ಸ್ನೇಹಿತ ಲಕ್ಷ್ಮೀಕಾಂತ ಮಿರಜಕರ ಮೊಳಕಾಲ್ಮೂರಿನ ದೇವಸಮುದ್ರದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು. ನನ್ನ ಇಲಾಖಾ ಸನ್ಮಿತ್ರರು. ನಮ್ಮದು ಬಹಳ ಸಣ್ಣ ವ್ಯವಸ್ಥಾಪನೆಯಾದುದರಿಂದ, ಸಂಕಷ್ಟಗಳು ಮತ್ತು ಅನುಭವಗಳು ಉಳಿದೆಲ್ಲ ಇಲಾಖೆಯವರಿಗಿಂತ ಭಿನ್ನವಾಗಿರುವುದರಿಂದ ಬೃಹತ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ ಸಂಖ್ಯೆಯವರು ಇಟ್ಟಾಗಿ ಬಡಿದಾಡಬೇಕಾದ್ದರಿಂದ ಸಂಬಂಧಗಳು ಬಿಗಿಯಾಗಿರುತ್ತವೆ.
ಇಂತಿಪ್ಪ ಲಕ್ಷ್ಮೀಕಾಂತರು ಇತ್ತೀಚೆಗೆ ನನಗೊಂದು ಪುಸ್ತಕವನ್ನು ಕಳಿಸಿಕೊಟ್ಟರು. ಅದು ತಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಬರೆದ ಬರಹಗಳ ಸಂಕಲನ-‘ಚಿಲುಮೆ’.
‘ಚಿಲುಮೆ’ಯ ವೈವಿಧ್ಯ ಬಹಳ ಮುದ ನೀಡಿತು. ಒಬ್ಬ ವಿದ್ಯಾರ್ಥಿ ಕವನ ಬರೆಯುತ್ತಾಳೆ. ಇನ್ನೊಬ್ಬ ವಿದ್ಯಾರ್ಥಿ ತನ್ನ ಕನಸನ್ನು ಬರೆಯುತ್ತಾನೆ. ಮತ್ತೊಬ್ಬ ತನ್ನ ಕಷ್ಟಗಳ ಬಗ್ಗೆ, ಮಗದೊಬ್ಬ ತನ್ನ ಕುಟುಂಬದ ಬಗ್ಗೆ. . . ಹೀಗೆ ನಾನಾ ರೀತಿಯ ಅನುಭವಗಳು. ಆದರೆ ಈ ಎಲ್ಲ ಬರಹಗಳಲ್ಲಿ ಒಂದು ಏಕ ಲಯವಿದೆ. ಅದೇನೆಂದರೆ ಮಕ್ಕಳು ಬದುಕನ್ನು ತುಂಬು ಪ್ರೀತಿಯಿಂದ ಸ್ವೀಕರಿಸುತ್ತಾರೆ. ನಿರಾಕರಣೆಯ ಸಿದ್ಧಾಂತ ಮಕ್ಕಳ ಬಳಿ ಇಲ್ಲ. ಏನನ್ನೆ ಆದರೂ ಅವರು ಸ್ವೀಕರಿಸುವುದೇ. ಸ್ವೀಕರಿಸುವ ಮನಸ್ಥಿತಿ ಉಳ್ಳವರಿಗೆ ಅಸಹನೆಗಳಿರುವುದಿಲ್ಲ. ರಾಮಕೃಷ್ಣ ಪರಮ ಹಂಸರು ಕಾಯಿಲೆ ಬಿದ್ದು ನರಳುವಾಗ “ನಿಮಗೂ ಈ ರೀತಿಯ ವೇದನೆಯೇ?” ಎಂದು ಶಿಷ್ಯನೊಬ್ಬ ಕೇಳಿದ್ದಕ್ಕೆ ಅವರು, “ದೇಹಧಾರಿಗೆ ದೇಹಕ್ಕೊದಗುವ ಸುಖವನ್ನು ಅನುಭವಿಸುವ ಹಕ್ಕಿರುವಂತೆ ನೋವನ್ನು ಅನುಭವಿಸುವ ಅಧಿಕಾರವೂ ಇರುತ್ತದೆ”ಎಂದು ಉತ್ತರಿಸಿದ್ದರಂತೆ. ನೋವನ್ನು ಕೂಡ ಸ್ವೀಕರಿಸಲು ಸಾಧ್ಯವಿದ್ದರೆ ಅದರ ಅಸಹನೆಯ ಮಟ್ಟವೂ ಕೂಡ ಕಡಿಮೆಯಾಗುತ್ತದೆ.
ಮಕ್ಕಳ ವಯಸ್ಸಿನಲ್ಲಿ ಸ್ನೇಹಿತರು ಸಿಗುವುದು ಸಹಜ. ಸ್ನೇಹವನ್ನು ಒಂದು ಮಗು ಈ ರೀತಿ ಕಂಡುಕೊಳ್ಳುತ್ತದೆ:
. . . . ಕನಸು ಬೆಳಗಾಗುವ ವರೆಗೂ
ಬೆಳಕು ಕತ್ತಲಾಗುವ ವರೆಗೂ
ಮನಸ್ಸು ಪ್ರೀತಿ ಮಾಡುವ ವರೆಗೂ
ಆದ್ರೆ ಸ್ನೇಹ ಕೊನೆವರೆಗೂ
ಈ ಕವಿತೆ ಸ್ನೇಹವನ್ನು ಮಗು ಯಾವ ಮಟ್ಟದಲ್ಲಿ ಕಾಣಲು ಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ಇನ್ನೊಂದು ಮಗು ಅಪ್ಪ ತನಗೆ ಹೊಡೆದದ್ದನ್ನು ಹೇಳುತ್ತಾಳೆ. ಹಾಗೆ ಹೊಡೆದ ನಂತರವೂ ಅಪ್ಪನ ತೆಕ್ಕೆಯಲ್ಲಿ ಆಕೆ ಕಾಣುವ ಸುಖ ನಿಷ್ಕಾಮ ಪ್ರೇಮದ ರೂಪವಾಗಿ ಗಮನ ಸೆಳೆಯುತ್ತದೆ. ಅಫ್ಕೋರ್ಸ್ ಅದು ಭಾರತದ ಕುಟುಂಬ ವ್ಯವಸ್ಥೆಯ ಶಕ್ತಿಯೂ ಹೌದು.
ಇನ್ನೊಂದು ಮಗು ಸೈನಿಕರ ಬಗ್ಗೆ ಕವಿತೆ ಬರೆಯುತ್ತಾನೆ. ಒಬ್ಬ ಸೈನಿಕನಲ್ಲಿ ಆತ ತನ್ನನ್ನು ತಾನು ಕಂಡುಕೊಳ್ಳುತ್ತಾ ತನ್ನ ದೇಶಪ್ರೇಮವನ್ನು ತನಗೆ ತಾನೇ ಖಚಿತಪಡಿಸಿಕೊಳ್ಳುತ್ತಾ ಹೋಗುವ ಸೊಬಗು ಹೃದ್ಯವಾಗಿ ಮೂಡಿ ಬಂದಿದೆ. ಇನ್ನೊಂದು ಕವಿತೆ ಈ ರೀತಿ ಇದೆ:
ಹೆತ್ತ ಕರುಳು ಸೋದರ ವಾತ್ಸಲ್ಯ
ಧ್ವನಿ ಎತ್ತಿ ಕೂಗಿ ಕರೆದರೂ
ಹೋಗಲಾರದ ಪರಿಸ್ಥಿತಿ
ನೋವುಂಟು ಮಾಡುತಿದೆ
ಜೀವ ಹಿಂಡುತಿದೆ
ಅವರ ಕರೆಯನ್ನು ತೊರೆದು
ಏನೊ ಕಡಿದು ಕಟ್ಟಾಕುವೆ
ಅನ್ನೋ ಹಠ!
ಏನೂ ಪ್ರಯೋಜನವಾಗಲಿಲ್ಲ
ತಾನು ಅಗೆದ ಗುಂಡಿಗೆ ತಾನೇ ಬಿದ್ದಂತೆ ಕೈಯಾರೆ ಮಾಡಿದ ಕೆಲಸಕ್ಕೆ
ತಕ್ಕ ಶಾಸ್ತಿಯಾಗಿದೆ
ತಾಳ್ಮೆಯ ಕಟ್ಟೆ ಒಡೆದು
ಸಹನೆ ಮೀರಿದ ಕಣ್ಣೀರಿಗೆ
ಉತ್ತರ ಹೇಳಲು ನಾಚಿಕೆ
ಹೇಳು ಏಕೆ ತೊರೆದೆ;ಏನು ಸಾಧಿಸಿದೆ;ಏಕೆ ನೋವು?ಕಣ್ಣೀರೇಕೆ;ದೊರೆತದ್ದೆಲ್ಲ ನೋವಷ್ಟೆ ಸಂಕಟಗಳಷ್ಟೇ ಯಾಕೆ ?ಯಾಕೆ? ಯಾಕೆ?
ಈ ಕವಿತೆ ನಿಗೂಢತೆಯ ಜಾಡಿನಲ್ಲಿ ಬದುಕನ್ನು ಶೋಧಿಸುವ, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಅಪೂರ್ವ ಕವಿತೆ. ಇನ್ನೊಂದು ಮಗು ಪರಿಸರದ ಬಗ್ಗೆ ಬರೆಯುತ್ತಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಕಂಡುಕೊಳ್ಳುತ್ತಾಳೆ.
ಮಕ್ಕಳಿಗೆ ಅಮೆರಿಕದಲ್ಲೇನಿದೆ ಎಂದು ತಿಳಿಸಲಾಗುತ್ತದೆ. ಆದರೆ ಅವರ ಊರಿನಲ್ಲೆ ಏನಿದೆ ಎಂದು ಗೊತ್ತು ಮಾಡುವುದಿಲ್ಲ. ಈ ಪುಸ್ತಕದಲ್ಲಿ ಮೊಳಕಾಲ್ಮೂರಿನಪರಿಚಯವಿದೆ. ಸುತ್ತು ಮುತ್ತಲ ಪ್ರದೇಶಗಳ ಪರಿಚಯವನ್ನು ಮಕ್ಕಳೇ ಮಾಡಿಕೊಟ್ಟಿದ್ದಾರೆ.
ಪ್ರಸ್ತುತ ಜಾತಿವಾದ, ಮತೀಯವಾದ ಅದರ ಸಾಂಪ್ರದಾಯಿಕ ರೂಪದಲ್ಲೂ, ಶೋಷಣಾ ಮುಕ್ತತೆಯೆಂಬ ನವಿಲಿನ ಗರಿಯನ್ನು ಕಟ್ಟಿಕೊಂಡ ಕೆಂಭೂತದ ರೂಪದಲ್ಲೂ ಮಾನವ ದ್ವೇಷದ ತೀಕ್ಷ್ಣ ಪ್ರತಿಪಾದನೆಯಾಗಿ ಆವರಿಸಿರುವಾಗ ಏಳನೆಯ ತರಗತಿಯ ಒಬ್ಬ ವಿದ್ಯಾರ್ಥಿ “ಏನು ಲೋಕವೋ ಅಣ್ಣ
ಎಂಥ ಲೋಕವೊ ತಮ್ಮ
ಜಾತಿ ಜಾತಿಯೆಂದು ಸಾಯುತ್ತಿದೆ
ನಮ್ಮ ಲೋಕ” ಎಂದು ನಿರ್ಭೀತಿಯಿಂದ ಮತ್ತು ಯಾವ ಹಿಡನ್ ಅಜೆಂಡಾಗಳೂ ಇಲ್ಲದ ಪ್ರಾಮಾಣಿಕತೆಯಿಂದ ಬರೆಯುತ್ತಾನೆ. ನಮ್ಮ ಮಕ್ಕಳಲ್ಲಿ ಇರುವ ಈ ನಿಷ್ಠುರ ಸತ್ಯದ ನಿಷ್ಠೆ ಕಲಬೆರಕೆಯಾಗದಂತೆ ಜೋಪಾನವಾಗಿ ಕಾಪಾಡಬೇಕಾಗಿದೆ. ಇನ್ನೊಬ್ಬ ವಿದ್ಯಾರ್ಥಿ ಸಾಮಾಜಿಕ ಪಿಡುಗುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಮತ್ತೊಬ್ಬ ವಿದ್ಯಾರ್ಥಿ ಹಕ್ಕಿಯ ರೂಪಕವೊಂದರ ಮೂಲಕ ಸುಂದರ ಸಂಸಾರದ ಸಾಕಾರವನ್ನು ಮಾಡುತ್ತಾ ಹೋಗುತ್ತಾನೆ, ತನ್ನ ಕವಿತೆಯಲ್ಲಿ.
ಕೃತಿಯ ಎರಡನೆಯ ಭಾಗದಲ್ಲಿ ನಾ. ಡಿಸೋಜ, ಬಿ. ಆರ್. ಲಕ್ಷ್ಮಣ ರಾವ್, ಅರವಿಂದ ಮಾಲಗತ್ತಿ, ಸತ್ಯಾನಂದ ಪಾತ್ರೋಟ, ಇಂದುಮತಿ ಲಮಾಣಿ ಅವರೊಂದಿಗೆ ಮಕ್ಕಳು ಫೋನ್ ನಲ್ಲೆ ನಡೆಸಿದ ವಿಸ್ತಾರವಾದ ಸಂದರ್ಶನಗಳಿವೆ. ಈ ಸಂದರ್ಶನಗಳಲ್ಲಿ ಅರವಿಂದ ಮಾಲಗತ್ತಿ ಅವರು ಮಕ್ಕಳನ್ನು ಹೆಚ್ಚು ಪ್ರೇರಣೆಗೆ ಒಳಪಡಿಸಿದ್ದು ಕಾಣಿಸುತ್ತದೆ. ಉಳಿದೆಲ್ಲ ಸಂದರ್ಶನಗಳೂ ಚೆನ್ನಾಗಿವೆ. ಆದರೆ ಮಾಲಗತ್ತಿಯವರ ಸಂದರ್ಶನದ ವೈಶಿಷ್ಠ್ಯ ಬೇರೆಯದೆ ಬಗೆಯದು.
ಮಕ್ಕಳ ಹೆಸರನ್ನು ಬರೆದರೆ ಅವರಿಗೆ ಇಷ್ಟವಾಗುತ್ತದೊ ಇಲ್ಲವೊ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲದ್ದರಿಂದ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಈ ರೀತಿಯ ಪುಸ್ತಕದ ಪರಿಚಯವನ್ನು ಯಾವುದಾದರೂ ಪತ್ರಿಕೆಗಳು ಮಾಡಿದರೆ ಚೆನ್ನಾಗಿರುತ್ತದೆ.
1993-94ರಲ್ಲಿ ಮೈಸೂರು ವಿಭಾಗಕ್ಕಾಗಿ ಮುಂಡಾಜೆಯಲ್ಲಿ, ಬೆಂಗಳೂರು ವಿಭಾಗಕ್ಕಾಗಿ ಚೆನ್ನಪಟ್ಟಣದಲ್ಲಿ, ಕಲ್ಬುರ್ಗಿ ವಿಭಾಗಕ್ಕಾಗಿ ರಾಯಚೂರಿನಲ್ಲಿ, ಬೆಳಗಾವಿ ವಿಭಾಗಕ್ಕಾಗಿ ಬೈಲಹೊಂಗಲದಲ್ಲಿ ಕರ್ನಾಟಕ ಸರಕಾರವು ಪ್ರಾರಂಭಿಸಿದ ವಸತಿ ಶಾಲೆಗಳು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಇವೆ. ಈಗ ಸುಮಾರು ಏಳು ನೂರು ಶಾಲೆಗಳಿವೆ. ಅರೆ ಕಾಲಿಕ ನಿವೃತ್ತ ಅಧ್ಯಾಪಕರಿಂದಲೇ ನಡೆಯುತ್ತಿದ್ದ ಈ ಶಾಲೆಗಳಿಗೆ ಬಹು ದೀರ್ಘ ಕಾಲದ ನಂತರ ಖಾಯಂ ಅಧ್ಯಾಪಕರ ನೇಮಕಾತಿಯಾಯಿತು. ಹಾಗೆ ನೇಮಕಾತಿಯಾದ ಅಧ್ಯಾಪಕರು ಮಕ್ಕಳ ಪ್ರತಿಭೆಯ ವಿಕಾಸಕ್ಕಾಗಿ ಸಾರ್ಥಕ ಪರಿಶ್ರಮಕ್ಕಿಳಿದಿದ್ದಾರೆ ಎಂಬುದನ್ನು ಗೆಳೆಯ ಲಕ್ಷ್ಮೀಕಾಂತ್ ಈ ಪುಸ್ತಕದ ಮೂಲಕ ಸಾಬೀತುಪಡಿಸಿದ್ದಾರೆ. ಮಕ್ಕಳ ವಿಕಾಸವಾಗಬೇಕಾದರೆ ಅಧ್ಯಾಪಕರು ಸಂತೃಪ್ತರೂ ಇರಬೇಕು, ಸಮರ್ಥರೂ ಇರಬೇಕು. ಮಕ್ಕಳು ಎಷ್ಟು ಮುಖ್ಯವೊ ಸಮರ್ಥ ಅಧ್ಯಾಪಕರನ್ನು ಪ್ರೋತ್ಸಾಹಿಸಿ ಅಂತಹ ಅಧ್ಯಾಪಕರನ್ನು ರೂಪಿಸುವುದೂ ಮುಖ್ಯವಾಗುತ್ತದೆ. ಗೆಳೆಯ ಲಕ್ಷ್ಮೀಕಾಂತರು ನಾನು ನಿವೃತ್ತನಾದ ನಂತರವೂ ಇಲ್ಲಿ ಮುಂದುವರಿಯಲಿರುವವರು. ಅವರ ಕರ್ತೃತ್ವ ಶಕ್ತಿ ಮತ್ತು ಮಕ್ಕಳ ಮೇಲಿನ ಬದ್ಧತೆ ಅಪಾರ ಸಂತೋಷವನ್ನು ಕೊಟ್ಟಿದೆ. ಲಕ್ಷ್ಮೀಕಾಂತ್ ಅವರ ಪರಿಶ್ರಮವನ್ನು ಅಭಿನಂದಿಸುತ್ತಾ ಮುಂದಿನ ಅವರ ಸಾಹಸಗಳಿಗೆ ಪ್ರೀತಿಯ ಶುಭ ಸುಪ್ರಭಾತವನ್ನು ಕೋರುತ್ತೇನೆ.
-ಅರವಿಂದ ಚೊಕ್ಕಾಡಿ