ನಮ್ಮೊಂದಿಗೆ ಸದಾ ಇದ್ದು ತುಸು ಹೆಚ್ಚಾಗೆ ನಮ್ಮನ್ನು ಹೊಗಳುತ್ತಿರುವವರನ್ನು ತುಸು ದೂರವೆ ಇಡೋಣ. ಸುಮ್ಮನೆ ಸುಮ್ಮನೆ ಹಲುಬುವವರನ್ನು ನಿರ್ಲಕ್ಷಿಸೋಣ. ಅನುಕೂಲಕ್ಕೆ ತಕ್ಕಂತೆ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳುವ ಒಂದು ವರ್ಗದ ಜನರಿವರು. ಯಾವತ್ತು ಇಂಥವರನ್ನು ನಾವು ನಿರ್ಲಕ್ಷಿಸಿಕೊಂಡು ಮುಂದುವರಿಯುತ್ತೇವೆಯೊ ಅದು ನಮ್ಮಲ್ಲಿನ ಕ್ರೀಯಾಶೀಲತೆಯನ್ನು ಸಾಣೆ ಹಿಡಿಯುತ್ತಲೆ ನಾವು ಮುನ್ನಡೆಯುತಿದ್ದೇವೆ ಎಂಬುದರ ಅರ್ಥ.
ಮನುಷ್ಯ ಹೊಸ ಸವಾಲುಗಳನ್ನು ಎದುರಿಸುತ್ತ ಕೆಲವೊಮ್ಮೆ ಗೊತ್ತಿದ್ದು ಇನ್ನೂ ಕೆಲವೊಮ್ಮೆ ತನಗೆ ಗೊತ್ತಿಲ್ಲದಂತೆ ಕೂಡ ತನ್ನೊಳಗೆ ಅಪ್ ಡೇಟ್ ಆಗುತ್ತಾನೆ ಇರುತ್ತಾನೆ.ಹಾಗೆ ನೋಡಿದಲ್ಲಿ ಹೊಸ ಬದಲಾವಣೆಗೆ ತೆರದುಕೊಳ್ಳದವರ್ಯಾರು?ಎಲ್ಲೋ ಕಾಡೊಂದಕ್ಕೆ ಕಾಳ್ಗಿಚ್ಚು ಬಿತ್ತು, ಕಾಡಲ್ಲಿ ತನ್ನ ಅಹಾರ ಪೂರೈಕೆಯ ಇತ್ಯಾದಿ ಬದಲಾವಣೆಗೆ ಪ್ರಾಣಿ ಪಕ್ಷಿಗಳು ಕೂಡ ಹೊಸ ನೆಲೆಯನ್ನು ಹೊಸದಾಗಿ ಹೊಂದಿಸಿಕೊಳ್ಳುತ್ತಾ ಅಪ್ ಡೇಟ್ ಆಗುತ್ತಿರುತ್ತದೆ ಇನ್ನು ಮನುಷ್ಯನದ್ದು ಯಾವ ಲೆಕ್ಕ?ಮನುಷ್ಯನ ಜೀವನ ಕ್ರಮ, ವೃತ್ತಿಗಳು, ಹವ್ಯಾಸಗಳು, ಸಂಬಂಧಗಳು,ಅರೋಗ್ಯ, ಗೆಳೆಯರು, ಆರ್ಥಿಕತೆ, ಹೀಗೆ ಅವನ ಇಂಚಿಂಚೂ ಕ್ರಿಯೆಗಳು ಕೂಡ ಬದಲಾವಣೆಯಿಂದ ಹೊರತಾದುದ್ದಲ್ಲ. ಪ್ರತಿಯೊಂದು ಪ್ರತಿ ಕಾಲಘಟ್ಟದಲ್ಲಿ ಬದಲಾವಣೆಗೆ ತೆರೆದುಕೊಳ್ಳುವಂತದ್ದೆ. ಆ ಬದಲಾವಣೆ ಕಷ್ಟ ಸುಖ ಎರಡನ್ನು ಸಮಾನಾಗಿ ತಂದೊಡ್ಡುತ್ತದೆ.ಕಷ್ಟಗಳು ಬಂದಾಗ ಮುಂದೆ ಸುಖವಿದೆ ಎಂಭ ನಿರೀಕ್ಷೆ ಸುಖವೆಂದಾಗ ಕಷ್ಟದ ನಿರೀಕ್ಷೆಗಳು ಅದ ಎದುರುಗೊಳ್ಳಲು ನಮ್ಮೊಳಗೆ ಸಜ್ಜುಗೊಳ್ಳಬೇಕಾಗಿರೋದು ನಮ್ಮ ಕರ್ತವ್ಯ.ಈ ಕ್ರಿಯೆಯನ್ನು ಅಳವಡಿಸಿಕೊಳ್ಳಲು ಕೊಂಚ ಸ್ಥಿತ ಪ್ರಜ್ಞತೆ ನಮ್ಮೊಳಗೆ ಇರಬೇಕು.ಅದಕ್ಕೆತಕ್ಕುದಾದ ಪರಿಸರದಲ್ಲಿ ನಾವು ಬದುಕುತ್ತಿರಬೇಕು. ಆದರೆ ನಮ್ಮ ಸುತ್ತ ಈ ಹೊಗಳು ಬಟ್ಟರು ಇರುತ್ತಾರೆಂದುಕೊಳ್ಳಿ ಅವಾಗಲೆ ನಾವು ಈ ವಿವೇಕವನ್ನು ಮರೆತು ಅವಿವೇಕಿಗಳಾಗುವದು.ಯಾವುದೊ ಒಂದು ಹಂತದಲ್ಲಿ ನಮ್ಮೊಳಗಿನ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡು ಬದುಕಲ್ಲಿ ಬದಲಾವಣೆಗೆ ತೆರೆದುಕೊಳ್ಳುವ ಅಂತಃ ಸ್ತೈರ್ಯವನ್ನು ಕಳೆದುಕೊಂಡು ಕ್ರಿಯಾಶೀಲತೆಯನ್ನು ಮರೆತು ಬಿಡುವದು.
ಬದಲಾವಣೆ ಎಂದ ಕೂಡಲೆ ನನಗೆ ತೀರ ಆಪ್ತವೆನಿಸಿದ ಪ್ಯಾನೊಂದರ ಜಾಹೀರಾತು ನೆನಪಿಗೆ ಬರುತ್ತದೆ. “ಹವಾ ಬದಲ್ ಗಯ” ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಜಾಹೀರಾತು ಕೇವಲ ಕಲ್ಪನೆಯಲ್ಲಿ ಒಡಮೂಡಿದರು ಇಂಥದ್ದೊಂದು ಕಲ್ಪನೆ ಸಾಕಾರಗೊಂಡರೆ ಬದಲಾಗುತ್ತಿರೊ ನಮ್ಮ ದಿಕ್ಕುಗಳು ಒಳ್ಳೆಯದೆಡೆಗೆ ಚಲಿಸಬಹುದು ಎಂಬ ಆಶಾವಾದ ಆಪ್ತವೆನಿಸುವದಕ್ಕೆ ಕಾರಣ.ದಂಪತಿ ಜೋಡಿಯೊಂದು ವೃದ್ದಾಶ್ರಮಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿ ಎಲ್ಲೆಲ್ಲೊ ಕುಳಿತಿರುವ ವೃದ್ದರನ್ನು ಅವಲೋಕಿಸುತ್ತಾರೆ. ಆಗ ವೃದ್ದಾಶ್ರಮದ ಅಧಿಕಾರಿಗಳು ಬಂದು ಇವರು ಕೂಡ ವೃದ್ದ ತಂದೆ ತಾಯನ್ನು ಬಿಡಲು ಬಂದಿರುವರೆಂದು ತಿಳಿದು ವಿಚಾರಿಸಲಾಗಿ ಇಲ್ಲಿರುವ ವೃದ್ದರನ್ನು ನಾವು ತಂದೆ ತಾಯಿಗಳನ್ನಾಗಿ ಅಡಾಪ್ಟ್ ಮಾಡಿಕೊಳ್ಳುತಿದ್ದೇವೆ ಎಂಬ ಕಲ್ಪನೆಯ ಜಾಹೀರಾತು ಅದು. ಬದಲಾವಣೆ , ಪರಿವರ್ತನೆಗಳು ಅಂದರೆ ಹೀಗಿರಬೇಕು. ನಿಮ್ಮ ಸುತ್ತಲಿರುವ ಯಾವ ಹೊಗಳುಭಟ್ಟನು ಈ ತೆರನಾದ ವಿಷಯಗಳನ್ನು ಪ್ರಸ್ತಾಪಿಸಿರಲಾರ ಈ ತೆರೆನಾದ ಕ್ರಿಯೆಗಳಿಗೆ ಪ್ರೇರೇಪಿಸಲಾರ. ಅವರದ್ದು ನಿಮ್ಮಿಂದ ಸಿಕ್ಕಿದಷ್ಟನ್ನು ಕೀಳೊ ಬುದ್ದಿಯೆ ಹೊರತು ಮತ್ತೇನಿರೊದಿಲ್ಲ, ಆದರೆ ನಾವಿದ್ದನ್ನೆಲ್ಲ ಯೋಚಿಸಿಯೆ ಇರುವದಿಲ್ಲ, ನಮ್ಮೊಂದಿಗೆ ಸದಾ ಇರುವ ನಮ್ಮ ಗೆಳೆಯ/ ಗೆಳತಿ/ಹಿತೈಷಿ ಎಂಭ ಭ್ರಮಾ ಪರಿಧಿಯಲ್ಲಿ ನಮ್ಮ ಯೋಚನೆಗಳು ಸುತ್ತುತ್ತಿರುತ್ತವೆ.
ಮೇಲೆ ಹೇಳಿದಂತೆ ಮನುಷ್ಯ ಅಪ್ಡೇಟ್ ಆಗ್ತಾನೆ ಇರುತ್ತಾನೆ.ಅದರೆ ಆ ಬದಲಾವಣೆಯ ದಿಕ್ಕು ಹೇಗಿರಬೇಕು ಅನ್ನುವದನ್ನು ನಿರ್ಧರಿಸಬೇಕಾದ್ದು ನಾವೆ. ಮೇಲಿನ ಜಾಹೀರಾತು ಒಂದು ಕಲ್ಪನೆ ಅಂತಾದರೆ ಅದು ಹೊಳೆದಿದ್ದು ಒಂದು ಮನುಷ್ಯನ ಮೆದುಳಿಗೆ. ಆದರೆ ಅದೆಲ್ಲೊ ನೂರರಲ್ಲಿ ಒಂದು ಎರಡು. ಹಾಗಾದರೆ ಹೆಚ್ಚಿನೆಲ್ಲ ಬದಲಾವಣೆ ಒಳಿತಿನ ವಿರುದ್ದವಾದ ಅಳಿವಿನತ್ತ ಸಾಗುತ್ತಿದೆ. ಇಲ್ಲಿ ಅಳಿವು ಎಂಬುದನ್ನು ಒತ್ತಾಯ ಪೂರ್ವಕವಾಗೆ ಹೇಳುತಿದ್ದೇನೆ. ನನ್ನ ಪ್ರಕಾರ ಹೆಚ್ಚಿನೆಲ್ಲಾ ಸಮಾಜಮುಖಿ ಬದಲಾವಣೆಗಳು ಮೇಲ್ನೋಟಕ್ಕೆ ಒಳಿತಿನತ್ತ ಸಾಗುತ್ತಿರುವಂತೆ ಕಂಡುಬಂದರು ಮನುಷ್ಯತ್ವದ ಅಳಿವಿನತ್ತ ಸದ್ದು ಗದ್ದಲವಿಲ್ಲದೆ ಸಾಗುತ್ತಿದೆ .ಇಲ್ಲಿ ನಾ ಪ್ರಸ್ತಾಪಿಸುತ್ತಿರುವ ಬದಲಾವಣೆ ಮನುಷ್ಯ ಮನುಷ್ಯರ ಕ್ರಿಯೆಗೆ, ಪ್ರೀತಿಗೆ ಸಂಬಂದಿಸಿದ್ದು,ಯಾವುದೊ ಜಾತಿ ಸುಧಾರಣೆ ಹಿಂದುಳಿದವರ ಆರ್ಥಿಕ ಸುಧಾರಣೆ ಇತ್ಯಾದಿ ಸ್ಲೊಗನ್ ತಗುಲಿಸಿಕೊಂಡು ಸುಧಾರಕರು ಎನಿಸಿಕೊಂಡವರು ( ವಿ ಸೂ :- ಎಲ್ಲರೂ ಅಲ್ಲ) ಸರ್ಕಾರದೆದುರು ಒಂದು ವರದಿ ಬಿಸಾಕಿ ಅದಕ್ಕಷ್ಟು ಬಕ್ಷೀಸು ಪಡೆದು ತೆಪ್ಪಗಾಗುತ್ತಾರೆ, ಅಲ್ಲಿಗೆ ಎಲ್ಲವು ಸರಿ ಹೋಗಿದೆ ಎಂಬ ಭ್ರಮೆಯಲ್ಲಿರುತ್ತಾರೆ.ಕೃಷಿ ಸುಧಾರಣೆ ಅಂತೀವಿ ಯಾರೊ ನಾಲ್ಕಾರು ವಿಜ್ಞಾನಿಗಳು ಎ ಸಿ ರೂಮಲ್ಲಿ ಕುಳಿತು ಒಂದು ವರುಷದಲ್ಲಿ ಕಂಡು ಕೊಂಡ ಸಂಶೋದನೆ ತಲೆಮಾರಿನಿಂದ ಕಂಡುಕೊಂಡ ಕೃಷಿಕನ ಸ್ವಾ ಅನುಭವವನ್ನು ನೀವಾಳಿಸಿ ಎಸೆದು ಬಿಡಬಲ್ಲುದು.ಕ್ರಮೇಣ ಹೊಸ ಬದಲಾವಣೆಗೆ ತೆರೆದುಕೊಂಡ ಕೃಷಿಕ ಭೂ ಸತ್ವವನ್ನು ಕೊಂದುಕೊಂಡು ತನ್ನೊಳಗಿನ ಅಂತಃಸತ್ವವನ್ನು ಕಳೆದು ಕೊಂಡು ಬರಿದಾಗುತ್ತಾನೆ. ದಕ್ಷಿಣ ಭಾಗದ ಮಂದಿ ಅದ್ಯಾವುದೋ ಸಂಶೋಧನಾ ವರದಿಯನ್ನು ನಂಬಿಕೊಂಡು ತಲೆಮಾರಿನಿಂದ ಉಪಯೋಗಿಸುತಿದ್ದ ತೆಂಗಿನ ಎಣ್ಣೆಯನ್ನು ಹೃದಯ ಸಂಬಂಧಿ ಖಾಯಿಲೆ ಬರುತ್ತದೆಂದು ಹೆದರಿ ಇನ್ಯಾವುದೊ ರಿಪೈನ್ಡ್ ಆಯಿಲನ್ನು ಬಳಸಿ ಹೃದಯ ಸಂಬಂಧಿ ರೋಗ ತರಿಸಿಕೊಂಡ ಉದಾಹರಣೆಗಳಿವೆ. ಅಂತರ್ಮುಖಿಯಾಗಿ ಬಹುರಾಷ್ಟ್ರೀಯ ಕಂಪೆನಿಯೊಂದರ ಲಾಭಿ ಈ ಕ್ರಿಯೆಯಲ್ಲಿ ಪಾತ್ರ ವಹಿಸಿದ್ದು ತಡವಾಗಿ ಎಲ್ಲ ಮುಗಿದ ನಂತರ ನಮ್ಮರಿವಿಗೆ ಬಂದಿರುತ್ತದೆ.ನಮ್ಮ ಬದಲಾವಣೆಗಳು ಎತ್ತ ಕಡೆ ಸಾಗುತ್ತಿದೆ ಎಂಬುದಕ್ಕೆ ಕೆಲ ಸ್ಯಾಂಪಲ್ಗಳು ಮೇಲಿನವುಗಳಷ್ಟೆ. ಈ ಸುಧಾರಕರು. ಈ ಅತಿ ಸಂಶೋಧಕರು ಎಲ್ಲರು ನನ್ನ ದೃಷ್ಟಿಯಲ್ಲಿ ಹೊಗಳು ಬಟ್ಟಂಗಿಗಳ ಸಾಲಿಗೆ ಸೇರುತ್ತಾರೆ.
ಹಾಗದರೆ ಹೊಸದಕ್ಕೆ ತೆರೆದುಕೊಳ್ಳುವದು ತಪ್ಪಾ? ಖಂಡಿತ ಅಲ್ಲ.ತೆರೆದು ಕೊಳ್ಳಲೇ ಬೇಕು. ಆದರೆ ಬದಲಾವಣೆಯ ಈ ಕ್ರಿಯೆಯು ನಮ್ಮ ಮೂಲ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ.ಬದಲಾವಣೆ ಎಂಬುದು ವ್ಯಕ್ತಿತ್ವಕ್ಕೆ ಮತ್ತಷ್ಟು ಮಗದಷ್ಟು ರಂಗನ್ನು ತುಂಬುವಂತಿರಬೇಕು.ನಮಗೆ ಎಲ್ಲವೂ ಇವತ್ತಿನಿಂದ ನಾಳೆಗೆ ಬದಲಾಗಬೇಕು ಎಂಬ ಹಪಾ ಹಪಿತನ. ಈ ಅವಸರದ ಕ್ರಿಯೆ ವಿವೇಚನೆಯನ್ನು ಕಳೆದುಕೊಳ್ಳುವಂತೆ ಮಾಡಿ ಪರರ ಮಾತನ್ನು ಅವಲಂಬಿಸುವಂತೆ ಮಾಡುತ್ತದೆ. ಗುಡ್ಡ ಕಾಡು ಕಡಿದು ಕಟ್ಟಡ ರಸ್ತೆ ನಿರ್ಮಿಸುತ್ತೇವೆ, ಪ್ರಕೃತಿಯ ವಾಯು ಮಾಲಿನ್ಯಕ್ಕು ನಮ್ಮದೆ ಕೊಡುಗೆ ನೀಡುತ್ತೇವೆ. ನೀರನ್ನು ಕಲುಷಿತ ಗೊಳಿಸುತ್ತೇವೆ ಹೀಗೆ ಪ್ರಕೃತಿಯ ಎಲ್ಲದರಲ್ಲೂ ಹಕ್ಕನ್ನು ಸಾಧಿಸುತ್ತೇವೆ ಆದರೆ ಪ್ರಕೃತಿಯ ಮೂಲ ಗಾಳಿ, ನೀರು, ಬೆಳಕು ನಾಳೆ ಇಲ್ಲವೆಂದಾದಲ್ಲಿ ಎಲ್ಲ ಜೀವ ಸಂಕುಲದ ಅಳಿವಾಗುತ್ತದೆ. ಎಂತು ಗಾಳಿ ನೀರು ಬೆಳಕು ಪ್ರಕೃತಿಯ ಅಂತಃ ಸತ್ವವೊ ಹಾಗೆಯೆ ವಕ್ತಿಗೆ ವ್ಯಕ್ತಿತ್ವ ಅನ್ನೊದು ಆತನ ಮೂಲ ಅಂತಃ ಸತ್ವ. ಅದನ್ನು ಕೊಂದುಕೊಂಡರೆ ವ್ಯಕ್ತಿಯ ಅಂತ್ಯ ಎಂಬುದು ನಮಗೆ ತಿಳಿದಿರಬೇಕು. ಹೆಚ್ಚಾಗಿ ನಮ್ಮ ಯೋಚನೆ ಹಾಗು ಮನಸಿನ ಮಾತುಗಳಿಗೆ ನಾವು ಜೋತು ಬೀಳಬೇಕೆ ಹೊರತು ಬಟ್ಟಂಗಿಗಳ ಮಾತುಗಳಿಗಲ್ಲ.
ನಮ್ಮ ದೇಹಕ್ಕೆ ಹೇಗೆ ಅಹಾರದ ಅಗತ್ಯವಿದೆಯೊ ಹಾಗೆಯೆ ಮನಸ್ಸಿಗೆ ಭಾವನೆಗಳೆಂಬುದು ಅಹಾರ. ಎಷ್ಟೆಷ್ಟು ಒಳ್ಳೆಯ ಭಾವನೆಗಳಿಗೆ ನಾವು ನಮ್ಮ ಮನಸ್ಸನ್ನು ತೆರೆದುಕೊಳ್ಳುತ್ತೇವೆಯೊ ಅಷ್ಟಷ್ಟೆ ಒಳ್ಳೆಯ ಮನಸ್ಸು ನಮ್ಮದಾಗಿ ನಮ್ಮ ವ್ಯಕ್ತಿತ್ವಕ್ಕೆ ಮೆರುಗನ್ನು ತಂದು ಕೊಡಬಲ್ಲುದು.ಇದು ನಮ್ಮಯ ಕ್ರಿಯೆಗೆ ಸಹಕಾರಿ. ಒಳ್ಳೆಯ ಭಾವನೆಗಳನ್ನು ತುಂಬಿಕೊಂಡಂತ ಮನಸ್ಸು ಒಳ್ಳೆಯ ಕ್ರಿಯೆಯತ್ತ ನಮ್ಮನ್ನು ದೂಡುತ್ತದೆ.ಬಟ್ಟಂಗಿಗಳ ಮಾತಿಗೆ ಕಿವಿಯಾನಿಸಿದರೆ ಗೊಂದಲದ ಭಾವ ನಮ್ಮ ವಿಚಾರಧಾರೆ ಜೊತೆ ಇತರವು ಸೇರಿಕೊಂಡು ಗುದ್ದಾಟಕ್ಕೆ ಶುರುವಿಟ್ಟುಕೊಳ್ಳುತ್ತದೆ. ಪರಿಣಾಮ ಅಶಾಂತಿ.ನಮ್ಮ ಬುದ್ದಿ ಶಕ್ತಿಗೆ ಮಂಕು. ಅದ್ದರಿಂದ ನಮ್ಮ ಸುತ್ತಲು ಇರುವ ಹಿತೈಷಿಗಳಲ್ಲಿ ನಿಜವಾದ ಹಿತೈಷಿಗಳ್ಯಾರು ಬಟ್ಟಂಗಿಗಳು ಯಾರು ಎಂಬುದನ್ನು ಗುರುತು ಮಾಡಿಕೊಳ್ಳುವದು ನಮಗೆ ನಾವೆ ಮಾಡಿಕೊಳ್ಳುವ ಒಳಿತು. ಒಳಿತಿನೆಡೆಗಿನ ಬದಲಾವಣೆಗಳನ್ನು ಮಾಡಿಕೊಳ್ಳಲು ಇದು ಸಹಕಾರಿ.
ಧಾರ್ಮಿಕ ಸ್ಥಿತ್ಯಂತರ, ರಾಜಕೀಯ ಸ್ಥಿತ್ಯಂತರ, ಸಾಮಾಜಿಕ ಸ್ಥಿತ್ಯಂತರ ಹೀಗೆ ಬದಲಾವಣೆಗೆ ಏನೇನೊ ದೊಡ್ಡದಾದ ಹೆಸರನ್ನು ಕೊಡುತ್ತೇವೆ. ಇಲ್ಲಿ ನಿಜ ಸ್ಥಿತ್ಯಂತರಗಳು ಆಗಿದ್ದೆ ಅದಲ್ಲಿ ಅದು ಮನುಷ್ಯನಲ್ಲಿ ಯಾಕೆಂದರೆ ಉಳಿದಲ್ಲೆವು ಅತನೆ ಕಟ್ಟಿಕೊಂಡ ವ್ಯವಸ್ಥೆ. ಒಬ್ಬ ಹಿಂದುಳಿದವ ಕಷ್ಟಪಟ್ಟು ಕೂಲಿ ನಾಲಿ ಮಾಡಿ ಓದಿ ಕೊಂಡು ದೊಡ್ಡದಾದ ಅಧಿಕಾರಿಯಾಗಿ ಬದಲಾಗುತ್ತಾನೆ. ಅತನ ಮೇಲ್ವರ್ಗದ ಧಣಿ ಮನೆಗೆ ಊಟಕ್ಕಂತ ಹೋಗುತ್ತಾನೆ ಆದರೆ ಆತ ಉಂಡ ಎಲೆ ತೆಗೆದು ಸಗಣಿ ಸಾರಿಸುವ ಸರದಿ ಆತನ ವೃದ್ದ ತಂದೆ ಮಾಡುತ್ತಾನೆ. ಬದಲಾವಣೆಯಾಗಿದ್ದೆಂದರೆ ಮೊದಲಿಗೆ ಈತ ಮಾಡುತಿದ್ದುದನ್ನು ಈಗ ಈತನ ತಂದೆ ಮಾಡಿದನಷ್ಟೆ. ಆ ಧಣಿ ಮನೆಯಲ್ಲಿ ಹಿಂದೆಯೂ ಹೀಗೆ ಕೆಲಸಗಾರರು ಸಗಣಿ ಸಾರಿಸುತ್ತಾನೆ ಇದ್ದರು ಈಗಲು ಸಾರಿಸುತ್ತಾನೆ ಇದ್ದಾರೆ ಆಧಿಕಾರಿಯಾದ ಈತನೀಗೆ ಸಾಮಾಜಿಕ ಸ್ಥಿತ್ಯಂತರದ ಭ್ರಮೆ.ಹಾಗೆಯೆ ಈತನ ಭಾಷಣಗಳಲ್ಲೂ ಕೂಡ ಈ ಮಾತುಗಳು ಸುಳಿದಾಡುತ್ತದೆ.ತನಗಾದ ಬದಲಾವಣೆಯನ್ನು ಸ್ಥಿತ್ಯಂತರ ಎಂದು ಕರೆದುಕೊಂಡು ಓಡಾಡೋದು ಈತನ ಅಭ್ಯಾಸಗಳಲ್ಲಿ ಒಂದು. ಜಾತೀಯತೆ ಧರ್ಮ ಕರ್ಮಗಳ ಬಗ್ಗೆ ಮಾತಾಡೊ ಸುಧಾರಕ/ಕಿ ಬಟ್ಟಂಗಿಗಳ ಮಾತು ಯಾವುದೊ ಒಂದು ಧರ್ಮಕ್ಕೆ ಸೀಮಿತವಾಗಿರುತ್ತದೆ. ಅವುಗಳಿಗೆ ಬದಲಾವಣೆಗಳು ಬೇಕಾದ ಕ್ಲೀಶೆಗಳು ಒಂದು ಧರ್ಮದಲ್ಲಷ್ಟೆ ಕಾಣುತ್ತದೆ.ಈ ಬಟ್ಟಂಗಿಗಳ ಮಾತನ್ನು ಕೇಳಿ ಅದೆಷ್ಟೊ ಇವರಿಂದ ಹಳಿಯಲ್ಪಡುವ ಮಂದಿ ಧರ್ಮ ತ್ಯಜಿಸಿ ಒಂದಷ್ಟು ಸುಧಾರಣೆಯತ್ತ ಮುಖ ಮಾಡಿದ್ದರೂ…. ಇವರು ಚಕಾರವೆತ್ತದ ಮಂದಿ ಅದೆ ಮೂಲಭೂತವಾದಿ ತನಕ್ಕೆ ಜೋತು ಬಿದ್ದಿದ್ದಾರೆ. ಅವರ ಬಗ್ಗೆ ಇವರುಗಳು ದೂರವದು ಬಿಡಿ ಮಾತಾಡುವುದು ಇಲ್ಲ. ಹಾಗಾದರೆ ಇವರುಗಳನ್ನು ಬಟ್ಟಂಗಿಗಳು ಎಂದು ಕರೆಯುವದರಲ್ಲಿ ಯಾವುದೆ ತಪ್ಪಿಲ್ಲವೆನ್ನುವದು ನನ್ನ ಅಭಿಪ್ರಾಯ. ಸಾಧ್ಯವಾದರೆ ಈ ಬಟ್ಟಂಗಿಗಳು ಧರ್ಮ ಕರ್ಮ ಎಲ್ಲವನ್ನೂ ತೊರೆದು ಮನುಷ್ಯ ಮಾತ್ರರಾಗಿ ಬದುಕಿ ಎಂಬ ಕರೆ ಕೊಡಲಿ.ಧರ್ಮ/ಜಾತಿ ಬಗ್ಗೆ ಚಕಾರವೆತ್ತದೆ ಈ ಕರ್ಮಗಳಿಂದ ಮನುಷ್ಯರನ್ನು ಹೊರ ತರುವ ಪ್ರಾಮಾಣಿಕ ಪ್ರಯತ್ನ ನಡೆಸಲಿ. ಇಲ್ಲ ಅದು ಸಾದ್ಯವಾಗದ್ದು. ಈಗಿನ ನಮ್ಮ ಸ್ಥಿತ್ಯಂತರ ಬದಲಾವಣೆಯ ಮನಸ್ಥಿತಿ ಮೇಲಿನ ಕಥೆಯಂತೆ ಆಗಿದೆ. ಸ್ವಾರ್ಥ, ಕಿವಿಯಾನಿಸುವಿಕೆ, ಭಕ್ಷೀಸು ಮನಸ್ಥಿತಿಗಳು ನಮ್ಮಲ್ಲಿನ ಬದಲಾವಣೆಯ ದಿಶೆಯನ್ನು ಇದಿಷ್ಟೆ ಪರಿದಿಗೆ ಸೀಮಿತಗೊಳಿಸಿದೆ ಎಂದರೆ ತಪ್ಪಿಲ್ಲ.
ಬಟ್ಟಂಗಿಗಳನ್ನು ದೂರ ತಳ್ಳಿ ಸ್ವ-ಅಲೋಚನೆ ಒಳ್ಳೆಯ ಭಾವನೆಗಳಿಗೆ ಮನದಲ್ಲಿ ಜಾಗ ಕೊಡುವದರ ಹೊರತಾಗಿ ನಮ್ಮ ಮನಸ್ಥಿತಿಗಳು ಬದಲಾಗಲಾರದು. ನಿಜಾತಿ ಬದಲಾವಣೆ, ಸುಧಾರಣೆ ಎಂಬುದರ ಪ್ರಾಥಮಿಕ ಹಂತ ನಮ್ಮ ಮನಸ್ಸಿನ ಅರಿವಿಗೆ ಬರದು. ನಾವೇನಾದರು ಉತ್ತಮ ಸ್ಥಾನ ಮಾನದಲ್ಲಿದ್ದರೆ ಖಂಡಿತ ಈ ಬಟ್ಟಂಗಿಗಳ ಬಗ್ಗೆ ಯೋಚನೆ ಮಾಡಲೇ ಬೇಕು ಯಾಕೆಂದರೆ ಎಲ್ಲಿ ಅಧಿಕಾರ ಇರುತ್ತೊ ಅವರ ಸುತ್ತ ಈ ಬಟ್ಟಂಗಿಗಳ ಗುಂಪು ಅತಿರೇಕ ಅನಿಸುವಷ್ಟರ ಮಟ್ಟಿಗೆ ಕೆಲಸ ಮಾಡುತ್ತಿರುತ್ತದೆ. ಇದರಿಂದಾಗಿ ನಾವು ಮಾಡೊ ಕೆಲಸ ತಲುಪುವಲ್ಲಿ ತಲುಪದೆ ಇರಬಹುದು ಮಗದೊಂದು ದಿನ ನಾವೆ ತಪ್ಪಿನ ಸುಳಿಗೆ ಸಿಲುಕಿ ಅನುಭವಿಸಬಾರದ್ದನ್ನೆಲ್ಲ ಅನುಭವಿಸ ಬೇಕಾದ ತುರ್ತುಗಳು ನಮಗೊದಗಿಬರೋದಂತು ದಿಟ.ಹೊಸದಕ್ಕೆ ತೆರೆದುಕೊಳ್ಳುವದೆಂದರೆ ಇದ್ದಿದ್ದನ್ನು ಕಳೆದುಕೊಂಡು ಮುಂದುವರಿಯುವದು ಎಂದಲ್ಲ… ಇರುವದನ್ನೆ ಉನ್ನತೀಕರಿಸಿಕೊಳ್ಳುವದು ಎಂಬುದು ನನ್ನ ಭಾವನೆ. ಉತ್ತಮ ಸಮಾಜದ ಕಳಕಳಿಯುಳ್ಳವರು ಸ್ವ ಚಿಂತನೆಗಳತ್ತ ಮುಖ ಮಾಡಿದರೆ ಸ್ವಸ್ಥ ಸಮಾಜಕ್ಕೆ ನಾವು ಕೊಡುವ ಉತ್ತಮ ಕೊಡುಗೆ. ಯಾವುದೊ ಕೆಲಸಕ್ಕೆ ಬಾರದ ಸಿದ್ದಾಂತಕ್ಕೆ ಜೋತು ಬಿದ್ದು ವಾಸ್ತವಕ್ಕೆ ಬೆನ್ನು ಮಾಡುವದು ಬಟ್ಟಂಗಿಗಳ ಮಾತಿಗೆ ಕಿವಿಯಾನಿಸುವವರಿಗಷ್ಟೆ ಸಾಧ್ಯ.ಸ್ವಂತಿಕೆ ಎಂಬುದು ನಮ್ಮ ಸೊತ್ತಾಗಲಿ. ಹಿಂಗೆಲ್ಲ ಹೇಳಿಕೊಂಡರೆ ನಮಗೊಂದು ಪ್ಯಾಸಿಷ್ಟ್ ಇತ್ಯಾದಿ ಬಿರುದುಗಳು ದೊರಕಬಹುದು.ಸುಮ್ಮನೆ ಹಲುಬುವವರನ್ನ ನಿರ್ಲಕ್ಷಿಸಿ ಬಿಡೋಣ. ಬದುಕಿನ ಬದಲಾವಣೆಗಳು ಒಳಿತಿನತ್ತ ಸಾಗಲು ನಮಗಾಗಿ ನಾವು ಇಷ್ಟಾದರು ಕಟ್ಟುಪಾಡನ್ನು ಹಾಕಿಕೊಳ್ಳಲೇಬೇಕು.ಬದಲಾವಣೆ ಎಂಬುದು ನಮ್ಮಲ್ಲಿ ನಮ್ಮೊಳಗೆ ಒಳಿತಿನತ್ತ ಆಗಲಿ ಎಂಬುದಷ್ಟೆ ನನ್ನ ಆಶಯ.
******