ಹೋಳಿ ಹಬ್ಬದ ಸಂಭ್ರಮ, ಖುಷಿಗಳನ್ನು ನೀವೂ ಅನುಭವಿಸಿರುತ್ತೀರಿ. ಹೋಳಿಹಬ್ಬ ಕೂಡ ದೀಪಾವಳಿಯಂತೆಯೇ ಭಾರತೀಯರ ಮನಸ್ಸಿನಲ್ಲಿ ವರ್ಣಮಯವಾಗಿ, ಮನರಂಜನಾತ್ಮಕವಾಗಿ ಆವರಿಸಿರುತ್ತದೆ. ವರ್ಷವೆಲ್ಲಾ ಅಪ್ಪಟ ಗಂಭೀರ ವ್ಯಕ್ತಿಗಳಂತೆ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೋಗಿ ಬರುವ ಸೀರಿಯಸ್ ಮನುಷ್ಯರೂ ಹೋಳಿ ಹೋಳಿಹಬ್ಬದಂದು ಮಕ್ಕಳಾಗಿಬಿಡುತ್ತಾರೆ. ಬಣ್ಣ ಎಚ್ಹರಿ ಖುಷಿ ಪಡುತ್ತಾರೆ. ಮುಖದಲ್ಲಿ ಗಂಭೀರ ಗೆರೆಗಳು ಮಾಯವಾಗಿ ಉಲ್ಲಾಸ ಮಡುಗಟ್ಟುತ್ತದೆ.
ಹೋಳಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಒಂದೆರಡು ಅಂಶಗಳನ್ನು ಹೇಳುತ್ತೇನೆ… ಮನುಷ್ಯನ ಮನಸ್ಸು ರಂಗುಮಯವಾದದ್ದು. ಬಹುತೇಕ ಜನ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಪಡ್ಡೆ ಹುಡುಗರಂತೂ ಹೋಳಿಯಂದು ಮನೆಯಲ್ಲಿ ಕೂತರುಂಟೇ ಎಂಬಂತೆ ಬೀದಿಬೀದಿ, ಗಲ್ಲಿಗಲ್ಲಿಗಳಲ್ಲಿ ಸುತ್ತಿ ಹೋಳಿಯಾಡಿ ಮನೆಗೆ ಹಿಂದಿರುಗುವಷ್ಟರಲ್ಲಿ ಸ್ವತಃ ಮನೆಮಂದಿಗೆ ಗುರುತು ಸಿಗದಷ್ಟು ಬಣ್ಣಮಯವಾಗಿರುತ್ತಾರೆ. ಇನ್ನು ಅಕ್ಕತಂಗಿ, ಅಣ್ಣತಮ್ಮ, ಅಪ್ಪಅಮ್ಮ, ಅಜ್ಜಿತಾತ, ಸ್ನೇಹಿತರು ಎಲ್ಲರೂ ಒಟ್ಟಿಗೆ ಬಣ್ಣ ಎರಚಿಕೊಂಡು ಸಂಭ್ರಮಿಸುವ ಹಬ್ಬವಿದು. ಹೆಣ್ಣುಮಕ್ಕಳು ಗುಂಪುಗುಂಪಿನಲ್ಲಿ ಕೂಡಿಕೊಂಡು ಬಣ್ಣದ ನೀರು ಎರಚಿಕೊಂಡು ಕುಣಿದು ಕುಪ್ಪಳಿಸಿದರೆ, ಪುಟ್ಟ ಮಕ್ಕಳು ಬಣ್ಣದ ನೀರು ತುಂಬಿದ ಬಲೂನು, ವಾಟರ್ ಗನ್ ಹಿಡಿದು ಸಂತಸ ಪಡುತ್ತಾರೆ. ಇನ್ನೂ ಕೆಲವರು ಮ್ಯೂಸಿಕಲ್ ಡ್ರಮ್ ಗಳನ್ನು ಬಾರಿಸುತ್ತ, ಹಾಡುತ್ತ ಆನಂದ ಪಡುತ್ತಾರೆ. ಭಾರತೀಯರಿಗೆ ಮಾತ್ರ ಸೀಮಿತವಲ್ಲದ ಈ ಹಬ್ಬ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುವುದರ ಜೊತೆಗೆ ಯೂರೋಪ್, ಉತ್ತರ ಅಮೇರಿಕಾ ಮುಂತಾದ ಕಡೆಗಳಿಗೂ ಹಬ್ಬಿ ಅಲ್ಲಿರುವ ಭಾರತ ಮೂಲದ ಜನ ಆಚರಿಸಲು ಸ್ಫೂರ್ತಿ ತುಂಬಿದೆ. ಹಿಂದೂಗಳಿಗೆ ಮಾತ್ರ ಸೀಮಿತವಾಗದ ಈ ಹಬ್ಬ ಬೇರೆ ಬೇರೆ ಧರ್ಮದ ಜನರೂ ಆಚರಿಸುವಂತೆ ಮಾಡುವುದು ನನ್ನ ಗಮನಕ್ಕೆ ಬಂದ ಮೊದಲನೇ ಅಂಶ.
ಇಷ್ಟಕ್ಕೂ ಹೋಳಿ ಹಬ್ಬಕ್ಕೆ ಹೋಳಿ ಅಂತ ಹೆಸರು ಬರಲು ಕಾರಣ ಹೋಲಿಕಾ ಎಂಬ ರಾಕ್ಷಸಿ. ಈಕೆ ಪುರಾಣದಲ್ಲಿ ಬರುವ ಹಿರಣ್ಯಕಶಿಪುವಿನ ಸಹೋದರಿ. ನಿಮಗೆಲ್ಲ ಗೊತ್ತಿರುವಂತೆ ಹಿರಣ್ಯಕಶಿಪು ವಿಷ್ಣುವಿನ ಪರಮ ವೈರಿ. ಅವನ ಮಗ ಪ್ರಹ್ಲಾದ ವಿಷ್ಣು ಭಕ್ತ. ತನ್ನ ಕಡುವೈರಿ ವಿಷ್ಣುವನ್ನು ಸ್ತುತಿಸುವ ಪ್ರಹ್ಲಾದನ ಮೇಲೆ ಸಿಟ್ಟಿಗೆದ್ದ ಹಿರಣ್ಯಕಶಿಪು ಆತನನ್ನು ಕೊಲ್ಲಲು ಅನೇಕ ಮಾರ್ಗಗಳನ್ನು ಹುಡುಕುತ್ತಾನೆ. ಅವುಗಳ ಪೈಕಿ ಆನೆಗಳಿಂದ ತುಳಿಸಲು ಯತ್ನಿಸುವುದು, ಸರ್ಪಗಳಿಂದ ಕಚ್ಚಿಸಲು ಪ್ರಯತ್ನಿಸುವುದು, ಬೆಟ್ಟದ ಮೇಲಿನಿಂದ ಆಳವಾದ ಪ್ರಪಾತಕ್ಕೆ ನೂಕಿಸುವುದು… ಇತ್ಯಾದಿ ಪ್ರಯತ್ನಗಳನ್ನು ಮಾಡಿ ವಿಫಲನಾದಾಗ ಇದನ್ನೆಲ್ಲಾ ಗಮನಿಸುತ್ತಿದ್ದ ಹೋಲಿಕಾ ತನ್ನ ಅಣ್ಣ ಹಿರಣ್ಯಕಶಿಪುವಿನ ನೆರವಿಗೆ ಬರಲು ತೀರ್ಮಾನಿಸುತ್ತಾಳೆ. ಹೇಗಾದರೂ ಮಾಡಿ ಪ್ರಹ್ಲಾದನನ್ನು ಸಾಯಿಸಿಬಿಡಬೇಕು ಎಂದು ನಿರ್ಧರಿಸಿ ಅದಕ್ಕೊಂದು ಮಾರ್ಗ ಕಂಡುಹಿಡಿಯುತ್ತಾಳೆ. ಅದೇನೆಂದರೆ, ಒಂದು ಚಿತೆಯನ್ನು ಸಿದ್ಧಪಡಿಸುವುದು, ಅದರ ಮೇಲೆ ಪ್ರಹ್ಲಾದನನ್ನು ಕೂರಿಸುವುದು, ಪ್ರಹ್ಲಾದನೊಟ್ಟಿಗೆ ತಾನೂ ಕೂರುವುದು, ಚಿತೆಗೆ ಬೆಂಕಿ ಹಚ್ಚಿದಾಗ ಪ್ರಹ್ಲಾದ ಸುಟ್ಟುಹೋಗುವಂತೆಯೂ, ತಾನು ಸುಟ್ಟುಹೋಗದಂತೆ ಒಂದು ಬಗೆಯ ಕೃತ್ರಿಮತೆಯ ಹೊದಿಕೆಯನ್ನು ಹೊದ್ದುಕೊಳ್ಳುವಂತೆಯೂ ಯೋಜನೆ ರೂಪಿಸುತ್ತಾಳೆ. ತಾನು ಅಂಥದೊಂದು ಮೋಸದ ಹೊದಿಕೆ ಹೊದ್ದುಕೊಳ್ಳುವುದು ಪ್ರಹ್ಲಾದನಿಗೆ ಗೊತ್ತಾಗದಂತೆ ಗಮನವಹಿಸುತ್ತಾಳೆ. ಆ ಹೊದಿಕೆಯ ವಿಶೇಷತೆ ಏನೆಂದರೆ ಬೆಂಕಿ ತಾಕಿದರೂ ಆ ಹೊದಿಕೆ ಹೋಲಿಕಾಳನ್ನು ರಕ್ಷಿಸುವುದು. ಅವು ಸುಟ್ಟು ಹೋಗದಂತೆ ಕಾಪಾಡುವುದು. ಹೋಲಿಕಾ ಇಷ್ಟೆಲ್ಲಾ ಪ್ಲಾನ್ ಹಾಕಿದ ನಂತರ ಒಂದು ದಿನ ಗೊತ್ತು ಮಾಡಿ ಹಿರಣ್ಯಕಶಿಪುವೇ ಉತ್ಸಾಹದಿಂದ ಮುಂದೆ ನಿಂತು ಒಂದು ಚಿತೆ ಸಿದ್ಧಪಡಿಸುತ್ತಾನೆ. ಅದರ ಮೇಲೆ ಪ್ರಹ್ಲಾದ ಮತ್ತು ಹೋಲಿಕಾಳನ್ನು ಕೂರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಇನ್ನೇನು ಪ್ರಹ್ಲಾದನಿಗೆ ಬೆಂಕಿ ತಾಕಬೇಕು ಅನ್ನುವಷ್ಟರಲ್ಲಿ ಆತನಿಗಿದ್ದ ದೈವಶಕ್ತಿಯಿಂದ ಹೋಲಿಕಾ ಹೊದ್ದುಕೊಂಡಿದ್ದಂತಹ ಹೊದಿಗೆ ಅವಳಿನ ದೇಹದಿಂದ ಒಮ್ಮೆಲೇ ಹಾರಿ ಪ್ರಹ್ಲಾದನ ದೇಹವನ್ನು ಸುತ್ತುವರಿದು ಪ್ರಹ್ಲಾದನನ್ನು ಬೆಂಕಿಯಿಂದ ಪಾರು ಮಾಡಿದ್ದಲ್ಲದೇ ಸ್ವತಃ ಹೋಲಿಕಾ ಬೆಂಕಿಯಲ್ಲಿ ಭಸ್ಮವಾಗುವಂತೆ ಮಾಡುತ್ತದೆ. ತಾನೇ ರೂಪಿಸಿದ ಸಂಚಿಗೆ ತಾನೇ ಬಲಿಯಾಗಿ ಹೋಲಿಕಾ ಬೂದಿಯಾಗುತ್ತಾಳೆ. ಹರಿಭಕ್ತ ಪ್ರಹ್ಲಾದ ಯಾವ ತೊಂದರೆಗೂ ಸಿಲುಕದೆ ಪಾರಾಗುತ್ತಾನೆ… ಇದೊಂದು ಪೌರಾಣಿಕ ಕಥೆ. ಹೋಲಿಕಾ ಬೆಂಕಿಯಲ್ಲಿ ಬೂದಿಯಾದ ಆ ದಿನದ ನೆನಪಿಗಾಗಿ ಫಾಲ್ಗುಣ ಮಾಸದ ಪೌರ್ಣಮಿಯಂದು ಈ ಹಬ್ಬವನ್ನು ಆಚರಿಸುವುದು ಹಾಗೂ ಆಕೆಯ ಹೆಸರಿನಿಂದಲೇ ಈ ಹಬ್ಬಕ್ಕೆ 'ಹೋಳಿ' ಅಂತ ಹೆರಸು ಬಂದಿದ್ದು. ಈ ಕಾರಣಕ್ಕಾಗಿಯೇ ಹೋಲಿಕಾ ದಹನ ನಡೆಸುವುದು ಮೊದಲಿನಿಂದಲೂ ರೂಢಿಯಾಗಿದೆ. ಈ ನಂಬಿಕೆಯಡಿ ಭಾರತ ಬಿಟ್ಟರೆ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ, ಹೈದರಾಬಾದ್, ಮುಲ್ತಾನ್, ಲಾಹೋರ್ ಮತ್ತು ಪ್ರಹ್ಲಾದಪುರಿ ದೇವಸ್ಥಾನದಲ್ಲಿ ಅಲ್ಲಿಯ ಹಿಂದೂಗಳು ಹೋಳಿ ಆಚರಿಸುವರು- ಇದು ನಿಮಗೆ ಹೇಳಬೇಕಾದ ಎರಡನೇ ಅಂಶ.
ಇದೇ ರೀತಿಯಲ್ಲಿ ಈ ಹೋಳಿಗೆ ಸಂಬಂಧಿಸಿದ ಇನ್ನೊಂದು ನಂಬಿಕೆಯುಂಟು. ಅದು ಉತ್ತರ ಪ್ರದೇಶದ ಮಥುರ, ಆಗ್ರಾ, ಭಾರತ್ ಪುರ, ಆಲಿಘರ್, ಫಿರೋಜಾಬಾದ್ ಮತ್ತು ಬೃಂದಾವನ ಮುಂತಾದ ಊರುಗಳಿಂದ ಕೂಡಿದ ಬ್ರಜ್ ಎಂಬ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶದಲ್ಲಿನ ಜನ ಹೋಳಿಹಬ್ಬಕ್ಕೆ ಕೃಷ್ಣ-ರಾಧೆಯರ ಪ್ರೇಮವನ್ನು ಲಿಂಕ್ ಮಾಡುವ ವಿಚಾರ. ಕೃಷ್ಣ ತನ್ನ ಬಾಲ್ಯವನ್ನು ಈ ಪ್ರದೇಶದಲ್ಲೇ ಕಳೆದಿದ್ದು ಅಂತ ಬಲವಾಗಿ ನಂಬಿರುವ ಬ್ರಜ್ ಪ್ರದೇಶದ ಜನ ಹೋಳಿಹಬ್ಬವನ್ನು ಸತತವಾಗಿ ಹದಿನಾರು ದಿನಗಳ ಕಾಲ ಆಚರಿಸುತ್ತಾರೆ. ಆದರೆ ರಂಗಪಂಚಮಿಯವರೆಗೆ. ಇಷ್ಟಕ್ಕೂ ಇಲ್ಲಿಯ ಜನ ಕೃಷ್ಣನ ಹೆಸರಿನಲ್ಲಿ ಹೋಳಿ ಆಚರಿಸಲು ಮುಖ್ಯವಾದ ಕಾರಣವಿದೆ. ಅದೇನೆಂದರೆ ಶ್ರೀಕೃಷ್ಣ ಮಗುವಾಗಿದ್ದಾಗ ಪೂತನಾ ಎಂಬಾಕೆ ತನ್ನ ಮೊಲೆಗಳಿಂದ ಕೃಷ್ಣನಿಗೆ ವಿಷವನ್ನು ಕುಡಿಸುತ್ತಾಳೆ. ಆ ಕಾರಣದಿಂದಲೇ ಕೃಷ್ಣನ ಮೈಬಣ್ಣ ಕಪ್ಪು ಮಿಶ್ರಿತ ನೀಲಿಯಾಗಿರುವುದು ಎಂಬ ನಂಬಿಕೆಯುಂಟು. ಕೃಷ್ಣನ ಈ ಮೈಬಣ್ಣವೇ ಮುಂದೊಮ್ಮೆ ಈತ ರಾಧೆ ಮತ್ತು ಗೋಪಿಕೆಯರ ಆಕರ್ಷಣೆ, ಪ್ರೇಮಕ್ಕೆ ಕಾರಣವಾಗುವುದು, ಅವರೆಲ್ಲ ಕೃಷ್ಣನ ಹಿಂದೆ ಬಿದ್ದು ಲವ್ ಮಾಡಲು ಪ್ರೇರಣೆಯಾಗುವುದು, ಮುಂದೊಮ್ಮೆ ತನ್ನ ತಾಯಿಯ ಕೋರಿಕೆಯ ಮೇರೆಗೆ ಕೃಷ್ಣ ರಾಧೆಯ ಮುಖಕ್ಕೆ ಬಣ್ಣ ಹಚ್ಚುವುದು, ರಾಧಾಕೃಷ್ಣ ಜೋಡಿ ವಿಶ್ವದ ಪ್ರೇಮಿಗಳಿಗೆ ಆದರ್ಶವಾಗುವುದು, ಆ ನೆಪದಲ್ಲಿ ಹೋಳಿಗೂ ಮಹತ್ವ ಬಂದಿದ್ದು- ಈ ನಂಬಿಕೆಯಲ್ಲಿ ಭಾರತದಾಚೆಗೂ ಹೋಳಿಹಬ್ಬ ಆಚರಿಸಲಾಗುತ್ತದೆ. ಆ ಪೈಕಿ ಅಮೇರಿಕಾ ಮತ್ತು ಕೆರೆಬಿಯನ್ ನಲ್ಲಿನ ಜನ ಅದರಲ್ಲೂ ಭಾರತ ಮೂಲದ ಜನರಿರುವ ಟ್ರಿನಿಡಾಡ್ ಮತ್ತು ಟೋಬ್ಯಾಕೋದಲ್ಲಿ ಈ ಆಚರಣೆ ಹೆಚ್ಚು ಜನಪ್ರಿಯ.
ಹಾಗೆಯೇ ಹುಣ್ಣಿಮೆ ರಾತ್ರಿಯಂದು ಮನ್ಮಥ ಬಿಟ್ಟ ಬಾಣ ತನ್ನ ಘೋರತಪಸ್ಸಿಗೆ ಭಂಗ ಉಂಟು ಮಾಡಿತೆಂಬ ಕಾರಣಕ್ಕೆ ತಪೋನಿರತ ಈಶ್ವರನು ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಸುಟ್ಟ ದಿನವೇ ಕಾಮನ ಹುಣ್ಣಿಮೆ ಅಥವಾ ಹೋಳಿಹಬ್ಬ ಅನ್ನುವ ನಂಬಿಕೆಯೂ ಅನೇಕರಲ್ಲಿ ಉಂಟು.
ಇನ್ನು ಹೋಳಿಹಬ್ಬದ ವೇಳೆಯಲ್ಲಿನ ನನ್ನ ಶಾಲಾದಿನಗಳ ಅನುಭವವನ್ನು ಹೇಳಲು ಬಯಸುತ್ತೇನೆ… ಅಂದು ಶಾಲೆಗೆ ರಜೆ ಇರುತ್ತಿದ್ದರಿಂದ ನಾನು ಮನೆ ಬಿಟ್ಟು ಕದಲುತ್ತಿರಲಿಲ್ಲ. ಹೊರಗೆ ಹೋದರೆ ಕಂಡಕಂಡವರೆಲ್ಲ ಮೈಮೇಲೆ ಬಣ್ಣ ಎರಚುತ್ತಾರೆ ಎಲ್ಲೋ ಹೋಗಬೇಡ ಮನೆಯಲ್ಲೇ ಇರು ಅಂತ ನನ್ನ ತಾಯಿ ಹೇಳುತ್ತಿದ್ದರಿಂದ ನಾನು ಹೊರಗೆ ಹೋಗುತ್ತಿರಲಿಲ್ಲ. ಈ ಕಾರಣದಿಂದಲೇ ಹೋಳಿಹಬ್ಬ ಬಂತೆಂದರೆ ಯಾವುದೋ ಮಹಾ ಗಲಾಟೆಯ ಅಥವಾ ಕರ್ಫ್ಯೂ ವಾತಾವರಣ ಉಂಟಾಗುವ ಭ್ರಮೆ ನನ್ನಲ್ಲಿ ಮೂಡುತ್ತಿತ್ತು. ನಾನು ಆ ದಿನಗಳಲ್ಲಿ ತರಗತಿ ಹಿರೇಮಣಿಯಾಗಿದ್ದ ನಾನು ತರಗತಿಯಲ್ಲಿ ಮೇಷ್ಟ್ರು ಇಲ್ಲದ ಹೊತ್ತಿನಲ್ಲಿ ಯಾರೂ ಗಲಾಟೆ ಮಾಡದ ಹಾಗೆ, ತುಂಟಾಟ ಮಾಡದ ಹಾಗೆ ನೋಡಿಕೊಳ್ಳಬೇಕಿತ್ತು. ಅಂತಹ ಸಂದರ್ಭಗಳಲ್ಲಿ ಗಲಾಟೆ ಮಾಡುವ, ಹರಟೆ ಹೊಡೆಯುವ, ಸುಮ್ಮಸುಮ್ಮನೆ ಕಿತ್ತಾಡುವ, ಏರುದನಿಯಲ್ಲಿ ಮಾತಾಡುವ ಒಂದಿಷ್ಟು ಹುಡುಗರ ಹೆಸರುಗಳನ್ನೂ ಬ್ಲ್ಯಾಕ್ ಬೋರ್ಡ್ ಮೇಲೆ ಬರೆಯುತ್ತಿದ್ದೆ. ಮೇಷ್ಟ್ರು ಬಂದ ನಂತರ ಬೋರ್ಡ್ ಮೇಲೆ ಯಾರ್ಯಾರ ಹೆಸರುಗಳು ಇರುತ್ತಿದ್ದವೋ ಅವರನ್ನೆಲ್ಲ ಕರೆದು ಬರೆಗಳು ಬರುವಂತೆ ಸರಿಯಾಗಿ ಬಾರಿಸುತ್ತಿದ್ದರು. ಅಂತಹ ಹೆಸರುವಾಸಿ ಹುಡುಗರಿಗೆಲ್ಲ ಸಹಜವಾಗಿ ನನ್ನ ಮೇಲೆ ಒಂಥರಾ ದ್ವೇಷವಿತ್ತು. ಹೋಳಿಹಬ್ಬ ಬಂತೆಂದರೆ ಆ ಹುಡುಗರೆಲ್ಲ ನನಗೆ ನೆನಪಾಗಿಬಿಡುತ್ತಿದ್ದರು. ಏಕೆಂದರೆ ಹಬ್ಬದಂದು ನಾನು ಹೊರಗೆ ಹೋದರೆ ಅವರೆಲ್ಲ ಗುಂಪು ಕಟ್ಟಿಕೊಂಡು ಬಂದು ನನಗೆ ಹಬ್ಬ ಮಾಡಿಬಿಟ್ಟರೆ? ಅಂದರೆ ಎಲ್ಲರೂ ಸೇರಿ ನನಗೆ ಬಣ್ಣ ಬಳಿದುಬಿಟ್ಟರೆ? ಅವ್ವ ನನ್ನ ಬಣ್ಣದ ಬಟ್ಟೆಗಳನ್ನು ಹೊಗೆಯುವಾಗ ಎಷ್ಟು ಬಯ್ಯಬಹುದು? ಹೋಳಿಹಬ್ಬದಂದು ನಾನು ಮನೆಯಲ್ಲೇ ಇರುತಿದ್ದಕ್ಕೆ ಇದೂ ಒಂದು ಕಾರಣವಾಗಿತ್ತು!
ಇನ್ನು ಕೊನೆಯದಾಗಿ ಹೇಳುವುದಾದರೆ ಎಲ್ಲ ಹಬ್ಬಗಳ ಹಿಂದೆಯೂ ಒಂದೊಂದು ಕಥೆ, ಧಾರ್ಮಿಕ ಹಿನ್ನೆಲೆ ಇರುತ್ತದೆ. ಎಲ್ಲ ಧರ್ಮದ ಹಬ್ಬಗಳೂ ಇದರಿಂದ ಹೊರತಲ್ಲ. ಹಬ್ಬದ ಹಿನ್ನೆಲೆ ಏನೇ ಇದ್ದರೂ ಮನುಷ್ಯ ಅದನ್ನು ಮನರಂಜನೆಗೆ ಒಳಪಡಿಸಿಕೊಳ್ಳಲು ಯತ್ನಿಸುವ ಪ್ರಯತ್ನಗಳು ಆಗುತ್ತಿವೆ. ಹಿಂದೂಗಳಿಗೆ ಯುಗಾದಿ ಹೇಗೆ ವರ್ಷಾರಂಭದ ಹಬ್ಬವೋ, ಅಲ್ಲಿ ಒಬ್ಬಟ್ಟೂ ಅಷ್ಟೇ ವಿಶೇಷವಾದದ್ದು. ವರ್ಷತಡುಕಿನ ಮಾಂಸಾಹಾರವೂ ಅಷ್ಟೇ ಸ್ಪೆಶಲ್. ಕ್ರೈಸ್ತರಿಗೆ ಕ್ರಿಸ್ ಮಸ್ ಹೇಗೆ ವಿಶೇಷ ಹಬ್ಬವೋ, ಅಲ್ಲಿಯ ಶಾಂಪೇನ್, ಕೋನ್ಯಾಕ್, ಸ್ಕಾಚ್, ವ್ಹಿಸ್ಕಿ, ಬಿಯರ್, ವೆರೈಟಿ ವೆರೈಟಿಯ ವೈನ್, ಬಗೆಬಗೆಯ ಕೇಕ್ ಗಳು, ಛೀಸ್ ಗಳು, ಚಾಕೊಲೆಟ್ ಗಳು, ಮಾಂಸದ ಅಡುಗೆಗಳು ಕೂಡ ಅಷ್ಟೇ ವಿಶೇಷವದುವು. ಬಕ್ರೀದ್, ರಂಜಾನ್ ಗಳಿಗಿರುವ ಧಾರ್ಮಿಕ ಹಿನ್ನೆಲೆ ಎಷ್ಟು ಮುಖ್ಯವೋ ಅಲ್ಲಿಯ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು, ಉಡುಗೆ ತೊಡುಗೆಗಳೂ ಅಷ್ಟೇ ಮುಖ್ಯ. ಹಬ್ಬ ಎಂಬುದು ಸಂಭ್ರಮಕ್ಕೆ ಒಂದು ನೆಪವಷ್ಟೇ. ಎಲ್ಲರೂ ಒಟ್ಟಿಗೆ ಸೇರಿ ಉಣ್ಣಲು, ತಿನ್ನಲು, ಕುಣಿಯಲು, ಕುಡಿಯಲು, ನಕ್ಕು ನಲಿಯಲು, ಸಂತೋಷ ಪಡಲು ಒಂದು ಸಕಾರಣವಷ್ಟೇ. ಇಷ್ಟಕ್ಕೂ ದಿನಾ ಪಾರ್ಟಿ ಮಾಡಿದರೆ, ದಿನಾ ವಿಶೇಷ ಅಡುಗೆ ಮಾಡಿದರೆ, ದಿನಾ ಹೊಸಬಟ್ಟೆ ಹಾಕಿಕೊಂಡರೆ ಮಜಾ ಇರುತ್ತಾ? ಇಲ್ಲ. ಅದಕ್ಕೇ ಹಬ್ಬಗಳು ಬೇಕು. ಮನುಷ್ಯರಾಗಿ ಹುಟ್ಟಿದ ನಾವ್ಯಾರೂ ಪರಿಶುದ್ಧರಾಗಲು ಸಾಧ್ಯವಾಗದೆ ಇರುವುದರಿಂದ, ನಮ್ಮ ದೇಹ ಮನಸುಗಳು ನಮ್ಮ ಹಿಡಿತಕ್ಕೆ ಸಿಕ್ಕುವುದು ಅಸಾಧ್ಯವಾದ ಕಾರಣ ಈ ನೆಪದಲ್ಲಾದರೂ ಒಂದಿಷ್ಟು ಖುಷಿ ಪಡುವುದಷ್ಟೇ ಮನುಷ್ಯನಿಗಿರುವ ಒಂದು ಮಾರ್ಗ. ಆದ್ದರಿಂದಲೇ ಎಲ್ಲ ಧರ್ಮಗಳು, ಎಲ್ಲಾ ಆಚರಣೆಗಳು, ಎಲ್ಲಾ ಹಬ್ಬಗಳು ಭಕ್ತಿ, ಮುಕ್ತಿ, ದರ್ಶನ ಇತ್ಯಾದಿ ಪ್ರವಚನದ ಸರಕುಗಳಾಗದೆ ಅಪ್ಪಟ ಲೌಕಿಕವೆನಿಸುವುದು. ದೇವರೆಡೆಗೆ ಮುಖ ಮಾಡಿ ಶರೀರವನ್ನು ಇಹದ ಸುಖಕ್ಕೆ ಮೀಸಲಿಡುವುದು. ಹಾಗೆಯೇ ಹಬ್ಬ ಕೇವಲ ಉಣ್ಣುವ, ತಿನ್ನುವ, ಕುಡಿಯುವ ಮೋಜಿನ ಸಂದರ್ಭವಾಗದೆ ಮನುಷ್ಯ ಮನುಷ್ಯನೊಂದಿಗೆ ಬೆರೆಯುವ, ಮನಸ್ಸು ಮನಸ್ಸು ಬೆಸೆಯುವ ಸಂದರ್ಭ. ನಾವೆಷ್ಟು ಖುಷಿ ಪಟ್ಟೆವು? ಅದೆಷ್ಟು ಜನರನ್ನು ಖುಷಿಪಡಿಸಿದೆವು? ಅಂತ ಪ್ರಶ್ನಿಸಿಕೊಳ್ಳುವ ಸಂದರ್ಭ.
ಇವತ್ತಿನ ಕಾಲದಲ್ಲೂ ಅದೆಷ್ಟೋ ವಿದ್ಯಾವಂತರೂ ಕೂಡ ಧರ್ಮಗಳಾಚೆ ಚಿಂತಿಸುವ, ಆಚರಣೆಗಳಾಚೆ ಧ್ಯಾನಿಸುವಲ್ಲಿ ಮನಸ್ಸು ಮಾಡಲು ಸಾಧ್ಯವಾಗದಿರುವುದು ಎಷ್ಟು ಸತ್ಯವೋ ಅದೇ ರೀತಿ ಅನ್ಯ ಧರ್ಮೀಯರ ನಂಬಿಕೆ, ಆಚರಣೆಗಳನ್ನು ಗೌರವಿಸುವ ಉದಾರತೆಗೂ ಕೊರತೆಯುಂಟು ಅನ್ನುವ ಮಾತೂ ಅಷ್ಟೇ ವಾಸ್ತವ. ಕ್ರಿಸ್ ಮಸ್ ದಿನದಂದು ಎಷ್ಟು ಜನ ಒಬ್ಬ ಕ್ರಿಶ್ಚಿಯನ್ ಸ್ನೇಹಿತನ ಮನೆಗೆ ಹೋಗಿ ಕುಡಿದು, ಊಟ ಮಾಡಿ ಬರುತ್ತೀರಿ? ಬಕ್ರೀದ್ ದಿನ ಯಾರೆಲ್ಲಾ ಮುಸ್ಲಿಂ ಗೆಳೆಯನ ಮನೆಗೆ ಹೋಗಿ ಬಿರಿಯಾನಿ ತಿಂದು ಬರುತ್ತೀರಿ? ನಿಮ್ಮ ಮನೆಯ ಹಬ್ಬದಂದು ಅದೆಷ್ಟು ಮಂದಿ ಅನ್ಯಧರ್ಮದ ಸ್ನೇಹಿತರು ಬಂದು ಊಟ ಮಾಡಿ ಹೋಗುತ್ತಾರೆ… ಇವೆಲ್ಲ ಇವತ್ತಿಗೂ ಪ್ರಶ್ನೆಗಳೇ.
ಹಬ್ಬದ ನೆಪದಲ್ಲಿ ಅಂಗಡಿಮುಂಗಟ್ಟು ಇಟ್ಟವರಿಗೆ ಒಂದಿಷ್ಟು ವ್ಯಾಪಾರವಾಗುತ್ತದೆ. ಒಂದಿಷ್ಟು ಬಟ್ಟೆಗಳು, ಗಿಫ್ಟ್ ಐಟಂಗಳು ಬಿಕರಿಯಾಗುತ್ತವೆ. ಮಾರ್ಕೆಟ್ ಗಳು ಜನರಿಂದ ತುಂಬಿ ಗಿಜಿಗಿಜಿ ಅನ್ನುತ್ತವೆ. ಹೂವು, ಹಣ್ಣು, ತರಕಾರಿ ಇತ್ಯಾದಿಗಳು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ವ್ಯಾಪಾರವಾಗುತ್ತವೆ. ಹಾಗೆಯೇ ಜ್ಯೂಯಲರಿ ಅಂಗಡಿಗಳಿಗೂ ಬಂಗಾರದ ಕಳೆ ಬರುತ್ತದೆ. ಮನುಷ್ಯರ ಮುಖದ ಮೇಲೂ ಒಂದಿಷ್ಟು ನಗೆಯ ಬೆಳಕು ಮೂಡುತ್ತದೆ.
ಹಬ್ಬ ಮುಗಿದ ಮಾರನೆಯ ದಿನವೇ ಅದೇ ಗಬ್ಬು ಗಬ್ಬು ಮಾರುಕಟ್ಟೆ, ಬೀದಿಯ ಕಸ, ಚರಂಡಿಗಳ ನಾತ… ಮತ್ತದೇ ಬೇಸರ, ಅದೇ ಬಣ್ಣ ತೊಳೆದ ಯಾಂತ್ರಿಕ ಬದುಕು.
-ಹೃದಯಶಿವ
*****
chandavide baraha
Good analysation Hrudayashivaravare.