ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ


ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು  ನೀನು ನೆನೆನೆನೆದು ಕೆರಳಿ
ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮ

ಇದೇನೋ ಸೂರಿ ಏನೋ ಬಡಬಡಿಸ್ತಾ ಇದ್ದೀಯಾ? ಯಾರೀ ಮಂಕುತಿಮ್ಮ? ಎಂದು ಪ್ರಶ್ನಿಸಿದ ಸ್ನೇಹಿತನ ಮೇಲೆ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ ಏನೂ ಇಲ್ಲ ಕಣೋ ಅದು ಡಿ.ವಿ.ಜಿ ಅವರ ಕಗ್ಗ ಎಂದೆ. ಹೌದಾ, ಏನಿದರ ಅರ್ಥ ಎಂದ ಅವನಿಗೆ ನನಗೆ ತಿಳಿದ ಮಟ್ಟಿಗೆ ವಿವರಿಸಿದೆ.  ಮಂಗ ತನ್ನ ಮೈಮೇಲೆ ಸ್ವಲ್ಪ ಗಾಯವಾದರೂ ಅದನ್ನು ಕೆರೆದು ಕೆರೆದು ಹೇಗೆ ದೊಡ್ಡದು ಮಾಡುತ್ತದೆಯೋ ಹಾಗೆ ಮನುಷ್ಯರಾದ ನಾವು ನಮ್ಮ ಸಣ್ಣ ಸಣ್ಣ ದು:ಖ ನೋವನ್ನು ಮತ್ತೆ ಮತ್ತೆ ನೆನೆದು ನರಳುತ್ತೇವಲ್ಲ. ಅಂತಹ ಬದುಕಿನ ಬಗ್ಗೆ ಡಿ.ವಿ.ಜಿಯವರು ಪ್ರಶ್ನಿಸುತ್ತಾರೆ. 

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು- ಮಂಕುತಿಮ್ಮ

ಜೀವನವನ್ನು ನಾವು ಬಂದ ಹಾಗೆ ಎದುರಿಸಬೇಕು. ಕಷ್ಟ ಸುಖ ಬಂದಾಗ ಅದನ್ನು ಸಮಾನವಾಗಿ ಸ್ವೀಕರಿಸಬೇಕು.  ಬೆಟ್ಟದ ಕೆಳಗಿನ ಹುಲ್ಲಿನಂತೆ ವಿನಯ, ವಿಧೇಯತೆಯನ್ನು ಅಳವಡಿಸಿಕೊಂಡು ಮನೆಗೆ ಸುವಾಸನೆ ಬೀರುವ ಮಲ್ಲಿಗೆಯಂತೆ ಮೃದು ನಡೆ-ನುಡಿಯಿಂದ ಬಾಳಬೇಕು. ಜೀವನದಲ್ಲಿ ವಿಧಿ ನೀಡುವ ಕಷ್ಟಗಳೆಂಬ ಮಳೆಗೆ ಹೆದರದೆ. ವಿಚಲಿತನಾಗದೆ ಕಲ್ಲಿನಂತಿರಬೇಕು, ನೊಂದವರಿಗೆ, ಬಡವರಿಗೆ ಬೆಲ್ಲ ಸಕ್ಕರೆಯಂತೆ ಸಿಹಿಯಾಗಿ, ಪ್ರೀತಿಯನ್ನು ತೋರಬೇಕು. ಬಡವ-ಬಲ್ಲಿದರೆನ್ನದೆ ಎಲ್ಲರಲ್ಲಿ ಒಂದಾಗಿ ಬಾಳಬೇಕು ಎಂಬ ಜೀವನತತ್ವವನ್ನು ಡಿ.ವಿ.ಜಿ ಅವರು ಸಾರುತ್ತಾರೆ.

ಬದುಕಿನ ಬವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಬೇಕೆಂದು ಸೂಚ್ಯವಾಗಿ ತಿಳಿಸುತ್ತಾರೆ. ಹೌದು ಸೂರಿ ನೀನು ಇಷ್ಟೆಲ್ಲ ಹೇಳಿದ ಮೇಲೆ ಶಾಲೆಯಲ್ಲಿ ಓದಿದ ಕಗ್ಗಗಳ ನೆನಪಾಯಿತು. ಹಾಗಿದ್ದರೆ ಅವರ ಬಗ್ಗೆ ನಿನಗೆ ಇನ್ನೇನು ಗೊತ್ತಿದೆ ಹೇಳು ನೋಡೋಣ ಎಂದೆ. ಇಲ್ಲಪ್ಪ ಅದೆಲ್ಲ ಮರೆತು ಹೋಗಿದೆ. ಈಗೆಲ್ಲಿ ನೆನಪು, ನಿನಗೆ ಗೊತ್ತಿರುವುದನ್ನು ಹೇಳು ಅಂದ ನನ್ನ ಸ್ನೇಹಿತ. ನನಗೂ ಡಿ.ವಿ.ಜಿ ಅವರೆಂದರೆ ಬಹಳ ಅಚ್ಚುಮೆಚ್ಚು. ಅವರ ಕಗ್ಗವೆಂದರೆ ಅತಿ ಪ್ರೀತಿ. ಅವರ ಬಗ್ಗೆ ಹೇಳಲು ತುಂಬಾ ವಿಷಯಗಳಿವೆ. ಸಂಕ್ಷಿಪ್ತವಾಗಿ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳು. 

ಡಿ.ವಿ.ಜಿ ಅವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ೧೮೮೭ರ ಮಾರ್ಚ್ ೧೭ರಂದು ಈಗಿನ ಕೋಲಾರ ಜಿಲ್ಲೆಯ ಮುಳಿಬಾಗಿಲು ತಾಲೂಕಿ( ಅಗಿನ ಮೈಸೂರು ರಾಜ್ಯ) ನಲ್ಲಿ  ಅವರ ಜನನವಾಯಿತು. ವೆಂಕಟರಮಣಯ್ಯ ಹಾಗೂ ಅಲಮೇಲಮ್ಮ ಅವರ ಮಾತಾಪಿತರು. ಅವರ ಮಾವ ತಿಮ್ಮಪ್ಪ ಹಾಗೂ ಅಜ್ಜಿ ಸಾಕಮ್ಮ (ತಾಯಿಯ ತಾಯಿ) ಬಾಲ್ಯದಲ್ಲಿ ಇವರ ಮೇಲೆ ಗಾಢವಾದ ಪ್ರಭಾವ ಬೀರಿದವರು.ಮೈಸೂರಿನ ಮಹಾರಾಜ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಲಿಲ್ಲ. ಮುಂದೆ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲಿಲ್ಲ. ಆದರೆ ಅವರು ಎಂದಿಗೂ ನಿರಾಶವಾದಿಯಲ್ಲ. ಅವರು ಮುಂದೆ ಕಠಿಣ ಪರಿಶ್ರಮದಿಂದ ಖಾಸಗಿಯಾಯಾಗಿ ವೇದ, ವೇದಾಂತ, ಸಂಸ್ಕ್ರತ, ರಾಮಾಯಣ, ಮಹಾಭಾರತ, ರಾಜ್ಯಶಾಸ್ತ್ರ, ತತ್ವಶಾಸ್ತ್ರಗಳೊಂದಿಗೆ ದೇಶದ ಇತರ ಭಾಷೆಗಳನ್ನು ಕಲಿತುಕೊಂಡರು. ಇದರಿಂದ ಅಪಾರವಾದ ಜ್ಞಾನವನ್ನು ಗಳಿಸಿಕೊಂಡರು. ಆದ್ದರಿಂದಲೇ ಡಿ.ವಿ.ಜಿಯವರು ಅಧ್ಯಯನಶೀಲ ಮನಸ್ಸು ನಮ್ಮದಾಗಬೇಕೆಂದು ಹೇಳುತ್ತಿದ್ದರು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವಂತೆ ಅವರು ಸಲಹೆ ನೀಡುತ್ತಿದ್ದರು.

ನಂತರ ಇವರು ಶಿಕ್ಷಕರಾಗಿ, ತದನಂತರ ಕೋಲಾರ ಚಿನ್ನದ ಗಣಿಯಲ್ಲಿ ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿಗೆ ಬಂದ ಡಿ.ವಿ.ಜಿಯವರು ’ಸೂರ್ಯೋದಯ’ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. ಆದರೆ ಕಾರಣಾಂತರದಿಂದ ಆ ಪತ್ರಿಕೆ ಮುಚ್ಚಿಹೋಯಿತು. ಹಲವಾರು ಪತ್ರಿಕೆಗಳಿಗೆ ಅವರು ಆಗ ಲೇಖನಗಳನ್ನು ಬರೆಯುತ್ತಿದ್ದರು. ಆಂಗ್ಲ ಪತ್ರಿಕೆಗೂ ಲೇಖನಗಳನ್ನು ಬರೆದರು. ’ಮೈಸೂರು ಟೈಮ್ಸ್’ ಎಂಬ ಆಂಗ್ಲ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ದಿವಾನ್ ರಂಗಾಚಾರ್ಯರ ಬಗ್ಗೆ ಅವರು ಬರೆದ ಲೇಖನದಿಂದ ಅವರ ಜೀವನಕ್ಕೆ ಹೊಸ ತಿರುವು ದೊರೆಯಿತು. ನಂತರ ಬರವಣಿಗೆಯನ್ನು ಕೇವಲ ಹವ್ಯಾಸವನ್ನಾಗಿ ಸ್ವೀಕರಿಸದೆ ವೃತ್ತಿಯನ್ನಾಗಿಸಿಕೊಂಡು ಸತತವಾಗಿ ಅಧ್ಯಯನ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿಸಿಕೊಂಡರು. ಅನುವಾದ, ಪ್ರಬಂಧ, ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಮಕ್ಕಳ ಕಥೆ, ಕಾವ್ಯ, ನಾಟಕ, ಧರ್ಮಜಿಜ್ಞಾಸೆ ಮೊದಲಾದ ವಿಷಯಗಳಲ್ಲಿ ಅಧ್ಯಯನಪೂರ್ಣ ಬರವಣಿಗೆಗೆಳು, ಪುಸ್ತಕಗಳು ಪ್ರಕಟವಾದವು. ’ಬಾಳಿಗೊಂದು ನಂಬಿಕೆ, ದೇವರು, ರಾಜ್ಯಶಾಸ್ತ್ರ, ಮ್ಯಾಕ್‌ಬೆತ್, ಭಗವದ್ಗೀತಾ ತಾತ್ಪರ್ಯ, ಈಸೋಪನಿಷತ್, ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ, ಓಮರನ ಹೊಸಗೆ ಮುಂತಾದವು ಪ್ರಮುಖ ಕೃತಿಗಳು. ಮಂಕುತಿಮ್ಮನ ಕಗ್ಗ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಇಂತಹ ಮನಸ್ಸನ್ನು ಮುಟ್ಟುವ, ಬುದ್ದಿಯನ್ನು ತಟ್ಟುವ, ಹೃದಯದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಶಕ್ತಿಯನ್ನೊಳಗೊಂಡ ಕಗ್ಗ ರಚಿಸಿದ ಕೀರ್ತಿ ಡಿ.ವಿ.ಜಿ ಅವರದ್ದು. ತಾವು ನಂಬಿದ್ದನ್ನು ಅನುಭವಿಸಿದ್ದನ್ನು ಹಾಗೂ ಓದಿ ಕೇಳಿ, ತಿಳಿದಿದ್ದನ್ನು ತಿಳಿಯಾಗಿ ಎಲ್ಲರಿಗೂ ತಿಳಿಯುವಂತೆ ತಿಳಿಸಿದ ಅವರ ಕಗ್ಗಗಳು ವಿಶಿಷ್ಟವಾದದ್ದು. ಇವುಗಳ ತುಂಬ ಸ್ಪುರಿಸುವ ಅಧ್ಯಾತ್ಮಿಕ ಹಾಗೂ ಅನುಭಾವಗಳ ಸಂಚಾರ ನೇರವಾಗಿ ಮನಸ್ಸಿಗೆ ತಟ್ಟುತ್ತವೆ. ಆದ್ದರಿಂದಲೇ ಅದು ಓದುಗನಿಗೆ ಇಷ್ಟವಾಗುತ್ತದೆ.

ಇದು ಅವರ ಸಾಹಿತ್ಯ ಪರಿಚಾರಿಕೆಯಾದರೆ ಅವರೊಬ್ಬ ಉತ್ತಮ ಸಮಾಜಸೇವಕರೂ ಅಗಿದ್ದರು ಎನ್ನುವುದು ಬಹುಶ: ನಿನಗೆ ಗೊತ್ತಿರಲಿಕ್ಕಿಲ್ಲ. ಅವರು ೧೯೩೫ರಲ್ಲಿ ’ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯನ್ನು ಆರಂಭಿಸಿದರು. ತಮ್ಮ ಪುಸ್ತಕದಿಂದ ಬಂದ ಆದಾಯ, ತಮಗೆ ದೊರೆತ ಪುರಸ್ಕಾರದ ಹಣ, ಜೊತೆಗೆ ತಮ್ಮ ಪುಸ್ತಕದ ಹಕ್ಕನ್ನು ತನ್ನ ಪರಿವಾರಕ್ಕೆ ನೀಡದೆ ಅವರು ಈ ಸಂಸ್ಥೆಗೆ ನೀಡಿದ್ದು ಸಣ್ಣ ಮಾತಲ್ಲ. ಹೌದೇನು? ತನ್ನ ಸರ್ವಸ್ವವನ್ನು ಧಾರೆಯೆರೆದ ಇವರನ್ನು ಸರಕಾರ ಗೌರವಿಸಲಿಲ್ಲವೇ? ಎಂದು ನನ್ನ ಸ್ನೇಹಿತ ಮತ್ತೆ ಮಧ್ಯೆ ಬಾಯಿ ಹಾಕಿದ. ನೋಡು ಗೆಳೆಯ ಡಿ.ವಿ.ಜಿ ಅವರು ಎಂದಿಗೂ ಪ್ರಶಸ್ತಿ, ಪುರಸ್ಕಾರದ ಹಿಂದೆ ಬಿದ್ದವರಲ್ಲ. ಅವರ ಮುಖ್ಯ ಧ್ಯೇಯ ಉನ್ನತ ಜೀವನಾದರ್ಶಗಳೇ ಆಗಿತ್ತು. ಅದನ್ನೇ ಅವರು ತಮ್ಮ ಕಗ್ಗದಲ್ಲಿ ಪಡಿಮೂಡಿಸಿದ್ದಾರೆ. ಬದುಕಿನಲ್ಲಿ ಉಲ್ಲಾಸ ತುಂಬುವುದು, ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವುದು, ಧೈರ್ಯ ತುಂಬುವುದು ಅವರ ಕಗ್ಗದ ಮೂಲ ಉದ್ದೇಶವಾಗಿತ್ತು. ಅದನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು ಕೂಡಾ. ಆದ್ದರಿಂದಲೇ ಅವರನ್ನು ’ಆಧುನಿಕ ಬೃಹ್ಮ’ ಎಂದು ಕರೆದರು.

ಡಿ.ವಿ.ಜಿ ಅವರು ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಡಿ.ವಿ.ಜಿ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ ಡಿ.ಲಿಟ್ ಪದವಿ ನೀಡಿ ಗೌರವಿಸಿತು. ೧೯೬೭ರಲ್ಲಿ ಶ್ರೀಮದ್ಭಾಗವತಾ ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ೧೯೭೪ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಸಸ್ತಿ ನೀಡಿ ಗೌರವಿಸಿತು. ೧೯೮೮ರಲ್ಲಿ ಡಿ.ವಿ.ಜಿ ಅವರ ಅಂಚೆಚೀಟಿಯೂ ಬಿಡುಗಡೆಗೊಂಡಿತು. ಬ್ಯೂಗಲ್ ಪಾರ್ಕಲ್ಲಿ ಅವರ ಪ್ರತಿಮೆಯೂ ಇದೆ. ೧೯೭೦ರಲ್ಲಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು  ೯೦,೦೦೦ರೂ ನಗದು ಬಹುಮಾನವನ್ನು ಅವರ  ಸಾಹಿತ್ಯ ಸೇವೆಗೆ ಪುರಸ್ಕಾರವಾಗಿ ನೀಡಿದ್ದರು. ಆದರೆ ಉದಾರಿಯಾದ ಡಿ.ವಿ.ಜಿಯವರು ಆ ಮೊತ್ತವನ್ನು ತಾನು ಸ್ಥಾಪಿಸಿದ ’ಗೋಖಲೆ ಟ್ರಸ್ಟ್’ಗೆ ದಾನವಾಗಿ ನೀಡಿದ್ದರು.

ಡಿ.ವಿ.ಜಿ ಅವರ ನಾಲ್ಕು ಸಾಲಿನ ಕಗ್ಗಗಳಲ್ಲಿ ಅಗಾಧವಾದ ಅರ್ಥಗಳು ಅಡಗಿವೆ. 

 ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲಿಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ 
ದಕ್ಕುವುದೇ ಜಸ ನಿನಗೆ ’ಮಂಕುತಿಮ್ಮ
’ 

ಈ ಕಗ್ಗವನ್ನೇ ನೋಡು. ನಾವು ಆಲೋಚಿಸದ ವಿಷಯಗಳ ಕುರಿತು ಅವರು ಬೆಳಕು ಚೆಲ್ಲುತ್ತಾರೆ. ಅಕ್ಕಿಯನ್ನು ಬೇಯಿಸಿದರೆ ಅದು ಅನ್ನವಾಗಿ ಮಾರ್ಪಡುತ್ತದೆ ಎಂದು ಮೊದಲು ಯಾರು ಕಂಡು ಹಿಡಿದವರೆಂದು ಯಾರಿಗಾದರೂ ಗೊತ್ತಿದೆಯೋ?, ಅಥವಾ ನಾವು ಬರೆಯುವಂತಹ ನಮ್ಮ ಪ್ರೀತಿಯ ಅಕ್ಷರಗಳನ್ನು ಮೊದಲು ಬರೆದವನಾರು ಎಂದೇನಾದರೂ ಗೊತ್ತಿದೆಯೇ?, ಈ ಜಗತ್ತಿನಲ್ಲಿ ತನ್ನ ಬಂಧುಗಳು ಯಾರು ಎಷ್ಟು ಎಂಬುದನ್ನು ಲೆಕ್ಕವಿರಿಸಿದವರು ಎಷ್ಟು ಜನರಿದ್ದಾರೆ ಹೇಳು? ಕೆಲವರು ಹೆಸರು, ಕೀರ್ತಿಗಾಗಿ ಏನನ್ನೂ ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಅಂತಹವರಿಗೆ ಡಿ.ವಿ.ಜಿ ಅವರು ಸೂಚ್ಯವಾಗಿ ಬುದ್ಧಿವಾದವನ್ನು ಹೇಳುತ್ತಾರೆ. ಕೀರ್ತಿ ಎನ್ನುವುದು ನಿನಗೆ ಬೇಕೇ? ಅದು ದೊರೆಯುವುದೂ ಅಷ್ಟು ಸುಲಭವಲ್ಲ. ಅದಕ್ಕಾಗಿ ಸತತ ಪ್ರಯತ್ನ ಮಾಡಬೇಕು ಎಂಬ ತತ್ವ ಅಡಗಿರುವುದನ್ನು  ಎಂದು ನಾವು ಅರ್ಥೈಸಿಕೊಳ್ಳಬಹುದು. 

’ಮಂಕುತಿಮ್ಮನ ಕಗ್ಗ’ ಎನ್ನುವುದು ಬಹಳ ವಿಸ್ತಾರವಾದ ವಿಷಯ. ಅದರ ಬಗ್ಗೆ ಹೇಳುವುದು, ಬರೆಯುವುದು ಎಂದರೆ ಅದು ದುಸ್ಸಾಹಸವೇ ಸರಿ. ಅವರು ಬರೆದ ಎಲ್ಲ ಕಗ್ಗಗಳೂ ಸುಲಭದಲ್ಲಿ ಅರ್ಥವಾಗುವುದಿಲ್ಲ. ಅದರಲ್ಲಿ ಅನೇಕ ಗೂಡಾರ್ಥಗಳೂ ಇವೆ. ಅದನ್ನು ಸರಿಯಾಗಿ ಓದಿ ಮನನ ಮಾಡಿಕೊಂಡಾಗ ಅರ್ಥೈಸಿಕೊಳ್ಳಬಹುದು. ಇಂದು ಕನ್ನಡ ಓದುವವರು, ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ. ಕಗ್ಗದ ಮರ್ಮವನ್ನು ನಮ್ಮ ಮುಂದಿನ ಪೀಳಿಗೆಗೂ ಅರ್ಥೈಸುವಂತೆ ಮಾಡಬೇಕಾಗಿದೆ. ಕಗ್ಗವನ್ನು ಎಲ್ಲರೂ ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡುವಲ್ಲಿ ಹಿರಿಯ ಸಾಹಿತಿಗಳು, ಕವಿಗಳು, ಮೇಧಾವಿಗಳು ಮಾಡಬೇಕಾಗಿದೆ. ನಾವು ಕರ್ನಾಟಕದವರು. ನಾವೇ ಕನ್ನಡ ಓದಲಿಲ್ಲಾಂದ್ರೆ, ಇಂಥ ಅಮೂಲ್ಯ ಕೃತಿಗಳನ್ನು ಓದುವವರಾರು? ನಮ್ಮಲ್ಲಿ ಇಂದು ಆಂಗ್ಲ ವ್ಯಾಮೋಹ ಹೆಚ್ಚುತ್ತಿದ್ದು ಕನ್ನಡ ಪರ ಕಾಳಜಿ ಕಡಿಮೆಯಾಗುತ್ತಿರುವುದು ಖೇದನೀಯ ಸಂಗತಿ ಅಲ್ಲವೇನೋ? ಕನ್ನಡವನ್ನು ಕಲಿಯದೇ ಇದ್ದರೆ ನಮ್ಮ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳನ್ನು ಓದುವುದರಿಂದ ನಾವು ವಂಚಿತರಾದಂತೆಯೇ. ಮಂಕುತಿಮ್ಮನ ಕಗ್ಗವಂತೂ ಕನ್ನಡದ ಭಗವದ್ಗೀತೆ ಅಂತಾರೆ. ಇದು ಅರ್ಥೈಸಲು ಕಠಿಣ ಅನಿಸಿದರೆ ಶಿಕ್ಷಕರು ಮಕ್ಕಳಿಗೆ ಅದರ ಸಾರವನ್ನು ತಿಳಿಯಪಡಿಸಬೇಕು. ಆ ಮೂಲಕ ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಬೇಕು. ಅಷ್ಟೇ ಅಲ್ಲ ನಾವು ಓದಿದ ಒಳ್ಳೆಯ ಪುಸ್ತಕದ ಬಗ್ಗೆ ಸ್ನೇಹಿತರ,  ಕುಟುಂಬದವರ ಜೊತೆ ಚರ್ಚಿಸಬೇಕು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದಂತೆ ನಮ್ಮಲ್ಲಿ ಜ್ಞಾನಶಕ್ತಿ ಹೆಚ್ಚುತ್ತದೆ. ನಮ್ಮಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗುತ್ತದೆ. 

ಇರಲಿ ಬಿಡು ಈಗ ನಾವು ಮತ್ತೆ ಕಗ್ಗದ ಕಡೆ ಬರೋಣ. ನಾನು ನಿನ್ನಲ್ಲಿ ಹೇಳಿದೆನಲ್ಲ ಮಂಕುತಿಮ್ಮನ ಕಗ್ಗ ಅದು ಆದಿ ಪ್ರಾಸದಲ್ಲಿ ಬರೆದಿರೋದು. ಸುಮಾರು ೯೪೫ ಪದ್ಯಗಳು ಅಥವಾ ನಾವು ಕಗ್ಗ ಅಂತ ಏನು ಕರೆಯುತ್ತೇವೆಯೋ ಅದು ಇದರಲ್ಲಿ ಇದೆ. ಇದನ್ನು ಮುಕ್ತಕಗಳು, ಚೌಪದಿ ಅಂತಾನು ಅನ್ನುತ್ತಾರೆ. ಡಿ.ವಿ.ಜಿ ಅವರು ಒಂದು ಕಡೆ
 
ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರಿವಿಗೆಟುಕುವೊಲೊಂದಾತ್ಮನಯವ
ಹವಣಿಸಿದನಿದನು ಪಾಮರಜನರ ಮಾತಿನಲಿ
ಕವನ ನೆನಪಿಗೆ ಸುಲಭ-ಮಂಕುತಿಮ್ಮ

 ನಾನು ಕವಿಯಲ್ಲ. ವಿಶೇಷವಾದ ಜ್ಞಾನವುಳ್ಳವನಲ್ಲ. ಈ ಕಗ್ಗವನ್ನು ನಾನು ಸಾಮಾನ್ಯ ಜನರಿಗಾಗಿ ಬರೆದಿರುವೆನು. ಇದರಲ್ಲಿ ಜೀವನ ಸತ್ಯ, ಸತತ ಓದು ಹಾಗೂ ಅನುಭವದ ಸಾರವಿದೆ ಎಂದು ಹೇಳಿಕೊಂಡಿದ್ದಾರೆ. ಈ ರೀತಿ ನಾಲ್ಕು ಸಾಲುಗಳಲ್ಲಿ ಬರೆದುದು ಓದಿ ನೆನಪಿಡುವುದು ಕೂಡಾ ಸುಲಭ ಎಂದು ತಾನು ಆರಿಸಿಕೊಂಡ ಕಗ್ಗದ ಶೈಲಿಯ ಬಗ್ಗೆಯೂ ಹೇಳಿದ್ದಾರೆ. 

ನೋಡು ಈ ನಾಲ್ಕೇ ಸಾಲಿನ ಕಗ್ಗದಲ್ಲಿ ಬಹಳ ಅರ್ಥವ್ಯಾಪ್ತಿ ಅಡಗಿದೆ. ನಾವು ಮತ್ತೆ ಮತ್ತೆ ಓದಿದಾಗ ಹೊಸ ಹೊಸ  ಅರ್ಥಗಳು  ಹೊಳೆಯುತ್ತದೆ. ಅಥವಾ ಬೇರೆ ಬೇರೆ ಓದುಗರು ಅದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಬಹುದು. ನಮ್ಮ ಅನುಭವ, ಚಿಂತನೆಯನ್ನೇ ಈ ಕಗ್ಗಗಳು ಬಿಂಬಿಸುತ್ತವೆ. ಈ ಕಗ್ಗವನ್ನೇ ನೋಡು

ಗಿಡದಿ ನಗುತ್ತಿರುವ ಹೂವು ಪ್ರಕೃತಿಸಖನಿಗೆ ಚಂದ
ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ
ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ
ಬಿಡಿಗಾಸು ಹೂವಳಿಗೆ -ಮಂಕುತಿಮ್ಮ

ಇಲ್ಲಿ ಪ್ರತಿಮೆ ಕೇವಲ ಒಂದು ಹೂವು. ಅದೇ ಹೂವು ಒಂದೊಂದು ಕಡೆಯಲ್ಲಿ ಒಬ್ಬೊಬ್ಬರಿಗೆ ಚಂದ. ಪ್ರಕೃತಿಪ್ರಿಯರಿಗೆ ಅದು ಗಿಡದಲ್ಲಿ ಚಂದ ಕಂಡರೆ, ಯುವಕ ಅದನ್ನು ತನ್ನ ಮಡದಿಯ ಮುಡಿಯಲ್ಲಿ ಕಂಡು ಆ ಸಂತೋಷವನ್ನು ಕಾಣುತ್ತಾನೆ. ದೇವರ ಅರ್ಚನೆಯ ನಂತರ ಆ ದೇವರ ಮುಡಿಯಲ್ಲಿನ ಹೂವನ್ನು ದೈವಭಕ್ತರು ಭಕ್ತಿ ಶ್ರದ್ಧೆಯಿಂದ ಕಾಣುತ್ತಾರೆ. ಆದರೆ ಆ ಹೂವನ್ನು ಮಾರುವ ಹೂವಾಡಗಿತ್ತಿಗೆ ಅದರಿಂದ ಬರುವ ಬಿಡಿಗಾಸು ಮಾತ್ರ ಮುಖ್ಯವಾಗಿರುತ್ತದೆ. ಅದು ಆಕೆಯ ಜೀವನ ನಿರ್ವಹಣೆಯ ಮಾರ್ಗವಾಗಿರುತ್ತದೆ.ಇಂತಹ ತುಂಬ ಅರ್ಥ ಕೊಡುವ ನಾಲ್ಕೇ ಸಾಲಿನ ಕಗ್ಗಗಳು ಪ್ರತಿಯೊಬ್ಬರ ಪ್ರೀತಿಯನ್ನು ಗಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನೀನು ನಿನ್ನ ಜೀವನದ ಜಂಜಾಟದಲ್ಲಿ ಅದನ್ನು ಮರೆತಿರಬಹುದು. ಆದರೆ ಅದರಲ್ಲಿನ ತತ್ವಗಳನ್ನು ನೀನು, ನಾನು, ಪ್ರತಿಯೊಬ್ಬರೂ ಅನುಭವಿಸುತ್ತಾರೆ. ನಾನು ಹೇಳಿದ ಈ ಎಲ್ಲಾ ವಿಷಯಗಳಲ್ಲಿ ತಪ್ಪು ಕಂಡರೆ ಕ್ಷಮೆ ಇರಲಿ. ಆ ತಪ್ಪುಗಳನ್ನು ಮತ್ತೆ ಮತ್ತೆ ಸರಿಪಡಿಸುವ ಭಾಗ್ಯ ದೊರೆಯಲಿ. ಕನ್ನಡ ಸಾಹಿತ್ಯದ ಇಂತಹ ಅಮೂಲ್ಯ ಕೃತಿಗಳನ್ನು, ಕೃತಿಕಾರರನ್ನು ಸದೈವ ನೆನೆಯುವುದು ನಮ್ಮ ಕರ್ತವ್ಯ.  ಒಬ್ಬ ಮಹಾನ್ ತತ್ವಜ್ಞಾನಿ, ಪತ್ರಕರ್ತ, ಸಾಹಿತಿ, ಸಮಾಜಸೇವಕರಾಗಿದ್ದ  ಡಿವಿ.ಜಿ ಅವರು ೧೯೭೫ರ ಅಕ್ಟೋಬರ್ ೭ರಂದು ಇಹಲೋಕ ತ್ಯಜಿಸಿದರು. 

 ನನಗೆ ಏನಾದರೂ ಬೇಸರ ಆದರೆ ನಾನು ಈ ಕಗ್ಗಗಳನ್ನು ನೆನಪಿಸಿಕೊಳ್ಳುತ್ತೇನೆ. ಮನಸ್ಸಿಗೆ ನೋವಾದಾಗ ಕಗ್ಗಗಳನ್ನು ಮೆಲುಕು ಹಾಕುತ್ತಾ ಅದರಲ್ಲಿ ಅಡಗಿರುವ ತತ್ವವನ್ನು  ಜೀವನದಲ್ಲಿ ಅಳವಡಿಸುವ ಪ್ರಯತ್ನ ಮಾಡುತ್ತೇನೆ. ಹಾಗೆ ಇಂದು ನಿನ್ನಲ್ಲಿ ಈ ಎಲ್ಲಾ ವಿಷಯಗಳನ್ನು ಹೇಳಿಕೊಂಡೆ ಕಣೋ. ಸಮಯದ ಅರಿವೇ ಆಗಲಿಲ್ಲ. ನಡಿ, ನಮ್ಮ ಕೆಲಸದ ಸಮಯವಾಯಿತು. ನನಗೆ ಸಮಯ ಸಿಕ್ಕಾಗ ಓದುತ್ತೇನೆ. ನೀನು ಕೂಡಾ ಓದು. ಕನ್ನಡವನ್ನು, ಕನ್ನಡದ ಮಹಾನ್ ಸಾಹಿತಿಗಳನ್ನು ಮರೆಯದೇ ನೆನಪಿಸಬೇಕಾದುದು ನಮ್ಮ ಕರ್ತವ್ಯ. ಸಿರಿಗನ್ನಡಂ ಗೆಲ್ಗೆ.                         

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
khushi katwe
7 years ago

very informative

lathamani m
lathamani m
7 years ago

ಬದುಕನ್ನು ಅರ್ಥ ಮಾಡಿಕೊ೦ಡು ಬದುಕಲ್ಲು ಒ೦ದು ಸು೦ದರ ಕವನಗಳು

Lata VD
Lata VD
3 years ago

ಸರ ನಮಸ್ಕಾರಗಳು .
ನೀವು ಬರೆದ ಮಂಕುತಿಮ್ಮ ನ ಕಗ್ಗಗಳು ತುಂಬಾ ಸರಳ ಮತ್ತು ಅರ್ಥ ಪೂರ್ಣ ವಾಗಿದೆ ….

3
0
Would love your thoughts, please comment.x
()
x