ಥತ್ತೇರಿಕೆ…!ಮತ್ತೆ ಫೇಲಾಗ್ ಬಿಟ್ನಾ. . ಚೆನ್ನಾಗೆ ಬರೆದಿದ್ನಲ್ಲ. . ಯಾಕೋ ಈ ದೇವರದು ಅತಿಯಾಯ್ತು. . ನನ್ನ ಸುಖವಾಗಿ ಬದುಕಲು ಬಿಡಲೇಬಾರದು ಅಂತ ಇದ್ರೆ ಯಾಕ್ ಹುಟ್ಟಿಸಿದ್ನೋ, ಮನೆಗೆ ಹೋಗಿ ಏನು ಮುಖ ತೋರಿಸೋದು. . .
ಏನು. . . ?ಮತ್ತೆ ಲಾಸಾ. . . ಸರ್ಯಾಗ್ ನೋಡಿ ಹೇಳೋ, ಈ ಸಲಾ ಹೆಚ್ಚು ಕಮ್ಮಿ ಆದ್ರೆ ನಾನಷ್ಟೇ ಅಲ್ಲಾ ಅಪ್ಪ ಅಮ್ಮ ಹೆಂಡ್ತಿ ಮಕ್ಕಳು ಎಲ್ರೂ ಸೇರಿ ನೇಣು ಹಾಕ್ಕೋಬೇಕಾಗುತ್ತೆ. . .
ಛೇ, ರಕ್ತದಲ್ಲಿ ಕವಿತೆ ಬರ್ದೆ, ಬ್ರಾಂಡ್ ನ್ಯೂ ಬೈಕ್ ತಗೊಂಡೆ, ರಾಣಿ ತರಹ ಪ್ರೀತಿ ಮಾಡ್ತೀನಿ ಅಂದ್ರೂನು ಇವಳು ಒಪ್ಕೋತಿಲ್ವಲ್ಲಾ. . ಇವಳಿಗೆ ಬೇಡವಾಗಿರೋ ಈ ಲೈಫು ನನಗ್ಯಾಕೆ. . . .
ಹೀಗೆ ಬೇರೆಬೇರೆ ಸನ್ನಿವೇಶಕ್ಕೆ ಸಿಲುಕಿ ನೊಂದು ತಮ್ಮೆಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ದಾರಿ ಎಂದುಕೊಂಡು ತಮ್ಮ ತಮ್ಮ ಮನೆಯಿಂದ ಹೊರಟು ರೈಲ್ವೇ ಸ್ಟೇಷನ್ ಸೇರುತ್ತಾರೆ. ಅಲ್ಲಿ ಹೇಗೆ ಸಾಯುವುದು ಎನ್ನುವುದರ ಬಗ್ಗೆ ಯೋಚಿಸುತ್ತ ಕೂತಿರುತ್ತಾರೆ.
ಹೀಗೆ ತಾವು ಏನ್ ಮಾಡಿದ್ರು ಅದು ತಮ್ಮ ವಿರುದ್ಧವೇ ಆಗ್ತಿದೆ ಅಂತ ಯೋಚಿಸೋರಿಗೆ ರೈಲ್ವೆ ಹಳಿ, ದೂರದ ಮರ, ಹಾಳು ಬಾವಿ ತಮ್ಮ ಸಾವಿನ ಸಾಧನಗಳಾಗಿ ಕಾಣುತಿರುತ್ತವೆ. ಆದರೇ ಸಂಜೆಯಾದರೂ ಯಾರ ಸಾವಿನ ಸುದ್ದಿಯೂ ಬರುವುದಿಲ್ಲ. ಯಾವ ಹಳಿಗೂ ರಕ್ತದ ಕಲೆ ಅಂಟಿರುವುದಿಲ್ಲಾ, ಯಾವ ಮರಕ್ಕೂ ದೇಹವೊಂದು ನೇತಾಡುತಿರಲಿಲ್ಲ, ಯಾವ ಬಾವಿಯ ನೀರು ಕೊಳೆಯಾಗಿರುವುದಿಲ್ಲ, ಬದಲಾಗಿ ಅವರೆಲ್ಲರೂ ತಮಗೆ ಬದುಕು ಕೊಟ್ಟ ತಂದೆ ತಾಯಿಯರಿಗೂ ಹಾಗೂ ದೇವರಿಗೂ ಕೈ ಮುಗಿದು ಮತ್ತೆ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಹಾಗಾದರೆ ಆಗಿದ್ದೇನು, ಸಾಯಬೇಕಿದ್ದ ಅವರುಗಳು ಬದುಕುಳಿದಿದ್ದು ಹೇಗೆ. . ತಿಳಿದುಕೊಳ್ಳಬೇಕೇ ಹಾಗಾದ್ರೆ ಮುಂದೆ ಓದಿ.
ಆತ್ಮಹತ್ಯೆ ಒಂದೇ ದಾರಿ ಎಂದುಕೊಂಡು ತಮ್ಮ ತಮ್ಮ ಮನೆಯಿಂದ ಹೊರಟು ರೈಲ್ವೇ ಸ್ಟೇಷನ್ ಸೇರುತ್ತಾರಲ್ಲಾ ಅಲ್ಲಿ ಅವರಿಗೆ ಬದುಕನ್ನು ಬದುಕುವ ನಿಜವಾದ ರೀತಿಯ ಅರಿವಾಗಿರುತ್ತೆ.
ಪರೀಕ್ಷೆಯಲ್ಲಿ ಫೇಲ್ ಅದ್ನಲ್ಲಾ ಅಂತಾ ಕೈ ಹೊತ್ತು ಕುಳಿತವನ ಕಿವಿಗಳು ಇನ್ನೂ ಪ್ರಯಾಣ ಬೆಳೆಸಬೇಕಿದ್ದ ನಿಂತಿದ್ದ ರೈಲೊಂದರಲ್ಲಿ ಕೈಯಲ್ಲಿ ದಿನಪತ್ರಿಕೆಯೊಂದನ್ನ ಹಿಡಿದು ಅದರಲ್ಲಿಯ ವಿಷಯಗಳನ್ನು ಟಿವಿಯಲ್ಲಿ ನ್ಯೂಸ್ ಓದುವವರರಂತೆ ಓದುತಿದ್ದ ಹುಡುಗನೊಬ್ಬನನ್ನು ಕೇಳಿದವು. ಆ ಹುಡುಗ ದಿನ ಬೆಳಿಗ್ಗೆ ಮೂರು ನಾಲ್ಕು ರೂಪಾಯಿಯಗಳನ್ನ ಸೇರಿಸಿ ಒಂದು ಪತ್ರಿಕೆ ಕೊಳ್ಳುವುದು ಹಾಗೂ ಅದರಲ್ಲಿನ ವಿಷಯಗಳನ್ನ ರೈಲಲ್ಲಿ ಕುಳಿತವರಿಗೆ ನ್ಯೂಸ್ ರೀಡರ್ ನಂತೆ ವಿಶೀಷ್ಟವಾಗಿ ಓದುತಿದ್ದ. ಪ್ರಯಾಣಿಕರಿಗೆಲ್ಲ ಅವನು ತಾನು ನಡೆದಾಡುವ ನ್ಯೂಸ್ ಚಾನಲ್ ಹಾಗೂ ಕರೆಂಟ್ ಇಲ್ಲದೆ ನಡೆಯುವ ಹಾಗೂ ಜಾಹೀರಾತುಗಳಿಲ್ಲದ ನ್ಯೂಸ್ ಚಾನಲ್ ಎಂದು ಹೇಳಿಕೊಳ್ಳುತ್ತಾ ಎಲ್ಲರ ಗಮನ ತನ್ನೆದೆ ಸೆಳೆಯುತ್ತಾ ಹಾಗೂ ಕೂತಲ್ಲಿಯೇ ಹಲವಾರು ಸುದ್ದಿಗಳನ್ನ ಮುಟ್ಟಿಸುತಿದ್ದ. ರಾಜಕೀಯದವರಿಗೆ ರಾಜಕೀಯದ ಸುದ್ದಿ, ಯುವಕ ಯುವತಿಯರು ಕಂಡೊಡನೆ ಸಿನೆಮಾ ಹಾಗೂ ಉದ್ಯೋಗದ ಸುದ್ದಿ, ಮಕ್ಕಳನ್ನು ಕಂಡೊಡನೆ ನಗೆಹನಿಗಳನ್ನ ಹೇಳುತಿದ್ದ. ಅವನ ವಿಷಯ ಓದುವ ಶೈಲಿ ಹಾಗೂ ಈ ವಿಭಿನ್ನ ಪ್ರಯತ್ನ ನೋಡಿದವರೆಲ್ಲರೂ ಅವನಿಗೆ ತಮ್ಮ ಕೈಲಾದಷ್ಟೂ ಹಣವನ್ನ ನೀಡುತಿದ್ದರು. ದಿನ ಮುಗಿಯುವಷ್ಟರಲ್ಲಿ ಅವನಲ್ಲಿ ಸರಿ ಸುಮಾರು ಮೂರುನೂರಿಂದ ಐನೂರರವರೆಗೆ ಹಣವಿರುತಿತ್ತು. ಅಲ್ಲಿಗೆ ಅವನಿಗೆ ಒಂದು ಪತ್ರಿಕೆ ಕೊಳ್ಳುವ ಖರ್ಚು ಬಿಟ್ಟರೆ ಬೇರೇನೂ ಬಂಡವಾಳ ಬೇಕಿರಲಿಲ್ಲ. ಅಂದಹಾಗೆ ಅವನೂ ಕೂಡ ಪರೀಕ್ಷೆಯಲ್ಲಿ ಫೇಲಾದವನೆ. ಫೇಲಾದ ತಕ್ಷಣ ಆತ್ಮಹತ್ಯೆಯ ಕುರಿತು ಯೋಚಿಸದೆ ಕಲಿತ ಅಕ್ಷರಗಳಿಂದಲೇ ಹೇಗೆ ಬದುಕಬಹುದು ಅಂತ ಯೋಚಿಸಿದ್ದ ಅವನ ಕಥೆಯೇ ಅಂದು ಪ್ರಾಣ ಕಳೆದುಕೊಳ್ಳಬೇಕಿದ್ದ ಆ ಹುಡುಗನ ಪ್ರಾಣ ಉಳಿಸಿತ್ತು.
ಮಾರ್ಕೆಟ್ ಡೌನ್ ಆಗಿ ಹಣ ಕಳೆದುಕೊಂಡು ಮನೆಯವರೆಲ್ಲ ಸೇರಿ ಸಾಯಬೇಕೆಂದಿದ್ದ ಆ ಮದ್ಯವಯಸ್ಕನ ಕಣ್ಣು ರೈಲಿನಲ್ಲಿ ಕುಳಿತ ಹೆಣ್ಣುಮಕ್ಕಳನ್ನ ಕುಳಿತಲ್ಲೆಯೇ ಸಿಂಗರಿಸುತಿದ್ದ ಒಬ್ಬ ಯುವತಿಯದೆಗೆ ಹೊರಳಿತು. ಆ ಯುವತಿ ದೂರದೂರಿಗೆ ಪ್ರಯಾಣ ಬೆಳೆಸುವ ಬೋರ್ ಆಗಿರುವಂತ ಹೆಣ್ಣುಮಕ್ಕಳನ್ನ ಕುಳಿತಲ್ಲಿಯೇ ಬಗೆ ಬಗೆಯ ಬ್ಯೂಟಿ ಪ್ರಾಡಕ್ಟ್ಗಳಿಂದ ಸಿಂಗರಿಸುತಿದ್ದಳು. ಕೈಗೆ ಮದರಂಗಿ(ಮೆಹಂದಿ)ಹಾಕಿ ಉಗುರಿಗೆ ನೈಲ್ ಪೈಂಟ್ ಹಾಕಿ ಕೆಲಸದ ಮಧ್ಯೆ ಅವರಿಗೆ ಬ್ಯೂಟಿ ಟಿಪ್ಸ್ ಕೊಡುತ್ತಾ ಎಲ್ಲರನ್ನು ತನ್ನೆಡೆಗೆ ಸೆಳೆಯುತಿದ್ದಳು. ಅವಳಕೆಲಸಕ್ಕೆ ತಕ್ಕನಾಗಿ ಅವಳಿಗೆ ಪ್ರಯಾಣಿಕರು ಹಣವನ್ನ ನೀಡುತಿದ್ದರು. ಮಾರ್ಕೆಟಿಂಗ್ ಅಲ್ಲಿ ಹಣ ಹೋಗಿ ತ್ವರಿತವಾಗಿ ಹಣ ಹೇಗೆ ಹೊಂದಿಸಬೇಕು ಎನ್ನುವ ಯೋಚನೆ ಬರದೇ ಮನೆಮಂದಿಯೊಡನೆ ಸಾಯುವ ಯೋಚನೆ ಮಾಡಿದ ಆ ವ್ಯಕ್ತಿಗೆ ಗಂಟೆಯೊಂದರಲ್ಲಿ ಹಣ ಗಳಿಸುವ ಬಗೆ ಹೇಳಿದ ಆ ಯುವತಿಯ ಕಥೆ ಬದುಕುವ ರೀತಿಯನ್ನ ಕಲಿಸಿತು.
ಇನ್ನೂ ಹುಡುಗಿಯೊಬ್ಬಳನ್ನ ಬಗೆಬಗೆಯಾಗಿ ತನ್ನ ಪ್ರೀತಿ ವ್ಯಕ್ತ ಪಡಿಸಿ ಕೊನೆಗೂ ಅವಳು ತನ್ನವಳಾಗಲಿಲ್ಲ ಎಂದು ಪ್ರಾಣ ಬಿಡುವ ಯೋಚನೆಯಲ್ಲಿದ್ದ ಆ ಯುವಕನಿಗೆ ಸೇಲ್ಸ್ ಮ್ಯಾನ್ ಒಬ್ಬ ಪ್ರಯಾಣಿಕನಿಗೆ ತನ್ನ ಪ್ರಾಡಕ್ಟ್ ಬಗ್ಗೆ ಬಗೆ ಬಗೆಯಾಗಿ ತಿಳಿಸಿ ಆ ಪ್ರಯಾಣಿಕನಿಗೆ ಅದನ್ನ ಮಾರುವ ದೃಶ್ಯ ಕಾಣಿಸಿತು. ಆ ಸೇಲ್ಸ್ ಮ್ಯಾನ್ ಮಾರುತ್ತಿರುವ ಆ ಪ್ರಾಡಕ್ಟ್ ಬಗ್ಗೆ ಕೊಂಚವೂ ಆಸಕ್ತಿ ಇರದ ಪ್ರಯಾಣಿಕನಿಗೆ ಸೇಲ್ಸ್ ಮ್ಯಾನ್ ಇಲ್ಲದ ಆಮಿಷಗಳನ್ನ ಒಡ್ಡಿ ಅದನ್ನು ಅವನಿಗೆ ಮಾರಲು ಪ್ರಯತ್ನಿಸುತಿದ್ದ. ಕೊನೆಗೆ ಬೇಸತ್ತು ಆ ಪ್ರಯಾಣಿಕ ಅವನೆಡೆಗೆ ನೋಡುವುದನ್ನ ಬಿಟ್ಟು ಬೇರೆಡೆ ನೋಡುತ್ತಾ ಕುಳಿತಿದ್ದ, ಆದರೂ ಬಿಡದ ಸೇಲ್ಸ್ ಮ್ಯಾನ್ ಆ ಪ್ರಯಾಣಿಕನನ್ನ ಬಲೆಗೆಬಿಳಿಸುವಲ್ಲೆ ಇದ್ದ. ಇದನ್ನ ಗಮನಿಸುತಿದ್ದ ಬೇರೆ ಪ್ರಯಾಣಿಕರು ಅವನಿಗೆ ಗದರಿ ಬೇಡವೆಂದರೂ ಆ ಪ್ರಯಾಣಿಕನಿಗೆ ಹಿಂಸೆ ಮಾಡುತ್ತಿರುವ ಬಗ್ಗೆ ಕೇಳಿ ಪೊಲೀಸರಿಗೆ ವಿಷಯ ತಿಳಿಸುವುದಾಗಿ ಹೇಳಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಹುಡುಗಿಯೊಬ್ಬಳಿಗೆ ಬಗೆಬಗೆಯಾಗಿ ತನ್ನ ಪ್ರೀತಿ ವ್ಯಕ್ತ ಪಡಿಸಿ ಸೋತು ಕೊನೆಗೆ ಸಾಯಲು ಹೊರಟವನಿಗೆ ತನ್ನ ಪ್ರೀತಿ ಆ ಹುಡುಗಿಗೆ ಬೇಡವಾದರೂ ತಾನು ಆ ಸೇಲ್ಸ್ ಮ್ಯಾನ್ನಂತೆಯೇ ಅವಳನ್ನು ಪೀಡಿಸಿದೆನಲ್ಲಾ ಎಂಬುದು ಅರಿಯಲು ಇದೊಂದು ಸನ್ನಿವೇಶ ಸಾಕಾಯಿತು. ಅಷ್ಟೇ ಅಲ್ಲಿಂದ ಸಾಯುವ ಆ ಯೋಚನೆಯನ್ನು ಕೈ ಬಿಟ್ಟು ಆ ಹುಡುಗೀಗೆ ಕ್ಷಮೆಯಾಚಿಸಲು ಹೊರಟ.
ಹೀಗೆ ತಂದೆ ತಾಯಿ ತಮ್ಮ ಪ್ರೀತಿ ಸಂಕೇತವಾಗಿ ಹುಟ್ಟಿಸಿದ ಈ ಜೀವವನ್ನು ನೇಣಿನ ಹಗ್ಗಕ್ಕೋ, ರೈಲು ಹಳಿಗೋ, ಯೋಚಿಸಲೂ ಆಗದಿರುವಂಥ ನೋವು ಕೊಡುವ ವಿಷಕ್ಕೋ ಅಥವಾ ಕುಡಿಯಲು/ಹೊಲ ಗದ್ದೆಗಳಿಗೆ ನೀರುಣಿಸುವ ಬಾವಿಗೋ ಕೊಡಲು ಹೋದವರಿಗೆ ಆ ರೈಲು ನಿಲ್ದಾಣದಲ್ಲಿ ಕಂಡ ದಿನಪತ್ರಿಕೆಯನ್ನ ಓದುವ ಹುಡುಗ, ಹೆಣ್ಣುಮಕ್ಕಳನ್ನ ರೈಲಿನಲ್ಲಿ ಕುಳಿತಲ್ಲೆಯೇ ಸಿಂಗರಿಸುತಿದ್ದ ಆ ಯುವತಿ ಹಾಗೂ ಸೇಲ್ಸ್ ಮ್ಯಾನ್ ಸಿಂಪಲ್ ಆಗಿ ವಿಶೇಷವಾಗಿ ಹೇಗೆ ಜೀವನವನ್ನ ನಡೆಸಬಹುದು ಎಂಬುದನ್ನ ತೋರಿಸಿಕೊಟ್ಟರು. ನಾವು ಕೂಡ ನಮ್ಮ ನಮ್ಮವರೊಡನೆ ಮನಸ್ತಾಪ ಮಾಡಿಕೊಂಡೊ ಅಥವಾ ನಮ್ಮ ವ್ಯವಹಾರದಲ್ಲಿ ಮಾಡಿಕೊಂಡೊ ಅಥವಾ ಪರೀಕ್ಷೆಯಲ್ಲಿ ಫೇಲ್ ಆದ ತಕ್ಷಣ ಸಾಯಲೂ ಯೋಚಿಸುವವರೇ ನೀವೂ ಒಮ್ಮೆ ನಿಮ್ಮ ಸುತ್ತಮುತ್ತ ಸರಿಯಾಗಿ ನೋಡಿ ನಿಮಗಿಂತಲೂ ಕಷ್ಟವಾದ ಪರಿಸ್ಥಿತಿಯಲ್ಲಿ ಇರೋರು ಕೂಡಾ ಬದುಕಿ ಸಾಧಿಸಿ ತೋರಿಸುತಿರುತ್ತಾರೆ. ಒಂದು ವೇಳೆ ಕಷ್ಟ ಎದುರಾದಾಗೆಲ್ಲ ಸಾಯಲೇಬೇಕು ಎಂದಾದರೆ ನಮಗೆ ಅಲ್ಲಲ್ಲಿ ಕಾಣುವ ಭಿಕ್ಷುಕರೆಲ್ಲ ಸಾಯಬೇಕಲ್ಲವೇ, ಆಸ್ಪತ್ರೆಗೆ ಹೋಗೋಕೆ ದುಡ್ಡೀಲ್ಲದೆ ರಸ್ತೆ ಬದಿಯಲ್ಲಿ ಯಾವ್ಯಾವೂದೋ ರೋಗ ಬಂದು ನರಳ್ತಾ ಇರೋರೆಲ್ಲ ಸಾಯಬೇಕಲ್ಲವೇ. . ಯಾರೂ ಸಾಯ್ತಾ ಇಲ್ಲಾ ಫ್ರೆಂಡ್ಸ್. . . ಕಷ್ಟ ಎಂದು ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನ ನಿಮ್ಮನ್ನ ಈ ಭೂಮಿಗೆ ಕರೆತರಲು ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು, ಗಂಡಸರ್ಯಾರು ಊಹಿಸಲೂ ಅಸಾಧ್ಯವಾದಂಥ ಹೆರಿಗೆ ನೋವನ್ನು ಸಹಿಸಿಕೊಂಡ ನಿಮ್ಮ ತಾಯಿಯ ಕಷ್ಟವನ್ನ ನೆನೆಸಿಕೊಳ್ಳಿ. ಅದಕ್ಕಿಂತ ದೊಡ್ಡದಾ ನಿಮ್ಮ ಕಷ್ಟ. . . ?
-ಪ್ರವೀಣ್ ಎಸ್ ಕುಲಕರ್ಣಿ ಚಿತ್ತಾಪುರ.
*****