ಬಸವಣ್ಣನಿಂದ ಭಗೀರಥನವರೆಗೆ: ಕೆ. ಆರ್. ಹರಿಪ್ರಸಾದ್

ಈ ಶೀರ್ಷಿಕೆ ಓದಿ ಇದೇನಿದು ವಿಚಿತ್ರವಾಗಿದೆ? ಅಂತ ನಿಮಗೆ ಅನ್ನಿಸಿದರೆ, ನಿಮ್ಮ ಅನಿಸಿಕೆ ಸರಿಯಾಗೇ ಇದೆ. ಒಬ್ಬ ಚಾರಿತ್ರಿಕ ಮನುಷ್ಯ, ಮತ್ತೊಬ್ಬ ಪುರಾಣಪುರುಷ. ಇವರಿಗೆ ಹೇಗೆ ಸಂಬಂಧ ಅನ್ನುವ ನಿಮ್ಮ ಪ್ರಶ್ನೆಗೆ ಉತ್ತರವನ್ನು ಒಂದು ಸಾಲಿನಲ್ಲಿ ಹೇಳಲು ಕಷ್ಟ. ಅರ್ಥಾತ್ ನೀವು ಮುಂದೆ ಓದಲೇಬೇಕು.

ನಮ್ಮದೊಂದು ಗೆಳೆಯರ ಬಳಗವಿದೆ. ನಾವು ಅದರ ಮೂಲಕ ನಾಟಕ, ಪ್ರತಿಭಟನೆ, ಜಾಥಾ, ಪ್ರಕಟಣೆ ಇತ್ಯಾದಿ ಏನೇನೋ ಮಾಡುತ್ತಿರುತ್ತೇವೆ. ಈ ಏನೇನೋ ಮಾಡುವ ನಮಗೆ ರಂಗಭೂಮಿ ಪ್ರಧಾನ ಮಾಧ್ಯಮ. ಒಮ್ಮೆ ನಾವು ಬಸವಣ್ಣನ ಕುರಿತ ಒಂದು ನಾಟಕ ಆಡಿದೆವು. ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಮೊದಲ ಪ್ರದರ್ಶನ. ಬೆಂಗಳೂರಿನ ದಿಗ್ಗಜರೆಲ್ಲ ಬಂದಿದ್ದರು. ನಮಗೋ ಇವರೆಲ್ಲ ಬಂದಿದ್ದಾರಲ್ಲ ಎಂಬ ಹೆದರಿಕೆ. ನೋಡಿ ಏನಂತಾರೋ ಎಂಬ ಹಿಂಜರಿಕೆ. Show must go on ಅನ್ನೋ ಮಾತಿದೆಯಲ್ಲ. ನಾಟಕ ಆಡಿದೆವು. ಆಟ ಮುಗಿದ ಮೇಲೆ ದಿಗ್ಗಜರೆಲ್ಲ ಕೊಂಡಾಡಿಬಿಟ್ಟರು. ಅಲ್ಲಿಗೆ ಈ ನಿಂ ಕತೆ ಮುಗಿತಾ ಅಂತ ನೀವು ಕೇಳಬಹುದು. ಆದ್ರೆ ಕತೆ ಶುರುವಾದ್ದೆ ಅಲ್ಲಿಂದ. ಇದೊಂದು ರೀತಿ ಯಯಾತಿ ಕುದುರೆ ಏರಿದ ಕತೆಯಂತೆ. ಈ ನಾಟಕ ಹೀಗಂತೆ, ಹಾಗಂತೆ ಅಂತ ನೋಡಿದವರೆಲ್ಲ ಬಾಯಾಡಿದರು. ಈ ಮಾತುಗಳು ಗಾಳಿಬೀಸುವ ದಿಕ್ಕಿಗೆಲ್ಲ ಹರಡಿ, ಹಬ್ಬಿ ನಾವು ಆ ದಿಕ್ಕಿಗೆಲ್ಲ  ಹೋಗಿ ನಾಟಕ ಮಾಡಬೇಕಾಯಿತು. (ಈ ಆಡೋರು, ಅನ್ನೋರು ಎಷ್ಟು ಉಪಯುಕ್ತ ನೋಡಿ) 

ಬಸವಣ್ಣನ ನೆಪದಲ್ಲಿ ಹೀಗೆ ಊರೂರು ಅಲೆಯುತ್ತ ಈ ನಾಟಕ ಯಾತ್ರೆ ಒಂದು ರೀತಿಲಿ ಕರ್ನಾಟಕ ದರ್ಶನವನ್ನು ಮಾಡಿಸ್ತಾ ಹೋಯಿತು. ಅದರಲ್ಲೂ ಹೆಚ್ಚು ಉತ್ತರಕರ್ನಾಟಕದ ಕಡೆಯೇ ಸುತ್ತಿದೆವು. (ಈ ಜಿಲ್ಲೆಗಳು ಹಿಂದುಳಿದಿರುವುದಕ್ಕೂ, ಬಸವಣ್ಣನ ಪ್ರಭಾವಕ್ಕೂ ಏನಾದರೂ ಸಂಬಂಧವಿರಬಹುದೇ?) ಹೀಗೆ ಹೋದಾಗಲೆಲ್ಲ ಕೆಲವು ದೃಶ್ಯಗಳು ಪರಿಚಿತವಾಗತೊಡಗಿದವು. ದಾವಣಗೆರೆ ತನಕ ಕಾಣುತ್ತಿದ್ದ ಹಸಿರು, ಆಮೇಲೆ ನಿಧಾನವಾಗಿ ಮರೆಯಾಗುತ್ತಿತ್ತು. ಎತ್ತ ನೋಡಿದರೂ ಬರೇ ಕಪ್ಪುನೆಲ. ಎಕರೆಗಟ್ಟಲೆ ಬೀಳಿನಂತೆ ಕಾಣುವ ಜಮೀನುಗಳು. ಅವುಗಳ ಮೇಲೆ ಭರೋ ಎಂದು ಬೀಸುವ ಬಿಸಿಗಾಳಿ ಇಡೀ ಬಯಲಿನಲ್ಲಿ ಹಸಿರಿನ ಕುರುಹನ್ನೇ ತೋರದ ಪ್ರಕೃತಿ. ಮತ್ತೆ ಆಗಾಗ ಗುಳೇ ಹೊರಟ ದೃಶ್ಯಗಳು, ಇವೆಲ್ಲ ಪರಿಚಿತವಾಗತೊಡಗಿದವು. ನಾವು ಹೋದಲ್ಲೆಲ್ಲ ನಾಟಕಕ್ಕೆ ಜನರೇನೋ ಬರುತ್ತಿದ್ದರು. ನಾಟಕ ನೋಡಿ ಸಂತೋಷಪಟ್ಟು ಹೋಗುತ್ತಿದ್ದರು. ನಮಗೂ ಮೊದಮೊದಲು ಖುಷಿಯಾಗುತ್ತಿತ್ತು. ಆದರೆ ಮತ್ತೆ, ಮತ್ತೆ ಹೋದಾಗೆಲ್ಲ ನಾಟಕದ ಖುಷಿಗಿಂತ ಗುಳೇ ಹೋಗುವ ದೃಶ್ಯಗಳು, ರೈತರ ಆತ್ಮಹತ್ಯೆ ವರದಿಗಳು repeat ಆಗಿ ಏನೋ ಒಂದು ರೀತಿ ಕಸಿವಿಸಿ ಆಗುತ್ತಿತ್ತು.  ಇಂಥ ದಿನಗಳಲ್ಲಿ ಜಿಲ್ಲಾಧಿಕಾರಿಯೊಬ್ಬರು ನಮ್ಮನ್ನ ಅವರ ಜಿಲ್ಲೆಗೆ ನಾಟಕಕ್ಕಾಗಿ ಕರೆದಿದ್ದರು. ನಮ್ಮ ನಾಟಕ ಅವರಿಗೂ ಇಷ್ಟ ಆಯಿತು. ಅವರು ಆ ಖುಷಿಯ ಉಮೇದಿನಲ್ಲಿ ಇನ್ನೊಂದು ದಿನ ಉಳಿಸಿಕೊಂಡು ಅವರ ಮನೇಲಿ ಸಂತೋಷಕೂಟ ಇಟ್ಟುಕೊಂಡಿದ್ದರು. ನಾವು ಆ ಕೂಟದಲ್ಲಿ ಪಾಲ್ಗೊಂಡಿದ್ದೆವು. 

ಅಂದು ಈ ವಿಷಯವನ್ನು ಅವರ ಬಳಿ ಪ್ರಸ್ತಾಪಿಸಿದೆವು. ಆ ಜಿಲ್ಲಾಧಿಕಾರಿಗಳ ಮನಸಲ್ಲೂ ಇದೇ ವಿಚಾರ ಇತ್ತು. ಇದರ ಸಲುವಾಗಿ ಅವರು ಆ ಜಿಲ್ಲೆಯಲ್ಲಿ ಸಾಕಷ್ಟು ಓಡಾಡಿದ್ದರು. ಅವರ ಮನಸಲಿ ಹರಡಿಹೋಗಿದ್ದ ವಿಷಯಕ್ಕೆ ಸ್ಪಷ್ಟ ರೂಪ ಬಂತು. ನಮ್ಮ ತಳಮಳಕ್ಕೂ ಒಂದು ಅಭಿವ್ಯಕ್ತಿ ಸಿಕ್ಕಿತು. ಅಂತೂ ತಾಳಮೇಳ ಕೂಡಿಕೊಂಡಿತು. ಅಲ್ಲೊಂದು ಜಲಜಾಥಾ ಮಾಡುವುದೆಂದು ನಿರ್ಧಾರವಾಯಿತು.

ಮುಂದಿನ ಮೂರು ತಿಂಗಳು ಈ ಜಲಜಾಥ ಕುರಿತಾದ ಪೂರ್ವತಯಾರಿ ನಡೆಸಿದೆವು. ಅದೇ ಜಿಲ್ಲೆಯ ಕಲಾವಿದರನ್ನು ಕಲೆ ಹಾಕಿದೆವು. ಒಂದು ರಂಗತರಬೇತಿ ಶಿಬಿರ ಮಾಡಿದೆವು. ಅದರಲ್ಲಿ ಅಭಿನಯ, ಮಾತು ಇತ್ಯಾದಿಗಳಿಗಿಂತ ಮಣ್ಣು-ನೀರು-ನೆರಳು ಕುರಿತೇ ಹೆಚ್ಚು ಮಾತನಾಡುತ್ತಾ ಹೋದೆವು. "ಜನರಿಗೆ ಕಣ್ಣೀರು ಬರುವಂತೆ ನಾಟಕ ಮಾಡುವುದು ನಮಗೆ ಮುಖ್ಯವಲ್ಲ. ಬದಲಾಗಿ ಜನರ ಕಣ್ಣೀರು ತೊಡೆಯಬೇಕು" ಅಂತ ನಮ್ಮ ಜಾಥಾದ ನಿರ್ದೇಶಕ ಪ್ರಸಾದ್‌ ಕುಂದೂರ್‍ಯರು ಪದೇ ಪದೇ ಹೇಳುತ್ತಿದ್ದರು. ಈ ಶಿಬಿರದ ಆರಂಭದಲ್ಲೇ ನಮಗೊಂದು ಅಚ್ಚರಿ ಕಾದಿತ್ತು. ಆ ಜಿಲ್ಲೆಯ ಕಲಾವಿದರಿಗೆ "ನೋಡಿ ನಿಮ್ಮ ಜಿಲ್ಲೆಯಲ್ಲಿ ಇಷ್ಟು ಭೂಮಿ ಇದೆ, ಇದ್ರಲ್ಲಿ ತರಿ ಇಷ್ಟು, ಖುಷ್ಕಿ ಇಷ್ಟು."  ಅಂತೆಲ್ಲ ಅಂಕಿಅಂಶ ಇಟ್ಟು ವಿವರಿಸುತ್ತಿದ್ದಾಗ ಒಬ್ಬ ಎದ್ದು ನಿಂತು "ನೀವು ಬಾಳ ತಪ್ಪು ತಿಳ್ಕೊಂಡೀರಿ ಸರ. ನಂ ಕಡಿಯಾಗ ನೀರು ಛಲೋ ಐತ್ರಿ. ನಂ ಜಮೀನ್ ಪಸಂದೈತ್ರಿ" ಅಂತಂದ. ನಿಧಾನವಾಗಿ ಆತನೊಂದಿಗೆ ಮಾತನಾಡಿದ ಮೇಲೆ ನಮಗೆ ಸ್ಪಷ್ಟವಾಯಿತು. ಆ ಜಿಲ್ಲೆಯಲ್ಲಿ ಒಂದೆರಡು ನದಿಗಳು ಹರಿಯುತ್ತವೆ. ಈತ ಆ ನದಿ ದಂಡೆಯಿಂದ ಬಂದಿದ್ದ. ಹೀಗಾಗಿ ನಾವು ಹೇಳುತ್ತಿದ್ದ ಬರಗಾಲ ಆತನ ಅನುಭವಕ್ಕೆ ಬಂದಿರಲೇ ಇಲ್ಲ. ಇದನ್ನು ಈಗಲೂ ನನಗೆ ನಂಬಲಾಗುವುದೇ ಇಲ್ಲ. ಒಂದು ಕಡೆ ಜಾಗತೀಕರಣ ವಿಶ್ವವನ್ನ ಒಂದು ಮಾಡುತ್ತದೆ. ಎಲ್ಲರಿಗೂ ಎಲ್ಲ ಮಾಹಿತಿಯನ್ನು ಪದಾರ್ಥಗಳನ್ನು ಮುಟ್ಟಿಸುತ್ತದೆ ಎಂದು ಜನ ಬೊಬ್ಬಿರಿಯುತ್ತಾರಲ್ಲ? ಅಂಥವರು ಏನು ಹೇಳಬಹುದು? Lack of information and communication yaar… ಅನ್ನಬಹುದೇ? 

ಇರಲಿ ನಾವು fill ಮಾಡಬೇಕಿರುವುದೇ ಈ Lack of information ಬಗ್ಗೆ. ಅದೂ ಸ್ಥಳೀಯರಿಗೆ. ಇದು ನಮಗಿದ್ದ ದೊಡ್ಡ ಸವಾಲು. ಅದೇ ಜಿಲ್ಲೆಯಲ್ಲಿ ಒಂದಷ್ಟು ದಿನ ಅಲೆದು, ನೀರಿನ ಪಾರಂಪರಿಕ ಜ್ಞಾನದ ರೈತರನ್ನು ಹುಡುಕಿದೆವು. ಆ ರೈತರನ್ನೇ ತಂದು ಕೂಡಿಸಿ ಅವರ ಅನುಭವದ ನುಡಿಗಟ್ಟಲ್ಲೇ ಮಾತಾಡಿಸಿದೆವು. ಹದಿನೈದು ದಿನಗಳ ಕಾಲ ಕಲಾವಿದರಿಗೆಲ್ಲ ತಜ್ಞರ ಜತೆಗೂಡಿಸಿ ಮಾತಾಡಿಸಿದೆವು.  ಇವೆಲ್ಲದರ ಜತೆಗೆ ಒಂದು ನಾಟಕ ಕಲಿಸಿದೆವು. ಜಿಲ್ಲೆಯಾದ್ಯಂತ ಒಂದು ತಿಂಗಳು ಈ ತಂಡಗಳ ಸಂಚಾರ. ಒಂದೊಂದು ದಿಕ್ಕಿಗೆ ಒಂದೊಂದು ತಂಡ. ದಿನಕ್ಕೊಂದು ಊರು. ಅಲ್ಲಿ ಮೊದಲು ಶಾಲೆಗಳಲ್ಲಿ ಮಕ್ಕಳಿಗೆ ಮಳೆನೀರಿನ ಪಾಠ, ಸಿನಿಮಾ. ಅವರಿಗೆ ನೀರಿನ ಹಾಡು ಕಲಿಸುವುದು. ಆಮೇಲೆ ಊರಿನ ರೈತರೊಡನೆ ಮಾತಾಡುವುದು. ಸಂಜೆ ಊರ ಮಧ್ಯದಲ್ಲಿ ನಾಟಕ ಮಾಡುವುದು ಅಂತ ಹೊರಟೆವು.

ಆರಂಭದ ಕೆಲ ಸಮಸ್ಯೆಗಳ ಹೊರತಾಗಿ ನಿಧಾನಕ್ಕೆ ಈ ಜಾಥಾ ಎಲ್ಲರ ಗಮನ ಸೆಳೆಯತೊಡಗಿತು. ಜನ ಸ್ಪಂದಿಸಿದರು. ಈ ಜನಸ್ಪಂದನದಿಂದಾಗಿ ಎಲ್ಲಾ ಕಡೆ ಉತ್ಸಾಹ ಹೆಚ್ಚಾಗತೊಡಗಿತು. (ಸರ್ಕಾರಿ ಯೋಜನೆಯಲ್ಲಿ ಕೆಲಸ ಮಾಡಿ, ಸರ್ಕಾರಿ ಪದಗಳೇ ಬರುತ್ತಿವೆ ಅಂತ ಓದುಗರು ಕಿರಿಕಿರಿ ಮಾಡಿಕೊಳ್ಳಬಾರದು. ಕೇವಲ ಅರ್ಥ ಮಾಡಿಕೊಳ್ಳಬೇಕು.) ಕೆಲವೆಡೆ ರೈತರು ನೀವು ಹೇಳೋದು ಛಲೋಐತ್ರಿ. ಆದ್ರ ನಂ ಹೊಲದಾಗಿನ ಸಮಸ್ಯ ಬ್ಯಾರೆ ಐತ್ರಿ" ಅನ್ನುತ್ತಿದ್ದರು. ನಾವು ನಡೀರಿ ಅಲ್ಲಿಗೆ ಹೋಗೋಣ" ಅಂದು ಅವರ ಜಾಗಗಳಿಗೆ ಹೋಗುತ್ತಿದ್ದೆವು. ಹೊಲಗದ್ದೆಗಳಲ್ಲೇ ಕೂತು ಪರಿಹಾರ ಹುಡುಕುತ್ತಿದ್ದೆವು. ಕೆಲವು ಕಡೆ ನಮ್ಮ ಸಲಹೆಗಳು ಅವರ ಹೊಲ ಗದ್ದೆಗಳಿಗೆ ಹೊಂದುತ್ತಾ ಇರಲಿಲ್ಲ. ಅಂಥಾ ಕಡೆ ಜಿಲ್ಲೆಯ ಪಾರಂಪರಿಕ ರೈತರು ತಮ್ಮ ವಿಚಾರ ಮುಂದಿಡುತ್ತಿದ್ದರು. ಆಗ ಅಲ್ಲಿನ ರೈತರಿಗೆ ಹೊಸದೊಂದು ಸಾಧ್ಯತೆ ಸಿಗುತ್ತಿತ್ತು. ಹೀಗೆ ನೂರೈವತ್ತು ಹಳ್ಳಿಗಳನ್ನು ನಾವು ಸುತ್ತಾಡಿ ಬಂದೆವು. ಆರಂಭದಲ್ಲಿ ನಾವು ಏನೋ ಹೇಳುತ್ತಿದ್ದೇವೆ ಅಂತ ಹೊರಟರೂ ಈ ಪಯಣದಲ್ಲಿ ಹೇಳುವುದರ ಜತೆಗೆ ಕಲಿತದ್ದೇ ಅಪಾರ.

ಇದೇನು ಬಸವಣ್ಣ-ಭಗೀರಥ ಅಂತ ನಂಬಿಸಿ ಈಗೊಂದು ಸರ್ಕಾರಿ ಜಾಥಾ ಕತೆ ಹೊಡಿತಿದಾನೆ ಇವ ಅಂತ ನಿಮಗೆ ಕೋಪ ಬಂದಿದೆ ಅಲ್ವ? ಮನುಷ್ಯರಿಗೆ ಕೋಪ ಬರಿಸೋದ್ರಿಂದ ಏನೂ ಪ್ರಯೋಜನ ಆಗಲ್ಲ ಅಂತ ನನ್ನ ಅನುಭವ ಹೇಳುತ್ತೆ. ಏಕೆಂದರೆ ಕೋಪ ಪ್ರತಿಕೋಪಕ್ಕೆ ಕಾರಣವಾಗುತ್ತದೆ. ಜತೆಗೆ ಕೋಪ ಉಂಟುಮಾಡುವ ಮಾತುಗಳು-ಅದುಮಿಟ್ಟಿದ್ದ ಹಳೇ ಜಗಳ- ಎಲ್ಲವನ್ನು ಎತ್ತಿ ಆಡಿ ಮನಸ್ಸನ್ನು ಮುರಿಯುವುದೇ ಹೆಚ್ಚು. ಆದರೆ ನಾಚಿಕೆ ಹಾಗಲ್ಲ. ನಾಚಿಕೆಯ ಕಾರಣಕ್ಕಾದರೂ ನಾವು ಆಡಲೇಬೇಕಾದ ಅಥವಾ ಆಡಲಾಗದ ಮಾತುಗಳು ನಮ್ಮೊಳಗೇ ಉಳಿದು, ಮತ್ತೆ ಮತ್ತೆ ನಾಚಿಕೆಗೊಳಗಾಗುತ್ತಲೇ ತಣ್ಣಗೆ ಯೋಚಿಸುವಂತೆ ಮಾಡುತ್ತವೆ. ಹೀಗಾಗಿ ಕೋಪಕ್ಕಿಂತ ನಾಚಿಕೆ ಹೆಚ್ಚು ಉಪಯುಕ್ತ.

ಹಾ! ಅದೇ ಆ ನೂರೈವತ್ತು ಹಳ್ಳಿಗಳ ಪೈಕಿ ಒಂದು ಹಳ್ಳಿಯಲ್ಲಿ ನಾವು ಬೀದಿನಾಟಕ ಮಾಡುತ್ತಿದ್ದೆವು. ಅಲ್ಲಿ ನಾಟಕ ಮುಗಿದಾಗ ದೂರ ಕೂತಿದ್ದ ಮುದುಕರ ಗುಂಪೊಂದು ದುಃಖದ ಹಾವಭಾವ ಪ್ರದರ್ಶಿಸುತ್ತಿತ್ತು. ನನಗೆ ಒಂದು ಕ್ಷಣ  ಏನೂ ತೋಚಲಿಲ್ಲ. ನಮ್ಮ ಗೆಳೆಯನೊಬ್ಬ ವಿಚಾರಿಸಿಕೊಂಡು ಬಂದು ಆ ಅಜ್ಜರು ನಿಮ್ಮ ಕೂಡ ನಾಟಕ ಮಾತಾಡಬೇಕಂತರಿ. ನಾಳ ಅವ್ರ ಮನಿಗ ಹೋಗಬೇಕಂತ್ರಿ ಅಂದ. ಆ ರಾತ್ರಿ ನನಗೆ ನಿದ್ದೆಯೇ ಹತ್ತಲಿಲ್ಲ. ನಾಟಕದ ಕುರಿತು ಏನಾದರೂ ಇವರ ತಕರಾರು ಇರಬಹುದೆ? ಅಥವಾ ನೀರ ಸಂರಕ್ಷಣೆಯ ಹೊಸ ವಿಧಾನಗಳ ಬಗ್ಗೆ ಇವರಿಗೆ ಅನುಮಾನವೆ? ಇತ್ಯಾದಿ ಪ್ರಶ್ನೆಗಳು ತಲೆಯೊಳಗೆ ತುಂಬಿಕೊಂಡವು. ಈ ಪ್ರಶ್ನೆಗಳಿಗಿಂತ ಅವರ ಹಾವ ಭಾವವೇ ನನಗೆ ಮತ್ತೆ ಮತ್ತೆ ಕಣ್ತುಂಬಿ ಬರುತ್ತಿತ್ತು. ಯಾವಾಗಲೋ ನಿದ್ದೆ ಬಂತು. 

ಬೆಳಿಗ್ಗೆ ಆ ಅಜ್ಜನ ಮನೆಗೆ ಹೋದೆವು. ಉಭಯಕುಶಲೋಪರಿ ಮಾತುಗಳೆಲ್ಲ ಮುಗಿಯಿತು. ಟೀ ಕುಡಿದೂ ಆಯ್ತು. ಆ ಅಜ್ಜ "ನೀವು ರಾತ್ರಿ ಆಡಿದ ನಾಟಕ ಭಾಳ ಛಲೊ ಇತ್ರಿ. ಅದರೊಳಗ್ ನೀವು ತೋರಿಸಿದ ಬವಣೆ ಈಗಿನವರಿಗೆ ತಿಳಿದಿಲ್ ಬಿಡ್ರಿ. ನಿಮ್ಮ ನಾಟಕ ನೋಡ್ತ ನೋಡ್ತ ನಮ್ಮ ಹಳೆ ಕಷ್ಟಗಳು ನೆನಪಾತ್ರಿ. ರಾತ್ರಿ ಕನಸಾಗೂ ನಿಮ್ಮ ನಾಟಕ ನೋಡಿದೇರಿ" ಅಂದರು. ನನಗೆ ಸಮಾಧಾನವಾದರೂ ಅವರ ಮನಸಲಿ ಹೇಳಬೇಕಾದ್ದು ಬೇರೇನೋ ಇದೆ ಅನ್ನಿಸತೊಡಗಿತು. "ನಿಮ್ಮ ಆ ದಿನಗಳ ಬಗ್ಗೆ ಸ್ವಲ್ಪ ಹೇಳಿ" ಅಂದೆ. ಹಾಗೆಂದೊಡನೆ ಚಣಕಾಲ ನನ್ನನ್ನೇ ದಿಟ್ಟಿಸಿ ನೋಡಿದರು. ಅವರು ಕೂತಿದ್ದ ಜಾಗದಿಂದ ಎದ್ದು ಬಂದು ನನ್ನ ಕೈಹಿಡಿದುಕೊಂಡರು. ನನಗೆ  ಹೇಗೇಗೋ ಆಯಿತು. ಇದ್ದಕ್ಕಿದ್ದಂತೆ ಅವರ ಕಣ್ಣಲ್ಲಿ ನೀರು ಒಸರತೊಡಗಿತು. ಗಂಟಲು ನರಗಳೆಲ್ಲ ಒಂದೊಂದಾಗಿ ನಾಮುಂದು ತಾಮುಂದು ಎಂದು ಕಾಣಿಸಿಕೊಳ್ಳತೊಡಗಿದವು." ಈ ನೀರು ಅಂಬೊದೈತಲ್ರಿ, ಇದರ ಸಲುವಾಗಿ ನಾನು ಎಂತೆಂಥ ಅವಮಾನಗಳನ್ನ ಉಂಡೇನಿ ಗೊತ್ತೇನ್ರಿ ನಿಮಗ’ ಅಂದರು.  ಭಾರವಾದ ದನಿಯಲ್ಲಿ ತಮ್ಮ ಕತೆ ಆರಂಭಿಸಿದರು. 

"ನಮ್ಮ ಊರಾಗ ಒಂದು ಬಾವಿ ಐತ್ರಿ. ಅದಾ ನಮಗೆಲ್ಲ ನೀರಿಗೆ ಆಧಾರ. ಅದರ ಅದರಾಗ ಬರೋಬ್ಬರಿ ಮಳೆಗಾಲದ ತನಕ ನೀರು ಇರುತ್ರಿ. ಅದೂ ಮೂರೋ ನಾಕೋ ಫೂಟು. ನೂರಾಐವತ್ತು ಮನೆಗಳಿಗೆ ಈ ನೀರು ಯಾತತಕ್ಕೂ ಅಲ್ರಿ. ದಿನ ಬಾವಿ ಮುಂದೆ ವಾನರಸೈನ್ಯ ರೀತಿ ಜನ ನಿಂತಿರುತ್ತಿದ್ರಿ. ಆದ್ರ ಆ ನೀರು ಎಲ್ರಿಗೂ ಸಾಕಾಗ್ತಿರಲಿಲ್ಲರೀ" ಎಂದು ನಿಲ್ಲಿಸಿದರು. ಹೌದಲ್ಲ ನೂರೈವತ್ತು ಮನೆಗೆಲ್ಲ ಬಾವಿಯ ಮೂರ್‍ನಾಲ್ಕು ಅಡಿ ನೀರು ಎಷ್ಟು ಸಾಕಾದೀತು? ಮನೆಗೊಂದು ತಂಬಿಗೆ ಬಂದೀತು. "ಮತ್ತೆ ನೀವೇನು ಮಾಡಿದ್ರಿ" ಅಂದೆ. "ಮಾಡೋದೇನು, ಮುಂಜಾನೆ ನಾನು ಚಕ್ಕಡಿ ಹೊಡ್ಕಂಡು ಇಲ್ಲಿಂದ ಹೋಗ್ತಿದ್ದೇರಿ. ಅಲ್ಲೊಂದು ಊರೈತ್ರಿ. ಆ ಊರಾಗೊಂದು ತಂಪಾದ ಬಾವಿ ಐತ್ರಿ.  ಆ ಊರಿಗೆಲ್ಲ ನೀರಾಗಿ ನಮಗೂ ನೀರು ಸಿಕ್ತಿತ್ರಿ" ಅಂದರು.

"ಅಂದ್ರ ನೀವು ದಿನಾ ಆ ಊರಿಗೆ ಹೋಗ್ತಿದ್ರ"

"ಇಲ್ಲ ವಾರಕ್ಕ ಒಂದಾವರ್ತಿ"

"ಅಂದ್ರೆ ಅಲ್ಲಿ ನಿಮಗೆ ಯಥೇಚ್ಚವಾಗಿ ನೀರು ಸಿಗತಿತ್ತು ಅನ್ನಿ. "

"ನೀರೇನೊ ಸಿಗ್ತಿತ್ತು ಆದ್ರ…"

"ಆದ್ರೆ…."

"ಹರಿಯೋ ನೀರಿಗೆ ದೊಣ್ಣೆನಾಯ್ಕನ ಅಪ್ಪಣೆ ಅಂತ ಗಾದೆ ಕೇಳಿರೋ ಇಲ್ಲೋ. ಹಂಗ ನಿಂತ ನೀರಿಗೂ ದೊಣ್ಣೆನಾಯ್ಕರು ಇದ್ರೂರೀ."

ಅಂದು ಅಳಲಾರಂಭಿಸಿದರು. ನಮಗೆಲ್ಲ ಒಂದು ಕ್ಷಣ ಗಾಬರಿಯಾಯಿತು. ಊರೂರಿಗೆ ಬಂದು ನಾಟಕ ಮಾಡಿ ನೀರು ಅಮೂಲ್ಯ ನೀವೇ ಶೇಖರಿಸಿಟ್ಟುಕೊಳ್ಳಿ ಅಂತ ಜಾಥಾ ಮಾಡೋಕೆ ಬಂದ ನಮಗೆ ಈ ಅನುಭವ ಹೊಸದಾಗಿತ್ತು. ಮತ್ತು ನೀರಿನ ಕತೆಯ ಹಿಂದಿರುವ ನಮ್ಮ ಸಮಾಜದ ಕರಾಳ ಮುಖಗಳನ್ನು ಬಿಚ್ಚಿಡುತ್ತಿತ್ತು. ನಮ್ಮ ಜತೆಗಾರನೊಬ್ಬ ’ಅಜ್ಜಾರೆ ಅಳ್ಬೇಡ್ರಿ, ಏನಾಯ್ತು ಹೇಳ್ರಿ’ ಅಂದ. ಆ ಅಜ್ಜಾನ ದುಃಖ ಇನ್ನೂ ಹೆಚ್ಚಾಯಿತೇ ಹೊರತು ನಿಲ್ಲಲಿಲ್ಲ. ನಾವು ದಿಕ್ಕು ತೋಚದೆ ಸುಮ್ಮನೆ ಕೂತೆವು. ಎಷ್ಟೋ ಕಾಲದ ದುಃಖವೆಲ್ಲ ಉಮ್ಮಳಿಸಿಕೊಂಡು ಬರುತ್ತಲೇ ಇತ್ತು. ಹೆಚ್ಚು ಕಮ್ಮಿ ಅಧಗಂಟೆ ಕಾಲ ಹೀಗೆ ನಡೆಯಿತು. ಮಧ್ಯೆ ಮಧ್ಯೆ ಮಾತು ಈಚೆಗೆ ಬರಲು ಹವಣಿಸುತ್ತಿತ್ತು. ಆದರೆ, ಅವರ ಒತ್ತಿಟ್ಟ ದುಃಖ ಆ ಮಾತನ್ನ ಸಾರಿಸಿಬಿಡುತ್ತಿತ್ತು. ನಮಗೋ ಮುಂದಿನ ಊರಿಗೆ ಹೋಗಲು ಸಮಯ ಮೀರುತ್ತಿತ್ತು. ಆದರೂ ಇಲ್ಲಿ ಇರಲಾಗದೆ, ಏಳಲಾಗದೆ ಕೂತೇ ಇದ್ದೆವು. ಕೊನೆಗೆ ದುಃಖವೆಲ್ಲ ಒಂದು ತಹಬದಿಗೆ ತಂದುಕೊಂಡ ಆ ಅಜ್ಜ, "ನೋಡಿ ನೀವೆಲ್ಲ ಯಾವ ಜಾತಿಯವರೋ ಗೊತ್ತಿಲ್ಲ. ನಾವು ಮಾತ್ರ ಕಮ್ಮಿ ಜಾತಿ. ಬಾವ್ಯಾಗ ನೀರು ಇದ್ರೂ ಬಾಳಾ ಮಾತುಗಳನ್ನ ಕೇಳಬೇಕಿತ್ರಿ. ಹಿಂಗಾಗಿ ಆಗ ಕೇಳಿದ ಆ ಅವಮಾನದ ಮಾತುಗಳೆಲ್ಲ ನಿಂ ನಾಟಕ ನೋಡ್ದಾಗ ಮನಸಿಗೆ ಬಂತೂರಿ. ನಂ ಆ ಕಷ್ಟ ಈ ಕಾಲ್ದ ಹುಡುಗರಿಗೆ ಗೊತ್ತಿಲ್ಲ. ಆದ್ರ ನಿಂ ನಾಟ್ಕ ನೋಡ್ದಾಗಿಂದ ಇದ್ನ ನಿಂ ಕಡೆ ಹೇಳ್ಕೊಬೇಕು ಅನ್ನಿಸ್ತುರಿ" ಅಂದರು. ಜಾತಿ ಅವಮಾನಗಳನ್ನುಂಡಿರುವ ಆ ಹಿರಿಯ ಜೀವಕ್ಕೆ ಕಿರಿಯರಾದ ನಾವು ಏನೆಂದು ಸಮಾಧಾನ ಮಾಡುವುದು? ನಮ್ಮ ನಾಟಕವೇ ಅವರ ಸಂಕಟ ಹೊರಹಾಕಲು ಅವಕಾಶ ಕಲ್ಪಿಸಿತ್ತು. ಆ ಅಜ್ಜ ಮತ್ತೊಮ್ಮೆ ನಮಗೆಲ್ಲ ಟೀ ಕೊಟ್ಟು ಕಳುಹಿಸಿದರು. 

ನಾನು ಬಸವಣ್ಣ-ಭಗೀರಥ ಅಂತ ಹೇಳಿದ್ದು ಈ ಹಿನ್ನೆಲೆಯಲ್ಲಿ. ಆ ಅಜ್ಜನಿಗೆ ಸುಮಾರು ಎಪ್ಪತ್ತು ವರ್ಷ. ಆತ ಹೇಳಿದ್ದು ಸರಿಸುಮಾರು ಐವತ್ತು ವರ್ಷಗಳ ಹಿಂದಿನ ತನ್ನ ಕತೆ. ಆಗಿನ್ನು ಅವಿಭಜಿತ ಬಿಜಾಪುರ ಜಿಲ್ಲೆ ಅದು. ನಮಗೆಲ್ಲ ಇಂದಿಗೂ ಕಾಡುವ ಬಸವಣ್ಣನ ನೆಲವೂ ಅದೇ ಅಲ್ಲವೆ?

ಐವತ್ತು ವರ್ಷಗಳ ನಂತರ ಜಾತಿ ಕಟ್ಟಳೆ ಏನಾಗಿದೆ ಅಂತ ನೋಡಿಕೊಂಡರೆ ಶಾಭಾವವೇನು ಗೋಚರವಾಗುತ್ತಿಲ್ಲ. ಜಾತಿಗಳ ಆಚರಣೆ ಆ ಕಾಲದಲ್ಲಿದ್ದ visibility ಕಳಕೊಂಡಿರಬಹುದು ಅನ್ನಿಸುತ್ತದೆ. ಈ visibility ಹೋಗಲು ಕಾನೂನು ಕಟ್ಟಳೆ ಒಂದಷ್ಟು ನೆರವಾಗಿದೆಯೇ ಹೊರತು ಮನಸ್ಸಿನಿಂದ ಆ ’ಭಾವನೆ’ ಹೋಗಿದೆಯೆ ಎಂಬ ಪ್ರಶ್ನೆ ಉಳಿದೇ ಬಿಡುತ್ತದೆ. ನಗರಗಳಲ್ಲಿ ಹೀಗೆ ಉಸಿರುಕಟ್ಟಿಸುವ ಪ್ರಕರಣ ಇಲ್ಲ ಎಂಬ ಕಾರಣಕ್ಕೆ ಜನ ನಗರಕ್ಕೆ ಧಾವಿಸುತ್ತಾರೆ ಎನ್ನುತ್ತದೆ ಅಂಕಿ-ಅಂಶಗಳು. ಬಾಡಿಗೆಗೆ ಮನೆ ಹುಡುಕುವಾಗ ಎದುರಾಗುವ ವೆಜ್ಜಾ? ನಾನ್ ವೆಜ್ಜಾ? ಅಥವಾ ನೀವು ತಿಂದುಣ್ಣುವಿರಾ ಎಂಬ ಪ್ರಶ್ನೆಯ ಹಿಂದಿರುವ ಮನಸ್ಸು ಎಂಥದ್ದು? ಅಥವಾ ಸಭೆ ಸಮಾರಂಭಗಳಲ್ಲಿ ಅಪರಿಚಿತರು ಪರಿಚಿತರಾಗಿ ಉಭಯಕುಶಲೋಪರಿ ನಂತರದ ಬರುವ ಪ್ರಶ್ನೆಗಳ ಸುಳಿಗಳನ್ನ ನೋಡಿ. ನಿಮ್ಮ ನೇಟಿವ್? ಮತ್ತೆ ನಿಮ್ಮ ಸರ್‌ನೇಮ್? ಮತ್ತೆ ನಿಮ್ಮ ಕಮ್ಯುನಿಟಿ? ಇಂಗ್ಲಿಷ್‌ನ ಮರೆಯಲ್ಲಿ ಜಾತಿ ಬಗೆಗಿನ ಅದೇ ಹಲ್ಕಾ ಆಸಕ್ತಿ? ಇಂಡಿಯಾದಲ್ಲಿ ಇದನ್ನೆಲ್ಲ ಸಹಜ ಅಂತಾನೆ ನಾವು ಭಾವಿಸಬೇಕೆ?

ಈಚೆಗೆ ಖ್ಯಾತ ಲೇಖಕರೊಬ್ಬರು ಬಾವಿಗಳು ಅಸ್ಪೃಶ್ಯತೆಯ ಸಂಕೇತ, ನಲ್ಲಿಗಳು ಬಂದ ಮೇಲೆ ಅಸ್ಪೃಶ್ಯತೆ ಹೋಗುತ್ತಿದೆ ಎಂಬರ್ಥದಲ್ಲಿ ಬರೆದಿದ್ದರು. ನಾನು ವಾಸ ಮಾಡುವ ನಗರದಲ್ಲಿ ನಲ್ಲಿ ಅಸ್ಪೃಶ್ಯತೆಯ ಬಗೆಗೆ ನನ್ನದೂ ಒಂದು ಅನುಭವ ಹೇಳಬೇಕಾಗಿದೆ. 

ನಮ್ಮನೆಯ ನಲ್ಲಿಯಲ್ಲಿ ಕುಡಿವ ನೀರು ಚೆನ್ನಾಗಿಲ್ಲ. ನಮ್ಮ ಮನೆಯಿಂದ ಕೊಂಚ ದೂರದಲ್ಲಿ ಕುಡಿವ ನೀರಿನ ನಲ್ಲಿ ಇದೆ. ನಾನು ಕ್ಯಾನ್ ಹಿಡಿದುಕೊಂಡು ಅಲ್ಲಿಗೆ ಹೋಗುತ್ತೇನೆ. ಅಲ್ಲಿ ಆಗಲೇ ಕನಿಷ್ಟ ಹತ್ತು-ಇಪ್ಪತ್ತು ಜನ ಅಲ್ಲಿರುತ್ತಾರೆ. ಇವರೆಲ್ಲ ನೀರು ಹಿಡಿವಾಗ ಮಾಡುವ ಒಂದು ಆಚರಣೆ ಎದ್ದು ಕಾಣುತ್ತದೆ. ಅದೇನೆಂದರೆ ಇವರ ಪೈಕಿ ಬಹುಪಾಲು ಜನ ತಮ್ಮ ಕೊಡವನ್ನು ನೀರು ಹಿಡಿಯುವ ಮುಂಚೆ ಚೆನ್ನಾಗಿ ತೊಳೆಯುತ್ತಾರೆ. ಅದರಲ್ಲೇನು ವಿಶೇಷ ಅಂತ ನೀವು ಕೇಳಬಹುದು. ಪ್ರತಿಯೊಬ್ಬರು ತೊಳೆಯೋಕೆ ಕನಿಷ್ಟ ಎರಡು ಚೆಂಬು ನೀರು ಚೆಲ್ತಾರೆ. ಇದು ನೀರು ಪೋಲಾಗುವ ರೀತಿ. ಸ್ವಚ್ಚತೆಗಾಗಿ ಹೀಗೆ ಮಾಡೋದು ತಪ್ಪೇ? ನಾನು ಮೊದಮೊದಲು ಸ್ವಚ್ಚತೆಯ ವಿಚಾರ ಅಂತ ಸುಮ್ಮನಿದ್ದೆ. ಕ್ರಮೇಣ ನನಗೆ ಇದು ಸ್ವಚ್ಚತೆ ವಿಷಯ ಅಲ್ಲ ಅಂತ ಮನದಟ್ಟಾಯಿತು. ಇದನ್ನು ವಿವರಿಸುವುದಾದರೆ, ಎರಡು-ಮೂರು ಕೊಡ ತರುವ ಜನರು ಮೊದಲ ಕೊಡ ಮಾತ್ರ ತೊಳೆದು ಬಳಿದು ನೀರು ಚೆಲ್ಲಿ ಇಡುತ್ತಾರೆ. ಎರಡು ಮತ್ತು ಮೂರನೆ ಕೊಡಕ್ಕೆ ಆ ಭಾಗ್ಯವೇ ಇರುವುದಿಲ್ಲ. ಹೀಗಾಗಿ ಇದು ಸ್ವಚ್ಛತೆ ವಿಷಯ ಅಲ್ಲ! ಈ ತಾರತಮ್ಯದ ಹಿಂದಿರುವ ಗುಟ್ಟೇನು? ಕೆಲವರು ಕೊಡ ಇಡುವ ಜಾಗಕ್ಕೆ ಪ್ರೋಕ್ಷಣೆ ರೀತಿ ನೀರು ಹಾಕ್ತಾರೆ. ಇನ್ನು ಕೆಲವರು ದಬದಬ ಸುರಿಯುತ್ತಾರೆ. ಇನ್ನು ಕೆಲವರು ನಲ್ಲಿಗೇ ಅಭಿಷೇಕ ಮಾಡುತ್ತಾರೆ. ಹಾಗಾದರೆ ಇವರೆಲ್ಲ ಜಾತಿಯ ಕಟ್ಟು ನಿಟ್ಟಿನ ಪಾಲಕರಾ? ಅಥವ ಸಿಟಿಯ ಸ್ಪರ್ಶದಿಂದ ರೂಪಾಂತರಗೊಳ್ಳುತ್ತಿರುವ ಜಾತಿಯ ಕಟ್ಟು ಪಾಡು ಪೋಷಿಸುತ್ತಿರುವವರಾ? ಸಿಟಿಯ ಕಷ್ಟವೇನು ಎಂದರೆ ಇಲ್ಲಿ ಎಲ್ಲರೂ ಪ್ಯಾಂಟು, ಷರಟು, ಬರ್ಮುಡ ಧರಿಸಿ ಬಂದಿರುತ್ತಾರೆ. ಹಳ್ಳಿಗಳ ರೀತಿಯ ಜಾತಿ ಚಹರೆಗಳು ಇಲ್ಲಿ ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೆ ಅಂತರಾಳದೊಳಗಿರುವ ಜಾತಿ ಬೇರುಗಳು ಮಾತ್ರ ಹೊಸ ಹೊಸ ರೂಪದಲ್ಲಿ ಟಿಸಿಲೊಡೆಯುತ್ತಲೇ ಇರುತ್ತವೆ. 

ಯಾರಾದರೂ ಸಮಾಜಶಾಸ್ತ್ರಜ್ಞರು ಒಂದು ತಿಂಗಳು, ಈ ನಲ್ಲಿಗಳ ಬಳಿ ನಡೆವ ಈ ಆಚರಣೆ ಅಭ್ಯಾಸ ಮಾಡಿದರೆ ಜಾತಿಗಣತಿಯನ್ನೇ ಮಾಡಲು ನಲ್ಲಿಗಳು ಒಳ್ಳೆ ತಾಣ ಎನಿಸುತ್ತದೆ. ಯಾಕೆಂದರೆ ಸ್ವಚ್ಚಗೊಳಿಸುವ ರೀತಿಯಲ್ಲೇ ಅವರ ಕಮ್ಯುನಿಟಿ ಯಾವುದಿರಬಹುದು ಎಂಬ ಒಂದು ಅಂದಾಜು ಸಿಕ್ಕೇ ಸಿಗುತ್ತದೆ. ಹಳ್ಳಿಗಳಲ್ಲಿ ಬಾವಿ ಅಸ್ಪೃಶ್ಯತೆಯ ಒಂದು ಚಿತ್ರಣವಾದರೆ, ನಗರದ ನಲ್ಲಿಗಳು ಆಧುನಿಕ ಜಾತಿ ವರಸೆಯ ತಾಣಗಳು ಎಂದೇಕೆ ಕರೆಯಬಾರದು? 

ಎಲೆಲವೋ ಭಗೀರಥ, ಎಲ್ಲಿಹನಯ್ಯ ಬಸವಣ್ಣ??

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Krishna
10 years ago

ತುಂಬಾ ಚೆನ್ನಾಗಿ ಮೂಡಿಬಂದಿದೆ… 

ಬಸವಣ್ಣನ ಭಗೀರಥ ಪ್ರಯತ್ನ!

Shankar
10 years ago

ಬರಿಗೊಡಗಳಿಗೆ ಸಮಾಧಾನ ಹೇಳುತ್ತಿದೆ ನೀರಿಲ್ಲದ ನಲ್ಲಿ…ಮಟಮಟ ಮದ್ಯಾಹ್ನದಲ್ಲಿ… 😉

mohan handrangi
mohan handrangi
10 years ago
Reply to  Shankar

sir….. prasthuta vagide…. channagi mudi bandidhe lekhana

ಸಿದ್ದುಪ್ರಸನ್ನ ಬಿ. ಎನ್
ಸಿದ್ದುಪ್ರಸನ್ನ ಬಿ. ಎನ್
10 years ago

ಅರಿವಿನ ಪಂಜು ಹಿಡಿದ ನಿಮ್ಮ ಪಯಣ ನಿರಂತರವಾಗಿರಲಿ….

Santhoshkumar LM
10 years ago

ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀರ ಸರ್…

Mamatha Nelamane
Mamatha Nelamane
10 years ago

hari, barabaruttha anubhavagala abhivyakti utftmavagutthide. nimma thirugatada anubhavgala mooteyinda matthastu gttikalugalu bega suridu, horabarali endu ashisuve

6
0
Would love your thoughts, please comment.x
()
x