ಕಥಾಲೋಕ

ಬದುಕು ಮಾಯೆ: ಮಂಜುನಾಥ ಹೆಗಡೆ

manju-hegde

ಪ್ರತಾಪ್ ಚೆಂಬರ್ ನಲ್ಲಿ ಕುಳಿತು ಮಂಕಾಗಿದ್ದ, ಆಗಷ್ಟೆ ಸುನಯನಾ ಜೊತೆ ಕೊನೆ ಬಾರಿ ಮಾತನಾಡಿದ್ದ. ಐದು ವರ್ಷಗಳ ಪ್ರೀತಿಗೆ ಕೊನೆಯ ಮಾತಿನೊಂದಿಗೆ ಪರದೆ ಎಳೆದಿದ್ದಳು ಅವಳು. ಪ್ರತಾಪ್ ನೊಂದಿದ್ದ, ಕೆಲಸಕ್ಕೆ ನಾಲ್ಕು ದಿನ ರಜಾ ಹಾಕಿ ಹೋಗಲು ತೀರ್ಮಾನಿಸಿ ರಜಾ ಅರ್ಜಿ ರೆಡಿಮಾಡುತ್ತಿದ್ದ. ಆಗ ನೀತಾ ಮೆ ಐ ಕಮಿನ್ ಎನ್ನುತ್ತ ಬಾಗಿಲು ತಳ್ಳಿ ನಗುತ್ತ ಬಂದಳು, ಆದರೇ ಪ್ರತಾಪ್ ಮುಖನೋಡಿ ಒಮ್ಮೆ ದಿಗಿಲಾಯಿತು, ಮೌನ ಆವರಿಸಿತು ಇಬ್ಬರ ನಡುವೆ. ಪ್ರತಾಪ್ ಟೇಬಲ್ ಮೇಲಿನ ಲೀವ್ ಲೆಟರ್ ನೋಡಿ ಮಾತಿಗಿಳಿದಳು. ಅವಳ ಪೂರ್ತಿ ಹೆಸರು ನಿತಾ ಡಿಸೊಜಾ, ಅವನ ಪಕ್ಕದ ಚೆಂಬರ್ ಅವಳದು. ಎಚ್ ಆರ್ ಡಿಪಾರ್ಟಮೆಂಟ್ ನಲ್ಲಿ ಹೆಡ್ ಆಗಿ ಕೆಲಸ ಮಾಡುತ್ತಿದ್ದಳು. ಸದ್ಯ ಎರಡು ವರ್ಷಗಳ ಸಾಂಸಾರಿಕ ಜೀವನಕ್ಕೆ ಡಿವೊರ್ಸ್ ಮೂಲಕ ಅಂತ್ಯ ಹಾಡಿದ್ದಳು. ಪ್ರತಾಪ್ ಯಾಕೋ ಎನಾಯ್ತು ಎಂದು ಕೇಳುತ್ತ ಚೇರ್ ಎಳೆದು ಕೊಂಡು ಕುಳಿತಳು. ಪ್ರತಾಪ್ ಸುನಯನಾ ವಿಷಯ ಹೇಳಿದಾಗ ಹೇ ಪ್ರತಾಪ್ ಹುಚ್ಚು ನಿಂಗೆ,  ಹುಡ್ಗಿ ಕೈ ಕೊಟ್ಲಂತ ಫೀಲ್ ಮಾಡ್ತಿಯಲ್ಲೊ?  ಏನಾಗಿದೆ ನಿಂಗೆ,  ನಿನ್ನಂತ ಹಾಂಡ್ಸಮ್ ಬಾಯ್ ಗೆ ಸಿಕ್ತಾರೆ ಬಿಡೊ ಒಳ್ಳೆ ಪಾರ್ಟನರ್. ನಿಜಕ್ಕೂ ನಿನ್ನ ಮಿಸ್ ಮಾಡ್ಕೊಂಡು ಅವಳೂ ಫೀಲ್ ಆಗ್ಬೇಕು. ನನ್ನ ನೊಡು ಮದುವೆ ಆದ ಗಂಡನ್ನೆ ಬಿಟ್ಟು ಹಾಯಾಗಿದ್ದಿನಿ, ನಿನ್ಯಾಕೊ ವರಿ ಮಾಡ್ತಿಯಾ?  ಬಿಟ್ಟಾಕು ಸಂಜೆ ಔಟಿಂಗ್ ಹೋಗೋಣ, ಬಿ ಹಾಪಿ ಬಾಯ್ ಎಂದು ತಲೆ ಕೂದಲ ಸರಿಮಾಡಿಕೊಳ್ಳುತ್ತ ಕಣ್ಣು ಮಿಟುಕಿಸಿ ಹೊರಟಳು. ಪ್ರತಾಪ್ ಗೂ ಹೌದೆನಿಸಿ ನಿಧಾನಕ್ಕೆ ಕೆಲಸದ ಕಡೆ ಗಮನಹರಿಸಿದ. ಸಂಜೆ ಐದಕ್ಕೆ ಸರಿಯಾಗಿ ನೀತಾ ಕಾಲ್ ಬಂದಾಗ ಗಡಿಬಿಡಿಯಲ್ಲಿ ಎದ್ದು ಹೊರಟ. ಪಾರ್ಕಿಂಗ ನಲ್ಲಿ ಕಾಯುತ್ತಿದ್ದಳು. ಅವಳ ಕಾರನಲ್ಲೆ ಹೊರಟರು.

ಸೀದಾ ಗ್ರಿನ್ ವಿಲ್ಲಾಕ್ಕೆ ಹೊರಟಳು, ಗ್ರಿನ್ ವಿಲ್ಲಾ ಮೋಜು, ಮಸ್ತಿ ಕಾಂಡಲ್ ಲೈಟ್ ಡಿನ್ನರ್ ಗೆ ಸಿದ್ದಪಡಿಸಿದಂತಿತ್ತು. ಗೇಟ್ ನಲ್ಲಿ ಸೆಕ್ಯುರಿಟಿ ನಗುತ್ತ ಸೆಲ್ಯುಟ್ ಹೊಡೆದಾಗ ನೀತಾ ಚಿರಪರಿಚಿತಳೆನೋ ಅನಿಸಿತು ಪ್ರತಾಪ್ ಗೆ. ಪ್ರತಾಪ್ ಮೊದಲ ಬಾರಿ ಬಂದಿದ್ದ, ಮೊದಮೊದಲು ಮುಜುಗರದಿಂದ ಇದ್ದನಾದರೂ ನೀತಾಳ ಫ್ರೆಂಡ್ಲಿ ನೇಚರಗೆ ಅಡ್ಜಸ್ಟ ಆಗಿ ಅವಳ ಜೊತೆ ರಾತ್ರಿ ಹನ್ನೊಂದರವರೆಗೂ ಖುಶಿಯಿಂದಲೇ ಎಂಜಾಯ್ ಮಾಡಿದ. ನಂತರ ಮನೆಗೆ ಡ್ರಾಪ್ ಮಾಡಿ ನಿತಾ ಮನೆಗೆ ಹೋಗಿದ್ದಳು. ನಾಲ್ಕೈದು ದಿನಗಳು ಹೀಗೆ ಕಳೆಯಿತು. ದಿನವೂ ಅವಳು ಅವನ ಸಂತೋಷಕ್ಕಾಗಿ ಜೊತೆಯಾಗಿ ಕಂಪನಿ ನೀಡಿದಳು. ವೀಕೆಂಡ್ ಗೆ ಲಾಂಗ್ ಡ್ರೈವ್ ಹೋಗಿ ಬಂದರು. ದಿನೆ ದಿನೆ ಅವಳ ಸಾಮಿಪ್ಯ ಸುನಯನಾಳ ಮರೆಸಿತ್ತು. ಅವಳ ಜಾಗದಲ್ಲಿ ನೀತಾಳ ಕಲ್ಪಿಸಿಕೊಂಡು  ಪ್ರತಾಪ್ ಸಂತೋಷವಾಗಿದ್ದ. ಅವಳ ಕುರಿತು ಅವನಲ್ಲಿ ಪ್ರೀತಿಯ ಭಾವ ಹುಟ್ಟಿತು. ಸದಾ ಅವಳ ಜೊತೆ ಇರುತ್ತಿದ್ದ ಇಲ್ಲವೇ ಚಾಟ್ ಮಾಡುತ್ತಿದ್ದ. ಅವಳ ಮನದಲ್ಲೇನಿದೆ ಗೊತ್ತಿರಲಿಲ್ಲ, ಅವಳು ಅವನ ಜೊತೆ ಬೆರೆಯುತ್ತಿದ್ದಳು. ಪ್ರತಾಪ್ ಮಾತ್ರ ಅವನ ಮನದಲ್ಲಿ ಅವಳಿಗೆ ಜಾಗ ಕಲ್ಪಿಸಿ, ಅವಳನ್ನು ಗಾಢವಾಗಿ ಹಚ್ಚಿಕೊಂಡಿದ್ದ. ದಿನೆ ದಿನೆ ಅವಳ ಸೆಳೆತ ಹೆಚ್ಚಾಗತೊಡಗಿತ್ತು, ಭಾವ ತೀವ್ರತೆಯಲ್ಲಿ ಮಿಂದು ಒಲವಿನ ಮತ್ತಲ್ಲಿ ತೇಲಾಡತೊಡಗಿದ. ಒಂದು ದಿನ ಅಪ್ಪ ಮಾತಿನ ನಡುವೆ ಹುಡುಗಿ ಹುಡುಕುತ್ತಿರುವ ವಿಷಯ ತಿಳಿಸಿದಾಗ ಪ್ರತಾಪ್ ಗಲಿಬಿಲಿಗೊಂಡ. ಹೇಗೆ ಹೇಳುವುದೋ ಎಂದು ಮನದಲ್ಲಿ ಒದ್ದಾಟ ಶುರುವಾಯಿತು.

ಒಂದು ದಿನ ಅಮ್ಮನಿಗೆ ಕಾಲ್ ಮಾಡಿ ತಾನೊಂದು ಹುಡುಗಿಯ ಪ್ರೀತಿಸುತ್ತಿರುವುದಾಗಿಯೂ, ಅದನ್ನು ಅಪ್ಪನಿಗೆ ತಿಳಿಸಿ ಒಪ್ಪಿಸಬೇಕೆಂದು ವಿನಂತಿಸಿದ, ಎಷ್ಟಾದರೂ ತಾಯ ಕರುಳು ಮಗನ ಬೇಡಿಕೆಗೆ ಅಸ್ತು ಎಂದಿತು. ಅಪ್ಪನನ್ನು ಒಪ್ಪಿಸಿದಳು. ಈಗ ಪ್ರತಾಪ್ ನಿಗೆ ಒತ್ತಡ ಆರಂಭವಾಯಿತು, ಇನ್ನೂ ನೀತಾಳ ಬಳಿ ವಿಷಯ ಪ್ರಸ್ತಾಪಿಸಿರಲಿಲ್ಲ. ಹೇಗಾದರೂ ಮಾಡಿ ನೀತಾಳಿಗೆ ತನ್ನ ಮನದ ಮಾತ ಹೇಳವೇಕೆಂದು ನಿರ್ಧರಿಸಿದ, ಆಫಿಸಿನಿಂದ ಹೊರಡುವ ಹೊತ್ತಿಗೆ ಎಲ್ಲಾದ್ರೂ ಏಕಾಂತ ಸ್ಥಳಕ್ಕೆ ಹೋಗೋಣವೆಂದ. ಅವಳೂ ಒಪ್ಪಿ ಡ್ರೈವ್ ಮಾಡುತ್ತಿದ್ದಳು. ಒಂದು ಸುಂದರ ಪಾರ್ಕಗೆ ಬಂದರು. ಆಗ ನೀತಾ ನಿನಗೇನೊ ಹೇಳಬೇಕು ಅಂದ, ಏನೆಂದು ಪ್ರಶ್ನಾರ್ಥಕವಾಗೆ ನೋಡಿದಳು. ನೀತಾ ನಾ ನಿನ್ನ ಪ್ರೀತಿಸುತ್ತಿರುವೆ, ನಿನ್ನೊಂದಿಗೆ ಜೀವನ ಸಾಗಿಸುವ ಹಂಬಲವಿದೆ ಎಂದು ತುಟಿಕಚ್ಚಿ ನಿಂತ ಅವಳ ಉತ್ತರಕ್ಕಾಗಿ. ಅವಳೂ ನಕ್ಕಳು, ನಾನು ಡಿವೊರ್ಸ್, ಜೊತೆಗೆ ನಾನು ನಿಮ್ಮ ಮತದವಳೂ ಅಲ್ಲ ಹಾಗಿರುವಾಗ ನಿಮ್ಮ ಮನೆಯಲ್ಲಿ ಒಪ್ಪಬೇಕಲ್ಲ?  ನನಗೂ ಈ ಮದುವೆಯ ಸಂಬಂಧಗಳಲ್ಲಿ ನಂಬಿಕೆಯೆ ಹೋಗಿದೆ ಪ್ರತಾಪ್ ಎಂದು ಸುಮ್ಮನಾದಳು. ಪ್ರತಾಪ್ ಬಿಟ್ಟಕಣ್ಣು ಮುಚ್ಚಲಾರದೆ ಮೌನಕ್ಕೆ ಜಾರಿದ, ನನ್ನ ಮುಂದಿನ ಜೀವನ ನಿನ್ನೊಂದಿಗೆ ಎಂದು ಮನ ಬಯಸಿದೆ, ನಾನು ಸುನಯನಾಳಿಂದ ದೂರವಾದ ಮೇಲೆ ನೀನಿಲ್ಲದಿದ್ದರೆ ಏನಾಗಿರುತ್ತಿದ್ದೆನೋ ಕಾಣೆ, ನಿರಾಕರಿಸದಿರು ಎಂದು ಹೇಳುತ್ತಿರುವಂತೆಯೆ ಕಣ್ಣಲ್ಲಿ ಹನಿಗಳೂ ಮೂಡಿದವು, ಗಂಟಲೂ ಕಟ್ಟಿತು. ನೀತಾಳಿಗೂ ಪ್ರತಾಪ್ ಮುಖ ನೋಡಿ ಬೇಸರವಾಯಿತು . ಪ್ರತಾಪ್ ಒಳ್ಳೆಯ ಹುಡುಗನೇ, ನೋಡಲು ಹಾಂಡ್ಸಮ ಆಗಿದ್ದ. ಅವಳಿಗೆ ಪ್ರೀತಿಯಲ್ಲದಿದ್ದರೂ, ಅವನೊಂದಿಗಿನ ಸಲಿಗೆ ಅವಳಿಗೂ ಇಷ್ಟವಾಗಿತ್ತು. ಕೊನೆಗೊಂದು ತೀರ್ಮಾನಕ್ಕೆ ಬಂದವಳಂತೆ ನಿನ್ನೊಂದಿಗೆ ಜೀವನ ನಡೆಸಲು ಒಪ್ಪಿಗೆಯಿದೆ, ಆದರೇ ಮದುವೆಯ ಬಂಧನ ಇಷ್ಟವಿಲ್ಲ, ನಿನಗೂ ಒಪ್ಪಿಗೆಯಿದ್ದರೇ ನಾನು ರೆಡಿ ಎಂದಳು . ಅವಳ ಪ್ರೀತಿ ಸಿದ್ದ ಪ್ರತಾಪ್ ಗೆ ಮದುವೆಯಾಗುವ ಹಂಬಲ, ಆದರೇ ಅವಳು ಜೊತೆಯಾಗಿ ಬದುಕಲಷ್ಟೆ ಒಪ್ಪಿದ್ದು ನಿರಾಶೆಯಾಯಿತಾದರೂ ಪ್ರೀತಿಸಿದವಳೊಂದಿಗಿನ ಜೀವನವೆಂಬ ಸಮಾಧಾನವಾಗಿತ್ತು. ಒಪ್ಪಿಗೆ ತಿಳಿಸಿದ, ಅವಳು ಖುಷಿಯಿಂದ ಅಪ್ಪಿದಳು.

ಅವರ ಯೋಜನೆಯಂತೆ ಈ ವೀಕೆಂಡ್ ನಿಂದ ಒಟ್ಟಿಗೆ ಉಳಿಯುವ ತೀರ್ಮಾನ ಮಾಡಿದರು. ಪ್ರತಾಪ್ ಮನೆ ಬಾಡಿಗೆಯದ್ದಾದ್ದರಿಂದ ನೀತಾ 'ಪ್ರತಾಪ್ ಇಲ್ಲೆ ಬಾ ಹೇಗೂ ಮನೆ ಸ್ವಂತದ್ದು, ವಿಶಾಲವಾಗಿದೆ' ಎಂದಳು. ಪ್ರತಾಪ್ ಪ್ರತಾಪ್ ಕೂಡ ಒಪ್ಪಿ, ಶನಿವಾರ ಒಳ್ಳೆಯದಲ್ಲ ಭಾನುವಾರ ಬರುವುದಾಗಿ ತಿಳಿಸಿದ. ನೀತಾಳು ಮರು ಮಾತಾಡಲಿಲ್ಲ. ಅಂತೂ ಭಾನುವಾರ ಬಂತು ಸಡಗರದಿಂದ ತನ್ನ ಲಗೇಜ್ ತುಂಬಿಕೊಂಡು ಸಿದ್ದನಾಗುವ ಹೊತ್ತಿಗೆ ನೀತಾ ಕಾರ್ ತಂದು ನಿಲ್ಲಿಸಿದ್ದಳು. ಪ್ರತಾಪ್ ಕಾರ್ ಪಕ್ಕ ಬಂದಾಗ ನಗುತ್ತ ಸ್ವಾಗತಿಸಿ ಡೋರ್ ತೆಗೆದಳು, ಕುಳಿತು ನೀತಾ ಮುಖ ನೋಡಿದ ಒಂದು ಕ್ಷಣ ಇಬ್ಬರ ನೋಟಗಳು ಬೆರೆತವು, ಮೈಮರೆತು ಕುಳಿತಿದ್ದರು. ಪಕ್ಕದಲ್ಲಿ ಹಾದು ಹೋದ ಕಾರ್ ನ ಹಾರ್ನ್ ಸದ್ದಿಗೆ ಗಲಿಬಿಲಿಗೊಂಡು ವಾಸ್ತವಕ್ಕೆ ಬಂದರು. ಒಮ್ಮೆಗೆ ಇಬ್ಬರಲ್ಲೂ ನಗುಬಂತು, ಹೊರಟರು.

ನೀತಾ ಮನೆಗೆ ಬಂದಾಗ ಅಡುಗೆ ಮಾಡಲು ಸಮಯ ಸಾಲದೆಂದು ಊಟಕ್ಕೆ ಹೊರಗೆ ಹೊರಟರು. ಅಂದು ಹೊಸ ಬದುಕಿನ ಮೊದಲ ದಿನ ಖುಷಿಯಿಂದ ಅನುಭವಿಸಿದರು.

ಸಂಜೆ ಬೇಗ ಮನೆಗೆ ಬಂದರು ಊಟದ ಪಾರ್ಸೆಲ್ ಜೊತೆ.

ಪ್ರತಾಪ್  ಊಟದ ನಂತರ ಟೀ ವಿ ನೋಡುತ್ತಿದ್ದ, ನೀತಾ ಲಾಪ್ ಟಾಪ್ ಹಿಡಿದು ಕುಳಿತಿದ್ದಳು. ಪ್ರತಾಪ್ ತಲೆಯ ತುಂಬಾ ಮೊದಲ ರಾತ್ರಿಯ ಕನಸು, ಆಸೆಗಳು ಗರಿಗೆದರುತ್ತಿತ್ತು. ಟೀ ವಿಯಲ್ಲಿ ಬರುತ್ತಿದ್ದ ಸಿನಿಮಾದ ರೊಮಾಂಟಿಕ್ ದೃಶ್ಯಗಳು ಇನ್ನಷ್ಟು ಕಲ್ಪನೆಗಳ ಹುಟ್ಟು ಹಾಕಿತ್ತು. ನೀತಾ ಲಾಪ್ ಟಾಪ್ ತೆಗೆದಿಟ್ಟು ಬಂದಳು. ಅವಳ ನೋಡಿದಾಗ ಪ್ರತಾಪ್ ಕಣ್ಣಲ್ಲಿ ಆಸೆ ಕಾಣುತ್ತಿತ್ತು, ನೀತಾಳಿಗೂ ಅರ್ಥವಾಯಿತು. ರೂಮಿಗೆ ಅವಳು ಹೋಗುತ್ತಿದ್ದಂತೆ ಪ್ರತಾಪ್ ಟಿ ವಿ ಆಫ್ ಮಾಡಿ ಕರುವಿನಂತೆ ಹಿಂಬಾಲಿಸಿದ. ರೂಮ್ ಪ್ರವೇಶಿಸಿದಾಗ ಏನು ಫಸ್ಟ್ ನೈಟ್ ಮೂಡಾ ಎಂಬ ನೀತಾಳ ದನಿ ಪ್ರತಾಪ್ ಗೆ ಅಚ್ಚರಿ ಮೂಡಿಸಿತು, ಒಳಗೊಳಗೆ ಸಂತಸವಾಯಿತು. ಆದರೇ ಮರುಕ್ಷಣದಲ್ಲೆ ನೀತಾ, ನನಗೆ ಸ್ವಲ್ಪ ಸಮಯ ಬೇಕು ಪ್ರತಾಪ್ ಯಾಕೋ ಇನ್ನೂ ಮನಸ್ಸು ಪಕ್ವವಾಗಿಲ್ಲ, ಬೇಸರಿಸಬೇಡ. ಇನ್ನೂ ಈ ಹಾಸಿಗೆಯಲ್ಲಿ ಅವನ ನೆನಪೆ ಕಾಡುತ್ತಿದೆ. ಮರೆಯಬೇಕೆಂದು ಪ್ರಯತ್ನಿಸುತ್ತಿರುವೆ, ಆದರೂ ಮರೆಯಲಾಗುತ್ತಿಲ್ಲ. ನಿನ್ನ ಪ್ರೀತಿಯಲ್ಲಿ ಮರೆತು ಬೆರೆಯುವೆ ಸ್ವಲ್ಪ ಸಮಯ ನೀಡು ಎಂದು ಕೇಳಿದಾಗ ಪ್ರತಾಪ್ ತಲೆ ಅಲ್ಲಾಡಿಸಿದ್ದ. ಇಬ್ಬರೂ ಮಲಗಿದರು. ಬೆಳಗಾಯಿತು, ಇಷ್ಟು ದಿನ ಬೆಳಿಗ್ಗೆ ತಿಂಡಿ ರೆಡಿ ಮಾಡುವ ಅಭ್ಯಾಸವಿಲ್ಲದ ನೀತಾ, ಬೆಳಗಾದರೆ ಬೆಡ್ ಟೀ ಬಯಸುವ ಪ್ರತಾಪ್ ನಡುವಿನ ಅಂತರ ಮೊದಲ ಬಾರಿಗೆ ಮಾತಿನಲ್ಲಿ ವ್ಯಕ್ತವಾಗಿತ್ತು. ದಿನಗಳು ಉರುಳುತ್ತಿದ್ದವು, ಆಗಾಗ ನೀತಾ ಮತ್ತು ಪ್ರತಾಪ್ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಬರತೊಡಗಿದವು.

ಪ್ರತಾಪ್ ಗೆ ನೀತಾ ತನ್ನ ಹೆಂಡತಿ ಎನ್ನುವ ಭಾವ, ಹಾಗಾಗಿ ಸಹಜವಾದ ನಿರೀಕ್ಷೆಗಳು. ಆದರೇ ನೀತಾ ಗೆ ಒಮ್ಮೆ ಮದುವೆಯಾಗಿ ಅನುಭವಿಸಿದ ನೋವು, ನಿರಾಶೆಗಳು ಸಂಬಂಧ, ಮದುವೆಯ ಅನುಬಂಧದ ಕುರಿತು ಹತಾಶೆಯ ಭಾವ ಹುಟ್ಟಿಸಿತ್ತು. ಆದರೂ ಪ್ರತಾಪ್ ನನ್ನು ನೋಯಿಸಲಾರದೆ, ಕಳೆದುಕೊಳ್ಳಲೂ ಆಗದೆ ಸ್ವತಂತ್ರವಾದ ಲೀವಿಂಗ್ ರಿಲೇಷನ್ ನೆಲೆಗಟ್ಟಿನಲ್ಲಿ ಮುಂದಿನ ಜೀವನ ಸಾಗಿಸುವ ನಿರ್ಧಾರ ಕೈಗೊಂಡಿದ್ದಳು. ಜೊತೆಗೆ ಅವಳು ಬೆಳೆದ ಪರಿಸರ ಭಿನ್ನವಾಗಿತ್ತು.

ಪ್ರತಾಪ್ ಸಂಪ್ರದಾಯಸ್ತ ಹಿಂದೂ ಕುಟುಂಬದಲ್ಲಿ ಬೆಳೆದು ಬಂದಿದ್ದ, ಹಾಗಾಗಿ ಮದುವೆಯ ಕುರಿತ ಕಲ್ಪನೆಗಳು, ನಂತರದ ವೈವಾಹಿಕ ಜೀವನದ ಕುರಿತ ಕನಸುಗಳು ಅತಿಯಾಗಿದ್ದವು. ಆತ ನಿರೀಕ್ಷಿಸುತ್ತಿದ್ದ ಎಷ್ಟೋ ಚಿಕ್ಕಪುಟ್ಟ ಸಂಗತಿಗಳಿಗೂ ರಂಪಾಟ ಸಹಜವಾಗಿತ್ತು. ಹೀಗಾಗಿ ಒಂದೇ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರೂ ಸಸಾರವೇನಿರಲಿಲ್ಲ. ಒಂದು ದಿನ ಪ್ರತಾಪ್ ಬಳಿ ನೀತಾ ಎಚ್ ಆರ್ ನಿಂದ ಮಾರ್ಕೆಟಿಂಗ್ ಹೆಡ್ ಎಂದು ವರ್ಗವಾಗಿರುವ ವಿಷಯ ತಿಳಿಸಿದಳು. ಇಬ್ಬರೂ ಹೊರಗಡೆ ಸೆಲೆಬ್ರೇಟ್ ಮಾಡಿದರು ಕೂಡ. ಆಗಲೇ ಉಂಟಾಗಿದ್ದ ಚಿಕ್ಕ ಬಿರುಕು ದೊಡ್ಡದಾಗಬಹುದು ಎಂದೆನಿಸಿರಲಿಲ್ಲ. ಆದರೇ ಕೆಲಸದಲ್ಲಿನ ಬದಲಾವಣೆ, ನೀತಾಳ ಹೊಸ ಜವಾಬ್ದಾರಿ ಪ್ರತಾಪ್ ಗೆ ಸಹಿಸಲಾಗುತ್ತಿಲ್ಲ. ಕ್ಲೈಂಟ್ ಜೊತೆ ಮೀಟಿಂಗ್ಸ್, ಬಾಸ ಜೊತೆ ಒಡಲ ಹೀಗೆ ಕೆಲಸದ ವೈಖರಿ ಬದಲಾಗಿತ್ತು. ಈತನ ಮೊದಲ ರಾತ್ರಿಯ ಹಸಿವೂ ಇಂಗಲೇ ಇಲ್ಲ. ಈಗ ಮಾರ್ಕೆಟಿಂಗ್ ಟಿಮ್ ನ ಆಯುಷ ಜೊತೆ ಸಲಿಗೆ, ಓಡಾಟ ಜಾಸ್ತಿಯಾಗಿತ್ತು. ಮಾರ್ಕೆಟಿಂಗ್ ನಲ್ಲಿ ಅವನ ಪ್ರತಿಭೆ ಬಾಸ್ ಗೆ ಮೆಚ್ಚುಗೆಯಾಗಿತ್ತು, ಸಹಜವಾಗಿ ನೀತಾಳಿಗೂ ಅವನ ಜೊತೆ ಓಡಾಟ, ಕಮಿಟ್ ಮೆಂಟ ಅನಿವಾರ್ಯತೆ ಅಗಿತ್ತು. ಎಷ್ಟೋ ಸಲ ಈ ವಿಷಯವೂ ಜಗಳಕ್ಕೆ ಕಾರಣವಾಗಿತ್ತು. ಆಗೆಲ್ಲ ನೀನೇನು ಗಂಡನಲ್ಲ, ನಾನು ನಿನ್ನ ಆಳಾಗಿ ಸೇವೆ ಮಾಡುವಳಲ್ಲ ಎಂದು ಚೀರಾಡಿತ್ತಿದ್ದಳು. ತುಂಬ ಸೂಕ್ಷ್ಮ ಮನದ ಪ್ರತಾಪ್ ಗೆ ಇರಿಸು ಮುರಿಸಾಗುತ್ತು. ದಿನೇ ದಿನೇ ಮೊದಲ ಪ್ರೀತಿ ಕಾಡುತ್ತಿತ್ತು, ಈ ಸಂಬಂಧದ ಆಯಾಮಕ್ಕೆ ಒಗ್ಗಲಾಗಲಿಲ್ಲ. ದಿನ ಕಳೆಯುತ್ತಿದ್ದ ಅಷ್ಟೆ, ಆದರೇ ಬದುಕಿನ ಚೈತನ್ಯ ಕಳೆದಿತ್ತು. ಡಿವೊರ್ಸ್ ಮಾಡಲುಆಯುಷ  ಮದುವೆಯಾಗೆ ಇಲ್ಲ, ಜೀವನ ಮುಂದುವರೆಸಲು ಮದುವೆಯ ಕಟ್ಟಳೆಗಳ ವರವೂ ಇಲ್ಲ. ಮೊದಲ ಬಾರಿಗೆ ಪ್ರತಾಪ್ ಗೆ ಒಂಟಿ ಅನಿಸತೊಡಗಿತು. ನೀತಾಳ ಮೇಲೆ ಕಿಡಿಕಾರುತ್ತಿದ್ದ. ಅಸಹಾಯಕತೆ ನರ್ತಿಸುತ್ತಿತ್ತು ಮನದ ಭಾಷೆಯ ಅರ್ಥೈಸಿಕೊಳ್ಳಲು ಕಷ್ಟ ಆಗಿತ್ತು. ಮುಂದೇನು ಎಂಬ ಪ್ರಶ್ನೆ ಸಹಜ, ಉತ್ತರ ಸಿಗದೇ ಓಡಾಡುತ್ತಿದ್ದ. ಅಂತೂ ಕೊನೆಗೊಂದು ತೀರ್ಮಾನಕ್ಕೆ ಬಂದಿದ್ದ, ಬಾಗ್ ತುಂಬಿಸಿಕೊಂಡು ಹೊರಟು ನಿಂತ. ನೀತಾ ಆಫಿಸ್ ಕೆಲಸಕ್ಕೆಂದು ನಾಲ್ಕು ದಿನ ಹೊರಗೇ ಹೋಗಿದ್ದಳು,  ಅದೆ ಸಮಯಕ್ಕೆ ಪ್ರತಾಪ್ ಹೊರಟಿದ್ದ, ತಡೆವರೂ ಯಾರಿಲ್ಲ.

ನೀತಾ ಕಂಪನಿಯ ಪ್ರಾಡಕ್ಟಗಳಿಗೆ ಮಾರ್ಕೆಟ್ ಮಾಡುತ್ತಿದ್ದರೆ,  ಪ್ರತಾಪ್ ತನ್ನ ಇಷ್ಟಾನಿಷ್ಟಗಳ   ಅವಳಿಗೆ ಮಾರಲಾಗದೇ, ಅರ್ಥವಾಗದ ಸಂಬಂಧಕ್ಕೆ ಜೋತು, ಕೈಸೋತು ಬಿದ್ದಿದ್ದ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಬದುಕು ಮಾಯೆ: ಮಂಜುನಾಥ ಹೆಗಡೆ

  1.  ಸದ್ಯದ ಸಾಮಾಜಿಕ ಪರಿಸ್ಟಿತಿಗೆ ಹಿಡಿದ ಕನ್ನಡಿಯಂತಿದೆ ಅಭಿನಂದನೆಗಳು

Leave a Reply

Your email address will not be published. Required fields are marked *