ನಸಿಕಲೆ ೫.೩೦ ಗಂಟೆ ಹೊತ್ತದು, ಬಾಗಲಾ ಬಾರಿಸಿದ ಸಪ್ಪಳಕ್ಕ ಎಚ್ಚರಾತು, ಶ್ರೀ ಬಂದ್ಲಂತ ಕಾಣಸ್ತದ ಅಂತ ಹೋಗಿ ಬಾಗಲಾ ತಗದೆ. ನೀರಿಕ್ಷಿಸಿದ ಪ್ರಕಾರ ಆಕಿನ ನಿಂತಿದ್ಲು.ಯಾಕೊ ಭಾಳ ಖಿನ್ನ ಆಗಿತ್ತು ಮುಖಾ.ಪ್ರಯಾಣದ ಆಯಾಸ ಇರಬಹುದು ಅಂತ ಸುಮ್ನಾದೆ. ಅಕಿ ಹೋಗಿ ಮುಖಾ ತೊಳ್ಕೊಂಡ ಬರೊದ್ರಾಗ,ಬಿಸಿ ಬಿಸಿ ಚಹಾ ಮಾಡ್ಕೊಂಡ ಬಂದು ಆಕಿಗೊಂದ ಕಪ್ಪ್ ಕೊಟ್ಟು ನಾನು ಆಕಿ ಮುಂದನ ಕುತೆ.ಆದ್ರು ಯಾಕೊ ಆಕಿ ಎನೊ ಚಿಂತಿ ಮಾಡಲಿಕತ್ತಾಳ ಅನಿಸ್ತು. ಯಾಕಂದ್ರ ನನ್ನ ರೂಮ್ ಮೇಟ್, ಸಹೊದ್ಯೋಗಿ,ನನ್ನ ಜೀವನದ ಎಲ್ಲಾ ಸುಖ-ದುಖಃದ ಕ್ಷಣದಾಗ ನನ್ನ ಜೋಡಿ ಇದ್ದ ನನ್ನ ಏಕೈಕ ಗೇಳತಿ ಶ್ರೀ,ಯಾವಾಗಲು ಖುಷಿಯಿಂದ ಇರತಿದ್ಲು. ಹಿಂಗ ಆಕಿ ಸಣ್ಣ ಮಾರಿ ಮಾಡಿದ್ದು ನಾ ಎಂದು ನೋಡಿದ್ದಿಲ್ಲಾ.ಎನೋ ವಿಚಾರ ಮಾಡ್ಕೊತ ಕುತಾಕಿನ್ನ ಮಾತಿಗೇಳಿಬೇಕಂತ " ಊರಾಗ ಎಲ್ಲಾರು ಆರಾಮ ಇದ್ದಾರೆನು? "ಅಂತ ಕೇಳಿದೆ,ಆಕಿ ಅದ ಉದಾಸಿನ ಭಾವದಿಂದ ಹೂಂ ಅಂದ್ಲು. ಮತ್ತ ಯಾಕ ಸಪ್ಪಗಿದ್ದಿ ? ಎನರೆ ಸಮಸ್ಯೆ ಬಂದದೇನು? ಯಾಕ್ ಎನ ಚಿಂತಿ ಮಾಡ್ಲಿಕತ್ತಿ ಅಂತಕೇಳಿದ್ದಕ್ಕ," ಸುಮಿ ನಂಗ ಸ್ವಲ್ಪ ಟೈಮ್ ಕೋಡು ನಾ ಎಲ್ಲಾ ಹೇಳ್ತೆನಿ. ನಿನಗ ಅಲ್ಲದ ಇನ್ಯಾರಿಗೆ ಹೇಳಲಿ" ಅಂದು ಸ್ನಾನಕ್ಕಂತ ಹಿತ್ತಲಕ್ಕ ಹೋದ್ಲು. ಆಕಿ ಮನಸ್ಸು ಒಂದ ಹದಕ್ಕ ಬರೊತನಕಾ ಆಕಿನ್ನ ಕೆದಕೊದ ಬ್ಯಾಡ ಅಂತ,ನಾಶ್ಟಾದ ತಯಾರಿ ಮಾಡ್ಲಿಕ್ಕೆ ಅಡಗಿ ಮನಿಗೆ ಹೋದೆ.
ನನ್ನ ಮತ್ತ ಶ್ರೀಗೌರಿಯ ಗೆಳೆತನಾ ಆಗಿದ್ದ ಆ ದಿನಗಳ ನೆನಪಾದವು.ನಾವಿಬ್ಬರು ಒಂದ ಊರಿನವರು, ಒಂದೇ ಆಫೀಸನ್ಯಾಗ ಕೆಲಸಾ ಮಾಡತೇವಿ.ಬೆಂಗಳೂರಿಗೆ ಬಂದ ಹೊಸದಾಗೆ ನಾನು ಲೇಡಿಸ್ ಹಾಸ್ಟೆಲನ್ಯಾಗ ಇದ್ದೆ ಅಲ್ಲೆನ ನಂಗ ಶ್ರೀಯ ಪರಿಚಯ ಆಗಗಿದ್ದು.ಯಾವಾಗಲು ನಕ್ಕೊತ ಹಸನ್ಮುಖಿ ಆಗಿರೊ ಶ್ರೀಗೌರಿಗು ನನಗೂ ಸ್ನೇಹಾ ಬೇಳಿಲಿಕ್ಕೆ ಭಾಳ ಹೊತ್ತಎನ ಬೇಕಾಗಲಿಲ್ಲ. ಆಮ್ಯಾಲೆ ನಾವಿಬ್ಬರು ಹಾಸ್ಟೆಲ್ ಬಿಟ್ಟು ಬ್ಯಾರೆ ಮನಿ ಮಾಡಿ ಜೋಡಿ ಇರಲಿಕ್ಕ ಹತ್ತಿದ್ವಿ.ಶ್ರೀಗೌರಿಗೆ ಮದವಿ ಆಗಿ ೨ ಮಕ್ಕಳಿದ್ವು.ಆಕಿ ಮನಿಯವರದು ಅಲ್ಲೆ ಹುಬ್ಬಳ್ಳ್ಯಾಗ ಅರವಿ ಅಂಗಡಿ ಇತ್ತು. ಅಲ್ಲೆ ಮಕ್ಕಳನ ನೋಡ್ಕೊಳ್ಳಿಕ್ಕೆ ಶ್ರೀ ಯ ಅತ್ತಿಯವರು ಇದ್ರು ಹಿಂಗಾಗಿ ಆಕಿ ನಿಶ್ಚಿಂತಿಯಿಂದ ತನ್ನ ಕೆಲಸಾಮಾಡ್ಕೊಂಡ ಇದ್ಲು.೧೫ ದಿನಕ್ಕೊಮ್ಮೆ ಊರಿಗೆ ಹೋಗಿಬರತಿದ್ಲು. ಆದ್ರ ಈ ಸಲಾ ಊರಿಗೆಹೋಗಿ ಬಂದು ಯಾಕೊ ಎನೊ ಚಿಂತಿ ಮಾಡಲಿಕತ್ತಾಳ ಅನಿಸ್ತು. ಎನೇನೊ ವಿಚಾರ ಮಾಡ್ಕೋತ ಬಿಸಿ ಬಿಸಿ ಉಪ್ಪಿಟ್ಟಿನ ತಯಾರಿ ನಡೆಸಿದಾಗ,ಶ್ರೀ ಬಂದ್ಲು,ಆಕಿಗೂ ಉಪ್ಪಿಟ್ಟ ಹಾಕಿಕೊಟ್ಟು ನಾನು ತಗೊಂಡೆ,ಆಗಲೇ ೮.೩೦ ಆಗೆಬಿಟ್ಟಿತ್ತು,ನಾ ಆಫೀಸಿಗೆ ಹೋಗೊ ತಯಾರಿ ನಡಿಸಿದ್ದೆ ಆವಾಗ ಶ್ರೀ ಬಂದು "ಸುಮಿ ನಾ ಇವತ್ತ ಬರಂಗಿಲ್ಲಾ,ಯಾಕೊ ಬ್ಯಾಸರಾಗೆದ.ನೀ ಹೋಗು ನನ್ನ ಸಲವಾಗಿ ಕಾಯಬ್ಯಾಡಾ ಅಂತಹೇಳಿ ಹೋದ್ಲು. ನಾನು ಆಕಿ ತನ್ನಷ್ಟಕ್ಕ ತಾನ ಸಂಭಾಳಿಸ್ಕೊಳ್ಳಿ ಆಮ್ಯಾಲೆ ಆಕಿನ್ನ ಮಾತಾಡಿಸಿದ್ರಾತು ಅಂತ " ಆಕಿ ಅಷ್ಟಕ್ಕ ಆಕಿನ್ನ ಬಿಟ್ಟು ಆಫೀಸಿಗೆ ಹೋದೆ.
ಸಂಜಿಕೆ ನಾ ಬರೊದ್ರಾಗ ಶ್ರೀ ಬಿಸಿ ಬಿಸಿ ಚಹಾ ಮಾಡಿಟ್ಟು ಕಾಯಲಿಕತ್ತಿದ್ಲು. ಸ್ವಲ್ಪ ನಿರಾಳ ಆಧಂಗ ಅನಿಸ್ತಿತ್ತು ಆಕಿ ಮಾರಿ ನೋಡಿದ್ರ. ಇಬ್ಬರು ಕೂಡಿ ಚಹಾ ಕುಡಕೊತ ಕೂತಾಗ, "ಸುಮಿ ಈ ಸಲಾ ಊರಿಗೆ ಹೋದಾಗ ನನ್ನ ಸ್ಕೂಲ್ ಗೆಳತ್ಯಾರು ಭೆಟ್ಟಿ ಆಗಿದ್ರು. ಊರ ತೇರಿಗೆಂತ ಬಂದಿದ್ರು. ಎಲ್ಲಾರ ಜೀವನದಾಗು ಒಂದೊಂದ ರೀತಿ ಬದಲಾವಣೆ ಬಂದದ. ಛಂದನೆಯ ಅರಳಿದ ಹೂವುಗಳಂಘ ಇದ್ದ ಜೀವನದ ಮ್ಯಾಲೆ ಒಂದು ಪದರು ಧೂಳು ಮುಸುಕಿದಂಗ ಅನಿಸ್ತದ. ಶಾಲಿಗೆ ಹೋಗೊಮುಂದಿನ ಆ ದಿನಗಳು ನಾಳೆಯ ಚಿಂತಿ ಇರಲಾರದಂಥ ಎಂಥಾ ಹುರುಪಿನ ದಿನಗೊಳು. ಶಾಲಿ ಬಿಟ್ಟಿಂದನು ಒಬ್ಬರಿಗೊಬ್ಬರು ಅಗಲಿ ಬರಲಾರದ ಮಾತು, ಹರಟಿ, ಆಟಾ, ಸಿಟ್ಟು ಎಲ್ಲಾ ಎಷ್ಟ ಛಂದ ಇತ್ತು. ಆದ್ರ ಯಾಕ ಹಿಂಗ ಜೀವನ ಬದಲಾಗ್ತದ.
ಈ ಸಲಾ ಭಾಳ ವರ್ಷದ ಮ್ಯಾಲೆ ಊರ ತೇರಿಗೆಂತ ಹೋದಾಗ, ಹಳೆಯ ಗೆಳತಿ ಸುಧಾ ಭೆಟ್ಟಿ ಆಗಿದ್ಲು. ಮೊದಲಿನ ಹುಡುಗಾಟಿಕೆಯ ಕಳೆ ಹೋಗಿ ಪ್ರೌಢತೆಯ ಮೆರಗು ಬಂದಿತ್ತು. ಎರೆಡು ಮಕ್ಕಳ ತಾಯಿ ಅಗಿದ್ಲು. ಹಿಂಗ ಆ ಸುದ್ದಿ, ಈ ಸುದ್ದಿ ಮಾತಾಡ್ಕೊತ ಕೂತಾಗ ಅನಿಸ್ತು, ಹೆಂಗ ಒಂದ ಹೆಣ್ಣಿನ ಜೀವನದೊಳಗ ಬದಲಾವಣೆಗೊಳ ಬರ್ತಾವಂತ. ಮೊದಲೆಲ್ಲಾ ಮಾತಾಡಬೇಕಂದ್ರ ನಮ್ಮ ವಿಷಯಗಳಿಗೆ ಸಿಮಾರೇಖೆನ ಇರ್ತಿದ್ದಿಲ್ಲ. ಆದ್ರ ಈಗ ಗಂಡಾ, ಮನಿ, ಮಕ್ಕಳು ಇಷ್ಟ ಪ್ರಪಂಚ ಬಿಟ್ರ ಮಾತಿಗೆ ಯಾವ ವಸ್ತುನ ಇಲ್ಲ ಅನಿಸ್ತದ. ಹಿಂಗ ಸುಧಾನ ಜೊತಿ ಮಾತಾಡ್ಕೋತ, ಕರುಣಾ, ಮಂಜು, ಪಿಂಕಿ, ಜ್ಯೋತಿ, ಇವರದೆಲ್ಲಾ ನೆನಪಾತು. ಇವರೆಲ್ಲಾರ ಬಗ್ಗೆ ಸುಧಾ ಹೇಳಿದ್ದ ಕೇಳಿ ಯಾಕೊ ಮನಸ್ಸು ಮುದುಡಿಧಂಗಾತು.
ಮಾಸ್ತರ ಮಗಳು ಕರುಣಾ ನಮ್ಮ ಗೆಳತಿ. ಯಾವಾಗಲು ಗಂಡಬೀರಿ ಹಂಗ ಧಾಂದಲೆ ಹಾಕ್ಕೋತ ಶಾಲ್ಯಾಗ ಎಲ್ಲಾ ದಣಿಗಿ ಮಾಡಾಕಿ. ಈಗ ಎರೆಡು ಹೆಣ್ಣು ಮಕ್ಕಳ ತಾಯಿ. ಗಂಡ ಅನ್ನೊ ಪ್ರಾಣಿ ಈಗಿನ ಕಾಲದಾಗನು ಬರೆ ಹೆಣ್ಣ ಹಡದಿ ಅಂತ ಹಂಗಿಸಿ, ನಿಗ್ರಿಸಿ ನೀರ ಕುಡಿತಾನಂತ. ಮತ್ತ ಮ್ಯಾಲೆ ಸಂಶಯ ಪಿಶಾಚಿ, ಈಕಿ ಯಾರು ಗೆಳತ್ಯಾರಿಗೆ ಹೋಗಲಿ, ತವರು ಮನಿಗು ಫೋನ ಮಾಡೊಹಂಗಿಲ್ಲಂತ. ಆಂವನ ಮುಂದ ನಿಂತ ಹಚ್ಚಿಕೊಟ್ಟಾಗ ಮಾತ್ರ ಮಾತಾಡೊದಂತ. ಇಕಿ ಮೋಬೈಲ್ ನ್ಯಾಗ ಬರೆ ಮಿಸ್ ಕಾಲ್ ಕೊಡೊ ಅಷ್ಟು ರೊಕ್ಕಾ ಮಾತ್ರ ಇಟ್ಟಿರತಾನಂತ. ಛಲ್ಲಛಲ್ಲ ಮಾತಾಡ್ಕೊತ ಹುರುಪಿನಿಂದ ಇರತಿದ್ದ ಕರುಣಾನ್ನ ನೆನೆಸಿಕೊಂಡು ಖರೇನು ಬ್ಯಾಸರಾತು.
ಮಂಜುನ ಕಥಿ ಇನ್ನೊಂದ ಥರಾ. ಇದ್ದೊಬ್ಬ ಮಗಳ ಮ್ಯಾಲೆ ಬಂಡಿಗಾಲಿ ಬಿದ್ದು ದವಾಖಾನ್ಯಾಗ ಕರಕೊಂಡಹೋಗಿ ಏನು ಉಪಯೋಗ ಆಗಲಾರದ ಹೆಣಾ ಮನಿಗೆ ತರೊ ಪುರುಸೊತ್ತಿಲ್ಲದ, ಗಂಡಗ ಪಾರ್ಸಿ ಹೊಡೆದು ಮೂಲಿಗುಂಪಾಗಿ ಬಿದ್ದನಂತ. ಈಗ ಊನಾದ ಗಂಡನ್ನ ಕಟಗೊಂಡ ಆಂವನ್ನ ಸೇವಾ ಮಾಡ್ಕೊತ ಒಂದ ಬ್ಯೂಟಿ ಪಾರ್ಲರ್ ನಡೆಸ್ತಾಳಂತ. ಉಳಿದವರ್ಯಾರದು ಸುದ್ದಿ ಅಷ್ಟ ಗೊತ್ತಾಗಲಿಲ್ಲ. ಆದ್ರ ಪಿಂಕಿ ಸುದ್ದಿ ಕೇಳಿಯಂತು ಎದಿ ಝಲ್ಲ ಅಂದಿತ್ತು. ಎಷ್ಟ ಚೆಲುವಿ ಆಕಿ, ನೋಡಲಿಕ್ಕೆ ಸಿನೇಮಾ ಹಿರೊಯಿನ್ ಮಾಧವಿ ಹಂಗ ತೆಳ್ಳಗ, ಬೆಳ್ಳಗ, ಎತ್ತರ ಛಂದ ಮೈಮಾಟ. ನೋಡಲಿಕ್ಕೆ ಎರಡು ಕಣ್ಣು ಸಾಲಧಂಗಿತ್ತು ಆಕಿ ರೂಪಾ. ದೊಡ್ಡ ಶ್ರೀಮಂತರ ಮನಿ ಹುಡುಗಿ, ಅಷ್ಟ ಚೆಲುವ ವರನ್ನ ನೋಡಿ ಊರಿಗೆ ಹಂದ್ರಾ ಹಾಕಿಸಿ ಭಾಳ ಗ್ರ್ಯಾಂಡ ಮದವಿ ಮಾಡಿದ್ರು. ನೋಡಲಿಕ್ಕೆ ಇಬ್ಬರ ಜೊಡಿನು ರತಿ ಮನ್ಮಥರ ಜೋಡಿ ಇದ್ದಂಗಿತ್ತು. ಇಬ್ಬರು ಅಷ್ಟ ಪ್ರೀತಿ ಇದ್ರಂತ. ಮೊದಲನೇದ ಬಸರಾಗಿ ಕೂಸು ಸತ್ತುಹೋಗಿತ್ತು. ಆವಾಗನ ಗೊತ್ತಾಗಿತ್ತಂತ ಆಂವಗ ಏಡ್ಸ ಇತ್ತಂತ. ಹಂಗ ಗೊತ್ತಾದ ಮ್ಯಾಲೆ ಹೆಂಡತಿನ್ನ ಒಂದ ಕ್ಷಣಾನು ಬಿಟ್ಟಿರತಿದ್ದಿಲ್ಲಂತ ಆಂವಾ. ಪಿಂಕಿನು ಅಷ್ಟ, ತನ್ನ ತಪ್ಪು ಏನು ಇಲ್ಲ ಅಂತ ಗೊತ್ತಿದ್ರೂನು ಗಂಡನ್ನ ಒಟ್ಟ ದ್ವೇಷಿಸಲಿಲ್ಲಂತ. ಆದ್ರ ಆಂವಾ ಸತ್ತ ಮ್ಯಾಲೆ ಪಿಂಕಿ ಜೀವನಾ ಭಾಳ ದುಸ್ತರ ಆತಂತ. ತವರು ಮನ್ಯಾಗ ಇದ್ರೂನು ಇಕಿನ್ನ ಅಸ್ಪೃಶ್ಯರಂಗ ದೂರ ಅಟ್ಟದ ಮ್ಯಾಲೆ ಒಂದ ಖೊಲ್ಯಾಗ ಇಟ್ಟಿದ್ರಂತ. ಆಕಿ ಯಾರ ಜೊಡಿನು ಮಾತಾಡಲೇ ಇಲ್ಲಂತ, ಹೊರಗ ಮಂದಿ ಸಂಪರ್ಕಕ್ಕ ಬರಲೇ ಇಲ್ಲಂತ. ಕೊರಗಿ ಕೊರಗಿ ಒಂದಿನಾ ಗಂಡ ಹೋದ ಹಾದಿಯೊಳಗನ ತಾನು ಹೋದ್ಲಂತ. ಈಗ ಆಕಿ ಸತ್ತು ನಾಲ್ಕ ವರ್ಷ ಆತು ಅಂದ ಸುಧಾನ ಮಾತು ಕೇಳಿ ಜೀವಾ ಮರಾಮರಾ ಮರಗಿ, ಕಣ್ಣಾಗಿನ ನೀರು ಗೊತ್ತಿಲ್ಲಧಂಗ ತಾವಾಗೆ ಹೊರಗ ಹರಿಲಿಕತ್ವು.
ಇಷ್ಟೆಲ್ಲ ಹೇಳಿ ಶ್ರೀ, ಒಂದ ಕ್ಷಣಾ ತಡೆದು, ಹೇಳಿದ್ಲು, “ಸುಮಿ, ಇದೆಲ್ಲಾ ನೋಡಿದ್ರ ಒಂದ ರೀತಿ ಏನ ಅನಿಸ್ತದ ಅಂದ್ರ, ನನ್ನ ಗೇಳತ್ಯಾರ ಬಗ್ಗೆ ಒಂಥರಾ ಹೆಮ್ಮೆ ಆಗ್ತದ, ತಮಗ ಒದಗಿದಂಥಾ ಇಂಥಾ ಪರಿಸ್ಥಿತಿಯೊಳಗ ಸುದ್ಧಾ ಪ್ರಾಮಾಣಿಕವಾಗಿ ಜೀವನ ಮಾಡಿ ಬಂದ್ದದ್ದ ಎದುರಿಸಿ ಘಟ್ಟ್ಯಾಗಿ ನಿಂತಾರಲ್ಲ ಅಂತ ಖುಷಿ ಆಗ್ತದ. ಅವರಿಗೆ ಮೊದಲಿನ ಸುಖ,ಸಂತೋಷ, ನೆಮ್ಮದಿ, ಕೊಡು ಅಂತ ಊರ ದೇವರಲ್ಲೆ ಬೇಡ್ಕೊಂಡ ಬಂದೇನಿ” ಅಂದ್ಲು. ಆಕಿ ಹೇಳಿದ್ದೆಲ್ಲಾ ಕೇಳಿ, “ಬದುಕು ಜಟಕಾ ಬಂಡಿ, ವಿಧಿ ಅದರ ಮಾಲೀಕ” ಅನ್ನೊ ಮಾತು ಸತ್ಯ ಅನಿಸ್ತು………
*****
ನಿಮ್ಮ ಲೇಖನೀಲಿ ಜಾದೂ ಇದೆ ಸುಮನ್ ಜೀ.