ಬದುಕೆಂಬ ಬಂದೀಖಾನೆಯಲ್ಲಿ…: ವಾಸುಕಿ ರಾಘವನ್

ಆಗಿನ್ನೂ ನನಗೆ ಈ ಪರಿ ಸಿನಿಮಾ ಹುಚ್ಚು ಹತ್ತಿರಲಿಲ್ಲ. ಆಫೀಸ್ ಗೆ ಕ್ಯಾಬ್ ಅಲ್ಲಿ ಹೋಗೋವಾಗ “ಡಂಬ್ ಶರಾಡ್ಸ್” ಆಡ್ತಾ ಇದ್ವಿ. ಸ್ವಲ್ಪ ದಿನದಲ್ಲೇ ಎಕ್ಸ್‌ಪರ್ಟ್ಸ್ ಆಗೋದ್ವಿ ತುಂಬಾ ಜನ, ಸಿನಿಮಾ ಹೆಸರನ್ನ ಸುಲಭವಾಗಿ ಊಹಿಸಿಬಿಡ್ತಿದ್ವಿ. ಆಗ ಕಷ್ಟಕಷ್ಟದ ಹೆಸರುಗಳನ್ನು ಹುಡುಕಿ ಕೊಡೋ ಪರಿಪಾಠ ಶುರು ಆಗಿತ್ತು. ಒಂದು ದಿನ ಗೆಳೆಯ ಪ್ರದೀಪ್ “ಶಾಶ್ಯಾಂಕ್ ರಿಡೆಂಪ್ಶನ್” ಅಂತ ನನ್ನ ಕಿವಿಯಲ್ಲಿ ಉಸುರಿದರು. “ಏನು? ಶಶಾಂಕ್ ರಿಡೆಂಪ್ಶನ್ ಅಂತಾನಾ? ಆ ಥರ ಯಾವ ಫಿಲ್ಮ್ ಇದೆ? ತಮಾಷೆ ಮಾಡ್ತಿಲ್ಲ ತಾನೇ?” ಅಂತ ಕೇಳಿದ್ದೆ ನಾನು. ಸಿನಿಮಾ ಹುಚ್ಚು ಹತ್ತಿದ ಮೇಲೆ IMDB ಅಲ್ಲಿ ನೋಡಿದಾಗ ತಿಳಿದದ್ದು ಇದು ಟಾಪ್ ಐದು ಫಿಲಂಗಳಲ್ಲಿ ಒಂದು ಅಂತ!

ಈಗಲೂ ಯಾರಾದರೂ “ಒಳ್ಳೆ ಸಿನಿಮಾ ಯಾವ್ದಾದ್ರೂ ಸಜೆಸ್ಟ್ ಮಾಡಿ” ಅಂದ್ರೆ ನಾನು ಸಜೆಸ್ಟ್ ಮಾಡೋ ಮೊದಲ ಸಿನೆಮಾಗಳಲ್ಲಿ ಇದೂ ಒಂದು! ಇದನ್ನು ಸುಮಾರು ಸಲ ನೋಡಿದ್ದೇನೆ, ಕೆಲವು ಸೀನುಗಳನ್ನಂತೂ ಒಂದೈವತ್ತು ಸಲ ನೋಡಿದ್ದರೂ ಆಶ್ಚರ್ಯ ಇಲ್ಲ. ಬೇರೆಬೇರೆ ವಯಸ್ಸಿನವರಿಗೆ, ಅಭಿರುಚಿ ಇರುವವರಿಗೆ ತೋರ್ಸಿದೀನಿ. ಅವರೆಲ್ಲರೂ ಇದನ್ನ ತುಂಬಾ ಮೆಚ್ಚಿಕೊಂಡಿರೋದನ್ನ ಗಮನಿಸಿದ್ದೀನಿ. ಪ್ರತೀ ಸಲ ನೋಡಿದಾಗಲೂ ಇನ್ನೇನೋ ಹೊಸದನ್ನು ಕಂಡಿದ್ದೇನೆ. ನಾನು ಈ ಸಿನಿಮಾದ ಸಂಪೂರ್ಣ ಪ್ಲಾಟ್ ಅನ್ನು ಉದ್ದೇಶಪೂರ್ವಕವಾಗಿಯೇ ಬರೆಯುತ್ತಿಲ್ಲ, ನೀವು ಸಿನಿಮಾ ನೋಡಿಲ್ಲದಿದ್ದರೆ (ನಾನು ಇಂಗ್ಲಿಷ್ ಸಿನಿಮಾ ಅಷ್ಟಾಗಿ ನೋಡಲ್ಲ ಅನ್ನುವವರು ಕೂಡ!) ಖಂಡಿತ ನೋಡಬೇಕೆಂದು ನನ್ನ ವಿನಂತಿ!

ಆಂಡಿ ಡುಫ್ರೆನ್ ಒಬ್ಬ ದೊಡ್ಡ ಬ್ಯಾಂಕರ್. ತನ್ನ ಹೆಂಡತಿ ಮತ್ತು ಅವಳ ಪ್ರಿಯಕರನನ್ನು ಕೊಂದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಶಾಶ್ಯಾಂಕ್ ಕಾರಾಗೃಹಕ್ಕೆ ಬರುತ್ತಾನೆ. ಮೊದಲ ಎರಡು ವರ್ಷ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಬಹಳ ಕಷ್ಟಪಡುತ್ತಾನೆ, ಕೆಲವು ಖೈದಿಗಳಿಂದ ಹಲ್ಲೆಗೊಳಗಾಗುತ್ತಾನೆ. ಕಾರಾಗೃಹದಲ್ಲಿ ಅವನಿಗೆ “ರೆಡ್” ಎಂಬ ಹಿರಿಯ ಖೈದಿಯೊಂದಿಗೆ ಗೆಳೆತನ ಬೆಳೆಯುತ್ತದೆ. ಹೆಚ್ಚು ಓದಿರದವರೇ ತುಂಬಿರುವ ಜಾಗದಲ್ಲಿ, ಇಷ್ಟೊಂದು ಸುಶಿಕ್ಷಿತನಾದ ಇವನು ಅಲ್ಲಿನ ಗಾರ್ಡ್ ಗಳ ಇನ್ಕಮ್ ಟ್ಯಾಕ್ಸ್ ತುಂಬುವುದರಿಂದ ಹಿಡಿದು, ಅಲ್ಲಿನ ವಾರ್ಡನ್ ಹೊಡೆದ ದುಡ್ಡಿನ ಕಳ್ಳ ಲೆಕ್ಕ ನೋಡಿಕೊಳ್ಳುವವರೆಗೂ ಬೆಳೆಯುತ್ತಾನೆ. ಸೆರೆಮನೆಯ ಒಳಗೆ ಒಂದು ದೊಡ್ಡ ಲೈಬ್ರರಿ ತೆರೆಸುತ್ತಾನೆ, ಎಷ್ಟೋ ಜನ ಖೈದಿಗಳಿಗೆ ಓದಿಸಿ ಪರೀಕ್ಷೆಗೆ ಕಟ್ಟಿಸುತ್ತಾನೆ.

ಈ ಚಿತ್ರಕ್ಕೆ ಸುಮಾರು ಹದಿನೈದು ವರ್ಷಗಳ ಹಿಂದೆ ಬಂದ “ಎಸ್ಕೇಪ್ ಫ್ರಮ್ ಅಲ್ಕಟ್ರಾಜ್” ಅನ್ನೋ ಚಿತ್ರದ ಅನೇಕ ಅಂಶಗಳು ಇದರಲ್ಲಿ ಕಂಡುಬರುತ್ತವೆ. ಖೈದಿಗಳ ನಡುವೆ ನಡೆಯುವ ತಿಕ್ಕಾಟ, ಗಾರ್ಡ್ಸ್ ಜೊತೆ ಅವರಿಗಿರುವ ಸಂಬಂಧ, ತಪ್ಪಿಸಿಕೊಳ್ಳಲು ಮಾಡುವ ಉಪಾಯಗಳು, ಸಿಕ್ಕಿ ಬೀಳುವವರಿಗೆ ಸಿಗೋ ಕಠಿಣ ಶಿಕ್ಷೆ ಮುಂತಾದುವು. ಹಳೆಯ ಚಿತ್ರ ಉತ್ತಮವಾಗಿದೆ, ಆದರೆ “ಶಾಶ್ಯಾಂಕ್” ಅದನ್ನೂ ಮೀರಿ “ಗ್ರೇಟ್” ಅನ್ನಿಸಿಕೊಳ್ಳುತ್ತೆ. ಖ್ಯಾತ ನಿರ್ದೇಶಕ ಹೊವರ್ಡ್ ಹಾಕ್ಸ್ ಗೆ ಯಾರೋ “ಉತ್ತಮ ಚಿತ್ರ ಅಂದರೆ ಯಾವುದು?” ಅಂತ ಕೇಳಿದಾಗ ಅವನು ಹೇಳಿದ್ದ ಉತ್ತರ – “ಮೂರು ಗ್ರೇಟ್ ಸೀನುಗಳು ಇರಬೇಕು, ಒಂದೂ ಕೆಟ್ಟ ಸೀನು ಇರಬಾರದು, ಅದೇ ಉತ್ತಮ ಚಿತ್ರ”. ಈ ಚಿತ್ರದಲ್ಲಿ ಲೆಕ್ಕ ಹಾಕಿದರೆ ಕಮ್ಮಿ ಅಂದರೂ ಇಪ್ಪತ್ತು “ಗ್ರೇಟ್” ಸೀನುಗಳು ಸಿಗುತ್ತೆ!

ನನ್ನ ಪ್ರಕಾರ ಚಿತ್ರದ ಗ್ರೇಟ್ನೆಸ್ ಇರೋದು “ಗತಿ” ಎಷ್ಟು ಪರ್ಫೆಕ್ಟ್ ಆಗಿದೆ ಅನ್ನೋದರಲ್ಲಿ. ಒಂದೇ ಒಂದು ಆಕ್ಷನ್ ದೃಶ್ಯ ಇಲ್ಲ, ತಪ್ಪಿಸಿಕೊಳ್ಳೋ ದೃಶ್ಯಗಳಲ್ಲೂ ವೇಗತೀವ್ರತೆ ಇಲ್ಲ, ಅನಾವಶ್ಯಕವಾಗಿ ಹಿಂಸೆಯನ್ನು, ಕ್ರೌರ್ಯವನ್ನು, ರಕ್ತವನ್ನು ತೋರಿಸಿಲ್ಲ. ಹಲ್ಲೆ ನಡೆಯುವ ದೃಶ್ಯಗಳಲ್ಲೂ ಕ್ಯಾಮೆರಾ ಹಿಂದೆ ಸರಿದುಬಿಡುತ್ತದೆ, ಚೀರಾಟ ಕೇಳಿಸುತ್ತೆ ಹೊರತು, ಹೊಡೆದಾಟ ಪರದೆಯ ಮೇಲೆ ರಾರಾಜಿಸಲ್ಲ. ಇಡೀ ಚಿತ್ರಕ್ಕೆ ಒಂದು ಧ್ಯಾನದ ಮನಸ್ಥಿತಿ ಇದೆ. “ರೆಡ್” ಹೇಳುವಂತೆ, ನೀವು ಸರಳುಗಳ ಹಿಂದೆ ಬಂದ ಕ್ಷಣದಿಂದ ನಿಮ್ಮ ಪಾಲಿಗೆ ಹೊರಗಿನ ಪ್ರಪಂಚ ಮುಚ್ಚಿಹೋಗುತ್ತೆ. ಏನು ನಡೆಯಿತು, ಯಾಕೆ ಹಾಗಾಯ್ತು, ಮುಂದಿನ ಜೀವನ ಏನು ಅಂತ ಯೋಚಿಸುತ್ತಾ ಕೂರಲು ಪೂರ್ತಿ ಬದುಕು ಮಿಕ್ಕಿರುತ್ತದೆ. ಇಪ್ಪತ್ತು ವರ್ಷಗಳ ಸುದೀರ್ಘ ಕಥೆಯ ಅಗಾಧ ಕ್ಯಾನ್ವಾಸ್ ಇರೋ ಈ ಚಿತ್ರ ಸಂಪೂರ್ಣವಾಗಿ ಹಿಡಿದು ಕೂರಿಸಿಬಿಡುತ್ತೆ.

ಚಿತ್ರದ ಅತಿಹೆಚ್ಚು ಭಾಗ “ರೆಡ್” ವಾಯ್ಸ್ ಓವರ್ ಅಲ್ಲಿ ನಿರೂಪಿಸಲಾಗಿದೆ; ಡುಫ್ರೆನ್ ಅನುಭವ ಹೇಗಿತ್ತು, ಅವನ ಮನಸ್ಸಿನಲ್ಲಿ ಏನು ಓಡ್ತಾ ಇತ್ತು ನಮಗೆ ಗೊತ್ತಾಗಲ್ಲ, ಆದ್ದರಿಂದ ಡುಫ್ರೆನ್ ನಮಗೆ “ಎನಿಗ್ಮಾ” ಅನ್ನಿಸುತ್ತಾನೆ. ಸೆರೆಮನೆಯ ಕಥೆ ಅಂದಾಗ ಬರಬಹುದಾದ ಪ್ರತಿಯೊಂದು ಕ್ಲೀಶೇಡ್ ಅಂಶವನ್ನ, ನೆನಪಿನಲ್ಲುಳಿಯುವ ಸನ್ನಿವೇಶವನ್ನಾಗಿ ಸೃಷ್ಟಿಸಿರುವಲ್ಲಿ ನಿರ್ದೇಶಕ ಫ್ರಾಂಕ್ ಡ್ಯಾರಬಾಂಟ್ ಪರಿಶ್ರಮ ಎದ್ದು ಕಾಣುತ್ತೆ. ಡುಫ್ರೆನ್ ಅತ್ಯಂತ “ಹೀರೋಯಿಕ್” ಪಾತ್ರ. ಒಮ್ಮೆಯೂ ಹೊಡೆದಾಟಕ್ಕೆ ಹೋಗಲ್ಲ, ಆದರೆ ಅವನ ಆತ್ಮವಿಶ್ವಾಸ, ಅವನ ಜೀವನಪ್ರೀತಿ, ಅವನ ಛಲ, ಹುಮ್ಮಸ್ಸು ಅಷ್ಟು ತೀವ್ರ. ಈ ಸಂಕೀರ್ಣ ಪಾತ್ರವನ್ನು ಅಷ್ಟೇ ಪ್ರಬುದ್ಧವಾಗಿ ನಟಿಸಿರುವ ಟಿಮ್ ರಾಬಿನ್ಸ್ ಯಾವತ್ತೂ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ.

ಇನ್ನು “ರೆಡ್” ಪಾತ್ರ ಮಾಡಿರೋ ಮಾರ್ಗನ್ ಫ್ರೀಮನ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಸೆರೆಮನೆಯ ಬದುಕು ಪರಿಚಯಿಸುವ ನಮ್ಮ ಕಣ್ಣು ಆ ಪಾತ್ರ. ಫ್ರೀಮನ್ ಅಭಿನಯದ್ದು ಒಂದು ತೂಕವಾದರೆ, ಅವರ “ವಾಯ್ಸ್” ಬೀರೋ ಪರಿಣಾಮದ್ದೇ ಇನ್ನೊಂದು ತೂಕ! ಈ ಚಿತ್ರದ ಬರವಣಿಗೆ ಎಷ್ಟು ಚಂದ ಅಂದರೆ, ಒಂದೊಂದು ಸಂಭಾಷಣೆಯ ಸಾಲೂ ಯಾವುದೋ ಉತ್ಕೃಷ್ಟ ಸಾಹಿತ್ಯದಂತೆ. ಅಷ್ಟು ಸುಂದರ ಸಾಲುಗಳಿದೆ ಈ ಅದ್ಭುತ ದನಿ – ಮ್ಯಾಜಿಕ್! ಹೇಳಲು ಹೊರಟರೆ ಈ ಚಿತ್ರದ ಬಗ್ಗೆ ಇನ್ನೂ ಪುಟಗಟ್ಟಲೆ ಬರೆಯಬಹುದು, ಆದರೆ ಮತ್ತೆ ಅದನ್ನೇ ಹೇಳ್ತೀನಿ, ಒಮ್ಮೆ ಸಿನಿಮಾ ನೋಡಿಬಿಡಿ ಪ್ಲೀಸ್!

ರೋಜರ್ ಎಬೆರ್ಟ್ ಈ ಚಿತ್ರದ ಬಗ್ಗೆ ಬರೀತಾ ಈ ಮಾತನ್ನ ಹೇಳ್ತಾನೆ – “ಒಂದು ಗ್ರೇಟ್ ಚಿತ್ರ ತಾನು ಹೇಳೋ ಕಥೆಗಿಂತ ಹೆಚ್ಚಿನದ್ದೇನನ್ನೋ ತಿಳಿಸುತ್ತದೆ. ಜೀವನದಲ್ಲಿ ಅದೆಷ್ಟೋ ಬಂಧನಗಳು, ನಾವೆಲ್ಲರೂ ಖೈದಿಗಳು, ನಮ್ಮೊಳಗೆಲ್ಲಾ ಒಬ್ಬ ರೆಡ್ ಇದ್ದಾನೆ, ನಮ್ಮನ್ನು ಕಾಪಾಡಲು ಒಬ್ಬ ಡುಫ್ರೆನ್ ಬರಬೇಕು” ಓದಿದ ಕ್ಷಣ ನನಗೆ ಕಣ್ಣಲ್ಲಿ ನೀರಿತ್ತು!

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
ramachandra shetty
ramachandra shetty
11 years ago

ಧನ್ಯವಾದಗಳು..ಒ೦ದು ಸಿನಿಮಾದ ಬಗ್ಗೆ ತಿಳಿಸಿಕೊಟ್ಟಿದ್ದೀರಿ..ನಾನು ನೋಡಲು ಪ್ರಯತ್ನಿಸುತ್ತೇನೆ..ನಿರೂಪಣೆ ಸು೦ದರವಾಗಿದೆ

Radhika
11 years ago

I rarely watch movies forget about watching English movies. But will certainly try to watch this one. 

ಪ್ರಮೋದ್
11 years ago

ಬಿಡುಗಡೆ ಆದ ಮೇಲೆ ಗಿಡ ಮರವಾಗಿ, ಹೆಮ್ಮರವಾದ೦ತೆ ಈ ಚಿತ್ರದ ಖ್ಯಾತಿ ದಿನದಿ೦ದ ದಿನಕ್ಕೆ ಜಾಸ್ತಿ ಆಗುತ್ತಿದೆ. ನಿಧಾನವಾಗಿ ಶುರುವಾಗಿ, ಹಾಗೆ ಮತ್ತು ಏರಿಸುತ್ತಾ ದೈತ್ಯವಾಗಿ ನಮ್ಮನ್ನು ಕಾಡುತ್ತದೆ. ದಿ ಹೋಲ್[1960] ಎ೦ಬ ಫ್ರೆ೦ಚ್ ಚಿತ್ರ ನೋಡಿದಾಗ ಸ್ಟೀಫನ್ ಕಿ೦ಗ್ ಈ ಚಿತ್ರ ನೋಡಿ ಪ್ರೇರೇಪಣೆಗೊ೦ಡು ರಿಡ೦ಪ್ಷನ್ ಬರೆದಿರಬಹುದು ಅ೦ದುಕೊ೦ಡೆ. ರಿಪ೦ಪ್ಷನ್ ನಷ್ಟೇ ಒಳ್ಳೆಯ ಚಿತ್ರ. ನನ್ನ ಪ್ರಕಾರ ಅ೦ಡರ್ ರೇಟೆಡ್ 
ಇದಕ್ಕಿ೦ತಲೂ ಮೊದಲು ಬ೦ದ ಪ್ರಿಸನ್ ಬ್ರೇಕ್ 'ಎ ಮ್ಯಾನ್ ಎಸ್ಕೇಪ್ಡ್'[1956] ಇನ್ನೊ೦ದು ಅತ್ಯುತ್ತಮ  ಚಿತ್ರ

Vasuki
11 years ago

ಆ ಎರಡು ಚಿತ್ರಗಳನ್ನೂ ನೋಡಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

vinay
vinay
11 years ago

tumbaa olle chitra.monne innu nodde……chennag bardiddira vaasuki avare….

Ivan D Silva
Ivan D Silva
11 years ago

ಧನ್ಯವಾದಗಳು… ಈ ಚಿತ್ರವನ್ನು ಟಿವಿಯಲ್ಲಿ ನೋಡಿದ್ದೆ… ಸಾಮಾನ್ಯವಾಗಿ ಸ್ವಲ್ಪ ಚಿತ್ರ ನೋಡಿದ ಕೂಡಲೇ ಬೇರೊಂದು ಚಾನೆಲ್ ಗೆ ಶಿಫ್ಟ್ ಆಗುವುದು ನನ್ನ ಜಾಯಮಾಣ ಆದರೆ ಶಾಶಾಂಕ್ ರಿಡೆಂಪ್ಷನ್ ಚಿತ್ರ ಮನಸ್ಸನ್ಉ ಹಿಡಿದಿಟ್ಟಿತು. ಪೂರ್ತ ಚಿತ್ರ ನೋಡಿದ ಬಳಿಕ ಒಂದೆರಡು ದಿನ ಅದೇ ಚಿತ್ರದ ದೃಶ್ಯಗಳು ಪದೇ ಪದೇ ಮನಸ್ಸಲ್ಲಿ ಸುಳಿಯುತ್ತದ್ದವು. ವಿಮರ್ಶೆ ತುಂಬಾ ಚೆನ್ನಾಗಿದೆ. ಅಭಿನಂದನೆಗಳು..

ಶಶಿ
ಶಶಿ
11 years ago

'ಶಾಷಾಂಕ್ ರಿಡೆಮ್ಶುನ್' ಚಿತ್ರದಲ್ಲಿ ಹಲವಾರು ಫಿಲಾಸಫಿಗಳು ಅಡಕವಾಗಿವೆ! ಅದರಲ್ಲಿ ಒಂದು ನನಗೆ ತುಂಬಾ ಮನ ಮುಟ್ಟಿರುವುದು "institutionalization" ಅನ್ನುವ ಬಗ್ಗೆ. ಯಾವುದೇ ಒಂದು ಸಂಸ್ಥೆಯಲ್ಲಿ ಅಥವಾ ವ್ಯವಸ್ಥೆಯಲ್ಲಿ ತುಂಬಾ ಸಮಯ ಕಳೆದುಬಿಟ್ಟರೆ ಅದಕ್ಕೆ ಹೊಂದಿಕೊಂಡು ಹೋಗುತ್ತೀವಿ. ಅದರ ಹೊರಗೆ ಬೇರೆ ಪ್ರಪಂಚ ಇದೆ ಅನ್ನೋ ಪರಿವೆ ಮರೆತುಬಿಡುತ್ತೀವಿ. ದಿನಾ 9-5 ಕೆಲಸಕ್ಕೆ ಹೋಗುವ ನಾವುಗಳು ಇದಕ್ಕೆ ಹೊರತಲ್ಲ. 

Vasuki
11 years ago
Reply to  ಶಶಿ

ಇದರ ಬಗ್ಗೆ ಬರೆಯಬೇಕು ಅಂತ ಅನ್ಕೊಂಡಿದ್ದೆ. ಆದರೆ ಕೀಬೋರ್ಡ್ ಮತ್ತು ಬೆರಳುಗಳ ಸಮ್ಮಿಲನದ ಹೊತ್ತಿದೆ ಎಲ್ಲೋ ಕಳೆದುಹೋಯ್ತು!

Santhoshkumar LM
11 years ago

I too have watched this movie.
In the beginning I did not like it as it started with very simple scenes.
But as the movie goes on it gets many dimensions. then you cannot get up until the end.
one much watch movie!!

Srikanth K M
11 years ago

  ನೋಡಬೇಕು ಎಂದು ಹಪಹಪಿಸುತ್ತಾ ಕೂತಿದ್ದೆ ಬಂತು. ಪ್ರಾಯಶಃ ನಿಮ್ಮ ಬರಹಕ್ಕೆ ಕಾಯುತ್ತಿತ್ತು ಎನ್ನಿಸುತ್ತದೆ. ಖಂಡಿತ ನೋಡುವೆ ಸುಂದರ ಬರಹ ಸುಂದರ ಇಂಟ್ರೋ ಆ ಸಿನಿಮಾದ ಬಗ್ಗೆ. 

ಸಪ್ತಗಿರಿವಾಸಿ ವೆಂಕಟೇಶ ಮಡಿವಾಳ
ಸಪ್ತಗಿರಿವಾಸಿ ವೆಂಕಟೇಶ ಮಡಿವಾಳ
11 years ago

ನಾನು ಅದೊಮ್ಮೆ  ಬೆಸ್ಟ್ ಹಾಲಿವುಡ್ ಚಿತ್ರಗಳು ಅಂತ ಹುಡುಕಾಡುವಾಗ  ಸಿಕ್ಕಿದ್ದು ಆಯ್  ಎಂ ಡಿ  ಬಿ -ಅದರಲ್ಲಿ ಅತ್ಯುತ್ತಮ ಸಿನೆಮಾಗಳ ಕೆಟ್ಟ ಸಿನೆಮಾಗಳ  ಇನ್ನಿತರ ವಿಧದದ ಸಿನಿಮಾ ಬಗ್ಗೆ ಲಿಸ್ಟ್ ಇವೆ(ಬೆಸ್ಟ್ ಹಾರರ್- ವರ್ಸ್ಟ್ ಹಾರರ್ -ಬೆಸ್ಟ್ ಕಾಮೆಡಿ ವರ್ಸ್ಟ್ ಕಾಮೆಡಿ ಹೀಗೆ ) ಅದ್ರಲ್ಲಿ ಈ ಸಿನೆಮ ಬಗ್ಗೆ ವಿವರಣೆ ಇತ್ತು ಬಹುಪಾಲು ಜನ  ಈ ಸಿನೆಮ ಬಗ್ಗೆ ಸಕತ್ತಾಗಿ ಬರೆದಿದ್ದರು -ಡೌನ್ಲೋಡ್ ಮಾಡಿದೆ ನೋಡಿದೆ -ನನಗೆ ಮೊದಲಿಂದಲೂ  ಮೊರ್ಗಾನ್ ಫ್ರೀಮನ್  ನಟನೆ ಇಷ್ಟ -ಹಾಗೆಲ್ಲ ಅವರು ಯಾವ್ಯಾವ್ದೋ ಪಾತ್ರ ಮಾಡಲ್ಲ ಅಂತ ಗೊತ್ತಿತ್ತು -ಅದ್ಕೆ ಮೊದಲಿಗೆ ಇಷ್ಟ ಆಗದಿದ್ದರೂ ಆಮೇಲೆ ಕೊನೆ ವರಗೆ ನೋಡಿದೆ . . . ಅವನು ಕೊನೆಗೆ ಆ ಜೆಲಿಂದ ತಪ್ಪಿಸಿಕೊಳ್ಳುವ  ವಿಧಾನ ಹಿಡಿಸಿತು . . ಸ್ವಾತಂತ್ರ್ಯದ  ಮಹತ್ವ  ಅರಿವೂ ಆಯ್ತು 
.. ಸೂಪರ್ ಸಿನೆಮ –ಆದರೆ ಈ ಸಿನೆಮ ಎಲ್ಲರಿಗೂ ಅಲ್ಲ  ವಿಶೇಷ ಆಸಕ್ತಿ ಇರುವವರಿಗೆ ಮಾತ್ರ.. 
 
 ಒಳ್ಳೆ  ವಿಮರ್ಶೆ ಇನ್ನಸ್ಟು ಚಿತ್ರಗಳ ಬಗ್ಗೆ 
ಬರೆಯಿರಿ.. ಶುಭವಾಗಲಿ 
 
 
 
\\\॥//

Venkatesh
Venkatesh
11 years ago

The person who doesnt knw english  also likes this movie ! 

12
0
Would love your thoughts, please comment.x
()
x