ಪ್ರಶಸ್ತಿ ಅಂಕಣ

ಬರೆಯೋ ಮೂಡಿನ ಹಿಂದೆ: ಪ್ರಶಸ್ತಿ ಪಿ.

ತುಂಬಾ ದಿನವಾಗಿಬಿಟ್ಟಿದೆ. ಏನೂ ಬರೆದಿಲ್ಲ . ಹೌದಲ್ಲಾ ? ಏನಾದರೂ ಬರಿಬೇಕು.  ಹೌದು. ಏನು ಬರಿಯೋದು ? ಬೆಂಗಳೂರು ಬಿಂಟಿಸಿಯಲ್ಲಿನ ಕನ್ನಡ ಪ್ರೇಮದ ಬಗ್ಗೆ ಬರೆಯಲಾ ? ಬನವಾಸಿಗೆ ಹೋದ ನೆನಪುಗಳ ಬಗ್ಗೆ ಬರೆಯಲಾ ? ಬರುತ್ತಿರೋ ಪ್ರೇಮಿಗಳ ದಿನದ ನೆನಪಿಗೆ ಕೈಕೊಟ್ಟ ಪ್ರೀತಿಗಳ ಬಗ್ಗೆ ಬರೆಯಲಾ ? ಮೈಕ್ರೋಸಾಫ್ಟಿನ ಮೂರನೇ ಸಿ.ಇ.ಓ ಸತ್ಯಣ್ಣನ ಬಗ್ಗೆ ಬರೆಯಲಾ ? ಟೀವಿಯಲ್ಲೆಲ್ಲಾ ಸುತ್ತಾಡುತ್ತಿರೋ ನಮೋ-ರಾಗಾ ಅಲೆಯ ಬಗ್ಗೆ ಬರೆಯಲಾ .. ಬರೆಯಬಹುದಾದದ್ದು , ಬರೆಯಲಾಗದ್ದು, ಬರೆಯಬಾರದ್ದು ನೂರೆಂಟು ವಿಷಯಗಳಿವೆಯಲ್ಲಾ. ಯಾವುದ್ರ ಬಗ್ಗೆ ಬರೆಯಲಿ ? ಯಾವುದ್ರ ಬಗ್ಗೆಯಾದ್ರೂ ಆಯ್ತು. ಬರೀಲೆಬೇಕು. ಹೌದು. ಬರಿಬೇಕು. ಆದ್ರೆ ಯಾಕೆ ಬರಿಬೇಕು ? ಯಾರಿಗೋಸ್ಕರ ಬರಿಬೇಕು. ನಾ ಬರೆದಿದ್ದ ಓದ್ತಾರಾ ಯಾರಾದ್ರೂ ? ಸುಮ್ಮನೇ ಬರೆಯುತ್ತಾ ಕೂರೋ ಬದ್ಲು ಹೊದ್ದು ಮಲಗಬಹುದಲ್ಲಾ ? ಛೇ , ಛೇ, ಹಾಗೆಲ್ಲಾ ಇಲ್ಲ. ಒಟ್ಟು ಬರಿಬೇಕು. ಏನಾದ್ರೂ ಬರಿಬೇಕು. ಹೌದು. ಆದ್ರೆ ಈ ಬರಿಯೋದಕ್ಕೆ ಮೂಡು ಅಂತೊಂದು ಬೇಕಲ್ಲಾ ? ಅದೇ ಇಲ್ವೇ ? 
ಥೋ, ಈ ಮೂಡಿಲ್ದೇ ಏನೂ ಮಾಡೋಕಾಗಲ್ಲ. ಹೆಂಗಾದ್ರೂ ಮಾಡಿ ಮೂಡು ತಂದ್ಕೋಬೇಕು. ಆ ಮೂಡಿಗೋಸ್ಕರ ಮೂಡಣದ ರವಿಯಿಂದ ಹಿಡಿದು ಇರುಳ ಶಶಿಯ ತನಕ ಯಾರ ಬಳಿಯಾದರೂ ಬೇಡಲು ಸಿದ್ದನಿದ್ದೇನು. ಮೂಡು ಸಿಗಬೇಕಷ್ಟೇ ? ಯಾರಾದ್ರೂ ಅವರ ಮೂಡ ಉದರಿ ಕೊಟ್ಟಾರೆ ನನಗೆ ? ಅಂತಹ ಉದಾರಹೃದಯಿಗಳು ಯಾರೂ ದಕ್ಕದಿದ್ದರೆ ಎಲ್ಲಿಂದಾದರೂ ಕೊಂಡಾದರೂ ತರಬಹುದೇನೋ ಈ ಮೂಡನ್ನ. ಸುಮ್ಮನೇ ಕೂತು ಕೂತು ಬೇಜಾರಾಯಿತು. ಎಲ್ಲಿ ಸಿಗುತ್ತೋ ಈ ಮೂಡು ಅಂತ ಸ್ವಲ್ಪ ಹುಡುಕೋಣ.

ಒಂದು ಎಫ್ ಎಂ ಸ್ಟೇಷನ್ನು. ಅಲ್ಲಿ ಅಚ್ಚಕನ್ನಡದ ಕಾರ್ಯಕ್ರಮ. ಹಸಿರಿನ್ನು ಉಳಿಸಿ ಬೆಳೆಸೋ ಬಗ್ಗೆ ಮಕ್ಕಳಲ್ಲಿ , ಸಮಾಜದಲ್ಲಿ ಕಾಳಜಿ ಮೂಡಿಸೋ ಒಂದು ಸಂಸ್ಥೆಯ ಮುಖ್ಯಸ್ಥೆಯೊಂದಿಗಿನ ಮಾತುಕತೆ.. ವಾ! ಎಂಥಾ ಸದವಕಾಶ ನಂದು. ಇವರುಗಳ ಮಾತುಗಳ ಅರ್ಧಘಂಟೆ ಕೇಳಿದರೆ ಏನಾದ್ರೂ ಹೊಸ ಹೊಳವುಗಳು ಹೊಳೆಯಬಹುದೇನೋ. ಸುಮ್ಮನೇ ಕೂತು ಕೇಳಿಸಿಕೊಳ್ಳುತ್ತೇನೆ. ಏನು ಮಾತಾಡ್ತಾರೆ ಇವರು ಅಂತ. 
ನಿರೂಪಕಿ: ನಮಸ್ಕಾರ ನಮ್ಮ ಹಸಿರು.. ಕಾರ್ಯಕ್ರಮಕ್ಕೆ ಸ್ವಾಗತ. 
ಸಂಸ್ಥೆಯ ಮುಖ್ಯಸ್ಥೆ: ಥ್ಯಾಂಕ್ಯು, ಥ್ಯಾಂಕ್ಯು, ಐ ಆಮ್ ವೆರಿ ಹ್ಯಾಪಿ ಟು ಬಿ ಹಿಯರ್ ..(ಇದು ಕನ್ನಡ ಬಾನುಲಿಕೇಂದ್ರವೇ ತಾನೇ ? ಮತ್ತೊಮ್ಮೆ ಬೋರ್ಡು ನೋಡಿ ಖಚಿತ ಪಡಿಸಿಕೊಂಡೆ.)

ನಿ: ಹಾ ಹೌದು. ನೀವು ಈ ಕಾರ್ಯಕ್ರಮಕ್ಕೆ ಬಂದಿದ್ದು ನಮಗೂ ತುಂಬಾ ಖುಷಿಯಾಗ್ತಾ ಇದೆ. ಮನೆಯ ಮೊದಲ ಪಾಠಶಾಲೆ ಅಂತಾರೆ. ಅದಾದ ಮೇಲಿನ ಶಾಲೆಯೇ ಶಾಲೆ( ಹೌದು.. ೧೦೦% ಕರೆಕ್ಟು ಬಿಡಿ ಮೇಡಂ). ಈ ಶಾಲಾ ಮಕ್ಕಳಲ್ಲಿ ಎನ್ವಿರಾನ್ಮೆಂಟಿನ ಬಗ್ಗೆ ಕನ್ಸರ್ನ ಕ್ರಿಯೇಟ್ ಮಾಡೋಕೆ ನೀವು ಏನೇನು ಸ್ಟೆಪ್ಸು ತಗೋತಾ ಇದೀರಾ ( ಎದೆ ಧಸಕ್ಕಂತ. ಕೊನೆಯ ವಾಕ್ಯದಲ್ಲಿನ ಪದಗಳು ಕನ್ನಡದವೆಯಾ ? ಛೇ ಇದ್ದರೂ ಇರಬಹುದು. ನಾ ಬರೆಯೋದು ಬಿಟ್ಟು ಸುಮಾರು ಸಮಯ ಆಗೋಗಿದೆ. ಆ ಅವಧಿಯಲ್ಲಿ ಬೇಜಾನು ಕನ್ನಡ ಪದಗಳ ಸೃಷ್ಠಿಯಾಗಿರಬಹುದು!. ಮುಂದೇನಂತಾರೋ ಕೇಳಿಸಿಕೊಳ್ಳೋಣ. )
ಸಂ.ಮು: ನೋಡಿ. ಮಕ್ಕಳಿಗೆ ಸೈಕೋಲಾಜಿಕಲ್, ಫಿಸಿಯೋಲಾಜಿಕಲ್.. (ಆ ವಾಕ್ಯ ಪೂರಾ ಅರ್ಥ ಆಗ್ಲಿಲ್ಲ 🙁 ). ಅದಕ್ಕೇ ನಾವು ಅವೇರನೆಸ್ ಕ್ರಿಯೇಟ್ ಮಾಡ್ತೇವೆ. ಪ್ಲಾಸ್ಟಿಕ್ ರಿಸೈಕ್ಲಿಂಗ್ ಬಗ್ಗೆ.. ಅಯ್ಯೋ ಏನಿದು. ಯಾರೋ ಒದಿತಾ ಇದ್ದಾಗೆ ಇದೆ. ಓ,ಇದು ಯಾರೋ ಅಲ್ಲ. ನನ್ನೊಳಗಿಹ ಕನ್ನಡಿಗ. ಕನ್ನಡದ ಭರ್ಭರ ಹತ್ಯೆ ನಡೀತಿರೋ ಜಾಗದಲ್ಲಿ ಕನ್ನಡದಲ್ಲಿ ಬರೆಯೋ ಮೂಡು ಹುಡುಕಲು ಬಂದೆನಲ್ಲಾ ಛೇ..

ಹಾಗೇ ಮುಂದೆ ಬರುತ್ತಿದ್ದಾಗ ಮತ್ಯಾವುದೋ ಬಾನುಲಿಯ ದನಿ ಅಲೆಯಲೆಯಾಗಿ ತೇಲಿಬರುತ್ತಿತ್ತು. ಗೆಳೆಯರೆ ಇದು ಆಕಾಶವಾಣಿ ಬಾನುಲಿಕೇಂದ್ರ. ತರಂಗಾಂತರ ೧೦೦. ವಾವ್ ಅನಿಸಿಬಿಟ್ತು. ಅಲ್ಲಿ ಮತ್ತಿನ್ಯಾವುದೋ ಕಾರ್ಯಕ್ರಮ. ನಿರೂಪಕಿಯ ಮತ್ತು ಭಾಗವಹಿಸಿದ್ದೋರ ಕನ್ನಡ ಮಾತುಗಳ ಕೇಳ್ತಾ ಇದ್ರೆ ಹಿಂದಿನ ಕೇಂದ್ರದಲ್ಲಿ ಉಗ್ರ ಪ್ರತಿಭಟನೆ ಮಾಡೋ ಮನಸ್ಸುಮಾಡಿದ್ದ ವೀರ ಕನ್ನಡಿಗ ಮಂತ್ರಮುಗ್ದನಾಗಿ ಕೂತು ಬಿಟ್ಟಿದ್ದ. ಕಾರ್ಯಕ್ರಮ ಮುಗಿದರೂ ಅವನನ್ನು ಎಬ್ಬಿಸೋದೇ ದೊಡ್ಡ ಸಾಹಸವಾಗಿಬಿಟ್ತು. ಕಾರ್ಯಕ್ರಮ ಮುಗಿಯೋದ್ರೊಳಗೆ ಕನ್ನಡ ಗೊತ್ತಿದ್ರೂ ಬೇಕಂತ್ಲೇ ಆಂಗ್ಲದ ಕಲೆಬೆರಕೆ ಮಾಡೋ ಇಂತಹ ಮಾರಮ್ಮಗಳ ಬಗ್ಗೆ ಬರಿಬೇಕೆನ್ನೋ ಮೂಡು ಬಂದು ಬಿಟ್ತು. ಹೌದು ಎಷ್ಟು ಸೊಕ್ಕಲ್ವಾ ಇವ್ರಿಗೆ. ಇವ್ರು ಮಾಡ್ತಿರೋದು ಕರ್ನಾಟಕದಲ್ಲಿನ ಕನ್ನಡ ಕಾರ್ಯಕ್ರಮ. ಮಾತಾಡ್ತಿರೋರಿಬ್ರೂ ಕನ್ನಡದವ್ರು. ಕೇಳುಗರೆಲ್ರೂ ಕನ್ನಡದವ್ರೇ . ಆದ್ರೂ ಮಾತಾಡೋದು ಇಂಗ್ಲೀಷಲ್ಯಾಕೆ ? ಕನ್ನಡ ಪದಗಳು ನೆನಪಾಗೋಲ್ವೇ ? ಮಧ್ಯ ಮಧ್ಯ ಇಂಗ್ಲೀಷ್ ನುಸುಳಿದರೆ ಅದು ತಪ್ಪಲ್ಲ. ಆದರೆ ಕನ್ನಡ ಕಾರ್ಯಕ್ರಮವ ಇಂಗ್ಲೀಷಲ್ಲಿ ನಡೆಸಿಕೊಟ್ಟು ಮಧ್ಯ ಮಧ್ಯ ಕನ್ನಡ ನುಸುಳಿಸಿದ್ರೆ ? ಕನ್ನಡ ಪದಗಳ ಹುಡುಕಲಾರದಷ್ಟು ಸೋಂಬೇರಿತನವೋ ಸೋಗಲಾಡಿತನವೋ ಇದು ಗೊತ್ತಾಗ್ತಿಲ್ಲ. ಇವರ ಬಗ್ಗೆ ಉಗ್ರ ಪ್ರತಿಭಟನೆ ಮಾಡ್ಲೇ ಬೇಕು. ಕೊನೆ ಪಕ್ಷ ಒಂದು ಪ್ಯಾರಾ ಲೇಖನವನ್ನಾದ್ರೂ ಬರೆದು ನನ್ನ ಅಭಿಪ್ರಾಯ ವ್ಯಕ್ತಪಡಿಸ್ಬೇಕು ಅನ್ನಿಸೋಕೆ ಶುರು ಆಯ್ತು. ಆದರೆ ಇಷ್ಟು ಮೂಡು ಸಾಕಾ ? ಗೊತ್ತಿಲ್ಲ. ಇನ್ನೊಂದಿಷ್ಟು ಹುಡುಕೋಣ. 

ಬೆಂಗಳೂರಲ್ಲಿ ಕನ್ನಡ ಉಳಿದಿರೋದು , ಸ್ನೇಹಿತರಲ್ಲದಿದ್ರೂ, ಪರಿಚಯ ಇಲ್ದೇ ಇದ್ರೂ ಎಲ್ಲೆಡೆ  ಕನ್ನಡಿಗರೇ ಮಾತಾಡೋಕೆ ಸಿಗೋದು ಬೆ.ಮ.ಸಾ.ಸಂ ಬಸ್ಸುಗಳಲ್ಲಿ ಮಾತ್ರ  ಅಂತಿದ್ರು ಒಬ್ರು. ಅದು ಹೌದೋ ಅಲ್ವೋ ಅಂತ ಪರೀಕ್ಷಿಸೋ ಧಾವಂತದಲ್ಲಿ ಬೆ.ಮ.ಸಾ.ಸಂ ಬಸ್ಸು ಏರಿದ್ದಾಯ್ತು. ಅಪರೂಪಕ್ಕೆಂಬಂತೆ ಆ ಬಸ್ಸಿನಲ್ಲೂ ಬಾನುಲಿ ಹಾಕಿರಬೇಕಾ? ಡ್ರೈವರನ ಹಿಂದೆ, ಕೊನೆಯ ಸೀಟಿನ ಮೇಲೊಂದು ಸ್ಪೀಕರ್ ಬೇರೆ ಅದಕ್ಕೆ. ಪರವಾಗಿಲ್ವೇ ನಮ್ಮ ಬೆಂಗಳೂರು ಸಾರಿಗೆ ಸಾಕಷ್ಟು ಸುಧಾರಿಸಿದೆ ಅಂತಾಯ್ತು. ಕನ್ನಡದ ರಸಿಕರ ರಾಜ ರವಿಚಂದ್ರನ್ ಅವರ ಚಿತ್ರದ ಯಾರಿಗೆ ಬೇಕು ಈ ಲೋಕ ,.. ಮೋಸಕ್ಕೆ ಕೈಯ ಮುಗಿಬೇಕಾ .. ಕೇಳಿಬರ್ತಾ ಇತ್ತು. ಪರ್ವಾಗಿಲ್ವೇ ಪ್ರೇಮಿಗಳ ದಿನ ಹತ್ತಿರ ಬರ್ತಾ ಇದ್ದಂಗೆ ಎಲ್ಲೆಡೆ ಇವೇ ಹಾಡುಗಳ್ನ ಹಾಕ್ತಾ ಇದ್ದಾರಲ್ಲ ಅನಿಸ್ತು. ಅಂಗಡಿಯವನತ್ರ ಸಾಮಾನನ್ನು ಕನ್ನಡದಲ್ಲಿ ಕೇಳಿದರೆ ಅವ ಆಂ ಆಂ ಅಂತ ಮೂರು ಸಲ ಅಂದ ಮೇಲೆ ಅದನ್ನೇ ಅವನಿಗೆ ಇಂಗ್ಲೀಷಲ್ಲೋ, ಹಿಂದಿಯಲ್ಲೋ ಮೂಮ್ ದಾಲ್ ಅಂತಲೋ, ಗ್ರೀನ್ ದಾಲ್ ಅಂತಲೋ ಹೇಳಿ ತರಿಸಿಕೊಳ್ಳೋ ಪರಿಸ್ಥಿತಿ ಬಂದಿರೋ ಬೆಂಗಳೂರಲ್ಲಿ ಸಾಮಾನ್ಯ ಬಸ್ಸೊಂದರಲ್ಲಿ ಕನ್ನಡ ಹಾಡು ಕೇಳಿ ನಿಜಕ್ಕೂ ಖುಷಿ ಆಯ್ತು. ಡ್ರೈವರೂ ಕನ್ನಡದವನೇ. ಕರ್ನಾಟಕವೆಂದ ಮೇಲೆ ಇಲ್ಲಿಯವನೇ ಇರಬೇಕಲ್ಲವೇ ಅನ್ನೋ ಪ್ರಶ್ನೆ ಬೇರೆ ಬಿಡಿ. ಮುಂದಿನ ಸೀಟಿನಲ್ಲೇ ಕೂತ ನನ್ನೊಂದಿಗೆ ಅವನೂ ಖುಷಿ ಖುಷಿಯಾಗಿ ಕನ್ನಡದಲ್ಲಿ ಮಾತಾಡೋಕೆ ಶುರು ಮಾಡಿದ. ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ, ವಿಳಾಸ ಕೇಳಿದ್ರೆ ಗೊತ್ತಿಲ್ದೆದ್ರೂ ತಪ್ಪು ತಪ್ಪು ಹೇಳಿ ದಾರಿ ತಪ್ಪಿಸೋ ಆಷಾಢಭೂತಿಗಳ ಬಗ್ಗೆ, ಇನ್ಮೇಲೆ ಕೆಳಗೆ ಇಸವಿ ನಂಬರಿಲ್ಲದ ನೋಟುಗಳು ಚಲಾವಣೆಯಿಂದ ದೂರಾಗೋದ್ರ ಬಗ್ಗೆ ಮಾತು ಹರೀತಿತ್ತು. ನಮ್ಮಿಬ್ಬರ ಕನ್ನಡ ಕೇಳಿ ಇನ್ನೊಂದಿಷ್ಟು ಹಿರಿ, ಮರಿ ಜೀವಗಳೂ ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು, ಮುಗುಳ್ನಗೆ ಸೂಸಿ ನಮ್ಮನ್ನೇ ನೋಡ್ತಾ ಇದ್ವು. ಅಥವಾ ನಂಗೆ ಹಂಗನಿರ್ಲೂಬೋದು. ಅಣ್ಣಾ ಒಂದು ಹೆ. ಎ.ಎಲ್ ಕೊಡಿ, ಒಂದು ದೊಮ್ಮಲೂರು ಅಂತಿದ್ದ ಹತ್ತುವವರು, ಕಷ್ಟಪಟ್ಟು ಮಾತಾಡಿದಂತೆ ಮೂರು ರೂ ಚಿಲ್ರೆ ಅಂತಿದ್ದ ಉತ್ತರದ ಪ್ರಯಾಣಿಕರ ನೋಡಿ ನಿಜಕ್ಕೂ ಆಶ್ಚರ್ಯ ಆಯ್ತು. ಕನ್ನಡಿಗರೇ ತ್ರೀ ರುಪೀಸ್ ಚೇಂಜ್ ಕೊಡ್ಬೇಕಿತ್ತಲ್ವಾ ಅಂತ ಶುರು ಮಾಡೋ ಪರಿಸ್ಥಿತಿಯಲ್ಲಿ ಬೇರೆಯವರು ಕನ್ನಡ ಕಲಿತು ಮಾತಾಡೋದು ನಿಜಕ್ಕೂ ಖುಷಿ ಕೊಡ್ತಿತ್ತು. ಬಹುಷಃ ವಾತಾವರಣದ ಪ್ರಭಾವವೂ ಇದ್ದಿರಬಹುದು. ಹಿಂದಿಯವರ ಜೊತೆ ಹಿಂದಿಯಲ್ಲಿ, ತಮಿಳರ ಜೊತೆ ತಮಿಳಲ್ಲಿ, ತೆಲುಗರ ಜೊತೆ ತೆಲುಗು ಕಲಿತು ಮಾತಾಡಿದರೆ ಅವರು ಕನ್ನಡ ಕಲಿಯೋದಾದ್ರೂ ಹೇಗೆ ? ಇದ್ರ ಬಗ್ಗೇನೂ ಬರಿಬೇಕು ಅನ್ನೋ ಧೃಢ ನಿರ್ಧಾರ ಮೂಡಿತ್ತು. ಆದ್ರೆ ಇಷ್ಟು ಮೂಡು ಸಾಕಾ ? ಇನ್ನೊಂಚೂರು ಬೇಕು ಅನಿಸ್ತಿತ್ತು. ಏನಾದ್ರೂ ಓದಿದ್ರೆ ಸ್ವಲ್ಪ ಮೂಡು ಬರ್ಬೋದೇನು ಅಂತ ಇವತ್ತಿನ ವೃತ್ತ ಪತ್ರಿಕೆ ತೆಗೆದ್ರೆ ಸತ್ಯಂ ನಡೇಲಾ ಅಂತ ದೊಡ್ಡಕ್ಷರಗಳಲ್ಲಿ ಸುದ್ದಿ. 

ಯಾರಿವ ನಡೆಲ್ಲ ಅನ್ನೋ ಕುತೂಹಲಕ್ಕೆ ಪೇಪರ್ ಓದಿದ್ರೆ ಮೈಕ್ರೋಸಾಫ್ಟಿನ ಮೂರನೇ ಮುಖ್ಯಸ್ಥನಾಗಿರೋ ಭಾರತೀಯ ಸತ್ಯಂ ನಡೆಲ್ಲ ಅವರ ಬಗ್ಗೆ ಬಂದಿತ್ತು. ಅವರ ಬಗ್ಗೆ ಓದ್ತಾ ಓದ್ತಾ ನಿಜಕ್ಕೂ ಹೆಮ್ಮೆ ಅನಿಸ್ತು. ಎಲ್ಲಕ್ಕಿಂತಾ ಜಾಸ್ತಿ ತಟ್ಟಿದ್ದು ಅವರ ಒಂದು ಮಾತು. " ನಾನು ಮುಗಿಸೋಕೆ ಸಾಧ್ಯವಾಗೋದಕ್ಕಿಂತ ಹೆಚ್ಚು ಅಂತರ್ಜಾಲ ಕೋರ್ಸುಗಳಿಗೆ ಸೇರ್ಕೋತೀನಿ. ಓದೋಕೆ ಸಾಧವಾಗೋದಕ್ಕಿಂತ ಹೆಚ್ಚು ಪುಸ್ತಕ ಖರೀದಿಸ್ತೀನಿ. ನಿರಂತರವಾಗಿ ಹೊಸದು ಕಲೀತಾನೆ ಇರಬೇಕೆನ್ನೋ ನನ್ನ ಉತ್ಸಾಹವೇ ನನ್ನನ್ನೀ ಹಂತಕ್ಕೆ ತಂದು ನಿಲ್ಲಿಸಿರೋದು " ಅಂತ. ವಾವ್ ಹೌದಲ್ವಾ ? ನಾನು ದಿಕ್ಷುದ್ದವಾಗಿ ಪುಸ್ತಕವೊಂದನ್ನು ಓದಿ ಎಷ್ಟು ದಿನಗಳಾಯ್ತು. ಏನೂ ಓದದೇ ಬರೆಯೋದು ಹೇಗೆ ? ಬರೆಯೋ ಸ್ಪೂರ್ತಿಯಾದರೂ ದಕ್ಕೋದು ಎಲ್ಲಿಂದ. ಶೂನ್ಯದಿಂದ ಸೃಷ್ಟಿ ಬರೀ ಬಾಬಾಗಳಿಗೆ ಮಾತ್ರ ಸಾಧ್ಯ. ನಮಗಲ್ಲ ಅನಿಸೋಕೆ ಶುರು ಆಯ್ತು.. ಹೌದು ಓದಬೇಕು. ಅದಿದು ಅಂತಲ್ಲ. ಓದಬೇಕೆಂದಿದ್ದು ಸಿಕ್ಕೋವರೆಗೆ ಕಾಯೋ ಬದಲು ಸಿಕ್ಕಿದ್ದನ್ನು ಓದಬೇಕು.. ಆಗಲೇ ಬರೆಯೋ ಮೂಡು ಬರೋಕೆ ಸಾಧ್ಯ ಅನಿಸೋಕೆ ಶುರುವಾಗಿದೆ. ಹೌದು ಓದಬೇಕು, ಇನ್ನಷ್ಟು, ಮತ್ತಷ್ಟು . ನನ್ನೊಳಗಿನ ಭಾವಗಳು , ನೋವುಗಳು ಪಕ್ವವಾಗುವ ತನಕ, ಅವಕ್ಕೊಂದು ಆಕಾರ ದಕ್ಕುವ ತನಕ. ಭಾವಕ್ಕೊಂದು ಮೂರ್ತ ರೂಪ ಸಿಕ್ಕಾಗ ಮಾತುಗಳು, ಶಬ್ದಗಳು ತಾನಾಗೇ ಸೃಷ್ಠಿಯಾಗುತ್ತೆ. ಮೂಡು ತಾನಾಗೇ ಬರುತ್ತೆ ಅನಿಸೋಕೆ ಶುರು ಆಯ್ತು.. ಹಾಗೇ ಸಿಕ್ಕಿದ ಏನೋ ಒಂದರ ಓದಿನಲ್ಲಿ.. ಮುಗಿದ ನಂತರ ಮತ್ತೆ ಸಿಗುತ್ತೇನೆ.. ಮೂಡು ಸಿಕ್ಕಿತೋ ಇಲ್ಲವೋ ಹೇಳುತ್ತೇನೆ.. ಅಲ್ಲಿಯವರೆಗೆ  ಶುಭದಿನ.

****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಬರೆಯೋ ಮೂಡಿನ ಹಿಂದೆ: ಪ್ರಶಸ್ತಿ ಪಿ.

  1. ಥ್ಯಾಂಕ್ಯು, ಥ್ಯಾಂಕ್ಯು, ಐ ಆಮ್ ವೆರಿ ಹ್ಯಾಪಿ ಟು ಬಿ ಹಿಯರ್.ನಿಜ ಪ್ರಶಸ್ತಿ.ಲೇಖನ ಪ್ರಸ್ತುತವಾಗಿದೆ.

  2. ಎಲ್ಲರೂ ಕಂಗ್ಲೀಷಿನ ಬಗ್ಗೇನೇ ಬರೀತಿದ್ದಾರೆ, ಪರ್ಹ್ಯಾಪ್ಸ್ ನಂ ಕೈಲಾಸಂ ಅವ್ರಿಗೆ ಈ ಟ್ರೆಂಡ್ ಸ್ಟಾರ್ಟ್ ಮಾಡೋವಾಗ ಇದು ಇಷ್ಟೊಂದ್ ಡೇಂಜರಸ್ ಇಂಪಾಕ್ಟ್ ಕ್ರಿಯೇಟ್ ಮಾಡತ್ತೆ ಅನ್ನೋ ಐಡಿಯಾ ಇರ್ಲಿಲ್ವೇನೋ?! 🙂

Leave a Reply

Your email address will not be published. Required fields are marked *