ಬಲ್ಲಾಳರ ಬಂಡಾಯ: ಪ್ರೇಮಾ ಟಿ ಎಮ್ ಆರ್

prema

ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ 'ನನ್ನ ಪುಟ'ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ 'ಬಂಡಾಯ'.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಕರ್ನಾಟಕದ ಇತ್ತೀಚಿನ ಓದುಗರಿಗೆ ಬರಹಗಾರರಿಗೆ ತೀರಾ ಪರಿಚಿತರೇನಲ್ಲ. ಕಾರಣ ತಮ್ಮ ಬದುಕಿನ ಅರ್ಧ ಶತಮಾನಗಳಷ್ಟು ಕಾಲವನ್ನು ಅವರು ವಾಣಿಜ್ಯ ನಗರ ಮುಂಬೈನಲ್ಲಿಯೇ ಕಳೆದವರು. ಕನ್ನಡದ ಪ್ರಗತಿಪರ ನವ್ಯಬಂಡಾಯ ಸಾಹಿತ್ಯಗಳ ಪ್ರಭಾವದ ಸುತ್ತಿಗೆ ಸಿಕ್ಕಿಕೊಂಡೇ ಬೆಳೆದ ಬಲ್ಲಾಳರನ್ನು ಕನ್ನಡದ ಕೆಲವೇ ವೈಚಾರಿಕಪರ ಕಾದಂಬರಿಕಾರರ  ಸಾಲಿನಲ್ಲಿ ಅವರನ್ನ ತಂದು ನಿಲ್ಲಿಸಿದ್ದು ಅವರ ಬಂಡಾಯ ಕಾದಂಬರಿ. ನಿತ್ಯ ಬದುಕಿನ ನಿರಂತರ ವ್ಯವಸ್ಥೆಯಾದ ಶ್ರಮಿಕ ವರ್ಗ ಹಾಗೂ ಸಾಮ್ರಾಜ್ಯಶಾಹಿಗಳ ನಡುವಿನ ಸಂಘರ್ಷ, ಇದರಿಂದಾಗಿಯೇ ಹುಟ್ಟಿಕೊಂಡ ಕಾರ್ಮಿಕ ಸಂಘಟನೆಗಳು, ಶ್ರಮಿಕರ ಹಕ್ಕುಗಳರಕ್ಷಣೆಗಾಗಿಯೇ ಹುಟ್ಟಿಕೊಂಡ ಟ್ರೇಡ್ ಯೂನಿಯನ್ಗಳು ನಿಜವಾದ ಉದ್ಧೇಶಗಳನ್ನು ಮರೆತು ತಮ್ಮಬಲ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ನಡೆಸುವ ತೆರೆಯ ಮರೆಯ ತಂತ್ರ ಕುತಂತ್ರಗಳು,  ಇಂತ ಸಂಘಟನೆಗಳನ್ನು ಹಿಡಿತದಲ್ಲಿಡಲು ಸಾಮ್ರಾಜ್ಯಶಾಹಿಗಳ ಕಸರತ್ತು , ಇಂತಹ ಧನದೊರೆಗಳನ್ನು ಕಾಯುವದೇ ತಮ್ಮ ಕರ್ತವ್ಯವೆಂದು ಸದಾ ಉಧ್ಯಮಿಗಳ ಪರವಾಗಿ ನಿಂತು ಅವರು ಕೊಡುವ ಜಿನ್ ವ್ವಿಸ್ಕಿಗಳ ಹೊಳೆಯಲ್ಲಿ ಹರಿದುಹೋಗುವ ಪೋಲೀಸ್ ಇಲಾಖೆ ಹಾಗೂ ರಾಜಕೀಯದ ಕರಾಳ ಮುಖಗಳನ್ನು ಬಯಲು ಮಾಡುತ್ತ ನಡೆದ ವಸ್ತುನಿಷ್ಠ ಕ್ರತಿ ಬಂಡಾಯ 
      
ಮುಂಬೈ ಎಂದೊಡನೆ ಅಮಿತಾಬಚ್ಛನ್ ಖಾನ್ ಕುಮಾರ ಖನ್ನಾಗಳು, ಶಾಪಿಂಗ್ ಕಾಂಪ್ಲೆಕ್ಸಗಳು, ಲೋಕಲ್ ಟ್ರೇನುಗಳು, ಜುಹುಬೀಚ್, ಗಗನಚುಂಬಿ ಕಟ್ಟಗಳು, ನೆಲ ಕಾಣದಷ್ಟು ವಾಹನಗಳು, ಕಾಮಾಟಿಪುರದ ಕೆಂಪುದೀಪದ ಕೆಳಗಿನ ಬದುಕಿಗಾಗಿ ಮಾನವೀಯತೆ ಉಳಿದುಕೊಂಡ ಎದೆಯ ಸುಯ್ಯು ಎಂದಷ್ಟೇ ಹರವಿಕೊಳ್ಳುವ ನಮ್ಮ ತಲೆಯೊಳಗೆ ಮುಂಬೈ ಎಂದರೆ ಶ್ರಮಜೀವಿಗಳು, ಅವರ ಕಷ್ಟ ಕೋಟಲೆಗಳು, ಅವರ ನಿತ್ಯದ ಬದುಕುಗಳು, ಅವರು ದುಡಿವ ಯಂತ್ರಗಳೊಳಗೆ ಸಿಕ್ಕು ಕಳೆದು ಹೋಗುವ ಕೈಕಾಲುಗಳು, ಕಂಪನಿಯ ಲಾಕೌಟ್ ಗಳು, ಉರಿಯದೇ ತಣ್ಣಗೆ ಕೂರುವ ಶ್ರಮಿಕರ ಒಲೆಗಳು,  ಸೋರುವ ಸಿಂಬಳದ ಮಗು, ಗೂರಲು ಕೆಮ್ಮಿನ ಮುದುಕರು, ಸದ್ದಿಲ್ಲದೇ ಕೊಲೆಯಾಗಿ ಹೆಣವಾಗಿ ಮಲಗುವ ಕಾರ್ಮಿಕ ಮುಖಂಡರುಗಳು, ಇದೇ ಮುಂಬೈನ ನಿಜವಾದ ಮುಖ ಅನ್ನುವಷ್ಟರ ಮಟ್ಟಿಗೆ ನಮ್ಮನ್ನು ತನ್ನೊಳಗೆ ಸಿಕ್ಕಿಸಿಕೊಳ್ಳುತ್ತದೆ ಬಲ್ಲಾಳರ  ಬಂಡಾಯ. ಕೌಟುಂಬಿಕ ಕಾದಂಬರಿಯಲ್ಲದ ನಾಯಕ ಕಳನಾಯಕರ ನಡುವಿನ ಕದನವಾಗದ ಒಂದು ವ್ಯವಸ್ಥೆಯ ವಿರುದ್ಧದ ವಾಸ್ತವಿಕತೆಯ ಸುತ್ತ ಎಳೆಎಳೆಯಾಗಿಸುತ್ತ ಹರವಿಕೊಂಡ ಕಥಾವಸ್ತು. ತಾನೇ ಸ್ವತಹ ಮದ್ದಿನಂಗಡಿಯ ಕಾರ್ಮಿಕನಾಗಿ ಎಪ್ಪತ್ತು ರೂಪಾಯಿ ಸಂಬಳದಲ್ಲಿ ಎರಡೇ ಕೋಣೆಯ ವಾಸ ಬೆಳಗಿನ ಎಂಟರಿಂದ ರಾತ್ರಿಯ ಎಂಟರವರೆಗಿನ ಕತ್ತೆ  ದುಡಿತದಿಂದಲೇ ಮೇಲೇರಿಬಂದು ಹತ್ತಾರು ಇಂಡಸ್ಟ್ರಿಗಳಗೆ ಮಾಲಕರಾದ ನಾಗೇಶ ಶರ್ಮಾ ಅವರ ಮಗ ಸತೀಶ ಶರ್ಮಾ ತಮ್ಮಲ್ಲಿ ದುಡಿಯುವ ಕಾರ್ಮಿಕರನ್ನು ಹಿಡಿತದಲ್ಲಿಡಲು ಮಾಡುವ ಕಸರತ್ತುಗಳೆಲ್ಲ ಅವರನ್ನು ಕಳನಾಯಕರಲ್ಲದೆಯು ಕಳನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ.  
       
ಡ್ರಾಯಿಂಗ್ ರೂಮಿನ ಮೂಲೆಯಲ್ಲಿರುವ ಸ್ವಂತದ ಬಾರ್, ಒಂದು ಕಪ್ ಚಹಾ ಹೊತ್ತು ಓಡಾಡುತ್ತ ಬರುವ ರಥ, ಹಾಸಿದ ಕಾರ್ಪೆಟ್ಟುಗಳ ಮೇಲೆ ಸದ್ದೇ ಕೇಳಿಸದ ಹೆಜ್ಜೆ, ಕಿಟಕಿಯ ಬೆಳಕನ್ನು ನಿಯಂತ್ರಿಸುವ ಬ್ಲೈಂಡ್ಸ,  ಪ್ರತಿಷ್ಠಿತರ ಸೊತ್ತಾದ ನರಿಮನ್ ಪಾಯಿಂಟ್ , ಬದುಕಲೆಂದೇ ಧಾವಿಸಿ ಬಂದು ಕಾಲುದಾರಿಗಳಲ್ಲಿ ಹೂಡುವ ನೂರಾರು ಅಗ್ಗಿಷ್ಠಿಕೆಗಳು, ಬಡಕಲು ಕೈಗಳಲ್ಲಿ ಕಾಯಿಸುತ್ತಿದ್ದ ರೊಟ್ಟಿಗಳು, ಝೋಪಡಿಯಲ್ಲಿ ಸಾಗುವ ಬದುಕು, ಜೋಪಡಿ ಪಕ್ಕದ ಕಾಲುದಾರಿಯಲ್ಲೇ ಮಲ ಮೂತ್ರವಿಸರ್ಜನೆಗೆ ಕೂಡ್ರುವ ಹೊಟ್ಟೆಯುಬ್ಬರಿಸಿದ ಮಕ್ಕಳು, ಜೋಪಡಿಯಲ್ಲಿ ಚಿಂದಿಯುಟ್ಟು ಅರೆನಗ್ನಳಾಗಿ ಮಲಗಿದ ತಾಯಿಯ ಎದೆಯ ಮೇಲೆ ಮಲಗಿ ಮೊಲೆ ಚೀಪುವ ಮಗು, ಮಗುವಿನ ತಲೆಗೂದಲಮೇಲೆ ಓಡಾಡಿ ಹೇನು ಹುಡುಕುವ ತಾಯ ಕೈ –ಹೀಗೆ ಬೊಟ್ಟು ಮಾಡದೆಯೇ ವ್ಯವಸ್ಥೆಯ ತಾರತಮ್ಯದ ವೈಪರೀತ್ಯಗಳನ್ನು ಓದುಗನಿಗೆ ಮನದಟ್ಟುಮಾಡುವ ಪ್ರೌಢಿಮೆ ಬಲ್ಲಾಳರದು. 
       
ಸ್ನಾನ ಕಾಣದ ಮೈ, ಸಾಬೂನು ಕಾಣದ ಶರ್ಟ, ಹಳೆಸೀರೆ ನಿತ್ಯದ ಬೆವರು ಎಲ್ಲ ಕ್ಯೂ ಹಿಡಿದು ನಿಲ್ಲುವದು ಬದುಕಿಗಾಗಿ ಎನ್ನುತ್ತಲೇ ಓದುಗನೆದೆಗೆ ಹತ್ತಿರವಾಗುವ ಹೆಣ್ಣು   ಯಾಮೀ, ಯಾಮಿನಿ . ಶಾಕುಂತಲ ಮೃಚ್ಛಕಟಿಕ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದವಳನ್ನು ಅವಳು ಅಭಿನಯ ಸಾಮ್ರಾಜ್ಞಿಯೆಂದು ಹೊಗಳಿ ಮೆಚ್ಚಿ ಮದುವೆಯಾದ ಪತಿ.  ಪೋಲಿಯೋ ಪೀಡಿತನಾಗಿ  ಹಾಸಿಗೆಹಿಡಿದ ಮೇಲೆ ದಾಂಪತ್ಯದಾರಂಭದ ಕೆಲದಿನದ ನಗು ಮಾತು ಸುತ್ತಾಟ ಸಿನೇಮಾ ಎಲ್ಲವೂ ಸುಳ್ಳು ಪತಿಯ ಹಾಸಿಗೆಯ ಪಕ್ಕದ ಕ್ರಚ್ ಒಂದೇ ಸತ್ಯ ಅನ್ನಿಸಿತೊಡಗಿದಾಗ ಹೆಂಡ್ ಲೂಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿದ ಹೆಣ್ಣು. ಭೋಸುಡಿ ಎಲ್ಲಿ ಹೋಗಿದ್ದೆ ಇಷ್ಟೊತ್ತು? ಯಾವ ಮಿಂಡನ ಜೊತೆಗೆ ಮಲಗಿದ್ದೆ ಮುಂಡೆ, ಹಲ್ಕಟ್ ರಂಡೆ, ಸೂಳೆಯೆಂದು ಅಪಾಂಗ ಅಸಹಾಯಕ ಪತಿಯಿಂದ ಅನ್ನಿಸಿಕೊಳ್ಳುತ್ತಲೇ  ಇಪ್ಪತ್ತೈದು ಪೈಸೆಯಗಲದ ಕುಂಕುಮ ಹಣೆಗಿಟ್ಟುಕೊಂಡು ನಗುನಗುತ್ತಲೇ ಪತಿಯ ಬೇಕು ಬೇಡಗಳನರಿತು ಪೂರೈಸುವ ಹೆಣ್ಣು ಅನಿರೀಕ್ಷಿತವಾಗಿಯೇ ಕಾರ್ಮಿಕ ಸಂಘಟನೆಯ ಸಂಪರ್ಕಕ್ಕೆ ಬರುತ್ತಾಳೆ.  ಲಾಲ್ ಬಾವುಟಾ ಜಿಂದಾಬಾದ್ ಎಂದಷ್ಡು ಸುಲಭವಲ್ಲ ಸಂಘರ್ಷದ ಹಾದಿ ಎನ್ನುವ ವಿಸ್ಮಯವನ್ನು ಒಳಗಿಟ್ಟುಕೊಂಡೆ ನಾಯಕ ರಾಜೀವನ ಸಾಂಗತ್ಯದಲ್ಲಿ  ಕೋಣ ತೀ ಬಾಯಿ? ರಾಜೀವಭಾಯಿ ಚಿ ಬಾಯಿ. ಕಸಲಿ ಬಾಯೀ? ಠೇವಲೇಲಿ (ಇಟ್ಟುಕೊಂಡವಳು)ಅನ್ನಿಸಿ ಕೊಳ್ಳುತ್ತಲೇ ಎಲ್ಲವನ್ನು ಕೊಡವಿಕೊಂಡು ಅವನ ವ್ಯಕ್ತಿತ್ವದ ಕರ್ತೃತ್ವ ಶಕ್ತಿ, ಪ್ರತಿಭೆ, ಸಾಂಘಿಕ ಸಮಾನತೆಯ ತಿಳುವಳಿಕೆ, ನಾಯಕತ್ವದ ಎಳೆಗಳನ್ನು ಒಂದೊಂದಾಗಿ ತನ್ನೊಳಗೆ ತುಂಬಿಕೊಂಡು ಮಜ್ದೂರ್ ಯೂನಿಯನ್ ನ ಪ್ರತಿಯೊಂದು ಸೂಕ್ಷ್ಮ ಕೊಂಡಿಗಳನ್ನು ಅರಿತು ಅದನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಿಗೆ ಬೆಳೆದು ನಿಂತ ಸಾಮಾನ್ಯ ಹೆಣ್ಣು ಯಾಮಿನಿ ಮಹಿಳಾ ಸಾಬಲ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಕಟ್ಟುವ ಕೆಲಸ ಮಾಡುವವರು ಬುಲ್ಡೋಜರ್ ಕಡೆ ನೋಡುವದಿಲ್ಲ ಎನ್ನುತ್ತಲೇ ಕಾರ್ಯ ಕಾರಣಗಳ ಒಳ ಹೊರಗಿನ ಸೂಕ್ಷ್ಮಗಳನ್ನರಿತು ಪೂರ್ತಿಯಾಗಿ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ಅವಳು ಕಟ್ಟಿದ್ದು ವ್ಯವಸ್ಥಿತ ವ್ಯವಸ್ಥೆಗಳನ್ನೇ ಕೆಡಹುವ ವ್ಯವಸ್ಥೆ. 
       
ನಾಯಕ ರಾಜೀವನದು ಇಬ್ಬಗೆಯ ವಿಚಾರಗಳನ್ನು ಹೊಂದಿದ ದ್ವಂದ್ವ ವ್ಯಕ್ತಿತ್ವ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ತಮ್ಮ ಹಕ್ಕಿಗಾಗಿ ಹೋರಾಡದವರನ್ನೆಲ್ಲ ಬಾಂಬು ಹಾಕಿ ಕೊಲ್ಲಬೇಕು, ಬೆಂಕಿ ಹಾಕಬೇಕು, ಜೋಪಡಿಗಳಮೇಲೆ ಬುಲ್ಡೋಜರ್ ಹಾಯಿಸಿ ನೆಲಸಮ ಮಾಡಬೇಕೆಂದುಕೊಳ್ಳುತ್ತ ವ್ಯವಸ್ಥೆಯ ತಾರತಮ್ಯಕ್ಕೆ ಆಕ್ರೋಶದ ಬೆಂಕಿಯನ್ನ ಎದೆಯಲ್ಲಿಟ್ಟುಕೊಂಡು, ನಿತ್ಯ ಒಳಗೊಳಗೇ ಸುಡುತ್ತ, ಉಳ್ಳವರಿಂದ ಕಸಿದುಕೊಳ್ಳುವ ತಾಕತ್ತಿನವರನ್ನು ಕಂಡು ವಿಚಿತ್ರ ಸುಖವನ್ನ ಅನುಭವಿಸುತ್ತ ತಾರತಮ್ಯದ ವ್ಯವಸ್ಥೆಯನ್ನು ಒಪ್ಪಿಕೊಂಡವರನ್ನು ದ್ವೇಷಿಸುತ್ತ, ಬಲಕರಗಿ ಸೋಲುವವರನ್ನು ಕಂಡು ಹೇಸುತ್ತಲೇ ಅವರಿಗಾಗಿ ಮಿಡಿವ ವಿಚಿತ್ರ ವ್ಯಕ್ತತ್ವದ ರಾಜೀವ. ಪೂರ್ವಾಶ್ರಮದ ಯೋಚನೆಗಳನ್ನ  ಅಂಕೆಯಲ್ಲಿ ಬಿಗಿದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಕಾರ್ಮಿಕ ಸಂಘಟನೆಯ ಆಧಾರವಾಗಿ ಯಾವುದೇ ಸ್ವಾರ್ಥವಿಲ್ಲದೇ  ನಿರಂತರ ದುಡಿಯುವವನು. ಹತ್ತುವರ್ಷಗಳಿಂದ ಎಂಟು ಲಕ್ಷ ಕಾರ್ಮಿಕರಿಗೆ ನಾಯಕನಾಗಿ ಆಮಚಿ ರಾಜೀವ್ ಭಾಯಿ, ರಾಜೋಬಾ, ಅಣ್ಣಾಸಾಹೇಬ್, ಸಾಥಿ ರಾಜೀವ್ ಎನ್ನಿಸಿಕೊಂಡ ರಾಜೀವ ಕೈಯ್ಯಿಟ್ಟಲೆಲ್ಲೂ ಅಪಜಯ ಕಂಡರಿಯದ  ಧೀರ. ತನಗಾಗಿ ಏನನ್ನೂ ಬಯಸದೇ ಲೋಕಲ್ ಟ್ರೇನ್ ಗಳಲ್ಲಿ ಪ್ರಯಾಣಿಸುತ್ತ ,ಕಾರ್ಮಿಕ ಬಸ್ತಿಯ ಬಳಸು ದಾರಿಗಳಲ್ಲಿ ಕಾಲ್ನಡಿಗೆಯಲ್ಲೇ  ಸಂಚರಿಸುತ್ತ, ಮೈಲುಗಟ್ಟಲೆ ನಡೆದು ಬೋಯಿವಾಡಾದ ರಂಗೇರಿಚಾಳ್ನ ಒಂದೇ ಕೋಣೆಯ ಮನೆ ಸೇರುವದ ಪ್ರೀತಿಸುವ ರಾಜೀವ  ಓದುಗನೆದೆಗೆ ತೀರ ಹತ್ತಿರ ಬರುವ ವ್ಯಕ್ತಿತ್ವ. ನಕ್ಸಲ್ ಆಗಿದ್ದು ಬೋರಿವಂಕದಲ್ಲಿ ಪೋಲೀಸರೊಂದಿಗಿನ ಚಕಮಕಿಯಲ್ಲಿ ಗುಂಡು ತಗಲಿ ಸತ್ತನೆಂದು ದಾಖಲಾದ ರಾಜಶೇಖರ ಸೋಮಯಾಜಲು ವಿಕಾರವಾಗಿದ್ದ ಮುಖಕ್ಕೆ ಪ್ಲಾಷ್ಟಿಕ್ ಸರ್ಜರಿ ಮಾಡಿಸಿಕೊಂಡು ರಾಜೀವನೆಂಬ ಹೊಸ ಹೆಸರಿನೊಂದಿಗೆ ತನ್ನ ಪೂರ್ವಾಶ್ರಮಕ್ಕೆ ವಿಮುಖನಾಗಿ ಮುಂಬೈಗೆ ಬಂದು  ಅಸಾದ್ಯವಾದದನ್ನು ಸಾಧಿಸಿದ್ದ. ಕಾರ್ಮಿಕರ ಸಾವಿಗೆ ಹಣ ಹೆಂಡ ಹಾದರವೇ ಕಾರಣವೆಂಬುದು ಸುಳ್ಳಾಗಿ, ಟ್ರೇಡ್ ಯೂನಿಯನ್ ಲೀಡರುಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಯಾರಿಗಾಗಿ ಸಂಘಟನೆಯೋ ಅವರನ್ನೇ ಕೊಲ್ಲಸುವ ಮಟ್ಟಕ್ಕೆ ಬೆಳೆದು ನಿಂತಿದ್ದನ್ನ ಕಂಡು,  ಶ್ರೀಕಾಕುಲಂ ವಾರಂಗಲ್  ಖಮ್ಮಾಮ್ ಗಳ ಚಟುವಟಿಕೆಗಳಿಗೆ ಹೇಸಿ ಅಲ್ಲಿ ಮನುಷ್ಯರಾಗಿ ಬದುಕುವದನ್ನು ಕಲಿಯಲು ಯಾರಿಗೂ ಸಾಧ್ಯವಾಗಿಲ್ಲ ಎಂದುಕೊಂಡು, ದಾರಿ ಬದಲಿಸಿ ಇಲ್ಲಿ ಬಂದವ ತಾನು ಕಟ್ಟಿದ ಸಂಘಟನೆಯ ಸರ್ವ ಜವಾಬ್ದಾರಿಗಳನ್ನು ಯಾಮಿನಿಗೆ ಒಪ್ಪಿಸಿ  ಶಕ್ತಿ ಪ್ರವಹಿಸುವದೇ ಬಂದೂಕಿನ ನಳಿಕೆಯ ಮೂಲಕ ಎನ್ನುತ್ತ ಮುಂಬೈಗೆ ಬೆನ್ನುಮಾಡಿ ಕಪ್ಪು ಕತ್ತಲೆಯಲ್ಲಿ ಕರಗಿ ಮತ್ತಲ್ಲಿಗೇ ಮುಖ ಮಾಡಿದನೆಂಬುದಕ್ಕೆ  ಸತೀಶ್ ಶರ್ಮಾನ ಕಲ್ಯಾಣಿ ಕೆಮಿಕಲ್ಸ ಗೆ ಹೊತ್ತಿಕೊಂಡ ಬೆಂಕಿ  ಪುಷ್ಟಿಯನ್ನು ನೀಡುತ್ತದೆ. ಓದುಗನೆದೆಯಲ್ಲಿ ರಾಜೀವ್ ಭಾಯಿ ದುರಂತ ನಾಯಕನಾಗಿ ನಿಂತು ಹೋಗುತ್ತಾನೆ.  ಎಲ್ಲ ವ್ಯವಸ್ಥೆಯಲ್ಲೂ ಹಿಂಸೆಯ ಬೀಜ ಅಡಗಿದೆ  ಎನ್ನುವದು ಓದುಗನ ಮೈಮುಳ್ಳಾಗಿಸುವ ಸತ್ಯ.
     
ಕಾದಂಬರಿಯಲ್ಲಿ ಅಂಕದಂಗಳಕ್ಕೆ ಬರದೇ ನೇಪಥ್ಯದಾಚೆಯೇ ನಿಂತು ನಿಜವಾದ ಖಳನಾಗಿ   ಓದುಗರ ಕೆಂಗಣ್ಣಿಗೆ ಸಿಕ್ಕುವದು ತನ್ನ ಸ್ವಾರ್ಥಕ್ಕೆ ಕಾರ್ಮಿಕರಲ್ಲಿ ಭಯವನ್ನು ಹುಟ್ಟಿಸುವದಕ್ಕಾಗಿ ಕಾರ್ಮಿಕರನ್ನೇ ಕೊಲ್ಲುವ ಕುಟಿಲ ಕ್ರೂರ ಬಾಪು ದೇಶಪಾಂಡೆಯೆಂಬ ಯೂನಿಯನ್ ಲೀಡರ್. ಮುಷ್ಕರ ದಂಗೆ ಕೆಂಪು  ಕೊಲೆ ರಕ್ತವೆಂದು ಎದೆ ಬಿಗಿವಾಗೆಲ್ಲ ಹಿತವಾದ ತಂಗಾಳಿಯಾಗಿ ಸುಳಿಯುವ ವ್ಯಕ್ತಿತ್ವ ಅಪಾಂಗ ಕಲ್ಯಾಣದ ಮಕ್ಕಳನ್ನೂ ನಿಜವಾಗಿ ಪ್ರೀತಿಸುವ ಸತೀಶ ಶರ್ಮಾನ ಹೆಂಡತಿ ಲಕ್ಷ್ಮಿಯದು.  ನಯನಾ, ಗೋದುಮಾಂಶಿ, ಪಾಂಡು ಸುತಾರ್, ಮಾನೆ ರಘು ಪಾಟಣ್ಕರ್ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾದರೂ ಬಹುಕಾಲ ನೆನಪಲ್ಲಿ ನಿಲ್ಲುವ ಮುಖಗಳು. ಕನ್ನಡದ ನಡುವೆ ಕಂಪಾಗಿ ಕುಸುರಿಗೊಂಡ (ಆಣಿ, ಆಮ್ಚೇ,ತಸ್ಸ ಕಾಯ್,ಫುಡೆ ಕಾಯ್, ಬೆವಡಾ, ಮಲಾ,ಆಲಾ ) ಮರಾಠಿ ಕಮ್ಮಗನಿಸುತ್ತದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಕಣ್ಣೆದುರು ಬರುವ ಹಾರ್ನಿಮನ್ ವೃತ್ತ ಬಾಂದ್ರಾ ಗಿರಗಾಂ ಭೋಯಿವಾಡಾ ಚರ್ಚಗೇಟ್ ಥಾಣೆ ಬೇಲಾಪುರ ಪನ್ವೇಲ್ ಪೋಕ್ರಾನ್ ವಾಡಿಬಂದರ್ ಕಾಳಾಚೌಕಿ ಭಿವಾಂಡಿವಾಲಾಚಾಳ್ ಕಾರ್ಮೈಕಲ್ ದಹಾನುಕರ್ ರಂಗೇರಿಚಾಳ್ ನಾವು ಕಂಡರಿಯದ ಮುಂಬೈನ  ಅದೆಷೋಸ್ಥಳ ಹಾಗೂ ರಸ್ತೆಗಳು ನಮ್ಮ ಆಜುಬಾಜು ಬಂದು ಕೂತಂತೆ ಹತ್ತರವಾಗುತ್ತವೆ.
   
ಕೇಂದ್ರ ಸಾಹಿತ್ಯ ಅಕೆಡಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳನ್ಬು ಪಡೆದ ಕೃತಿ, ವಾಸ್ತವಿಕ  ನೆಲೆಯಲ್ಲಿ ಮುಂಬೈನ ಕಾರ್ಮಿಕ ಸಮಸ್ಯೆಯ ರೌದ್ರ ಮುಖಗಳನ್ನು ಸಮರ್ಥವಾಗಿ ತೆರೆದಿಟ್ಟು, ತನಗೆ ಆಸರೆಯಾದ ಮುಂಬೈನ ನೀರು ಗಾಳಿ ಮಣ್ಣಿಗೆ ಋಣ ಸಂದಾಯದ ಸಾರ್ಥಕ ಹೆಜ್ಜೆ 'ಬಂಡಾಯ'. ಹಾಗೆಯೇ ಕನ್ನಡ ಸಾಹಿತ್ಯ ಭಂಡಾರಕ್ಕೊಂದು ಶ್ರೇಷ್ಠ ಕೊಡುಗೆಯಾಗಿದೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x