ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು.
ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು ಗೆಲ್ಲಬೇಕೆಂಬ ತುಡಿತಗಳೇ ಮೂಲ ಕಾರಣ. ಇತ್ತೀಚೆಗಂತೂ ವಿದ್ಯಾರ್ಥಿಗಳು ಈ ಹಿಂದಿನಂತೆ ಬರೆದು ಅಭ್ಯಸಿಸುವುದು ಕಡಮೆ. ನೋಟ್ಸುಗಳ ಜೆ಼ರಾಕ್ಸುಗಳ ಗೈಡುಗಳ ಮೊರೆ ಹೋದ ಮೇಲೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳುವುದಾದರೆ ಟ್ಯಾಬುಗಳ ಮೊಬೈಲುಗಳ ಸ್ಕ್ರೀನುಗಳ ಸರ್ಫಿಸಿ ಕಣ್ಣಾಡಿಸುವುದು ಬಂದ ಮೇಲೆ ಬರೆಯುವ ಪ್ರಾಕ್ಟೀಸು ಹೊರಟೇ ಹೋಗುತಿದೆ.
ಆದರೆ ಏಕಚಿತ್ತತೆಯಿಂದ ಪರೀಕ್ಷೆಗಳನ್ನು ಬರೆಯುವ-ನಾವಿನ್ನೂ ಪೂರ್ಣಪ್ರಮಾಣದಲಿ ಆನ್‌ಲೈನಾಗಿಲ್ಲ- ಸಂದರ್ಭದಲಿ ಬರೆಹ ಹೇಗೆ ಸಾಧ್ಯವಾಗುತ್ತದೆ? ಅಭ್ಯಾಸವಿಲ್ಲದೆ ನೇರವಾಗಿ ಪರೀಕ್ಷೆಯಲ್ಲಿ ಬರೆಯುವುದರಿಂದಲೇ ತಪ್ಪುಗಳಾಗುವುದು, ವೇಗ ಸಿದ್ಧಿಸದಿರುವುದು ಮತ್ತು ವಾಕ್ಯಗಳಲ್ಲಿ ತಾಳಮೇಳವಿಲ್ಲದಿರುವುದು. ನಮ್ಮ ವಿದ್ಯಾರ್ಥಿಗಳು ಮೊಬೈಲಾನ್ ಮಾಡಿ ಅದ ನೋಡುತ್ತಾ ಅಸೈನ್‌ಮೆಂಟ್ ಬರೆಯುತಿದ್ದುದನು ಕಣ್ಣಾರೆ ನೋಡಿಯೇ ಈ ಮಾತು ಹೇಳುತಿರುವುದು. ಎಲ್ಲಿಗೆ ಬಂತು? ಬರೆಹದ ದುಃಸ್ಥಿತಿ ಎಂದುಕೊಂಡೆ.
ಹತ್ತು ಸಲ ಓದುವುದಕಿಂತ ಒಂದು ಸಲ ಬರೆಯುವುದು ಪರಿಣಾಮಕಾರಿ ಎಂದು ಹಿಂದೆ ಹೇಳುತಿದ್ದರು. ಇದರ ಅಂತರಾಳ ನಮಗೆ ವೇದ್ಯವಾಗಿತ್ತು. ಜೊತೆಗೆ ಹೆಚ್ಚು ಓದಿಕೊಂಡಾಗ ಬರೆಹ ಸಲೀಸು. ‘ಓದು ಬರೆಹಕೆ ಶತ್ರು’ ಎಂಬ ಮಾತೂ ಇದೆ. ಹಿಂದಿನ ವಿದ್ವಾಂಸರಂತೆ ನಾವೀಗ ‘ಅಷ್ಟೊಂದು’ ಓದುತಿಲ್ಲವಾದುದರಿಂದ ಬರೆಯದೇ ಇರುವುದಕೆ ಇದನು ಕಾರಣ ಮಾಡಿ ನುಣುಚಿಕೊಳ್ಳಬೇಕಿಲ್ಲ! ಈಗಂತೂ ನಾವೆಲ್ಲ ಬರೆಯುವುದು ಕಡಮೆ; ನೇರವಾಗಿ ಕಂಪ್ಯೂಟರಿನಲಿ ಟೈಪಿಸುವುದೇ ಹೆಚ್ಚು. ಪೆನ್ನು ಹಿಡಿಯುವ ಕೈ ಕೀಬೋರ್ಡಿನ ಮೇಲೆ ನಾಟ್ಯವಾಡುತ್ತದೆ ಅಷ್ಟೇ. ಹೆಚ್ಚೇನೂ ವ್ಯತ್ಯಾಸವಿಲ್ಲ. ನನ್ನನೇ ನಾ ಗಮನಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೇಳುವುದಾದರೆ, ಬರೆಯುವಾಗ ಹೆಚ್ಚು ಆಲೋಚಿಸುತ್ತೇನೆ; ಟೈಪಿಸುವಾಗ ಸರಾಗ ಸಿದ್ಧಿಸುತ್ತದೆ. ಬೇಡವೆನಿಸಿದ ವಾಕ್ಯಗಳನ್ನು ಡಿಲೀಟಿಸುವುದು ಸುಲಭ, ಅದಕಿರಬಹುದು. ಮನಸಿನ ಸ್ವಚ್ಛಂದದ ಅಭಿವ್ಯಕ್ತಿಗೆ ಇದು ಹೇಳಿ ಮಾಡಿಸಿದ ವಿಧಾನ. ಜೊತೆಗೆ ಪೆನ್ನಲಿ ಬರೆಯುವುದಕಿಂತ ಟೈಪಿಸುವಾಗ ಹೆಚ್ಚು ಪ್ರಾಮಾಣಿಕವಾಗಿರುತ್ತೇವೆ. ಏನೋ, ಇದನ್ನು ನಿಯಮ ಮಾಡಲಾಗದು. ಅವರವರ ಅನುಕೂಲ ಎಂದು ಸುಮ್ಮನಾಗಬೇಕು. ಆದರೆ ಬರೆಯುವುದು ಎಷ್ಟು ಮುಖ್ಯವೋ, ಬರೆಯುವಾಗಿನ ಮನಸ್ಥಿತಿ ಮತ್ತು ಪರಿಸ್ಥಿತಿ ಅಷ್ಟೇ ಮುಖ್ಯ. ಪದೇ ಪದೇ ಮೊಬೈಲು ನೋಡದೆ, ಕುಟುಂಬದ ಸದಸ್ಯರೊಂದಿಗೆ ಮಾತಾಡದೆ, ಏಕಾಂತವನ್ನು ನಿರ್ಮಿಸಿಕೊಳ್ಳುವುದು ಅಷ್ಟೇ ಪ್ರಮುಖ. ಮನಸನ್ನು ಹದಗೊಳಿಸಿಕೊಳ್ಳುವುದು ಇನ್ನೂ ಪ್ರಮುಖ. ಬೆಳೆಯುವ ಮುನ್ನ ಭೂಮಿಯನು ಹದ ಮಾಡುವ ತೆರದಿ ಈ ಕಾಯಕ.
ಅಂದರೆ ಬರೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭದ್ದಲ್ಲ. ಬರೆಯುತ್ತ ಹೋಗಬೇಕು ಅಷ್ಟೇ ಎಂಬ ದಾಢಸಿ ಉತ್ತರ ಸಿಕ್ಕೀತು. ಬರೆಹ ಒಂದು ತಪಸ್ಸು. ಕುವೆಂಪು, ಕಾರಂತ, ಭೈರಪ್ಪ ಎಲ್ಲರೂ ಇಂಥ ತಪಸ್ವಿಗಳು. ಸಾವಿರಾರು ಪುಟಗಳನ್ನು ಅದೂ ಶುದ್ಧ ಸೃಜನಶೀಲವನ್ನು ಬರೆಯುವುದೆಂದರೆ ಹುಡುಗಾಟಿಕೆಯಲ್ಲ. ಏನೋ ಒಂದನ್ನು ಗೀಚುವುದು ಬರೆಹವಲ್ಲ. ಮನಸಿನಲಿ ಬಂದಿದ್ದನೆಲ್ಲ ಸ್ಖಲಿಸುವುದು ಸಾಹಿತ್ಯವಲ್ಲ!
ಬರೆಯುವವರು ಯಾರಿಗೆ? ಏನನ್ನು? ಎಷ್ಟು? ಯಾವ ರೂಪದಲ್ಲಿ? ಬರೆಯಬೇಕೆಂದು ತೀರ್ಮಾನಿಸಿಯೇ ಕುಳಿತುಕೊಳ್ಳುತಾರೆ. ಅವರ ಕಣ್ಣ ಮುಂದೆ ಅಸ್ಪಷ್ಟವಾದ ಒಂದು ಓದುಗವರ್ಗ ಹಾದು ಹೋಗುತ್ತದೆ. ಏನನು ಯಾವ ರೂಪದಲಿ ಬರೆಯಬೇಕೆಂಬುದು ನಿರ್ಧಾರವಾದ ಮೇಲೆಯೇ ಕೆಲವರ ಬರೆಹಗಳು ರೂಪ ತಾಳುತ್ತವೆ.
ಹಾಗಾಗಿ ಗದ್ಯಕಿಂತ ಪದ್ಯ ಕಷ್ಟವಾಗಿತ್ತು ಹಿಂದೆ. ಛಂದಸ್ಸು, ಲಯ, ಗೇಯತೆ, ವ್ಯಾಕರಣಾಂಶಗಳ ನಿಯಮಾನುಸಾರ ಬರೆಯಬೇಕಿತ್ತು. ತಾಳೆಗರಿಯಲ್ಲಿ ಅಕ್ಷರಶಃ ಕೊರೆಯಬೇಕಿತ್ತು. ಬರೆಯುವ ಮುಂಚೆ ಹಲಗೆ-ಬಳಪವ ಬಳಸಬೇಕಿತ್ತು. ಅಲ್ಲಿ ಛಂದಸ್ಸನು ಸರಿ ಮಾಡಿಕೊಂಡು ತದ ನಂತರ ನಕಲಿಸಬೇಕಿತ್ತು. ಕುಮಾರವ್ಯಾಸನಂಥವನು ಹಲಗೆ ಬಳಪವ ಹಿಡಿಯಲೇ ಇಲ್ಲವಂತೆ, ಅದೇ ಆತನ ಅಗ್ಗಳಿಕೆ! ಅಂದರೆ ನೇರ ತಾಳೆಗರಿಯಲಿ ಆತ ಕೊರೆದದ್ದಂತೆ! ಆತನೇ ಹೇಳಿಕೊಳ್ಳುತ್ತಾನೆ. ನೋಡಿದವರು ಯಾರೂ ಇಲ್ಲ!
ಮುಕ್ತ ಛಂದಸ್ಸು ಪರಿಚಯವಾದ ಮೇಲೆ ಪದ್ಯ ಬರೆಯುವುದು ಸುಲಭವಾಯಿತು; ಗದ್ಯವೇ ಕಷ್ಟವಾಯಿತು! ಹಾಗಾಗಿಯೇ ಅಷ್ಟೊಂದು ಕವನ ಸಂಕಲನಗಳು ಹೆತ್ತುಕೊಂಡಿವೆ. ಕತೆ-ಕಾದಂಬರಿ ಬರೆಯುವುದು ಕಷ್ಟ, ಲಲಿತ ಪ್ರಬಂಧಗಳನ್ನು ಬರೆಯುವುದಕಿಂತಲೂ. ಪಾತ್ರ-ಸನ್ನಿವೇಶ ಮತ್ತು ಸಂವಿಧಾನ ಮುಂತಾದ ಪರಿಕರವು ಏಕಸೂತ್ರತೆಯಲ್ಲಿ ಬಂಧಗೊಳ್ಳುವುದೇ ಇದಕ್ಕೆ ಕಾರಣ. ಯಾವತ್ತೂ ಸೃಜನಪ್ರಧಾನ ರಚನೆಗಳು ಮೇಲುಗೈ ಸಾಧಿಸುತ್ತವೆ. ಚಿಂತನಪ್ರಧಾನ ಬರೆಹಗಳು ಅವುಗಳ ನಂತರವಷ್ಟೇ.
ಬುದ್ಧಿ ಭಾವಗಳ ವಿದ್ಯುದಾಲಿಂಗನವೇ ಇಂಥ ಪ್ರತಿಭಾಶಾಲಿಗಳ ಬರೆಹದ ಲಕ್ಷಣ. ಸಾಹಿತ್ಯ ಮೀಮಾಂಸೆಯಲ್ಲಿ ಇದನೆಲ್ಲ ಓದಿ ಅರಿವಾಗಿಸಿಕೊಳ್ಳಲು ಸಾಧ್ಯ. ಹಾಡುತ್ತ ಹಾಡುತ್ತ ರಾಗ ಎಂದಂತೆ ಬರೆಯುತ್ತ ಬರೆಯುತ್ತ ಬರೆಹ, ಅಷ್ಟೇ. ಅನುಭವ ದಟ್ಟವಿದ್ದಷ್ಟೂ ಅಭಿವ್ಯಕ್ತಿ ಗಾಂಭರ್ಯತ ಪಡೆದುಕೊಳ್ಳುತ್ತದೆ. ಮೊದ ಮೊದಲಿಗೆ ಸುದ್ದಿಗಳನು ಬರೆಯುತ್ತ ಕೈ ಪಳಗಿದ ಮೇಲೆ ಲೇಖನಗಳನು ಬರೆಯಲು ತೊಡಗುವುದು ಬರೆವಣಿಗೆಯ ಪ್ರಾಥಮಿಕ ಗುಣ. ಪುಟಗಳ ಮತ್ತು ಪದಗಳ ಮಿತಿಯಲಿ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಬರೆದು ಮುಗಿಸುವುದೊಂದು ಕಲೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಸ್ವಂತ ಅನುಭವದಿಂದಷ್ಟೇ ಕಂಡುಕೊಳ್ಳಬೇಕು. ಇಂಥ ಸವಾಲು ಯಾವತ್ತೂ ಪತ್ರಿಕೋದ್ಯಮದ ಗುಣಲಕ್ಷಣ. ಕಡಮೆ ಪದಗಳಲ್ಲಿ ಹೆಚ್ಚು ಹೇಳುವ ಶೈಲಿಯೇ ಅಲ್ಲಿ ಮಾನ್ಯ.
ಹಾಗಾಗಿ ಬರೆಯವುದು ಹೇಗೆ? ಎಂಬ ಪ್ರಶ್ನೆಯು ಬರೆಯುವುದು ಹೀಗೆಯೇ ಎಂಬಂಥ ಉತ್ತರಕೆ ಮೂಲವಾಗುತ್ತದೆ. ಬರೆಹ ಮಕ್ಕಳ ತರಹ- ಮುಗ್ಧತೆಯ ನೆಲೆಗಳನ್ನು ಅನ್ವೇಷಿಸುವುದೇ ನೈಜತೆ; ಅಹಮನು ಪೋಷಿಸುವುದು ಬರೆಹವಾಗದು. ಅಹಮಿನ ನೆಲೆಗಳನ್ನು ಶೋಧಿಸುವುದು ನಿಜ ಬರೆಹದ ದಿಕ್ಕು ದೆಸೆ. ಸತ್ಯಕಾಮರಂಥ ಸಂತಸಾಹಿತಿ ಹೇಳುತಿದ್ದರು ಕೊನೆಗೆ: ‘ಬರೆಯುವುದೇ ಅಹಂಕಾರ ಎಂದು!’ ನಿಜ, ಹಲವು ಸಾಹಿತಿಗಳನ್ನು ಕಂಡಾಗ ಮತ್ತು ಅವರು ಬರೆದದ್ದನ್ನು ಓದಿದಾಗ ಇವರು ಅಹಂನ ನೆಲೆಗಳನ್ನು ಶೋಧಿಸುವ ಬದಲು ಪೋಷಿಸಿದ್ದಾರೆಂದು ಮನವರಿಕೆಯಾಗುವುದು. ಯಾರೇ ಆಗಲಿ, ಬರೆಯುವವರು ಬೀಗಬಾರದು, ಬೀಗಿದರೆ ಸಾಹಿತ್ಯದ ಆಂರ್ಯನ ಅರ್ಥವಾಗುವುದಿಲ್ಲ. ಸಾಹಿತಿಗಳು ಸರ್ವಜ್ಞರಲ್ಲ ಮತ್ತು ಸಾಹಿತ್ಯವೇ ಅಂತಿಮವಲ್ಲ! ಜೊತೆಗೆ ಬರೆದದ್ದನ್ನು ಮರೆತು ಬಿಡಬೇಕು, ಇಲ್ಲದಿದ್ದರೆ ಹೊಸತು ಹುಟ್ಟುವುದಿಲ್ಲ. ಟಾಲ್‌ಸ್ಟಾಯ್-ಟಾಗೋರ್-ರೂಮಿ-ಗಿಬ್ರಾನ್-ಪಂಪ-ಅಲ್ಲಮ-ಬೇಂದ್ರೆ-ಕುವೆಂಪು-ರಮಣ-ಓಶೋ ಮೊದಲಾದವರನ್ನು ‘ಸರಿಯಾಗಿ’ ಓದಿಕೊಂಡವರು ಹೀಗೆ ಏನೇನೋ ಕಾರಿಕೊಳ್ಳುವುದಿಲ್ಲ. ಬರೆದದ್ದನೆಲ್ಲ, ಪ್ರಕಟಿಸಿದ್ದನೆಲ್ಲ ಸಾಹಿತ್ಯವೆಂದು ಸಡಗರಿಸುವುದಿಲ್ಲ! ಇಷ್ಟಕೂ ಯಾರೂ ಏನೂ ಹೊಸದನ್ನು ಹೇಳಲು ಸಾಧ್ಯವಿಲ್ಲ! ಏಕೆಂದರೆ ಈಗಾಗಲೇ ಎಲ್ಲವನೂ ಹೇಳಲಾಗಿದೆ ಮತ್ತು ಬರೆಯಲಾಗಿದೆ!! ಓದುವುದು ಬಾಕಿಯಿದೆ ಅಷ್ಟೇ. ಈ ಅರಿವಿನ ವಿನಯ ನಮಗಿರಬೇಕು ಮತ್ತು ಮುಖ್ಯವಾಗಿ ಬರೆಯುವಾಗ ಇರಬೇಕು. ಆಗ ಬರೆಹ ಮೆದುವಾಗುತ್ತದೆ; ಜಗದ ಕಾರುಣ್ಯದ ಕಣ್ಣಾಗುತ್ತದೆ. ಅರಿಯಲು ಬರೆಯಬೇಕು ಮತ್ತು ಮರೆತು ಜೀವಿಸಬೇಕು. ಆಗಲೇ ಬದುಕು ದಿವ್ಯ; ಇಲ್ಲದಿದ್ದರೆ ಅದೇ ಒಂದು ಅಪಸವ್ಯ!!
– ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಲೇಖನವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಹಾಗೂ ತಪ್ಪಿಲ್ಲದಂತೆ ಪ್ರಕಟಿತವಾಗಿರುವುದಕ್ಕೆ ಇದಕ್ಕೆ ಕಾರಣವಾದ ತಾಂತ್ರಿಕವರ್ಗಕ್ಕೆ ಇನ್ನೊಂದು ಧನ್ಯವಾದಗಳು.