ಬದುಕೇ ಶೂನ್ಯವೆಂಬ ನಿಜದನಿಯ ಎಲ್ಲರೆದೆಗೆ ಆವಾಹಿಸಿದ ‘ಕೊರೋನಾ’: ಸುಂದರಿ. ಡಿ.

ಕಾರ್ಮೋಡ ಆವರಿಸಿದ ಇಳಿಸಂಜೆಯ ಮಬ್ಬಾದ ವಾತಾವರಣ ಕುಳಿತು ನೋಡುತಿರಲು ಆ ವಾತಾವರಣವೇ ಇಡೀ ಜಗತ್ತಿಗೆ ಕವಿಯಿತೇ? ಎಂಬ ಪ್ರಶ್ನೆ ಆ ಸವಿಯಾದ ಇಳಿಸಂಜೆಯನ್ನು ಸವಿಗಾಣದಂತೆ ಮನದ ಮೂಲೆಯಲಿ ಮನೆಮಾಡಿದ ಆತಂಕದ ಪರಮಾವಧಿಯ ಸ್ಥಿತಿ ಅಂದಿನದು. ಆದರೂ ಒಮ್ಮೆ ದವಾಖಾನೆಯ ಕಿಟಕಿಯ ಸರಳುಗಳ ಭದ್ರ ಸೆರೆಯಿಂದ ಬಿಡಿಸಿಕೊಂಡು ಬಾಂದಳದ ಬಾನಾಡಿಯಂತೆ ವಿಹರಿಸುತ ಇಳಿಸಂಜೆಯ ಸವಿಯುವಾಸೆ. ಕಿಟಕಿಗಳಿಂದ ಹೊರ ನೋಟ ಮೇಲ್ನೋಟಕ್ಕೆ ಸಂತಸ ಕೊಟ್ಟರೂ, ಮನದ ಮೂಲೆಯಲಿ ಬಲು ಭಾರವ ಬಹಳ ಕಾಲ ಹೊತ್ತ ಅನುಭವ. ಕಳೆದ ರಾತ್ರಿಯ ಕಳೆಯುವುದೇ ಕಷ್ಟವೆನಿಸಿ ‘ಪ್ರತಿ ಕ್ಷಣ ವರುಷದಂತೆ ಕಳೆದೆ’ ಎಂಬ ಮಾತಿನ ನಿಜ ಅರ್ಥ ಆಗಿದ್ದು ಇದೇ ಮೊದಲೆಂಬ ಭಾವ.

ಮೊಬೈಲ್ ರಿಂಗಣಿಸುತಿದೆ ‘ ಹೇಳು ಪಾರ್ಥ ಹ್ಹ. ಹ್ಹ. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನೀನು ನನ್ನನ್ನು ಗೆಲ್ಲಲಾರೆ, ಈಗ ಆ ಶಕ್ತಿ ನಿನ್ನಲ್ಲಿಲ್ಲ ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ಪಾಪದ ಮೂಟೆ ನಿನ್ನ ಹೆಗಲೇರಿದೆ..’. ಎಂಬ ರಾಜಣ್ಣನ ಸಂಭಾಷಣೆಯ ಕೇಳಿಸುತ. ಆ ಸಂಭಾಷಣೆಯ ಅದೆಷ್ಟು ಬಾರಿ ಕೇಳಿಲ್ಲ? ಕೇಳಿ ಆನಂದಿಸಿಲ್ಲ? ನಾನು ಮಾತ್ರವಲ್ಲ್ಲ ಯಾರು ತಾನೇ ಆನಂದಿಸದಿರಲು ಸಾಧ್ಯ ಅಲ್ಲವೇ? ಆದರೆ ಆ ದಿನದಿಂದ ಆ ಸಂಭಾಷಣೆಯೇ ಆತಂಕಕ್ಕೆ ಕಾರಣ ಎಂಬ ಮನೋಸ್ಥಿತಿ ನಿರ್ಮಾಣವಾಗಿ ಹೋಯಿತು.

ಕಾರಣವೇನಿರಬಹುದು ಎನಿಸಿತೇ?? ‘ಹೊಂಬಾಳೇಗೌಡರೇ, ಮಹೇಂದ್ರ ಐ.ಸಿ.ಯುನಲ್ಲಿದಾನಂತೆ… ‘ ಎಂದು ಪಕ್ಕದ ವಾರ್ಡಿನಾತ ಹೇಳಿದ್ದು ನೆನಪಿದೆ. ಆದರೆ ಹೇಳಿದವರ ಹೆಸರು ಮರೆತಿರುವೆ ನೋಡಿ. ಅಂದು ಗಂಟೆ ಹನ್ನೆರಡಾದರೂ ನಿದ್ರೆ ಮಾಡಲು ಎದುರು ವಾರ್ಡಿನ ಮಾತಿನ ಮಲ್ಲಿ ಆಶಾ ಜೊತೆಗೆ ಖಾಯಿಲೆಯ ಯಾವ ಲಕ್ಷಣವೂ ನನಗಿಲ್ಲವೆಂದು ಹೆಮ್ಮೆಯಿಂದ ಎಲ್ಲರ ಬಳಿಯೂ ಬೀಗುತ್ತಲೇ ಹೇಳಿಕೊಳ್ಲುತ್ತಿದ್ದ ಆಸು ಪಾಸು ಅರವತ್ತೈದರ ಅಜ್ಜಿಯ ಸಂಭಾಷಣೆಯೇ ತೊಡಕಾಯಿತು ನೋಡಿ…, ಸರಿ ಸುಮಾರು ಹನ್ನೆರಡು ಗಂಟೆ ಆಗಿಹೋಗಿತ್ತು ಹೊಂಬಾಳೇಗೌಡರ ಮೊಬೈಲ್ ‘ ಹೇಳು ಪಾರ್ಥ ಹ. ಹ. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನೀನು ನನ್ನನ್ನು ಗೆಲ್ಲಲಾರೆ, ಈಗ ಆ ಶಕ್ತಿ ನಿನ್ನಲ್ಲಿಲ್ಲ ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ಪಾಪದ ಮೂಟೆ ನಿನ್ನ ಹೆಗಲೇರಿದೆ..’. ಎಂದು ಮಧ್ಯರಾತ್ರಿಯ ನೀರವತೆಗೆ ಬಲು ಜೋರಾಗಿಯೇ ಅಬ್ಬರಿಸಿತು. ಗೌಡರು ಫೋನಿನಲ್ಲಿ ಮಾತನಾಡಿ ಹೋ. . . . . . ಎಂದು ಉದ್ಗರಿಸಿ ಎದುರು ಬೆಡ್ನಲ್ಲಿದ್ದ ತನ್ನ ಸಹೋದ್ಯೋಗಿಗೆ “ಮಹೇಂದ್ರ ಹೋಗಿಬಿಟ್ನಂತೇ” ಎಂದವರೇ ದಡದಡನೆ ಓಡಿ ಹೋದವರೇ ಬಂದು ಮಹೇಂದ್ರನ ಶವವನ್ನು ಪ್ಲಾಸ್ಟಿಕ್ನಿಂದ ಸುತ್ತಿದ ಪರಿಯನ್ನು ಆ ನಡುರಾತ್ರಿಯಲ್ಲಿ ಬಣ್ಣಿಸಿದ ಮೇಲೆ ಅದು ಹೇಗೆ, ನಿದ್ರಾದೇವಿ ಕರೆದರೂ ಮನ ನಿದ್ರೆಗೆ ಜಾರುವುದು ನೀವೇ ಹೇಳಿ?

ಕೆಲ ಹೊತ್ತಿನಲ್ಲಿಯೇ ಜೋರಾಗಿ ಚರ್ಚ್‍ನಲ್ಲಿ ಭಾರಿಸುವ ಗಂಟೆಯ ಒಂದು ಶಬ್ಧ ಕೇಳಿಸಿತು. ಅದು ಸಾವಾದವರ ಶಾಂತಿಗಾಗಿ ದುಃಖಸೂಚಕವಾದ ಗಂಟೆಯೆಂದು ಹೊಂಬೇಗೌಡರು ಹೇಳಿದ್ದೂ ಕೇಳಿಸಿತು. ಅಷ್ಟೇ ಅಲ್ಲ ತುರ್ತುವಾಹನ “ಬಂತು ಕೇಳಿಸ್ತಾ? ಹು, ಹೋಗ್ತಿದೆ ತಗೊಂಡೋಗ್ತಿದಾರೆ..” .ಹೃದಯದ ಬಡಿತವೇ ಜೋರಾಯಿತು.

ಮೂವತ್ತೈದರ ಮಹೇಂದ್ರ ಹೋದ ಸಂಗತಿ ಕೇಳಿ ಗರಬಡಿದಂತಾಯಿತು. ಆ ಕ್ಷಣದಿಂದ ಕಡೆಯ ಮತ್ತು ಕಿಟಕಿಯಿರುವ ಕೊಠಡಿಯೇ ಗಾಳಿ, ಬೆಳಕು ಮತ್ತು ಅಂತರದ ದೃಷ್ಥಿಯಿಂದ ಒಳಿತೆಂದು ತೆಗೆದುಕೊಂಡ ನಿರ್ಧಾರ ತಪ್ಪೆನಿಸಲಾರಂಭಿಸಿತು. ಕಾರಣ ತುರ್ತುವಾಹನ ಹೋಗುವ, ಬರುವ ಶಬ್ಧ ಕೆಳ ಆಂತಸ್ತಿನವರಿಗೆ ಕೇಳುತ್ತಿತ್ತೋ ಇಲ್ಲವೋ ಆದರೆ ನಾಲ್ಕನೇ ಅಂತಸ್ತಿನ ನಮ್ಮ ಕೊಠಡಿಗೆ ಮಾತ್ರ ಆ ದಿನದಿಂದ ಎಷ್ಟು ಬಾರಿ ತುರ್ತುವಾಹನ ಬಂದು ಹೋದರೂ ನನ್ನ ಕಿವಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಆಗಲಿಲ್ಲ ಬಿಡಿ. ಪಲ್ಸ್ ರೇಟ್ ಹೆಚ್ಚಾಗತೊಡಗಿತು.

ಡಾಕ್ಟರ್, ನರ್ಸ್‍ಗಳು ಬೇರೆ ಆರೋಗ್ಯ ಸಮಸ್ಯೆ ಇದ್ದವರಿಗೆ ಮಾತ್ರ ತೊಂದರೆ ಎಂದು ಬಹಳ ಸಲ ಹೇಳಿದರೂ ಮನಸು ಕೇಳಬೇಕಲ್ಲ! ಸಾವಿನ ಸುದ್ದಿ ಕೇಳಿದ ಮೇಲೆ, ಜೊತೆಗೆ ಮಹಾಮಾರಿ, ಹೆಮ್ಮಾರಿ, ಸಾವಿನ ಸರಣಿ, ಎಂಬೆಲ್ಲಾ ಹೇಳಿಕೆಗಳ ಪೂರ್ವಾಗ್ರಹಪೀಡನೆಗೆ ಗುರಿಮಾಡಿದ್ದ ಹಲವು ಸುದ್ದಿವಾಹಿನಿಗಳ ಹೇಳಿಕೆ ಕೇಳಿ, ಕೇಳಿ, ಕೇಳಿ, ಕೇಳಿ ಭಯಭೀತಳಾಗಿದ್ದ ನನಗೆ ಎಂದೂ ಕಂಡಿರದ ಮಹೇಂದ್ರನ ಸಾವು ಹೇಗೆ ಕಂಗೆಡಿಸದಿರಲು ಸಾಧ್ಯ ಹೇಳಿ?

ಅದೊಂದು ದಿನ ಬರುವುದೆಂಬ ನಿರೀಕ್ಷೆ ಇರಲಿಲ್ಲ. ಬರುವುದೇ?? ಸಾಧ್ಯವಿಲ್ಲ. ಹೊರಗಿನಿಂದ ತಂದ ವಸ್ತುಗಳಿಗೆ ಮತ್ತೆ ನನ್ನ ಸ್ಪರ್ಶದ ಭಾಗ್ಯ ದೊರೆಯುತ್ತಿದ್ದುದು ಮೂರುದಿನಗಳ ನಂತರವೇ, ಕಾರಣ ಮುಟ್ಟಿದರೆ ಮಾರಿ ಮುನಿಯುವಳಲ್ಲ! ಅಲ್ಲದೇ ವ್ಯಾಪಾರಿಗೆ ಕೊಟ್ಟ ಹಣದ ಚಿಲ್ಲರೆ ಪಡೆಯಲು ಅಜ್ಜಿಯ ಕೈಚೀಲ, ಅದೂ ಮನೆಯ ಹೊರಗೇ ಗಾಡಿಯ ಕಪಾಟಿನಲ್ಲಿ, ಸುಕುಮಾರಸ್ವಾಮಿಯಂತೆ ಹೊರಗಿನ ಗಾಳಿ ಸೋಂಕದಂತೆ ನಮ್ಮನ್ನು ನಾವೇ ಹೆಚ್ಚು ಕಾಲ ಮನೆಯೆಂಬ ಲಾಕರ್ನಲ್ಲಿ ಜೋಪಾನಮಾಡಿಕೊಳ್ಳಲಾಗಿತ್ತು. ಹೀಗಿದ್ದ ಮೇಲೆ ಆ ದಿನ ಬರಲು ಹೇಗೆ ಸಾಧ್ಯ ? ಅಲ್ಲವೇ?! ಎಚ್ಚರಿಕೆಯ ಮೂಟೆಯನ್ನು ಸದಾ ಹೊತ್ತು ತಿರುಗುತ್ತಿದ್ದ ನನಗೆ ‘ಪಿ.ಪಿ.ಇ ಕಿಟ್ ತಗೊಂಬಿಡಿ‘ ಎಂಬ ಸಲಹೆಯನ್ನು ಹಾಸ್ಯ ಮಿಶ್ರಿತ ವ್ಯಂಗ್ಯದೊಟ್ಟಿಗೆ ಮಿತ್ರರೊಬ್ಬರು ಕೊಡುವ ಮಟ್ಟಕ್ಕೆ ನನ್ನ ಎಚ್ಚರಿಕೆ ಇತ್ತೆಂದರೆ ಬೇರೆ ಹೇಳಬೇಕೆ? ಆದರೆ ಹಿರಿಯ ಜೀವಗಳ ನೆನೆದು ಒಂದು ದಿನ ಕೈಮುಗಿವ ಕಾಯಕಕೆ ಬಹುದಿನಗಳ ತಯಾರಿಯ ಸಲುವಾಗಿ ತನ್ನೂರಿನ ಜಾಡು ಹಿಡಿದ ತಂದೆ ತಾಯಿ, ಮಗಳನು ಒಲ್ಲದ ಮನದಿಂದಲೇ ಕಳಿಸಿ, ಅಜ್ಜಿಯ ಊರಿನಲಿ ಹಾಡಿ ಕುಣಿವ ಮಗಳ ಸಡಗರಕೆ ತೆರೆಯೆಳೆಯಬಾರದೆಂದು ಕೆಲ ದಿನ ಅಲ್ಲಿಯೇ ಉಳಿವ ಮಗಳ ಬೇಡಿಕೆಗೆ ಕಸಿವಿಸಿಯಲೇ ಅಸ್ತು ಎಂದು ಮೌಖಿಕ ಆದೇಶ ನೀಡಿದುದೇ ಆ ದಿನ ಬರಲು ಆಹ್ವಾನವಿತ್ತಂತಾಯಿತು ಎನ್ನಲು ಮನ ಈಗಲೂ ಅಲುಗುತಿದೆ!

ಅಂತೂ ನನ್ನ ಮನೆಯೊಳಗೂ ಆಕೆ ಪ್ರವೇಶವಿತ್ತಳು. ಯಾರೆಂದಿರೇ ಅವಳೇ ‘ಕೊರೋನಾ’ ಯಾಕೋ ಮನ ಮಿಡಿಯುತಿದೆ ಕೋರೋನಾ ಮಹಾಮಾರಿಯೇ ಯಾಕಾಗಬೇಕು ಅಲ್ಲಿಯೂ ಹೆಣ್ಣೇ ಗುರಿಯಾಗಬೇಕೆ ಬೇಡ “ಮಹಾ ರಕ್ಕಸ”ನೇ ಆಗಲಿ ಬಿಡಿ ಅಲ್ಲವೇ? ‘ಮಹಾರಕ್ಕಸ ಕೊರೋನಾ’ ಅಥವಾ ‘ಕೋವಿಡ್-19’ ಈ ಹೆಸರನು ಯಾರು ತಾನೇ ಕೇಳಿಲ್ಲ ಹೇಳಿ? 2020 ರ ಇಡೀ ವರ್ಷವನ್ನು ಶೂನ್ಯವಾಗಿಸಿ ಮುಂದಿನ ವರ್ಷ ಕೂಡ ಇರುವ ಎಲ್ಲಾ ಸೂಚನೆ ನೀಡಿರುವ ಕೊರೋನಾದ ಜೊತೆಗೆ ಬದುಕು ಕಟ್ಟುವ ಮನುಕುಲದ ಹವಣಿಕೆಗೆ ನಾವೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಪ್ರತ್ಯಕ್ಷ ಅನುಭವೀ ಸಾಕ್ಷಿಗಳೇ.

‘ಹಿಂದೆ ನಮ್ಮ ಹಿರೀಕರು ಇದ್ದ ಆ ಊರಲ್ಲಿ ಕಾಲರಾ, ಪ್ಲೇಗು ಬಂದು ಎಲ್ಲಾ ಸತ್ತೋದ್ರಂತೆ, ಅಳಿದುಳಿದವರು ಆ ಊರು ಬಿಟ್ಟು ಈ ಊರಿಗೆ ಬಂದ್ರಂತೆ’ ಎಂದು ಖಾಯಿಲೆಯ ಕಾರಣದಿಂದ ಊರುಬಿಟ್ಟ ಕಥೆ ಕೇಳಿ ಹುಬ್ಬೇರಿಸಿದ್ದ ನಾವೇ ಅಂತದ್ದೊಂದು ಸನ್ನಿವೇಶಕ್ಕೆ ತುತ್ತಾಗಿ ಜೀವನದಲ್ಲಿ ಏನೇನನ್ನೋ ಅದು ನನ್ನ ‘ಪಂಚಪ್ರಾಣ’ ಅದನ್ನು ಮಾತ್ರ ಬಿಟ್ಟಿರಲಾರೆ ಎಂದು ಹೇಳಿದ್ದ ನಾವು ಏನೂ ಬೇಡ ಆರೋಗ್ಯ ಒಂದಿದ್ದರೇ ಸಾಕು ಮತ್ತು ಅದೊಂದೇ ಸಾಕು ಎಂಬಲ್ಲಿಗೆ ಬಂದು ನಿಂತಿದ್ದೇವೆ. ‘ಆರೋಗ್ಯವೇ ಭಾಗ್ಯ’ ಎಂಬ ಮಾತನ್ನು ಬಹಳ ಬಾರಿ ಈ ಹಿಂದೆಯೂ ಪಠಿಸಿದ್ದರೂ ಅದರ ಅರ್ಥವತ್ತಾದ ಅರಿವಿನೊಂದಿಗೆ ನಿಜವಾದ ಪಠಣೆ ಈಗ ಆಗುತ್ತಿದೆ ಎನಿಸುತ್ತಿದೆ.

ಒಂದು ಸನ್ನಿವೇಶದ ಬಗೆಗೆ ಪ್ರತೀ ಮನುಷ್ಯನ ಅನುಭವ ಹೇಗೆ ಭಿನ್ನವೋ ಹಾಗೇ ಕೊರೋನಾ ಬಗೆಗಿನ ಪ್ರತೀ ಮನುಷ್ಯನ ಅನುಭವವೂ ಭಿನ್ನವೇ. ಹಸಿವಿನಿಂದ ಕಂಗೆಟ್ಟವನಿಗೆ, ಆಶ್ರಯ ಕಳಕೊಂಡವನಿಗೆ, ಬೆಳೆದ ಬೆಳೆ ವ್ಯಾಪಾರ ಮಾಡಲಾಗದೆ ಬೀದಿಗೆ ಸುರಿದ ರೈತನಿಗೆ, ದುಡಿಮೆಯೊಂದಿಗೆ ಸಂಪಾದನೆ ಶೂನ್ಯವಾದವನಿಗೆ, ಹೂಡಿದ ಬಂಡವಾಳ ಲಾಭವಾಗುವ ಬದಲು ನಷ್ಟದ ಹಾದಿಯಲಿ ದೊಪ್ಪನೆ ಕುಳಿತುದ ಕಂಡವನಿಗೆ, ಖಾಯಿಲೆ ಇರುವ ನಗರ-ವಿದೇಶಗಳ ಬಿಟ್ಟು ತನ್ನೂರಿಗೆ ಸೇರುವ ಹವಣಿಕೆ ಹೊತ್ತವನಿಗೆ, ಖಾಯಿಲೆಗೆ ತುತ್ತಾದವನಿಗೆ, ಇಡೀ ಮನುಕುಲದ ರಕ್ಷಣೆಗೆ ನಿಂತ ವೈದ್ಯಕೀಯ ಸಿಬ್ಬಂದಿಗೆ, ಆರಕ್ಷಕರಿಗೆ, ಔಷಧದ ಶೋಧದಲ್ಲಿ ತೊಡಗಿದವರಿಗೆ, ಜೊತೆಗೆ ಆನ್‍ಲೈನ್ ಪಾಠಕ್ಕೆ ಒಗ್ಗಿಕೊಳ್ಳಬೇಕಾದ ಶಿಕ್ಷಕರು ಮತ್ತು ಮಕ್ಕಳಿಗೆ ಹೀಗೆ ಒಬ್ಬೊಬ್ಬರ ಕಣ್ಣಲ್ಲೂ ಕೊರೋನಾ ಖಾಯಿಲೆಯಾಗಿ ಮಾತ್ರವಲ್ಲದೇ ಬೇರೆ-ಬೇರೆ ರೂಪವಾಗಿಯೂ ಕಾಡುತ್ತಿರುವುದುಂಟು. ಇದೂ ಸಹ ಹಾಗೆಯೇ ಕಾಡಿದ ಅನುಭವದ ಮೆಲುಕು.

ತಾಯಿಯ ಆಸ್ಪತ್ರೆಯ ಪ್ರವಾಸ ರಾತ್ರೋರಾತ್ರಿ ಆಗಿದ್ದರಿಂದ ಅದು ಮನದ ಬೇಗುದಿಯಾಗಿತ್ತಷ್ಟೆ. ಆದರೆ ಮಗಳು ನನ್ನ ಅಪ್ಪನೊಟ್ಟಿಗೆ ಮನೆಯ ಬಳಿಯೇ ತುರ್ತುವಾಹನ ಕರೆಸಿ ವಾಹನವೇರಿದ ಕ್ಷಣದಿಂದ ನಮ್ಮ ಕುಟುಂಬ ಅಕ್ಷರಸಹ ಅಸ್ಫೃಶ್ಯವಾಗಿ ಹೋಯಿತು ಎನ್ನಿ. ಆ ಕ್ಷಣದಿಂದ ಆರಂಭವಾದ ಮೊಬೈಲ್ ರಿಂಗಣ ನಿಂತಿದ್ದು ರಾತ್ತಿ ಹತ್ತರ ನಂತರವೇ…

ಕರೆಗಳು, ಕರೆಗಳು ಕಾಳಜಿಗೆ ಅಂದುಕೊಂಡಿರೇ ಅಲ್ಲವೇ ಅಲ್ಲ ಅವರ ಕುತೂಹಲವನ್ನು ತಣಿಸಬೇಕಿತ್ತು ಅಷ್ಟೇ, ಇರಲಿ. ಆದರೆ ಖಾಯಿಲೆಯು ಪುಟ್ಟ ಮಗಳಿಗೂ ಅತಿಯಾಗಿ ಬಾಧಿಸಿದರೆ ಎಂಬ ಆತಂಕದ ಹೊರೆಯ ಎದುರು ಹೆಗಲ ಮೇಲಿದ್ದ ಮೂರು ಬ್ಯಾಗುಗಳ ಭಾರವು ಹಗುರಾಗಿಯೇ ಕಂಡಿತು. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಬೆಡ್ ಇಲ್ಲದ ಕಾರಣ ರವಾನೆ, ಆದರೆ ಅಲ್ಲಿ ಹೋಗಲು ಖುಷಿಯೆ ಕಾರಣ ಅಮ್ಮನೆಂಬ ದಿವ್ಯೌಷಧ ಇರುವುದು ಆ ದವಾಖಾನೆಯಲೇ.. ಆದರೆ ಅಲ್ಲಿಯೂ ಬೆಡ್ ಇಲ್ಲದೇ ಮತ್ತೆ ಮೊದಲ ಆಸ್ಪತ್ರೆಯ ಹಾದಿ ಹಿಡಿದು ಬೆಡ್ ದಕ್ಕಿಸಿಕೊಳ್ಳುವ ವೇಳೆಗೆ ಸಂಜೆ ಏಳಾಗಿತ್ತು.

ಒಳ ಹೋಗುತಿರುವಾಗಲೇ ಇನ್ನು ನಮಗೇನಾದರೂ ನನ್ನವರಾರೂ ಒಳ ಬರಲಾಗದು ಎಂಬ ಭಾವ ಒತ್ತರಿಸಿ ದಟ್ಟವಾಗಿ ಕಣ್ಣಂಚಲ್ಲಿ ನೀರಾಗಿ ಇಳಿಯುತ್ತಿದ್ದಂತೆ ಅಕ್ಕಪಕ್ಕದ ಕಿರು ಕೊಠಡಿಯವರೆಲ್ಲ ಬಂದು ಏನೂ ಆಗೊಲ್ಲ ಎಂದು ತಾವೂ ಬಂದಿರುವುದು ಮಕ್ಕಳೊಡನೆಂದು ತಮ್ಮ ಮಕ್ಕಳನ್ನು ತೋರಿಸಿ ಸಮಾಧಾನಿಸಿದ ಕ್ಷಣ ನನ್ನವರೆಂದು ಹೊರಗೆಲ್ಲೋ ಹುಡುಕಬೇಕೆನಿಸಲಿಲ್ಲ ಅಲ್ಲಿದ್ದವರೆಲ್ಲ ನಮ್ಮವರೇ ಎಂಬ ಭಾವ. ತಿಂಡಿ, ಊಟ, ಬಂದಾಗಲೆಲ್ಲ ಎಲ್ಲರನ್ನೂ ಹೊಂಬೇಗೌಡರು ಕೂಗಿಕರೆದು ಹೋಗುತ್ತಿದ್ದರು. ಆ ಬಾಂಧವ್ಯ ಮರುಭೂಮಿಯಲಿ ಓಯಸ್ಸಿಸ್ ಸಿಕ್ಕಂತೆಯೇ. ನಮ್ಮ ಕೊಠಡಿಯ ಎದುರು ಕೊಠಡಿಯಲ್ಲೇ ಚಿಕ್ಕಪ್ಪನ ಮಗಳ ಕಾಳಜಿಗಾಗಿ ಇದ್ದ ನಿರಂಜನ್ ನೀರು, ಮಾತ್ರೆಯ ವಿವರ, ಇತ್ಯಾದಿ ಪ್ರಾಥಮಿಕ ಪರಿಚಯ ಮಾಡಿಕೊಟ್ಟು ಕಾಳಜಿ ತೋರಿದ ಇಪ್ಪತ್ತರ ಒಳ್ಳೆಯ ಹುಡುಗ. ನಿರಂಜನ್ ತಂಗಿಯೊಂದಿಗೆ ಡಿಸ್ಚಾರ್ಜ್ ಆಗುವಾಗ ಸಧ್ಯ ಈ ನರಕದಿಂದ ಹೋಗಲಿ ಅನಿಸಿದರೂ ಹೋಗುವಾಗ ನಿಜಕ್ಕೂ ಬೇಸರವಾಯ್ತು. ನಿರಂಜನ್ ಖಾಲಿ ಮಾಡಿದ ಕೆಲವೇ ನಿಮಿಷಗಳಿಗೆ ಅಲ್ಲಿಗೆ ಬಂದಿದ್ದೇ ಹಿಂದೆ ಹೇಳಿದ ಆ ಮಾತಿನ ಮಲ್ಲಿ ಆಶಾ.

ನಾವಿದ್ದದ್ದು ದೊಡ್ಡ ಕೊಠಡಿಯಲ್ಲ, ಬದಲಿಗೆ ಇಬ್ಬರು ಮಲಗಬಹುದಾದ ಪುಟ್ಟ ಕೊಠಡಿ. ಶೌಚಾಲಯ ಶುಚಿಯಾಗಿಡಲು ಎಲ್ಲರ ಸಹಕಾರವಿದ್ದರೆ ಮಾತ್ರವೇ ಸಾಧ್ಯ ಹಾಗಾಗಿ ಅದರ ಶುಚಿತ್ವ ಅಷ್ಟಕ್ಕಷ್ಟೆ. ಬೆಳಗಿನ ತಿಂಡಿ ಅರೆಬರೆ ಬೆಂದ ಇಡ್ಲಿ, ಒಂದಿಷ್ಟು ಪೊಂಗಲ್, ಉಪ್ಪಿಟ್ಟು, ಬಿಸಿಬೇಳೆಬಾತ್, ಬಾಯಲ್ಲಿ ಬಗೆ ಬಗೆ ತಿಂಡಿ ಎಂದು ನೀರೂರಿಸಬೇಡಿ ಹಸಿವೆಗೆ ಬಾಯಿಗಿಡುತ್ತಿದ್ದೆವೇ ಹೊರತು ನುಂಗಲು ಮನಸಾಗುತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಚಪಾತಿ, ಅನ,್ನ ಸಾರು, ಮೊಸರು. ಆದರೆ ಚಪಾತಿ ಹಿಟ್ಟು ಒತ್ತಿ ದುಂಡಗೆ ಆಕೃತಿ ಇರುತ್ತಿತ್ತಷ್ಟೇ ನೂರರಲ್ಲಿ ಐದುಭಾಗ ಮಾತ್ರ ಬೆಂದ ಚಪಾತಿಯ ಹೆಸರಿನ ಚಪಾತಿ ಹಿಟ್ಟದು. ಅನ್ನದ ಪ್ರಮಾಣ ಎರಡು ಹೊತ್ತಿಗಾಗುವಷ್ಟು, ಸಾಂಬಾರಿನ ಬಣ್ಣದಲ್ಲಿದ್ದು ಸಾಂಬಾರೆಂದೇ ಹೇಳಿ ಕೊಡ ಮಾಡುತ್ತಿದ್ದ ಸಾಂಬಾರ್ ಒಂದು ಹೊತ್ತಿನ ಊಟಕ್ಕೂ ಸಾಲದಷ್ಟು. ನಾವಿದ್ದ ಹತ್ತು ದಿನದಲ್ಲಿ ಮೊದಲ ಆರು ದಿನವೂ ರಾತ್ರಿ ಊಟಕ್ಕೆ ಬಣ್ಣದ ಬಾತುಗಳೇ” ಕ್ಯಾ ಬಾತ್ ಹೇ” ಬಣ್ಣ ಬೇರೆ ಅಷ್ಟೆ, ಆದರೆ ರುಚಿ ಮತ್ತು ಅದರಿಂದ ದೊರೆಯುತ್ತಿದ್ದ ಶಕ್ತಿ ಮಾತ್ರ ಒಂದೇ… ಅನ್ನಿ. ಆ ನಂತರದ ನಾಲ್ಕು ದಿನ ಮಧ್ಯಾಹ್ನದ ಊಟವೇ ರಾತ್ರಿಗೂ ಮುಂದುವರಿಯಿತು. ಅದೊಂದು ಭಾನುವಾರ ತಿಂಡಿ ಬಹಳವೇ ತಡವಾಯ್ತು ಹತ್ತು ಗಂಟೆಯೇ ಆಗಿಹೋಯ್ತು. ಮಧ್ಯಾಹ್ನದ ಊಟವೂ ಮೂರುಗಂಟೆ ಅನ್ನಿ. ಏನೋ ವಿಶೇಷ ಅಂದುಕೊಂಡಿರಾ ಹೌದು ಅಡಿಕೆ ತಟ್ಟೆಯಲ್ಲಿ ಮೇಲೆ ವಿವರಿಸಿದ ತಿಂಡಿ-ಊಟವಿಟ್ಟು ಕೊಟ್ಟಿದ್ದೇ ವಿಶೇಷ. ನಗು ಬಂತೇ?

ನಗು ಬರುವ ಹಲವು ಸಂಗತಿಗಳಿವೆ ಕೇಳಿ… ಅಲ್ಲಿ ಡಾಕ್ಟರ್, ನರ್ಸ್, ಶೌಚಾಲಯ ಶುಚಿಗೊಳಿಸುವವರು, ಊಟ ತಂದು ಕೊಡುವವರು, ಎಲ್ಲರದೂ ಒಂದೇ ರೀತಿಯ ಉಡುಪು. ನೀಲಿಬಣ್ಣದ ಪ್ಲಾಸ್ಟಿಕ್ನಲ್ಲಿ ಅಡಿಯಿಂದ ಮುಡಿವರೆಗೂ ಸುತ್ತಿಕೊಂಡು ಕಣ್ಣಿನ ಭಾಗಕ್ಕೆ ಪಾರದರ್ಶಕವಾದ ಕನ್ನಡಕದಂಥ ಪ್ಲಾಸ್ಟಿಕ್ ಉಡುಪು. ಕಣ್ಣಿನ ಸಮಸ್ಯೆ ಇದ್ದವರು ತಮ್ಮ ಕನ್ನಡಕದ ಮೇಲೆ ಈ ಉಡುಪು ಧರಿಸಿರುತ್ತಿದ್ದರು.

ಅವರ ಈ ಉಡುಪು ಡಾಕ್ಟರ್ ಯಾರು?, ನರ್ಸ್ ಯಾರು? ಶುಚಿಗೊಳಿಸುವವರಾರು ತಿಳಿಯದು. ಎಚ್ಚರಿಕೆಯಿಂದ ಆ ಪ್ಲಾಸ್ಟಿಕ್ ಭೂತದ ಒಳಗಿರುವವರಾರೆಂದು ತಿಳಿಯಲು ಸ್ವೆತಾಸ್ಕೋಪ್ ಗಮನಿಸಬೇಕಷ್ಟೇ. ಅದನ್ನು ಗಮನಿಸದೇ ಸಿಸ್ಟರ್ ಎಂದು ಕರೆದು ಕಾಲ್ ಮಿ ಡಾಕ್ಟರ್ ಎಂದು ಹೇಳಿಸಿಕೊಂಡಿದ್ದೂ ಉಂಟು, ಜೊತೆಗೆ ಡಾಕ್ಟರ್ ಎಂದು ಸಿಸ್ಟರ್ ನ ಕರೆದು ಖುಷಿಪಡಿಸಿದ್ದೂ ಉಂಟು. ಒಮ್ಮೆ ಜಿಂಕ್ ಮಾತ್ರೆ ಖಾಲಿಯಾಗಿದೆ ಎಂದು ಸಿಸ್ಟರ್‍ಗೆ ಕೇಳಿದೊಡನೆ ಕೆಳಗಿರುತ್ತೇನೆ ಅಲ್ಲಿಗೆ ಬನ್ನಿ ನೋಡಿದೀರಲ್ಲ ನನ್ನ ಬಂದು ಕೇಳಿ ಅಂದ್ರು, ಆಯ್ತು ಅಂತ ತಲೆಯಾಡಿಸಿದ ನಾನು ಒಳಗೊಳಗೇ ನಕ್ಕು ಸುಮ್ಮನಾದೆ. ನಿಮ್ಮನ್ನು ನಾನು ಯಾವಾಗ ನೋಡಿದೇ? ನೋಡಿರುವುದು ಬರಿಯ ಪ್ಲಾಸ್ಟಿಕ್ ಸುತ್ತಿರುವ ನೀಲಿ ಬಣ್ಣದ ಉಡುಪಿನೊಳಗಿಂದ ಬರುವ ಮಧುರ ದನಿಯ ಒಡತಿ ಎಂದಷ್ಟೇ, ಆದರೆ ಗುರುತಿಸಲು ಸಣ್ಣ, ದಪ್ಪ, ಉದ್ದ, ಕುಳ್ಳ ಇವುಗಳೇ ಮಾನದಂಡವಾದವು ಎಂಬುದೂ ಸತ್ಯ.

ನಮಗೆ ತಮಾಷೆ ಎನಿಸಿದರೂ ಆ ಪಿ.ಪಿ.ಇ. ಕಿಟ್ ಒಳಗೆ ಬಂಧಿಯಾದ ವಾರಿಯರ್ಸ್ ಪಾಡು ಹೇಳತೀರದು, ಅವರು ಕೊರೋನಾ ಖಾಯಿಲೆಯ ವಿರುದ್ಧ ಮಾತ್ರ ಹೋರಾಡುತ್ತಿಲ್ಲ ಜೊತೆಗೆ ಪ್ರತಿಕ್ಷಣ ಪ್ಲಾಸ್ಟಿಕ್‍ನ ಒಳಗೆ ನಲುಗುತ್ತಾ ಉಸಿರಾಡಿದ ಉಸಿರು ಕನ್ನಡಕದ ಒಳಗೆ ಮಬ್ಬಾಗಿ ನಮ್ಮನ್ನು ಸ್ಪಷ್ಟವಾಗಿ ನೋಡಲೂ ಪರಿತಪಿಸುವ ಪರಿ ಅಸಹನೀಯವೇ. ಅಂಗೈ ಅಗಲದ ಮಾಸ್ಕ್ ಧರಿಸುವ ನಾವೇ ಅವಕಾಶ ಸಿಕ್ಕಾಗಲೆಲ್ಲಾ ಮಾಸ್ಕ್ ತೆಗೆದು ನೆಮ್ಮದಿಯ ಸಹಜ ಉಸಿರಾಟಕ್ಕಾಗಿ ತುಡಿಯುವಾಗ ಇನ್ನು ಇಡೀ ದೇಹ ಹಲವು ಗಂಟೆಗಳವರೆಗೆ ಬಂಧಿಯಾದವರ ಪಾಡೇನು ನೀವೇ ಊಹಿಸಿ!

ಅಂದು ಆಸ್ಪತ್ರೆ ಸೇರಿ ಮೂರನೆಯ ದಿನವೆನಿಸುತ್ತದೆ ಬೆಳಗಾಗಿ ಮೇಲೇಳುತ್ತಲೇ ಬಲಕಿವಿಯ ಕೆಳಭಾಗ ಊದಿಕೊಂಡಿದೆ ನೋವುಕೂಡ, ಭಯ ಮತ್ತೂ ಆವರಿಸಿತು. ಒಂದು ಖಾಯಿಲೆ ವಾಸಿಯಾದರೆ ಸಾಕು ಇದರೊಟ್ಟಿಗೆ ಮತ್ತೊಂದು ವಕ್ಕರಿಸಿದರೆ ಕಥೆ ಏನು…? ಡಾಕ್ಟರ್ಗೆ ಹೇಳಿದೆ ಬಂದು ನೋಡಿದವರೇ ಆಂಟಿಬಯೋಟಿಕ್ ಇಂಜೆಕ್ಷನ್ ಆರಂಭಿಸಿದರು, ಹಿಂದಿನ ದಿನವೇ ಅಜಿತ್ರಾಮೈಸಿನ್ ಮಾತ್ರೆಯ ಪ್ರಭಾವದಿಂದ ಅತಿಸಾರವಾಗಿ ತುಂಬಾ ಸುಸ್ತಾಗಿ ಗ್ಲೂಕೋಸ್ ನೀಡಲು ಹಾಕಿದ್ದ ಸೂಜಿಯು ಕೈನರದ ಒಳಗೆ ಸ್ಥಾನಪಡೆದಿತ್ತು ಅದಕ್ಕೆ ಈಗ ಪ್ರತಿನಿತ್ಯ ಹಗಲು ರಾತ್ರಿ ಇಂಜೆಕ್ಷನ್ ಒಳಹರಿಬಿಡುವ ಕೆಲಸ ಐದು ದಿನಗಳವರೆಗೆ ಮುಂದುವರಿಯಿತು.

ಆದರೂ ಹಿರಿಯ ವೈದ್ಯರು ಇಲ್ಲಿ ಇ.ಎನ್.ಟಿ. ವಿಭಾಗ ಇಲ್ಲ ಬೇರೆ ಆಸ್ಪತ್ರೆಗೆ ಕಳಿಸಿ ಎಂದೊಡನೇ ಜೀವ ಬಾಯಿಗೆ ಬಂತು, ನಾನು ಬೇರೇ ಅಸ್ಪತ್ರೆ ಪಾಲಾದರೆ ನನ್ನ ಅಪ್ಪ-ಮಗಳ ಕಾಳಜಿಯ ಕಥೆ? ಕುಗ್ಗಿದೆ ನಿರಂಜನ್‍ಗೆ ಹೇಳಿದೆ ಹೆದರಬೇಡಿ ಮೇಡಂ ಎಂದು ಸಮಾಧಾನಿಸಿದರು, ಮನದಲ್ಲಿ ಹಲ ಯೋಚನೆಗಳ ಬಿರುಗಾಳಿಯೇ ಎಬ್ಬಿತು. ಮತ್ತೊಂದು ಆಸ್ಪತ್ರೆಯ ವಿಷಯ ಬಂತೆಂದರೆ ವಿಷಯ ಸರಳವಿಲ್ಲ ಹಾಗಂತ ಗಂಭೀರ ಅಂದ್ರೆ ಏನು?

ಕ್ಯಾನ್ಸರ್ ಇರಬಹುದೇ? ಅನಿಸಿತು, ಹೃದಯ ಬಡಿತ ಜೋರಾಯಿತು ಆದರೆ ರಾತ್ರಿ ಬಂದ ಡಾಕ್ಟರ್ ನಾವು ಕೊಡುತ್ತಿರುವ ಆಂಟಿಬಯೋಟಿಕ್ ಔಷಧವೇ ಸಾಕಾಗುತ್ತದೆ ಹಾಗೂ ಕಡಿಮೆ ಆಗದಿದ್ದರೆ ನೋಡೋಣ, ಕಡಿಮೆಯಾದರೆ ಇದೆಲ್ಲಾ ಮುಗಿದ ನಂತರ ಒಮ್ಮೆ ಇ.ಎನ್.ಟಿ ಡಾಕ್ಟರ್ ಬಳಿ ತೋರಿಸಿಕೊಳ್ಳಿ ಎಂದರು ಕೊಂಚ ಸಮಾಧಾನವಾದರೂ ಆತಂಕ, ಆಸ್ಪತ್ರೆಯ ಒಳಗಿರುವ, ಅದೂ ತನ್ನ ಕುಟುಂಬವೇ ಆಸ್ಪತ್ರೆಯಲ್ಲಿರುವಾಗ ಭಯವಿಲ್ಲದೇ ಹೇಗಿರುವುದು? ಅಂತೂ ಮರುದಿನವೇ ಊತ, ನೋವು ಕಡಿಮೆಯಾಯಿತು.

ಪುಣ್ಯವೆಂಬಂತೆ ಆಸ್ಪತ್ರೆಗೆ ಹೋಗುವ ಹಿಂದಿನ ದಿನ ಬಾಧಿಸಿದ ಜ್ವರ ಮತ್ತೆ ನನ್ನ ಮಗಳ ಬಳಿ ಸುಳಿಯಲಿಲ್ಲ, ಇನ್ನಾವ ಆರೋಗ್ಯ ಸಮಸ್ಯೆಯೂ ಕಾಣಿಸಲಿಲ್ಲ, ಅವಳಿಗೆ ಕಾಡಿದ ಬಹುದೊಡ್ಡ ಸಮಸ್ಯೆ ಅಂದರೆ ಅದು ಊಟದು.್ದ ಅಪ್ಪನ ಆರೋಗ್ಯವೂ ಚೆನ್ನಾಗಿಯೇ ಇದ್ದ ಕಾರಣ ಎರಡು ದಿನ ಕಳೆಯುತ್ತಿದ್ದಂತೆ ನನ್ನಪ್ಪ ಮತ್ತು ಮಗಳ ಆರಾಮದಾಯಕ ಸ್ಥಿತಿ ಕಂಡು ವೈದ್ಯರು ನೀವಿಬ್ಬರೂ ಮನೆಗೆ ಹೋಗಿ ಎಂದರು ಆದರೆ ಮನೆಯಲ್ಲಿ ಕಾಳಜಿ ಮಾಡುವವರಿಲ್ಲದ ಕಾರಣ ಅಲ್ಲೇ ಉಳಿಯಬೇಕಾಯಿತು. ಆದರೆ ನಾನು ಹುಷಾರಾಗುವವರೆಗೆ ಅವರೂ ಮನೆಗೆ ಹೋಗುವುದಿಲ್ಲವೆಂದ ನನ್ನಪ್ಪ ಏಳೆಂಟು ದಿನ ಕಳೆಯುತ್ತಿದ್ದಂತೆ ಊಟದ ಹೊಂದಾಣಿಕೆ ಆಗದೆ ಸುಸ್ತಾದರು, ನಮ್ಮನ್ನು ಮನೆಗೆ ಕಳಿಸಿಕೊಡಿರೆನ್ನುವ ಮಟ್ಟಕ್ಕೆ ಬಂದರು, ಮನುಷ್ಯ ಆಹಾರ, ಉಡುಪಿನ ವಿಷಯದಲ್ಲಿ ಬಹಳ ಕಾಲ ಹೊಂದಾಣಿಕೆ ಮಾಡಿಕೊಳ್ಳಲಾರ ಅಲ್ಲವೇ……

ಮಹೇಂದ್ರನ ಸಾವು ನನ್ನನ್ನೂ ಕಂಗೆಡಿಸಿತ್ತು ಸದ್ಯ ಇಲ್ಲಿಂದ ಬಿಡಿಸಿಕೊಂಡು ಹೋದರೆ ಸಾಕೆಂಬ ಮನೋಸ್ಥಿತಿಯಲ್ಲಿದ್ದ ನನಗೆ ಮತ್ತೆ ಕಿವಿಯ ಬಳಿ ನೋವು ಶುರುವಾದರೂ ಹೇಳುವ ಗೋಜಿಗೇ ಹೋಗಲಿಲ್ಲ. ಹೇಳಿದರೆ ಮತ್ತೆ ಅಲ್ಲಿಯೇ ಕೆಲ ದಿನ ಉಳಿಯಬೇಕಾಗಬಹುದು, ಇಲ್ಲವೇ ಹಿಂದೆಯೇ ಹೇಳಿದ್ದಂತೆ ಬೇರೆ ಆಸ್ಪತ್ರೆಯ ಪಾಲಾದರೆಂಬ ಭಯ ಕೆಲವಕ್ಕೆ ಮಾತ್ರ ಬಾಯಿಬಿಡುವಂತೆ ಮಾಡಿ ಹಲವಕ್ಕೆ ಜಾಣಮೌನ ವಹಿಸಿಬಿಟ್ಟೆ. ಸಿಗ್ನಲ್‍ನಲ್ಲಿ ಮುಂದೆ ನಿಂತಿದ್ದರೂ ಬೇಗ ಹೋಗಿಬಿಡಬೇಕೆಂಬ ತವಕ ಯಾಕೆ ಈ ಜನಗಳಿಗೆ? ಎರಡು ಸೆಕೆಂಡ್ ಬೇಗ ಹೋಗಿ ಸಾಧಿಸುವುದಾದರೂ ಏನನ್ನು? ಎಂದು ಸಿಗ್ನಲ್ ನಲ್ಲಿ ಮುಂದೆ ನಿಂತವರ ಹರಿಬಿರಿ ಕಂಡು ಗೊಣಗಿದ ನಾನೇ ಇಂದು ಆ ಸ್ಥಿತಿಯಲ್ಲಿರುವೆ ಎನಿಸಿತು.

ಒಂಬತ್ತನೆಯ ದಿನ ನಾಳೆ ನಿಮ್ಮನ್ನು ಕಳಿಸಬಹುದು ಎಂದರು. ಆಗಾಧ ಖುಷಿ ಕೇಳಬೇಡಿ ಹೇಳಲು ಪದಪುಂಜವಿಲ್ಲ ನನ್ನಲ್ಲಿ. ಕೆಲವೊಮ್ಮೆ ಹೇಳಬೇಕಾದ್ದನ್ನು ಸಮರ್ಥವಾಗಿ ಹೇಳಲು ಭಾಷೆಯೂ ಸೋಲುತ್ತದೆ. ಆ ರಾತ್ರಿ ಪೂರ್ತಿ ನಾಳೆ ನಮ್ಮ ಮನೆಯಲ್ಲಿ ಮಲಗಬಹುದು ಅಮ್ಮ ಮನೆಗೆ ಬಂದು ಎರಡು ದಿನಗಳಾಗಿವೆ ನಮಗಾಗಿ ಕಾಯುತಲಿರುವಳು, ಬಹುಬೇಗ ಹೋಗುವಾಸೆ. ಆದರೆ ಬೆಳಗಾಗಿ ಹತ್ತನೆಯ ದಿನ ಸಂಜೆಯೂ ಆಯಿತು ಆದರೆ ಡಿಸ್ಚಾರ್ಜ್‍ಗೆ ನಿಮ್ಮಗಳ ಹೆಸರು ಮೇಲಿನ ಕಛೇರಿಯಿಂದ ಬಂದಿಲ್ಲ ಎಂದು ಹೋದವರೇ ನಮ್ಮ ಆಸೆಗೆ ತಣ್ಣೀರೆರಚಲು ಸುನಾಮಿಯನ್ನೇ ಎಬ್ಬಿಸಿ ಹೋದ ವೈದ್ಯರು ಸಂಜೆ 5:30 ರ ವೇಳೆಗೆ ಕರೆಯಲು ಕಳಿಸಿದರು. ನನ್ನಪ್ಪ ಮತ್ತು ಮಗಳೊಟ್ಟಿಗೆ ನಾಲ್ಕು ಮಹಡಿಯ ನಾಲ್ಕೇ ಗಳಿಗೆಯಲಿಳಿದು ಹೋದೆ.

ಕಾರಣ ನನ್ನೊಟ್ಟಿಗೆ ಮಾತಿನ ಮಲ್ಲಿ ಆಶಾ ಮತ್ತಿಬ್ಬರು ಬರುತ್ತಿದ್ದರು, ಅವರಿಗಿಂತ ಸಾಲಿನಲ್ಲಿ ಮೊದಲು ನಿಲ್ಲಬೇಕೆಂಬ ತವಕ ಅಂತೂ ಆಯ್ತು. ಕ್ವಾರಂಟೈನ್ ಸೀಲ್ ಹಾಕಿ ಸಹಿ ತೆಗೆದುಕೊಂಡು ಡಿಸ್ಚಾರ್ಜ್ ಸಮ್ಮರಿ ಕೇಳಿದರೂ ಸತಾಯಿಸಿ ಕೊಡದೇ ಮಾತ್ರೆ ಪಡೆಯಲು ಹೇಳಿ ಕಳಿಸಿದರು. ಆ ವೇಳೆಗಾಗಲೇ 6.30 ರ ಸಮಯ ಲಗೇಜ್ ಪ್ಯಾಕ್ ಮಾಡಿ ಹೊರಡುವ ತವಕ ಓಡಹತ್ತಿದೆ, ಯಾರೋ ಕರೆದು ಹೇಳಿದರು ಕೈಲಿರುವ ಸೂಜಿ ತೆಗೆಸಿಕೊಂಡು ಹೋಗಿ ಅಂತ ಆಗ ತಿರುಗಿ ನೋಡಿದೆ: ಅವರ ನೋಟ ಹತ್ತು ದಿನಗಳಿಂದ ಸ್ನಾನ ಮಾಡದ ನನ್ನ ಕಳಾಹೀನ ಮುಖ ಕಂಡು ಹುಬ್ಬು ಗಂಟಿಕ್ಕಿದರು, ಅವರೂ ಆ ದಿನ ಡಿಸ್ಚಾರ್ಜ್ ಆಗುತ್ತಿದ್ರು ಅವರ ಶುಚಿತ್ವ ನೋಡಿದರೆ ಅವರು ಡಾಕ್ಟರ್ ಇರಬೇಕು ಅನಿಸಿತು.

ಏಕೆಂದರೆ ಸೋಂಕಿಗೊಳಗಾದ ವೈದ್ಯರಿಗೇ ಬೇರೆ ಸೌಕರ್ಯ ಎಂಬುದು ಅಲ್ಲಿ ಕಣ್ಣಾರೆ ನೋಡಿ ತಿಳಿದಿದ್ದೆ. ಆದರೂ ಅವರಿಗೆ ಧನ್ಯವಾದಗಳನು ತಿಳಿಸಿ ಆಂಬುಲೆನ್ಸ ಬರುತ್ತದೆಯೇ ನಮ್ಮನ್ನು ಮನೆಗೆ ತಲುಪಿಸಲು ಎಂದು ಕೇಳಿದೆ. ತಡವಾಗಬಹುದು ಅಥವಾ ಕರೆದೊಯ್ಯಲು ಆಗದೆಯೂ ಇರಬಹುದೆಂದೊಡನೆ ಆಟೋ ಬರಹೇಳಲು ತಮ್ಮನಿಗೆ ಸೂಚಿಸಿ ಸುಸ್ತು ಬಾದಿಸಿದರೂ ಇಲ್ಲಿಂದ ಹೋಗುತಿರುವ ಸಂಭ್ರಮದಲ್ಲಿ ಅದು ಕಾಣಗೊಡಲಿಲ್ಲ. ಮನೆಗೆ ಬರುವ ಹಾದಿಯಲಿ ದವಾಖಾನೆಯಲಿ ಬಂಧಿಯಾದ ಕಿಟಕಿಗಳಿರಲಿಲ್ಲ, ನೀಲಾಕಾಶವ ನೋಡುತ್ತಲೇ ಬಾಂದಳದ ಬಾನಾಡಿಯಂತೆ ಕುಳಿತಲ್ಲಿಯೇ ವಿಹರಿಸಿದೆ. ಮನೆಗೆ ಬಂದೆ ಶತಮಾನಗಳ ಕೊಳೆತೊಳೆದೆ. ಅದರೊಟ್ಟಿಗೇ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ವೇಳೆ ಹಾಕಿದ್ದ ಕ್ವಾರಂಟೈನ್ ಸೀಲ್ ಕೂಡ ಸಣ್ಣ ಸುಳಿವೂ ನೀಡದಂತೆ ಹೊರಟುಹೋಗಿತ್ತು. ಕಡೆಗೆ ಮನೆಯ ಹದಿನೈದು ಮೆಟ್ಟಿಲೇರಲು ಮೂರುಬಾರಿ ಕುಳಿತು ವಿಶ್ರಮಿಸಿ ಬಂದು ನನ್ನ ಹಾಸಿಗೆಯಲಿ ಮಗಳೊಟ್ಟಿಗೆ ಒರಗಿದೆ, ಹಿಂದೆಂದೂ ನನ್ನ ಹಾಸಿಗೆ ಆ ಪರಿಯ ಮೆತ್ತನೆಯ ಅನುಭವವ ಕೊಟ್ಟಿರಲಿಲ್ಲವೆನಿಸಿತು.

ಮನೆಗೆ ಬಂದು ವಾರ ಕಳೆದ ಮೇಲೆ ಮತ್ತೆ ರ್ಯಾಪಿಡ್ ಟೆಸ್ಟ್ ಮಾಡಿಸಲು ಗೌಸಿಯಾ ಬ್ರದರ್ಗೆ ಕರೆ ಮಾಡಿದೆ, ಅಂತೂ ನಿಮಗೆ ಇವರ ಬಗೆಗೆ ಹೇಳಲೇ ಇಲ್ಲ ಅಲ್ಲವೇ ನಾನು ಮಗಳೊಡನೆ ಅಡ್ಮಿಟ್ ಆಗಲು ಹೋದಾಗ ನನಗಿನ್ನೂ ಕೋವಿಡ್ ರಕ್ಕಸ ಒಕ್ಕರಿಸಿರಲಿಲ್ಲ. ಆದರೂ ಪರೀಕ್ಷೆಗೆ ಕೊಟ್ಟಿದ್ದೆ. ಪಾಜಿಟಿವ್ ಬರದ ನಿಮ್ಮನ್ನು ಮಗಳೊಟ್ಟಿಗೆ ಅಡ್ಮಿಟ್ ಮಾಡಲಾಗದೆಂದೂ, ನೀವೇಕೆ ಒಳಹೋದಿರೆಂದು ಹೆಲ್ತ್ ಇನ್ಸಪೆಕ್ಟರ್ ಕೇಳಲಾಗಿ, ಮಗಳು ಚಿಕ್ಕವಳೆಂದು ನೊಂದು ನುಡಿಯಲು ಸರಿ ಒಳಗೆ ಡಾಕ್ಟರ್ ಬಳಿ ಕೇಳಿಕೊಳ್ಳಿ ಎಂದವರೇ ಆಗಾಗ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಂಡು ಗೌಸಿಯಾ ಬ್ರದರ್ ಆಗಿಬಿಟ್ಟರು, ಹಾಗಾಗಿ ಅವರ ಬಳಿ ಕೇಳಿಕೊಂಡು ರ್ಯಾಪಿಡ್ ಟೆಸ್ಟ್ ಮಾಡಿಸಿದೆವು ಹದಿನೈದು ನಿಮಿಷದಲ್ಲಿಯೇ ರಿಜಲ್ಟ್ ಬಂತು!

ಕೇಳಿಸಿಕೊಳ್ಳಲು ಭಯ, ಮತ್ತೆ ನಾಲ್ವರಲ್ಲಿ ಒಬ್ಬರಿಗಾದರೂ ಪಾಸಿಟಿವ್ ಬಂದುಬಿಟ್ಟರೆ ಅಂತ ಆದರೆ ಹಾಗಾಗಲಿಲ್ಲ. ನೆಗೆಟಿವ್ ಬಂದ ಕಾರಣ ನಾಲ್ವರ ಮೊಗದಲ್ಲೂ ಪಾಸಿಟಿವ್ ನಗೆ ಬೀರುತ್ತಾ ಮನೆಗೆ ಬಂದೆವು ಮತ್ತೆ ಸೂರ್ಯನ ಬೆಳಕು ಕಂಡದ್ದು ಮತ್ತೇಳು ದಿನಗಳ ಹೋಮ್ ಕ್ವಾರಂಟೈನ್ ಮುಗಿದ ನಂತರವೇ, ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿದ ಮೇಲೆಯೇ ಎಲ್ಲರೂ ಹೊರಬರಲು ಆರಂಭಿಸಿದ್ದು. ಈ ನಡುವೆ ಮೊದಲ ದಿನ ಕರೆ ಮಾಡಿದ್ದ ಯಾವ ಮಹಾನುಭಾವರೂ ಅಗತ್ಯ ವಸ್ತುಗಳು ಬೇಕೆ? ಏನಾದರೂ ಸಹಾಯ ಬೇಕೇ? ಎಂದು ಒಮ್ಮೆಯಾದರೂ, ಒಬ್ಬರಾದರೂ ಕರೆ ಮಾಡಿ ‘ಲಿಪ್ ಸಿಂಪತಿ’ ಅಂತಾರಲ್ಲ ಅದನ್ನೂ ವ್ಯಕ್ತಪಡಿಸಲಿಲ್ಲ.

ಅದಕ್ಕೇ ಮೊದಲೇ ಹೇಳಿದ್ದು ಕಾಳಜಿಗಾಗಿ ಕರೆಮಾಡಲಿಲ್ಲ, ಕುತೂಹಲಕ್ಕಾಗಿ ಕರೆ ಮಾಡಿದ್ದು ಎಂದು. ಪಕ್ಕದ ಮನೆಯವರ ಮಾತಂತೂ ಈಗಲೂ ಶೋಷಣೆಯ ಪರಮಾವಧಿಯ ಸ್ಥಿತಿಯಲ್ಲೇ ಇದೆ. ಅವರ ಅವಿವೇಕದ ಪರಮಾವಧಿಯನ್ನು ಪದಗಳ ಮಿತಿಯಲಿ ಹಿಡಿದಿಡಲಾಗದು. ಇದನ್ನು ಕಂಡು ಯಾವುದೋ ಟೀ ಜಾಹಿರಾತು ನೋಡಿದ ನೆನಪಾಗುತ್ತಿದೆ “ಅಮಿತ್ ಹುಷಾರಾಗಿ ಬಂದಿದಾನೆ, ನಾವು ಅವನ ಮನೆ ಕಡೆ ಸುಳಿಯುವುದೇ ಬೇಡವೆಂದು ಮನೆಯೊಡೆಯ ಹೇಳಿದರೆ, ಮನೆಯೊಡತಿ ಟೀಕಪ್ ಜೊತೆಗೆ ಬಂದವಳೇ ಆತನನ್ನು “ಬೇರೆ ಇರೋಕೆ ಹೇಳಿದಾರೆ ಹೊರತು ಒಬ್ಬನನ್ನೇ ಬಿಟ್ಟು ಬಿಡೋಕಲ್ಲ” ಎಂದು ಹೇಳುತ್ತಲೇ ಟೀ ಕೊಡಲು ಮುಂದಾಗುತ್ತಾಳೆ. ಇದು ಪ್ರತೀ ನಾಗರಿಕನ ಜವಾಬ್ದಾರಿ ಆಗಬೇಕಿದೆ. ಆದರೆ ನಮ್ಮನ್ನು ಹಾಗೆ ಕಂಡ ಮಂದಿ ಕೆಲವರು ಮಾತ್ರ. ಬಹಳ ಮಂದಿ ನಮ್ಮನ್ನು ಅಸ್ಫೃಶ್ಯರಂತೆ ಕಾಣತೊಡಗಿದ ಕೆಲ ದಿನ, ತಿಂಗಳ ಅನುಭವಕ್ಕೇ!

ನಮಗೆ ಈ ಪರಿಯ ನೋವಾದರೆ ಶತ-ಶತಮಾನಗಳಿಂದ ಅಸ್ಫೃಶ್ಯತೆಯನ್ನು ಅನುಭವಿಸಿದವರ, ಆ ಕಾರಣಕ್ಕಾಗಿ ನೊಂದು ಬೆಂದವರ ಪಾಡು ಕೊರೋನಾ ಅಪ್ಪಿದವರಿಗೆ ಆಗಿಯೇ ಆಗಿರುತ್ತದೆ ಬಿಡಿ. ಈ ನಡುವೆ ಸಹೋದ್ಯೋಗಿಗಳ ಕೆಲ ಮಾತು ಕೂಡ ಮನಕಲಕಿದವು, ತಿಳಿಯಾಗಲು ಬಹಳ ಸಮಯವೇ ಬೇಕಾಯಿತು. ಲೋಕಣ್ಣ ಮಾತ್ರ ಈ ಎಲ್ಲಕ್ಕೂ ಮೀರಿ ಸಹಾಯಹಸ್ತ ಚಾಚಿದರು. ಅಂತೆಯೇ ಆಸ್ಪತ್ರೆಯಲ್ಲಿ ನನ್ನ ಅಧೀರತೆಯ ಸ್ಥಿತಿ ಕಂಡು ಡಾ. ಪುನಿತ್ ತಮ್ಮ ಮೊಬೈಲ್ ನಂಬರ್ ಕೊಟ್ಟು ಅಗತ್ಯವಿದ್ದರೆ ಕರೆ ಮಾಡಿ ಹೆದರಬೇಡಿ ಎಂದು ಹೇಳಿಹೋದರು. ಈಗಲೂ ಕರೆ ಮಾಡಿ ವಿಚಾರಿಸುವ ನಿರಂಜನ್, ಡಾ. ಪುನಿತ್‍ರಂತಹ ಸಹೃದಯಿಗಳನ್ನೂ ಕೊರೋನಾ ರಕ್ಕಸ ದಕ್ಕಿಸಿಕೊಟ್ಟಿದ್ದಾನೆ. ಅದೂ ಖುಷಿಯೇ ಸರಿ.

ಯಾರನ್ನು ಯಾರೂ ಶೋಷಣೆ ಮಾಡಬೇಕಿಲ್ಲ ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಅದು ಖಾಯಿಲೆಯೇ ಹೇಳ ಹೊರಟ ಸತ್ಯ, ಆದರೆ ಮಾನವ ಇನ್ನೂ ಅರಿತಿಲ್ಲ. ಓಜೋನ್ ಪದರ ಶುಚಿಯಾಯಿತೇ ಹೊರತು ಮನುಷ್ಯ ಶುಚಿಯಾಗಲಿಲ್ಲ. ಶವಸಂಸ್ಕಾರದ ರೀತಿ ನೀತಿಯೇ ಬದಲಾದವು, ಆದರೆ ಮನುಷ್ಯನ ಆಲೋಚನೆ ಬದುಕುವ ರೀತಿ ಬದಲಾಗಲಿಲ್ಲ. ಶೂನ್ಯದ ಅರಿವಾಗಿದೆ, ಆ ಅರಿವು ಬಹಳ ಕಾಲ ಉಳಿಯಬೇಕಿದೆ.

ನಾನು ಸಾಹಿತ್ಯದ ವಿದ್ಯಾರ್ಥಿ ಮತ್ತು ಅಧ್ಯಾಪಕಿಯಾದರೂ ಅನುಭವ ಕಥನಗಳನ್ನು ಬರೆದದ್ದಿಲ್ಲ; ಇದನ್ನು ಕತೆಯೆಂದಾದರೂ ಭಾವಿಸಿ, ಪ್ರಬಂಧವೆಂದಾದರೂ ಊಹಿಸಿ; ನನಗೇನೂ ವ್ಯತ್ಯಾಸವಾಗುವುದಿಲ್ಲ! ಏಕೆಂದರೆ ಅನುಭವಿಸಿದ್ದನ್ನು ಬರೆಯುವಾಗ ಮತ್ತೊಮ್ಮೆ ಅಂಥ, ಅದು ನೋವು-ಯಾತನೆಗಳಾಗಿದ್ದರೆ- ಕಸಿವಿಸಿ, ಹಿಂಸೆಗಳನ್ನು ಮನಸ್ಸು ಅನುಭವಿಸುವುದು ಖಂಡಿತ. ನಮ್ಮನ್ನೇ ನಾವು ದೂರ ನಿಂತು ನೋಡಿದಾಗ ‘ನಾನಾ! ಇದನ್ನೆಲ್ಲ ಯಾತನಿಸಿದ್ದು, ಸಹನಿಸಿ ಸುಮ್ಮನೆ ಇದ್ದದ್ದು!’ ಎಂದು ಅಚ್ಚರಿಯಾಗುವುದು ದಿಟ.

ನೋವುಗಳು ಯಾರಿಗೂ ಹೊಸದಲ್ಲ; ಆದರೆ ಅನುಭವಿಸುವವರಿಗೆ ಯಾವಾಗಲೂ ಹೊಸದೇ! ನೋವಿನ ಸ್ವರೂಪ ಬೇರೆ ಇರಬಹುದು; ಆದರೆ ನೋವೆಲ್ಲಾ ಒಂದೇ ಎಂದು ಮಾತಾಡುವವರು ತಾವು ಅಂಥ ಸಂಕಷ್ಟದಲ್ಲಿದ್ದಾಗ ಬಹುಶಃ ಮಾತಾಡಲಾರರು. ಎಲ್ಲೋ ದೂರದೇಶದ ದುರಂತಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದಾಗ ಅನಿಸುತ್ತಿದ್ದುದು ಮತ್ತು ನಮ್ಮ ಊರಿಗೇ ದಾಂಗುಡಿಯಿಟ್ಟಾಗ ಬೆಚ್ಚಿ ಬಿದ್ದದ್ದು ಕೊನೆಗೆ ನಮ್ಮ ಮನೆಯವರೇ ಅಂಥ ರಕ್ಕಸಮುಷ್ಟಿಗೆ ಸಿಕ್ಕಿಕೊಂಡದ್ದು ಅದರಲ್ಲೂ ನಾನೇ ಕೊರೊನಾಗೂ ಕಣ್ಮಣಿಯಾದದ್ದು…….. ಹೀಗೆ ಅನಿಸುವಿಕೆಗಳು ಮಾಯವಾಗಿ ಅದರ ಜಾಗದಲ್ಲಿ ಬದುಕಿನ ಬಯಲಾಟದ ಒಂದೊಂದೇ ಪಾತ್ರಗಳು ತಮ್ಮ ವೇಷ ಕಳಚಿ ನಗ್ನಸತ್ಯಗಳನ್ನು ಅನಾವರಣ ಮಾಡಿದವು.

ಅನುಭವಗಳಿಂದ ಶ್ರೀಮಂತರಾಗುತ್ತೇವೋ ಇಲ್ಲವೋ; ಆದರೆ ಇಂಥ ಅನುಭವಗಳಿಂದ ಮಾನವತೆ ಬಡವಾಗುವುದಂತೂ ಖಚಿತ. ತತ್ತ್ವಜ್ಞಾನವನ್ನು ದೂರದಿಂದ ಕೇಳುವುದಕ್ಕೂ ಆಂತರ್ಯದಿಂದಲೇ ಅದರ ಪಾಠಗಳಿಗೆ ನಿದರ್ಶನವಾಗುವುದಕ್ಕೂ ವ್ಯತ್ಯಾಸವಿದೆ. ಅದರಲ್ಲೂ ಸಾವಿನ ಮನೆಯ ಬಾಗಿಲನ್ನು ನಾವೇ ತಟ್ಟುತ್ತಿದ್ದೇವೆಂಬ ಅಥವಾ ಸಾವೇ ನಮ್ಮೊಳಗೆ ಕುಳಿತು ಜೀವವ ಸೆಳೆದೊಯ್ಯಲು ಹೊಂಚು ಹಾಕುತ್ತಿದೆಯೆಂಬ ಭೀಕರತೆಯು ಯಾರ ಬದುಕಿನಲ್ಲೂ ಬರಬಾರದು; ಬಂದರೆ ಅದು ನರಕ! ಅದರಲ್ಲೂ ನನ್ನಂಥ ಅಪಾರ ಜೀವನಪ್ರೀತಿಯ ಮತ್ತು ಅದಮ್ಯ ಜೀವನೋತ್ಸಾಹಗಳ ಮನೋಧರ್ಮಕ್ಕೆ ಆಗುವ ಹಾನಿ ಅನೂಹ್ಯ.

ಒಂದಲ್ಲ ಒಂದು ದಿನ ಸಾಯಬೇಕು; ಸಾಯುತ್ತೇವೆ, ನಿಜ. ಆದರೆ ಹೀಗಲ್ಲ; ಗೊತ್ತಾಗುವಂತೆ ಅಲ್ಲವೇ ಅಲ್ಲ! ಎಂಬ ದರ್ಶನ ನನ್ನದಾಗಿದ್ದಂತೂ ದಿಟ. ಜೊತೆಗೆ ಇಂಥವುಗಳಿಂದ ಮನವರಿಕೆಯಾಗುವ ನಿಜದನಿಯ ಪ್ರತಿಧ್ವನಿ ಸದಾ ನಮ್ಮನ್ನು ಎಚ್ಚರಿಸುತಿರಲಿ ಎಂಬ ಭಾವವೂ……..

ಎಲ್ಲ ಬಗೆಯ ದುಃಖಗಳೂ ನನ್ನನ್ನೇ ಹುಡುಕಿಕೊಂಡು ಬರುತ್ತವೆ ಎಂಬುದು ಗೊತ್ತಿತ್ತು; ಆದರೆ ಕೊರೊನಾಗೂ ನನ್ನ ವಿಳಾಸವನ್ನು ಕೊಟ್ಟವರು ಯಾರು? ಎಂದು ಹುಡುಕುವಂತಾಯಿತು. ಬಹುಶಃ ನತದೃಷ್ಟತೆ ಎಂದರೆ ಇದೇ ಇರಬೇಕು. ಯಾತನೆಯನ್ನು ಹಂಚುವುದು ಸಾಹಿತ್ಯದ ಕೆಲಸವಾಗಬಾರದು ಎನ್ನುತ್ತಾರೆ ನಾನು ತುಂಬ ಗೌರವಿಸುವ ಮತ್ತು ಪ್ರೀತಿಸುವ ಮಿತ್ರರೊಬ್ಬರು. ‘ಎನ್ನ ಪಾಡೆನಗಿರಲಿ; ಅದರ ಹಾಡನ್ನಷ್ಟೇ ನೀಡುವೆನು………’ ಎಂದಿದ್ದಾರೆ ಬೇಂದ್ರೆಯವರು. ಆದರೆ ನಮ್ಮ ಮೀಮಾಂಸೆಯಲ್ಲಿ ಕರುಣೆಯೂ ರಸವಾಗಿದೆ; ಶೋಕ ಅದರ ಸ್ಥಾಯಿಭಾವವಾಗಿದೆ. ಬದುಕಿನ ಬಹುಭಾಗ ಇದರಿಂದಲೇ ತುಂಬಿದೆ ಎಂಬುದನ್ನು ಮರೆಯುವುದಾದರೂ ಹೇಗೆ?

ಯಾತನೆಯನ್ನು ಹೀಗೆ ನಿಮಗೆ ದಾಟಿಸಿದ್ದೇನೆ; ಇದರಲ್ಲೊಂದು ಬಿಡುಗಡೆಯ ಭಾವ ಮತ್ತು ನನ್ನನ್ನು ನಾನು ಅರಿಯುವ ಜೀವ – ಎರಡೂ ಅಡಕವಾಗಿದೆ. ಆ ಮಟ್ಟಿಗೆ ಬರಹದ ಸವಿ ಮತ್ತು ಖುಷಿ ನನ್ನ ಪಾಲಿಗೆ.

-ಸುಂದರಿ. ಡಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Puneeth DN
Puneeth DN
3 years ago

Nice article.

Manjuraj H N
3 years ago

ಸುಂದರಿ ಮೇಡಂ ಅವರ ಅನುಭವ ಕಥನ ಮನ ಕಲಕಿತು, ಕೊರೊನಾ ಗೆದ್ದು ಬಂದವರ ಮಾತುಗಳಿಗೆ ಈಗ ಮಹತ್ವ. ಕೊರೊನಾ ಕುರಿತು ಮಾತಾಡುವವರದಲ್ಲ!

ಏಕೆಂದರೆ ಅನುಭವ ದ್ರವ್ಯದ ತೀವ್ರತೆ ಮತ್ತು ಭಾವೋತ್ಕಟತೆ ಪ್ರತಿ ಸಾಲುಗಳಲೂ ಅನುರಣನಿಸಿದೆ; ಕಂಪಿಸುತ ಕಣ್ಣೀರ ತರಿಸುವಂತಿದೆ, ಕರುಣೆಯನ್ನು ಯಾಕೆ ರಸವಾಗಿಸಿದ್ದಾರೆ ಮತ್ತು ಅದರ ಸ್ಥಾಯಿಭಾವವೇಕೆ ಶೋಕವಾಗಿದೆ ಎಂಬುದು ಮನದಟ್ಟಾಗುತ್ತದೆ.

ಸಾಹಿತ್ಯದ ಮತ್ತು ಬರೆಹದ ಶಕ್ತಿಯೇ ಅಂಥದು. ಪಾಡನ್ನು ಹಾಡಾಗಿಸುವ ಕಲೆ ಎಲ್ಲರಲೂ ಇಲ್ಲ. ಇದೊಂದು ನೋವಿನ ಹಾಡು; ದುಗುಡದ ಬೀಡು, ಆದರೂ ತನ್ನ ಸರಳತೆ ಮತ್ತು ಸಹಜತೆಗಳಿಂದ ಶೋಭಿಸುತ್ತದೆ ಮತ್ತು ಕಣ್ಣಂಚು ಒದ್ದೆಯಾಗಿ ಕಾಡುತ್ತದೆ.

ಇದನ್ನು ಅವರು ಬರೆಯಲಿಲ್ಲ; ಬರೆಸಿಕೊಂಡಿತು ಎಂಬುದೇ ಸತ್ಯ.

ಹೆಚ್ಚೆನ್‌ ಮಂಜುರಾಜ್‌, ಮೈಸೂರು

Nagaraj R
Nagaraj R
3 years ago

Good article…

ನಿರಂಜನ್
3 years ago

ನಿಜಕ್ಕೂ ಅಂದು ನಾವು ಅನುಭವಿಸಿದ ಆ ನೋವು ನೋವಿಗಿಂತ ಹೆಚ್ಚಾಗಿ ಆ ಭಯ ನಮ್ಮ ಶತ್ರುಗಳಿಗು ಬೇಡವಾದದ್ದು….🙏🙏

……ನಿರಂಜನ್.ಎನ್

Sumanth
Sumanth
3 years ago

True lines touch inside heart ❤️

Saroja
Saroja
3 years ago

ಮನದ ಮಾತುಗಳನ್ನು ಪದಗಳಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮಗೆ ನಿಜವಾಗಿ ಕಷ್ಟ ಬಂದಾಗಲೇ ನಮ್ಮವರು ಯಾರು ನಮ್ಮವರು ಯಾರಲ್ಲ ಎಂಬುದನ್ನ ಅರಿಯಲು ಸಾಧ್ಯ.ಆದರೂ ಮನುಷ್ಯ ನಟನೆಯ ಮಾತುಗಳನ್ನು ಆಡಿ ಮೋಸ ಮಾಡುವವರ ಕಡೆಗೆ ಹೋಗುತ್ತಾನೆ.

ಮಂಗಳ
ಮಂಗಳ
3 years ago

ಈ corona ನಿಜವಾಗ್ಲೂ ನಮ್ಮಲ್ಲಿನ ಅಹಂಭಾವವನ್ನು ಕೆಳಗಿಳಿಸಿತು, ಆದರೆ ಮನುಷ್ಯ ಮಾತ್ರ ಇನ್ನೂ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತನ್ನ ಅಹಂಕಾರ, ಪ್ರತಿಷ್ಠೆ, ಸ್ವಾರ್ಥ ಮನೋಭಾವವನ್ನು ಕಿಂಚಿತ್ತೂ ಕಡಿಮೆ ಮಾಡಿಕೊಂಡಿಲ್ಲ, ನಿಜಕ್ಕೂ ಹೃದಯಸ್ಪರ್ಶಿ ಬರಹ, ಓದಿ ಕಣ್ಣಾಲಿಗಳು ತುಂಬಿ ಬಂದವು, Take care…

Punitha shree
Punitha shree
3 years ago

Nice article

Radha
Radha
3 years ago

“ನೋವುಗಳು ಯಾರಿಗೂ ಹೊಸದಲ್ಲ; ಆದರೆ ಅನುಭವಿಸುವವರಿಗೆ ಯಾವಾಗಲೂ ಹೊಸದೇ” ಎಂಬ ನಿಮ್ಮ ಮಾತು ಅಕ್ಷರಶಃ ಸತ್ಯ. ನಿಮ್ಮ ಅನುಭವ ಕಥನವನ್ನು ನಿಜಕ್ಕೂ ಮನೋಜ್ಞವಾಗಿ ಚಿತ್ರಿಸಿದ್ದೀರ,ಕರೋನ ಎಂಬ ಕ್ರೂರ ರಕ್ಕಸನ ಕಬಂಧ ಬಾಹುಗಳಿಗೆ ಸಿಕ್ಕಿ ನಲುಗಿದ,ನಲುಗುತ್ತಿರುವ ಅದೆಷ್ಟೋ ಜನರ ಭಾವನೆಗಳಿಗೆ ನಿಮ್ಮಿಂದ ಅಕ್ಷರರೂಪ ದೊರೆತಂತಾಯಿತು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮೊಳಗಿರುವ ಒಬ್ಬ ಅದ್ಭುತ ಬರಹಗಾರ್ತಿ ಬೆಳಕಿಗೆ ಬಂದಂತಾಯಿತು. ನಿಮ್ಮೊಳಗಿನ ಜೀವನೋತ್ಸಾಹದ ಚಿಲುಮೆ ಎಂದಿಗೂ ಬತ್ತದಿರಲಿ.

MANJUNATHA K P
MANJUNATHA K P
3 years ago

ಉತ್ತಮ ಹಾಗೆಯೇ ಅರ್ಥಪೂರ್ಣ ಲೇಖನ…

10
0
Would love your thoughts, please comment.x
()
x