ನಾವು ಕಾಸರಗೋಡಿನ ಕನ್ನಡಿಗರು. ಕರ್ನಾಟಕದ ಉತ್ತರ ಗಡಿಭಾಗದ ಊರು ಕಾಸರಗೋಡು. ಮನೆಗೊಬ್ಬರು, ಇಬ್ಬರ ಹಾಗೆ ಗಲ್ಫ್ ನಲ್ಲಿ ದುಡಿಯುವವರು ಹೆಚ್ಚಿನ ಮನೆಗಳಲ್ಲಿದ್ದಾರೆ. ಅದರಿಂದ , ಅಲ್ಲಿನ ದುಡ್ಡು ಇಲ್ಲಿ ಭವ್ಯ ಮಹಲುಗಳಾಗಿ, ಅಪಾರ್ಟ್ ಮೆಂಟ್ ಗಳಾಗಿ, ವಾಣಿಜ್ಯ ಸಂಕೀರ್ಣಗಳಾಗಿ, ಸಾಲುಮನೆಗಳಾಗಿ, ಜುವೆಲ್ಲರಿಗಳ ರೂಪದಲ್ಲಿ, ಐಶಾರಾಮಿ ಕಾರುಗಳಾಗಿ, ಆಂಗ್ಲಮಾಧ್ಯಮ ಶಾಲೆಗಳ ರೂಪಿನಲ್ಲಿ ಹರಿಯುತ್ತಿದೆ.ಹರಿಯಲಿ; ಅದು ಅವರ ಶ್ರಮದ ಗಳಿಕೆ. ಅವರ ಸಂಪಾದನೆಯ ಮೊತ್ತ ನೋಡಿಯೇ ಇಲ್ಲಿ ಶಾಪ್ ಗಳಲ್ಲಿ ನವನವೀನ ಮಾದರಿಯ ಡ್ರೆಸ್ ಗಳ ಕನಿಷ್ಟ ಬೆಲೆ ಅಂದರೆ ಎರಡು ಸಾವಿರ ಅಂದರೆ ಉತ್ಪ್ರೇಕ್ಷೆ ಆಗದು. ಊರಿನಲ್ಲಿದ್ದು ಬದುಕುವ ಮಿತ ಆದಾಯದ ಮಂದಿಗೆ ಕಷ್ಟ ಅಷ್ಟೆ!
ಈಗ ನಾನು ಉಲ್ಲೇಖಿಸುವುದೂ ಅದೇ ವಿಚಾರಕ್ಕೆ ಹತ್ತಿರದ್ದು. ಇಲ್ಲಿ ತುಳು ಮನೆ ಮಾತಿನವರಿದ್ದಾರೆ; ಬ್ರಾಹ್ಮಣ ವರ್ಗವಿದೆ, ಕೊಂಕಣಸ್ಥರಿದ್ದಾರೆ, ಮರಾಠಿ ಭಾಷೆ ಮನೆಮಾತಾಗಿರುವವರಿದ್ದಾರೆ, ಮಲಯಾಳಂ ಭಾಷಿಗರಿದ್ದಾರೆ, ಎಲ್ಲರೂ ಸ್ಥಳೀಯರು.ಕೆಲವಾರು ವರ್ಷಗಳಿಂದ ಈಚೆಗೆ ಇಲ್ಲಿನ ಯುವಕರಿಗೆ ವಿವಾಹಕ್ಕೆ ವಧು ಸಿಗುವುದಿಲ್ಲ. ಹೆಣ್ಣುಮಕ್ಕಳ ಸಂಖ್ಯೆ ಕಮ್ಮಿಯಾಗಿ ಅಲ್ಲ. ವಿದ್ಯಾಭ್ಯಾಸ ಕಡಿಮೆ ಇದ್ದು ತಾಯ್ತಂದೆಯರ ಜೊತೆಗಿರುವ ಯುವಕರಿಗೆ ಕೂದಲು ಬೆಳ್ಳಗಾದರೂ ಕನ್ಯೆ ಸಿಕ್ಕದು. ಪರಂಪರೆಯಿಂದ ಬಂದ ವೃತ್ತಿಯಾದ ವ್ಯವಸಾಯ, ದೇವತಾರ್ಚನೆ, ಕ್ಯಾಟರಿಂಗ್, ಶಿಕ್ಷಕರು, ಖಾಸಗಿ ಕಂಪೆನಿಯಲ್ಲಿ ನೌಕರಿ ಮಾಡುವ ತರುಣರು, ಭೂಮಿಯ ಒಡೆಯರು; ಅಡಿಕೆ, ತೆಂಗು, ರಬ್ಬರ್ ತೋಟದವರು, ಸಣ್ಣಪುಟ್ಟ ಅಂಗಡಿ ನಡೆಸುವವರು ಎಲ್ಲರೂ ಒಂಟಿಬಡುಕರು. ರೂಪ, ವಿದ್ಯೆ, ತಾರುಣ್ಯ, ಆರ್ಥಿಕ ಸಮೃದ್ಧಿ, ಹಾಲು ಮೊಸರಿನ ಧಾರಾಳತೆ, ಮನೆಯಿಡೀ ಆಧುನಿಕ ರೀತಿಯಲ್ಲಿ ಸಜ್ಜಾಗಿ , ಫ್ರಿಜ್, ವಾಶಿಂಗ್ ಮೆಷಿನ್, ಗೀಸರ್, ನೆಲಕ್ಕೆ ಮಾರ್ಬಲ್, ಕಾಸ್ಟ್ಲೀ ಫರ್ನಿಚರ್, ನಾಲ್ಕಂಕಿಯ ಮೊಬೈಲ್, ಕರೆದರೆ ನಾಲ್ಕಾರು ಕೆಲಸಗಾರರು, ದುಬಾರಿ ಕಾರು ಇದಕ್ಕೆಲ್ಲ ಮರುಳಾಗುವುದಿಲ್ಲ ಹುಡುಗಿಯರು. ಅವರಿಗೆ ಬದುಕಿನಲ್ಲಿ ಎಲ್ಲವನ್ನು ಅನುಭವಿಸುವ ಹಂಬಲ. ನಗರ ಜೀವನದಲ್ಲಿ ಕೈತುಂಬುವ ಸಂಬಳದ ಜೊತೆಗೆ ಪತಿ, ಪತ್ನಿ ಹಾಯಾಗಿ ನೂತನ ಬದುಕನ್ನು ಎಂಜಾಯ್ ಮಾಡುವಾಸೆ. ಅಲ್ಲಿಗೆ ಅವರಿಬ್ಬರ ಮಧ್ಯೆ ಮೂರನೆಯವರ ಪ್ರವೇಶ ಊಹೂಂ , ಬೇಡ. ಪತಿಯಾದವನ ಸಂಬಳದ ಒಂದೇ ಒಂದು ಪೈಸಾ ಕೂಡಾ ಅವನ ತಾಯ್ತಂದೆಯರಾಗಲೀ, ಸಂಬಂಧಿಕರಿಗಾಗಲೀ ಕಾಣಲೂ ಸಿಗಬಾರದು. ಹಿರಿಯರು ಊರಿನ ಮನೆ ಸಂಭಾಳಿಸಿದರೆ ಸಾಕು. ನಾನು, ನನ್ನದು, ನನ್ನ ಸಂಸಾರ ಅದಷ್ಟೆ ಇಂದಿನ ವಧುಗಳ ಅಪೇಕ್ಷೆ. ಹೆಚ್ಚಿನವರದು ಇದೇ ವರ್ತನೆ. ಸುಸ್ವಭಾವಿ ವಧುಗಳು ಇಲ್ಲವೆನ್ನುವ ಹಾಗಿಲ್ಲ. ಕಡಿಮೆ. ಪತಿಯಾಗಿ ಬರುವಾತ ಇಂಜನಿಯರ್ ಅಥವಾ ವೈದ್ಯ ಇದ್ದರೆ ಬೆಸ್ಟ್. ಎಂ.ಡಿ. ಮಾಡದ ವೈದ್ಯ ಬೇಡ. ಆಯುರ್ವೇದದವನಿಗೆ ಅಲ್ಲಿ ಸೀಟಿಲ್ಲ. ಅವನು ಹುಡುಗಿಯರ ಹೆತ್ತವರ ಕಣ್ಣಿಗೇ ಕಾಣಿಸುವುದಿಲ್ಲ. ಸಿ.ಎ. ಓಕೆ. ವಿದೇಶವಾಸದ ಅವಕಾಶಕ್ಕೆ ಸ್ವಾಗತ. ಹಾಗೆಲ್ಲ ಕಂಡಿಶನ್ಸ್ ಹಾಕುವ ಹೆಣ್ಣುಮಕ್ಕಳು ತಮ್ಮ ಅರ್ಹತೆ ಬಗ್ಗೆ ಚಿಂತಿಸುವುದಿಲ್ಲ. ಏಕೆಂದರೆ ಈಗ ಕನ್ಯೆಗೆ ದುರ್ಭಿಕ್ಷ್ಯ. ಕಾಲೇಜು ಹತ್ತಿದರೆ ಸಾಕು ಆಕೆ. ರೂಪ ಸಾಮಾನ್ಯವಿದ್ದರೆ ನಡೆಯುತ್ತದೆ.
ವಿಚಾರ ಹೀಗೆ ಇದ್ದಾಗ ಊರಲ್ಲಿ ವ್ಯವಸಾಯ, ಮಾಸ್ತರಿಕೆ, ಸಹಕಾರಿ ಬ್ಯಾಂಕ್, ಕಾಲೇಜು ಉಪನ್ಯಾಸಕ, ದೇವಸ್ಥಾನದ ಪೂಜೆ, ಅಡಿಗೆವೃತ್ತಿ, ಹೆತ್ತವರ ಜವಾಬುದಾರಿ ತೆಗೆದುಕೊಂಡಿರುವ ವ( ಆತ ಸರ್ಜನ್ ಆಗಿದ್ದರೂ) ಬೇಡ. ಮನೆಯಿಂದಲೇ ನಗರಕ್ಕೆ(ತಾಯ್ತಂದೆಯರ ಜೊತೆಗಿದ್ದು) ನಿತ್ಯಾ ಪ್ರಯಾಣಿಸುವಾತ ಎಷ್ಟೇ ಸಂಬಳದವ ಆಗಿರಲಿ; ಅಲ್ಲಿ ನಕಾರ. ಇಲ್ಲಿ ವಿಷಾದದ ವಿಚಾರವೆಂದರೆ ಬಹಳ ಬಹಳ ಯುವಕರು ಅವಿವಾಹಿತರಾಗಿ ದಿನ ದೂಡುತ್ತಾರೆ. ಎಲ್ಲಿ ಕೇಳಿದರೂ ಕನ್ಯೆ ಸಿಗದು. ಸ್ವಜಾತಿಯಲ್ಲಿ ಒಪ್ಪದ ನಿಮಿತ್ತ ಅನೇಕ ತಾಯ್ತಂದೆಯರು ದೂರದೂರುಗಳಿಂದ ಅನ್ಯ ಜಾತಿಯ ಹೆಣ್ಣುಮಕ್ಕಳನ್ನು ಸೊಸೆಯಾಗಿ ಸ್ವೀಕರಿಸುತ್ತಾರೆ. ಆ ಊರುಗಳಲ್ಲಿ ಕಸಮುಸುರೆ ಮಾಡುವ, ನಾಲ್ಕು, ಐದನೆ ಕ್ಲಾಸು ಕಲಿತ ಮೂರುಹೊತ್ತು ಉಣ್ಣುವ ಸೌಲಭ್ಯ ಕೂಡಾ ಇಲ್ಲದ ಮನೆಯಿಂದ ಸಂತೋಷವಾಗಿ ಒಪ್ಪಿ ಮನೆಸೊಸೆಯಾಗಿ ಮನೆತುಂಬಿಸಿಕೊಳ್ಳುತ್ತಾರೆ. ಬಂದಾಕೆ ತಾನೇತಾನಾಗಿ ಹೊಂದಿಕೊಳ್ಳುತ್ತಾಳೆ. ಆಕೆಗೆ ಅದು ಕಾಲಿನ ಬುಡಕ್ಕೆ ಬಂದ ಭಾಗ್ಯ. ಅವಳ ತವರಿನಲ್ಲಿರುವ ಸಾಲವೋ, ಹಣದ ನೆರವೋ ನೀಡಿ , ಚಿನ್ನ ಹಾಕಿ ಮನೆ ಬೆಳಗಲು ಕರೆತರುತ್ತಾರೆ. ನಂತರ ಆಗಾಗ್ಗೆ ಆಕೆಯ ಹೆತ್ತವರು ಮಗಳ ಮನೆಗೆ ಬಂದುಹೋಗುವುದು ಇದ್ದೇಇದೆ. ಹೆತ್ತ ಮಗಳಿಗಿಂತ ಚೆನ್ನಾಗಿ ಅವರು ಬದುಕು ಕಳೆಯುತ್ತಾರೆ. ಕೆಲವಾರು ಕಡೆ ಇಂಥ ಮನೆಗಳಲ್ಲಿ ಕನ್ಯೆಯ ತಂದೆ ಮೊದಲೇ ಮದುವೆ ಆದ ಮಗಳ ತಾಳಿ ಕಳಚಿಸಿ ಆಕೆಯನ್ನು ಕನ್ಯೆ ಎಂದು ತೋರಿಸಿ ದುಡ್ಡು ಸೆಳೆದುಕೊಳ್ಳುವುದಿದೆ. ಅಥವಾ ಆಕೆಗೆ ವಿವಾಹ ಮಾಡಿ ಒಂದೆರಡು ತಿಂಗಳಿದ್ದು ನಂತರ ಪತಿಯ ಮನೆಯಿಂದ ದುಡ್ಡು, ನಗ ದೋಚಿ ಓಡಿಹೋಗುವುದಿದೆ. ಇತ್ತ ವರನಿಗೆ ಕಷ್ಟ. ಮೊದಲೇ ಕನ್ಯೆ ಸಿಗದ ಸಮಸ್ಯೆ; ಹೀಗೆ ಮದುವೆಯ ನಂತರ ದೋಚಿ ಓಡಿಹೋದರೆ ನಂತರ ಆತನ ಮೇಲೇ ದೂರು. ಡೈವೋರ್ಸ್ ಅಷ್ಟೆ!
ಹುಡುಗನ ಹೆತ್ತವರು , ಇಂಥ ವಿವಾಹಗಳಾದರೆ ತಾವು ಆದಷ್ಟು ಮಟ್ಟಿಗೆ ಸೊಸೆಗೆ ಹೊಂದಿಕೊಂಡು ನಡೆಯುವುದು ಮೆಚ್ಚುವ ಮಾತು. ಭಿನ್ನ ಆಹಾರ, ಭಿನ್ನ ಭಾಷೆ, ವಿಭಿನ್ನ ಪರಿಸರ, ಎಲ್ಲದಕ್ಕೆ ಆಕೆ ಹೊಂದಿಕೊಳ್ಳುವಲ್ಲಿ ತುಂಬ ನೆರವಾಗುತ್ತಾರೆ. ತಮ್ಮ ಮಗ ತನ್ನದಲ್ಲದ ತಪ್ಪಿಗೆ ಅಜೀವ ಬ್ರಹ್ಮಚಾರಿಯಾಗಿ ಸವೆಯುವುದರಿಂದ ಈ ಪರಿಹಾರ ಉತ್ತಮ. ತುಂಬು ಸಂಸ್ಕಾರವಂತರ ಮಗಂದಿರಾಗಿ ಯುವಕರು ತಾವು ಅವಿವಾಹಿತರಾಗಿ ನಿಸರ್ಗ ಸಹಜ ಬಯಕೆ ಅದುಮಿಟ್ಟು ಬದುಕು ಕಳೆಯುತ್ತಾರೆ ಹೊರತು ಅಲ್ಲಿ ಅನುಚಿತ ವರ್ತನೆ, ಅತ್ಯಾಚಾರಗಳಿಗೆ ಮುಂದಾಗದೆ ಸಜ್ಜನಿಕೆಯಿಂದ ದಿನ ತಳ್ಳುವುದು ಮೆಚ್ಚುವ ಅಂಶ. ಕಾಸರಗೋಡು, ದಕ್ಷಿಣ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಬಲವಂತದ ಬ್ರಹ್ಮಚಾರಿಗಳಿದ್ದಾರೆ. ವಯಸ್ಸಾದ ಹೆತ್ತವರ ಉಸ್ತುವಾರಿ, ಮನೆಯ ಆಹಾರ ತಯಾರಿ, ಕಸಮುಸುರೆ ಎಲ್ಲ ನಿಶಬ್ದವಾಗಿ ಮಾಡುತ್ತಾರೆ. ಎಲ್ಲ ಹೆತ್ತವರು ದೂರದೂರುಗಳಲ್ಲಿ ಬೆಳೆದ ಕುಲಗೋತ್ರ ಗೊತ್ತಿಲ್ಲದ ಕನ್ಯೆ ತರಲು ಒಪ್ಪುವುದಿಲ್ಲ.ಅಲ್ಲಿ ಮಗನ ದುರವಸ್ಥೆಗೆ ಕ್ಯಾರೇ ಅನ್ನುವುದಿಲ್ಲ. ಅರ್ಧ ಆಯುಸ್ಸು ಮುಗೀತು; ಇನ್ನ್ಯಾಕೆ ಮದುವೆ ಅಂತ ಚುಚ್ಚುವವರು ಸಿಗುತ್ತಾರೆ. ಊರಿನಲ್ಲಿ ಇರುವ ಅನ್ಯ ವರ್ಗದ ಕನ್ಯೆ ತರಬಹುದು; ಅದಕ್ಕೂ ನಕಾರ. ಎರಡುಮೂರು ಮಕ್ಕಳಿದ್ದರೆ ಅಲ್ಲಿ ನಗರವಾಸಿಯಾಗಿ ಸಂಬಳ ಪಡೆದುಕೊಳ್ಳುವವನಿಗೆ ರಾಜಮರ್ಯಾದೆ; ಅಣ್ಣನೇ ಆದರೂ ಮನೆಯಲ್ಲಿ ಕೃಷಿ ಕಾರ್ಯ ಮಾಡುವ ಹಿರಿಮಗ ಅಸಡ್ಡೆಗೆ.
ಸ್ವಜಾತಿಯಲ್ಲಿ ವಿವಾಹಕ್ಕೆ ವಧು ಸಿಗದೆ ಈಗ ಮಲಯಾಳ ನಾಡಿಂದ ಕನ್ನಡನಾಡಿಗೆ ಬಂದು ಕನ್ಯಾಪೇಕ್ಷಿಗಳಾಗಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಾರೆ. ವರದಕ್ಷಿಣೆ, ಚಿನ್ನದ ಅಪೇಕ್ಷೆ ಮಾಯವಾಗಿದೆ. ವಿಧವಾ ವಿವಾಹಗಳು ಸಾಮಾನ್ಯ, ಡೈವೋರ್ಸಿ ಆದರೂ ಒಪ್ಪಿಗೆ. ಆಯ್ಕೆಯ ಪ್ರಶ್ಣೆ ಹೋಗಿ ದೊರೆತರೆ ಭಾಗ್ಯ ಅನ್ನುವ ಆಸೆ. ಹಿಂದೊಮ್ಮೆ ಇದ್ದ ಉಪೇಕ್ಷಾಭಾವ ಇಲ್ಲ, ಕನ್ಯೆ ಒಪ್ಪಿದರೆ ಸಾಕು ಅನ್ನುವ ಆಸೆ. ತಮ್ಮದಲ್ಲದ ತಪ್ಪಿಗೆ ಸಾಂಸಾರಿಕ ಬದುಕು ಸಿಗದೆ ಬಲವಂತದ ಬ್ರಹ್ಮಚಾರಿಗಳಾಗಿ ದಿನ ದೂಡುವವರು ಹೆಚ್ಚಾಗಿ ಬ್ರಾಹ್ಮಣ ಸಮಾಜದವರು ಎನ್ನುವುದೂ ಅಷ್ಟೇ ಸತ್ಯ.
ವಾಸ್ತವ ಚಿತ್ರಣ. ತಮ್ಮ ಮಗಳ ಐಶಾರಾಮಿಜೀವನ ಅಪೇಕ್ಷಿಸುವ ಕನ್ಯಾಪಿತೃಗಳೂ ಇಂಥ ಪರಿಸ್ಥಿತಿಗೆ ಕಾರಣ.