ಬದುಕಿನ ಸುಳಿಯಲ್ಲಿ: ಪ್ರಕಾಶ ತದಡಿಕರ

 

“ಹುಚ್ಚಿ… ಹುಚ್ಚಿ”  ಎಂದು ಹಿಯಾಳಿಸುತ್ತ  ಕೇಕೆ ಹಾಕುವ ಮಕ್ಕಳ ಗುಂಪು ನನ್ನನ್ನು ಅಟ್ಟಿಸಿ ಕುಷಿಪಡುತ್ತಿತ್ತು. ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ನಿಂತ ನಾನು ಮಕ್ಕಳೆಸೆಯುವ ಕಲ್ಲಿನ ಪೆಟ್ಟು ಸಹಿಸದೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಯುವಕರು, ಹಿರಿಯರೂ ಎನ್ನದೇ  ಎಲ್ಲರೂ ನನ್ನ ಅವಸ್ಥೆ ಕಂಡು ನಗುತ್ತಿದ್ದರು. ಹಸಿವಾದಾಗ ಊರಿನ ಖಾನವಳಿಯ ಮುಂದೆ ನಿಲ್ಲುವ ನನ್ನ ಗೋಳು ಪ್ರತಿ ನಿತ್ಯ ಪೇಟೆಯ ರಸ್ತೆಯಲ್ಲಿ ಕಾಣಬಹುದಾದ ದೃಶ್ಯ.

ಕೆದರಿದ ತಲೆಗೂದಲು, ಕೊಳಕು ದೇಹ , ಆ ದೇಹವನ್ನು ಮುಚ್ಚಲು ಹೆಣಗುವ  ಹಳೆಯ ಹರಿದ ಸೀರೆ-ಕುಪ್ಪಸ ಇವು ನನ್ನ ಉಡುಪು. "ಮಾನಗೆಟ್ಟ ಹುಚ್ಚುಮುಂಡೆ" "ದರಿದ್ರ" ಇತ್ಯಾದಿ…. . ಇತ್ಯಾದಿ ಅವಾಚ್ಯ ಬೈಗಳು ನನ್ನ ಒಡವೆಗಳು. ನೋವಿನಲ್ಲೂ  ಯಾರೋ ಕೊಟ್ಟ ಅನ್ನ ಉಂಡು ಮತ್ತೆಪಯಣ ನನ್ನ ಮಹಲಿಗೆ. ನನ್ನ ತಾಣ ಊರ ಹೊರಗಿರುವ ಪಾಳು ಬಿದ್ದಿರುವ ಸರ್ಕಾರಿ ಕಟ್ಟಡದಲ್ಲಿ.

ಗೋಣಿ ಚೀಲದಲ್ಲಿ ಮದುಡಿ ಆಕಾಶದತ್ತ ದೃಷ್ಟಿ ನೆಟ್ಟು ಶಪಿಸುತ್ತಾ ಮಲಗಿದಾಗ, ಹರಿದು ಬತ್ತಿದ ಕಣ್ಣೀರಿನ ಸೆಲೆಯಲ್ಲಿ ಕ್ರೂರ ನೆನಪುಗಳು ನನ್ನ ಕೆಣಕಿದವು. ಚಿಂತೆಯ ಅಗ್ನಿಯಲ್ಲಿ ಬೇಯುತ್ತಿರುವ ನೋವುಗಳು ಸುರುಳಿಯಾಗಿ  ಬಿಚ್ಚತೊಡಗಿದವು.

ಒಬ್ಬಳೇ ಮಗಳಾದ ನಾನು ಹುಟ್ಟಿದ ಎರಡನೆ ವರ್ಷವೇ ಕಾರ್ ಎಕ್ಷಿಡೆಂಟಿನಲ್ಲಿ ಅಪ್ಪ ಅಮ್ಮಳನ್ನು ಕಳೆದುಕೊಂಡೆ. ಬಾಲ್ಯದಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥಳಾದ ನಾನು ಬೆಳೆದದ್ದು ಮಾವನ ಮನೆಯಲ್ಲಿ. ಅನಾಥಳಾದ ನಾನು ಮಾವನ ಮನೆಯಲ್ಲಿ ಅಮ್ಮನ ಮಮತೆ ಪ್ರೀತಿಯನ್ನ ಕಾಣದಿರಲು, ಅಕ್ಕ ಪಕ್ಕದ, ನೆರೆಹೊರೆಯವರಿಂದ  ಸಹಜವಾಗಿಯೇ ಆ ನಿರೀಕ್ಷೆಯಲ್ಲಿ ಇರುತ್ತಿದ್ದೆ. ತಾಯಿಯಿಲ್ಲದ ತಬ್ಬಲಿ ಎಂದು ಅಕ್ಕ ಪಕ್ಕದ ಮನೆಯವರು ತಮ್ಮ ಮಕ್ಕಳಂತೆ ನನ್ನನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಬಿದಿಗೆ ಚಂದ್ರನಂತೆ ನೊಡಲು ಸುಂದರವಿದ್ದ ನನ್ನನ್ನು  ಮನೆಗೆ ಬಂದು ಹೋಗುವರೆಲ್ಲ ಎತ್ತಿ ಮುದ್ದಾಡುತ್ತಿದ್ದರು. ಕೆಲವರು  ಅಪ್ಪಿ ವಿಚಿತ್ರವಾಗಿ ಮುದ್ದಾಡಿದಾಗ  ಏನೂ ತಿಳಿಯದ ವಯಸ್ಸಿನಲ್ಲಿಯೂ ಮುಗ್ಧ ಮನಸ್ಸು ಹೇಸಿತು.

ತಂಗಿಯ ತಬ್ಬಲಿ ಮಗುವೆಂದು ಮಾವ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು. ನನ್ನ ದುರಾದೃಷ್ಟ ಅತ್ತೆಯ ಪ್ರೀತಿ ನನಗೆ ಸಿಗಲೇ ಇಲ್ಲ. ಆಟ ಆಡಿಕೊಂಡು ಇರಬೇಕಾದ ದಿನಗಳಲ್ಲೇ ನರಕ ಯಾತನೆ ಶುರುವಾಯ್ತು. ಬೆಳಗಾಗುವ ಮೊದಲೇ ಏನೇನೋ ಕೆಟ್ಟ ಬೈಗಳ ಸುರಿಮಳೆ ನನ್ನ ಮೇಲೆ. . ಪ್ರಾರಬ್ದ,  ಅನಿಷ್ಟ, ದರಿದ್ರ ಮುಂಡೆದು, ಕತ್ತೆಯ ಹಾಗೆ ಬೆಳೆದಿದ್ದೀಯಾ, . . . . .  ಎಲ್ಲ ಬೈಗುಳಗಳು ನನಗಾಗಿಯೇ. ಏನ್ ಮಾಡ್ಲಿಕ್ಕೆ ಆಗುತ್ತೆ? ನನ್ನ ಪ್ರಾರಬ್ದ ಅಂತ ಅನುಭವಿಸುತ್ತಿದ್ದೆ. ದಿನವೂ ಅತ್ತೆ ಹಾಕುತ್ತಿರುವ ಹಿಡಿ ಶಾಪ ಬೈಗಳು ನನಗೆ ಚುಚ್ಚುತ್ತಿದ್ದವು.  

ಅನಾಥಳಾದ ನನ್ನ ಆಸರೆ ನೀಡಿದ್ದ ಮಾವ ತೀವ್ರ ವಿರೋಧದ ನಡುವೆಯೂ ಅಂತೂ ಹೆಗೋ ಅತ್ತೆಯನ್ನು ಒಪ್ಪಿಸಿ  ಆರನೇ ವಯಸ್ಸಿನಲ್ಲಿ ನನ್ನನ್ನು ಶಾಲೆಗೆ  ಕಳಿಸಿದರು. ಶಾಲೆಯಿಂದ ಮನೆಗೆ ಬಂದ ತಕ್ಷಣ ಅತ್ತೆಯ ಕಾಟ ಶುರುವಾಗೋದು. ಒಂದು ನಿಮಿಷ ಕೂರೋಕೆ ಬಿಡದೆ ಆ ಕೆಲಸ ಮಾಡು ಈ ಕೆಲಸ ಮಾಡು ಅಂತಾ ದಿನಾ ಸತಾಯಿಸುತ್ತಿದ್ದಳು. ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಚೆನ್ನಾಗಿ ಹೊಡೆಯುತ್ತಿದ್ದಳು. ದಿನವಿಡೀ  ಹೆಗೋ ಸಹಿಸಿ ರಾತ್ರಿ ವೇಳೆ ಒಬ್ಬಳೇ ಕುಳಿತು ಅಳುತ್ತಿದ್ದೆ. ನನ್ನ ಪಾಡು ನೋಡಲಾಗದೇ  "ಪಾಪ. . ಮಗೂನ ಯಾಕ ಗೋಳು ಹೊಯ್ಕೊಳ್ತಿಯೇ" ಅಂತಾ ಮಾವ ಆಗೊಮ್ಮೆ ಈಗೊಮ್ಮೆ ಹೇಳುತ್ತಿದ್ದರೂ, ಅತ್ತೆಯ ದುರುಗುಟ್ಟುವ ಕಣ್ಣು ಮಾವನ ಬಾಯಿಮುಚ್ಚಿಸುತ್ತಿತ್ತು. ಹೇಗೋ ಏಳನೇ ಕ್ಲಾಸು ಮುಗಿಸಿ ಹೈಸ್ಕೂಲ ಮೆಟ್ಟಲು ಹತ್ತಿದೆ.

ಮನೆಯಿಂದ ಹೈಸ್ಕೂಲಗೆ ಇದ್ದದ್ದು ಸುಮಾರು ಆರು ಕಿಲೋಮೀಟರ್‌ ಅಂತರ. ದಿನವೂ ಬೆಳಿಗೆದ್ದು ಮನೆಯ ಕೆಲಸ ಮುಗಿಸಿ ಮನೆಯಿಂದ ಹತ್ತಿರ ಇರುವ ಬಸ್ ಸ್ಟ್ಯಾಂಡ್ನಿಂದ  ಸಿಟಿ ಬಸ್ ಹತ್ತಿ ಹೈಸ್ಕೂಲ ಹೋಗುತ್ತಿದ್ದೆ. ಸಿಟಿ ಬಸ್ನಲ್ಲಿ ಪ್ರಯಾಣ. . ಅಬ್ಬಬ್ಬಾ. !!. ಪ್ರಯಾಣಿಕರ ಸಂಖ್ಯೆ ಮತ್ತು ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದಾಗಿ ದಿನವೂ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಯಾತನೆ ಹೇಳ ತೀರದು. ಬಸ್ ನಲ್ಲಿ  ವಯಸ್ಸಿನಂತರವಿಲ್ಲದೇ ಹಲವರು ಜನಜಂಗುಳಿಯಲ್ಲಿ ಮೈಮುಟ್ಟಿ ಚಪಲ ತೀರಿಸಿಕೊಳ್ಳುತ್ತಿದ್ದರು. ಕೆಲವು ಬೀದಿ ಕಾಮಣ್ಣರು ರಸ್ತೆ ಬದಿಗಳಲ್ಲಿ ನಿಂತು  ಶಾಲೆಗೆ ತೆರಳುವ ಮತ್ತು ಹಿಂತಿರುಗುವ ವಿದ್ಯಾರ್ಥಿನಿಯರನ್ನು ಬಿಡದೇ  ಚುಡಾಯಿಸುವುತ್ತಿದ್ದರು.  ಬಸ್ ನಿಲ್ದಾಣದ ಅಕ್ಕಪಕ್ಕ ಪ್ರದೇಶದಲ್ಲಿ ಪುಂಡು ಪೋಕರಿಗಳು, ಕುಡುಕರು, ಪುಡಿ ರೌಡಿಗಳ ಹಾವಳಿ ವಿಪರೀತವಾಗಿತ್ತು. ಆದರೆ ಇಂಥಹ ಪರಿಸ್ಥಿತಿಯಲ್ಲೂ ಮನೆಯಲ್ಲಿ ಇರಲು ಬಯಸದ ನಾನು ಬೇರೆ ದಾರಿ ಇಲ್ಲದೇ ಅನಿರ್ವಾಯವಾಗಿ ಸ್ಕೂಲಿಗೆ ಹೋಗುತ್ತಿದ್ದೆ.

ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದರೂ ಸಹ, " ಓದೋದೇನು ಬೇಕಾಗಿಲ್ಲ ಮನೆಯಲ್ಲಿ ಬೇಕಾದಷ್ಟು ಕೆಲಸಾ ಬಿದ್ದಿವೆ" ಅಂತ ಅತ್ತೆಯವರು ಮಾವನ ಕಿವಿ ಚುಚ್ಚಿ ನನ್ನಓದು ನಿಲ್ಲಿಸಿದರು. ಅಲ್ಲಿಗೆ ನನ್ನ ಶಿಕ್ಷಣ ಮುಗಿಯಿತು. ಅತ್ತೆ ನನಗೆ ಕೊಡುವ ಕಾಟ ತಪ್ಪಿಸಲು ಮಾವನವರು  ಹೆಗೋ ಅತ್ತೆಯನ್ನು ಒಪ್ಪಿಸಿ ನನ್ನನ್ನು ಗೇರು ಬೀಜ ಫ್ಯಾಕ್ಟರಿಯಲ್ಲಿ  ಲೆಕ್ಕ ಪತ್ರ ಬರೆಯವ ಕೆಲಸಕ್ಕೆ ಸೇರಿಸಿದರು. ರಾಷ್ಟ್ರೀಯ ಹೆದ್ದಾರಿಯ ಹತ್ತಿರ ಇರುವ ಗೇರು ಬೀಜ ಫ್ಯಾಕ್ಟರಿ ಮನೆಯಿಂದ ಸುಮಾರು ಆರು-ಏಳು ಕಿ. ಮೀ. ದೂರದಲ್ಲಿತ್ತು. ಫ್ಯಾಕ್ಟರಿಯ ಹತ್ತಿರದ ಜನತೆಗೆ ಪಟ್ಟಣಕ್ಕೆ  ಬಂದು ಹೋಗಲು ಅನುಕೂಲವಾಗಲೆಂದು ಕೋರಿಕೆ ಮೇರೆಗೆ ಬಸ್ ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಇಳಿದರೆ ಫ್ಯಾಕ್ಟರಿ ತಲುಪಲು ಐದಾರು ನಿಮಿಷದ ಕಾಲುನಡಿಗೆ. ಸುಮಾರು ಹತ್ತಾರು ಮನೆಗಳ ಜನವಸತಿ ಇರುವ ಸಣ್ಣ ಹಳ್ಳಿ ಪ್ರದೇಶವಾಗಿರುವುದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಗು-ಹೋಗು ತುಂಬಾ ಕಡಿಮೆ.

ಅಂದು ನನ್ನೀ ಜೀವನದ ಕರಾಳ ದಿನ. ನನ್ನ ಜೀವನದ ಕನಸುಗಳೆಲ್ಲ ಛಿದ್ರವಾದ ದಿನ. ನನ್ನ ಗೃಹಚಾರವೋ ಎನೋ ಅಂದು ಸಂಜೆ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು  ಹತ್ತಿರ ಇರುವ ಬಸ್‌ ನಿಲ್ದಾಣದ ಕಡೆ ನಡೆದೆ. ಸಣ್ಣದಾಗಿ ಮಳೆಯೂ  ಪ್ರಾರಂಭವಾಗಿತ್ತು. ನಿಲ್ದಾಣದಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿದ್ದೆ. ಬಸ್‌ ನಿಲ್ದಾಣದಲ್ಲಿ  ಪ್ರಯಾಣಿಕರು ಯಾರೂ ಇಲ್ಲದ ಕಾರಣ ತುಂಬಾ ಭಯವಾಗುತ್ತಿತ್ತು. ಅದೇ ವೇಳೆಗೆ ಕಾರಿನಲ್ಲಿ ಬಂದ ನಾಲ್ವರು ನನಗೆ ಡ್ರಾಪ್ ಕೊಡುವುದಾಗಿ ಹೇಳಿದರು. ಅದಕ್ಕೆ ನಾನು ನಿರಾಕರಿಸಿದರೂ ಕೇಳದೇ  ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಕಾರಿನೊಳಕ್ಕೆ ನೂಕಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು.

ಮನುಷ್ಯರೇ  ಅವರು ?   ಒಂಟಿ ಹೆಣ್ಣಿನ ಮೇಲೆ ತಮ್ಮ ಗಂಡಸುತನವನ್ನು ಮೆರೆದ ರಾಕ್ಷಸರು,   ಮಾನವೀಯತೆಯನ್ನೇ ಮರೆತ ಮತಿಗೆಟ್ಟ ಕಾಮುಕರು. "ಯಾರಾದ್ರು ಕಾಪಾಡಿ" ಎಂದು ಅರಚಿ ಅರಚಿ ಅಸಾಹಯಕಳಾಗಿ ನಿರ್ಜನ ಪ್ರದೇಶದಲ್ಲಿ  ದುರುಳರ  ರಾಕ್ಷಸೀ ಕ್ರೌರ್ಯಕ್ಕೆ ನಾ ಬಲಿಯಾದೆ. ಒಬ್ಬನಿಗೆ ನಾನು ಹಲ್ಲಿನಿಂದ ಬಲವಾಗಿ ಕಚ್ಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಸಿಟ್ಟಿಗೆದ್ದ ಅಮಾನುಷ ಅತ್ಯಾಚಾರಿ ಕಾಮಾಂಧರು  ನನ್ನ ತಲೆಯ ಮೇಲೆ ಕಲ್ಲೆಸೆದರು. ರಕ್ತಸಿಕ್ತಳಾಗಿ ಪ್ರಜ್ನೆ ತಪ್ಪಿದ ನನ್ನ ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದರು. ಮುಂದೆನಾಯಿತೋ ನನಗೆ ತಿಳಿಯದು. ಅಂದು ಸಿಕ್ಕಿದ  ಮಾನಸಿಕ ಮತ್ತು  ದೈಹಿಕ  ಹೊಡೆತದಿಂದ  ಚೇತರಿಸಿಕೊಳ್ಳಲು ಸಾಧ್ಯವಾಗದೇ ಮಾನಸೀಕ  ಸಮತೋಲನ ಕಳಕೊಂಡು  ಜೀವನ ಪೂರ್ತಿ ಹುಚ್ಚಿಯಾದೆ.

ಹೌದು! ಸಾಯದೇ ಬದುಕಿರುವ "ಹುಚ್ಚಿ" ನಾನು.  ಹುಚ್ಚಿಯಾದರೂ  ಇಂದಿಗೂ ತೆರೆದ ಆಕಾಶದಡಿಯಲ್ಲಿ ಮತ್ತೆ ಮತ್ತೆ ಕಾಮುಕರ ವಿಕೃತಿಗೆ ಬಲಿಯಾಗಿ ಅತ್ಯಾಚಾರಿಗಳ ದೌರ್ಜನ್ಯದಡಿ ಬದುಕುತ್ತಿರುವೆನು. ಅಟ್ಟಹಾಸದಿ ನಗುತಿರುವ ಕಾಮಾಂಧರ ದುರುಳರ ವಿಕೃತ ಕೃತ್ಯಕ್ಕೆ ಕೊನೆಯಿಲ್ಲವೇ??? ಎಲ್ಲಿದೆ ರಕ್ಷಣೆ?ಎಲ್ಲಿದೇ ಹೆಣ್ಣಿನ ಮಾನಕ್ಕೆ ಬೆಲೆ? ಹೆಣ್ಣಿನ ಮನಸ್ಸಿನ ಭಾವನೆ  ಮನದ ಅಳಲನ್ನು ಅರಿವರೆ ಇವರು? ಬದುಕಿನ ನೋವುಗಳ ನೆನೆಯುತ್ತ ಸೋತು ಅಳುತಿಹೆನು ದಿನ-ರಾತ್ರಿ ಮುದುಡಿ ಹಳೆಯ ಗೊಣಿ ಚೀಲದಡಿಯಲ್ಲಿ. . .

'ಹುಚ್ಚಿ'ಇದು ಒಂದು ಹೆಣ್ಣಿನ ಕಥೆಯಲ್ಲ. ದೇಶದ್ಯಾದಂತ ದಿನನಿತ್ಯ ದುರಳರ ಕ್ರೂರ ಪಾಶವೀ ಕೃತ್ಯಕ್ಕೆ ಬಲಿಯಾಗುತ್ತಿರುವ ಪ್ರತಿಯೊಬ್ಬ ಹೆಣ್ಣು ಜೀವದ  ಕರಣಾಜನಕ  ವ್ಯಥೆ. ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು? ಹೆಣ್ಣುಜೀವದ ಮೇಲೆ ದಿನಂಪ್ರತಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾದ ಸಂದರ್ಭದಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ, ಕಾನೂನು ಕಟ್ಟಳೆಗಳು ಬಿಗಿಗೊಳಿಸಿದರೂ ಸ್ತ್ರೀ ಜೀವ ಮತ್ತೆ ಮತ್ತೆ ಬಲತ್ಕಾರಕ್ಕೆ  ಬಲಿಯಾಗುತ್ತಿದ್ದಾಳೆ. ಕಾಮುಕರ ದೃಷ್ಠಿ ಹಸುಳೆಯನ್ನೂ ಸಹ ಬಿಟ್ಟಿಲ್ಲ. ಅಧುನಿಕತೆ, ವೈಜ್ಞಾನಿಕ ಮನೋ ಭಾವ, ವೈಚಾರಿಕತೆ ಬೆಳೆದಂತೆಲ್ಲಾ ಮನುಷ್ಯನೇಕೆ ಕ್ರೂರ ಪಶುವಾಗುತ್ತಿದ್ದಾನೆ? ದಿನನಿತ್ಯ ನಡೆಯುವ ಅತ್ಯಾಚಾರಗಳು, ಬರ್ಬರ  ಹತ್ಯೆಗಳು, ಅಪಹರಣ, ವರದಕ್ಷಿಣೆ ಕಿರುಕುಳ  ಮುಂತಾದ ರಾಕ್ಷಸೀ ಕೃತ್ಯಗಳು   ಸಾಮಾಜಿಕ ಮೌಲ್ಯವನ್ನೇ ಶೂನ್ಯವಾಗಿಸಿ ನಾಗರಿಕ ಸಮಾಜವನ್ನು ನೈತಿಕ ಅಧಪತನದತ್ತ ಒಯ್ಯುತ್ತಿದೆ.

ಹೆಣ್ಣು  ತಾಯಿಯಾಗಿ, ಪತ್ನಿಯಾಗಿ, ತಂಗಿಯಾಗಿ, ಅಕ್ಕನಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಸ್ನೇಹಿತೆಯಾಗಿ, ಗುರುವಾಗಿ, ಅತ್ತೆಯಾಗಿ  ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಬೆಸೆದು ಪುರುಷ ಸಮಾಜಕ್ಕೆ ಬೆಳಕಾಗುವವಳು. ನಮ್ಮನ್ನು ಹಡೆದವಳು ಹೆಣ್ಣು, ಬೆಳೆಸಿದವಳು ಹೆಣ್ಣು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ-ಗೌರವವಿದೆ. ಅಂತಹ  ಹೆಣ್ಣು ಜೀವಕ್ಕೆ  ಈ ಶೋಷಣೆ ಯಾಕೆ?. . . ಸರ್ಕಾರದ ಜೊತೆ ಸಮಾಜವೂ ಅತ್ಯಾಚಾರಗಳಂತಹ ದುರ್ಘಟನೆಗಳನ್ನು  ತೀವ್ರವಾಗಿ ಖಂಡಿಸಿ, ಅಗತ್ಯವಿದ್ದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು. ಮೌಲ್ಯಾಧಾರಿತವಾದ, ಸಾರ್ಥಕವಾದ, ನೈತಿಕತೆ ತುಂಬಿದ , ಉತ್ತಮವಾದ ಸಂಸ್ಕಾರ ಹಾಗೂ ಸಂಸ್ಕೃತಿಯಯನ್ನು ಬಾಲ್ಯದಲ್ಲಿಯೇ  ಮಕ್ಕಳಿಗೆ  ಕಲಿಸುವುದರಿಂದ ಸಮಾಜ ಪರಿವರ್ತನೆಯಾಗಬಹುದು. ಪೋಷಕರು ಹಾಗೂ ಸಮಾಜ ಈ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು.

ಪ್ರತೀ ಹೆಣ್ಣುಮಕ್ಕಳ ರಕ್ಷಣೆ ಸಮಾಜದ್ದಾಗಿದ್ದು, ಕಾಮುಕ ಪಾಶವೀ ಮನಸ್ಸುಗಳನ್ನು ಮಾನವೀಯತೆ ನೆಲೆಯಲ್ಲಿ ಬದಲಿಸುವುದು ಸಮಾಜಕ್ಕೆ ಒಂದು ದೊಡ್ಡ ಸವಾಲಾಗಿದೆ.  ಒಬ್ಬರಿಂದ ಸಮಾಜ ಪರಿವರ್ತನೆಯಾಗಲು ಸಾದ್ಯವಿಲ್ಲ. ಪ್ರತಿಯೊಬ್ಬರೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೆಸೆಯಲ್ಲಿ ದಾಪುಗಾಲಿಕ್ಕಿ, ಘೋರ ಅಪರಾಧಕ್ಕೆ ಕಡಿವಾಣ ಹಾಕಿ ಅಪರಾಧ ಮುಕ್ತ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮಖ ಪಾತ್ರವಹಿಸಬೇಕು. ಸಮಾಜದಲ್ಲಿ  ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ದೊರಕಿ, ಅವರ ಏಳಿಗೆಯ ದಾರಿ ಸುಗಮವಾದಾಗ  ಮಾತ್ರ ಮಹಿಳೆಯರು ನಮ್ಮ ದೇಶದಲ್ಲಿ  ಸ್ವತಂತ್ರವಾಗಿ, ನಿರ್ಭಯವಾಗಿ, ಸಂತೋಷವಾಗಿ, ನಿರಾತಂಕವಾಗಿ ಇರಲು ಸಾಧ್ಯ.

ಪ್ರಕಾಶ ತದಡಿಕರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x