ಬದಲಾವಣೆಯೊಂದಿಗೆ ಬದುಕು: ವೇದಾವತಿ. ಹೆಚ್. ಎಸ್.

ಅದೊಂದು ದಿನ ರಾಶಿ ಹಳೆಯ ಪುಸ್ತಕಗಳ ನಡುವೆ ಒಂದು ನೆನೆಪಿನ ಬುತ್ತಿಯಂತಿದ್ದ ಡೈರಿಯೊಂದು ನನ್ನ ಕೈಗೆ ಸಿಕ್ಕಿತ್ತು. ಆ ಡೈರಿಯು ೨೫ಸಂವಸ್ಸರವನ್ನು ಕಂಡು ಸಿಲ್ವರ್ದ ಜ್ಯೂಬಿಲಿಯ ಗಡಿಯನ್ನು ದಾಟಿತ್ತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಆ ಪುಟಗಳಲ್ಲಿ ನನ್ನ ಸ್ನೇಹಿತೆಯರ ಸುಂದರವಾದ ಒಂದೊಂದು ರೀತಿಯಲ್ಲಿರುವ ಹಸ್ತಾಕ್ಷರಗಳಿದ್ದವು. ಅದರಲ್ಲಿರುವ ಬರಹಗಳನ್ನು ಓದುತ್ತಾ ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಡೈರಿಯ ಒಂದೊಂದು ಪುಟಗಳಲ್ಲೂ ವೈವಿಧ್ಯಮಯ ರೀತಿಯಲ್ಲಿ ನನ್ನ ಗುಣಗಾನವನ್ನು ಹೊಗಳಿ ಬರೆದ ಬರಹಗಳನ್ನು ನೋಡಿ ಒಮ್ಮೆ ಕಣ್ಣು ಮಂಜಾದರೆ, ಇನ್ನೊಮ್ಮೆ ನಗುವನ್ನು ತರಿಸುತ್ತಿತ್ತು. ನೆನಪಿನ ಡೈರಿಯಲ್ಲಿದ್ದ ಸ್ನೇಹಿತೆಯರ ಹಸ್ತಾಕ್ಷರಗಳು ಯಾವ ಸಿನಿಮಾ ಡೈಲಾಗುಗಳಿಗೂ ಕಮ್ಮಿಯಿರಲಿಲ್ಲ. ಅವರೆಲ್ಲರ ಕೊನೆಯ ಬರಹಗಳ ಸಾಲುಗಳು ಒಂದೇ ಭಾವನೆಯನ್ನು ಸಾರುತ್ತಿತ್ತು. “ಈ ಮೂರು ವರ್ಷಗಳು ಹೇಗೆ ಕಳೆದೆವೆಂಬುದು ತಿಳಿಯುತ್ತಿಲ್ಲ. ನೀನು ಪುನಃ ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸಲು ಮರೆಯದಿರು”ಎಂಬುದು ಎಲ್ಲರ ಕಾಮನ್ ಡೈಲಾಗ್ ಆಗಿತ್ತು.

ಈ ಡೈರಿಯ ಬರಹಗಳು ನಾನು ಡಿಪ್ಲೋಮಾ ಓದಿ ಮುಗಿಸುವ ಸಂದರ್ಭದಲ್ಲಿ ಸ್ನೇಹಿತೆಯರೆಲ್ಲರೂ ಬೀಳ್ಕೊಡುವಾಗ ಅವರವರ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ರೀತಿಯಾಗಿತ್ತು. ಆದರೂ ಮೂರು ವರ್ಷಗಳಲ್ಲಿ ನಾವು ಪ್ರತಿಯೊಬ್ಬರನ್ನು ಅರ್ಥ ಮಾಡಿಕೊಳ್ಳುತ್ತಿದ್ದದ್ದು ಅಷ್ಟರ ಮಟ್ಟಿಗೆ ಇರುತ್ತಿತ್ತು. ಎಲ್ಲೋ ಕೆಲವರು ಮಾತ್ರ ನಮ್ಮ ಹತ್ತಿರದ ಸ್ನೇಹಿತರಾಗಿರುತ್ತಿದ್ದರು. ತುಂಬಾ ಅಭಿಮಾನದಿಂದ ನನ್ನ ಬಗ್ಗೆ ಎಲ್ಲವೂ ತಿಳಿದ ರೀತಿಯಲ್ಲಿ ಬರಹವನ್ನು ಸುಂದರವಾಗಿ ಡೈರಿಯಲ್ಲಿ ಬರೆದಿದ್ದರು. ಅವರೆಲ್ಲರು ಹಾಗೆ ಹೊಗಳಿ ಬರೆಯಲು ಕಾರಣ ಮುಂದೆಂದೂ ನಾವು ಸಿಗುವುದಿಲ್ಲವೇನೋ ಎಂಬುವುದು ಎಲ್ಲರ ಮನಸ್ಸಿನಲ್ಲಿರುತ್ತಿತ್ತು. ಅದು ಕೆಲವೊಮ್ಮೆ ಹೌದಾಗಿರುತ್ತಿತ್ತು. ಆದರೆ ಈಗ ಎಲ್ಲರ ನಂಬಿಕೆಗಳನ್ನು ಸುಳ್ಳು ಮಾಡಲು ವಾಟ್ಸಾಪ್, ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡು ಬೇರೆ ಬೇರೆಯಾಗಿದ್ದ ಕೆಲವು ಸ್ನೇಹಿತರನ್ನು ೨೫ವರ್ಷಗಳ ನಂತರ ಒಂದುಗೂಡಿಸುತ್ತಿದೆ. ಅದಕ್ಕಾಗಿ ನಾನು ಈ ಎರಡೂ ಜಾಲತಾಣಗಳನ್ನು ಎಷ್ಟು ಕೊಂಡಾಡಿದರೂ ಕಮ್ಮಿಯೆನ್ನಲ್ಲವೆನ್ನಬಹುದು.

ವಾಟ್ಸಾಪ್ ಮತ್ತು ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣಗಳು ಮನುಷ್ಯನ ಜೀವನದ ನಡುವೆ ಬಂದ ನಂತರ ಜನರಿಗೆ ಕೂತರೂ, ನಿಂತರೂ ಒಬ್ಬರಿಗೊಬ್ಬರು ಆ ಕೂಡಲೇ ತಮ್ಮಲ್ಲಿ ನಡೆದಿರುವ, ನಡೆಯುತ್ತಿರುವ ವಿಷಯಗಳನನ್ನು ಪೋಸ್ಟ್ ಮಾಡಿಕೊಂಡು ಇದ್ದಬದ್ದ ವಿಷಯಗಳನ್ನೇಲ್ಲವನ್ನೂ ಚಾಚುತಪ್ಪದೇ ತಿಳಿಸಿ, ಇರುವ ಸಂಬಂಧಗಳನ್ನು ಇಲ್ಲದಂತೆ ಮಾಡಿಕೊಳ್ಳುವುದರ ಜೊತೆಗೆ ದೂರವಾಗಿದ್ದವರನ್ನು ಹತ್ತಿರಕ್ಕೆ ಕರೆತಂದು ದಿನದ ಸಮಯದ ಮುಕ್ಕಾಲು ಭಾಗವನ್ನು ಜಾಲತಾಣಗಳಿಗೆ ವಿನಿಯೋಗಿಸಿಕೊಳ್ಳುತ್ತಾ, ತಮಗೆ ಬೇಡವಾಗಿರುವ ವಿಷಯಗಳನ್ನು ತಲೆಗೆ ಹಾಕಿಕೊಂಡು ಬಿಪಿ, ಶುಗರೆಂದು ವೈದ್ಯರ ಬಳಿಗೆ ಓಡುವ ಮಂದಿಗೇನು ಕಡಿಮೆಯಿಲ್ಲವೆಂದು ನನ್ನ ಅನಿಸಿಕೆ. ಇವುಗಳ ಬಳಕೆಗೆ ಮೊದಲು ನಾವು ಬರೆದ ಡೈರಿಯ ಬರಹಗಳಿರಬಹುದು ಅಥವಾ ಪತ್ರ ವ್ಯವಹಾರಗಳಿರಬಹುದು, ಅವುಗಳು ನಮ್ಮ ಕಾಲಕ್ಕೆ ಕೊನೆಯಾಗಿದೆಯೆಂದರೆ ತಪ್ಪಾಗಲಾರದು. ಪತ್ರದ ಮೂಲಕ ಯೋಗಕ್ಷೇಮ ಸಮಾಚಾರಗಳನ್ನು ಹಂಚಿಕೊಳ್ಳುತ್ತಿರುವ ಜನರು ಎಲ್ಲಿದ್ದಾರೆಂಬುದನ್ನು ನಾವೀಗ ಹುಡುಕುತ್ತಾ ಹೋದರೂ ಸಿಗುವುದು ದುಸ್ಥರವಾಗಿದೆ. ಪತ್ರದ ಬರಹವನ್ನು ಇಂದು ವಾಟ್ಸಾಪ್, ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣಗಳು ಬಂದು ತಿಂದು ಹಾಕಿದೆಯೆಂದರೆ ತಪ್ಪಾಗಲಾರದು. ಇಂತಹ ಜಾಲತಾಣಗಳು ಜನರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಿದ್ದರೂ ಮನುಷ್ಯನ ಭಾವನೆಗಳಿಗೆ ಪತ್ರದ ಮೂಲಕವಿದ್ದ ಸ್ಪಂದನೆ ಬಹುಶಃ ಅವುಗಳು ತುಂಬಲಾರವೆಂದು ನನ್ನ ಅನಿಸಿಕೆ.

ಇಷ್ಟೆಲ್ಲಾ ಡೈರಿಯ ಬಗ್ಗೆ ಹೇಳುತ್ತಿರುವಾಗ ಆ ಡೈರಿಯ ಒಳಗೆ ೨೫ವರ್ಷಗಳ ಹಿಂದೆ ನಾನಿಟ್ಟ ಒಂದು ಪತ್ರವು ನನ್ನನ್ನು ನೋಡಿ ನಗುತ್ತಿತ್ತು. ಅದು ನನ್ನ ಸ್ನೇಹಿತೆಯು ನನಗೆ ಚಿಕ್ಕಾದಾಗಿ ಚೊಕ್ಕವಾಗಿ ಬರೆದ ಪತ್ರವಾಗಿತ್ತು. ಆ ಪತ್ರವನ್ನು ಓದಿದ ನಾನು ಅದರ ಪೋಟೋ ತೆಗೆದು ವಾಟ್ಸಾಪ್ನಲ್ಲಿ ಅದನ್ನು ನನ್ನ ಗೆಳತಿಗೆ ಕಳುಹಿಸಿಕೊಟ್ಟೆ. ಕೂಡಲೇ ಅವಳಿಂದ ಉತ್ತರ ಬಂದಿತು. “ಓಹೋ, ಸಿಲ್ವರ್ಷ ಜೂಬಿಲಿ ಪತ್ರವಿದು, ಇದನ್ನು ಬಹಳ ನೀಟಾಗಿ ಇಟ್ಟುಕೊಂಡಿದ್ದೀಯಾ?ನಿನ್ನ ಮಕ್ಕಳಿಗೆ ಈ ಪತ್ರವನ್ನು ತೋರಿಸು, ಆ ಕಾಲದಲ್ಲಿ ನಮ್ಮಲ್ಲಿ ಎಷ್ಟೊಂದು ಸ್ನೇಹ, ಪ್ರೀತಿ ಉಕ್ಕಿ ಹರಿಯುತ್ತಿತ್ತೆಂದು ಹೇಳು”ಎಂದಳು. ಅದಕ್ಕೆ ನಾನು ಅವಳಿಗೆ ಮೆಸೇಜ್ ಮಾಡಿ”ಇಂದಿನ ಮಕ್ಕಳು ಹುಟ್ಟುವಾಗಲೇ ಮೋಬೈಲ್ ಎಂಬ ಯಂತ್ರವನ್ನು ಕೈಯಲ್ಲಿಟ್ಟುಕೊಂಡೆ ಹುಟ್ಟಿರುತ್ತಾರೆ. ನಮ್ಮಂತೆ ಅವರಿಗೆಲ್ಲಿ ಬರಬೇಕು ಪತ್ರಗಳ ವ್ಯವಹಾರ. ಏನಿದ್ದರೂ ವಾಟ್ಸಾಪ್ ಮತ್ತು ಫೇಸ್ಬಕ್ಕಿನಲ್ಲಿ ಅವರ ದುಃಖದುಮ್ಮಾನಗಳು, ಪ್ರೀತಿವಿಶ್ವಾಸಗಳು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ”ಎಂದಾಗ ಅವಳಿಂದ ನಗುವಿನ ಚಿಹ್ನೆ ವಾಟ್ಸಾಪ್ ವೆಬ್ ಪೇಜ್ನಲ್ಲಿ ಮೂಡಿತು.

ಇಪ್ಪತ್ತು ವರ್ಷಗಳ ಹಿಂದೆ ಪತ್ರದ ಮೂಲಕ ಬರೆದ ಬರಹಗಳು ಒಬ್ಬರಿಂದ ಮತ್ತೊಬ್ಬರಿಗೆ ತಲುಪಲು ಕಡಿಮೆಯೆಂದರೂ ಮೂರು ದಿನಗಳು ಬೇಕಾಗುತ್ತಿತ್ತು. ಕೆಲವೂಮ್ಮೆ ನಮ್ಮ ಹಿತೈಷಿಗಳು ಬರೆದ ಪತ್ರಗಳು ನಮ್ಮ ಕೈಗೆ ತಲುಪಲು ವಾರಗಳೂ ತೆಗೆದುಕೊಳ್ಳುತ್ತಿತ್ತು. ಅಂದು ಇಂದಿನಂತೆ ವಾಟ್ಸಪ್ ಮತ್ತು ಫೇಸ್ಬುಕಿನಂತೆ ವಿಷಯಗಳು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ತಲುಪುವ ರೀತಿಯಲ್ಲಿ ಪತ್ರದ ಮೂಲಕ ತಿಳಿಯಲು ಸಾಧ್ಯವಿಲ್ಲವಾಗಿತ್ತು. ಪತ್ರಗಳ ಬರಹವು ಬಹಳಷ್ಟು ಗೌಪ್ಯತೆಯಿಂದ ಕೂಡಿರುತ್ತಿತ್ತು. ಪತ್ರವನ್ನು ಬರೆದವನು ಮತ್ತು ಯಾರಿಗೆ ನಾವು ಬರೆದು ಫೋಸ್ಟ್ ಮಾಡಿರುತ್ತೇವೆಯೋ ಅವರಿಗೆ ಮಾತ್ರ ವಿಷಯಗಳು ತಿಳಿಯುತ್ತಿತ್ತು. ಆದರೆ ಇಂದು ವಾಟ್ಸಪ್ ಗ್ರೂಪ್ ಅಥವಾ ಫೇಸ್ಬಕಿನಲ್ಲಿ ನಾವು ಯಾವುದೇ ಒಂದು ವಿಷಯವನ್ನು ವಿನಿಮಯ ಮಾಡಿಕೊಳ್ಳಬೇಕೆಂದರೂ ಅಲ್ಲಿರುವ ಸ್ನೇಹಿತರ ಸಂಖ್ಯೆಯನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ತೋಚಿದ ವಿಷಯವನ್ನು ಫೋಸ್ಟ್ ಮಾಡಲು ಹೋದರೆ ನಮ್ಮ ಘನತೆಗೆ ಕುಂದು ಬರುವ ಸಾಧ್ಯತೆಯೇ ಹೆಚ್ಚು. ಅವುಗಳು ಏನಿದ್ದರೂ ಒಂದು ಮನೋರಂಜನೆ ರೀತಿಯಲ್ಲಿರುತ್ತದೆಯೆನ್ನಬಹುದು. ಅಲ್ಲಿ ನಮ್ಮ ಸ್ನೇಹಿತರಾಗಿ ಬರುವವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಹಿತೈಷಿಗಳಾಗಿರಲಾರರು.

ಇನ್ನು ಟೆಲಿಫೋನ್ ಬಂದ ನಂತರ ಪತ್ರದ ಮೂಲಕ ಮನುಷ್ಯನ ಸಂಪರ್ಕ ಅಲ್ಪಸ್ವಲ್ಪ ಕಡಿಮೆಯಾಯಿತೆಂದು ಹೇಳಬಹುದು. ಅದರೂ ಟೆಲಿಫೋನ್ ಮನೆ ಮನೆಗೆ ಬಂದರೂ ಅಂದಿನ ದಿನಗಳಲ್ಲಿ ಪತ್ರಗಳ ಮೂಲಕ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವುದಿತ್ತು. ಅದಕ್ಕೂ ಕಾರಣವಿದೆ. ಟೆಲಿಫೋನ್ ಬಿಲ್ ಅಂದಿನ ದಿನಗಳಲ್ಲಿ ದುಬಾರಿಯಾಗಿತ್ತು. ಎಸ್ ಟಿ ಡಿ ಕರೆಯನ್ನು ಮಾಡಿ ಜಾಸ್ತಿ ಮಾತನಾಡಿದರೆ ಬಿಲ್ ಜಾಸ್ತಿ ಬರುತ್ತಿತ್ತು. ಲೋಕಲ್ ಕರೆಗಳು ಸಹ ಇಂದಿನ ಮೊಬೈಲ್ ಕರೆಗಳಿಗೆ ಹೋಲಿಸಿದರೆ ತುಂಬಾ ದುಬಾರಿಯೇ ಆಗಿರುತ್ತಿತ್ತು. ಹಾಗಾಗಿ ನಮಗೆ ಬೇಕಾದ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿ ಫೋನ್ ಕರೆಯನ್ನು ಮುಗಿಸುವುದಿತ್ತು. ಈಗ ಹಳೆಯ ದಿನಗಳನ್ನೇಲ್ಲವನ್ನು ಯೋಚಿಸುವಾಗ ಮನಸ್ಸಿನಲ್ಲಿ ಕಾಡುವುದೆನೆಂದರೆ’ಅಂದು ಎಲ್ಲವೂ ಮಿತಿಮೀರದಂತಿದ್ದ ಕಾರಣ ಸಂಬಂಧಗಳು ಗಟ್ಟಿಯಾಗಿರುತ್ತಿತ್ತು’ಎಂದು ಅಂದುಕೊಳ್ಳುತ್ತೇನೆ. ಅಂದಿನವರು ಹೇಳುವ ಹಾಗೆ “ಮಾತೇ ಮಾಣಿಕ್ಯ”ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಷ್ಟೋ ಸಂಬಂಧಗಳು ಒಡೆದು ಹೋಗದಂತೆ ಕಾಪಾಡಿಕೊಳ್ಳಬಹುದು. ಹಿತಮಿತವಾದ ಮಾತುಗಳ ಸಂಭಾಷಣೆಗಳಿಂದ. ಮೌಲ್ಯಯುತವಾದ ಬರಹಗಳಿಂದ ನಾವು ಎಲ್ಲರೊಂದಿಗೂ ಬೆರೆತುಬಾಳಲೂಬಹುದು. ಮನುಷ್ಯನ ಜೀವನದಲ್ಲಿ ನಮಗೆ ಯಾವುದು ಎಷ್ಟು ಬೇಕು, ಅದನ್ನು ಹೇಗೆ ಬಳಸಬೇಕೆಂದು ಅರಿತರೆ ಯಾವುದೂ ಕೆಟ್ಟದಲ್ಲ. ಕಾಲ ಬದಲಾದಂತೆ ಬದಲಾವಣೆಗಳು ಸಹಜ, ಆದರೂ ಹೊಸತನದೊಂದಿಗೆ ಹಳೆಯದನ್ನೂ ನೆನೆಪಿಸಿಕೊಂಡು ಮುಂದೆ ಹೆಜ್ಜೆಯನ್ನಿಟ್ಟರೆ ಒಳಿತು.

-ವೇದಾವತಿ. ಹೆಚ್. ಎಸ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x