ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ ಸರಿ ಇದೆಯೋ ಇಲ್ಲವೋ ಎಂಬಂತೆ ತಮ್ಮದೇ ಸುತ್ತಲೂ ಕಣ್ಣಾಡಿಸುತ್ತ, ಸರಿಯಿಲ್ಲ ಅನಿಸಿದೆಡೆಗೆ ಸರಿ ಮಾಡಿಕೊಳ್ಳುತ್ತ ನಿಂತಿದ್ದರು. ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ತಾನೇ ಎಂದೂ ಅತ್ತಿತ್ತ ನೋಡುತ್ತ, ಒಬ್ಬನಾದರೂ ನೋಡುತ್ತಿದ್ದರೆ ಅದು ತನ್ನನ್ನೇ ನೋಡುತ್ತಿರಬೇಕು ಎಂದು ಒಂದು ಗಳಿಗೆ ನಿಶ್ಚಿಂತರಾಗುತ್ತಿದ್ದರು. ಸುಗಂಧ ದ್ರವ್ಯವನ್ನು ಯಥೇಚ್ಚವಾಗಿ ಸ್ಪ್ರೇ ಮಾಡಿದ್ದರಿಂದ ಆ ಪ್ರದೇಶದಲ್ಲಿ ಘಾಟು ವಾಸನೆ ಅಡರಿತ್ತು. ಒಟ್ಟಿನಲ್ಲಿ ಅಲ್ಲಿ ಹಬ್ಬದ ವಾತಾವರಣವಿತ್ತು. ಬೆಂಗಳೂರಿಗೆ ಬಂದ ಮೇಲೆ ಹಬ್ಬ ಹರಿದಿನಗಳನ್ನೇ ಮರೆತ ಪ್ರದೀಪಗೆ ಇವತ್ತು ಯಾವುದೋ ಹಬ್ಬವಿರಬೇಕು ತಾನು ಅದನ್ನು ಎಂದಿನಂತೆ ಮರೆತುಬಿಟ್ಟೆನೇನೋ ಎಂಬ ಸಂಶಯ ಉಂಟಾಗಿರುವಾಗಲೇ ಅಲ್ಲೇ ಪಕ್ಕಕ್ಕೆ ಇದ್ದ ಫಲಕದ ಮೇಲೆ ಯಾರಿಗೋ ಸ್ವಾಗತ ಕೋರಿದ ಅಕ್ಷರಗಳು ಕಂಡವು. ಕೂಲಂಕುಷವಾಗಿ ನೋಡಲಾಗಿ 'Welcome to Voice President John C. Becker' ಅನ್ನುವ ವಾಕ್ಯಗಳು ಕಂಡವು. ತಮ್ಮ ಶಾಖೆಗೆ ಜಾನ್ ಬರುತ್ತಿರುವ ವಿಷಯ ಅವನಿಗೆ ಗೊತ್ತಾಗಿದ್ದು ಆಗಲೆ. ಅವನು ಬರುತ್ತಿರುವ ವಿಷಯ ಮೊದಲೇ ಗೊತ್ತಿತ್ತಾದರೂ ಇವತ್ತೇ ಬರುವನೆಂದು ಅವನಿಗೆ ಅಂದಾಜಿರಲಿಲ್ಲ. ತನಗ್ಯಾರೂ ಹೇಳಲೇ ಇಲ್ಲವೆಂಬ ಕೋಪ ಅವನಿಗೆ ಬಂದಿತು. ತನ್ನ ಬಾಸ್ ಸುಜಯ್ ಎಲ್ಲ ವಿಷಯಗಳನ್ನು ತನ್ನ ಗೆಳತಿ ನಿಶಾಗೆ ಮಾತ್ರ ಹೇಳುತ್ತಾನೆ. ಮಿಕ್ಕ ತಾವೆಲ್ಲರೂ ಏನು ಪಾಪ ಮಾಡಿದ್ದೇವೆ? ಅಂತ ತನ್ನಲ್ಲೇ ಅವನನ್ನು ಬೈದುಕೊಂಡ. ಈ ವಿಷಯದ ಬಗ್ಗೆ ಜಾನ್ ಗೆ ದೂರು ಕೊಡಬೇಕು ಅಂತ ಯೋಚಿಸುತ್ತ ತನ್ನ ಜಾಗಕ್ಕೆ ತೆರಳಿದ.
ಅಮೆರಿಕಾದ ದೊರೆಗೆ ಅದ್ಧೂರಿಯ ಸ್ವಾಗತ ಕೋರಲು ಎಲ್ಲ ಸಿದ್ಧತೆಗಳಾಗಿದ್ದವು. ಶಾಖೆಯ ಮುಖಸ್ಥನಾದ ಸುಧೀರ್ ತನ್ನ ಮಾಮೂಲಿ ಟೀ ಶರ್ಟ್ ಹಾಕಿಕೊಳ್ಳದೆ ತುಂಬಾ ಡೀಸೆಂಟ್ ಆಗಿರುವ ಸೂಟು ಬೂಟು ಹಾಕಿಕೊಂಡು ತಯಾರಾಗಿದ್ದುದು ವಿಶೇಷವಾಗಿತ್ತು. ಉಳಿದ ಮ್ಯಾನೇಜರ್ ಗಳೂ ತಂತಮ್ಮ ಸೂಟು ಬೂಟುಗಳೊಂದಿಗೆ ಮದುವೆಗೆ ತಯಾರಾದಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ಬಂದಿದ್ದರು. ಮೊದಲೇ ನಿರ್ಧರಿಸಿದಂತೆ ಜಾನ್ ಹನ್ನೆರಡು ಗಂಟೆಗೆ ಬರುವದಿತ್ತಾದರೂ ಅವನು ಬಂದಿದ್ದು ಒಂದು ಗಂಟೆ ಮೊದಲೇ. ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿ ಎಲ್ಲರಿಗೂ ಅನಿರೀಕ್ಷಿತ ತಿರುವು ಕೊಡುವುದರಲ್ಲಿ ಜಾನ್ ದು ಎತ್ತಿದ ಕೈ. ಅದೇ ಅವನ ವಿಶೇಷ. ಅದನ್ನು ಮೊದಲೇ ತಿಳಿದಿದ್ದ ಸುಧೀರ್ ಎಲ್ಲ ತಯಾರಿಗಳನ್ನೂ ಮುಂಚಿತವಾಗೆ ಮಾಡಿಕೊಂಡಿದ್ದ.
ಜಾನ್ ಬರುತ್ತಲೇ ಸೀರೆ ಉಟ್ಟ ನೀರೆಯರು ಅವನಿಗೆ ಹೂ ಗುಚ್ಚದೊಂದಿಗೆ ಸ್ವಾಗತಿಸಿದರು. ಅವನು ಗಂಟು ಮುಖದಲ್ಲೇ ಸ್ವೀಕರಿಸಿದ. ಅವನ ಜೊತೆಗೆ ಜೇಕಬ್ ನೂ ಬಂದಿದ್ದ. ಸುಧೀರ್ ತನ್ನನ್ನು ತಾನು ಪರಿಚಯಿಸಿಕೊಂಡ. ಜಾನ್, ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ರೀತಿಗೆ ತುಸು ಮುಜುಗರಕ್ಕೊಳಗಾದ. ಆ ನೋಟ ‘ನೀನೆ ಏನು ಈ ಶಾಖೆಯ ಮುಖ್ಯಸ್ಥ?’ ಅನ್ನುವಂತಿತ್ತು. ಮಿಕ್ಕ ಸಹೋದ್ಯೋಗಿಗಳನ್ನೂ ಅವನಿಗೆ ಸುಧೀರ ಪರಿಚಯಿಸಿದ. ಎಲ್ಲರನ್ನೂ ಹುಬ್ಬು ಗಂಟಿಕ್ಕಿಯೇ ಮಾತಾಡಿಸಿದ ಜಾನ್ ಎಲ್ಲರಲ್ಲಿಯೂ ನಡುಕ ಹುಟ್ಟಿಸಿದ. ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು!
ಸುಧೀರ್ ನ ಜೊತೆಗೆ ಇಡೀ ಆಫೀಸನ್ನು ಸುತ್ತಾಡಿದ ಜಾನ್, ಎಲ್ಲ ಕಡೆಗೂ ಸಂಶಯದ ದೃಷ್ಟಿಯಿಂದಲೇ ಅಡ್ಡಾಡುತ್ತಿದ್ದನೇನೋ ಅಂತ ಅನಿಸುತ್ತಿತ್ತು. ಕೆಲವು ಸಹೋದ್ಯೋಗಿಗಳ ಜೊತೆಗೆ ಮಾತಾಡಿ ಅವರೇನು ಮಾಡುತ್ತಿರುವರೆಂದು ಕೇಳಿ ತಿಳಿದುಕೊಂಡ. ಕೆಲವರಿಗೆ ಇದನ್ನು ಹೀಗೇಕೆ ಮಾಡುತ್ತಿರುವೆ? ಹಾಗೇಕೆ ಮಾಡುತ್ತಿಲ್ಲ ಅಂತೇನೇನೋ ಪ್ರಶ್ನೆ ಕೇಳಿ ಅವರಲ್ಲಿ ಬೆವರು ಹುಟ್ಟಿಸಿದ. ಪ್ರದೀಪನಂತಹ ಕೆಲೆಸಗಳ್ಳರು ಮಾತ್ರ ಅವನು ಬಂದ ಸಮಯಕ್ಕೆ ತಮ್ಮ ಜಾಗದಲ್ಲಿರದೆ ಬಚಾವಾದರು. ಎಂದಿನಂತೆ ಡೆಸ್ಕಿಗೆ ಅಂಟಿಕೊಂಡು ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಇದರಿಂದ ಕಿರಿಕಿರಿ ಅನುಭವಿಸುವಂತಾಯಿತು. ಆದರೆ ನಿಶಾ ಮಾತ್ರ ಇದೆ ಒಂದು ಅವಕಾಶಕ್ಕೆ ಕಾಯುತ್ತಿದ್ದವಳಂತೆ ಅವನ ಜೊತೆ ಅಮೆರಿಕಾದ accent ನಲ್ಲಿ ಮಾತಾಡಿ ಅವನ ಮನ ಗೆದ್ದಳು. ಅವಳ ಹೆಸರು ಏನು , ಅವಳು ಯಾರಿಗೆ ರಿಪೋರ್ಟ್ ಮಾಡುತ್ತಿದ್ದಾಳೆ ಎಂಬೆಲ್ಲ ವಿಷಯಗಳನ್ನು ಅವನು ಕೇಳಿ ತಿಳಿದುಕೊಂಡ. ಅವನ ಜೊತೆಗಿದ್ದ ಜೇಕಬ್ ಇದೆಲ್ಲವನ್ನೂ ನೋಟ್ ಮಾಡಿಕೊಂಡ. ಈ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯಬಹುದೆಂದು ಸುಧೀರನಿಗೆ ಮನದಟ್ಟಾಯಿತು. ಯಾವುದೇ ಉಪಾಧ್ಯಕ್ಷ ಇಲ್ಲಿಯವರೆಗೆ ಈ ತರಹ ವರ್ತಿಸಿರಲಿಲ್ಲ.
ಮದ್ಯಾಹ್ನದ ಊಟಕ್ಕೆ ಕಂಪನಿಯ ಪಕ್ಕದಲ್ಲೇ ಇದ್ದ ಪಂಚತಾರಾ ಹೋಟೆಲ್ ನಲ್ಲಿ ಪೃಥ್ವಿ ವ್ಯವಸ್ಥೆ ಮಾಡಿಸಿದ್ದ. ಅದೇ ಹೋಟೆಲ್ ನಲ್ಲಿ ಅವನ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆಫೀಸಿಗೆ ತುಂಬಾ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿಯೇ ತಾನು ತಂಗಬೇಕೆಂದು ಜಾನ್ ನ ಅಪೇಕ್ಷೆಯಾಗಿತ್ತು. ಅವನ ಜೊತೆಗೆ ಊಟಕ್ಕೆ ಸುಧೀರ್ ಹಾಗೂ ಇತರ ಮ್ಯಾನೇಜರ್ ಗಳು ಹಾಜರಾಗಿದ್ದರು. ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು. ಎದುರಿಗೆ ಜಾನ್ ನಂತಹ ವ್ಯಕ್ತಿ ಕೂತಿರುವಾಗ ಎಲ್ಲರ ಹಸಿವೆಯೂ ಸಹಜವಾಗಿಯೇ ಮಾಯವಾಗಿತ್ತು. ಅವನು ಏನು ಕೆಳುತ್ತಾನೋ ಎನ್ನುವ ಹೆದರಿಕೆ ಪ್ರತಿಯೊಬ್ಬರಲ್ಲೂ ಇತ್ತು. ಅವನೂ ಕೂಡ ಈ ಸಂದರ್ಭದ ಸದ್ಬಳಕೆ ಮಾಡಿಕೊಂಡಿದ್ದ. ಪ್ರತಿಯೊಬ್ಬ ಮ್ಯಾನೇಜರ್ ಗೂ ಪ್ರಶ್ನೆಗಳನ್ನು ಹಾಕುತ್ತ ಅವರನ್ನು ಪೇಚಿಗೆ ಸಿಕ್ಕಿಸುತ್ತಿದ್ದ. ಅದೇ ಜೇ.ಸಿ.ಬಿ ಎಂಬ ಅನ್ವರ್ಥಕ ನಾಮ ಗಳಿಸಿದ ಜಾನ್ ನ ವಿಶೇಷತೆಯಾಗಿತ್ತು. ಮರುದಿನ ಪ್ರತಿಯೊಬ್ಬ ಮ್ಯಾನೇಜರ್ ಜೊತೆಗೆ ತನ್ನ ಮೀಟಿಂಗ್ ಗೊತ್ತು ಮಾಡಲು ಆದೇಶ ಹೊರಡಿಸಿದ್ದ. ಎಲ್ಲರೂ ಒಂದೊಂದು ತುತ್ತನ್ನೂ ತುಂಬಾ ಪ್ರಯಾಸ ಪಟ್ಟು ಗಂಟಲೊಳಗೆ ಇಳಿಸಿಕೊಳ್ಳುತ್ತಿದ್ದರು.
ಕಡೆಗೂ ಊಟದ ಆಟ ಮುಗಿದಿತ್ತು. ಹಿಂದಿನ ರಾತ್ರಿಯೇ ಬಂದ ಜಾನ್ ಗೆ ನಿದ್ದೆ ಬಂದಿರಬಹುದು ಹಾಗೂ ಅವನು ತನ್ನ ಕೋಣೆಗೆ ಹೋಗಿ ಮಲಗಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬಹುದೆಂಬ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ, ಊಟದ ಬಳಿಕ ಎಲ್ಲರ ಜೊತೆಗೆ ಆಫೀಸಿನ ಕಡೆಗೆ ನಡೆದನವನು. ಸುಧೀರ್ ನ ಜೊತೆಗೆ ಕುಳಿತು ಒಂದಿಷ್ಟು ವಿಷಯಗಳ ಮಾಹಿತಿ ಪಡೆಯುವ ಉದ್ದೇಶ ಅವನದಾಗಿತ್ತು…
(ಮುಂದುವರಿಯುವುದು…)
ಓಂದಿಲ್ಲಾ ಒಂದು ಅನಿರಿಕ್ಷಿತ ತಿರುವು ಪ್ರತಿ ಸಂಚಿಕೆಯಲ್ಲಿ ಬಂದ್ರ ಮಸ್ತ್ ಅನಸ್ತದ ಗುರು….
ಕುತುಹಲಾ ಮುಂದಿನ ಸಂಚಿಕಿಗೆ ಬಿತ್ತು. ಛ್ಹೊಲೊ ಅನಸ್ತು…
ಪ್ರಿಯ ವಿಟ್ಠಲ, ಬರಹ ನಿಮಗೆ ಕುತೂಹಲ ಹುಟ್ಟಿಸುತ್ತಿರುವದನ್ನು ಕೇಳಿ ಖುಷಿಯಾಯ್ತು! ಧನ್ಯವಾದಗಳು!
ಈ ಕಂತಿ ನಲ್ಲಿ ಧಾರಾವಾಹಿಯ ಮುಖ್ಯ ಅಂಶ-ಉದ್ಯೋಗ ಮಾತ್ಸರ್ಯ -ಸುಧೀರ ನ ಅಸ್ತಿತ್ವ ಸ್ತಿತ್ಯಂತರದ ಭಯದ ಛಾಯೆ ಚೆನ್ನಾಗಿ ಮೂಡಿಬಂದಿದೆ ." ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು." ಮತ್ತು "ಎಂದೂ ಹಾಕಿಕೊಂಡು ರೂಢಿಯಿರದ ಸೂಟು ಎಲ್ಲರಿಗೂ ಕಸಿವಿಸಿ ಉಂಟುಮಾಡಿತ್ತು" ಎಂಬ ನಿಮ್ಮ ನುಡಿಗಳು – ವಿಡಂಬನೆ ಚೆನ್ನಾಗಿದೆ.
ಪ್ರಿಯ ಶ್ರೀಧರ ಗುರುಗಳೆ, ಬರಹ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ನಿಮ್ಮ ಪ್ರೋತ್ಸಾಹಕ್ಕೆ ಸದಾ ಋಣಿ!