ಬಾಂಧವ್ಯದ ಸಂಕೇತ ರಕ್ಷಾ ಬಂಧನ: ವೆಂಕಟೇಶ ಗುಡೆಪ್ಪನವರ ಮುಧೋಳ


ರಸ್ತೆಯಲ್ಲಿ ಶಾಲಾ ಮಕ್ಕಳು ಓರ್ವ ಪ್ರಯಾಣಿಕನಿಗೆ ರಾಕಿ ಕಟ್ಟಿ, “ನಮಗೆ ಹಾಗೆ ಬೇಡ ರಾಕಿ ಕಟ್ಟುತ್ತೇವೆ ಹಣ ಕೊಡಿ” ಎಂದು ಕಡ್ಡಾಯವಾಗಿ ಪಡೆದು ಅದನ್ನು ಒಂದು ಬಿಳಿ ಪೆಟ್ಟಿಗೆದಲ್ಲಿ ಹಾಕುತ್ತಿದ್ದರು. ಸಮೀಪಕ್ಕೆ ಹೋಗಿ ನೋಡಿದರೆ, ಅದು ಕೊಡಗು ಹಾಗೂ ಕೇರಳ ಸಂತ್ರಸ್ಥರ ಪರಿಹಾರ ನಿಧಿ ಪೆಟ್ಟಿಗೆಯಾಗಿತ್ತು. ಸಹೋದರನಿಗೆ ಸಹೋದರಿ ರಕ್ಷಾಬಂಧನ ಕಟ್ಟಿ ಮಮತೆ ತೋರಿಸಿ ಅವನ ಯೋಗಹಕ್ಷೇಮಕ್ಕಾಗಿ ಪ್ರಾರ್ಥಿಸುವುದು, ಅಷ್ಟೇ ಅಲ್ಲ ಈ ಹಣ ಈ ರೀತಿಯಿಂದ ಅಪಾಯದ ಸ್ಥಿತಿಯಲ್ಲಿರುವ ಸಂತ್ರಸ್ಥರ ಬಾಳಿಗೂ ಬೆಳಕಾಗ ಬಲ್ಲದು ಎನ್ನುವುದು, ಇದಕ್ಕೆ ಪ್ರತಿಯಾಗಿ ಜನ ಹಣ ಹಾಕಿ ರಾಕಿ ಕಟ್ಟಿಸಿಕೊಂಡು ಸೋದರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು ಮಾತ್ರವಲ್ಲ ಸಂತ್ರಸ್ಥ ಜನತೆ ಸಹ ಚನ್ನಾಗಿರಲಿ ಎಂದು ಆತ ಭಾಷೆ ಕೊಡುವ ಆ ದೃಶ್ಯ ನಿಜಕ್ಕೂ ಅದ್ಬುತವೆನಿಸಿತು.
ತಾಯಿ-ಮಕ್ಕಳ ನಡುವಿನ ಪ್ರೀತಿ, ಗಂಡ-ಹೆಂಡತಿ ನಡುವಿನ ಅನುರಾಗ, ಸೋದರ-ಸೋದರಿ ನಡುವಿನ ಮಮತೆ-ವಾತ್ಸಲ್ಯ ಹೀಗೆ ಒಂದೊಂದು ಸಂಬಂಧಕ್ಕೂ ಅದರದ್ದೇ ಆದ ಔನ್ನತ್ಯ ಕಲ್ಪಿಸಿರುವುದು ಭಾರತೀಯ ಸಂಸ್ಕøತಿ-ಪರಂಪರೆಯ ವೈಶಿಷ್ಟ್ಯ ಇದಕ್ಕೆ ಹಬ್ಬದ ರೂಪವನ್ನೂ ಕೊಡುವುದರಿಂದ ಇಂಥ ಉದಾತ್ತ ಆಶಯಕ್ಕೆ ಮತ್ತಷ್ಟು ಮೆರುಗು ಸಿಗುತ್ತದೆ ಎಂಬುದು ನಮ್ಮ ಪೂರ್ವಿಕರ ಉದ್ದೇಶವಿದ್ದಿರಬೇಕು. ಅಣ್ಣ ತಂಗಿಯರ ಬಾಂಧವ್ಯಕ್ಕೆ ದ್ಯೋತಕವಾಗಿರುವ ರಕ್ಷಾಬಂಧನ ಆಚರಣೆಗೆ ಭಾರತೀಯ ಸಂಸ್ಕøತಿಗೆ ಅದರದ್ದೇ ಆದ ಮಹತ್ವವಿದೆ.

ಸಹೋದರ ಸಹೋದರಿಯ ಬಲಗೈಗೆ ರಕ್ಷಾಬಂಧನ ಅಥವಾ ರಾಖಿ ಕಟ್ಟಿ ಆತನ ಆಶಿರ್ವಾದ ಪಡೆಯುವುದು, ಪ್ರತಿಯಾಗಿ ಸಹೋದರ ಆಕೆಗೆ ಸಿಹಿಯನ್ನೋ ಹಣವನ್ನೋ ಅಥವಾ ಕೊಡುಗೆಯನ್ನೋ ನೀಡುವುದು ರಕ್ಷಾಬಂಧನದ ಸಂಪ್ರದಾಯ, ಸೋದರ-ಸೋದರಿಯ ನಡುವಿನ ಮಮತೆ-ವಾತ್ಸಲ್ಯಗಳನ್ನು ಉಜ್ವಲಗೊಳಿಸುವುದು ಈ ಆಚರಣೆಯ, ಹಿಂದು, ಸಿಖ್, ಜೈನರು ಹಾಗೂ ಉತ್ತರ ಭಾರತದ ಕೆಲವೆಡೆಯಲ್ಲಿ ಮುಸ್ಲಿಮರೂ ಆಚರಿಸುವ ರಕ್ಷಾಬಂಧನ ಹಬ್ಬ ಹಿಂದು ಪಂಚಾಂಗದ ಪ್ರಕಾರ ನೂಲ ಹುಣ್ಣಿಮೆಯಂದು ಬರುತ್ತದೆ, ಇದು ಜಾತಿ ಧರ್ಮದ ಅಂತರ ಮೀರಿದ ಆದರ್ಶದ ಹಬ್ಬ.

ರಾಖಿಯ ಮಹತ್ವ :ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ. ಈ ಹಬ್ಬವನ್ನು ಆಧ್ಯಾತ್ಮಿಕವಾಗಿ ನೋಡಿದರೆ, ಈ ಹಬ್ಬವು ನಡೆ, ನುಡಿ ಮತ್ತು ಕ್ರಿಯೆಗಳಲ್ಲಿ ಪರಿಶುದ್ಧತೆಯನ್ನು ಹೊಂದುವಂತೆ ಸೂಚಿಸುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತ ಇರುತ್ತದೆ. ಇನ್ನು ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗು ಶಕ್ತಿಯನ್ನು ಸಹೋದರನಿಗೆ ನೆನಪು ಮಾಡಿಕೊಡುತ್ತದೆ.

ಎಂತಹ ರಾಕಿ ಕಟ್ಟಬೇಕು ಏಕೆ ?
ಸೋದರನ ಕೈಗೆ ‘ರಾಖಿ’ ನೂಲು ಕಟ್ಟುವುದು ಸಹೋದರತ್ವದ ಬಾಂಧವ್ಯದ ಸಂಕೇತ. ಸೋದರ-ಸೋದರಿಯರ ನಡುವಿನ ಬಾಂಧವ್ಯ ನೂರ್ಕಾಲ ಬಾಳಲಿ ಎಂಬುದು ಇದರ ಆಶಯ, ಇನ್ನು ಹಣೆಗೆ ತಿಲಕ ಇಡುವುದರ ಹಿಂದೆ ಶೃಂಗಾರ, ವಿಜಯಿಯಾಗಿ ಬಾ ಎಂಬ ಹಾರೈಕೆಯಿದೆ, ಬಾಯಿಂದ ಬರುವ ಮಾತುಗಳು ಸಿಹಿಯಾಗಿರಬೇಕು, ಶತ್ರುವಿಗೂ ನೋವಾಗದಂತಿರಬೇಕು ಎಂಬುದರ ಸಂಕೇತವಾಗಿ ಸಿಹಿ ತಿನ್ನಿಸುವುದು ವಾಡಿಕೆ. ಆದರೆ,ಇಂದು ಸ್ತ್ರೀಯರ ಮೇಲೆ ನಡೆಯುತ್ತಿರುವ ನಾನಾ ವಿಧವಾದ ದೌರ್ಜನ್ಯಗಳನ್ನು ನೋಡಿದರೆ, ಸಹೋದರಿ ಎಂಬ ಪದದ ಅರ್ಥವೇ ಇಂಥವರಿಗೆ ಗೊತ್ತಿಲ್ಲವೇನೋ ಎನಿಸುತ್ತದೆ.ರಾಕಿಗಳನ್ನು ಚಿತ್ರ-ವಿಚಿತ್ರವಾಗಿರುವಂತಹುಗಳಿಗಿಂತ ಸಾತ್ವಿಕ ಮತ್ತು ಮನಸ್ಸಿಗೆ ಆಹ್ಲಾದಕರ ರಾಖಿಗಳನ್ನು ಉಪಯೋಗಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗಲು. ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸುವ ರೂಢಿಯಿದೆ. ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.ಸಹೋದರನಿಗೆ ರಾಖಿಯನ್ನು ಕಟ್ಟುವಾಗ ಸಹೋದರಿಯು ದ್ರೌಪದಿಯ ಭಾವವಿಟ್ಟುಕೊಂಡಿರಬೇಕು.

ಹೀಗಿರುವಾಗ, ರಕ್ಷಾಬಂಧನದಂತಹ ಹಬ್ಬಗಳು ಕೇವಲ ಫ್ಯಾಷನ್ ಆಗಿಯೋ ಅಥವಾ ದಿನದ ಆಚರಣೆಯಾಗಿಯೋ ಉಳಿಯಬಾರದು, ಭಾರತೀಯ ಸಂಸ್ಕøತಿ ನಮಗೆ ನೀಡಿರುವ ರಕ್ಷಾಬಂಧನದಂಥ ಉದಾತ್ತ ಚಿಂತನೆಯ ನಿಜವಾದ ಅರ್ಥವನ್ನು ತಿಳಿದು ಅದನ್ನು ಆಚರಿಸುವಂತಾದರೆ ಮಾತ್ರವೇ ಶೋಭೆ; ಸಮಾಜದಲ್ಲಿನ ವಿಕೃತ ಭಾವನೆಗಳಿಗೆ ಕಡಿವಾಣ ಹಾಕಲು ಅದೇ ಸೂಕ್ತ ಸಾಧನ-ಸಂದರ್ಭ. ರಕ್ಷಾ ಬಂಧನವನ್ನು ಆಚರಿಸುವ ರಾಖಿ ಪೂರ್ಣಿಮೆಯು ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ. ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಅಂದು ಸಮುದ್ರ ದೇವನಾದ ವರುಣನಿಗೆ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. ಈ ದಿನವು ಅತ್ಯಂತ ಮಂಗಳಕರವೆಂದು ಪ್ರತೀತಿ.

ರಾಖಿಗೂ ಪುರಾಣ, ಇತಿಹಾಸ ; ನೂಲಿಗೂ ಬಲವಿದೆ.
• ಶ್ರೀ ಕೃಷ್ಣನ ಬೆರಳಿಗೆ ಪೆಟ್ಟಾಗಿ ರಕ್ತಸ್ರಾವವಾಗಿದ್ದು ಕಂಡ ದ್ರೌಪದಿ ತನ್ನ ಸೀರೆಯ ತುದಿಯನ್ನೇ ಹರಿದು ಗಾಯಕ್ಕೆ ಕಟ್ಟಿದಾಗ, ಇದರ ಒಂದೊಂದು ನೂಲಿನ ಋಣವನ್ನೂ ತಾನು ತೀರಿಸುವುದಾಗಿ ಕೃಷ್ಣ ಭರವಸೆ ನೀಡುತ್ತಾನೆ, ಮುಂದೊಮ್ಮೆ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾ ಸೋದರಿಯ ಕೂಗಿಗೆ ಓಗೊಡುವ ಕೃಷ್ಣ ಅಕ್ಷಯಾಂಬರ ಕರುಣಿಸುತ್ತಾನೆ, ಸೋದರನ ನೋವಿಗೆ ಸೋದರಿಯ ಸ್ಪಂದನೆ, ಆಪತ್ತಿನಲ್ಲಿರುವ ಸೋದರಿಗೆ ಸೋದರನ ಶ್ರೀರಕ್ಷೆ ಇದರಲ್ಲಿ ದ್ವನಿತ.
• ಒಮ್ಮೆ ಇಂದ್ರನ ಅಮರಾವತಿಯ ಮೇಲೆ ರಾಕ್ಷಸನೊಬ್ಬ ದಾಳಿ ಮಾಡಿದನಂತೆ. ಆಗ ಇಂದ್ರನ ಪತ್ನಿಯಾದ ಶಚಿ ದೇವಿಯು ಸಹಾಯಕ್ಕಾಗಿ ವಿಷ್ಣುವಿನ ಮೊರೆ ಹೋದಾಗ, ವಿಷ್ಣು ಶಚಿ ದೇವಿಗೆ ಒಂದು ಹತ್ತಿಯ ದಾರವನ್ನು ನೀಡಿ, ಅದನ್ನು ಆಕೆಯ ಗಂಡನ ಕೈಗೆ ಕಟ್ಟುವಂತೆ ಹೇಳಿದನಂತೆ. ಆಕೆಯು ಹಾಗೆಯೇ ಮಾಡಿದಾಗ, ಇಂದ್ರನು ಯುದ್ಧದಲ್ಲಿ ರಾಕ್ಷಸನನ್ನು ಸೋಲಿಸದನಂತೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು.
• ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ
• ಮಹಾಭಾರತದಲ್ಲಿ ಚಕ್ರವ್ಯೂಹ ಬೇಧಿಸಲು ಹೊರಡುವ ಅಭಿಮನ್ಯು ಅಮ್ಮ ಸುಭದ್ರೆಯಲ್ಲಿ ಆಶಿರ್ವಾದ ಬೇಡಿದಾಗ ಆಕೆ ತನ್ನ ಸೀರೆ ಸೆರಗಿನ ತುದಿಯ ನೂಲು ಹರಿದು ಅಭಿಮನ್ಯುವಿನ ಬಲಗೈಗೆ ಕಟ್ಟಿ ‘ಇದು ನಿನ್ನ ಶ್ರೀರಕ್ಷಣೆಗೆ’ ಎನ್ನುತ್ತಾಳೆ, ಅಭಿಮನ್ಯು ಚಕ್ರವ್ಯೂಹವನ್ನೇನೋ ಬೇಧಿಸುತ್ತಾನೆ, ಆದರೆ ಹೊರಗೆ ಬರುವುದು ಗೊತ್ತಿರುವದಿಲ್ಲ, ಆದರೂ ಛಲಬಿಡದೆ ಹೋರಾಡುತ್ತಿರುವಾಗ ದುಶ್ಯಾಸನ ಅಭಿಮನ್ಯುವಿನ ಬಲಗೈ ಹಿಡಿದು ಕಡಿದಾಗ ತಾಯಿ ಸುಭದ್ರೆ ಕಟ್ಟಿದ ರಕ್ಷೆ ಕಳಚಿ ಬೀಳುತ್ತದೆ, ಅಭಿಮನ್ಯು ಕುಸಿದು ಅಸುನೀಗುತ್ತಾನೆ, ಸದಾಶಯದೊಂದಿಗೆ ಕಟ್ಟಿದ ನೂಲಿಗೂ ರಕ್ಷಣೆಯ ಶಕ್ತಿಯಿದ್ದುದನ್ನು ಇದು ಸಂಕೇತಿಸುವುದಿಲ್ಲವೇ ?
• ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪುರೂರವ ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪುರೂರವÀನಿಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೂರರವ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಯುದ್ಧದಲ್ಲಿ ಪುರೂರವನದ್ದೇ ಕೈಮೇಲಾಗಿ ಇನ್ನೇನು ಅಲೆಗ್ಸಾಂಡರ್‍ನನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಆತನಿಗೆ ಅಲೆಕ್ಸಾಂಡರ ಪತ್ನಿ ಕಳಿಸಿದ್ದ ರಾಖಿಯು ನೆನಪಾಗಿ ಅಲೆಕ್ಸಾಂಡರ್‍ಗೆ ಜೀವದಾನ ನೀಡಿದ ಎನ್ನುತ್ತದೆ ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು ಎನ್ನುತ್ತದೆ ಇತಿಹಾಸ.
• ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯೂನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.
• ಮೊಘಲರು ಭಾರತದ ರಾಜಸ್ಥಾನವನ್ನು ಆಕ್ರಮಿಸಿ ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡಿದ್ದ ಪ್ರಕ್ಷುಬ್ದ ಸನ್ನಿವೇಶದಲ್ಲಿ ಅತ್ಯಾಚಾರ-ಕೊಲೆ-ಸುಲಿಗೆಯನ್ನು ತಪ್ಪಿಸಿಕೊಳ್ಳಲು ಅಲ್ಲಿನ ಯುವತಿಯರು ಕಂಗೆಟ್ಟಿದ್ದ ಹಿಂದು ಯುವಕರಿ ಕೈಗಳಿಗೆ ರಾಖಿ ಕಟ್ಟಿ, ‘ನಿಮ್ಮಿಂದ ಸೋದರಿಯರ ರಕ್ಷಣೆಯಾಗಬೇಕು’ ಎಂದು ಕೇಳಿಕೊಂಡಿದ್ದರ ಪರಿಣಾಮ ಮಹಿಳೆಯರಿಗೆ ರಕ್ಷಣೆ ದೊರಕಿತು. ಇನ್ನುಳಿದಂತೆ ತಂಗಿ ಯಮನೆಯಿಂದ ರಾಖಿ ಕಟ್ಟಿಸಿಕೊಂಡ ನಂತರ ಯಮ ತನ್ನ ರಾಜ್ಯವನ್ನು ಮರಳಿ ಪಡೆದದ್ದು.

ಈ ರೀತಿಯಲ್ಲಿ ನಾವು ರಕ್ಷಾ ಬಂದನಕ್ಕೆ ಸಾಕಷ್ಟು ಐತಿಹಾಸಿಕ ಉದಾಹರಣೆಗಳನ್ನು ನೀಡಬಹುದಾಗಿದೆ. ರಕ್ಷಾಬಂಧನದ ಈ ದಿನವನ್ನು ನೆನಪಿಟ್ಟುಕೊಂಡು ಸಹೋದರ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸಬೇಕು,ಮತ್ತು ಯಾವೂದೇ ಅಪೇಕ್ಷಯಿಲ್ಲದೆ ರಾಕಿ ಕಟ್ಟಬೇಕು ಇದರಿಂದ ಆಧ್ಯಾತ್ಮಿಕ ಲಾಭ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಸಮಾಜದಲ್ಲಿರುವ ಇತರರೊಂದಿಗಿರುವ ಬಾಂಧವ್ಯ ವೃದ್ಧಿಸಲು ಇಂದು ನಮ್ಮ ಭಾವನೆ ಹಾಗೂ ಪ್ರೀತಿಗೆ ತಕ್ಕಂತಹ ರಾಕಿಗಳು ಲಭ್ಯಇದ್ದರೂ ಸಹ ನಮ್ಮ ಕೈಯಲ್ಲಿ ತಯಾರಿಸಿದ್ದೇವೆ ಎಂದು ಸಹೋದರನಿಗೆ ಕಟ್ಟಿದರೆ ಅದರ ಬೆಲೆನೇ ಬೇರೆಯಾಗಿರುತ್ತದೆ ಮತ್ತು ಸಹೋದರನ ಮುಖದಲ್ಲಿ ಮಂದಹಾಸ ಇರುತ್ತದೆ.

• ವೆಂಕಟೇಶ ಗುಡೆಪ್ಪನವರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x