ಬರವಣಿಗೆ: ಭಾರ್ಗವಿ ಜೋಶಿ

ಕಲ್ಪನೆ,  ವಾಸ್ತವ ಯಾವುದೇ ಇರಲಿ ಅದಕ್ಕೆ ಅಕ್ಷರ ರೂಪ ಕೊಡುವುದೇ ಬರಹ. ಮನದ ಗೂಡಲ್ಲಿ ಒಡಮೂಡಿ,  ರೆಕ್ಕೆ ಕಟ್ಟಿ ಹಾರ ಬಯಸುವ ಪ್ರತಿ ಭಾವನೆಗಳು ಒಂದು ಬರಹವೇ.  ಹಾಗಾದರೆ ಯಾರು ಏನಾದರು ಗೀಚಿದರು ಅದು ಬರಹ ಆಗುತ್ತದಾ ಅನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. 

ನನ್ನ ಅನಿಸಿಕೆ  ಖಂಡಿತವಾಗಿಯೂ ಹೌದು.  ಯಾಕೆಂದರೆ ಬರಹಗಾರರ ಪ್ರೀತಿ,  ಶ್ರದ್ಧೆ ಅಲ್ಲಿ ಅಡಕವಾಗಿರುತ್ತದೆ.  ಎಲ್ಲರು ಒಮ್ಮೆಲೆ ಉತ್ತಮ ಬರಹಗಾರರು,  ಪ್ರಶಸ್ತಿ ವಿಜೇತರು ಆಗಲು ಸಾಧ್ಯವಿಲ್ಲ.  ಎಲ್ಲವು ಅ, ಆ, ಇ, ಈ ಇಂದಲೇ ಆರಂಭವಾಗಬೇಕು.  ಬರಹ ಒಂದು ಅಭಿವ್ಯಕ್ತಿ ಸ್ವಾತಂತ್ರ್ಯ.  ಒಮ್ಮೊಮ್ಮೆ ಮಾತಲ್ಲಿ ಹೇಳದೇ ಗೊಂದಲವಾದ ಎಷ್ಟೋ ಭಾವನೆಗಳು,  ವಿಚಾರಗಳು ಬರವಣಿಗೆಯಲ್ಲಿ ಸರಳವಾಗಿ ಆಚೆ ಬರುತ್ತವೆ.  

ಅಕ್ಷರ ತಿಳಿದವರು,  ಭಾವನಾಲೋಕ,  ಕಲ್ಪನಾಲೋಕ,  ಮತ್ತು ವಾಸ್ತವ ಇವುಗಳ ಬಗ್ಗೆ ನಂಬಿಕೆ ಇಟ್ಟವರು ಎಲ್ಲರು ಬರೆಯಬಹುದು.  

ವ್ಯಾಕರಣ,  ಗಣಗಳು  ಛಂದಸ್ಸು ಇವುಗಳೆಲ್ಲ ತಿಳಿದು ತೀಡಿ ಬರೆದರೆ ಬೃಹದ್ಗ್ರಂಥ ವಾಗಬಹುದು.  ಆದರೆ ಬರಹಕ್ಕೆ ಕೇವಲ ಭಾವನೆಗಳು ಮತ್ತು ಅಕ್ಷರದ ನಡುವಿನ ನಂಟು ಸಾಕು.  

 ನವರಸಗಳು 

  1.ಶೃಂಗಾರ, 

  2.ಹಾಸ್ಯ, 

  3.ಕರುಣ, 

  4.ರೌದ್ರ, 

  5.ವೀರ, 

  6.ಭಯಾನಕ, 

  7.ಬೀಭತ್ಸ, 

  8.ಅದ್ಭುತ, 

  9.ಶಾಂತ

ಇವುಗಳಲ್ಲಿ ಯಾವುದನ್ನೂ ಬರೆದರೂ ಅದು ಬರಹವೇ.  ನವರಸಗಳ ಗಂಧ ಗಾಳಿ ಗೊತ್ತಿಲ್ಲದವರು ಬರೆದರೂ ಅದು ಬರಹವೇ.  ಬರಹಗಳಲ್ಲಿ ಬರಹಗಾರನನ್ನು ಎಂದಿಗೂ ಹುಡುಕಬಾರದು.  ವ್ಯಕ್ತಿತ್ವಕ್ಕೂ ಬರಹಕ್ಕೂ ನಂಟು ಇರುವುದು ತೀರಾ ಕಡಿಮೆ.  ಹಾಸ್ಯ ಬರಹ ಬರೆಯುವ ಬರಹಗಾರರು ತೀರಾ ಗಂಭೀರ ವ್ಯಕ್ತಿತ್ವದವರು ಇರಬಹುದು.  ಆದರೆ ಅವರ ಮನಸಲ್ಲಿ ಹಾಸ್ಯ ಹೊಮ್ಮಿಸುವ ಕಲೆಯಿಂದ ಬರೆಯುತ್ತಾರೆ.  

ಒಮ್ಮೊಮ್ಮೆ ಸಮಾಜಮುಖಿ ಬರಹಗಳನ್ನು,  ವಿಚಾರಿಕ ವಿಷಯಗಳನ್ನು ಬರೆಯುವಾಗ ಬರಹಗಾರರು ಕಥಾವಸ್ತು ತಾವೇ ಆಗಿ ಕಲ್ಪಿಸಿಕೊಂಡು ಆ ಸ್ಥಿತಿಗಳನ್ನು ಅನುಭವಿಸಿ ಬರೆಯಬೇಕಾಗುತ್ತದೆ.  ಪರಕಾಯ ಪ್ರವೇಶ ಇದು ನಟನೆಯಲ್ಲಿ ಮಾತ್ರವಲ್ಲದೆ ಬರಹದಲ್ಲೂ ಮುಖ್ಯಯವಾಗಿರುತ್ತದೆ.  ಆ ರೀತಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಬರಹಗಾರರಾಗುತ್ತಾರೆ.  

ಬರವಣಿಗೆಯಲ್ಲಿ ತೊಡಗಿಸಿಕೊಂಡಾಗ ಒಮ್ಮೊಮ್ಮೆ ವಸ್ತು,  ಸ್ಥಿತಿ, ಪರಿಸ್ಥಿತಿಗಳನ್ನು ಮೀರಿ ಯೋಚಿಸಬೇಕಾಗುತ್ತದೆ.  ಎಲ್ಲೋ ಮದುವೆಮನೆ ಸಂಭ್ರಮದಲ್ಲಿ ಕುಳಿತಾಗ ಒಂದು ಸಾವಿನ ಸುತ್ತ ಬರಹ ಬರಿಯಬೇಕಾದ ಅನಿವಾರ್ಯತೇ ಒದಗಿ ಬಂದರೆ.  ಸ್ಥಿತಿಯನ್ನು ಮೀರಿ ಒಂದು ಕಲ್ಪನಾಲೋಕಕ್ಕೆ ಜಾರಿ ಆ ಶೀರ್ಷಿಕೆ ಗೆ ನ್ಯಾಯಒದಗಿಸಿ ಕೊಡುವುದೇ ಬರಹ.  

ಏನು ಬರೆಯಲು ತೋಚುತ್ತಿಲ್ಲವೆಂದರು ತೋಚಿದ್ದನ್ನು ಗೀಚುವುದು ಬರಹವೇ. ಏನಾದರು ಬರೆಯಬೇಕು ಎಂಬ ತುಡಿತ ಎಲ್ಲಿ ವರೆಗೂ ಇರುತ್ತದೋ ಅಲ್ಲಿಯವರೆಗೂ ಅವರು ಬರಹಗಾರರೇ.  ಆದರೆ ಬರಹಕ್ಕೆ ಮೂಲ ಓದುವುದು ಅನ್ನುತ್ತಾರೆ.  ಓದುವ ಗೀಳು ಬರೆಯುವ ಹವ್ಯಾಸ ಬೆಳೆಸಲು ಸಹಕಾರಿಯಾಗುತ್ತದೆ.  ಓದುವುದರಿಂದ ದ್ನ್ಯಾನ ವೃದ್ಧಿ,  ಕೌಶಲ್ಯತೆ ಹೆಚ್ಚುತ್ತದೆ.  ಒಂದೇ ವಿಷಯಕ್ಕೆ ಅಂಟಿಕೊಂಡು ಕೂಡದೆ  ಎಲ್ಲರೀತಿ ಬರಹಗಳನ್ನು  ಬರೆಯಲು ಪ್ರಯತ್ನಿಸಿದಾಗ ಮಾತ್ರ ಬರಹದಲ್ಲಿ ಪ್ರೌಢಿಮೆ ಮೂಡುತ್ತದೆ.  

ಬರಹಗಾರನು ಗೆಲ್ಲೋದು ಯಾವಾಗ?  ಖಂಡಿತ ಬರಹ ನಮ್ಮ ಮಗು ಇದ್ದಂತೆ.  ಕಪ್ಪು,  ಬಿಳಿ,  ಏತ್ತರ,  ಕುಬ್ಜ,  ಕುಂಟ,  ಕುರುಡ ಏನೇ ಆದರೂ ತಾಯಿಗೆ ಅದೇ ಮುದ್ದು.  

ಅದನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಪ್ರಯತ್ನ ನಿರಂತರವಾಗಿರುತ್ತದೆ.  ಇನ್ನೊಬ್ಬರು ಇಷ್ಟ ಪಡಲಿ ಅಂತ ಬರೆಯದಿದ್ದರೂ ಒಂದು ಕ್ಷಣಕ್ಕೆ ಓದುಗರನ್ನು ಹಿಡಿದಿಟ್ಟುಕೊಂಡು  ಓದಿಸಿಕೊಂಡು ಹೋಗುವ ಕೌಶಲ್ಯ ಹೊಂದಿದ್ದಾರೆ ಆ ಬರಹ ಗೆದ್ದಹಾಗೆ.  ಬರಹದ ಗೆಲುವು ಬರಹಗಾರನ ಗೆಲುವು ಅಲ್ಲ.  ಅದು ಇನ್ನು ಜವಾಬ್ದಾರಿ ಹೆಚ್ಚಿಸುತ್ತದೆ.  ಉತ್ತಮ ವಿಚಾರಧಾರೆ ಸೃಷ್ಟಿಸಲು ಮುನ್ನುಡಿ ಬರೆದಹಾಗೆ.  

ಏನೇ ಆದರೂ ಬರೆಯಬೇಕು ಅಂತ ತುಡಿತ ಇರುವ ಎಲ್ಲರು ಬರಹಗಾರರೇ.  ಎಲ್ಲರು ಓದೋಣ,  ಬರೆಯೋಣ,  ಭಾಷೆ ಉಳಿಸೋಣ ಸಾಹಿತ್ಯ ಬೆಳೆಸೋಣ.   

ಅಕ್ಷರಮಾತೆಗೆ,  ಸಾಹಿತ್ಯಾಂಬೆಗೆ ವಂದಿಸುತ್ತಾ.  

ಭಾರ್ಗವಿ ಜೋಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x