ನೆಪದಲ್ಲಿ ಶೋಷಣೆಗೀಡಾಗಿದ್ದಳು. ಅಂತೂ ಪಾಪದ ಹೂವಾಗಿ ಪಿಂಪ್ ಮನೆಗೆ ದಾರಿಯಲ್ಲದ ದಾರಿಗಳ ಮೂಲಕ ಸೇರಿಯಾಗಿತ್ತು. ಈಗ ಆಕೆ ಖೂಬಸೂರತ್ ಯುವತಿ. ದಿನಕ್ಕೊಂದು ಹೆಸರು. ದಿನಕ್ಕೊಂದು ಮನೆ, ದಿನಕ್ಕೊಂದು ಊರು, ದಿನಕ್ಕೊಂದು ಲಾಡ್ಜ್ನಲ್ಲಿ ವಾಸ. ಯೌವ್ವನದ ಶ್ರೀಮಂತಿಕೆಯ ಜೊತೆ ಸೌಂದರ್ಯವನ್ನು ಪಣಕ್ಕೆ ಹಚ್ಚಿ ಜೂಜಾಡುವ ದಂಧೆ.
ಇವತ್ತು ಮಿಸ್ಟರ್ ಎಕ್ಸ್ ಜೊತೆ ರಾತ್ರಿ ಕಳೆಯುತ್ತಿದ್ದಾಳೆ. ಆದರೆ ಇದು ಕಳೆದುಹೋದ ರಾತ್ರಿಗಳಿಗಿಂತ ಭಿನ್ನ ಎಂಬುದು ಆಕೆಯ ಅರಿವಿಗೆ ಬರಲು ಹೆಚ್ಚು ಸಮಯವಾಗಲಿಲ್ಲ.
`ತಾನಿಯಾ ಇದು ನಿನ್ನ ರಾತ್ರಿ. ನಂಗೆ ನಿನ್ನ ದೇಹ ಬೇಕಿಲ್ಲ. ನೀನು ಯಾಕೆ ಹೀಗಾದೆ. ಹೇಗೆ ಇಂಥ ರಾತ್ರಿಗಳಿಗೆ ಬಂದೆ ಹೇಳು. ಇವತ್ತು ನಿನಗೆ ಬೇಕಾದಷ್ಟು ಮಾತಾಡು'
ಮಾತು ಕೇಳಿ ದಿಗ್ಭ್ರಮೆಯಾಯಿತು ಆಕೆಗೆ.
ಪಿಂಪ್ ಮನೆಗೆ ಬರುವ ಗಿರಾಕಿಗಳು ಇರುವ ಹತ್ಹದಿನೈದು ನಿಮಿಷಗಳಲ್ಲಿ ಹೆಣ್ಣನ್ನು ಆಕ್ರಮಿಸುವವರೇ ಹೆಚ್ಚು. ಅದೊಂದು ಮಾತಿಲ್ಲದ, ಕತೆಯಿಲ್ಲದ ಯಂತ್ರಕ್ರಿಯೆ. ಎಲ್ಲವೂ ಅವಸರವಸರ. ಪೊಲೀಸರ ದಾಳಿಯ ಭೀತಿ ಬೇರೆ. ಎಲ್ಲವೂ ಕತ್ತಲಕೋಣೆಯ ರಹಸ್ಯ. ಜಗತ್ತಿನಲ್ಲಿ ಹೆಣ್ಣಿನ ದೇಹ ಉಣ್ಣಲು ಬರುವ ಗಂಡಸಿನ ತಹತಹ ಕಂಡಿರುವ ತಾನಿಯಾ ಎಷ್ಟೋ ಸಲ ಕನಿಕರ ಪಟ್ಟದ್ದು ಇದೆ. ಆಕ್ರೋಶ ಗೊಂಡದ್ದು ಇದೆ. ಕೋಪಿಸಿಕೊಂಡದ್ದು ಇದೆ. ಪಿಂಪ್ ಮನೆಯಲ್ಲಿ ತನ್ನಂತೆ ಇತರ ಸಹವತರ್ಿ ಹುಡುಗಿಯರು ಗಂಡಸರ ಹತಾಶೆ, ಹಪಾಹಪಿತನಗಳನ್ನ ಕತೆ ಮಾಡಿ ಆಡಿಕೊಳ್ಳುವುದನ್ನ ನೆನೆದು ನಗುವುದನ್ನ ನೆನೆಸಿಕೊಳ್ಳುತ್ತಾ ಈ ದಂಧೆಯ ಮನೆಯಲ್ಲೂ ಕರಾಳ ದಿನಗಳಲ್ಲೂ ನಗು ಸುಳಿದು ಹೋಗುವುದಲ್ಲ ಅಂತಾ ಅಂದುಕೊಂಡಳು ಆಕೆ. ದೂರದ ಮುಂಬಯಿ, ಕೊಲ್ಹಾಪುರ, ಬೆಳಗಾವಿ, ಸವದತ್ತಿ ಹೀಗೆ ನಾನಾ ಕಡೆಯಿಂದ ಯುವತಿಯರು ಆ ಪಿಂಪ್ ಮನೆಗೆ ಸರದಿಯಂತೆ ಬರುತ್ತಿದ್ದರು. ಬಂದ ಯುವತಿಯರಿಗೆ ಮೊದಲೇ ಕೆಲ ಸೂಚನೆಗಳನ್ನ ಪಿಂಪ್ ವಿವರಿಸುತ್ತಿದ್ದ. ಪೊಲೀಸರು ಬಂದರೆ ಹೇಗೆ ವತರ್ಿಸಬೇಕು. ಗಿರಾಕಿಗಳ ಜೊತೆ ಹೇಗೆ ವರ್ತಿಸಬೇಕು. ಇದೊಂದು ದಂಧೆ. ಮನಸ್ಸಿಲ್ಲದೇ ಇಲ್ಲಿರುವುದು ಬೇಡ ಎಂದು ಉಪದೇಶದ ಮಾತುಗಳು ಹರಿದಾಡುತ್ತಿದ್ದವು. ನೀವು ನಿಮ್ಮ ಕಷ್ಟಗಳ ನಿವಾರಣೆಗೆ ಹಣ ಮಾಡಲು ಈ ದಂಧೆಗೆ ಬಂದಿದ್ದೀರಿ ಎಂದು ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸುವುದು ದಿನಕ್ಕೊಮ್ಮೆ ಕಾಮನ್ ಆಗಿತ್ತು. ಪಿಂಪ್ ಆಡುತ್ತಿದ್ದ ಮಾತುಗಳು ಆ ಮನೆಯ ಗೋಡೆಗೆ ಆಗಾಗ ಡಿಕ್ಕಿ ಹೊಡೆಯುತ್ತಿದ್ದವು.
ಸಾಮಾನ್ಯವಾಗಿ ಬಂದ ಗಿರಾಕಿಗಳ ಜೊತೆ ಒಂದೆರಡು ಮಾತನ್ನು ಕಣ್ಣಲ್ಲೇ ಆಡುವ ತಾನಿಯಾ `ಮಿಸ್ಟರ್ ಎಕ್ಸ್' ಹೇಳಿದ ಮಾತಿಗೆ ಏನು ಹೇಳ್ಬೇಕು ಹೊಳೆಯಲಿಲ್ಲ. ಮೌನವಾಗಿ ಹಾಸಿಗೆಯ ಮೇಲೆ ಹರಡಿ ಕುಳಿತಿದ್ದ ಆಕೆ ಆತನನ್ನು ಅಹ್ವಾನಿಸಿದಳು. ಆದರೆ ಮಿಸ್ಟರ್ ಎಕ್ಸ್ ಅಪರೂಪದ ಪ್ರೀತಿ ಹರಿಸಿ ಆಕೆಯ ಎದೆಗಿಳಿದ. ಆಕೆಯನ್ನು ಬಣ್ಣಗಳಲ್ಲಿ ಹಿಡಿದಿಡುವುದು ಆತನ ಉದ್ದೇಶವಾಗಿತ್ತು. ನಿಧಾನಕ್ಕೆ ಆಕೆಯನ್ನು ತನ್ನವಳನ್ನಾಗಿಸಿಕೊಳ್ಳತೊಡಗಿದ. ಇದು ಅನಿರೀಕ್ಷಿತ ಬೆಳವಣಿಗೆ. ಹತ್ತಿರವಿದ್ದು ತನ್ನ ಮೇಲೆ ಎರಗದ, ತೀರಾ ಹತ್ತಿರದವರಂತೆ ನಡೆದುಕೊಂಡ ಹೊಸ ಗಿರಾಕಿ ಎಕ್ಸ್ ಆಕೆಯಲ್ಲಿ ಹೊಸ ಆಶಯಗಳನ್ನು ತೆರೆಯತೊಡಗಿದೆ.
`ತಾನಿಯಾ ನಿನ್ನ ಬದುಕಿನ ಎಲ್ಲವನ್ನು ಹೇಳಿಕೋ ಎಂದು ಮತ್ತೆ ವಿನಂತಿಸಿದ' ಆತ.
`ಏನು ಹೇಳಲಿ. ನಂಬಿದವನು ಕೈಕೊಟ್ಟ. ಆದ್ರೂ ಆತನ ಮೇಲೆ ಪ್ರೀತಿ ಕಡಿಮೆಯಾಗಿಲ್ಲ ನಂಗೆ. ಈ ದೇಹವನ್ನು ಮೊದಲು ನೋಡಿದವ, ಅನುಭವಿಸಿದವ ಅವನು. ಈಗ ಕೇರಳದಲ್ಲಿ ಇದ್ದಾನಂತೆ. ನಮ್ಮೂರಿನವಳನ್ನೇ ಕಟ್ಟಿಕೊಂಡು. ತಾಯಿಯ ಅಪ್ಪಣೆಯಂತೆ ನಡಿತಾನೆ ಅವ್ನು'. ನಾನು ಅವ್ನ ಜೊತೆ ಮಾತನಾಡಲೇ ಎಂದ್ಲೂ ತಾನಿಯಾ.
`ಓಹೋ ಅದಕ್ಕೇನಂತೆ ಮಾತಾಡು' ತಾನಿಯಾಳ ಜೊತೆ ಕುಳಿತಿದ್ದ ಮಿಸ್ಟರ್ ಎಕ್ಸ್ ಪ್ರತಿಕ್ರಿಯಿಸಿದ.
`ಎಕ್ಸ್'ನ ಸಹಕಾರ ಗಮನಿಸಿದ ತಾನಿಯಾ, ತನ್ನ ಹಳೆಯ ಗೆಳೆಯ ಸೌರವ ಜೊತೆ ಮೊಬೈಲ್ ನಲ್ಲಿ ಮಾತಿಗಿಳಿದಳು. ಸಹಜತೆಯಿಂದ ಆರಂಭವಾದ ಮಾತುಕತೆ ಪ್ರೀತಿ, ವಿರಹ, ಸಿಟ್ಟು, ಕೋಪ, ಬೈಗುಳ, ಶಾಪ….ಹೀಗೆ ಹಲವು ಭಾವನೆಗಳು ಹರಿದಾಡಿದವು. ಹೆಚ್ಚು ಕಡಿಮೆ ಒಂದು ಗಂಟೆ ಕಾಲ ಈ ಸಂಭಾಷಣೆ ನಡೆಯಿತು. ಇದೆಲ್ಲವನ್ನು ತಾಳ್ಮೆಯಿಂದ ಗಮನಿಸುತ್ತಿದ್ದ ಮಿಸ್ಟರ್ ಎಕ್ಸ್.
ತನ್ನನ್ನು ಅನುಭವಿಸಲು ಕರೆಯಿಸಿಕೊಂಡು ತಾಳ್ಮೆಯಿಂದ ಕಾಯುತ್ತಿರುವ ಮೊದಲ ಗಂಡಸು ನೀನು ಎಂದು ಮನದಲ್ಲೇ ಅಂದುಕೊಂಡ ತಾನಿಯಾ ವಿಧೇಯತೆಯಿಂದ `ಬೇಜಾರಾಯಿತಾ' ಎಂದ್ಳು. `ಇಲ್ಲ ಎಂದು ಆತ ತಲೆಯಾಡಿಸಿದ'
`ನಿಂಗೆ ಏನು ಬೇಕೋ ಅದನ್ನ ತೆಗೆದ್ಕೊ' ಎಂದ ಆಕೆ ; ಬೆತ್ತಲಾಗಲು ಅನುವಾದಳು. ಹಸಿರು ಬಣ್ಣದ ಸಣ್ಣ ದೀಪವೊಂದು ಉರಿಯುತ್ತಿತ್ತು. ಕೋಣೆಯ ನಸು ಬೆಳಕಿನ ಜೊತೆ ಆಕೆಯ ನಗ್ನ ದೇಹ ತುಂಬಿಕೊಂಡಿತು.
`ನಾನು ನಿನ್ನನ್ನು ಅನುಭವಿಸಲಾರೆ. ನಿನ್ನದೊಂದು ಚಿತ್ರ ತೆಗೆದುಕೊಳ್ಳುತ್ತೇನೆ. ಹಾಗೆ ಮಲಗಿರು' ಮಿಸ್ಟರ್ ಎಕ್ಸ್ ಹೇಳಿದ. ಪಕ್ಕದ ಕೋಣೆಯಲ್ಲಿ ಹಲವು ಪೇಯಿಂಟಿಂಗ್ಗಳು ಗೋಡೆಗಳನ್ನು ಅಲಂಕರಿಸಿದ್ದವು. ಒಂದೊಂದು ಕಲಾಕೃತಿಯಲ್ಲೂ ಒಂದೊಂದು ಭಾವ. ಒಂದೊಂದು ನೋವು. ಒಂದು ಚಿತ್ರ ಬದುಕಿನ ನಗುವನ್ನು , ಸಮೃದ್ಧತೆಯನ್ನು ಹೇಳಿದರೆ ಮತ್ತೊಂದು ಬದುಕಿನ ಕರಾಳತೆಯನ್ನು ಮಾತನಾಡುತ್ತಿರುವ ಚಿತ್ರಗಳು.
`ತಾನಿಯಾ ಬಾ ಇಲ್ಲಿ' ಮಿಸ್ಟರ್ ಎಕ್ಸ್ ಕರೆದ. ಅಲ್ಲಿ ಮತ್ತೊಂದು ಚಿತ್ರ ಹುಟ್ಟಲು ಕ್ಯಾನವಾಸ್, ಬಣ್ಣಗಳು, ಕುಂಚಗಳು ಕಾದಿದ್ದವು.
ಕೋಣೆ ಪ್ರವೇಶಿಸಿದ ತಾನಿಯಾ `ಓಹೋ ನೀನು ಕಲಾವಿದ' ಎಂದು ಕಣ್ಣರಳಿಸಿದ ಆಕೆ ಗೋಡೆಯನ್ನು ಅಲಂಕರಿಸಿದ ಕಲಾಕೃತಿಗಳನ್ನು ನೋಡತೊಡಗಿದಳು. ತನ್ನದೊಂದು ಚಿತ್ರ ಈ ಗೋಡೆಯನ್ನು ಅಲಂಕರಿಸಬಹುದೇ ಎಂದು ಕೊಂಡರು `ನನ್ನ ಚಿತ್ರ ಬಿಡಿಸುವುದೇ ಆದ್ರೆ…… ಒಂದು ಶರತ್ತು . ನನ್ನ ಮುಖವೆಂದು ತಿಳಿಯಬಾರದು. ನಾನು ಚಿತ್ರ ಮುಗಿದ ನಂತರ ನೋಡುವೆ. ಅದು ನನ್ನದೆಂದು ಗೊತ್ತಾಗುವಂತಿದ್ದರೆ…..ನಾನೇ ಹರಿದು ಹಾಕುವೆ..'
`ಹಾಗೆ ಮಾಡು…. ಆದರೆ ಅದಕ್ಕೂ ಮುನ್ನ ಈ ಚಿತ್ರಗಳನ್ನು ನೋಡು ಎಂದು ಹೆಣ್ಣಿನ ವಿವಿಧ ಭಾವಗಳ ಪೇಯಿಂಟಿಂಗ್ ತೋರಿಸಿದ. ಇದರಲ್ಲಿ ನಿನಗೆ ಇಷ್ಟವಾದ ಚಿತ್ರ ತೋರಿಸು…ಹೀಗೆ ಕುಳಿತುಕೋ…ಹಾಗಲ್ಲ.. ಹೀಗೆ…ಈ ರೀತಿಯಲ್ಲಿ ಎಂದು ಸೂಚಿಸುತ್ತಾ…. ಈಗ ಸಹಕರಿಸು. ಸ್ವಲ್ಪ ಹೊತ್ತು ಹಾಗೆ ಕುಳಿತಿರು. ನಿನ್ನ ಮನದಲ್ಲಿ ಏನು ಅನಿಸುತ್ತಿದೆಯೋ ಹಾಗೆ ಇರು. ಕುಳಿತ ನಿಲುವು ಬದಲಾಗದಿರಲಿ' ಎಂದ.
ಮಿಸ್ಟರ್ ಎಕ್ಸ್ ಪೇಯಿಂಟಿಂಗ್ ಪ್ರಾರಂಭಿಸಿದ. ಕುಂಚಗಳು ಬಿಳಿ ಕ್ಯಾನವಾಸ್ ಮೇಲೆ ನರ್ತಿಸಿದವು. ಬಣ್ಣಗಳು ಆಕಾರ ತಳೆದವು. ಅಲ್ಲಿ ಭಾವವೊಂದು ಬಿಂದುವಾಗಿ, ಬಿಂದುವೊಂದು ರೂಪವಾಗಿ ರಾಗವಾಗಿ ಹರಡಿತು. ಭಾವವೊಂದು ಜನ್ಮ ತಳೆಯಿತು. ಅದು ಇಡೀ ಪರಿಸರವನ್ನು ತುಂಬಿಕೊಂಡಿತು. ಕೋಣೆಯನ್ನು ಉಲ್ಲಾಸ ಆವರಿಸಿತು. ಒಂದು ಗಂಟೆ ಕಾಲ ಇದು ನಡೆಯಿತು. ಮಧ್ಯೆ ಅದಾವುದೋ ಪ್ರೇಮಗೀತೆಗಳ ಹಿನ್ನೆಲೆ ಸಣ್ಣದಾಗಿ ಸಾಗಿತ್ತು. ತಾನಿಯಾ ಹೊಸ ಜಗತ್ತಿನ ಹೊಸ ಅನುಭವವನ್ನು ಪಡೆಯತೊಡಗಿದಳು. ತನ್ನ ಜೀವನದಲ್ಲಿ ಈ ಸ್ವಭಾವದ ವ್ಯಕ್ತಿಯನ್ನು ಆಕೆ ಕಂಡಿರಲಿಲ್ಲ. `ತನ್ನ ಕಷ್ಟಸುಖಗಳನ್ನು ಒಂದು ರಾತ್ರಿಯಾದರೂ ಆಲಿಸಿದನಲ್ಲಾ ಅಂತ' ಆಕೆಯಲ್ಲಿ ಯಾವ ವ್ಯಕ್ತಿಯ ಬಗ್ಗೆಯೂ ಹುಟ್ಟದ ಗೌರವ ಮಿಸ್ಟರ್ ಎಕ್ಸ್ ಬಗ್ಗೆ ಹುಟ್ಟಿಕೊಂಡಿತ್ತು. ಚಿತ್ರ ಮುಗಿಯುತ್ತಾ ಬಂತು. ಆತ ಕಣ್ಣಲ್ಲೇ ಆಕೆಗೆ ಧನ್ಯವಾದ ಹೇಳಿದ.
`ನೀನು ಈ ರಾತ್ರಿಯನ್ನು ಅರ್ಥಪೂರ್ಣಗೊಳಿಸಿದೆ. ನಿನ್ನ ನೆನಪಿನ ಈ ಚಿತ್ರ. ಈ ಕೋಣೆಯ ಗೋಡೆಯನ್ನು ಆವರಿಸಲಿದೆ ಎಂದ.
ಚಿತ್ರ ನೋಡಿದ ಆಕೆ `ನಾನು ಇಷ್ಟು ಚೆಂದ ಇದ್ದೀನಾ' ಅಂತ ಪ್ರಶ್ನಿಸಿದಳು. ಈ ಚಿತ್ರವನ್ನ ನಾ ಹರಿದುಹಾಕಲಾರೆ. ನಾ ನಿರಾಕರಿಸಲಾರೆ' ತಾನಿಯಾಳಲ್ಲಿ ಸಂತೋಷ ಇಮ್ಮಡಿಸಿತ್ತು.
`ನಾನು ನಿನ್ನ ಜೊತೆ ರಾತ್ರಿ ಕಳೆದಾಯಿತು. ಒಂದು ಹಗಲು ನಿನ್ನ ಜೊತೆ….' ತಾನಿಯಾಳ ಮಾತು ತುಂಡರಿಸಿದ ಎಕ್ಸ್ `ಅದಕ್ಕೇನಂತೆ ಬೆಳಗು ಸಮೀಪಿಸುತ್ತಿದೆ. ಇದ್ದು ಬಿಡು. ಗಿರಿಯ ಬೆಳಿಗ್ಗೆ ಬಂದಾಗ ಹಣ ಕೊಟ್ಟು ಸಮಯ ವಿಸ್ತರಿಸೋಣ'
ಆಕೆ `ನಕ್ಕಳು'. ಮಾತು ಮುಂದುವರಿಸಿದಳು. ನಾಳೆ ಹಗಲು ನನ್ನದು. ನಂಗೆ ಬೇಕೆಂದರೆ ರಾತ್ರಿಯನ್ನು ಕೊಡುವೆಯಾ' ಎಂದಳು ತಾನಿಯಾ.
ಅಚ್ಚರಿಯಿಂದ ನೋಡುವ ಸರದಿ ಮಿಸ್ಟರ್ ಎಕ್ಸ್ನದಾಗಿತ್ತು.
`ಓಹೋ…. ಹಾಗೆ ಆಗಲಿ' ಎಂದ.
`ಆದರೆ ಒಂದು ಶರತ್ತು'
`ಏನದು'
` ನಾನು ಹೇಳಿದಂತೆ ನೀನು ಕೇಳಬೇಕು' ತಾನಿಯಾ ಮಾತಲ್ಲಿ ಪ್ರೀತಿ ಕುಣಿಯುತ್ತಿತ್ತು. ಆಕೆ ವೈಯಾರದಿಂದ ಮಿನುಗುತ್ತಿದ್ದಳು.
` ಕಣ್ಣಲ್ಲಿ ನಕ್ಷತ್ರಗಳನ್ನ ತುಂಬಿಕೊಂಡ ಮಿಸ್ಟರ್ ಎಕ್ಸ್ `ಆಗಲಿ' ಎಂದು ಒಪ್ಪಿಗೆ ಸೂಚಿಸಿದ.
*****
🙁 🙁 🙂
Bhal chand adari kathe.. ishta aaytu.. hinga baritiri..
"BODYಗೆ ದೇಹ" ಅಂತಾರೆ ಕನ್ನಡದಲ್ಲೆ :), Seriously ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ. ಭಾಳಾ ದೊಡ್ಡ ಕತೆಗಾರರಾಗಿ ಬೆಳೀತೀರ ಅಂತ ನನ್ನ Prophesy, Good luck, ಹೀಗೇ ಬರೀತಾ ಹೋಗಿ.
ಬೆಂಗಳುರಿನ ಮಾಂಸ ದಂದೆಗೆ ಮಾನವೀಯ ಸ್ಪಷ ನೀಡುವ ನಿಮ್ಮ ಪರಿ ಎನೆಂದು ಬಣ್ಣಿಸಲಿ?. ಸಾಫ್ಟವೇರ್ ಮತ್ತು ಹಾಡವೇರ್ ನಡುವಿನ ಸಂಭಂಧವನ್ನು ಗೊತ್ತಿಲ್ಲದೇ ಬಯಲುಗೊಳಿಸಿದ್ದೀರಿ. ಮುಂದುವರೆಯಿರಿ…………