ಬಡವರು ಬಡತನದಿಂದ ದೂರವಾಗಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಭಾರತ ಸರಕಾರ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ಅನಷ್ಠಾನಕ್ಕೆ ತಂದಿರುವುದು ಮೀಸಲಾತಿ ಘೋಷಿಸಿರುವುದು ಸತ್ಯಸ್ಯಸತ್ಯ! ಬಡವರ ಉದ್ದಾರಕ್ಕೆಂದೇ ಅವು ಮೈದಳೆದದ್ದು. ರಾಜ್ಯ ಸರಕಾರಗಳೂ ತಾವೇನು ಕಡಿಮೆಯಿಲ್ಲದಂತೆ ಅವರಿಗಾಗಿ ಕಾರ್ಯಕ್ರಮಗಳ ರೂಪಿಸಿರುವುದು ಸಹ ಸತ್ಯ! ಆದರೂ ಅವು ಕಾರಣಾಂತರದಿಂದ ಕೆಲವರಿಗೆ ತಲುಪದೆ ಅವರು ಬದುಕು ಸಾಗಿಸಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಸಹ ಸತ್ಯಸ್ಯಸತ್ಯ! ಈ ಗುಂಪಿಗೆ ಸೇರಿದವರಲ್ಲಿ ಬಯಲು ಕಮ್ಮಾರರು ಒಬ್ಬರು! ಬಡವರಿಗೆ ಕೊಡುವ ಪಡಿತರ, ನರೇಗದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮದಿಂದಲೂ ಇವರು ತಮ್ಮ ಬದುಕು ರೂಪಿಸಿಕೊಂಡು ತಮ್ಮ ಊರಿನಲ್ಲಿ ವಾಸಿಸಲು ಸಾಧ್ಯವಾಗದಂತಾಗಿ ಊರೂರು ತಿರುಗುತ್ತಿರುವುದು ದುರದೃಷ್ಟ! ಶ್ರಮಜೀವಿಗಳಾದರೂ ಬಡತನ, ಕೊಳೆತನ, ಅನಕ್ಷರತೆಯಿಂದ ತೊಳಲುತ್ತಾ ಬಯಲಲ್ಲಿ ಜೀವಿಸುತ್ತಾ ಜೀವಿಸುವ ಸರಕು, ವೃತ್ತಿ ಹೊತ್ತು ಊರಿಂದೂರಿಗೆ ಅಲೆಯುವಂತಾಗಿದೆ. ಇವರು ಸರಕಾರದ ಅನುಕೂಲಗಳಿಂದ ಹೇಗೆ ವಂಚಿತರಾದರು? ಅವು ಇದ್ದೂ ಹೀಗೆ ಅಲೆಮಾರಿ ಆಗುವಂತಾದದ್ದಾದರೂ ಹೇಗೆ? ಸಂಬಂಧಿಸಿದವರು ಹೀಗೆ ಆಗಲು ಹೇಗೆ ಬಿಟ್ಟರು? ಎಂಬ ಪ್ರಶ್ನೆಗಳು ಕಾಡಿ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿವೆ!
ಇವರ ಉದ್ಯೋಗ ಕಮ್ಮಾರಿಕೆ. ಕಬ್ಬಿಣದ ಲೋಹವನ್ನು ಮಾನವನಿಗೆ ಉಪಯೋಗಕ್ಕೆ ಬರುವಂತೆ ಉಪಕರಣಗಳ ತಯಾರಿಸುವುದೇ ಕಮ್ಮಾರಿಕೆ ಎಂಬ ಕಲೆಗಾರಿಕೆ. ಹಿಂದೆ ಊರಿಗೊಬ್ಬರಂತೂ ಇದ್ದು ರೈತರಿಗೆ, ಯುದ್ದಕ್ಕೆ, ವಾಹನಗಳಿಗೆ ಬೇಕಾಗುವ, ಕೆಲವು ವೃತ್ತಿಗೆ ಸಂಬಂಧಿಸಿದ ಉಪಕರಣಗಳ ಸಿದ್ದಗೊಳಿಸಿ ಪ್ರತಿ ಗ್ರಾಮಗಳಿಗೆ ಅನಿವಾರ್ಯವಾಗಿದ್ದರು. ಎತ್ತಿನ ಗಾಡಿಯ ಚಕ್ರಗಳಿಗೆ ಅಳಿ ( ಕಬ್ಬಿಣದ ಪಟ್ಟಿ ) ಕಟ್ಟುತ್ತಿದ್ದರು. ಅದಂತೂ ವೈಜ್ಞಾನಿಕ ತಳಹದಿ ಮೇಲೆ ನಿಂತ ಕಲೆಯಾಗಿತ್ತು. ವಿಜ್ಞಾನ, ತಂತ್ರಜ್ಞಾನದಿಂದಾಗಿ ಇವರ ಬದುಕು ಮೂರಾಬಟ್ಟೆ ಆಗಿರುವುದು ಎಲ್ಲರಿಗೂ ತಿಳಿದ ವಿಷಯ. ಮಾನವನ ಶಕ್ತಿಯಿಂದ ಬಡಿದು ಸಿದ್ದಪಡಿಸುವ ಕಾರ್ಯವನ್ನು ಯಂತ್ರಗಳೇ ಮಾಡುತ್ತಿವೆ! ಟ್ರಾಕ್ಟರುಗಳನ್ನು ಕೃಷಿಯ ಎಲ್ಲಾ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಇದರಿಂದ ಇವರು ಉದ್ಯೋಗಕ್ಕಾಗಿ ಉಂಡಂತೆ ಸೋರುವ ಹೊಟ್ಟೆ ತುಂಬಿಸುವುದಕ್ಕಾಗಿ ಊರೂರು ಅಲೆಯುತ್ತಿದ್ದಾರೆ. ಕೆಲವರು ಬಯಲಲೇ ಕಮ್ಮಾರಿಕೆ ಮಾಡುವುದರಿಂದಲೋ, ವೃತ್ತಿ ಮಾಡುತ್ತಾ ಬಯಲಲೆ ಬದುಕುತ್ತಿರುವುದರಿಂದಲೋ ಏನೋ ಬಯಲು ಕಮ್ಮಾರರು ಎಂಬ ಹೆಸರು ಕೆಲವರಿಗೆ ಬಂದಿರಬಹುದು. ಬಯಲು ಕಮ್ಮಾರರು ಮಹಾರಾಷ್ಟ್ರ, ಬಿಜಾಪುರ, ಮಧ್ಯಪ್ರದೇಶದ ರಾಜ್ ಪುರ ಮುಂತಾದ ಕಡೆಯಿಂದ ಕರ್ನಾಟಕದ ನಗರಗಳಿಗೆ ಪ್ರತಿ ವರುಷ ಮೂರು ನಾಲ್ಕು ಕುಟುಂಬಗಳು ಮೂರು ನಾಲ್ಕು Appe ಲಗೇಜ್ ಆಟೋಗಳಲ್ಲಿ ಗುಂಪು ಗುಂಪಾಗಿ ಬೇರೆ ಬೇರೆ ನಗರಗಳಿಗೆ ಆಗಮಿಸುತ್ತಾರೆ. ಇವರನ್ನು ಹೊತ್ತು ತರುವ ಆ ಆಟೋವೆ ಇವರ ಆಟದ, ಓಟದ, ಮಲಗುವ, ಏಳುವ, ಹಾಸಿಗೆ, ಹೊದಿಕೆ, ಬಟ್ಟೆ ಬರೆಯ ಬದುಕಿನ ಅರಮನೆ! ಅಡುಗೆ ಮಾಡುವ ಪಾತ್ರೆ ಪಡುಗ, ಹಾಸಿಗೆ, , ಇದ್ದಿಲು, ಕಮ್ಮಾರಿಕೆಗೆ ಸಂಬಂಧಿಸಿದ ಇದ್ದಿಲ ಊದಿ ಬೆಂಕಿಯಾಗಿಸುವ ಸಾಧನ, ತಯಾರಿಸಿದ ಮೊಚ್ಚು, ಕುಡುಗೋಲು, ಕೊಡಲಿ ಮುಂತಾದವುಗಳ ಆಗರ! ಕೆಲವು ಪಕ್ಷಿಗಳನ್ನೂ ಬಂಧನದಲ್ಲಿರಿಸಿಕೊಂಡು ಸಾಕುತ್ತಿರುತ್ತಾರೆ. ಅದಕ್ಕೂ ಇದೇ ನೆಲೆ. ಆ ಆಟೋವನ್ನು ನಿತ್ಯ ಜೀವನಾವಶ್ಯಕತೆಗಳಿಂದ ಅಲಂಕರಿಸಿರುತ್ತಾರೆ ಆ ಅಲಂಕಾರವೇ ಇವರ ಬದುಕಿನ ಅನಾವರಣ!
ತಮ್ಮ ಉದ್ಯೋಗ ತಮ್ಮ ಊರಿನಲ್ಲಿ ಹೊಟ್ಟೆ ತುಂಬಿಸದ ಕಾರಣ ವರುಷದಲ್ಲಿ ಆರು ತಿಂಗಳಿಗೂ ಅಧಿಕ ಸಮಯ ಊರುಬಿಟ್ಟು ಬೇರೆ ಊರಿಗೆ ಹೋಗುತ್ತಾರೆ. ಪಟ್ಟಣದ ರಸ್ತೆ ಬದಿಯಲ್ಲಿ ಆಟೋಗಳನ್ನು ಸಾಲಾಗಿ ಆಟೋದ ಹಿಂಬದಿ ರಸ್ತೆಗೆ ವಿರುದ್ದವಿರುವಂತೆ ನಿಲ್ಲಿಸಿ ಅದರ ಹಿಂದೆ ಗಾಳಿ, ಬಿಸಿಲು, ಮಳೆಯೆನ್ನದೆ ರೈತರ ಉಪಕರಣಗಳ ತಯಾರಿಕೆಗೆ ಬಯಲ ಆಲಯದಲ್ಲೇ ತೊಡಗುತ್ತಾರೆ. ಆ ನಗರದಲ್ಲಿ ಗಿರಾಕಿಗಳು ಕಡಿಮೆಯಾಗುತ್ತಿದ್ದಂತೆ ಬೇರೆ ಪಟ್ಟಣಕ್ಕೆ ಹೋಗಲು ಗಂಟು ಮೂಟೆ ಕಟ್ಟುತ್ತಾರೆ. ಅಲ್ಲಿಯೂ ಗಾಳಿ ಬಿಸಿಲು ಎನ್ನದೆ ಕಮ್ಮಾರಿಕೆ ಕೆಲಸ ಮಾಡುತ್ತಾರೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ವಿವಿಧ ಜಿಲ್ಲಾ ಸ್ಥಳಗಳ ಮುಖ್ಯ ಬೀದಿಯ ಪಕ್ಕ ಕೆಲಸ ಮಾಡುತ್ತಾರೆ. ಈ ಮುಖ್ಯ ನಗರಗಳ ಮುಖ್ಯ ಸ್ಥಳಗಳಲ್ಲಿ ಕೆಲಸ ಮಾಡಿದರೂ ಇವರು ಬಡತನ ನೀಗಿಸುವ, ವಲಸೆ ಹೋಗದಂತೆ ತಡೆಯುವ ಕಾನೂನು ರೂಪಿಸಿ, ಕಾರ್ಯಕ್ರಮ ಹಮ್ಮಿಕೊಂಡವರ ಕಣ್ಣಿಗೆ ಕಾಣಿಸದಿರುವುದು ಅಚ್ಚರಿ! ದೀಪದ ಅಡಿಯಲ್ಲೇ ಕತ್ತಲೆ ಆವರಿಸಿದಂತೆ! ಊರೂರಿಗೆ ಹೋಗುವಾಗ ಮಕ್ಕಳನ್ನೂ ಶಾಲೆ, ಮನೆ, ಮಠ ಬಿಡಿಸಿ ತಮ್ಮ ಹಿಂದೆ ಕರೆದೊಯ್ಯುತ್ತಾರೆ.
ತಮ್ಮ ಸರ್ವಸ್ವವಾದ ಲಗೇಜ್ ಆಟೊ Appeಗೆ ತಮಗೆ ಬೇಕಾದಂತೆ ಟಾಪ್ ಹಾಕಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡಿರುತ್ತಾರೆ. ಇವರು ಕಮ್ಮಾರರಾದ್ದರಿಂದ ಕಬ್ಬಿಣದಿಂದ ಬಯಸಿದ ಹತಾರಗಳ ತಯಾರಿಸುವುದು ಇವರ ಕೆಲಸ. ಉಪ ಕಸುಬುಗಳ ಅರಿಯರು. ರಸ್ತೆಯ ಪಕ್ಕದಲ್ಲೇ ಕುಲುಮೆ ಸ್ಥಾಪಿಸಿ ರೈತರಿಗೆ, ಇತರರಿಗೆ ಬೇಕಾದ ಕೊಡಲಿ, ಮೊಚ್ಚು, ಚಾಕು, ಗುದ್ದಲಿ, ಕುಡುಗೋಲು, ನೇಗಿಲ ಕುಳ ಮುಂತಾದವುಗಳ ತಯಾರಿಸಿ ಮಾರುತ್ತಾರೆ. ಹಾಗೆ ರೈತರ ಮೊಂಡಾದ ರೈತೋಪಕರಣಗಳ ಅವಶ್ಯಕತೆಗೆ ತಕ್ಕಂತೆ ಹರಿತಗೊಳಿಸಿ ಬಯಸಿದಂತೆ ಅಥವಾ ಅವಶ್ಯಕತೆಗೆ ತಕ್ಕಂತೆ ಆಕಾರಗಳ ಬದಲಿಸಿ ಕೊಡುತ್ತಾರೆ. ಕೊಲೆ ಮಾಡಲು ಉಪಯೋಗಿಸುವ ಲಾಂಗಿಗೂ ಮಾಂಸ ಕೊಚ್ಚುವ ಮೊಚ್ಚಿಗೂ ಗಿಡ ಮರ ಕಡಿಯುವ ಕೊಡಲಿ ಫಸಲು ಕೊಯ್ಯುವ ಕುಡುಗೋಲಿಗೂ ನೆಲ ಅಗೆಯುವ ಗುದ್ದಲಿಗೂ ಹಣ್ಣು ತರಕಾರಿ ಹೆಚ್ಚುವ ಚಾಕಿಗೂ ಬೇಧಭಾವ ಮಾಡುವುದಿಲ್ಲ! ತಮಗೆ ತುತ್ತಿನ ಚೀಲ ತುಂಬಬೇಕಷ್ಟೆ! ಯಾರು ಯಾವ ಉದ್ದೇಶದಿಂದ ಆಯುಧಗಳ ತಯಾರಿಸಿಕೊಂಡು ಹೋಗುತ್ತಾರೆಂಬ ವಿಷಯ ಇವರಿಗೆ ಬೇಡವಾದುದು! ಈ ಉದ್ಯೋಗ ಬಿಟ್ಟರೆ ಬೇರೆ ಉದ್ಯೋಗ ಅರಿಯರು. ಗಂಡಸರು ಕುಲುಮೆ ಸಾಧನ ಉರಿಸಲು ಎಡಗೈಯಿಂದ ಬೆಂಕಿಯಾಗಿಸುವ ಸಾದನವನ್ನು ತಿರುವುತ್ತಾ ಅಥವಾ ತಿದಿ ಹೊತ್ತುತ್ತಾ ಅಥವಾ ಸೈಕಲ್ ಚಕ್ರದ ಸಾಧನ ತಿರುಗಿಸುತ್ತಾ ಬಲಗೈಯಿಂದ ಮೊಂಡಾದ ರೈತರ ಆಯುಧವ ಕುಲುಮೆಯಲ್ಲಿ ಕೆಂಪಗೆ ಕಾಯಿಸಿ ಇಕ್ಕಳದಲ್ಲಿ ಹಿಡಿದು ಕಬ್ಬಿಣದ ಪೀಠದಮೇಲೆ ಇಡುತ್ತಾನೆ. ಅವನ ಸಂಗಾತಿ ದಪ್ಪ ಸುತ್ತಿಗೆ ಹಿಡಿದು ಚಕ್ರಾಕಾರವಾಗಿ ತಿರುಗಿಸುತ್ತಾ ಆ ಕಾದ ಕಬ್ಬಿಣವ ಬಿಡದೆ ಒಂದೇ ಸಮನೆ ಬಡಿಯುತ್ತಾಳೆ.
ಏಕೆಂದರೆ ಕಬ್ಬಿಣ ಕಾದಾಗಲೆ ಬಾಗುವುದು! ಬಯಸಿದ ಆಕಾರ ಕೊಡಲು ಸಾಧ್ಯವಾಗುವುದು! ತಣ್ಣಗಾಗುವ ಮುನ್ನ ಬಡಿಯಬೇಕು. ಪ್ರಯುಕ್ತ ವೇಗವಾಗಿ ಬಡಿಯುತ್ತಾಳೆ. ಜತೆಗೆ ಅವನು ಕಾದ ಉಪಕರಣದ ಯಾವ ಭಾಗಕ್ಕೆ ಬಡಿಯಬೇಕು ಎಂದು ಮನದಲ್ಲಿ ಅಂದುಕೊಂಡು ತಿರುಗಿಸುವುದು ಮಗ್ಗಲು ಬದಲಿಸುವುದು ಮಾಡುತ್ತಾನೋ ಅಲ್ಲಿಗೇ ಅವನ ಮನವರಿತು ಬಡಿಯುವವಳು ಸರಿಯಾಗಿ ಬಡಿಯುತ್ತಾಳೆ. ಇದು ತುಂಬ ಶ್ರಮದ ಕಲೆಗಾರಿಕೆಯ ಕೆಲಸವೂ ಹೌದು! ಕಾಸಿದ ಆಯುಧ ಹಿಡಿದವ ತಾನು ಬಯಸಿದ ಆಕಾರಕ್ಕೆ ಬರುವಂತೆ ಅದನ್ನು ತಿರುಗಿಸುವುದ ತಾನು ಬೇಕೆಂದ ಕಡೆ ಅವರು ಬಡಿಯುವಂತೆ ಮಾಡುವುದು ಮಾಡುತ್ತಾನೆ. ಕಾವು ಕಡಿಮೆ ಆದಮೇಲೆ ಮತ್ತೆ ಕಾಯಿಸಿ ಬಡಿಸಿ ಬಯಸಿದ ಆಕಾರಕ್ಕೆ ಬರುವಂತೆ ಮಾಡುತ್ತಾನೆ. ತಾನೂ ಸಣ್ಣ ಸುತ್ತಿಗೆ ಹಿಡಿದು ಸಣ್ಣ ಏಟು ಕೊಟ್ಟು ಪೂರ್ಣ ಅಂತಿಮ ರೂಪು ಕೊಡುತ್ತಾನೆ. ಅವನದೂ ಒಂದು ಕಲೆಯೆ! ಅದರ ಪ್ರತಿಫಲ ಪಡೆದು ಅದರಿಂದ ಬಂದ ಹಣದಿಂದ ಅಂದಿನ ಆಹಾರ ತಯಾರಿಸುವ ಪಡಿತರ ತಂದು ಅದೇ ಕುಲುಮೆಯ ಮೇಲಿಟ್ಟು ಬೇಯಿಸುತ್ತಾರೆ. ರಸ್ತೆಯ ಮೇಲೆ ಒಂದರ ಹಿಂದೆ ಒಂದು ಎದುರ ಬದರ ವೇಗವಾಗಿ ಓಡುವ ವಾಹನಗಳು ಎಬ್ಬಿಸಿದ ಹೊಗೆ, ಧೂಳು ಅಡುಗೆ ಮಾಡುವ ತಟ್ಟೆ ಪಾತ್ರೆ ಆಹಾರದ ಮೇಲೆಲ್ಲಾ ಬಂದು ಬಂದು ಬೀಳುತ್ತಿರುತ್ತದೆ. ಅಲ್ಲೆ ಆ ಬಯಲಲೇ ಕುಲುಮೆಯ ಮೇಲೆಯೇ ರೊಟ್ಟಿ ಬೇಯಿಸುತ್ತಾರೆ. ಅದರ ಮೇಲೂ ಧೂಳು ತನ್ನ ಕೆಲಸವ ವಂಚನೆಯಿಲ್ಲದೆ ಮಾಡುತ್ತದೆ. ಅ ಬೀದಿ ಪಕ್ಕದಲ್ಲೇ ಕುಲುಮೆಯ ಸುತ್ತ ಕುಳಿತು ಆಹಾರ ತಿನ್ನುತ್ತಾರೆ. ಅವರೊಂದಿಗೆ ಮಕ್ಕಳೂ ತಿನ್ನುತ್ತವೆ. ಆಗಲೂ ಧೂಳು, ಹೊಗೆ ತನ್ನ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತದೆ! ಬಯಲಲೆ ಶೌಚ, ಆಹಾರ, ವಿಹಾರ, ವೃತ್ತಿ, ಬದುಕು! ಎಷ್ಟು ದಿನಕ್ಕೊಮ್ಮೆಯೋ ಸ್ನಾನ?
ಶಾಲೆಯೆಂಬ ಅಕ್ಕರದ, ಜ್ಞಾನದ ತೋಟದಲ್ಲಿ ಸಮವಸ್ತ್ರ ಧರಿಸಿ, ಹೆಗಲಿಗೆ ಪುಸ್ತಕದ ಚೀಲ ಹಾಕಿಕೊಂಡು ಸಹಪಾಠಿಗಳೊಂದಿಗೆ ಕುಣಿಯುತ, ಕಲಿಯುತ ನಲಿಯುತ ಅಕ್ಕರಗಳೊಂದಿಗೆ ಆಡಬೇಕಾದವರು ಪೂರ್ವ ಪ್ರಾಥಮಿಕ ಶಾಲೆಯಿರಲಿ ಪ್ರಾಥಮಿಕ ಶಾಲೆಯನ್ನೂ ಸಹ ಕಾಣದೆ ಚಿಂದಿಯುಟ್ಟು, ಕೊಳಕು ಬಟ್ಟೆ ಧರಿಸಿ, ಕೆಲವರು ಅರೆ ನಗ್ನರಾಗಿ ರಸ್ತೆ ಬದಿಯ ಧೂಳು, ಗಲೀಜಿನಲ್ಲಿ ಕಲ್ಲು ಮುಳ್ಳಿನಲಿ ಮನ ಬಂದಂತೆ ಆಡುತ್ತಾ ಪೋಷಕರು ಕೆಲಸ ಮಾಡುವಾಗ, ಅಡುಗೆ ಮಾಡುವಾಗ ಸಹ ಅವರನ್ನು ಸುತ್ತುತ್ತಾ ಅವುಗಳ ಪಾಡಿಗೆ ಅವು ರಸ್ತೆ ಬದಿಯಲ್ಲಿ ಆಡುತ್ತಿರುವುದು ಕಾಣುವಂತಾಗಿದೆ! ತಮ್ಮ ಎದುರೇ ಸಮವಸ್ತ್ರ ಧರಿಸಿ ಕೆಲವರು ನಡೆದು ಶಾಲೆಗೆ ಹೋಗುವುದ ಮತ್ತೆ ಕೆಲವರು ಸ್ಕೂಟರುಗಳಲಿ ತಂದೆ ತಾಯಿಯರು ಶಾಲೆಗೆ ಬಿಟ್ಟು ಬರುವುದ ಕರೆತರುವುದ ಹಲವರು ಶಾಲಾ ಬಸ್ಸುಗಳಲ್ಲಿ ಶಾಲೆಗೆ ಹೋಗುವುದನ್ನು ಆಸೆಗಣ್ಣಿನಿಂದ ಬಿಡುಗಣ್ಣಿನಿಂದ ನಿಂತು ನೋಡುತ್ತವೆ. ಶಾಲೆಗೆ ಹೋಗುವ ಕನಸು ಕಾಣಲು ಸಹ ಅವಕ್ಕೆ ಸಾಧ್ಯವಾಗುತ್ತಿಲ್ಲ!
೬ ವರುಷದಿಂದ ೧೬ ವರುಷದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಅನೇಕ ಕಾನೂನು ನಿಯಮ ಕಾರ್ಯಕ್ರಮಗಳನ್ನು ಸರಕಾರ ರೂಪಿಸಿದ್ದರೂ ಜತೆಗೆ ಬಡವರಿಗಾಗಿಯೇ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಜತೆಗೆ ಬಿಸಿಯೂಟ, ಹಾಲು, ಸಮವಸ್ತ್ರ, ಶೂ, ಬ್ಯಾಗು, ನೋಟ್ ಪುಸ್ತಕ, ಶುಚಿ, ಪಠ್ಯ ಪುಸ್ತಕ, ವಿದ್ಯಾರ್ಥಿವೇತನ ಮುಂತಾದ ಅನುಕೂಲಗಳನ್ನು ಮಾಡಿದ್ದರೂ ಅವುಗಳಿಂದ ಇವರ ಮಕ್ಕಳು ವಂಚಿತರಾಗಿರುವುದು, ವಿದ್ಯುನ್ಮಾನ ಜಮಾನದಲ್ಲಿ ಅನಕ್ಷರಸ್ಥರಾಗುತ್ತಿರುವುದು ದುರ್ದೈವ! ಪೋಷಕರ ನಿತ್ಯದ ಬದುಕಿನ ಸುತ್ತಲೆ ಇವರ ಬದುಕು ಗಾಣದೆತ್ತಿನಂತೆ ಸುತ್ತುತ್ತಿರುವುದು ದುರದೃಷ್ಟಕರ! ಸ್ವಚ್ಛ ಭಾರತದ ಕನಸು ನನಸು ಮಾಡಲು ದೇಶ ದಾಪುಗಾಲಿಡುತ್ತಿರುವಾಗ ಬಯಲಲೇ ಧೂಳು ಗಲೀಜಿನಲ್ಲೇ ಇವರ ಎಳೆಯ ವಯಸ್ಸಿನ, ಹೂವಿನ ಮನಸ್ಸಿನ ಭಾರತದ ಬಾರೀ ಭವಿಷ್ಯಗಳ ಬದುಕು ಕಮರುತ್ತಿದ್ದರೂ ಸಂಬಂಧಿಸಿದವರು ಗಮನಿಸದಿರುವುದು ವ್ಯವಸ್ಥೆಯ ದೋಷವಲ್ಲವೆ?
ಹೀಗೆ ಅನೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕೆಲವು ಪೋಷಕರು ಆಗಾಗ ವಲಸೆ ಹೋಗುತ್ತಾರೆ. ಮಕ್ಕಳನ್ನೂ ಕೆಲವು ವಾರ ಕರೆದೊಯ್ಯುವುದು, ಕೆಲವು ದಿನಗಳು ಸಂಬಂಧೀಕರ ಮನೆಯಲ್ಲಿ ಬಿಟ್ಟು ಹೋಗುವುದು ಮಾಡುವುದರಿಂದ ಆ ಮಕ್ಕಳು ಕೆಲವು ದಿನ ಶಾಲೆಗೆ ಬರುವುದು ಬಿಡುವುದು ಮಾಡುತ್ತಾರೆ. ಇದರಿಂದ ಕೆಲವು ವಾರನೋ ತಿಂಗಳುಗಳೊ ಶಿಕ್ಷಣದಿಂದ ವಂಚಿತರಾಗುತ್ತಾರೆ.
ಬಡವರಿಗೆಂದೇ ಅನೇಕ ಕಾರ್ಯಕ್ರಮಗಳು ಇರುವುದು ತಮ್ಮ ಗಮನಕ್ಕೆ ಬಂದಿಲ್ಲ! ಅವು ಇದ್ದರೂ ತಮಗೆ ತಲುಪುತ್ತಿಲ್ಲ! ನಾವು ಊರಿನಲ್ಲಿ ಶೀಟಿನ ಆಸರೆಯ ಮನೆಯಲ್ಲಿದ್ದೇವೆ. ನಮ್ಮದು ಅಲೆಮಾರಿ ಬದುಕು! ಕೆಲವು ತಿಂಗಳು ಊರಲ್ಲಿರುತ್ತೇವೆ. ಮತ್ತೆ ಕೆಲವು ತಿಂಗಳಿ ನಾಡಿನ ಮುಖ್ಯ ನಗರಗಳಲ್ಲಿ ಕಳೆಯುತ್ತೇವೆ. ನಮ್ಮ ಬದುಕೇ ಅತಂತ್ರದ್ದಾಗಿದೆ. ನಮ್ಮ ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಯ ಮುಖವನ್ನು ಕಾಣವು. ಶಾಲೆಗೂ ಕಳುಹಿಸಲಾಗುತ್ತಿಲ್ಲ. ನಾವು ಮಕ್ಕಳೊಂದಿಗೆ ಹೀಗೆ ದುಡಿಯಲು ಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸುವವರು ಯಾರು? ನಮ್ಮ ವೃದ್ದ ಪೋಷಕರು ಮಾತ್ರ ಮನೆಯಲ್ಲಿರುತ್ತಾರೆ. – ಎಂದು ದೇವ ಎಂಬ ಬಿಜಾಪುರದ ಸಮೀಪವಿರುವ ತಾಂಡಾದವ ಮತ್ತು ಅವನೊಂದಿಗಿದ್ದ ಮಹರಾಷ್ಟ್ರದ ಕಮ್ಮಾರನೊಬ್ಬ ಮಾತಿಗೆಳೆದಾಗ ಕನ್ನಡ, ಹಿಂದಿ ಭಾಷೆಯ ಸೇರಿಸಿ ಮೇಲಿನದನ್ನು ಹೇಳಿದ್ದಾನೆ. ಜತೆಗೆ ಇನ್ನೂ ಅನೇಕ ಇದರಲ್ಲಿರುವ ವಿಷಯಗಳು ಅವರವೇ ಆಗಿವೆ!
ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಬೇಕೆಂದಿದ್ದರೂ ಪಡೇ ಭಾರತ್ ಬಡೇ ಭಾರತ್, ಓದು ಕರ್ನಾಟಕಗಳಿದ್ದರೂ ಇವರಿಗೆ ಅವುಗಳು ತಲುಪಿಸದಂತಾಗಿರುವುದು ವ್ಯವಸ್ಥೆಯ ದೋಷವಲ್ಲವೆ? ಇಂತಹ ಇನ್ನೂ ಕಣ್ಣಿಗೆ ಕಾಣಿಸದ, ಕಾಣಿಸಿದರೂ ತಲುಪದಿರುವ ಅನೇಕ ವ್ಯವಸ್ಥೆಯ ಲೋಪಗಳು ಎಷ್ಟಿವೆಯೋ? ಸರಕಾರಗಳು ಇವರ ಕಡೆ ಗಮನಹರಿಸಬೇಕು. ಉತ್ತಮ ಕಾರ್ಯಕ್ರಮಗಳ ರೂಪಿಸುವುದಷ್ಟೇ ಸರಕಾರಗಳ ಜವಾಬ್ದಾರಿಯಾಗದೆ ಅಂತಹವುಗಳು ಸಂಬಂಧಿಸಿದವರಿಗೆ ತಲುಪುವಂತೆ ನೋಡಿಕೊಳ್ಳುವುದು ಉತ್ತಮ ಕಾರ್ಯಕ್ರಮಗಳ ರೂಪಿಸುವದಕ್ಕಿಂತಾ ಮುಖ್ಯವಾಗಬೇಕು! ಇವರ ಬದುಕಿಗೆ ನೆಲೆ ಕಲ್ಪಿಸುವುದು, ಭಾರತದ ಭವಿಷ್ಯಗಳಾದ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಸರಕಾರದ ಜತೆಗೆ ಎಲ್ಲರ ಹೊಣೆಯೂ ಆಗಿದೆ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.