ಈ ವಾರ ಬರೆಯೆಂದರೂ ಬರೆಯಲೇನೋ ಬೇಸರ. ವಿಷಯವಿಲ್ಲವೆಂದಲ್ಲವೀ ಕಸಿವಿಸಿ. ಆದರೆ ಇರೋ ದುಃಖಗಳಲ್ಲಿ ಯಾವುದರ ತೋಡಿಕೊಳ್ಳಲೆಂಬುದರ ತೊಳಲಾಟ. ತೀರ್ಥಹಳ್ಳಿಯಲ್ಲೊಂದು ಹೂವ ಅರಳೋ ಮೊದಲೇ ಕೊಂದ ಖದೀಮರ ಬಗ್ಗೆ ಬರೆಯಲಾ ? ಬೆಂಗಳೂರಲ್ಲಾದ ದೌರ್ಜನ್ಯಗಳ ಬಗ್ಗೆ ಬರೆಯಲಾ ? ಸ್ವಚ್ಛ ಭಾರತವೆಂದ ತೆಂಡೂಲ್ಕರನಿಗೇ ಬೇಸರವೆನಿಸುವಷ್ಟು ಆ ಜಾಗದಲ್ಲಿ ಮಾರನೆಯ ದಿನವೇ ಕಸ ಹಾಕಲು ಹೋದ ಬೇಜವಬ್ದಾರಿ ಭಾರತೀಯರ ಬಗ್ಗೆ ಬರೆಯಲಾ ? ಗಡಿಯಲ್ಲಿ ಅತ್ತ ಪಾಕಿಗಳು ಗುಂಡಿನ ಮಳೆಗಯ್ಯುತ್ತಿದ್ದರೆ ಮತ್ತೊಂದೆಡೆ ಚೀನಾದವ್ರು ನಮ್ಮ ನೆಲದಲ್ಲಿ ರಸ್ತೆ ಮಾಡೋಕೂ ತಕರಾರು ತೆಗೆಯೋಕೆ ಶುರು ಮಾಡಿದ್ದರ ಬಗ್ಗೆ ಬರೆಯಲಾ ? ಬೇಕಂದರಂತೆ ಪಯಣದರ ಏರಿಸಿ ಡೀಸೆಲ್ ದರ ಇಳಿದ್ರೂ ದರವಿಳಿಸೋ ಸುದ್ದಿಯೇ ಎತ್ತದ ರಸ್ತೆ ಸಾರಿಗೆಯ ಬಗ್ಗೆ ತೆಗಳಲಾ .. ಸಿಕ್ಕೀತೇನೋ ಬೇಕಾದಷ್ಟು ವಿಷಯ ನಮ್ಮ ತೆಗಳಲಿಕ್ಕೆ. ಬೆಳದಿಂಗಳ ರಾತ್ರಿಯಲ್ಲೂ ಕಪ್ಪ ಹುಡುಕಲಿಕ್ಕೆ.
ಭಾರತದ ಮೂಲೆಯಲ್ಲೆಲ್ಲೋ ಅವಿತಿದ್ದ ಸತ್ಯಾರ್ಥಿಯವರಿಗೆ ನೊಬೆಲ್ ಬಂದಾಗ ಯಾರೀ ಸತ್ಯಾರ್ಥಿ ಅಂತ ಭಾರತೀಯರೇ ಪ್ರಶ್ನಿಸಿಕೊಳ್ಳೋ ಸಂದರ್ಭ ಬಂದಿದ್ದೇನು ದೊಡ್ಡ ಅವಮಾನವೆನಿಸಲಿಲ್ಲ ನಮಗೆ. ದಿನಬೆಳಗಾದರೆ ರಾಜಕೀಯ ಮುಖಂಡರು ಎಲ್ಲಿ ರಿಬ್ಬನ್ ಕತ್ತರಿಸಿದ್ರು ? ಎಲ್ಲಿ ಸತ್ಯಾಗ್ರಹವಾಯ್ತು. ಯಾವೂರಲ್ಲಿ ಯಾರ ಕೊಲೆ , ಸುಲಿಗೆಯಾಯ್ತು ಎಂಬತಹ ಸುದ್ದಿಗಳನ್ನೇ ಮುಖಪುಟದಲ್ಲಿ ಓದೋದಿ ಅಭ್ಯಾಸವಾಗಿರೋ ನಮಗೆ ಅಂತಹ ಸುದ್ದಿಗಳಿಲ್ಲದಿದ್ದರೆ ಊಟವೂ ಸೇರೊಲ್ಲವೇನು ! ವಾಸ್ತವ ಹಾಗಿಲ್ಲದಿದ್ದರೂ ಮಾನ್ಯ ಮಾಧ್ಯಮಗಳ ದೃಷ್ಟಿಯಲ್ಲಿ ಹಾಗೇ ಆಗಿಬಿಟ್ಟಿರುವುದು ಕಮ್ಮಿ ದುರಂತವಲ್ಲ. ರೈತನ ಮಗನೊಬ್ಬ ಕಷ್ಟಪಟ್ಟು ಓದಿ ಹದಿನೈದು ಚಿನ್ನದ ಪದಕ ಪಡೆದ ಸುದ್ದಿ ನಾಲ್ಕನೇ ಪೇಜಿನಲ್ಲೋ, ಐದನೇ ಪೇಜಿನಲ್ಲೋ ಸಣ್ಣದಾಗಿ ಪ್ರಕಟವಾಗಿರುತ್ತೆ ! ಅದೇ ಇವತ್ತು ಅಮ್ಮನ ಹುಟ್ಟಿದಬ್ಬಕ್ಕೆ ಶುಭಾಶಯ ಅಂತ ಇಡೀ ಮುಖಪುಟ ರಾಚುತ್ತಿರುತ್ತೆ ! ಹುಡುಗನೊಬ್ಬನ ಸಾಧನೆ ಸುದ್ದಿಯಲ್ಲ ನಮಗೆ. ದೊಡ್ಡ ಪುಡಾರಿಗೆ ಮರಿ ಪುಡಾರಿಯ ಶುಭ ಹಾರೈಕೆಯೊಂದು ದೊಡ್ಡ ಸುದ್ದಿ. ಡಿ.ಡಿ.ಟಿ ವಿಷಕ್ಕೆ ನೂರಾರು ಜನ ಸತ್ತು ಅದೆಷ್ಟೋ ಎಳೆಜೀವಗಳು ಒದ್ದಾಡುತ್ತಿದ್ದರೂ ಅದರ ಬಗೆಗಿನ ಸುದ್ದಿ ಸುದ್ದಿಯಲ್ಲ ನಮಗೆ. ಬಹುರಾಷ್ಟ್ರೀಯ ಕಂಪೆನಿಗಳ ಎದುರುಹಾಕಿಕೊಳ್ಳೋದು ಎಲ್ಲಾದ್ರೂ ಉಂಟೆ ? ಜಯಂತಿಗಳು ಬಂದಾಗೆಲ್ಲಾ ಹೊಸ ಹೊಸ ಹೇಳಿಕೆ ಕೊಟ್ಟು ತಗಾದೆ ಸೃಷ್ಟಿಸೋ , ತಣ್ಣಗಿದ್ದ ಜನಗಳ ಮತ, ಪಂಥ, ರಾಜ್ಯ, ಆಚರಣೆಗಳ ಹೆಸರೆತ್ತಿ ಕೆರಳಿ ಕಾದಾಡಿಸಿ ಮಜಾ ನೋಡೋ ಬುದ್ದಿಜೀವಿಗಳಿಗೆ ಮಣೆ ಹಾಕಿ ಶಾಲು ಹೊಚ್ಚೋ ಸುದ್ದಿಗಳಿಗೆ ಅರೆ ವಾವ್ ಅಂತ ಕಣ್ಣು ಪಿಳುಕಿಸದೇ ಕಾಣೋ ನಮಗೆ ಪೊದೆ ಬೆಳೆದ ಬಸ್ಟ್ಯಾಂಡು, ನಾಯಿಯೂ ಓಡಾಡಲು ಅಸಹ್ಯಿಸಬಹುದಾದಂತಹ ಪುಟ್ ಪಾತ್ ಗಳಿಗೊಂದು ಮೋಕ್ಷ ಕರುಣಿಸ್ತಿರೋ ಅಗ್ಲಿ ಇಂಡಿಯಾ ತರದವು ಸುದ್ದಿ ಅಲ್ಲ. ನಾವಿರುವುದೇ ಹೀಗಾ ? ಇಂತದ್ದೇ ನಾವೋದೋದು ಅಂದ್ರೆ ಬೇಸರವಾಗುತ್ತೆ ಮನಕ್ಕೆ ಬರೆಯೋ ಯೋಚನೆ ಬಂದಾಗೆಲ್ಲ.
ಶೈಲಿಯ ವರ್ಗೀಕರಣಕ್ಕೆ ಅಂತ ಶುರುವಾದ ಪಂಥಗಳೇ ಜನ ಜನಗಳ ಮಧ್ಯೆ ಮೇಲುಕೀಳಿನ ಭಾವ ತಂದು ಮನಮನಗಳ ಒಡೆಯಲು ಶುರು ಮಾಡಿದ ಮೇಲೂ ಕವಿತೆಯ ಸತ್ವಕ್ಕಿಂತಲೂ ಅವನ್ಯಾವ ಪಂಥದವನೆಂಬುದೇ ಮುಖ್ಯವಾಗ್ತಿರೋ ಸಂದರ್ಭದಲ್ಲಿ ಬರೆಯೋಕೇ ಭಯವಾಗ್ತಿದೆ ಕಣ್ರಿ ಮನಕ್ಕೆ. ಉತ್ತರ, ದಕ್ಷಿಣ, ಪೂರ್ವ , ಪಶ್ಚಿಮಗಳಲ್ಲೆತ್ತ ಹೋಗಬೇಕೆಂಬ ಗೊಂದಲದಲ್ಲೇ ಸೋತ ನೋವಿಗಲ್ಲವದು, ದಿಕ್ಕ ಹುಡುಕಿ ಕಳೆದೇಹೋದೇನೆಂಬ ಭಯವಲ್ಲವಿದು. ನನ್ನ ಬರಹವನ್ನೂ ಯಾವುದಾದರೂ ಪಂಥದ ಬೇಲಿಗೆ ಕಟ್ಟಿಹಾಕಿ , ಅದರ ಗುಂಪುಗಾರಿಕೆಯಲ್ಲಿ ಉಸಿರುಗಟ್ಟಿಸಿ ಕೊಂದು ಬಿಡುತ್ತಾರೆಂಬ ಭಯ. ಪಂಥಗಳ ಗೋಡೆಯಾಚೆ ಹಾರಿದ ಧ್ವಜವೇ ಮುಂದಿನ ಜನ್ಮದಲ್ಲಿ ನೇಣುಕುಣಿಕೆಯಾದರೆ ಖುಷಿಯಿಂದಲೇ ಸತ್ತೇನು. ಸಾವ ಸಂದರ್ಭದಲ್ಲಾದರೂ ಈ ಪಂಥಗಳ ಪೂರ್ವಾಗ್ರಹವ ದಾಟಿದ ಚೈತನ್ಯದೊಂದಿಗೆ ಬೆರೆಯುತ್ತೇನೆ. ಭಾವದ ನೀರ ನೀಲಿ, ಬಿಳಿ, ಹಸಿರಲ್ಲಿ ಇದೇ ಬಣ್ಣದಲ್ಲಿರಿಸಬೇಕೆಂಬ ನಿಯಮಗಳಿಲ್ಲದ ನಾಳೆಯಲ್ಲಿ ಲೀನನಾಗಬಯಸುತ್ತೇನೆ.
ನೂರೆಂಟು ನೋವುಗಳ ಮಧ್ಯೆವೂ ಮನವಾಗಾಗ ಗರಿಬಿಚ್ಚಿ ಕುಣಿಯಬಯಸುತ್ತೆ. ಬರೆಯದೇ ಬರಗೆಟ್ಟ ಲೇಖನಿಗೆ ಮುಂದಿನೆಂಟು ದಿನಗಳ ಕೆಲಸ ಒಟ್ಟಿಗೇ ಕೊಡುವ ಹುರುಪು ಹೊಂದುತ್ತದೆ. ನೀರ ಪಡ್ರೆಯವರಾಗಿರಬುದು. ಸಾಲುಮರದ ತಿಮ್ಮಕ್ಕನವರಾಗಿರಬಹುದು. ಪುಸ್ತಕದ ಮನೆಯ ಅಂಕೇಗೌಡರಾಗಿರಬಹುದು. ರಾಹುಲ, ಬಿಲಾಲನ ಬದಲು ಇವರ ಸುದ್ಧಿ ಮುಖಪುಟಕ್ಕೆ ಬಂದಾಗ ಹುಚ್ಚೆದ್ದು ಕುಣಿಯುತ್ತೆ ಮನ, ವರ್ಷಕ್ಕಿಡೀ ಸಾಕಾಗುವಷ್ಟು. ಗೊತ್ತಿಲ್ಲವಲ್ಲ, ಮತ್ತಿನ್ನಿಂತ ಕ್ಷಣ ಸಿಕ್ಕೀತೇ ಈ ವರ್ಷದಲ್ಲಿ ಎಂದು. ಸಖತ್ ಚೆನ್ನಾಗಿ ಬರೆಯುತ್ತಿದ್ದ ಗೆಳೆಯನಿಗೊಮ್ಮೆ ಕೇಳಿದ್ದ್ರೆ. ಇಷ್ಟು ಚೆನ್ನಾಗಿ ಬರಿತೀಯಲ್ಲ. ಪೇಪರಿಗೆ ಕಳ್ಸೋ. ಕಳ್ಸೋದು ದೊಡ್ಡ ವಿಷಯವಲ್ಲ ಮಾರಾಯ. ಅವ್ರು ಪ್ರಕಟಣೆ ಮಾಡದಿದ್ರೆ ಅಂತ್ಲೇ ಹೆದರಿಕೆ ಅಂದಿದ್ದ. ಎಂದೋ ಸತ್ತು ಮಲಗಿರೋ ಮಿಂಚೆ ವಿಳಾಸ ಕೊಟ್ಟೋರು, ಬರೀ ಪೋಸ್ಟಿನ ಅಡ್ರೆಸ್ಸು ಕೊಟ್ಟು ಈ ಮೇಲ ಐಡಿನೇ ಕೊಡ್ದ್ರೆ ಇದ್ದೋರ ಮಧ್ಯೆ ಹೆಂಗೋ ಸಿಕ್ಕಿದ ಐಡಿಗೆ ಮೇಲ್ ಕಳಿಸಿದ ಮಾತ್ರಕ್ಕೆ ಆ ಸಾವಿರಾರು ಜನರೆಲ್ಲಾ ನಮ್ಮ ಲೇಖನ ಪೇಪರಲ್ಲಿ ಬಂದೇ ಬಿಡ್ತು ಅಂತ ಮಿಠಾಯಿ ಹಂಚಿ ಸಂತೋಷಪಟ್ಟು ನಂತರ ನಿರಾಸೆಯನುಭವಿಸಿದ್ರೆ ಅದು ಪತ್ರಿಕೆಯವರ ತಪ್ಪಾ ? ಕಥೆಯೆಂದರೆ ಏನಾದ್ರೂ ಅಶ್ಲೀಲತೆಯಿರಬೇಕು, ಇಲ್ಲಾ ನಮಗನಿಸಿದ ಹಸಿಬಿಸಿ ಭಾವಗಳಾದ್ರೂ ಇರಬೇಕು, ದುರಂತ ಇರಬೇಕು ಅಂತ ಒಂದತ್ತು ಸಲ ಕಳುಹಿಸಿ ಪ್ರಕಟವಾಗದ ಲೇಖಕ ಅಂದುಕೊಂಡರೆ ಅದು ಪತ್ರಿಕೆಯವರ ತಪ್ಪಲ್ಲ ಬಿಡಿ ! ಅವರಿಗಿಷ್ಟವಿದ್ದದ್ದು ಹಾಕ್ತಾರೆ . ಜನ ಅದನ್ನೇ ಕೇಳೋದಂತಪ್ಪ . ಹಂಗಾದ್ರೆ ಅದನ್ನ ಪ್ರತೀ ಬಾರಿ ಓದುವಾಗ್ಲೂ ಇದೆಲ್ಲಾ ಬೇಕಿತ್ತಾ ಒಂದು ಸುಂದರ ಕತೆಯಲ್ಲಿ ಅಂತ ಅಂದ್ಕೊಳ್ಳೋ ನಾವ್ಯಾರು ? ಮನುಷ್ಯರಲ್ವಾ ? ಇಂತದ್ದನ್ನೇ ಕೊಟ್ಟು ಕೊಟ್ಟು ಜನರಿಗೆ ಬೇರೆಯೇನೂ ಸಿಗದ ನಿರ್ವಾಹವಿಲ್ಲದ ಸಮಯದಲ್ಲಿ ಇದನ್ನೋದಿದ್ರೆ ಜನರೋದೋದೇ ಇದನ್ನ ಅಂದ್ರೆ !! ಯಾರೋ ವಯಸ್ಕರು ತಮ್ಮ ಅರವತ್ತನೆಯ ವರ್ಷದ ಶಾಂತಿಗೆ ಒಂದಿಷ್ಟು ಬಡ ಕುಟುಂಬಗಳನ್ನು ಹುಡುಕಿ ಅವರಿಗೆ ಅನಿಲ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದು, ವರ್ಷದ ಒಂದಿಷ್ಟು ಖರ್ಚು ತಾವು ಬರಿಸೋಕೆ ಮುಂದಾಗಿದ್ದು ಒಂದು ಸುದ್ದಿಯೇ ಅಲ್ಲ ಇವರಿಗೆ. ಸೇತುವೆ ಬೇಕು ಸೇತುವೆ ಬೇಕು ಅಂತ ವರ್ಷವಿಡೀ ಬೊಬ್ಬೆ ಹಾಕಿದ್ದು ಕೇಳದ ಜೀವಗಳಿಗೆ ಮಳೆಗಾಲದಲ್ಲಿ ಅದೇ ತುಂಬಿದ ಸಂಕದಲ್ಲಿ ದಾಟಲಾಗದೇ ಒದ್ದಾಡುತ್ತಿರುವ ಗರ್ಭಿಣಿಯ ಚಿತ್ರ ಕಣ್ಣಿಗೆ ಬೀಳುತ್ತೆ !! ಜನಕ್ಕೆ ಎಲ್ಲಾ ಸುಖವಾಗಿದ್ದಾರೆ ಅನ್ನೋದ್ರಲ್ಲಿ ಯಾವ ರುಚಿಯೂ ಇಲ್ಲ. ಏನಾದ್ರೂ ಸ್ವಾರಸ್ಯ ಬೇಕು ! ಅಲ್ಲೊಂದು ಕೊಲೆ, ಇಲ್ಲೊಂದು ಸುಲಿಗೆ ಅಂದ್ರೆ ವಾ. ಎಂಥಾ ಸ್ವಾರಸ್ಯ !! ಇಂಥಾ ಕಪೋಲ ಕಲ್ಪಿತ ಸಿದ್ದಾಂತಗಳ ಜನರ ತಲೆಗೆ ಕಟ್ಟೋ ಹುನ್ನಾರಗಳ ಬಗ್ಗೆ ಬರೆಯಬೇಕೆಂದ್ರೂ ಬೇಸರಿಸುತ್ತೆ ಮನ. ಏನು ಮಾಡೋದು. ಹೇಳಿ ಉಪಯೋಗವಿಲ್ಲವೆಂದರೂ ಹೇಳದೇ ನಿರ್ವಾಹವಿಲ್ಲ. ಎಷ್ಟೋ ದಿನದಿಂದ ಹಿಡಿದಿಟ್ಟಿದ್ದ ಭಾವಗಳಿಗೊಂದು ಪೆನ್ನು ಕೊಟ್ಟಿದ್ದೇನೆ. ಹಳೆತನದ ಕೊಳೆಯಿಂದ ಹೊಸತನಕ್ಕೆ ಹೊರಳೋ ಮನ ದೀಪಗಳ ಕಾರ್ತೀಕದ ಸಮಯದಲ್ಲಾದ್ರೂ ಮೂಡಲೆಂಬ ಆಸೆಯಲ್ಲಿದ್ದೇನೆ.
*****
ಹಳೆತನದ ಕೊಳೆಯಿಂದ ಹೊಸತನಕ್ಕೆ ಹೊರಳೋ ಮನ ದೀಪಗಳ ಕಾರ್ತೀಕದ ಸಮಯದಲ್ಲಾದ್ರೂ ಮೂಡಲೆಂಬ ಆಸೆಯಲ್ಲಿದ್ದೇನೆ.ಗುಡ್!!!