ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ catagory ಅವ್ಳು. ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ ಎದುರು ಮನೆಯ ಗೇಟ್ ದಾಟಿ ಒಳಗಡೆ ಹೋದೆ ಬರ್ತೀಯಾ ಪುಟ್ಟಾ ಆಟ ಆಡೋಣ ಅಂತ ಕೇಳಿಕೊಂಡು .ಅವ ಸುಮ್ಮನೆ ನಕ್ಕು ನೀವು ಆಟ ಆಡೋದನ್ನ ನೋಡೋದೆ ಖುಷಿ ನಂಗೆ ಇಲ್ಲೇ ಕೂತು ನೋಡ್ತೀನಿ ಅಂತಂದ.ಯಾಕೋ ಆಶ್ಚರ್ಯ ಅನಿಸಿಬಿಟ್ತು ಆ ಪುಟ್ಟ ಪೋರನ ಮಾತು.ಆದರೂ ಅವನ ಜೊತೆ ಆಟ ಆಡಲೇಬೇಕಂತ ನಿರ್ಧರಿಸಿ ಬಂದಿದ್ದವಳಿಗೆ ಅಷ್ಟು ಬೇಗ ಮಾತಲ್ಲಿ ಸೋಲೋ ಮನಸಿರಲಿಲ್ಲ. ನೀ ಈಗ ಆಟ ಆಡೋಕೆ ಬರ್ತೀಯ ಅಷ್ಟೇ ಅಂತಂದು ಎದ್ದು ನಿಲ್ಲಿಸೋಕೆ ಹೋದೆ. ಆಗಲೇ ತಿಳಿದಿದ್ದು ಅವ ಎದ್ದುನಿಲ್ಲೋಕಾಗಲ್ಲ ,ಅವನ ಕಾಲುಗಳಿಗೆ ಆ ಶಕ್ತಿಯಿಲ್ಲ ಅನ್ನೋ ವಾಸ್ತವ!.
ಅರ್ಧ ಗಂಟೆಯ ಮುಂಚಿನ ಪರಿಚಯ.ಕಣ್ಣಲ್ಲಿ ನಿಲ್ಲಿಸೋಕಾಗದಷ್ಟು ನೀರು! ಹಹ್! ಮುಗ್ಧತೆಯನ್ನ ಮಾತ್ರ ತುಂಬಿಕೊಂಡಿರೋ ಆ ಪುಟ್ಟ ಕಂಗಳಿಗೆ,ಆ ಚಿಕ್ಕ ಚಿಕ್ಕ ಕಾಲ್ಗಳಿಗೆ ಅದ್ಯಾಕೆ ಆ ತರಹದ್ದೊಂದು ದುಃಖ ಖಾಯಂ ಆಯ್ತು ಅನ್ನೋ ಪ್ರಶ್ನೆಯ ಪ್ರತಿಬಿಂಬ ಅವನಮ್ಮನ ಕಣ್ಣಲ್ಲಿ.
ಜಗದೆಲ್ಲಾ ಕೌತುಕಗಳ ತುಂಬಿಕೊಂಡಿರೋ ಕಂಗಳವು. ಏನೋ ಒಂದು ಆಕರ್ಷಣೆ ಇದೆ ಆ ಕಂಗಳಲ್ಲಿ. ನಡೆಯೋಕೇ ಆಗದಿದ್ರೂ ಎದ್ದು ನಿಲ್ತಾನೆ ಅವ.ಅಮ್ಮ ಹೋಗಿ ಕೈ ಹಿಡಿದುಕೊಂಡ್ರೆ ಎಷ್ಟು ದಿನ ಅಂತ ಕೈ ಹಿಡಿದುಕೊಂಡಿರ್ತೀಯ ಅಮ್ಮಾ ಕೊನೆಪಕ್ಷ ನಾ ಎದ್ದು ನಿಲ್ಲೋಕಾದ್ರೂ ಅವಕಾಶ ಕೊಡು ಅಂತಾನೆ! ಸ್ನಾನ ಮಾಡಿಸಿಕೊಡ್ತೀನಿ ಕಣೋ ಅಂತಂದ್ರೆ ನಾ ದೊಡ್ದವನಾಗಿದೀನಿ ನನ್ನ ಕೆಲಸಗಳ ನಂಗೆ ಮಾಡಿಕೊಳ್ಳೋಕೆ ಬಿಡಿ ಅಂತಾನೆ. ಅಪ್ಪ ಎತ್ತಿಕೊಳ್ಳೋಕೆ ಹೋದ್ರೆ ನಂಗೊಂದು ಸ್ಟಿಕ್ ಕೊಡಿಸಿ ಯಾವಾಗಲೂ ಎತ್ತಿಕೊಳ್ಳೋಕೆ ನಿಮಗೂ ಕಷ್ಟ ಆಗುತ್ತೆ ಅಂತಾನೆ. ಅರೆರೆ ಅವ ಪುಟ್ಟ ಹುಡುಗನೋ ದೊಡ್ಡ ಗೆಳೆಯನೋ ಅನ್ನೋ ಪ್ರಶ್ನೆ ನಂಗೆ…
ತನ್ನಿಂದ ಯಾರಿಗೂ ನೋವಾಗದಿರಲಿ ಬದಲು ಅಪ್ಪ ಅಮ್ಮನ ಬದುಕಿಗೆ ತಾನೇ ಊರುಗೋಲಾಗ ನಿಲ್ಲುವಂತಾಗಲಿ ಅಂತನ್ನೋ ಆ ಒಂಭತ್ತರ ಪೋರನಲ್ಲಿ ನಂಗೊಬ್ಬ ಪ್ರಬುದ್ಧ ಗೆಳೆಯ ಕಾಣ್ತಾನೆ. ಕಾಲಿಲ್ಲದ್ದು,ನಡೆಯೋಕಾಗದೇ ಇದ್ದಿದ್ದು, ಶಾಲೆಯಲ್ಲಿ ಯಾರೂ ಮಾತಾಡಿಸದೇ ಇದ್ದಿದ್ದು, ಎಲ್ಲರ ತರಹ ಆಟ ಆಡೋಕಾಗದೆ ಇದ್ದಿದ್ದು,ಅಮ್ಮನ ಜೊತೆಗೆ ಜಾತ್ರೆಗೆ ಹೋಗೋಕಾಗದೇ ಹೋದುದ್ದು, ಅಪ್ಪನ ಹೊಸ ಬೈಕ್ ಅಲ್ಲಿ ಕೂರೋಕಾಗದೇ ಹೋಗಿದ್ದು, ಪಕ್ಕದಲ್ಲೇ ಇರೋ ವಸ್ತುವ ತೆಗೆದುಕೊಳ್ಳೋಕೂ ಅಮ್ಮನ ಸಹಾಯ ಬೇಕಿರೋದು ಯಾವುದೂ ಅವನ ಬೇಸರಗಳೇ ಅಲ್ಲ. ಇದ್ಯಾವ ನೋವೂ ಅವನನ್ನ ಕಾಡ್ತಿಲ್ಲ. ಬದಲು ಈ ’ಇಲ್ಲ’ ಅನ್ನೋ ಕೊರಗು ಅವನಲ್ಲೊಂದು ಅದಮ್ಯ ಆತ್ಮವಿಶ್ವಾಸವ ಹುಟ್ಟಿ ಹಾಕಿದೆ. ಅವನ ಕಂಗಳಲ್ಲಿ ನಾ ಆ ಬದುಕ ಪ್ರೀತಿಯ ಇಂಚಿಂಚನ್ನೂ ಗ್ರಹಿಸಿದ್ದೀನಿ. ಅವನ ಈ ಬದುಕ ರೀತಿಯ ಬಗೆಗೆ ನಂಗೆ ತುಂಬಾ ಖುಷಿ ಇದೆ.ಜೊತೆಗೆ ಅವ ನನ್ನ ಪುಟಾಣಿ ಗೆಳೆಯ ಅನ್ನೋ ಹೆಮ್ಮೆಯಿದೆ.
ಅವ ಪ್ರೀತಿಯಿಂದ ’ಅಕ್ಕಾ’ ಅಂದ್ರೆ ನಂಗೆ ದೂರದ ಊರಲ್ಲಿರೋ ನನ್ನ ತಮ್ಮ ನೆನಪಾಗ್ತಾನೆ. ಅವ ಸುಳ್ಳು ಸುಳ್ಳೇ ಹಠ ಮಾಡೋವಾಗ ನಂಗೆ ನೋವೇ ಇಲ್ಲ ಅನ್ನೋ ಹಾಗೆ ನಕ್ಕುಬಿಡ್ತೀನಿ ನಾ. ಅದು ನನ್ನಕ್ಕ ಅಂದ್ರೆ ಅಂತ ಮುದ್ದು ಮಾಡಿಕೊಳ್ತಾನೆ ಆಗೆಲ್ಲಾ. ಬಂಧ ಬೆಸೆದಿರೋದು ಬರೀ ಅವನ ಜೊತೆ ಮಾತ್ರ ಅಲ್ಲ. ಅವನಮ್ಮ ನಂಗೊಬ್ಬ ಹೆಣ್ಣು ಮಗಳಿರದ ಕೊರತೆಯ ನೀ ನೀಗಿಸಿಬಿಟ್ಟೆ ಅಂತ ಎದೆಗವಚಿಕೊಳ್ತಾಳೆ. ಅವನ ಟೀಚರ್ಸ್ ಗಳು ಚಂದ ಚಂದದ ಪದ್ಯ ಬರೀತೀಯ ಅವ ಅಷ್ಟೇ ಚಂದದಿ ಕಂಪೋಸ್ ಮಾಡ್ತಾನೆ ಅಂತ ಕೆನ್ನೆ ಹಿಂಡಿ ಹೋಗ್ತಾರೆ. ಒಮ್ಮೆ ನಾನವನ ಅಕ್ಕ ಆದ್ರೆ ಒಮ್ಮೊಮ್ಮೆ ಅವ ನನ್ನ ಅಣ್ಣ ಆಗ್ತಾನೆ. ನಾ ಸುಮ್ಮನೆ ವಯೋಲಿನ್ ಹೇಳಿಕೊಡ್ತೀನಿ ಬಾರೋ ಅಂತಂದ್ರೆ ಗುರು ದಕ್ಷಿಣೆ ಅಂತ ನಾನೂ ನಿಂಗೆ ತಬಲ ಕಲಿಸಿಕೊಡ್ತೀನಿ ಅಂತಾನೆ. ಅಂದಹಾಗೆ ಈಗವ ನನ್ನ ತಬಲ ಗುರು ಕೂಡಾ!
ದಾರಿಯ ಮಧ್ಯದ ಅನಿರೀಕ್ಷಿತ ಸೋಲಿಗೆ ಕಂಗಾಲಾಗಿ ಕೂತಿದ್ದಾಗ ಸಿಕ್ಕ ಪುಟ್ಟ ಜೀವ ಅದು. ಬರೀ ಎದ್ದು ನಿಲ್ಲೋದನ್ನಷ್ಟೇ ಅಲ್ಲ ನಿಂತು ತಲೆಯೆತ್ತಿ ನಡೆಯೋದನ್ನೂ ಹೇಳಿಕೊಟ್ಟುಬಿಟ್ಟಿದ್ದಾನೆ. ಇನ್ನೇನಿದ್ದರೂ ನಿಲ್ಲದ ನಡಿಗೆ ಮಾತ್ರ. ಆ ನಡಿಗೆಯ ಸಂಪೂರ್ಣ ಖುಷಿ ಮಾತ್ರ ನನ್ನದು. ಬದುಕ ಜೊತೆಗಿನ ಯಾವುದೋ ಚಿಕ್ಕ ಚಿಕ್ಕ ಮನಸ್ತಾಪಗಳಿಗೆ ಬದುಕೇ ಕೊನೆಯಾಯ್ತು ಅಂತ ಕೊರಗೋ ನಮ್ಮಗಳಿಗೆ ಅವ ಅಲ್ಲಿ ಸುಮ್ಮನೆ ಕೂತು ಅದೆಷ್ಟು ಆತ್ಮಸ್ಥೈರ್ಯವ ರವಾನಿಸಿಬಿಡ್ತಾನೆ. ಅವನೊಳಗಿರೋ ಆ ಚೈತನ್ಯಕ್ಕೆ ನನ್ನದೊಂದು ಪ್ರೀತಿಯ ನಮನ.
ಆಗೆಲ್ಲಾ ಬೋರು ಅನ್ನುತ್ತಿದ್ದ ಸಂಜೆಗಳು ಈಗವನ ಜೊತೆ ಬಣ್ಣ ಬಣ್ಣವಾಗಿ ಕಾಣುತ್ತೆ. ಆಗಲೇ ಗಂಟೆ ಎಂಟಾಯ್ತು ಕಣೋ ಹೊರಡ್ತೀನಿ ಅಂತ ನಾ ಹೊರಟರೆ ಮತ್ತೆ ನಾಳೆ ಸಂಜೆ ಬೇಗ ಬಾ ಅಂತ ಕಳಿಸಿಕೊಡ್ತಾನೆ ಅವ.
ಒಂಟೊಂಟಿ ಅನ್ನೊಸೋ ಭಾವಗಳ್ಯಾವುವೂ ಕಾಡ್ತಿಲ್ಲ ಬದಲು ಸಂಜೆಗಳನ್ನ ತುಂಬಾ ಪ್ರೀತಿಸೋಕೆ ಶುರು ಮಾಡಿದ್ದೀನಿ.
ಒಂದಿಷ್ಟು ’ಇಲ್ಲ’ಗಳ ನಡುವೆಯೂ ಬದುಕ ಎಲ್ಲಾ ಖುಷಿಗಳು ನನ್ನೀ ಮುದ್ದು ಗೆಳೆಯನಿಗೆ ದಕ್ಕಲಿ. ಆ ಖುಷಿಗಳಲ್ಲಿ ಅವನ ಬದುಕ ಗೆಲುವಿರಲಿ. ಆ ಗೆಲುವ ಜೊತೆಗಿನ ಅವನ ಆತ್ಮವಿಶ್ವಾಸ ಭವಿಷ್ಯದಲ್ಲವನ ಕಾಯಲಿ. ಸುಮ್ಮನೆ ಪರಿಚಯವಾದ ಈಗ ಬರಿಯ ಪರಿಚಯವಲ್ಲದ ಈ ಆತ್ಮೀಕ ಪ್ರೀತಿಗೆ, ಇರಲಿ ನಿಮ್ಮದೂ ಒಂದು ಶುಭ ಹಾರೈಕೆ.
ಅವನಲ್ಲಿರೋ ಬದುಕ ಪ್ರೀತಿಗೆ,ಅದರ ರೀತಿಗೆ..ಕಣ್ಣ ಹನಿಗಳೇ ಕಾಣಿಕೆ.
ಪ್ರೀತಿಯಿಂದ.
ಪಂಜುವಿನ ನೂರರ ಸಂಚಿಕೆಗೆ ಪ್ರೀತಿಯ ಶುಭಾಶಯಗಳು.
ಈ ನೂರು ಸಾವಿರಕ್ಕೆ ಮುನ್ನುಡಿಯಾಗಲಿ.
ಭಾಗ್ಯ ಭಟ್
*****
ಶತಕದ ವೀರ ಸಾಧನೆ ಮಾಡಿ ಮುನ್ನುಗ್ಗುತಿರುವ ಪಂಜು ಮತ್ತು ತಂಡಕ್ಕೆ ಅಭಿನಂದನೆಗಳು
ಜೀವನದ ಪಥದಲ್ಲಿ ಜೊತೆಯಲ್ಲಿ ಯಾರು ಹೆಜ್ಜೆ ಹೆಜ್ಜೆ ಹಾಕುತ್ತಾರೆ.. ಯಾರು ಮನದ ಅಂಗಳಕ್ಕೆ ಪಾದ ಊರುತ್ತಾರೆ.. ಇವೆಲ್ಲಾ ಅನಿರೀಕ್ಷಿತ. ಆದರೆ ಇಂಥಹ ಅನಿರೀಕ್ಷಿತ ಜೊತೆಗಾರರು ನಮ್ಮ ಜೀವನವನ್ನು ಸುಂದರವನವನ್ನಾಗಿ ಸಹಾಯ ಮಾಡುತ್ತಾರೆ.
ಎರಡಕ್ಷರ ಕಲಿಸಿದಾತ ಗುರುಎನ್ನುತ್ತಾರೆ .. ಇಂಥಹ ಗುರುವನ್ನು ಪಡೆದ ನಿನ್ನ ಬಾಳು ಸುಂದರವಾದ ಹೂ ಬನವಾಗಲಿ.
ಬೇಸರಕ್ಕೆ ಜೊತೆಯಾದ ಪುಟ್ಟ ಪುಟ್ಟ ಮಕ್ಕಳು ದೊಡ್ಡ ದೊಡ್ಡ ಪಾಠವನ್ನೇ ಕಲಿಸುತ್ತಾರೆ ಎನ್ನುವ ಮಾರ್ಮಿಕ ಸಂದೇಶ ನಿನ್ನ ಲೇಖನದಲ್ಲಿ ಇದೆ.
ಸೂಪರ್ ಇಷ್ಟವಾಯಿತು.
nice ಭಾಗ್ಯ.. ವಯೋಲಿನ್ ಕಲಿಸುತ್ತೀನಿ ಅಂದ್ರೆ ತಬಲಾ ಕಲಿಸುತ್ತೀನಿ ನಿನಗೆ ಗುರುದಕ್ಷಿಣೆಯಾಗಿ ಅನ್ನೋ ಅವನ ಭಾವ..ತಮ್ಮನಾಗಿ , ಅಣ್ಣನಾಗೋ ಪರಿ, ಎದ್ದು ನಿಲ್ಲೋಕಾಗದಿದ್ದರೂ ತನ್ನ ಕೆಲಸ ತಾನೇ ಮಾಡ್ಕೊತೀನೆಂಬ ಆತ್ಮವಿಶ್ವಾಸ.. ಎಲ್ಲ ನೋಡಿದ್ರೆ ಎಂತವರಿಗಾದರೂ ಜೀವನದ ಮೇಲೆ ಪ್ರೀತಿ ಉಕ್ಕುವಂತದ್ದೇ. ಚೆಂದದ ಬರಹ
ನೂರರ ಪಂಜುವಿಗೆ ನನ್ನದೂ ಒಂದು ಶುಭಾಶಯ 🙂
ಇಲ್ಲಗಳನ್ನು ಇನ್ನಷ್ಟು ಹತ್ತಿರವಾಗಿ ನೋಡಿದ್ದೇನೆ ಭಾಗ್ಯ.. 🙁
ತಮ್ಮ ನೆನಪಾದ..
ಕಣ್ಣಂಚಲಿ ಒಂದು ಹನಿ ಜಾರಿ ಬಿತ್ತು.
-ತುಂಬಾ ಆಪ್ತ ಬರಹ..
ಪಂಜುವಿಗೆ ಶುಭಾಶಯಗಳು..