ಬದಲಾವಣೆ ಜಗ(ನ)ದ ನಿಯಮ: ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ

ಕಾಲ ಎಂದೆಂದೂ ಕಾಲ ಕಾಲವೇ..
ಮನುಷ್ಯನ ಗುಣಸ್ವರೂಪ ಮಾತ್ರ ಬದಲಾಗುವುದಲ್ಲವೇ.. !!!!

ಹಿಂದಿನ ಕಾಲದಲ್ಲಿ ಬಾಂಧವ್ಯಗಳ ಬೆಸುಗೆ ಜಾಸ್ತಿಯಾಗಿತ್ತು.ಒಗ್ಗಟ್ಟಿತ್ತು.ಪರಸ್ಪರ ಸಹಬಾಳ್ವೆ ಜಾಸ್ತಿಯಾಗಿತ್ತು.ಆದರೆ ಇಂದಿನ ಕಾಲದಲ್ಲಿ ಅದ್ಯಾವುದೂ ಇಲ್ಲ.ಕೊಲೆ,ಸುಲಿಗೆ,ಅತ್ಯಾಚಾರಗಳು ತಾಂಡವವಾಡುತ್ತಿವೆ.ಸಂಬಂಧಗಳ ಬೆಲೆಯೇ ತಿಳಿಯದೇ ಅಣ್ಣ-ತಂಗಿ,ಅಪ್ಪ – ಮಗಳು,ಪುಟ್ಟ ಮಕ್ಕಳು ಎನ್ನುವ ಭಾವನೆಗಳಿಲ್ಲದೇ ಅತ್ಯಾಚಾರ ಮಾಡುವ ಮನಸ್ಥಿತಿ ಇಂದಿನವರದು ಎನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.ಮೊದಲಿನ ಕಾಲದ ಭಾರತೀಯ ಸಂಸ್ಕೃತಿ ಉನ್ನತವಾಗಿತ್ತು.ಈಗಿನ ಜನರು ಮಾನವೀಯತೆ ಮರೆಯುತ್ತಿದ್ದಾರೆ ಎಂಬ ನುಡಿಗಳು ಕರ್ಣಗಳ ಕೊರೆದು ಸಾಗುತ್ತಲೇ ಇರುತ್ತದೆ.

ಹಾಗಾದರೆ ಹಿಂದಿನ ಕಾಲದಲ್ಲಿ ದುಷ್ಟರು,ದುರ್ಜನರು ಇರಲೇ ಇಲ್ಲವೇ ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಕಾಡಲೇಬೇಕು..

ಅಂದು ಇಂದು ಮುಂದು ಎಲ್ಲಾ ರೀತಿಯ ಜನರೂ ಕಾಣಸಿಗುತ್ತಾರೆ.
ದೇಶ ಉದ್ಧಾರವಾಗಬೇಕೆಂದರೆ ಕೆಲವು ಬದಲಾವಣೆಗಳು ಅನಿವಾರ್ಯ. ತಾಂತ್ರಿಕವಾಗಿ ಮುಂದುವರೆಯಬೇಕೆಂಬ ಕಾಂಪಿಟೇಶನ್ ಯುಗದಲ್ಲಿ ಭಾವನೆಗಳು ಕ್ಷೀಣವಾಗುತ್ತಿವೆ..
ಒಪ್ಪಿಕೊಳ್ಳುವ ಮಾತು..

ಆದರೆ ಕೇವಲ ಭಾವನೆಗಳಲ್ಲಿಯೇ ಜೀವಿಸುವುದೂ ಸಾಧ್ಯವಿಲ್ಲ.ಇಂಗ್ಲೀಷರು ಭಾರತೀಯರನ್ನು,”ಸೆಂಟಿಮೆಂಟಲ್ ಪೂಲ್ಸ್ “ಅಂತ ಅಂದಿದ್ರಂತೆ.
ಅವರು ಹಾಗೆ ಕರೆದದ್ದು ಕರೆದದ್ದು ಟೀಕೆ ಅನ್ನಿಸಿದರೂ ಅದರಿಂದ ದೇಶ ಉದ್ಧಾರವಾಗಲ್ಲ ಅನ್ನೋ ಒಂದು ಸಂದೇಶವೂ ಇದೆ.. ಯಾವೊಬ್ಬ ಜನನಾಯಕ ತನ್ನೆಲ್ಲ ಭಾವಬಂಧಗಳ ಪಾಶ ತೊರೆದು ದೇಶ ಆಳುತ್ತಾನೋ ಅಂದು ಭಾರತ ಖಂಡಿತ ಉದ್ಧಾರವಾಗುತ್ತೆ.. ಯಾಕೆಂದರೆ ಅವನನ್ನು ಬ್ಲಾಕ್ ಮೇಲ್ ಮಾಡಲು ಯಾವ ಸಂಬಂಧಗಳೂ ಸಿಗುವುದಿಲ್ಲ.ಯಾವ ಭಾವನೆಗಳೂ ಅವನನ್ನು ಕಟ್ಟಿಹಾಕಲಾರವು.ಮನುಷ್ಯನಿಗೆ ಭಾವಬಂಧಗಳು ಇರದೇ ತನ್ನನ್ನೇ ತಾನು ದೇಶಕ್ಕಾಗಿ ದೇಶದ ಪ್ರಜೆಗಳಿಗಾಗಿ ಮುಡಿಪಿಡುತ್ತಾನೋ ಆಗ ದೇಶ ಬೆಳೆಯಲು ಸಾಧ್ಯ.

ಭಾವನೆಗಳಲ್ಲಿ ಸಿಲುಕಿದರೆ
ಸಂಬಂಧಿಗಳ ಉದ್ಧಾರ..
ಸಾಮಾನ್ಯ ಜನರ ಪಾಡು
ಹೇಳತೀರ…

ಕನಸು ಮನಸುಗಳು ಬೆಳೆದಂತೆ ಮುಂದುವರಿದ ತಂತ್ರಜ್ಞಾನ ಅನಿವಾರ್ಯ..
ಹಿಂದಿನ ಕಾಲದಿಂದಲೂ ಇದು ಮುನ್ನಡೆ ಸಾಧಿಸುತ್ತಲೇ ಬರುತ್ತಿದೆ.ಬೆತ್ತಲೆ ಮಾನವ ಸೊಪ್ಪುಗಳಿಂದ ಮರ್ಯಾದೆ ಮುಚ್ಚಿಕೊಳ್ಳುವುದ ಕಲಿತ.ಹೊಟ್ಟೆಗೆ ಶುಚಿ-ರುಚಿಯಾಗಿ ಬೇಯಿಸಿ ತಿನ್ನುವುದರ ರುಚಿಯನ್ನು ಕಂಡುಹಿಡಿಯುತ್ತ ಬಂದ.ಬಟ್ಟೆ ಬಂತು. ನಾನಾತರದ ಊಟಗಳು ಬಂತು.ಹೀಗೇ ಮಾನವ ಪ್ರತಿಯೊಂದರಲ್ಲೂ ಹೊಸತನವನ್ನು ಸಂಶೋಧಿಸುತ್ತಲೇ ಒಬ್ಬ ನವೀನ ಮಾನವನಾದ.ಮಾನವನ ಆಸೆ ಮತ್ತು ಕುತೂಹಲಗಳೇ ಇವೆಲ್ಲಕೂ ಮೂಲಕಾರಣ.ಅದು ಇಂದಿಗೂ ಕ್ಷೀಣವಾಗಿಲ್ಲ.ಏಕಾಂಗಿ ಜೀವನ,ಕೌಟುಂಬಿಕ ಜೀವನ ಹೀಗೆ ಒಂದಲ್ಲೊಂದು ರೀತಿಯಲ್ಲಿ ಜೀವನ ಸಾಗಿಸತೊಡಗಿದ.

ಇಂದಿನ ಮುಂದುವರಿದ ತಂತ್ರಜ್ಞಾನದಿಂದ ಮಕ್ಕಳು,ಮನುಜರು ದಾರಿತಪ್ಪುತ್ತಿದ್ದಾರೆ.ಅತ್ಯಾಚಾರದಂತಹ ಪ್ರಕರಣಗಳು ಜಾಸ್ತಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತವೆ.
ನಿಜಕ್ಕೂ ಖೇದದ ವಿಚಾರವಿದು..

ಆದರೆ ಮೊದಲಿನ ಕಾಲದಲ್ಲೂ ಭಾರತದಲ್ಲಿ ಇವೆಲ್ಲವೂ ಇತ್ತು ಎಂಬುದೂ ಅಷ್ಟೇ ಸತ್ಯ..
ಆದರೆ ಅದು ವೈರಲ್ ಆಗದಂತೆ ಅವರವರ ಮನದ ಜಾಗ್ರತ ಭಾವನೆಗಳು ಎಲ್ಲರಲ್ಲೂ ಇದ್ದವು.ತಾ ಮುಂದು ನಾ ಮುಂದೆಂದು ಯಾವ ವಿಚಾರ ಭಿತ್ತಬೇಕೆಂಬ ಕಾಮನ್ ಸೆನ್ಸ್ ಇಲ್ಲದೇ ಭಿತ್ತರಿಸುವ ಸುದ್ದಿ ಮಾಧ್ಯಮಗಳು ಕಡಿಮೆ ಇದ್ದವು.ಜನಸಂಖ್ಯೆಯೂ ಕಡಿಮೆ ಇದ್ದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಂತರ ಜಾಸ್ತಿ ಇತ್ತಾದ್ದರಿಂದ ಅಲ್ಲಲ್ಲಿಯೇ ತೆರೆಮರೆಯಲ್ಲಿಯೇ ಮುಚ್ಚಿಹೋಗುತ್ತಿದ್ದ ಕಾಲವದಾಗಿತ್ತು.

ಜನಸಂಖ್ಯೆ ಹೆಚ್ಚಿದಂತೆ ಜನರ ಅವಶ್ಯಕತೆಗಳೂ ಹೆಚ್ಚಾಗುವುದು ಸಾಮಾನ್ಯ.ಅಂದಮೇಲೆ ಮುಂದುವರಿದ ತಂತ್ರಜ್ಞಾನಗಳು ಅನಿವಾರ್ಯ.ಸಂಸಾರ ನಡೆಸಲು ಅನುಕೂಲವಾಗುವಂತೆ ಮಹಿಳೆಯರೂ ದುಡಿಯುವುದು ಅನಿವಾರ್ಯ.ಭಾರತೀಯ ನಾರಿಗೆ “ಸೀರೆ”ಯೇ ಭೂಷಣ ಎಂದು ವಾದಿಸುವ,ಮೈತುಂಬಾ ಮುಚ್ಚುವ ಬಟ್ಟೆ ಧರಿಸಿದರೂ ಮೂಗು ಮುರಿಯುವವರಿಗೆ, ಈ ಸೀರೆಯಲ್ಲಿಯೇ ಮಹಿಳೆಯರು ಸೆಕ್ಸಿಯಾಗಿ ಕಂಡು ಕಾಮುಖರಿಗೆ ಪ್ರಚೊದನೆಯಾಗುವುದೆಂಬ ಅಂಶವೇಕೆ ಮನಗಾಣುವುದಿಲ್ಲವೋ…. ??? !!!!!

ಅಕಾಲ ಅತ್ಯಾಚಾರಕ್ಕೆ ಮುಂದುವರಿದ ತಂತ್ರಜ್ಞಾನ ಕಾರಣವಲ್ಲ.ಆ ತಂತ್ರಜ್ಞಾನಕ್ಕೆ ಹಿಡಿತವಿಲ್ಲದಿರುವುದೇ ಕಾರಣ.ಅದರಲ್ಲಿ ಸೆಕ್ಸ್ ಅನ್ನೋ ಒಂದು ವಿಷಯ ವೈರಲ್ ಆಗದಂತೆ ತಡೆಯೊಡ್ಡಿದರೆ ಸಾಕು.ಹಾಗೂ ಅದರ ಅಡ್ಡಪರಿಣಾಮಕ್ಕೆ ತಕ್ಕ ಕ್ರೂರ ಶಿಕ್ಷೆ ವಿಧಿಸಿದರೂ ಸಾಕು.ಅಪ್ರಾಪ್ತ ಅತ್ಯಾಚಾರದಂತಹ ನೀಚ ಕೃತ್ಯಗಳಿಗೆ ಅವರ ಮರ್ಮಾಂಗ ಕತ್ತರಿಸಿ ಜೀವಾವದಿ ಶಿಕ್ಷೆ ನೀಡಿದರೆ ಮತ್ಯಾವ ನೀಚನೂ ಆ ಕೆಲಸಕ್ಕೆ ಕೈ ಹಾಕಲಾರ.ಇಂತಹ ಕಠಿಣ ಶಿಕ್ಷೆ ಮೊದಲು ಜಾರಿಗೆ ಬರಬೇಕು.

ಅತ್ತ ಭಾರತದ ಜನ ಕೆಂಪುಜನರಂತೆ ತೆರೆದ ಭಾವನೆಗಳಿಗೂ ಹೊಂದಿಕೊಳ್ಳಲಾಗದೆ ಇತ್ತ ಭಾವನೆಗಳನ್ನು ಮುಚ್ಚಿಡಲೂ ಆಗದೆ ಚಂಚಲ ಚಿತ್ತದಲ್ಲಿ ಸದಾ ಪರಿತಪಿಸುತ್ತಿರುವುದೇ ಈ ಎಲ್ಲದಕ್ಕೂ ಮೂಲಕಾರಣ.

ಒಟ್ಟಿನಲ್ಲಿ ಕಾಲ ಬದಲಾದಂತೆ ಜನರ ಮನಸುಗಳು ಉತ್ಕ್ರಷ್ಟವಾಗಿ ಬದಲಾಗಬೇಕು.
ಮುಂದುವರಿದ ವ್ಯವಸ್ಥೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಪರಿಜ್ಞಾನ ಮೊದಲು ನಮ್ಮೆಲ್ಲರದಾಗಬೇಕು.ಪ್ರತಿಯೊಬ್ಬ ಪ್ರಜೆಯೂ ಉತ್ತಮ ಚಿಂತನೆ ನಡೆಸಿದರೆ ಮುಂದಿನ ಕಾಲ ಅತ್ಯುತ್ತಮವಾಗುವುದರಲ್ಲಿ ಸಂಶಯವಿಲ್ಲ..

@ನಾವೆ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x