ಬದುಕು ಬಯಲಿಗೆ: ಆನಂದ ಎಸ್ ಗೊಬ್ಬಿ.

ದುಡಕಂದು ತಿನ್ನಾಕ ಅಂತ ಬೆಂಗ್ಳೂರಿಗೆ ಹೋಗಿದ್ದ ಶಂಕ್ರನ ಚಡ್ಡಿ ದೊಸ್ತ ಹಣಮಪ್ಪ ಪೋನ್ ಮಾಡಿ “ಬರ್ತೈಯಿದೀನಿ ಲೇ ಮಗ, ಕೆಲಸ ಇಲ್ಲ ಗಿಲಸ ಇಲ್ಲ. ಬಾಳ ತಿಪ್ಲ ಆಗ್ಯಾದಾ , ಹೋರಗ ಹ್ವಾದ್ರ ಸಾಕು ಪೋಲಿಸ್ರೂ ಕುಂಡಿ ಮ್ಯಾಗ ಬಾರಸದೇ ಬಾರಸಾಕ ಹತ್ಯಾರ ಲೇ ಅವರೌನ್. ನಮಗ ಸುಮ್ನೆ ಕುಂದ್ರದು ಆಗವಲ್ಲದು, ಸುಮ್ನೇ ಕುಂದ್ರು ಅಂದ್ರೇ ಎಷ್ಟು ದಿನ ಅಂತ ಕುಡ್ತಿ , ತಿಂಗ್ಳ‌ ಆಗಕ ಬಂತು, ಕೆಲಸ ಇಲ್ಲದೆ ಬಗಸಿ ಇಲ್ಲದೆ, ಹೊಟ್ಟಿ ನಡಿಬೇಕಲ್ಲಪ್ಪಾ ಮಾರಾಯ.” ಎಂದನು. ಅವನ ಮಾತುಗಳಿಗೆ ಪ್ರತಿಯಾಗಿ ಶಂಕ್ರ “ಹ್ಞೂಂ” ಎಂದೇ ಪ್ರತಿಕ್ರಿಯಿಸಿದ. ದನಿಯಿಂದಲೇ “ಹೆಂಡ್ರ ಮಕ್ಳನ್ನ ಇಡ್ಕಳ್ಳದು ಆಗ್ಲಿಲ್ಲ ಲೇ ಅದ್ಕ , ಮೇಸ್ತ್ರಿ ಬತ್ಯಾಕ ಸಾಲ ಮಾಡಿ ಒಬ್ಬೊಬ್ಬರಿಗೆ ಸಾವಿರ ಕೊಟ್ಟು ಟೆಂಪಿನ ಜತೆ ಹೋಗೋರು ಗುಡಾಗ ಹೆಣ್ತಿನ ಯಾಡ್ ಚುಕ್ಕರನ್ನ ಅವರ ತವರ ‌ಮನಿಗಿ ಕಳಿಸಿ ಕೊಟ್ಟೆ. ಬಸ್ಸುಗಳು ಬಂದು ಆಗ್ಯಾವಲ್ಲ, ಊರಿಗಿ ಹೋಗಾಕು ತಿಪ್ಲ‌ ಆಗ್ಯಾದ. ಇಲ್ಲಿ ಒಬ್ಬ್ರಿಗಿ ಸಾವಿರ ಸಾವಿರ ಕೊಟ್ಟು ಟೆಂಪು ಮುಗಿಸಿಕೊಂಡು ಕಳಿವಿಲೇ ರಾತ್ರೋ ರಾತ್ರಿ ಊರು ಸೆರಾಕ ಹತ್ಯಾರ . ನಾನು ಸಲ್ಪ ದಿನಾದ್ರು ಇದ್ದು ಖರ್ಚಿಗಿ ದುಡಕಂಡು ಹ್ವಾದ್ರಾಯ್ತಂದ್ರ, ಹೊರಗ ಹ್ವಾದ್ರ ಸಾಕು ಮಾಸ್ಕ ಆಕ್ಯಾ ಅಂತಾರ, ಹಿಂದ ನೋಡವಲ್ಲರು ಮುಂದ ನೋಡವಲ್ಲರು ಹೊಡೆದೆ ಹೊಡ್ಯಾಕ ಹತ್ಯಾರ, ದಂಡ ಉಸುಲು ಮಾಡಕ ಹತ್ಯಾರ ಬಾಳ ತ್ರಾಸ ಆಗ್ಯಾದ ದೊಸ್ತ. ಈ ಸರಕಾರ ನೋಡಿದ್ರ‌ ಇನ್ನ ಹದಿನೈದು ದಿನ, ಇನ್ನ ಇಪ್ಪತ್ತು ದಿನ ಅಂತ ಲಾಕ್ ಡೌನ್ ಹಿಂಗೇ ಮುಂದುಕು ಹಾಕ್ಕೆಂತ ಹೊಂಟಾದ ಹೊರತು ಲಾಕ್ ಡೌನ್ ತೆರ್ಯಾವಲ್ದು, ಏನ್ಮಾಡ ಬೇಕಂತ‌ ಮಾಡ್ಯಾರ ಏನ್ , ಊರಿಗಾದ್ರು ಬರ್ತಿನಿ ನೌನು ಅಲ್ಲಾದ್ರು ಮನಿದು ಉಂಡು ತಳ್ಳಗ ಅಡ್ಡಾಡಿದ್ರು ನಡಿತಾದ. ಅದೇ ಪಾ ನಾನು ಹೇಳಿದಂಗ ನೀನು ‌ಅಲ್ಲಿಗಿ ಬಂದು ಕರಕೊಂಡು ಹೋಗು. ನಮ್ಮೂರ ತನಕ ಟೆಂಪು ಹೋಗಲ್ಲ ಅಂತ” ಎಂದು ತನ್ನ ಅಳದೇಕಿನೇ ನಿನ್ನೆ ತಡ ರಾತ್ರ್ಯಾಗ ಎಂಟೊಂಬತ್ತರ ಸುಮಾರಿಗಿ ಪೋನ್ ಮಾಡಿ ಒಂದೇ ಉಸಿರಿನಲ್ಲಿ ಹತ್ತು, ಇಪ್ಪತ್ತು ನಿಮಿಷ ಬುಡಲಾರದಂಗ ಶಂಕ್ರ‌ನ ಕಿವ್ಯಾಗ ನತ್ರ ಬರುವಂಗ ಖಾರಿದ. ಮೋಟಾರ್‌-ಗಾಡಿಗಳು ಬಾಳ್ ತಿರಗಾಡಲ್ಲ‌ ಬಂದಾಗ್ಯಾವ ಎಂಬುದು ಗೊತ್ತಿದ್ದು ಸಲಾಗ “ಅರೇ..! ನೌನ್ ಐತು ತಗ ಲೇ ಬರ್ತಿನಿ,” ಎಂದು ಶಂಕ್ರ ದೋಸ್ತನ ಮಾತಿಗೆ ಒಪ್ಪಿಕೊಂಡು ಬರುವ ಸೂಚನೆ ನೀಡಿದ.

ಸರಕಾರ ಲಾಕಡೌನ‌ ಮಾಡಿ ಜನರಿಗಿ ಹೈರಾಣಾಕ್ ಕೇಡವಿತ್ತು. ಕೊರೊನ‌ ಎಂಬ ಸಂಕ್ರಾಮಿಕ ರೋಗ ಬಂದು ದೂರದ ಊರಿಗಿ ದುಡ್ಯಾಕ ಹ್ವಾದ ಮಂದಿಗಿ ನಿರುಮ್ಮಳ ಇಲ್ಲದಂಗ ಮಾಡಿತು. ಪೂನಾ, ಬೊಂಬಾಯಿ, ಬೆಂಗ್ಳೂರಿಗಂತ ಹ್ವಾದ‌ ಮಂದಿ ಇದರ ಕಾಲಾಗ‌ ಪಜೀತಿ ಎದ್ದಿದ್ದರು. ದಿನ ದುಡುದು ತಿಂದು ಬದುಕುತಿರುವ ಜೀವಗಳು ಅಂತೂ ನರಳಿ ನರಳಿ ಮುದುಡಿ ಕೊಂಡಿದ್ವು. ದೊಡ್ಡ ರೋಗ ಬಂದಾದ ಮಂದಿ ಬಗಲಾಗ ಕುಡುಬ್ಯಾಡ್ರಿ, ದೂರ, ದೂರ ಕೂಡ್ರೀ, ಸೀನರ ಬಗಲಾಗ ಕೂಡ ಬ್ಯಾಡ್ರೀ, ಮಾರಿಗಿ ಬಟ್ಟಿ ಕಟ್ಟಿಗೇರಿ, ಎಂದು ದಿನ ಟಿವ್ಯಾಗ, ಪೇಪರನ್ಯಾಗ ತೋರಸಿದ್ದೇ ತೋರಸುತಿದ್ದರು. ಲಾಕ್ ಡೌನ್ ಇರುವುದರಿಂದ ಬಸ್ಸುಗಳು, ಮೋಟಾರು, ಗಾಡಿಗಳು ಎಲ್ಲಂದರಲ್ಲಿ ನಿಂತ್ಕಂಡಿದ್ದರಿಂದ‌ ಜೀಡಿ ಇಟ್ಟರೂ ಸರಿಯೇ, ಸರಕಾರಿ ಬಸ್ಸಿನವರಿಗೂ ಅದೇ ಬೇಕಾಗಿತ್ತು. ದಿನ ಕಚ್ಚ ಕಚ್ಚ ರೋಡಿಗಿ ಓಡಿಸಿ ಸಾಕ್ಕಾಗಿ ಸರಕಾರ ಬಸ್ಸುಗಳನ್ನು ಬಂದು ಮಾಡಿದ್ದೇ ತಡ ನಿಲ್ಲಿಸಿ ಪಾಡಾಯ್ತೇಂದು ಹೆಂಡ್ರು ಮಕ್ಕಳ ಜತೆ ಗೂಡು ಸೇರಿದರು.


ಮಟ-ಮಟ ಮಧ್ಯಾಹ್ನದ ಊರಿ ಬಿಸಲು ನೆತ್ತಿ ಮ್ಯಾಗೇರಿತ್ತು. ಶಂಕ್ರ ತನ್ನದೊಂದು ಹಳಿ ಪಟಿ-ಪಟಿಗಿ ಅರ್ದ ಲಿಟರ್ ಎಣ್ಣಿ ಹಾಕಿಸಿಕೊಂಡು ಹೋಗದ್ಕ ನಿರ್ಧಾರ ಮಾಡಿದ. ಹೋದ್ ಸಾರಿ ಊರು ಮರಗವ್ವನ ಜ್ಯಾತ್ರ್ಯಾಗ ಶಂಕ್ರ, ಹಣಮ ಜತೆ ಜತೆಗೆ ಇದ್ರು. ಊರು ಜಾತ್ರಿ ಬಂತಂದ್ರ ಸಾಕು ಎಲ್ಲೇ ಇದ್ರು ಉರಿಗಿ ಹತ್ತಿ ಒಂದಾಗುತಿದ್ರು. ಒಂದಿನ ಶಾಪೂರಕ್ಕೋಗಿ ಒಂದೆ ಅಂಗಡ್ಯಾಗ ಒಂದೇ ಬಣ್ಣದ ಅಂಗಿ, ಕರಿದು ಜಿನ್ಸು ಪ್ಯಾಂಟ್ ತಗೊಂಡಿದ್ರು. ಜ್ಯಾತ್ರ್ಯಾಗ ಮೆರದಿದ್ರು. ಜ್ಯಾತ್ರಿ ಮರುದಿನ ಕರಿಗಿ ಕೋಳಿ ಕ್ವೈಸಿ, ಬೀರಿನ ಬಾಟ್ಲಿ ಮ್ಯಾಗ ಬೀರಿನ ಬಾಟ್ಲಿ ಕಂಠ ಪೂರ್ತಿ ಕುಡುದಿದ್ರು. ಜಾತ್ರಿ ಮುಗಿಸಿಕಂಡು ಹ್ವಾದನಂದ್ರ ಊರು ಹೆಸರು ಹೆತ್ತಲಾರದಂಗ ಮುಂದು ನೋಡೇ ದುಡ್ಯಾವ, ಬಂದುನಂದ್ರ ರೊಕ್ಕ ಖಾಲಿ ಆಗತನಕ್ಕ ಕುಡೆದು ತಿನ್ನದು ಮಾಡ್ತಿದ್ರು. ಖಾಲಿ ಆದ್ವಂದ್ರ ಒಮ್ಮೊಮ್ಮಿ ತಂಬಾಕು ಚೀಟಿಗು‌ ಗತಿ ಇರತಿರಲಿಲ್ಲ. ಶಂಕ್ರ ಅದೇ ಬಾಯಿ ಚಪಲದಾಗ ಜೊಲ್ಲು ಸುರಿಸಿ ನಿಂದ್ರಲಾರದಂಗ ಐದಾರು ಸಾರತಿ ಪಟಿ ಪಟಿ “ಕಿಕ್” ಗೆ ಪೆಕ್ಕಾ ಪೆಕ್ಕಾ ದಮ್ಮ ಅತ್ತಂಗ್ ಒದ್ದ. ಜುಪ್ಪ್ ಅನ್ನಲಿಲ್ಲ. ಹಣಿ ಮ್ಯಾಗಿನ ನೀರು ಹೊರಿಸಿಕೊಂಡು ಪಟಿ ಪಟಿನ ಎಡಕ್ ಮಕ್ಕಸಿ, ಮತ್ತೆ ನಿಂದ್ರಿಸಿ ಪೆಕ್ಕನ್ ಒದ್ದುಕೇಸಿ ಎಕ್ಸಲೇಟರನ ಒತ್ತಿ ಹಿಂಡಿದ. “ಪಟ್ ಪಟ್ ಪಟ್ಯಾಟೆಟೆಟ್” ಎಂದು ಚಾಲುವಾಗಿ ಹೊದ್ರಿದಾಗ. ಶಿವಾ ಎಂದು ಪಸ್ಟ್ ಗೇರ್ ಹಾಕಿಕೊಂಡು ಹೌರಾಳಕ ಬುಟ್ಟ. ಬಿಸಿಲು‌‌ ಜರಾ ಹೆಚ್ಚಾಗಿದ್ದರಿಂದ ಮಾರಿ ಮಾರಿ ಹೊಡಿತಿತ್ತು. ಪ್ಯಾಂಟ್ ಕಿಸ್ಯಾದಾಗ ಪೋನು ಒಂದೇ ಸವನೆ ಬಡ್ಕಂತಿತ್ತು. ಹೆಂಗಾನ ಆಗಲಿ ಅಂತ ಮತ್ತೆಂದಿಟೂ ಕಿವಿ ಒತ್ತಿ ಹಿಂಡಿದ. ಮೇನ್ ರೋಡಿಗಿ ಹೋಗಿ ಯಾಕ್ ಹೊಡಿಸಿಕೊಳ್ಳಲಿ ಅಂತ ಎಡಕ್ ತಿರುಗಿ ಅಡ್ಡ ದಾರಿಗಿ ಬಿದ್ದ.

ಕಚ್ಚ ಕಚ್ಚ ರೋಡ ಇರದರಿಂದ‌ ನಿಧಾನಕ್ಕ ಗೇರ್ ಹಾಕ್ಕೆಂತ‌, ತೆಕ್ಕಂತ ಮೆಲ್ಲಕ ಹೊಂಟಿದ್ದ. ಕಿಸೆಯಿಂದ ಪೋನು‌ ಗುಂಯ್ ಗುಟ್ಟದು ನೋಡಿ ಬ್ಯಾಸ್ರ ಎನಿಸಿಕೊಂಡು ನಿಲ್ಲಿಸಿಕೇಸಿ ಹುಚ್ಚಾ ಉಯ್ಯಿದು. “ಏ ಬರಾಕ್ ಹತ್ತಿನಲೇ ನೌನ್ ದಾರಿ ಚೊಲ ಇಲ್ಲ ಕಚ್ಚ ಕಚ್ಚ ಅದಾ” ಎಂದು ಮಾರಿ ಅರಕೊಂಡ.

“ಹ್ಯಾಂಗ್ ಬರಾಕ್ ಹತ್ತಿದಿಲೇ”
“ನಡುಗಡ್ಡಿ ಮ್ಯಾಗ, ಬರಾಕ ಹತ್ತಿನಿ ಲೇ ಇರು” ಎಂದು ಮಾರಿ ಎಳಕೊಂಡು ಪೋನ್ ಇಟ್ಟುಕೇಸಿ ಗಾಡಿ ಚಾಲೂವು ಮಾಡಿದ. ಬ್ಯಾಸಿಗಿದಾಗ ದನಗಳು, ಕರಗಳು ದಾರಿ ಬಿಡಲಾರದಂಗ್ ರೋಡ್ ತುಂಬ ಮೈಯಿಗಿ ಮೈ ತಿಕ್ಕ್ಯಾಂತ ಒಂದ್ರಮ್ಯಾಗ ಒಂದು ಬಿದ್ದು, ಸತ್ತ ಹೆಣ ಹೊಂಟಾಂಗ ಹೊಂಟಿದ್ವು. ಹೊಟ್ಟಿಗಿ ಕೂಳು ಹುಡುಕಿಕೊಂಡು ಅಡಿವಿಗಿ ಬಂದಿದ್ದ ದನ ಕರಗಳು ಬ್ಯಾಸಗಿ ದಿನಕ ಮೇವು ಸಿಗಲಾರದದ್ಕ ಹೊಟ್ಟಿಗಿ ಆಸರ ಇಲ್ಲದೇ ಡೊಕ್ಕಿನೇ ಕಿಸದು ತಮ್ಮ ಗೂಡಿಗೆ ನಿರಾಸೆಯಾಗಿ ಸಾಲು ಹಿಡಿದು ಕಾಲು ಎಳೆದುಕೊಂಡು ಹೊಂಟಿದ್ವು.
ಮುದಿ ಆಕಳು ಬೆನ್ನಿನ ಮ್ಯಾಗ ದೊರಿನೇ ಮೂಡಿದ್ವು. ಒಂದೊಂದ್ಕ ಬೆನ್ನು ‌ಮ್ಯಾಗಿಂದ‌ ಕಾಲ ಚೆಪ್ಪಿನ ತನಕ ರಕ್ತ ಸುರುದು ಹೊಣಿಗಿ ಚೆಕ್ಕಳಿ ಎದ್ದಿತು. ಇನ್ನೊಂದ್ಕ ಮುಳ್ಳು ತರಚಿ ಚುಕ್ಕಿ ಚುಕ್ಕಿ ಉದ್ದಕ ಹಸಿ ರಕ್ತನೇ ಕಾಣುತಿತ್ತು. ದಾರಿ ಉದ್ದಕ್ಕೂ ದನ ಕರಗಳು ಸಾಲಿಡಿದು ಹೊಂಟಿದ್ವು. ಒಂದೊಂದು ಕುಂಟಿಗಂತ ಹೊಗುತಿದ್ವು. ಕರಗಳು ಹಸದು ತಾಯಿ ಕೆಚ್ವಲಿಗಿ ಮಲಿ‌ ಕುಡ್ಯಾಕ ಗಂಟು ಬಿದ್ದಾಗ, ಕುಡಿಸಿಕೊಳ್ಳಾರದೇ ಕಾಲು ಹಾಯಿಸಿ ಪಕ್ಕ್ಯಾಗ ಕರಕೊಳ್ಳುತ್ತಿದ್ವು, ಹಿಂದಲಿಂದ‌ ಪೆಕ್ಕನ ಹಾರಾಟಕ್ಕ ಒದಿತಿದ್ವು. ಅಲ್ಲಲ್ಲಿ ಹೆಣಮಕ್ಕಳು ಅಕ್ಕಲ ಹತ್ತಿ ಹಾಯ್ಕೊಂಡು ಹಿಡೀಕೇಟು ಹಿಡೀಕೇಟು ತಲಿ ಮ್ಯಾಗ, ಟೊಂಕದ ಮ್ಯಾಗ ಒತ್ತೊಕೊಂಡು ಮಣ ಬಾರದ ಕಾಲು ಕಿತ್ತಿಡುತ್ತ‌ ಹೊಂಟಿದ್ರು. ಹೊಲದಾಗ‌ ಅಲ್ಲಲ್ಲಿ ಹತ್ತಿ ತಳಿ ‌ಇರದರಿಂದ‌ ಹೊಲದವರು ತುಡುಗ ದನಗಳು ಹೊಲಕ ಅರೆ ಬಿಳುತಾವಂತ ಕೈಯಾಗ ಬೆತ್ತ ಹಿಡಕೊಂಡು ನಿಂತಿದ್ರು. ಬೆತ್ತಕ ಅಂಜಿ‌ ‌ದನಗಳು ಅವುರಾಳಗ‌ ಒಂದ್ಕೊಂದು ತಿಕ್ಕೆಂತ ಬಾಲ ಮೈ ಮ್ಯಾಗ ಆಡಿಸಿಕಂತ ದಾರಿ ಬುಡಲಾರದ ಹೊಂಟಿದ್ದು ಒಂದಾದ್ರ, ಬಿಸಲಾಗ ಗಾಡಿ ಓಡಿಸಿ ಮೈ ಸಂದಿ ಗೊಂದಿಗಿ ನೀರು ಬುಟ್ಟು ಶಂಕ್ರಗ ಸಾಕ ಸಾಕಾಗಿತ್ತು. ಅವುರಾಳಗ ಒಂದ ಕಡೆ “ಅಯ್, ಅಲೇ, ಒಂಯ್ ಅಚ್ಚಾ ಅಯ್…” ಎಂದು ಬಾಯಿಲೇ ಲಚಗುಟ್ಟುತ್ತಲೇ ಓಳು ಮಾಡಿಕೊಂತ ದನದಾಗ ಹೊಂಟ. ದನಗಳ ಮಾರಿಗಳು‌ ಬಾಡಿ ಬೆಂಡಾಗಿದ್ವು. ಸುರಿದ ಕಣ್ಣೀರಿನ ಜಾಡಿ ಕಪಾಳ ಮ್ಯಾಗ ಮೂಡಿತು. ಶಂಕ್ರ ದೌಡಾಯಿಸಿ ಬಾಯಿ ಮಾಡಿಕೊಂತ ಅವುಕರಿಂದ ಪಾರಾದ.


ಬೆನ್ನಿಗೊಂದು ಬ್ಯಾಗು ಹಿಂದ ತೂಗ ಬಿದ್ದಿತು. ಗೀರ ಗೀರಂದು ಅಂಗಿ ಮಾಸಿ ಕರಕಲಾಗಿತ್ತು‌. ತಲಿ ಮ್ಯಾಗಿನ ಕೂದಲು ಕೆಟ್ಟಿದ್ವು. ಓತಿನ ಗಡ್ಡ ಬುಟಕೊಂಡು ಕಂದಲ್ಲು ತೆರಕೊಂಡು ಕಣ್ಣು ಒರೆಸಿಕೊಳ್ಳುತ್ತಾ ನಿಂತಿದ್ದ ಹಣುಮ. ಶಂಕ್ರ‌ನ ನೋಡಿದಾತನೇ “ಹೌದಲೇ ಸೂರ ಸೂಳೆಮಗನೇ ಮೆಚ್ಚಬೇಕಲೇ‌ ನಿನ್ನ” ಎಂದು ಸುಟ್ಟು ಮಾರಿ ಹಾಕಿದ. “ಏನ್ ಮಾಡ್ಲೀ ಲೇ ದಾರಿ ಪಾಡಿಲ್ಲ ನೌನ್” ಎಂದು ಆತನನ್ನು ದಿಟ್ಟಿಸಿ ನೋಡಿದ. ಅವನ ಮಾರಿ ನೊಡಿದ್ರ ನಿದ್ದಿಗೆಟ್ಟು ಬಾಡಿ ತಟುಕಾಗಿತ್ತು. ಹೆಚ್ಚು ಮಾತಾಡದೆ ಸಂಬಾಳಿಸಿ ಕುಂಡ್ರಿಸಿಕೊಂಡು ಹಿಂತಿರುಗಿದ. ಮಾರಿಗಿ ಬಟ್ಟಿ ಕಟ್ಟಿಕೊಂಡಿದ್ರು. ಅತಾತ ಹೋಗಿ ನಿಂದ್ರಿಸಿಕೇಸಿ ಇಬ್ಬರು ಕಾಲು ಮಡದು ಪ್ಯಾಂಟ್ ಜೀಪ್ ಏರಿಸಿಕೊಂಡ್ರು. “ಹೇಂಗಾದಲೇ ಊರು‌, ಮಂದಿ” ಎಂದು‌ ಹಣುಮ ಮಾತು ಚಾಲೂವು ಮಾಡಿದ. “ನೀನೇ ನೋಡಕಂತಿ ಬಾ” ಎಂದ. “ಏನ್ ಊರೋ ಎನೋ, ಇದ್ರೆ ಹೋಗು ಅಂತಾದ, ಹೋದ್ರೆ ಬಾ ಅಂತಾದಪ” ಎಂದು ಹೀಗೆ ಮಾತಾಡುತ್ತ ಹೊಂಟರು. ಪಾಸ್ಟ್ ಪಾಸ್ಟ್ ಹ್ವಾದಂಗೆಲ್ಲ ಬಿಸಲು ಮಾರಿ ಮಾರಿ ಹೊಡೆಯಿತು. ಹಳ್ಳ ಇಳಿದು ಏರಿ ಮದರಕಲ್ಲಿನ್ಯಾಗ ಒಕ್ಕಂಡರು.

ಪಾನ್ ಪಟ್ಟಿ ಕಂಡು ಅದರ ಬಗಲಾಗ ತರುಬಿ ಸ್ಟ್ಯಾಂಡ್ ಹಾಕಿದ್ರು. ಪಾನ ಪಟ್ಟಿ ಮುಂದ ಸುಣ್ಣದ ಗೇರ್ರಿಲಿ ಬಾಕ್ಸ ಬಾಕ್ಸ ಹಾಕಿದ್ರು. ಒಂದು ನೀರಿನ ಬಾಟ್ಲಿ, ಯಾಡು ಸಿಗರೇಟು, ತಗೊಂಡ್ರು. ಮುದುಕಿ ಒಮ್ಮೆ ಇವ್ರನ್ನ ದಿಟ್ಟಿಸಿ ನೋಡಿ “ಯಪ್ಪೋ ಅಲ್ಲೇ ದೂರ ನಿಲ್ಲರಪ್ಪೊ ದೂರದಿಂದ ಬಂದ್ರಿಯಂತ ಕಾಣ್ತದ, ಕರೊನ ಪಿರೊನ ಹಚ್ವಿ ಗಿಚ್ವಿರಿ” ಎಂದುಕೇಸಿ ಮಾರಿಗಿ ತನ್ನ ತೂತು ಬಿದ್ದ ಸೆರಗು ಅಡ್ಡ ಹಿಡಕಂಡಳು. ಮಾರಿಗಿ ದೊಸ್ತಿ, ಬಗಲಾಗ ಬ್ಯಾಗ ಇಟ್ಟಕೊಂಡಿದರಿಂದ ಅಂದಾರಂತ ಅವರಿಗೆ ಖಾತ್ರಿಯಾಯ್ತು. ಕೊರೊನ ಬಂದ ಮ್ಯಾಗ ದುಡ್ಯಾಕ ಹ್ವಾದ ಮಂದಿ ಹಿಂತಿರುಗಾಕ ಹತ್ಯಾರ ಅಂಬೋದು ಸುದ್ದಿ ಎದ್ದಿತು. ದೊಡ್ಡ ದೊಡ್ಡ ಪಟ್ಟಣದಾಗ ಅದರ ಅವಳಿ ಬಾಳ ಆದ ಅಂಬೋದು ತಿಳಿದು ಅಲ್ಲಿಂದ ಬಂದ ಮಂದಿ ‌ಜತೆ ಮುಡಿಸ್ಕ್ಯಾ ಬಾರದು, ಕುಡುಬಾರದು ಅಂತ‌ ಮಾತಾಡಕ ಹತ್ತಿದ್ರು. ಶಂಕ್ರ‌, ಹಣುಮ ಒಬ್ಬರಿಗೊಬ್ಬರು ಮಾರಿ ನೋಡಿಕೊಂಡ್ರು. ಹೆಚ್ಚ ಮಾತಾಡದೆ ರಕ್ಕ ಕೊಟ್ಟರು.

“ಅರೇ, ನಾನು ನೊಡಿದ್ರ ಬಗಲಾಗ ಕುಡಿಸಿಕೊಂಡಿನಿ ಅಂತ್ರ ಕಾಯ್ದಕೊಂಡಿಲ್ಲ ಏನಿಲ್ಲ” ಎಂದು ಶಂಕ್ರನಿಗೆ ಒಳ ಒಳಗೆ ಹಿಂಜರಿಕೆ ಐತು. “ಬರದು ಬಂದಿನಿ ತಾಯ್ನಾಡ ನಡೆ ಏನಾತದ” ಎಂದು ತನ್ನಷ್ಟಕ್ಕೆ‌ ತಾನೆಂದುಕೊಂಡ. ನೀರು ಕುಡುದು ಸಿಗರೇಟ್ ಸೇದಿದ್ರು. ಪಟಿ ಪಟಿಮ್ಯಾಗ ಕಾಲೇರಿ ಕಿಕ್ ತುಳುದು ಗಾಡಿ ಕಿವಿ ಸಣ್ಣಾಗಿ ಹಿಂಡಿದ್ರು. ಊರು ಸನೇ ಮಾಡಿತು. ಪೂಣೆ ಮಂದಿ, ಬೆಂಗ್ಳೂರು ‌ಮಂದಿ ರಾತ್ರೋ ರಾತ್ರಿ ಊರು ಸೇರಾಕ ಹತ್ತಿದರು. ಊರು ಮಂದಿಗಿ ಕೊರೊನ ಹಚ್ಚಿದ್ರ ಹ್ಯಾಂಗಂತ ಪಂಚಾಯ್ತಿದವರು, ಊರು ಗೌಡ್ರು ಸೇರಿಕೇಸಿ ಮಾತು ಕತೆಯಾಡಿ ಮುನ್ನೆಚ್ಚರಿಕೆಯಿಂದ ಅಂತಹ ಮಂದಿ ಊರಾಗಾ ಕಾಲಿಡಲಾರದಂಗ ಊರಾಗ ಬರೋ ದಾರಿಗಿ‌ ದೊಡ್ಡ ದೊಡ್ಡ ಮುಳ್ಳದ ಎಟ್ಟ ಕಡದುಕೇಸಿ ಅಡ್ಡಗಟ್ಟಿದ್ರು. ದೇಶವರಿ ಹ್ವಾದ ಮಂದಿ ಕೊರೊನ ತಂದು ಹಳ್ಳಿಗಿ ಹಚ್ಚ್ಯಾರ ಅಂಭೋದು ಸುದ್ದಿ ಟಿವ್ಯಾಗ ತಿಳಕಂಡುಕೇಸಿ ಊರಾಗಿನ ಮಂದಿ ಇಂತಹ ಆಟ ಊಡಿದ್ರು. ಊರಿಗೆ ಬರ ಹೊತ್ತಿಗೆ ‌ಸಂಜಿ ಮುಸುಕು ಹಿಟ್ಟಿತ್ತು. ಯಾರಿಗಿ ಕಂಡ್ರು ಕಾಣದಂಗ ಯಾರು ಮನಿಗಿ ಅವ್ರುಗ ಒಕ್ಕಂಡ್ರು.

ಬೆಳಕು ಅರಿಯಿತು. ಓಣಿ ಮಂದ್ಯಾಗ ಸಣ್ಣದಾಗಿ ಕಲಹ ಎದ್ದಿತ್ತು. ಸಂಡಾಸಕ ಹ್ವಾದಲ್ಲಿ ಹೆಂಗಸ್ರು “ಊರಿಗಿ ಹಚ್ಚು ಬೇಕಂತ‌ ಮಾಡ್ಯಾರೇನು ಮರಗಮ್ಮನ ಹಾವಳಿ, ಅಕಡಿ ದೊಡ್ಡ ಪಟ್ಟಣದಾಗ ಅದು ಮುಟ್ಟ ಅಂಬ್ರ್ಯಾದಂತ ರೋಗ. ಒಬ್ಬರಿಂದ ಒಬ್ಬರಿಗಿ ಬರತಾದ ಅಂತಾರ ಇವು ನೋಡಿದ್ರ ಓಣಿ ಸೇರ್ಯಾವ, ಇವುಕುರ ಕುಂಡಿ ಬಾಯಿ ಬುಡಾ, ಊರಾಗ ಇವುಕು ಹೇಳವ್ರು ಕೇಳವ್ರು ಯಾರಿಲ್ಲದಂಗ್ ಆಗ್ಯಾದ” ಎಂದು‌ ಬೈದಾಡಕ ಹತ್ತಿದರು. “ಈ ತಾಯ್ಗಂಡ್ರಿಗಿ ಪಂಚಾಯ್ತಿಗಿ ಕರಿಸಿ ನಾಕು ಮಂದಿ ಮುಂದ ಪೆಕ್ಕಾ ಪೆಕ್ಕಾ ಒದ್ದು ದಂಡ ಹಾಕಿದ್ರ ಪಾಡಾಕಾಣತದ” ಎಂದು ಓಣ್ಯಾಗ ಅಂದು ಆಡುತಿದ್ರು. ಓಣಿಯಿಂದ ಹೊಟೇಲು, ಪಂಚಾಯತಿ, ಊರು ಊರೇ ಸುದ್ದಿ ಒಕ್ಕಂತು. ಯಾರ್ ನೋಡಿದ್ರು “ಆ ಓಣ್ಯಾಗ ಯಾರು ಹೋಗ ಬ್ಯಾಡ್ರೀ, ಅವ್ರು ಅಲ್ಲಿಂದ ಬಂದಾರಂತ, ಹುಷಾರ್ ಇರುರಿ” ಎಂದು ಕೂಸು ಕುನ್ನಿಗೆ ಹೇಳುತಿದ್ರು. ಗೌಡ್ರನ‌ ಕರೆಸಿ‌ ಪಂಚಾಯತಿ ಮಾಡ್ಸಬೇಕು, ಇವತ್ತು ಇವ್ರು ನಾಳೆ ಇನ್ಯಾರೋ ಎಂದುಕೊಳ್ಳುತಿದ್ರು. ಹೀಗೆ ಇವ್ರ ಬಗ್ಗೆನೆ‌ ವಿರೋಧ‌ ಹರಿದಾಡಿತು.

“ನೀ ಏನ್ ತಟಗು ಇದಿ ಎನು, ಶ್ಯಾಣೆತ ಎಂದು ಆಗ್ತಿ. ಯಾವಾಗ ಬುದ್ದಿ ಬರಂಗಾದಲೋ ಕರದವರಿಂದ ಹೋಗ್ತಿಯಲ್ಲಾ. ಊರು ಮಂದಿನೇ ನಮ್ಮ‌ ಹೆಣಕ ವೈಕ್ಯಾ ಕುಂತಾರ ನೋಡು” ಎಂದು ಶಂಕ್ರನ ತಾಯಿ ಬಸ್ಸವ್ವ ಮನ್ಯಾಗ ಕಸ ಮುಸುರಿ ಮಾಡಿಕಂತ ಬೈಯದೇಟಿಗೆ ಮಕ್ಕಂಡಿದ್ದ ಶಂಕ್ರ ಎಚ್ಚರವಾಗಿ ದಿಗ್ಗನ್ ಎದ್ದು ಕುಂತ. ಒಂದು ಕ್ಷಣ ಗಾಬರಿಯಾಗಿ ಪಿಚ್ಚಕಣ್ಣು ಒರೆಸಿಕೊಂಡ.

ಎದ್ದವನೇ ಹೋರಗ ಹೋಗಿಕೇಸಿ‌ ಹುಚ್ಚ್ಯಾಉಯಿದ. ಮನೆಕಡೆಗೆ ತಿರುಗಾಡುತಿದ್ದ ಮಂದಿ ಮಾರಿ ಮುಚ್ಚಿಕೊಂಡು ನಡದಾಡುತಿದ್ರು. ಊರಿನ ವಾತಾವರಣ ಆಗಲೇ ಬ್ಯಾರೆ ಕಾಣುತಿತ್ತು. “ಹಿಂತವರಿಗೆ ಪೋಲಿಸ್ರಿಗಿ ಹಿಡಿದು ಕೊಡಬೇಕು” ಅಂತಿದ್ರು. ಹಿಂದಿನ ದಿನ ಪೋಲಿಸ್ರು ಬೆತ್ತ ಹಿಡಕೊಂಡು ಅಗಸಿ ಕಟ್ಟಿಗಿ ಕುಂತವರಿಗೆ, ಬಾಯಿ ಕಟ್ಟಿಗಿ ಕುಂತವರಿಗಿ, ಇಸ್ಪೀಟು ಆಡಾಕ್ ಕುಂತವರಿಗೆ ಗುಂಪು ಕಟ್ಟಿ ಕುಂತವರಿಗೆ ಓಡಿಸ್ಯಾಡಿ ಹೊಡದಿದ್ರು. ಗುಂಪು ಕಂಡಲ್ಲಿ ಬಡಗಿ ಬೀಸತಿದ್ರು. ಓಣಿ ಓಣಿಗಿ ಮೊಟಾರ ಸೈಕಲ್ ತಿರುಗಾಡಿಸಿದ್ರು. ಅದನ್ನು‌ ನೆನಸಿಕೊಂಡು ಶಂಕ್ರ ಅಂಜಿದ. “ಒಂದು ವೇಳೆ ಊರು ಗೌಡ್ರ ಕೈಗಿ, ಪೋಲಿಸ್ರ ಕೈಗಿ ಸಿಕ್ಕ್ರೆ ಒಂದಲ್ಲಿ ಕೂಡಿ ಹಾಕ್ತಾರೆ. ಕೊರೊನ ಇಲ್ಲದಿದ್ದ್ರು ಇದೆಯೆಂದು ರಿಪೋರ್ಟ್ ತೋರಿಸಿ ರಕ್ಕ ಉಸುಲು ಮಾಡ್ತಾರೆ” ಎಂದು ಬುಗುಲು ಎನಿಸಿಕೊಂಡ. ಊರಾಗ ಬಿರುಸು ಅವರೇ ಇದ್ದದ್ದು ಮನಗಂಡು ಹಣುಮನ ಬೇಟಿ ಮಾಡಿದ. ಆತನು ಬುಗುಲು ಎನಿಸಕೊಂಡು ಎದರು ಬದರು ಕಲ್ತರು. “ಲೇ ಹಣುಮ ಇದು ಯಾಕ ಪಾಡ ಕಾಣವಲ್ದು ಲೇ‌ ದೂರ ಹೋಗಮ‌ ನಡಿ” ಎಂದುಕೇಸಿ ಇಬ್ಬರು ಸೇರಿ ಮಂದಿ ಇಲ್ಲದ‌ ಜಾಗದ ಕಡೆ ಹ್ವಾದ್ರು. ಇಬ್ಬರಲ್ಲು ಆತಂಕದ ಮನೆ ಮಾಡಿತ್ತು. ಬಸಿರ ಗಿಡ ನೋಡಿ ನಳ್ಳಿಗೆ ಕುಂತು ದಮ್ಮಾರಿಸಿಕೊಂಡ್ರು. “ಇದೇನಲೇ ಖೋಡಿ ನಿನ್ನ ಸಲಾಗ ನಾ ಬಂದ್ರ ಏಂತಾದು ಬಂತಲ್ಲ ನನಗ” ಎಂದು ಶಂಕ್ರ ತೇಕು ಉಸಿರು ಬುಡುತ್ತಾ ದಣಿವಾರಿಸಿಕೊಂಡ. “ಇದ್ ಯಾವದೋ ರೋಗದ ಸಲಾಗ ನಮ್ಮೂರಿಗಿ ನಾವು ಬಂದ್ರ ನಮ್ಮೂರರು ನಮ್ಮನ್ನೆ ಕರಕ ವಲ್ಲ್ರಲ್ಲೇ. ಗುರುತು ಪರಿಚಯ ಇಲ್ಲದವರು ಮಾಡಿದ್ರ ನಡಿತಾದ ಗಿತ್ತಿದ್ದವರೇ ಹೀಂಗ್ ಮಾಡಿದ್ರ ಹ್ಯಾಂಗ” ಎಂದು ಹಣುಮ ಮಾರಿ ಪಿಚ್ಚೆನಿಸಿಕೊಂಡ. ಸಮಾಜದ ತಿರುವು ಮರುವುಗಳನ್ನು ಅರಿಯದೆ ನೆಳ್ಳು ನೋಡಿ ನೆಲಕ್ಕ ಡುಬ್ಬ ಹಚ್ವಿ ಕಣ್ಣು ಮುಚ್ಚಿದ್ರು.

-ಆನಂದ ಎಸ್ ಗೊಬ್ಬಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x