ಇದೇನ್ ಕಾಕಾ,
ಯಾಕೆ ಹೀಗೆ ಮಾಡಿದ್ರಿ? ಏನಿತ್ತು ಅಂಥ ಅವಸರ. ಇನ್ನೂ ಒಂದಿಷ್ಟು ಹುಡುಗರಿಗೆ ದುಡಿಯುವ ದಾರಿ ತೋರಿಸಿ ಅವರಿಗೆ ಜೀವನದ ಪಾಠ ಹೇಳಿಕೊಡವುದು ಬಾಕಿ ಇತ್ತು. ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಅದೇಗೆ ದುಡಿಸಿಕೊಳ್ಳುವುದು ಎನ್ನುವುದರ ಬಗ್ಗೆ ನಿಮ್ಮಿಂದ ನೋಡಿ ನಮ್ಮಂಥವರಿಗೆ ಕಲಿಯುವುದೂ ಇತ್ತು. ಬಹಳ ಆತುರ ಪಟ್ಟು ಹೊರಟಿರಿ…
ಮೊದಲೆಲ್ಲಾ ನೀವು ಪಕ್ಕಾ ಪ್ಲಾನ್ ಮಾಡುತ್ತಿದ್ದಿರಿ.. ಯಾವ ವಯಸ್ಸಿನಲ್ಲಿ ಎಷ್ಟು ಕಷ್ಟಪಡಬೇಕು, ಎಷ್ಟು ದುಡಿಯಬಹುದು, ಏನೆನೆಲ್ಲಾ ಕೆಲಸ ಮಾಡಲು ನಮಗೆ ಅವಕಾಶ ಇವೆ.. ಯಾರೆಲ್ಲಾ ಏನೇನು ಕೆಲಸ ಮಾಡಬಲ್ಲರು? ಯಾರಿಂದ ಯಾವ ಮತ್ತು ಎಷ್ಟು ಕೆಲಸ ಪಡೆಯಬಹುದು ಹೀಗೆ… ಅದ್ಯಾಕೆ ಇಷ್ಟು ಮೈ ಮರೆತಿರಿ.
ಮೊದಲು ನಿಮ್ಮನ್ನು ನೋಡಿದಾಗ ನಾನಿನ್ನು ತುಂಬಾ ಚಿಕ್ಕವನಿದ್ದೆ… ಅದಕ್ಕೂ ಮೊದಲು ಗಂಗಮ್ಮಜ್ಜಿ ಮಾತ್ರ ನೋಡಿದ ನೆನಪು… ಮೊದಲು ಸೈಕಲ್ ಸವಾರಿ ಮಾಡುತ್ತಲೇ ನಿಮ್ಮ ದುಡಿಮೆ ಶುರುವಾಯ್ತು ಅಂತ ಕೇಳಿದ್ದೆ.. ನಾನು ನೋಡುವ ವೇಳೆಗೆ ಲೂನ್ ಸೂಪರ್ ಗೆ ಶಿಫ್ಟ್ ಆಗಿದ್ರಿ… ಇತ್ತೀಚೆಗೆ ಕಾರು…
ಏನೆಲ್ಲಾ ಮಾಡಿದಿರಿ? ಗೃಹೋಪಯೋಗಿ ವಸ್ತುಗಳನ್ನು ತಂದು ಕಂತಿನ ಮೇಲೆ ಮಾರಾಟ, ಮದುವೆ, ಸಮಾರಂಭದ ಫೋಟೋಗ್ರಫಿ, ವಿಡಿಯೋಗ್ರಫಿ. ಆಗತಾನೇ ಫೇಲಾಗಿ ಬಂದ ಓದದ ಹುಡುಗರಿಗೆ ಒಂದಿಷ್ಟು ಕೆಲಸ ಕಲಿಸಿ ದುಡಿಯಲು ಹಚ್ಚಿದಿರಿ. ಹೊಸದಾಗಿ ಮಾರ್ಕೆಟ್ಟಿಗೆ ಬಂದಿರದ ಆದರೆ ಬರಬಹುದಾದ ಯಾವುದೇ ಸಣ್ಣ ಮೊತ್ತದ ಬಂಡವಾಳದ ವ್ಯಾಪಾರವನ್ನು ಪತ್ತೆ ಹಚ್ಚುವಲ್ಲಿ ನಿಮ್ಮ ಜಾಣ್ಮೆಯನ್ನು ಕಲಿಯಬೇಕಾದ್ದೇ.. ಎಲ್ಲವನ್ನೂ ಮೊದಲ ಬಾರಿಗೆ ಎಂಬಂತೆ ವ್ಯವಹಾರ ಶುರು ಮಾಡಿದರೂ ಅದರಲ್ಲಿನ ಆದಾಯ, ಶ್ರಮ, ವ್ಯಯಿಸಬಹುದಾದ ಸಮಯ ಎಲ್ಲವನ್ನು ಕರಾರುವಾಕ್ಕಾಗಿ ಮಾಡುತ್ತಲೇ ಹೋದಿರಿ.
ನಾನು ನಿಮ್ಮ ಮನೆಗೆ ಬರುತ್ತಿದ್ದುದೇ ಅಪರೂಪ. ನಿಮ್ಮನ್ನು ಬೇಟಿ ಆಗುತ್ತಿದ್ದುದೂ ಕಡಿಮೆ… ಆದರೆ ಭೇಟಿ ಆದಾಗೊಮ್ಮೆ ಹೊಸದೊಂದು ಯೋಜನೆಯಲ್ಲಿ ವ್ಯವಹಾರದಲ್ಲಿ ತೊಡಗಿದ ಬಗ್ಗೆ ಹೇಳುತ್ತಿದ್ದಿರಿ.. ನಿಮ್ಮ ಸ್ಪೀಡಿಗೆ ಜೊತೆಗೆ ನಿಮ್ಮ ಮನಸ್ಥಿತಿ ಇದ್ದ ಸ್ನೇಹಿತರನ್ನು ಕಲೆ ಹಾಕಿ ತೊಡಗುತ್ತಿದ್ದಿರಿ….
ಅದೇಗೆ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಎಲ್ಲಾ ವ್ಯವಹಾರದ ಕಡೆಗೆ ಗಮನ ಹರಿಸುತ್ತಿದ್ದಿರಿ?? ಇರಿ, ನನಗೆ ಅರಿವಿರುವಂತೆ ಒಂದೊಂದಾಗಿ ಜ್ಞಾಪಿಸಿಕೊಳ್ಳುತ್ತೇನೆ. ವಿಡಿಯೋ ಥಿಯೇಟರ್, ಸಿ.ಡಿ….ಸೆಂಟರ್ ನಿಂದ ಗಿಫ್ಟ್ ಸೆಂಟರ್, ಕೇಬಲ್, ಸಿಮೆಂಟ್ ಬ್ರಿಕ್ ಫ್ಯಾಕ್ಟರಿ, ಪೆಟ್ರೋಲ್ ಬಂಕ್ ಲೀಜ್, ಅದಾದ ಮೇಲೆ ಕನ್ಸ್ಟ್ರಕ್ಷನ್ ಕನ್ಸಲ್ಟೆನ್ಸಿ, ಬಿಲ್ಡಿಂಗ್ ಕಾಂಟ್ರಾಕ್ಟ್, ಬಿಡಿ, ಇವೆಲ್ಲಾ ಇದ್ದೂರಲ್ಲೇ ಇದ್ದು ಮಾಡಲು ನೀವು ಶೆಡ್ಯೂಲ್ ಮಾಡಿಕೊಳ್ಳುತ್ತೀರೆಂದು ಭಾವಿಸಿಕೊಳ್ಳುತ್ತೇನೆ…. ಆದರೆ ಅದಕ್ಕೂ ದೊಡ್ಡ ಆಶ್ಚರ್ಯವೆಂದರೆ, ಇವೆಲ್ಲವನ್ನೂ ನೀವು ನಿಮ್ಮ private ಎಂಜನೀಯರಿಂಗ್ ಕಾಲೇಜ್ ನ ಮೂಲ ವೃತ್ತಿಯ ಕರ್ತವ್ಯದ ಅವಧಿ ನಂತರ ಮಾಡುತ್ತಿದ್ದಿರಿ ಅನ್ನುವ ಸಂಗತಿ.. ಅವೆಲ್ಲವೂ ಚಾಲ್ತಿಯಲ್ಲಿರಬಹುದು ಅಥವಾ ಅವುಗಳಲ್ಲಿ ಕೆಲವು ವ್ಯವಹಾರದಿಂದ ಹಿಂತಿರುಗಿರಬಹುದು. ಅದಿರಲಿ, ಈವೆಂಟ್, ಫಂಕ್ಷನ್, ಗೆಟ್ ಟುಗೆದರ್ ಕುಟುಂಬದ ಕಾರ್ಯಕ್ರಮ ಮತ್ತು ಟೂರು ಹೇಗೆಲ್ಲಾ ಸಮಯ ಹೊಂದಿಸಿಕೊಳ್ಳುತ್ತಿದ್ದಿರಿ?
ಕುಟುಂಬ ಎಂದ ಕೂಡಲೇ ನೆನಪಾಯಿತು, ಇದ್ದ ಒಬ್ಬೇ ಒಬ್ಬ ಮಗಳನ್ನು ಓದಿಸಿ ಲಕ್ಷ ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿದಿರಿ…. ಆ ಅದ್ದೂರಿತನವನ್ನು ನಿಮ್ಮ ಮೇಲಿನ ಗೌರವಕ್ಕೆ ನಿಮ್ಮಿಂದ ದುಡಿಮೆ ಕಲಿತ ಹುಡುಗರು ನಿಮ್ಮ ಮಗಳ ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿ ಪ್ರೆಸೆಂಟ್ ಮಾಡಿದ್ದ ರೀತಿಯೇ ಹೇಳಿತ್ತು.. ಉಳಿದವರು ಮಗಳ ಮೇಲಿನ ನಿಮ್ಮ ಪ್ರೀತಿ ಎಂದರು. ನನಗೆ ಮಾತ್ರ ಆ ಹುಡುಗಿ ನಿಮ್ಮ ಮಗಳಾಗಿರುವುದೇ ಭಾಗ್ಯವೆಂದೆನಿಸಿತು. ಆ ಹುಡುಗಿಗೆ ಹೇಳಿದ್ದೆ ಕೂಡ.
ನಿಮ್ಮಿಂದ ನಾನು ಫೈನಾನ್ಸಿಯಲ್ ಬೆನಿಫಿಟ್ ತೆಗೆದುಕೊಳ್ಳಲಿಲ್ಲ. ನನ್ನಲ್ಲಿ ನಿಮ್ಮ ಯಾವ ವ್ಯವಹಾರವೂ ಇದ್ದಿಲ್ಲ.. ಆದರೂ ಆಗಾಗ ನಮ್ಮಲ್ಲಿ ಮಾತುಗಳಿರುತ್ತಿದ್ದವು… ನಮ್ಮ ನಡೆಯಲ್ಲಿ ನಿಜವಿದ್ದರೂ ಜಗತ್ತಿಗೆ ಎದುರಾಗಿ ಅದನ್ನು ಸಾಬೀತು ಮಾಡುವ ಹುಕಿಗೆ ಬೀಳದೇ ಸಮಯಕ್ಕೆ ಕಾದು ಸುಮ್ಮನಿರುವುದು ಒಳಿತು ಎಂದು ಹೇಳುತ್ತಿದ್ದಿರಿ… ನಾನೂ ತಲೆದೂಗುತ್ತಿದ್ದೆ…
ನೀವು ಮನೆ ಕಟ್ಟಿದ ಹದಿನೇಳು ವರ್ಷಗಳ ನಂತರ ಅದೇ ನವೆಂಬರ್ ತಿಂಗಳಲ್ಲಿ ನನ್ನದೂ ಗೃಹ ಪ್ರವೇಶವಾಯ್ತು… ನೀವು ಬಂದಿರಲಿಲ್ಲ. ನಾನು ನಿಮ್ಮ ಮಗಳ ಮದುವೆಗೆ ಬಂದು ಹೋದೆ… ವರ್ಷದಿಂದೀಚೆಗೆ ಬರೀ ಫೋನಲ್ಲೇ ಚೂರು ಮಾತು. ನೀವು ತಾತ ಆದಿರಿ… ಮನೆಗೆ ಮುದ್ದುಕೃಷ್ಣನನ್ನು ಕರೆತಂದಷ್ಟೇ ಖುಷಿ ನಿಮಗೆ… ಸಿಂಗರಿಸಿದಿರಿ, ಮುದ್ದುಗರೆದಿರಿ. ನೋಡ ನೋಡುತ್ತಲೇ ಕಂದನ ವರ್ಷದ ಹುಟ್ಟು ಹಬ್ಬವನ್ನೂ ಆಚರಿಸಿ ಫೋಟೋ ಹಂಚಿಕೊಂಡಿರಿ… ಕಾಲ್ ಮಾಡಿ ಮಾತಾಡಿದರೆ ಅವನ ತುಂಟುತನದ ಗುಣಗಾನವನ್ನೂ ಮಾಡಿದಿರಿ.
ಅಜ್ಜನಾದರೇನಂತೆ ನಿಮ್ಮ ಓಡಾಡುವ, ದುಡಿಯುವ ಸ್ಪೀಡ್ ಇನ್ನೂ ಮೊದಲಿನದೇ ಹಂತದಲ್ಲಿದೆ… ಒಂದಂತೂ ನಿಜ ನೀವು ಬಳಗದ ಸದಸ್ಯರನ್ನು ಒಟ್ಟುಗೂಡಿಸಿ ಬೆರೆಸಿದಂತೆ, ಉಳಿದವರು ಮಾಡಲಾರರೇನೋ. ನಾನೇ ನೋಡಿದಂತೆ ಕೆಲವು ಸಂಧರ್ಭದಲ್ಲಿ ಕ್ಲಿಷ್ಟ ಹಾಗೂ ಸಂದಿಗ್ಧಗಳನ್ನು ಬಗೆಹರಿಸಲು ನೀವು ಸೂಕ್ಷ್ಮವಾಗುತ್ತೀರಿ..
ಇದ್ದಕ್ಕಿದ್ದಂತೆ ಏನಾಯ್ತು? ನಿಮ್ಮನ್ನೇ ಯಾಮಾರಿಸಿ ವಕ್ಕರಿಸಿಕೊಂಡಿತಾ ಕೆಟ್ಟ ಗಳಿಗೆ. ಅಥವಾ ನೀವೇ ಮೈಮರೆತಿರಾ? ಗೊತ್ತೇ ಆಗಲಿಲ್ಲ. ನಿಮ್ಮ ಮೆಸೇಜ್ ನೋಡಿ ಶಾಕ್ ಆಗಿದ್ದು ನಿಜ… ಕೇಳೋಣವೆಂದರೆ ಆಸ್ಪತ್ರೆಯಲ್ಲಿರುವ ನಿಮ್ಮನ್ನು ಡಿಸ್ಟರ್ಬ್ ಮಾಡುವಂತಿಲ್ಲ… ಉಳಿದವರು ಮಾತಾಡದ ಮಟ್ಟಿಗೆ ಡಿಸ್ಟರ್ಬ್ ಆಗಿದ್ದರೆಂದು ಭಾವಿಸುವೆ. ಈ ಮಧ್ಯೆ ನಿಮ್ಮನ್ನು ಅಟೆಂಡ್ ಮಾಡುತ್ತಿದ್ದ ಮನೆಯವರು, ಮಗಳು, ಉಳಿದವರಿಗೆ ಅದೆಷ್ಟು ಕಷ್ಟವಾಗಿದ್ದಿತು? ಮಾನಸಿಕವಾಗಿ ಹಾಗೂ ಆರ್ಥಿಕವಾಗಿ? ಏನಾದರಾಗಲಿ ಮತ್ತೆ ಆರಾಮಾಗಿ ವಾಪಾಸ್ ಬರ್ತೀರಾ ಅಂತಲೇ ನಾನು ಅಂದುಕೊಂಡಿದ್ದೆ… ಹಾಗೇನೇ ಎಲ್ಲರೂ ಕಾದು ಕುಳಿತಿದ್ದರು…. ಆದರೆ, ನೀವು ಬಂದದ್ದು ಎಂದಿಗೂ ಮಾತಾಡದ ರೀತಿಯಲ್ಲಿ….ಹೀಗೆ ಬಂದು ಹಾಗೆ ಹೋದಿರಿ…. ಬಹುಶಃ ಬಳ್ಳಾರಿಯ ನಿಮ್ಮ “ಮಂದಾರ” ಗೃಹದಲ್ಲಿ ನಿಮ್ಮ ಅನುಪಸ್ಥಿತಿ ಸದಾ ಕಾಡುತ್ತದೆ…..
ದು:ಖವೆಂದರೆ ಕೇವಲ ಕಣ್ಣೀರಲ್ಲ… ಸಮೀಪ ಇದ್ದವರು, ಜೊತೆಗಿದ್ದವರು ಕಣ್ಮರೆ ಆದರು ಅಂತಷ್ಟೇ ಅಲ್ಲ… ದು:ಖವೆಂದರೆ ಅವರಿದ್ದಂತೆ ನಾವಿಲ್ಲವೆನ್ನು ವುದೂ ಕೂಡ…. ಕಾಲ ಮಿಂಚಿ ಹೋಗಿದೆ… ಹೋಗಿ ಬನ್ನಿ ಜಗ್ಗು ಕಾಕಾ, ಇಪ್ಪತ್ತೊಂದು ವರ್ಷವಾಯ್ತು ಅಪ್ಪನೂ ಅಲ್ಲೇ ಇದ್ದಾನೆ…. ಇಲ್ಲಿ ಆತನೂ ನನಗೆ ನೆನಪಾಗುತ್ತಾನೆಂದು ತಿಳಿಸಿ….
-ಪಿ.ಎಸ್.ಅಮರದೀಪ್.
ಹೃದಯಸ್ಪರ್ಶಿಯಾದ ನೆನಪುಗಳು…👌👌😔🙏💐
No words dear simply silence