ಬದುಕು ಆ ದೇವರು ಕರುಣಿಸಿದ ಅತ್ಯಮೂಲ್ಯ ಕಾಣಿಕೆ ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಮಾನವ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ ಹಾಗೆಯೇ ಅವನ ಬದುಕಿನ ಶೈಲಿ ಇತರ ಪ್ರಾಣಿ ಪಕ್ಷಿಗಳಿಗಿಂತ ಸುಧಾರಿಸಿದೆ. ಪ್ರಕೃತಿಯ ಆಗುಹೋಗುಗಳ ಜೊತೆಗೆ ಕಾಲಕ್ಕೆ ತಕ್ಕಂತೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಎಲ್ಲ ರೀತಿಯ ಬದಲಾವಣೆಯ ಜೊತೆಗೆ ಮನುಷ್ಯನ ಜೀವನ ಸಾಗುತ್ತಾ ಬಂದಿದೆ. ಅನಾದಿ ಕಾಲದಿಂದ ಇಂದಿನವರೆಗೆ ಹಲವಾರು ಆಯಾಮಗಳಲ್ಲಿ ವ್ಯತ್ಯಾಸಗಳನ್ನು, ವೈಪರೀತ್ಯಗಳನ್ನು, ಬದಲಾವಣೆಗಳನ್ನು, ಸುಧಾರಣೆಗಳನ್ನು ಕಾಣುತ್ತಾ ಬಂದಿದ್ದಾನೆ. “ಬೆದಕಾಟ ಬದುಕೆಲ್ಲ ಚಣಚಣವು ಹೊಸಹಸಿವು ಅದಕ್ಕಾಗಿ ಇದಕ್ಕಾಗಿ ಮತ್ತೊಂದು ಕ್ಕಾಗಿ” ಬಡಿದಾಡುವ ನಾವುಗಳು ನಮ್ಮ ಸುತ್ತಲಿನ ಬದಲಾವಣೆಗಳಿಗೆ ತಕ್ಕಂತೆ ನಮ್ಮ ಜೀವನ ಶೈಲಿಯಲ್ಲಿ ನಮ್ಮ ದೃಷ್ಟಿಕೋನದಲ್ಲಿ ಹೊಸತನವನ್ನು ಕಾಣುತ್ತಾ ಸಾಗಬೇಕು,ಬೇರೆ ಜೀವಿಗಳಿಗಿಂತ ವಿಶೇಷ ಎನಿಸಿಕೊಂಡಿರುವ ನಾವು ಉತ್ತಮವಾದ ಕಾರ್ಯ ಸಾಧನೆಯ ಮೂಲಕ ಏನಾದರೂ ವಿಶೇಷವಾಗಿರುವ ಅತ್ಯಮೂಲ್ಯ ಕಾಣಿಕೆಯನ್ನು ಈ ಜಗತ್ತಿಗೆ ನೀಡಿ ಹೋಗಬೇಕು ಅಂದಾಗ ನಮ್ಮ ಬದುಕು ಸಾರ್ಥಕವೆನಿಸುತ್ತದೆ. ಹುಟ್ಟು ಸಾವು ಈ ಎರಡರ ಮಧ್ಯದ ಜೀವನ ಅರ್ಥಪೂರ್ಣವಾಗಿ ಅನುಕರಣೀಯವಾಗಿರಬೇಕು.
“ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಹರುಷಕ್ಕಿದೆ ದಾರಿ “ಎಂಬಂತೆ ಇದ್ದುದರಲ್ಲಿ ಸಂಭ್ರಮಿಸುವ ಜೀವನ ಶೈಲಿ ನಮ್ಮದಾಗಬೇಕು.ಇಲ್ಲಸಲ್ಲದ ನೆಪ ಒಡ್ಡುತ್ತಾ ಅದು ಬೇಕು ಇದು ಬೇಕು ಮತ್ತೊಂದು ಬೇಕೆನ್ನುತ್ತಾ ಕಾಲಹರಣ ಮಾಡುತ್ತ ಹೋದರೆ ಬದುಕು ಅರ್ಥಹೀನವಾಗಿ ಸಾಗುತ್ತದೆ.
” ಬದಲಾವಣೆ ಜಗದ ನಿಯಮ” ವೆಂಬಂತೆ ನಮ್ಮ ಸುತ್ತಲಿನ ಪ್ರಾಪಂಚಿಕ ಜಗತ್ತಿನಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತಾ ಹೋಗುತ್ತೇವೆ ಕಾರಣ ಅದೆಲ್ಲದರ ಮಧ್ಯೆ ನಾವು ಬದುಕುತ್ತೇವೆ ಎಂದಾಗ ಅರಿವಿನೊಂದಿಗೆ ವಾಸ್ತವಿಕತೆಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಕಷ್ಟ ಸುಖ ನೋವು ನಲಿವು ಆಸೆ ನಿರಾಸೆ ಹೀಗೆ ಹಲವಾರು ರೀತಿಯ ವೈರುಧ್ಯಗಳು ನಮ್ಮ ಮಧ್ಯೆ ಸಾಗುತ್ತವೆ ಈ ಥರಹದ ಎಲ್ಲ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುತ್ತಾ ಧೈರ್ಯದಿಂದ ಎದುರಿಸುವ ಎದೆಗಾರಿಕೆ ನಮ್ಮದಾಗಬೇಕು. ಡಿವಿಜಿಯವರು ಹೇಳುವ ಹಾಗೆ ,
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ।।
ಮದುವೆಗೋ ಮಸಣಕೋ ಹೋಗೆಂದ ಕೆಡೆಗೋಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ।।
ಹೀಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗ ಇಡೀ ಜೀವನದ ಸಾರವನ್ನು ನಮಗೆ ತಿಳಿಸುತ್ತದೆ ನಮ್ಮ ಈ ಜೀವನ ಒಂದು ಜಟಕಾ ಬಂಡಿಯಂತೆ, ಅದನ್ನು ಓಡಿಸುವ ಚಾಲಕ ವಿಧಿ, ನೀನು ಆ ಜಟಕಾ ಬಂಡಿಗೆ ಕಟ್ಟಿರುವ ಕುದುರೆ, ಆದರೆ ಈ ಜಟಕಾ ಬಂಡಿಯಲ್ಲಿ ಕುಳಿತಿರುವ ಪ್ರಯಾಣಿಕರು ಬಯಸಿದಂತೆ ಓಟವಲ್ಲ, ಅದು ಎಲ್ಲ ವಿಧಿಯ ನಿಯಮ, ವಿಧಿ ಎಲ್ಲಿಗೆ ಕರೆದುಕೊಂಡು ಒಯ್ಯುತ್ತದೆ ಅಲ್ಲಿಗೆ ಹೋಗಬೇಕು.ಅದು ಮದುವೆಗಾದರೂ ಕರೆದುಕೊಂಡು ಹೋಗಬಹುದು ಅಥವಾ ಸ್ಮಶಾನ ಕ್ಕಾದರೂ ಕರೆದುಕೊಂಡು ಹೋಗಬಹುದು ಒಂದು ಸಂತೋಷದ ದಾರಿ ಮತ್ತೊಂದು ದುಃಖದ ಹಾದಿ ಆದರೆ ನೀನು ಆ ವಿಧಿ ಹೇಳಿದ ಕಡೆಗೆ ಹೋಗಲೇಬೇಕು ಈ ಸಂದರ್ಭದಲ್ಲಿ ನಿನ್ನ ಹೆಜ್ಜೆ ಕುಸಿದು ನೀನು ಬೀಳುವಂತಿದ್ದರೂ ಧೈರ್ಯದಿಂದಿರು, ಕಾರಣ ಕೆಳಗೆ ಗಟ್ಟಿಯಾದ ನೆಲವಿದೆ,ದೇವರಿದ್ದಾನೆ ಅದು ಅಥವಾ ದೇವರು ನಿನ್ನನ್ನು ಕಾಪಾಡುತ್ತಾನೆ. ಇದೆಲ್ಲದರ ತಾತ್ಪರ್ಯವಿಷ್ಟೆ ನಾವು ಈ ಜೀವನದ ಸನ್ನಿವೇಶದಲ್ಲಿ ಹಲವಾರು ರೀತಿಯ ಏಳು ಬೀಳನ್ನು ಕಾಣುತ್ತಾ ಸಾಗುತ್ತೇವೆ ಬಿದ್ದಾಗ ಧೃತಿಗೆಡದೆ ಗೆದ್ದಾಗ ಹಿಗ್ಗದೆ ಮುನ್ನುಗ್ಗು ತ್ತಿರಬೇಕು.
“ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ಎಂತಹದೇ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಲು ನಮ್ಮನ್ನು ಗಟ್ಟಿಗೊಳಿಸುವುದೆ ನಮ್ಮ ಮನೋಧೈರ್ಯ. ಎಲ್ಲರದೂ ಒಂದೇ ಬದುಕು ಆದರೆ ಬದುಕಿನ ಶೈಲಿ ರೂಪರೇಷೆಗಳು ಆಯಾಮಗಳು ಮಾತ್ರ ಭಿನ್ನ ಇದೇ ನೆಲದಲ್ಲಿ ಬದುಕಿದ ಕೆಲವರು ಮಹಾತ್ಮರಾಗಿ ಉಳಿದರು ಮತ್ತೆ ಕೆಲವರು ಹೇಳಲು ಅಸ್ತಿತ್ವವೇ ಇಲ್ಲವೆಂಬಂತೆ ಬದುಕಿ ಸತ್ತರು.ಅಂದರೆ ಈ ಬದುಕಿನಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಜಾಣ್ಮೆ ಎಲ್ಲವನ್ನೂ ಉತ್ತಮವಾಗಿ ಬಳಸಿಕೊಂಡರೆ ಮಹಾತ್ಮರ ಹಾದಿಯಲ್ಲಿ ಸಾಗಬಹುದು. ಇಲ್ಲವಾದರೆ ಈ ಸುಂದರವಾದ ಬದುಕನ್ನು ನಾವೇ ಅರ್ಥಹೀನ ಗೊಳಿಸಿದಂತಾಗುತ್ತದೆ.ನಾವು ಎಷ್ಟೋ ಸಂದರ್ಭಗಳಲ್ಲಿ ವಿನಾಕಾರಣ ಮತ್ತೊಬ್ಬರನ್ನು ದೂಷಿಸುತ್ತಾ ಕೂಡುತ್ತೇವೆ ನಮ್ಮ ಆಗುಹೋಗುಗಳಿಗೆ ನಾವೇ ಕಾರಣರು ಮತ್ತೊಬ್ಬ ವ್ಯಕ್ತಿ ಅಲ್ಲ ಎಂಬ ಸತ್ಯವನ್ನು ಅರಿತುಕೊಂಡಾಗ ಮಾತ್ರ ನಮ್ಮ ಏಳಿಗೆಗೆ ನಾವೇ ರೂವಾರಿಗಳ ಗುತ್ತೇವೆ. ಇಂದು ಮಹಾತ್ಮ ರೆಂದು ಪೂಜಿಸುವ ಸಾವಿರಾರು ವ್ಯಕ್ತಿಗಳ ಜೀವನವೇನು ಸುಖದ ಸುಪ್ಪತ್ತಿಗೆಯ ಐಷಾರಾಮಿ ಬದುಕಾಗಿರಲಿಲ್ಲ, ಅವರು ಸಹ ಸಾವಿರಾರು ಸಂಕಷ್ಟಗಳನ್ನು ಮೆಟ್ಟಿ ನಿಂತು ಜೀವನದ ಸವಾಲುಗಳನ್ನು ಸಮರ್ಥವಾಗಿ ಧೈರ್ಯದಿಂದ ಎದುರಿಸಿ ತಮ್ಮ ಮನೋಬಲ ಸಾಮರ್ಥ್ಯ ದಿವ್ಯವಾದ ಆತ್ಮಜ್ಞಾನದ ಮೂಲಕ ಬಾಳಿ ಬದುಕಿ ಇಡೀ ಜಗತ್ತಿಗೆ ಮಹಾತ್ಮನೆನಿಸಿದರು. ಆ ಎಲ್ಲ ಮಹಾತ್ಮರ ಜೀವನದ ತತ್ವ ಆದರ್ಶಗಳು ಮೌಲ್ಯಗಳು ನಮ್ಮೆಲ್ಲರ ಬದುಕಿಗೆ ದಾರಿ ದೀಪದಂತಿದೆ,ಅವರ ದಿವ್ಯಜ್ಞಾನದ ಬೆಳಕಿನಲ್ಲಿ ನಮ್ಮ ಸುಂದರವಾದ ಬದುಕನ್ನು ಕಟ್ಟಿಕೊಳ್ಳೋಣ ಅಂದಾಗ ಮಾತ್ರ ನಮ್ಮ ಬದುಕಿಗೂ ಒಂದು ಹೊಸ ದಾರಿ ಕಾಣುತ್ತದೆ. ಮೌಲ್ಯಯುತವಾದ ಬದುಕು ಮಾತ್ರ ಇನ್ನೊಬ್ಬರಿಗೆ ಆದರ್ಶಮಯ ವಾಗಲು ಸಾಧ್ಯ ಮನುಷ್ಯರಾದ ನಾವು ಆ ಮೌಲ್ಯಗಳನ್ನು ಮರೆಯದಿರೋಣ, “ನನ್ನಂತೆ ಪರರು” ಎಂಬ ಭಾವನೆಯಿಂದ ಬದುಕೋಣ ಪರಸ್ಪರ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ಸಹಾನುಭೂತಿ ಸಹಕಾರ ಸಹಾಯ ಹೊಂದಾಣಿಕೆ ಮುಂತಾದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸಕಾರಾತ್ಮಕ ಚಿಂತನೆಯ ಮೂಲಕ ಬದುಕಿಗೊಂದು ಹೊಸ ಆಯಾಮ ಕಂಡುಕೊಳ್ಳೋಣ.
“ಅತಿಯಾದರೆ ಅಮೃತವೂ ವಿಷ “ಎಂಬಂತೆ ಮನುಷ್ಯ ಜೀವನದ ಇತಿಮಿತಿಯಲ್ಲಿ ಬದುಕೋಣ, ಎಂತಹದೇ ಜಾಗತಿಕ ತಲ್ಲಣಗಳು ಎದುರಾದರೂ ಸಮಚಿತ್ತದಿಂದ ವಾಸ್ತವಿಕತೆಯ ಅರಿವಿನಲ್ಲಿ “ನೀನು ಬದುಕು ಮತ್ತೊಬ್ಬರನ್ನು ಬದುಕಲು ಬಿಡು” ಎಂಬ ದಿವ್ಯ ಸಂದೇಶವನ್ನು ಪಾಲಿಸೋಣ ಅಂದಾಗ ನಮ್ಮ ಬದುಕು ಸಾರ್ಥಕತೆಯ ಹಾದಿಯಲ್ಲಿ ಸಾಗುತ್ತದೆ.
-ಸುಧಾ ಹುಚ್ಚಣ್ಣವರ