ಬದುಕಿನ ಆಶಾಕಿರಣ: ಪದ್ಮಾ ಭಟ್

                             

”ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲನ್ನು ಪದೇ ಪದೇ ಕೇಳಬೇಕೆನಿಸಿತ್ತು.. ಮುಂದುವರೆದು ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೆ ಜೀವನ ಸಾಲೂ ಮತ್ತೊಮ್ಮೆ ಮಗದೊಮ್ಮೆ ಹಾಕಿ ಕೇಳಿಸಿದೆ. ಯಾವ ಮೋಹನ ಮುರಳಿ ಕರೆಯಿತೋ ಹೊಸದಾಗಿ ಕೇಳುವವಳೇನಲ್ಲ. ಆದರೆ ಎಂದಿಗಿಂತಲೂ ಆಪ್ತವೆನಿಸಿತ್ತು ಸಾಲುಗಳು..ಯಾಕೋ ಒಬ್ಬಂಟಿಯಾಗಿ ಕುಳಿತಿದ್ದವಳಿಗೆ ಹಾಡಿನಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬುವುದು ಅರಿವಾಗದೇ ಇರುವಷ್ಟು ಮುಳುಗಿ ಹೋಗಿದ್ದೆ ಸಾಲಿನಲ್ಲಿ. ಎಲ್ಲವೂ ಮಂಕಾಗಿ ಕಾಣುತ್ತಿರುವ ಸಂಜೆಯ ಹೊತ್ತಿನಲ್ಲಿ ಸೂರ್‍ಯ ಮುಳುಗುತ್ತಿರುವ ಸಮಯವೂ  ಸೂರ್‍ಯನ ಕೊನೆಯ ಹೊತ್ತೆಂಬಂತೆ ಸ್ಮಶಾನ ಮೌನದಲಿ ನಾನೊಬ್ಬಳೇ ಕುಳಿತಿದ್ದರಿಂದಲೋ, ಅಥವಾ ನನ್ನದೊಬ್ಬಳ ಯೋಚನೆಯಲ್ಲಿ ನಾನೊಂಟಿಯೆಂಬ ಭಾವ. ಎಲ್ಲರೂ ಜಗತ್ತಿನಲ್ಲಿ ಖುಷಿಯಾಗಿದ್ದಾರೆಂದು ಒಂದು ದೃಷ್ಟಿಯಲ್ಲಿ ಅನಿಸಿದರೆ, ಇನ್ನೊಂದು ಪರಿಯಲ್ಲಿ ಎಲ್ಲರೂ ಬೇಸರವೇನೋ ಎನ್ನುವಂತಿತ್ತು..

ದಿನವೆಲ್ಲ ಹೊಸತು..ಆದರೂ ಹೊಸದಿನದಲ್ಲಿ ಅದೇ ಹಳೆಯ ದಿನಗಳ ಕೊಂಡಿ. ಖುಷಿಗಳ, ದುಃಖಗಳ ಸಮ್ಮಿಲನದಲ್ಲಿ ಭೂತಕಾಲದ ದಿನಗಳ ನೆನಪು ವರ್ತಮಾನದಲ್ಲಿ.. ನಾಳಿನ ನೆನಪಿಗಾಗಿ ಸಿದ್ದಗೊಳ್ಳುತ್ತಿರುವ ವರ್ತಮಾನಕ್ಕೆ ಭವಿಷ್ಯತ್ತಿನ ಪರಿವೆಯೇ ಇಲ್ಲ. ಮತ್ತೆ ನನ್ನ ಯೋಚನೆಗಳಿಗೂ ಪರಿಧಿಯಿಲ್ಲ..ಮಾಡುವ ಕೆಲಸವನ್ನೆಲ್ಲ ಬಿಟ್ಟು ಬರೀ ಯೋಚಿಸುತ್ತ ಕುಳಿತರೆ, ಜೀವನ ಪರ್ಯಂತ ಯೋಚಿಸುವ ಕೆಲಸವೇ ನನ್ನದಾಗಬಹುದೆಂದು ಗೊತ್ತೂ ಇದೆ. ಭಾವನೆಗಳ ಜಗವು ಮುಂಜಾವಿನ ಹೊತ್ತಿಗೆ ಶಾಲೆಗೆ ಹೋಗುವ ಮಗುವಿನ ಮುಖದಿ ಮೂಡುವ ಮುಗ್ಧತೆಯಷ್ಟು ಸುಂದರ.. ಹಿಂದೆಂದೋ ಒಂದು ಕಾಲದಲ್ಲಿ ಯೋಚಿಸಿದ್ದ ವಿಷಯಗಳು, ಇಂದು ನನಸಾಗಿದೆ. ಕನಸುಗಳು ನನಸಾಗಿದೆ ಎನ್ನುವುದಕ್ಕಿಂತ ಕನಸೇ ಕಂಡಿರದ ಇನ್ನೂ ಹತ್ತಾರು ವಿಷಯಗಳು ಮಿತಿ ಮೀರಿ ಖುಷಿಕೊಟ್ಟಿದೆ.. ಎಷ್ಟೋ ಸಲ ಅಂದುಕೊಳ್ಳುತ್ತೇವೆ. ಕನಸು ಕಾಣುವ ಮೊದಲು, ಈ ಕನಸು ನನಸಾಗುವುದೋ ಇಲ್ಲವೋ ಎಂದು, ಆದರೆ ಆ ಕನಸು ನನಸಾದಾಗ ಅದರ ರುಚಿ ಗೊತ್ತಿಲ್ಲದಂತೆಯೇ ದಿನಗಳು ಕಳೆದು ಬಿಡುತ್ತವೆ. 

ಹತ್ತಿರವಿದ್ದವರ ಜೊತೆಗೆ ಮಾತನಾಡುವುದು ಎಂದರೆ ಎಷ್ಟೋ ಸಲ ನಿರ್ಲಕ್ಷತೆಯ ಭಾವ.. ಇವರು ಯಾವಾಗಲೂ ಸಿಗುತ್ತಾರಲ್ಲ ಎಂಬುದು. ಆದರೆ ಆ ಕ್ಷಣಗಳಿಗೆ ಅರಿವಿಗೆ ಬರದೇ ಇರುವ ಅವರ ಬೆಲೆಯು, ಸ್ವಲ್ಪ ಅವರು ನಮ್ಮನ್ನು ದೂರ ಮಾಡುತ್ತಾರೆಂದ ಕೂಡಲೇ ಪಟ್ಟನೇ ಶಾಕ್ ಹೊಡೆದಂತಾಗುತ್ತದೆ. ಅಯ್ಯೋ ನಾವಂದುಕೊಂಡಿದ್ದು ಆಗಿಲ್ಲವಲ್ಲ ಎಂದು ಬೇಸರಪಟ್ಟು ಯೋಚಿಸುವುರ ಬದಲು, ಆಗುವುದಕ್ಕಾಗಿ ಏನು ಮಾಡಬೇಕೆಂದು ಯೋಚಿಸುವುದು ಮುಖ್ಯವಾದ ವಿಚಾರ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದು ಆಗಸವೇ ತಲೆ ಮೇಲೆ ಬಿದ್ದಿದೆ ಎನ್ನುವ ತರಹ ಬೇಸರದಲ್ಲಿರುವುದು ಮೂರ್ಖತನವೇ ಸರಿ. ನಾಳಿನ ಬಗೆಗೂ ಒಂದಷ್ಟು ನಿಲುವುಗಳಿದ್ದರೆ ಚಂದ. ಕನಸುಗಳಿದ್ದರೆ ನನಸಾಗುವ ತುಡಿತ, ಪ್ರಯತ್ನಗಳಿದ್ದದ್ದೇ ಹೌದಾದರೆ ಯಶಸ್ಸು ಎನ್ನುವುದು ಯಾರ ಮನೆಯ ಸ್ವತ್ತೂ ಅಲ್ಲ ಎಂಬುದು ಸತ್ಯವಾಗಿಯೇ ತೋರುತ್ತದೆ. ಎಲ್ಲವೂ ಅಂದುಕೊಂಡಂತೆ ಆಗುವುಂತಿದ್ದರೆ ಜೀವನದಲ್ಲಿ ಏನೂ ಥ್ರಿಲ್ ಇರಲ್ಲವೇನೋ ಎಂದೆನಿಸುತ್ತದೆ.. ಬೋರಿಂಗ್ ಅಲ್ವಾ? ಎಲ್ಲವೂ ಪೂರ್ವಾಗ್ರಹವಾಗಿದ್ದರೆ.

ನಮ್ಮ ಯೋಚನೆಗಳಿಗೂ ಮೀರಿ ಇನ್ನೊಂದಿಷ್ಟು ಜಗತ್ತು.. ದುಃಖಗಳು, ಬೇಸರಗಳು ದಾಟಿಹೋಗುವ ಸಮಯ ಬಂದೇ ಬರುತ್ತದೆ. ಯಾವುದೂ ಶಾಶ್ವತವಲ್ಲ. ನಮ್ಮ ಬಳಿ ಆಗಲಿಲ್ಲವಲ್ಲ ಎಂಬ ನಿಲುವು ಕೂಡ. ಯಾರಿಗಾಗಿಯೋ ಅತ್ತ ದಿನಗಳು ಒಂದಿದ್ದರೆ, ಇನ್ನೊಂದು ಕ್ಷಣದಲ್ಲಿ ನಮಗೇ ಅನಿಸುತ್ತೆ..ಛೇ! ನಮ್ಮ ಅಮೂಲ್ಯವಾದ ಕಣ್ಣೀರನ್ನು ಯಾರಿಗಾಗಿಯೋ ವೇಸ್ಟ್ ಮಾಡಿಬಿಟ್ಟೆವಲ್ಲ ಎಂದು. ಭಾವನೆಗಳು ಉಮ್ಮಳಿಸಿ ಬಂದಿದ್ದ ಒಂದು ಕ್ಷಣವೇ ಮರೆತು ಹೋಗುವಷ್ಟು, ಬದುಕು ಎಲ್ಲವನ್ನೂ ಒಂದು ಕಡೆ ತಂದು ಹಾಕಿಬಿಡುತ್ತದೆ. ಬೇಸರ ಅನ್ನೋದು ದ್ವೇಷ ಮತ್ತು ಕೋಪಕ್ಕಿಂತ ಭಯಂಕರವಾದ್ದು. ಯಾಕಂದರೆ ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದು. ಕೋಪವನ್ನ ಶಾಂತಿಯಿಂದ ಗೆಲ್ಲಬಹುದು ಆದರೆ ಬೇಸರವನ್ನು ಯಾವುದರಿಂದ ಗೆಲ್ಲುವುದು..ಒಬ್ಬ ಶತ್ರುವಿಗೆ ಕೊಡಬಹುದಾದಂತಹ ಅತೀ ಉಗ್ರ ಶಿಕ್ಷೆ ಎಂದರೆ ಅವನ ಮೇಲಿನ ಬೇಸರ ಅಷ್ಟೆ. ಯಾಕಂದರೆ ಬೇಸರದಿಂದ ಹುಟ್ಟೋದೆ ವ್ಯಕ್ತಿ ಬಗೆಗಿನ ಉದಾಸೀನ. 

 ಸುನಾಮಿಯಿಂದ ಎಲ್ಲವೂ ತೊಳೆದು ನಶಿಸಿ ಹೋಗುತ್ತಿದ್ದರೂ, ಮುಂದೆಲ್ಲೋ ಒಂದು ಆಶಾಕಿರಣವಿರುತ್ತೆ. ಮತ್ತೊಮ್ಮೆ ಬೆಳಕು ಮೂಡಬಹುದಲ್ಲ ಎಂಬ ಭರವಸೆ. ಭಾರತದ ತಂಡ ಕ್ರಿಕೇಟ್‌ನಲ್ಲಿ ಸೋತಾಗಲೂ ಹೇಗೆ ನಮ್ಮ ದೇಶದ ಜನರು  ಮತ್ತೊಂದು ಮ್ಯಾಚ್‌ನಲ್ಲಿ ಸ್ಟೇಡಿಯಂ ತುಂಬಾ ತುಂಬಿಕೊಳ್ಳುತ್ತಾರಲ್ಲ ಹಾಗೆಯೇ ಒಂದು ಭರವಸೆಯ ಆಶಾಕಿರಣ..ಏನೂ ಇಲ್ಲವೆಂದು ತಿಳಿದ ಜೀವನದಲ್ಲಿ ಎಲ್ಲವೂ ಇದೆ ಎಂದು ವಿವರಿಸುವ ಬದುಕಿನ ಪುಸ್ತಕ..

  *****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
shilpa
shilpa
10 years ago

nice…

 

gireesh gunaga
gireesh gunaga
10 years ago

gudone …

prashasti
10 years ago

ಚೆನ್ನಾಗಿದ್ದು. ಲವಲವಿಕೆಯಿಂದಿರುತ್ತಿದ್ದ ಬರಹಗಳು ಈ ಸಲ ಯಾಕೋ ಆಧ್ಯಾತ್ಮದತ್ತ ವಾಲ್ತಿದ್ದೇನೋ ಅನಿಸ್ತು. ಹೌದು. ನೀವಂದಂಗೆ ಸಂಬಂಧಗಳು, ವಸ್ತುಗಳು ಹತ್ರ ಇದ್ದಾಗ ಬೆಲೆ ಗೊತ್ತಾಗದಿಲ್ಲೆ. ದೂರಾಗಕ್ಕೋದಾಗ್ಲೇ ಅವುಗಳ ಬೆಲೆ ಗೊತ್ತಾಗದು. ವಾಸ್ತವದ ಚಿತ್ರಣ 🙁

3
0
Would love your thoughts, please comment.x
()
x