ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ ಮಚ್ಚಿ? ಎಂದೆ.
ಸಣ್ಣ ಧ್ವನಿಯಲ್ಲಿ ತನಗಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು. ಇತ್ತೀಚೆಗೆ ಅವಳು ಊರಿನಿಂದ ರಾತ್ರಿ ಬಸ್‍ಲ್ಲಿ ಬರುವಾಗ ಇವಳ ಸೀಟಿನ ಪಕ್ಕ ಯಾರೋ ಒಬ್ಬ ಹುಡುಗ ಬೇಕೆಂದೆ ಭುಜಕ್ಕೆ ಒರಗುವುದು. ಮೈ ಸೋಕಲು ಪ್ರಯತ್ನಿಸುವುದು ಮಾಡುತ್ತಿದ್ದನಂತೆ. ಬಸ್ ಬೇರೆ ಸಿಕ್ಕಾಪಟ್ಟೆ ರಶ್ ಇದ್ದದ್ದರಿಂದ ಸೀಟು ಬದಲಾಯಿಸಿ ಕೊಳ್ಳುವ ಪ್ರಮೇಯವೇ ಇರಲಿಲ್ಲ. ಒಂದೆರಡು ಬಾರಿ ಬೈದರೂ ಅ ಹುಡುಗ ಸಾರೀ ನಿದ್ದೆಗಣ್ಣಲ್ಲಿ ಗೊತ್ತಾಗಿಲ್ಲ ಎನ್ನುತ್ತ ಮತ್ತೆ ತನ್ನ ಹಳೆಯ ಚಾಳಿ ಮುಂದವರೆಸುತ್ತಿದ್ದನಂತೆ. ಟಿಕೇಟ್ ತೆಗೆಯುವಾಗ ಕಂಡಕ್ಟರ್ ಬಳಿ ದೂರು ನೀಡೋಣ ಎಂದುಕೊಂಡರೆ ಅವನು ಟಿಕೇಟ್ ನೀಡುವಾಗ ಮೇಲಿಂದ ಕೆಳಗೆ ನೋಡಿ, ಹಣ ಪಡೆಯುವಾಗ ಬೇಕೆಂದೇ ಕೈ ಮುಟ್ಟಿದ, ಚಿಲ್ಲರೆಯಿದ್ದರೂ ಕೊಡದೇ ಆಮೇಲೆ ಕೊಡುತ್ತೇನೆಂದು ಹೇಳಿದಾಗ ಇವಳಿಗೆ ಅವಳಿಗೆ ಅವನಿಗೆ ಹೇಳಿ ಏನೂ ಪ್ರಯೋಜನವಿಲ್ಲ ಎನಿಸಿಬಿಟ್ಟಿತ್ತು. ಇಡೀ ರಾತ್ರಿ ಆ ಹುಡುಗನ ಕಾಟಕ್ಕೆ ನಿದ್ದೆ ಇಲ್ಲ. ಪ್ರತಿ ಸ್ಟಾಪ್‍ಗೂ ಅವನು ಇಲ್ಲೇ ಇಳಿದುಹೋಗಬಾರದೇ ಎನಿಸುತ್ತಿತ್ತು ಎಂದಳು.
ಇವಳು ಹೇಳಿ ಮುಗಿಸುವಲ್ಲಿ ಬಾಯಿ ತೆರೆದ ಇನ್ನೊಬ್ಬಳು ಈ ದರಿದ್ರ ಹುಡುಗರೇ ಹೀಗೆ ಮೊನ್ನೆ ಲೈಬ್ರರಿಗೆ ಹೋಗುವಾಗ ಇಡೀ ರೋಡು ಖಾಲಿಯಿದ್ದರೂ ಬೇಕೆಂದೇ ಬೈಕ್‍ನನ್ನ ಮೇಲೆ ಹಾಯಿಸುವಂತೆ ಹೆದರಿಸಿದ. ಅಂದಿನಿಂದ ನನಗೆ ಆ ದಾರಿಯಲ್ಲಿ ಒಬ್ಬಳೇ ಅಡ್ಡಾಡಲು ಭಯ. ಅಷ್ಟೇ ಅಲ್ಲ ನನ್ನ ಫ್ರೆಂಡ್ ಬರುವಾಗ ಒಬ್ಬ ಅವಳ ದುಪಟ್ಟಾವನ್ನು ಎಳೆದಿದ್ದರಂತೆ, ಅವಳಂತೂ ಪಾಪ ಹೆದರಿ ಎರಡು ವಾರ ಕಾಲೇಜು ಬಿಟ್ಟಿದ್ದಳು. ಹೆಲ್ಮೆಟ್ ಹಾಕಿಕೊಂಡವನು ಯಾರು ಎಂದು ತಿಳಿಯಲಿಲ್ಲ. ಒಂದು ವೇಳೆ ತಿಳಿದರೂ ನಾವು ಜಾಸ್ತಿಯೆಂದರೆ ಅವನನ್ನು ಬೈಯಬಹುದು. ಅಷ್ಟೇ ಮನೆಯಲ್ಲಿ ಹೇಳಿದರೆ ವಿಷಯ ಇನ್ನಷ್ಟು ದೊಡ್ಡದಾಗಬಹುದು. ಅದರಿಂದ ನಮಗೆ ಇನ್ನಷ್ಟು ರಿಸ್ಟ್ರಿಕ್ಷನ್ಸ್ ಹೆಚ್ಚಾಗುತ್ತವೆ. ಕಾಲೇಜಿನಲ್ಲಿ ಕಂಪ್ಲೇನ್ಟ್ ಮಾಡಿದರೂ ನಾವೇ ಟಾರ್ಗೆಟ್ ಆಗ್ತೀವಿ. ಜನ ಅಯ್ಯೋ ಹಾಗಾಯ್ತಾ? ಎಂದು ಒಣ ಸಾಂತ್ವಾನ ನೀಡುವ ನೆಪದಲ್ಲಿ ಊರುತುಂಬಾ ಸುದ್ದಿಯನ್ನು ಹಬ್ಬಿಸಿ ಬಿಡುತ್ತಾರೆ ನಾಳೆ ನಾವೇ ಇದರಿಂದ ತಲೆಯೆತ್ತಿ ಓಡಾಡಲು ಆಗುವುದಿಲ್ಲ ಅದಕ್ಕೆ ಸುಮ್ಮನಿರುವುದೇ ಒಳ್ಳೆಯದು ಎಂದಳು.
ಇಂತಹ ಘಟನೆಗಳು ಕೇವಲ ನನ್ನ ಅಥವಾ ನನ್ನ ಗೆಳತಿಯರ ಜೀವನದಲ್ಲಷ್ಟೇ ಆಗಿರುವುದಲ್ಲ. ಪ್ರತಿಯೊಬ್ಬ ಹುಡುಗಿಯೂ ಇವನ್ನು ಅನುಭವಿಸಿರುತ್ತಾಳೆ. ಡುಮ್ಮಿ, ಕಡ್ಡಿ, ಕುಳ್ಳಿ, ಒಂಟೆ, ಕರಿಯಮ್ಮ, ಬಿಳಿಜಿರಲೆ ಎಂದು ಅನ್ವರ್ಥಕ ನಾಮಗಳಿಂದ ಸಂಬೋಧಿಸುವುದು, ಹುಡುಗಿಯರ ಸಾಮಥ್ಯವೇ ಇಷ್ಟು ಅಡುಗೆಮನೆ ನೋಡಿಕೊಳ್ಳಲೇ ನೀವು ಲಾಯಕ್ಕು ಇಂತಹ ಫೇಮಸ್ ಡೈಲಾಗುಗಳು, ದೇಹದ ಅಂಗಾಂಗಗಳ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡುವುದು ಇತ್ಯಾದಿ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಸ್ವಂತಿಕೆ ಅಸ್ಥಿತ್ವ ಹುಡುಕಿಕೊಳ್ಳಲು ಯತ್ನಿಸುವ ಮಹಿಳೆಯರ ಆತ್ವವಿಶ್ವಾಸಕ್ಕೆ ಆ್ಯಸಿಡ್ ಎರಚಿದಂತೆ. ಅತ್ಯಾಚಾರದಂತಹ ಹೇಯ ಕೃತ್ಯಗಳಿಗೆ ಶಿಕ್ಷೆ ನೀಡಲು ವರ್ಷಗಳೇ ಬೇಕಾಗಿರುವ ಇಂದಿನ ವ್ಯವಸ್ಥೆಯಲ್ಲಿ ಇವೆಲ್ಲ ವಿಷಯಗಳು ನಗಣ್ಯ ಎನಿಸುತ್ತವೆ. ಇನ್ನೂ ಮಹಿಳೆಯರೇ ಕಾಲೇಜು, ರಸ್ತೆ, ಮನೆ, ಕಾರ್ಯಾಲಯಗಳಲ್ಲಿ ಮಾನಸಿಕ ಶೋಷಣೆಯನ್ನು ಎದುರಿಸುತ್ತಿದ್ದರೂ ಅವೆಲ್ಲಾ ನಾರ್ಮಲ್ ಎನ್ನುವಂತೆ ಸುಮ್ಮನಿರುವುದು ಇಂತಹ ಚಟುವಟಿಕೆಗಳನ್ನು ಇನ್ನೂ ಪ್ರೋತ್ಸಾಹಿಸುತ್ತಿದೆ.
ಇಡೀ ದಿನ ಟಿಕ್-ಟಾಕ್ ಮಾಡುವ ಬದಲು ಯಾವುದೇ ರೀತಿಯಿಂದ ನಮಗೆ ಶೋಷಣೆಯಾಗುತ್ತಿದೆ ಎನಿಸಿದರೆ ಕೂಡಲೇ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಸಾಧ್ಯವಿಲ್ಲವೇ? ಇದು ಎಷ್ಟೋ ಪ್ರಕರಣದಲ್ಲಿ ಪುರಾವೆಯಾಗಬಲ್ಲದು. ಸಮಾಜದಲ್ಲಿ ಜಾಗೃತಿ ಮೂಡಿಸಬಲ್ಲದು. ನಮಗಾಗುತ್ತಿರುವ ಕಿರುಕುಳವನ್ನು ಖಂಡಿಸಿ ಪ್ರತಿಭಟಿಸಲು ನಮ್ಮಿಂದಲೇ ನಿರ್ಮಾಣವಾದ ಸಮಾಜದ ಭಯವೇಕೆ? ಅನ್ಯಾಯವನ್ನು ಸಹಿಸುವುದು ನಮ್ಮ ಸಂಸ್ಕಾರವಲ್ಲ. ಶೋಷಣೆಯ ವಿರುದ್ಧ ಧ್ವನಿಯೆತ್ತುವ ಆತ್ಮವಿಶ್ವಾಸವನ್ನು ತುಂಬುವುದು, ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗುವುದೇ ಸಂಸ್ಕಾರ.
ಅಂದು ಮಹಿಳೆಯರಿಗೆ ಹಲವಾರು ಕಟ್ಟುಪಾಡುಗಳನ್ನು ವಿಧಿಸಲಾದರೂ ಕಿತ್ತೂರು ಚೆನ್ನಮ್ಮ, ಓಬವ್ವ, ರಾಣಿ ಲಕ್ಷ್ಮೀಬಾಯಿಯಂತಹ ವೀರ ಮಹಿಳೆಯರು ತಮ್ಮ ದೇಶಕ್ಕಾಗಿ ಹೋರಾಡುವ ಧೈರ್ಯ, ಸಾಮಥ್ರ್ಯ ತೋರಿದ್ದರು. ಬದಲಾದ ಆಧುನಿಕ ದಿನಮಾನಗಳಲ್ಲಿ ಶಿಕ್ಷಣ, ಉದ್ಯೋಗ ಪಡೆದ ಮಹಿಳೆಯರು ತಮಗಾಗಿ, ತಮ್ಮ ಸ್ವಾಭಿಮಾನಕ್ಕಾಗಿ ಹೋರಾಡಲು ಧ್ವನಿಯೆತ್ತಬೇಕು. ಮಾನಸಿಕ ಕಿರುಕುಳ ಕೊಡುವುದರಿಂದ ಸಾಧಿಸುವುದಾದರೂ ಏನು? ಇಂತಹ ವಿಕೃತಿಯನ್ನು ಕೈಬಿಟ್ಟು ಸಂವಿಧಾನಕ್ಕೆ ಸೀಮಿತವಾದ ಸಮಾನತೆ, ಸ್ವಾತಂತ್ರ್ಯ ಸಮಾಜದಲ್ಲೂ ಕಾಣಬೇಕು. ಇದಕ್ಕಾಗಿ ಪುರುಷ ಮಹಿಳೆಯೆಂಬ ಬೇಧವಿಲ್ಲದೇ ಪ್ರತಿಯೊಬ್ಬರೂ ಕೈ ಜೋಡಿಸೋಣ. ನೆನಪಿರಲಿ ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ.
–ಪ್ರೀತಿ ಕಾಮತ್
ನಿಮ್ಮ ಬರಹ ಅರ್ಥ ಪೂರ್ಣವಾಗಿದೆ. ಪುರುಷ ಪ್ರದಾನ ಸಮಾಜದಲ್ಲಿ ಈ ರೀತಿಯ ಹೆಣ್ಣುಮಕ್ಕಳ ಶೋಷಣೆ ಅನವರತ ನಡೆದು ಬರುತ್ತಿರುವುದು ಬಹಳ ಖೇದದ ಸಂಗತಿಯಾಗಿದೆ. ನಮ್ಮ ಸಮಾಜ ಬಹಳ ಮುಂದುವರೆದಿದೆ ಎಂದು ಹೇಳುತ್ತಲೇ ನಾವು ಹಳೇ ಶಿಲಾಯುಗದ ಹಾದಿಯನ್ನು ತುಳಿಯುವುದು ವಿಪರ್ಯಾಸವೇ ಸರಿ. ಸರಿಯಾದ ರಕ್ಷಣೆ ಕೊಟ್ಟಾಗ ಮಾತ್ರ ಆಕೆ ನಿರ್ಭಯವಾಗಿ ದನಿ ಎತ್ತಲು ಸಾದ್ಯ. ಬರೀ ರಕ್ಷಣೆ ಕೊಟ್ಟು ಸುಮ್ಮನಿರದೆ ಅವಳಿಗೆ ನ್ಯಾಯ ಸಿಗುವಂತೆ ಮಾಡುವುದು, ಅವಳು ಎಲ್ಲರಂತೆ ಸಮಾಜದಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗುವುದು ಬಹಳ ಮುಖ್ಯವಾಗುತ್ತದೆ. ವಿಷಯವನ್ನು ಚೆನ್ನಾಗಿ ಮಂಡಿಸಿದ್ದೀರಿ
. ನಿಮಗೆ ಶುಭಾಶಯಗಳು. ಪಂಜುವಿಗೆ ಅಭಿನಂದನೆಗಳು.