ಬರದ ಬೇಗೆಯಿಂದ ತತ್ತರಿಸುತ್ತಿದ್ದ ಕೂಲಿಕಾರ್ಮಿಕರಿಗೆ ಆಶಾಕಿರಣವಾದ ಆಲೆಮನೆ: ಹನಿಯೂರು ಚಂದ್ರೇಗೌಡ


ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಲ್ಲಿ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ಬರದ ಬವಣೆಯಲ್ಲಿ ತತ್ತರಿಸಿ ಗುಳೇ ಹೊರಡುವ ಸ್ಥಿತಿಯಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರಿಗಾದರೂ ಕೃಷ್ಣನಾಯ್ಡುರವರ ಆಲೆಮನೆ ಆಶಾಕಿರಣವಾಗುವ ಮೂಲಕ ಆಸರೆ ನೀಡಿದೆ.

ಗೊಂಬೆ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಸಿದ್ದಪಡಿಸಿರುವುದು.

ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಕಾರಣ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬಳೆಯಲು ಆಗದಿರುವಂತಹ ಪರಿಸ್ಥಿತಿಯಲ್ಲಿ, ಯಥೇಚ್ಛ ನೀರನ್ನು ಅಲವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ   ಆಲೆಮನೆ ನಡೆಸಲು ಸಾಧ್ಯವೇ? ಈ ಭಾಗದಲ್ಲಿ ಕಬ್ಬು ಬೆಳೆಯದಿದ್ದರೇನಂತೆ ಹರಸಾಹಸ ಮಾಡಿ ಬೆಳೆಯುವ ಕಡೆ ತಂದು ಆಲೆಮನೆ ನಡೆಸುವ ಮೂಲಕ ವಿಶೇಷವಾದ ಗೊಂಬೆಬೆಲ್ಲವನ್ನು ತಯಾರಿಸಿ ಉತ್ತಮ ಮಾರುಕಟ್ಟೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿ ನಾಲ್ಕಾರು ಜನಕ್ಕೆ ಕೂಲಿ ನೀಡಿ ಜೀವನೋಪಾಯಕ್ಕೆ ಆಧಾರವಾಗುವ ಮೂಲಕ ಯಶಸ್ಸು ಸಾಧಿಸಿರುವ ರೈತ ಹಾಗೂ ಆಲೆಮನೆ ಮಾಲೀಕ ಕೃಷ್ಣನಾಯ್ಡುವಿನ ಯಶೋಗಾಥೆಯ ನೈಜ ಕತೆಯಿದು.

ಸ್ವಂತ ೧೦ ಎಕರೆ ಜಮೀನಿನಲ್ಲಿ ಇರುವ ಕೊಳವೆ ಬಾವಿಗಳಲ್ಲಿ ಅಂರ್ತಜಲ ಕುಸಿದಿರುವ ಕಾರಣ ಇರುವ ಅಲ್ಪಸಲ್ಪ ನೀರಿನಲ್ಲಿ ೨ ಎಕರೆ ಜಮೀನನ್ನು ಬಳಸಿಕೊಂಡು ೨೫ ಲಕ್ಷ ವೆಚ್ಚದಲ್ಲಿ ಬೆಲ್ಲ ಉತ್ಪಾದಕ ಘಟಕವನ್ನು ಸ್ಥಾಪಿಸಿಕೊಂಡು ತಾಲ್ಲೂಕಿನಲ್ಲಿಯೇ ಒಂದೇ ಕಡೆ ಮೂರು ಗಾಣ (ಕಬ್ಬು ಅರೆಯುವ ಯಂತ್ರ) ಹಾಗೂ ಮೂರು ಕೊಪ್ಪರಿಕೆಗಳನ್ನು ಅಳವಡಿಸಿಕೊಂಡು, ಸ್ವಂತ ಜಮೀನು ಹಾಗೂ ಪಟ್ಟಣದ ಅನ್ಯ ಜಮೀನುಗಳಲ್ಲಿ ನೀರಿಲ್ಲದೆ ಕಬ್ಬು ಬೆಳೆಯದಿದ್ದರೂ ದೃತಿಗೆಡದ ಕೃಷ್ಣನಾಯ್ಡು, ಕಳೆದ ೫ ವರ್ಷಗಳಿಂದ ಕೊಳ್ಳೇಗಾಲ, ನರಸೀಪುರ, ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿನ ರೈತರು ಬೆಳೆದ ಕಬ್ಬನ್ನು ಖರೀದಿಸಿ ತಂದು ಆಲೆಮನೆ ನಡೆಸುವ ಸಾಹಸ ಮಾಡುತ್ತಿದ್ದಾರೆ.

ಒಂದು ಟನ್ ಕಬ್ಬಿಗೆ ೨೦೦೦ ದಿಂದ ೨೧೦೦ ರೂ ತನಕ ನೀಡಿ ಖರೀದಿಸಿದರೆ ಸಾಗಾಣಿಕೆ ಕೂಲಿ ಆಳು ಖರ್ಚು ವೆಚ್ಚ ಎಲ್ಲಾ ಸೇರಿ ೩೫೦೦ ಖರ್ಚಾಗುತ್ತದೆ. ಒಂದು ಟನ್ ಕಬ್ಬಿಗೆ ನೂರು ಕೆ.ಜಿ. ಬೆಲ್ಲ ದೊರೆಯಲಿದೆ.  ೧೫ ಟನ್ ಕಬ್ಬಿನಿಂದ ಪ್ರತಿದಿನ ೬೦ ಮೂಟೆ ಬೆಲ್ಲ ತಯಾರಿಕೆಗಾಗಿ ದಿನವೊಂದಕ್ಕೆ ಉತ್ಪಾದನ ಘಟಕದಲ್ಲಿ ೨೦ ಜನರನ್ನು ಬಳಸಿಕೊಂಡು ಖರೀದಿಸಿದ ಕಬ್ಬನ್ನು ಜಮೀನಿನಲ್ಲಿ ಕಟಾವು ಮಾಡಿ ನಂತರ ಸಾಗಾಣಿಕೆಗಾಗಿ ಒಂದು ಲಾರಿ ಸೇರಿದಂತೆ ೨೦ ಕಾರ್ಮಿಕರನ್ನು ಉಪಯೋಗಿಸಿಕೊಂಡು ದಿನವೊಂದಕ್ಕೆ ಒಟ್ಟು ೪೦ ಜನ ಕೂಲಿ ಕಾರ್ಮಿಕರಿಗೆ ಪ್ರತಿದಿನ ತಲಾ ೩೦೦ ರೂ ಕೂಲಿ ನೀಡುವ ಮೂಲಕ ಕೆಲಸ ನೀಡುತ್ತಿರುವ ಕೃಷ್ಣನಾಯ್ಡು ಕಬ್ಬು ಖರೀದಿ ಸಂದರ್ಭಗಳಲ್ಲಿ ಉತ್ಪಾದನೆ ಮಾಡಿದ ಬೆಲ್ಲಕ್ಕೆ ಬೆಲೆ ಸಿಗದೆ ಹಲವಾರುಬಾರೀ ನಷ್ಟ ಅನುಭವಿಸಿದ್ದು ಉಂಟು. ಆದರೂ ಧೃತಿಗೆಡದ ಕೃಷ್ಣನಾಯ್ಡು ಆಲೆಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಆಲೆಮನೆಯ ಗಾಣದ ಯಂತ್ರದಿಂದ ಕಬ್ಬನ್ನು ಅರೆಯುತ್ತಿರುವ ಕೂಲಿ ಕಾರ್ಮಿಕರು

ಆಲೆಮನೆಯಲ್ಲಿ ಕಬ್ಬಿನಿಂದ ಹಿಂಡಿದ ಹಾಲನ್ನು ಕೊಪ್ಪರಿಕೆಯಲ್ಲಿ ಹಾಕಿ ಹದವಾದ ಬೆಂಕಿಯನ್ನು ಹೊತ್ತಿಸಿ ಬೆಲ್ಲದ ಪಾಕವನ್ನು ತಯಾರಿಸುತ್ತಿರುವ ಕಾರ್ಮಿಕ.

ಕಾಲ ಬದಲಾಗುತ್ತಿದ್ದಂತೆ ಬೆಲ್ಲವನ್ನು ಬಿಟ್ಟ ಜನರು ಕಾಫಿ-ಟೀಗಾಗಿ ಸಕ್ಕರೆಯನ್ನು ಬಳಸುವ ಕಾಲ ಬಂದಿದ್ದು ಬೆಲ್ಲ ತನ್ನ ಮಹತ್ವ ಕಳೆದುಕೊಂಡಿದ್ದರೂ ತಲೆಕೆಡಿಸಿಕೊಳ್ಳದೆ ಮತ್ತೊಂದು ಉಪಾಯ ಹುಡುಕಿದ ಕೃಷ್ಣನಾಯ್ಡು ವಿಶಿಷ್ಟವಾದ ರೂಪ ಹಾಗೂ ಆಕಾರ ಹೊಂದಿರುವ ಗೊಂಬೆಬೆಲ್ಲವನ್ನು ತಯಾರಿಸುವ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇವರು ಬೆಲ್ಲ ತಯಾರಿಕೆಯ ಜತೆ ಬೇಡಿಕೆ ಇರುವ ಕಡೆಗೆ ತಾವೇ ಸಾಗಿಸಿ ಸರಬರಾಜು ಮಾಡುವ ಮೂಲಕ ಉತ್ತಮ ಲಾಭಗಳಿಸುತ್ತಿದ್ದಾರೆ. 

ಗೊಂಬೆಬೆಲ್ಲವನ್ನು ಕೇರಳದ ಮಾನಂದವಾಡಿ, ಕ್ಯಾಲಿಕಟ್, ಗೂಡ್ಲೂರು, ನೆಲಂಬೂರ್, ಹಾಗೂ ತಮಿಳು ನಾಡಿನ ಚಿತ್ತೋಡು ಮತ್ತು ಕರ್ನಾಟಕದ ಚಾಮರಾಜನಗರ, ಮಂಡ್ಯಗಳಲ್ಲಿ ಆಯಾ ದಿನದ ಬೆಲೆಗೆ ಅನುಗುಣವಾಗಿ ೩೦ ಕೆ.ಜಿ ಬೆಲ್ಲಕ್ಕೆ  ೧೧೫೦ ರೂ ಮಾರಾಟ ಮಾಡಿದರೆ ೨೦೦ ರೂ ಲಾಭಗಳಿಸುತ್ತೇನೆ ಎನ್ನುತ್ತಾರೆ ನಾಯ್ಡು.

ಕಳೆದ ಐದು ವರ್ಷಗಳಿಂದ ಕೊಳ್ಳೇಗಾಲ ತಾಲ್ಲೂಕಿನ ಹನೂರು ಕೃಷ್ಣನಾಯ್ಡು ಆಲೆಮನೆ ಘಟಕ ಹಲವಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವ ತೃಪ್ತಿ ತಂದಿದ್ದು ಕರ್ನಾಟಕದಲ್ಲಿ ತಯಾರಾದ ಗೊಂಬೆ ಬೆಲ್ಲಕ್ಕೆ ಅನ್ಯರಾಜ್ಯಗಳಲ್ಲಿ ಭಾರೀ ಬೇಡಿಕೆ ಇರುವುದು.  ಈ ಭಾಗದ ರೈತರಲ್ಲಿ ಹರ್ಷ ತಂದಿದೆ.

********************************************************
 ದಿನವೊಂದಕ್ಕೆ ೧೫ ಟನ್ ಕಬ್ಬು ಅರೆದು  ಪ್ರತ್ಯೇಕ ೩ ಕಡೆ ೩ ಕೊಪ್ಪರಿಕೆಗಳಲ್ಲಿ ಗೊಂಬೆಬೆಲ್ಲ ತಯಾರಿಸಿ ಕೇರಳ, ತಮಿಳುನಾಡು. ಕೇರಳಾದ ಮಾನಂದವಡಿ , ಇನ್ನಿತರ ಕಡೆಗಳ ಮಾರುಕಟ್ಟೆಗಳಿಗೆ ಕಳುಹಿಸುತ್ತೇನೆ ಆಯಾದಿನದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಲಾಭ ದೊರಕುತ್ತದೆ. ಒಂದು ದಿನ ಹೆಚ್ಚು ಲಾಭ ಬಂದರೆ ಮತ್ತೂಂದು ದಿನ ಮಾರುಕಟ್ಟೆಯಲ್ಲಿ ಅಧಿಕ ನಷ್ಟ ಅನುಭವಿಸಿದ್ದೇನೆ. ಆದರೂ ಕಳೆದ ಐದು ವರ್ಷಗಳಿಂದ ಉತ್ಪಾದನಾ ಘಟಕದಲ್ಲಿ ಬೆಲ್ಲ ತಯಾರಿಸಲು ೪೦ ಜನರಿಗೆ ಉದ್ಯೋಗ ಕಲ್ಪಿಸಿರುವುದು ನನಗೆ ತೃಪ್ತಿ ತಂದಿದೆ.
-ರೈತ ಕೃಷ್ಣನಾಯ್ಡು ಹನೂರು ಪೋನ್ ನಂಬರ್ ೯೦೦೮೫೦೪೪೬೩
********************************************************
ಕೃಷ್ಣನಾಯ್ಡುರವರ ಅಲೆಮನೆ ಘಟಕದಲ್ಲಿ ನಾನು ಕೂಲಿ ಕಾರ್ಮಿಕ. ನನ್ನಂತೆ ನನ್ನ ಜತೆ ಕೆಲಸ ನಿರ್ವಹಿಸುವ ಇತರೆ ೪೦ ಮಂದಿ ಕೂಲಿಕಾರ್ಮಿಕರಿಗೆ ದಿನವೊಂದಕ್ಕೆ ೩೦೦ ರೂ ಕೂಲಿ ನೀಡುತ್ತಾರೆ. ಎಲ್ಲರ ಸಹಕಾರದಿಂದ ದಿನಕ್ಕೆ ೧೫ ಟನ್ ಕಬ್ಬು ಅರೆದು ಬೆಲ್ಲ ತಯಾರಿಸುತ್ತೇವೆ. ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಮಳೆಯಿಲ್ಲದೆ, ಕೂಲಿ ಸಿಗದೆ ಜೀವನ ನಿರ್ವಹಣೆಗೆ ಕಷ್ಟವಾಗಿರುವ ಇಂತಹ ದಿನಗಳಲ್ಲಿ ಆಲೆಮನೆ ನಮ್ಮ ಕೈ ಹಿಡಿದಿದೆ.
-ಚಿಕ್ಕಪುಟ್ಟಯ್ಯ ಕೂಲಿ ಕಾರ್ಮಿಕ ಹನೂರು    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x