ಬಲ್ಲವನೇ ಬಲ್ಲ ರಂಗದ ರುಚಿ: ಮಲ್ಲಮ್ಮ ಯಾಟಗಲ್, ದೇವದುರ್ಗ

 

 

mallamma-yatagal

ರಂಗಭೂಮಿ ಎಂದರೆ ಬೇರೆ  ರೀತಿಯಲ್ಲಿ ಅರ್ಥೈಸಿಕೊಂಡಿರುವ  ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು.  ಒಬ್ಬ ವಿದ್ಯಾರ್ಥಿಯ ಪಾಲಕರು ಬಂದು ನನ್ನ ಮಗಳನ್ನು ಕಳಿಸಿಕೊಡೋಕೆ ಆಗಲ್ಲರ್ರಿ. ಏನ್ ಮಾಡಕೊಳ್ಳತ್ತಿರಿ ? ಯಾರಿಗೆ ಹೇಳಬೇಕು ?  ನನ್ನ ಮಗಳನ್ನು ಸೇಪಾಗಿ ತಂದು ಬಿಡತ್ತೀರಿ ಅನ್ನೋದು ಏನ್ ಗ್ಯಾರಂಟಿ ನನ್ನ ಮಗ್ಳನ್ನ ಕಳಸೋಕೆ ಆಗಲ್ಲ. ಎಂದು ಕಡ್ಡಿ ಮುರಿದಂತೆ ಮಾತಾಡಿ  ಕರೆದುಕೊಂಡು ಹೋದರು. ನಾವು ಉಳಿದ ಹುಡುಗರೆಲ್ಲ ಅವರನ್ನು ಹೋಗಿ ನೋಡಿ ಸರ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ ನಾವು ಹೋಗಲೇಬೇಕು ನಾನು ಪ್ರಾಚಾರ್ಯರ ಅನುಮತಿಯನ್ನು ಪಡೆದು ಕೊಂಡಿದೇನೆ. ನಿಮ್ಮ ಮಗಳನ್ನು  ನಿಮ್ಮ ಮನೆಗೆ ತಲುಪಿಸುವುದು ನಮ್ಮ ಜವಾಬ್ದಾರಿ.  ನಾವು ಆಕೀನ ಬಿಟ್ಟು ಹೋಗಬಹುದಾಗಿತ್ತು ಆದರೆ ಎರಡು ಮೇನ್ ಪಾತ್ರ ಮಾಡಿದ್ದಾಳೆ (ಜಕ್ಕಿಣಿ ಮತ್ತು ವಿಧುರ) ಇವಳು ಬರಲಿಲ್ಲ ಅಂದರೆ ೨೨  ಜನ ವಿದ್ಯಾರ್ಥಿಗಳದ್ದು ಪ್ರತಿಭೆ ಕುಂದೋಗುತ್ತೆ ಸರ್ ದಯವಿಟ್ಟು ಕಳಿಸಿಕೊಡಿ. ನಿಮ್ಮ ಮಗಳಿಗೇನು ನಾವು ಒತ್ತಾಯ ಮಾಡಿಲ್ಲ. ಆಸಕ್ತಿಯಿಂದ ಬಂದಿದ್ದಕ್ಕಾಗಿ ನಾಟಕದಲ್ಲಿ ಕರೆದುಕೊಂಡಿದ್ದು. ನೀವು ಯಾವ ನಂಬಿಕೆ ಮೇಲೆ ಹುಡುಗ ಹುಡುಗಿಯರನ್ನು ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದಾಗ ನನಗೆ ಸಿಟ್ಟು ತಾಳಲಿಲ್ಲ. ನೋಡಿ ಸರ್ ನಿಮ್ಮ ಮಗಳ ಮೇಲೆ ನಂಬಿಕೆ ಇಲ್ಲ ಅಂದರೆ ಕಳಿಸಬೇಡಿ. ನೀವು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ. ನಾನು ಈ ನಾಟಕವನ್ನು ರದ್ದು ಮಾಡುತ್ತೇನೆ. ಈಗ ನಿಮ್ಮ ಮನೆಗಳಿಗೆ ಹೋಗಿ. ಗಾಡಿ ಬಾಡಿಗೆ ವಸ್ತ್ರಾಭರಣಗಳಿಗೆ ಮಾಡಿದ ಖರ್ಚು ನಾನು ನನ್ನ ಕೈಯಿಂದ ಹಾಕುತ್ತೇನೆ. ಇಂತಹ ಮನಸ್ಥಿತಿಯಲ್ಲಿ ಇದ್ದವರು ಕಾಲೇಜ್, ಮತ್ತು ನಾಟಕಕ್ಕೆ  ಸೇರುವ ಮುಂಚೆ ವಿಚಾರ ಮಾಡಿ ಬರಬೇಕು ಎಂದು ಸಿಟ್ಟು ಬಂದು ತಲೆ ಮೇಲೆ ಕೈ ಹೊತ್ತು ಕುಂತೆ.

ಆ ಹುಡುಗಿ ಅವರಪ್ಪನನ್ನ ಸಮಾಧಾನ ಮಾಡಿ, ಇದೊಂದು ಸರೆ ಹೋಗಿ ಬರುತ್ತೇನೆ, ಇನ್ನೊಂದು ಸರೆ ಯಾವ ಕಾರ್ಯಕ್ರಮಗಳಿಗೂ ಸೇರುವುದಿಲ್ಲ ಎಂದು ಮಾತು ಕೊಟ್ಟು ಬಂದಿರಬೇಕು. ಒಟ್ಟಿನಲ್ಲಿ ಶೋ ಮುಗಿಸಿದ್ದು ರಾತ್ರಿ ಎಂಟು ಗಂಟೆ, ನಮ್ಮ ವಿದ್ಯಾರ್ಥಿಗಳು ಅಥಣಿ ಸೇರಿದ್ದು ಬೆಳ್ಳಿಗೆ ೮ ಗಂಟೆ. ರಾತ್ರಿ ಬಸ್ಸಿನದು ಹೆಡ್ ಲೈಟ್ ಹೋಗಿ ಇಡೀ ರಾತ್ರಿ ಚಿಕ್ಕೋಡಿ ಸರ್ಕಲ್ನಲ್ಲಿ ಬಸ್ಸು ನಿಲ್ಲಿಸಿ ಬಸ್ಸಲ್ಲೆ ಮಲಗಿ ಹೈರಣಾಗಿ ಬಂದೆವು. ಇದು ರಂಗಭೂಮಿಯ ಒಂದು ಅನುಭವ.  ಈ ಭಾಗದಲ್ಲಿ ರಂಗಭೂಮಿಯ ಕಾರ್ಯವೈಖರಿಗಳು ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಆಗಬೇಕಾಗಿದೆ. ಈ ಒಂದು ಉದ್ದೇಶದಿಂದ  ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು "ಕಾವ್ಯರಂಗ"ವನ್ನು  ಮಾಡಿಸಿದರೆ ಪದವಿ, ಪದವಿ ಪೂರ್ವ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗಬಹುದು ಎಂದು ಮೊದಲೇ ಯೋಚಿಸಿದ್ದೆ. ಆದರೆ ಕಾಲ ಕೂಡಿ ಬಂದಿದ್ದು ಕಳೆದ ತಿಂಗಳು. ನಾನು ಕಳೆದ ವರ್ಷ ಧಾರವಾಡ ರಂಗಾಯಣದ ರಂಗಧ್ವನಿ ೨೦೧೬ ರಲ್ಲಿ ಡಾ| ಶ್ರೀಪಾದ ಭಟ್ ರನ್ನು ಕೇಳಿದ್ದೆ. ಸರ್ ನಿಮ್ಮ ಕಾವ್ಯರಂಗವನ್ನು ಇಡೀ ಕರ್ನಾಟಕದ ಮೂಲೆಮೂಲೆಗಳಲ್ಲಿ  ಕಾಲೇಜು ವಿದ್ಯಾರ್ಥಿಗಳಿಗಾಗಿ ಶೋಗಳನ್ನ ಕೊಡುವಂತಹ ಕೆಲಸ ಆಗಬೇಕು ಸರ್. ನಮ್ಮ ಸಾಹಿತ್ಯ ವಿದ್ಯಾರ್ಥಿಗಳಿಗೆ  ಕವಿಗಳೇ ಗೊತ್ತಿರದ ಪರಸ್ಥಿಯಲ್ಲಿ ಇದ್ದಾರೆ  ಹಾಗಾಗಿ ನೀವು ನಿರ್ದೇಶನ ಮಾಡಿರುವ ಕಾವ್ಯರಂಗ ಬಹಳ ಅನುಕುಲವಾಗುವಂಥದ್ದು ಎಂದಾಗ ನಿಮ್ಮಂತವರು ಮಾಡಿಸುವವರು  ಸಿಗಬೇಕು ರ್ರಿ ಎಲ್ಲವೂ ಸರಳವಾಗಿ ನಡೆದುಹೋಗುತ್ತೆ ಎಂದು ಮುಗ್ಳುನಕ್ಕರು.

ನಾನು ಕೂಡ ಹಿಂದೆ ರಂಗಭೂಮಿಯ ಕಲಾವಿದೆ ಆಗಿರುವುದರಿಂದ ತರಗತಿಯಲ್ಲಿ ಪಾಠ ಹೇಳುವಾಗ ನನಗೆ ಸಾತ್ ನೀಡುವುದು ಹಿಂದೆ  ಕಲಿತ ಎನ್ ಎಸ್ ಡಿ, ಬಿ. ಜಯಶ್ರೀ ಅಮ್ಮ, ಹಂಸಲೇಖ ಸರ್, ಸಂಜೀವ್ ಸುವರ್ಣ ಸರ್, ಸಿ ಬಸವಲಿಂಗಯ್ಯ NSD ಬೆಂಗಳೂರು ಕೇಂದ್ರದ ನಿರ್ದೇಶಕರು, ಇವರುಗಳಿಂದ  ಬೈಸಿಕೊಂಡ ಬೈಗುಳಗಳೇ ಇವತ್ತು ಸಾವಿರಾರು ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವುದಕ್ಕೆ ನನಗೆ ಸಾಧ್ಯವಾಗಿದ್ದು. ಇವತ್ತಿಗೂ ಕೂಡ ನಮ್ಮ ಪಾಲಕರಿಗೆ ಬೆಂಗಳೂರು (NSD ವಿದ್ಯಾರ್ಥಿ) ಮತ್ತು ಧಾರವಾಡ ರಂಗಾಯಣದಲ್ಲಿ (ಸರಕಾರಿ ಕಲಾವಿದೆ) ಇದ್ದಾಗ  ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾಳೆ ಎಂದು ನಮ್ಮ ಪಾಲಕರು ಭಾವಿಸಿದ್ದರು. ಆದರೆ ನಾನು ನಾಟಕ ಮಾಡುವುದಕ್ಕೆ ಹೋಗತೀನಿ ಎಂದು  ಒಂದು ವೇಳೆ ಹೇಳಿದ್ದರೆ, ನಾನು ಇವತ್ತು ಈ ಮಟ್ಟದಲ್ಲಿ ಇರುತಿರಲಿಲ್ಲ ಅನಿಸುತ್ತದೆ.

ನಾಳೆ ಶೋ ಇತ್ತು, ಹಿಂದಿನ ದಿನ, ಈ ಕಾವ್ಯರಂಗದ ನಿರ್ವಹಣೆ ಮಾಡುತ್ತಿರುವ ರಂಜಿತಾ ಜಾಧವ್ ಕಾಲ್ ಮಾಡಿ ಅಕ್ಕ ನಮ್ಮ ಟೀಮ್ ನಲ್ಲಿರುವ ಶಿಲ್ಪಾರವರ ತಾಯಿಗೆ ಆರಾಮಿಲ್ಲ  ಒಬ್ಬರು ಕಮ್ಮಿ ಇದ್ದಾರೆ ಒಂದು ದೃಶ್ಯವನ್ನು ಕಟ್ ಮಾಡತ್ತೀವ್ಹಿ ಆಗಬಹುದಾ ? ಒಂದ್ ಯಾಕ ಎರಡು ದೃಶ್ಯ ಕಟ್ ಮಾಡಿದ್ರೂ ಪರವಾಗಿಲ್ಲ ನಾಳೆ ನಮ್ಮ ಕಾಲೇಜನಲ್ಲಿ  ಶೋ ನಡಿಬೇಕು. ಕಲೆ ಮತ್ತು ಕಲಾವಿದರಿಗೆ  ಪ್ರೋತ್ಸಾಹ ನೀಡುವ ಪ್ರಾಚಾರ್ಯರು ಡಾ| ಆರ್. ಎಫ್ ಇಂಚಲ ಸರ್ ಮತ್ತು ಸ್ಥಾನಿಕ ಮಂಡಳಿಯ ಸದಸ್ಯರಾದ ನಮ್ಮ ಡಾ| ಎಂ. ಜಿ. ಹಂಜಿ ಸರ್ ಕಾಲ್ ಮಾಡಿದಾಗ ನೀವು ಮಾಡಿಸಿ ಉಳಿದದ್ದು ನಾನು ನೋಡಿಕೊಳ್ಳುತ್ತೇನೆ ಎಂದು ಪ್ರೀತಿಯಿಂದ ಒಪ್ಪಿದ್ದಾರೆ  ಅತಿಥಿಗಳು ಬರುವರಿದ್ದಾರೆ ೧೫ ನಿಮಿಷ ವೇದಿಕೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಆದ್ರೆ ನೀವು ಮಾತ್ರ ಬರುವುದಕ್ಕೆ ಆಗುವುದಿಲ್ಲ ಎಂದು ಮಾತ್ರ ಹೇಳಬ್ಯಾಡ್ರಿ ಎಂದು ಮನವಿ ಮಾಡಿಕೊಂಡೆ. ಸರಿ ಎಂದು ಒಪ್ಪಿಕೊಂಡಳು.

ಅಂದ ಹಾಗೆ ಈ ಕಾವ್ಯರಂಗದ ರಚನೆ ಎಂ ಜಿ ಹೆಗಡೆ, ನಿರ್ದೇಶನ ಡಾ| ಶ್ರೀಪಾದ ಭಟ್, ಪ್ರಸ್ತುತ ಸಮೂದಾಯ ಕರ್ನಾಟಕ ರೆಪರ್ಟರಿ ತಂಡ ಧಾರವಾಡದವರಿಂದ. ಈ ತಂಡದಲ್ಲಿ ಕೇವಲ ಧಾರವಾಡದ ಕಲಾವಿದರಲ್ಲ ಇಲ್ಲಿರುವ ನಟರು ಬೇರೆ ಭಾಗಗಳಿಂದ ವಿವಿಧ ಪದವಿದಾರರಾಗಿರುವುದು  ವಿಶೇಷ ಎಂದು ಹೇಳಲೇ ಬೇಕು. ಅಂದು ಬೆಳಗ್ಗೆ ಎರಡು ಕ್ಲಾಸ್ ಮುಗಿಸಿ ಹತ್ತು ಗಂಟೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಸುಮಾರು ಸಾವಿರ ಆಸನಗಳುಳ್ಳ ಕಾಲೇಜು ಆಡಿಟೋರಿಯಂನಲ್ಲಿ ಕಿಕ್ಕಿರಿದು ತುಂಬಿದ್ದ  ವಿದ್ಯಾರ್ಥಿಗಳ ಸಮ್ಮುಖದಲ್ಲಿ  ವೇದಿಕೆ ಕಾರ್ಯಕ್ರಮ ನಡೆಯುವಾಗ, ಪವರ ಕಟ್ ಆಗಿದಕ್ಕೆ ವಿದ್ಯಾರ್ಥಿಗಳು ಸಿಳ್ಳೆ ಕೇಕೆ ಕರ್ಕಶವಾದ ನಗು ಒಟ್ಟಿನಲ್ಲಿ ಗದ್ದಲವೋ ಗದ್ದಲ. ಅದನ್ನು ತಾಳದೆ ಹಿಂದೆ ಕುಳಿತ ವಿದ್ಯಾರ್ಥಿಗಳ ಕಡೆ ಹೋಗಿ, ಯಾಂವ್ನಾದ್ರ  ಕಿಸಕ್ ಅನ್ನೊ ಶಬ್ದ ಕೇಳ್ಸಿತು ಅಂದ್ರ ಒದ್ದು ಹೊರ ಹಾಕಬೇಕಾಗಿತ್ತದ ಮಕ್ಳ್ರಾ? ಯಾಂವಂಗ ಕುಂಡ್ರಾಕ ಅಗೋಲಲ್ಲ ಹೊರಗೆ ಹೋಗಬಹುದು. ಎಂದಾಗ ಆಕ್ಷಣಕ್ಕೆ ಸುಮ್ನೆ ಕುಂತ್ತು, ಮತ್ತೆ ಅದೇ ರಾಗ ಅದೆ ಹಾಡು. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಬಹುದು ಆದರೆ ಇಂತಹ ಸಂದರ್ಭಗಳಲ್ಲಿ  ಅವರ ಸಂಜಾಯಿಸುವುದು ಬಲು ಕಷ್ಟದ ಕೆಲಸವೆ ಆಗಿತ್ತು ಅನ್ನಿ. ಅವರ ದೃಷ್ಟಿಯಲ್ಲಿ ನಾಟಕದ ಕಲ್ಪನೆಯೇ ಬೇರೆ ಇತ್ತು. ಜಗಮಗಿಸುವ ವಸ್ತ್ರಾಭಾರಣಗಳು ಹಾಡು ಕುಣಿತದ ಹೀಗೆ. ಅದ್ಯಾವುದು ಇದರಲ್ಲಿ ಇರಲಿಲ್ಲ.

ಕವಿ ಜಿ. ಎಸ್. ಶಿವರುದ್ರಪ್ಪ ನವರ ಹಣತೆ ಹಚ್ಚುತ್ತೇವೆ ನಾವು ಇರುವಷ್ಟು ದಿನ ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಲೆಂದು. ಈ ಹಾಡು ಮತ್ತು ಸಂಭಾಷಣೆ ಮೂಲಕ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಏನು ಅರ್ಥವಾಯಿತೋ ಅಷ್ಟೊಂದು ಗದ್ದಲ ಮಾಡುತ್ತಿದ್ದ ವಿದ್ಯಾರ್ಥಿಗಳೆಲ್ಲ ಮೌನ. ಕೊನೆಗೆ ಕವಿ ಸು. ರಂ. ಎಕ್ಕುಂಡಿಯವರ ಮೂಡಲ ದೀಪದೊಂದಿಗೆ ಕಾವ್ಯರಂಗ ಮುಕ್ತಾಯ ಆಗುವವರೆಗೂ ಇಡೀ ಸಭಾಂಗಣವೆ ಮೌನ ಆವರಿಸಿಕೊಂಡು ಕಾವ್ಯರಂಗವನ್ನೆ ನೋಡುತಿತ್ತು. ಕವಿರಾಜಮಾರ್ಗಕಾರ ಹೇಳುವ ' ಕಾವೇರಿಯಿಂದಮಾಗೋದಾವರಿವರಮಿರ್ದ ನಾಡದು ಕನ್ನಡ ಎಂದು ನಾಡಿನ ಚಾರಿತ್ರಕ, ಭೌಗೋಳಿಕ ಲಕ್ಷಣವನ್ನು ಕುರಿತು ಹೇಳಿದರೆ, ಕನ್ನಡಿಗರ ಗುಣ ಸ್ವಭಾವ, ವ್ಯಕ್ತಿತ್ವ, ಸಾಧನೆಗಳನ್ನು
         "ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ 
ವಿಪರೀತನ್  ಮಾಧವನೀತನ್ ಪೆರನಲ್ಲ" ಎನ್ನುವ ೭ ನೇ ಶತಮಾನದ ಕಪ್ಪೆ ಅರಭಟ್ಟ, ವೇದಿಕೆಯಲ್ಲಿ ಒಬ್ಬ ನಟ ಪಂಪನಾಗಿ ಕಾಲಮೇಲೆ ಕಾಲು ಹಾಕಿಕೊಂಡು ಕತ್ತಿನೊಳಗೆ ವಸ್ತ್ರಧರಿಸಿಕೊಂಡು  "ಚಾಗದಭೋಗದಕ್ಕರದಗೊಟ್ಟಿಲಂಪಿನ ಇಂಪಿನೊಳ್" ಎಂದು ನನೆಯುವದೆನ್ನ ಮನ ಬನವಾಸಿ ದೇಶಮಂ ಎಂದು ಹೇಳಿ ಕರ್ಣನ ಬಾಯಿಯಿಂದ ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆ ಎನಗೆಪಟ್ಟಂಗಟ್ಟಾ, ನಿಮ್ಮದು ಯಾವ ಕುಲ ? ಎಂದು ಈ ಸಮಾಜವನ್ನು ನಿದ್ದೆಗೆಡಿಸುವಂತೆ ಮಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಕರ್ಣನ ಛಲ, ಗುಣ, ಅಭಿಮಾನವನ್ನು  ತೋರಿಸುವುದು, ನಂತರ ಇಡೀ ಸಭಾಂಗಣ ನಗುವಿನ ಮಡುವಿನಲ್ಲಿ ಮುಳಿಗಿದ್ದು ದುರ್ಗಸಿಂಹನ ಪಂಚತಂತ್ರ ಕತೆಯಲ್ಲಿ ಮೊಲ ಅಲ್ಲಿ ಕಡೆ ಕಥೆ ಕೇಳಲು ಬರುವಾಗ ಹಾದಿಯಲ್ಲಿ ಒಂದು ರಾಕ್ಷಸ ಬಂದು ನಿನ್ನನ್ನು ತಿಂದುಬಿಡುತ್ತೇನೆ ಎಂದಾಗ ಮೊಲ ಇಲ್ಲ ಕಥೆ ಕೇಳಿ ನಾನು ಮರಳಿ ಬರದಿದ್ದರೆ ಮೆಚ್ಚನಾ ಪರಮಾತ್ಮನನ್ನು ಎಂದು ಅಜ್ಜಿ ಕಡೆ ಬಂದು ಕಥೆ ಕೇಳಿಸಿಕೊಳ್ಳುತ್ತದೆ. ಇಲ್ಲಿ ಒಂದೊಂದು ಪಾತ್ರಗಳಿಗೆ ಜೀವವನ್ನು ತುಂಬಬೇಕಾಗುತ್ತದೆ ಅದನ್ನು ಇಲ್ಲಿ ಎಲ್ಲಾ ಕಲಾವಿದರು ಮಾಡಿದರೆ. ಆ ಅಜ್ಜಿ ಕಥೆ ಹೇಳುವ ಶೈಲಿಗೆ ಎಲ್ಲಾರು ಗೊಳ್ಳೆಂದು ನಕ್ಕಿದ್ದು. ಹಂಗಂಗೆ$$$ ಹಂಗಂಗೆ$$$$ ಹಿಂಗಿಂಗೆ ಹಿಂಗಿಂಗೇ$$$ ಹೇ ಹುಂ ಅನ್ನಬೇಕಪ್ಪ ಎಂದಾಗ ಇಡೀ ಸಭಾಂಗಣವೇ ಹೂಂ ಎಂದು ನಕ್ಕದ್ದು. ಶರಣರ ಅನುಭವ ಮಂಟಪದ ಕಲ್ಪನೆ, ಲಷ್ಮೀಶನ ಜೈಮಿನಿ ಭಾರತದಲ್ಲಿನ ಸೀತೆ ಪರಿತ್ಯಾಗ ಮಾಡಿ ತೋರಿಸುವುದು, ಚೋಮ ಬಾರಿಸುವ ದುಡಿ, ಅವನ ಸಂಕಟವನ್ನು ಪ್ರತಿರೋಧವನ್ನು ಯಾವ ರೀತಿಯಲ್ಲಿ ಎದುರಿಸಿದನು. ದೇವನೂರು ಮಹಾದೇವರವರ ಒಡಲಾಳ ಕಥೆಯಲ್ಲಿ ಸಾಕ್ಕವ್ವ ಕಳೆದುಕೊಂಡ ಕೋಳಿಯನ್ನು ಹುಡುಕುವ ಸಂದರ್ಭ ಕ್ವಕ್ವಕ್ವ ಕೊಕ್ ಕೊಕ್ ಎಂದು ಕರೆಯುವಾಗ ಕೂಡ ವಿದ್ಯಾರ್ಥಿಗಳು ಬಹಳ ಖುಷಿಯಿಂದಲೇ ಆ ಸಂದರ್ಭವನ್ನು ಅನುಭವಿಸಿದರು.

ಕೆ. ಎಸ್ ನಿಸ್ಸರ್ ಅಹ್ಮದ್ ರವರ ನಾವು ಕುರಿಗಳು ಸಾರ್ ನಾವು ಕುರಿಗಳು ಎನ್ನುವ ಕವಿತೆ, ಹೀಗೆ ಸುಮಾರು ೩೧ ಸಾಹಿತ್ಯಿಕ ಬರಹಗಳನ್ನು ರಂಗದ ಮೇಲೆ ತರುವುದು ಕಷ್ಟದ ಕೆಲಸವೆ. ಇಲ್ಲಿ ಇನೊಂದು ಗಮನಿಸುವುದಾದರೆ. ಸ್ತ್ರೀ ಸಾಹಿತ್ಯಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಕೇವಲ ಪ್ರತಿಭಾನಂದಕುಮಾರ ಮತ್ತು ವೈದೇಹಿಯವರ ಕವಿತೆಗಳು ಬಿಟ್ಟರೆ ಉಳಿದ ಸ್ತ್ರೀ ಸಾಹಿತಿಗಳಿಗೆ ಪ್ರವೇಶ ಸಿಕ್ಕಿಲ್ಲ. ಶ್ರೀಪಾದ ಭಟ್ಟರು ನಮ್ಮ ಕಡೆನೂ(ಮಹಿಳಾ ಸಾಹಿತ್ಯಕ್ಕೆ) ಕೊಂಚ ಒಲವು ತೋರಿಸಬೇಕಾಗಿತ್ತು. ಏನೇ ಇರಲಿ ಒಟ್ಟಾರೆ ಹೇಳುವುದಾದರೆ ನಮ್ಮ ವಿದ್ಯಾರ್ಥಿಗಳಿಗೆ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ನಾಟಕದಲ್ಲಿ ಇತ್ತು. ನಾಟಕ ಮುಗಿದ ನಂತರ ನಮ್ಮ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾವು ಇನ್ನ ಮೇಲೆ ರಂಗಭೂಮಿಗೆ ಪ್ರವೇಶ ಮಾಡುತ್ತೇವೆ ನಿಮ್ಮ ರೆಪರ್ಟರಿ ಥಿಯೇಟರ್ನಲ್ಲಿ ನಮಗೂ ಅವಕಾಶ ಮಾಡಿಕೊಡಿ ಎಂದು ತಮ್ಮ ಅನಿಸಿಕೆಗಳನ್ನು ಹೇಳಿದರು. ಡಾ| ಎಸ್. ವಾಯ್ ಹೊನ್ನುಂಗುರ ಸರ್ ವೇದಿಕೆ ಮೇಲೆ ಬಂದು ನಾನು ಹತ್ತು ಬಾರಿ ಚೋಮನ ದುಡಿ ಓದಿದರು ಅಷ್ಟೊಂದು ನನ್ನ ಮೇಲೆ ಪರಿಣಾಮ ಬೀರಿರಲಿಲ್ಲ. ಆದರೆ ಈ ಕಾವ್ಯರಂಗದಲ್ಲಿ ಚೋಮ ನನ್ನ ಅಳಿಸಿಬಿಟ್ಟ. ನನ್ನ ಕಡೆಯಿಂದ ಕಲಾವಿದರಿ ನನ್ನ ಸಣ್ಣ ಕಾಣಿಕೆ ಎಂದು ೫೦೦ ಕೊಟ್ಟು ಕಲಾವಿದನ್ನು ಪ್ರೋತ್ಸಾಹಿಸಿದರು, ಹೀಗೆ  ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಒಟ್ಟಿನಲ್ಲಿ ಒಂದು ವಾರ ಕ್ಯಾಂಪಸ್ ನಲ್ಲಿ "ಹೂಂ ಅನ್ನಬೇಕಪ್ಪ" ಎನ್ನುವದೊಂದೆ ಶಬ್ಧ ಕೇಳಿಯೇ ಬರುತ್ತಿತ್ತು.
–ಮಲ್ಲಮ್ಮ ಯಾಟಗಲ್, ದೇವದುರ್ಗ

ಮಲ್ಲಮ್ಮ ಯಾಟಗಲ್, ದೇವದುರ್ಗ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
M.B.Teli
M.B.Teli
6 years ago

nimm baraha thumba chennagide medam….

1
0
Would love your thoughts, please comment.x
()
x