ದಿನವಿಡೀ ಒಂಟಿ ಪಿಶಾಚಿಯಂತೆ ಮನೆಯಲ್ಲೇ ಇರುತ್ತಿದ್ದ ಕೀರ್ತಿಗೆ ಈ ಲಾಕ್ಡೌನ್ ಪಿರಿಯಡ್ ನಲ್ಲಿ ಗಂಡ ,ಮಕ್ಕಳು ಮನೇಲಿ ಇರೋದು ಒಂದು ರೀತಿಯ ಸಂತಸಕೂಡ ಕೊಟ್ಟಿದೆ. ಎಲ್ಲರೂ ಒಟ್ಟಿಗೆ ಬೆಳಗಿನ ತಿಂಡಿ ತಿನ್ನೋದು, ಒಟ್ಟಿಗೆ ಮಾತಾಡುತ್ತಾ ಊಟ ಮಾಡೋದು, ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಸಂಜೆಯ ಸಮಯ ಕಳೆಯೋದು, ಜೀವನಕ್ಕಾಗಿ ಗಂಡನ ವರ್ಕ್ ಫ್ರಂ ಹೋಂ ಕೆಲಸ ಇವೆಲ್ಲವೂ ಎಷ್ಟೋ ವರ್ಷಗಳ ನಂತರ ಕೀರ್ತಿಗೆ ನೆಮ್ಮದಿಯ ಜೀವನ ನೀಡಿದೆ. ಇದು ಕೀರ್ತಿಯ ಕಥೆ
ದಿನಾ ಬೆಳಿಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ಹುಲ್ಲು, ಅಡಿಕೆ ಹಾಳೆ ತಂದು ಅವುಗಳನ್ನು ದನಗಳಿಗೆ ಹಾಕಿ, ಮಕ್ಕಳಿಗೆ ಶಾಲೆಗೆ ಬಿಟ್ಟು ಮತ್ತೆ ತೋಟದ ಕೆಲಸಕ್ಕೆ ಮರಳುವ ಶಂಕರಪ್ಪನಿಗೆ ಲಾಕ್ ಡೌನ್ ಶುರುವಾದ ಕಾರಣ ಈ ಗಡಿಬಿಡಿಯ ಜೀವನದಿಂದ ಸ್ವಲ್ಪ ಆರಾಮ ಸಿಕ್ಕಿತು ಅಷ್ಟೇ.
ನಗರದ ವ್ಯಾಮೋಹದಿಂದ ಹೆತ್ತವರನ್ನು ತೊರೆದು ಹೋದವರು ಲಾಕ್ ಡೌನ್ ನಿಂದ ಗೃಹಬಂಧಿಯಾಗಿ ಊಟಕ್ಕೆ ಪರದಾಡುವಾಗ ಮನೆಯ ದಾಸ್ತಾನು ಕೋಣೆಯೊಳಗೆ 2 ತಿಂಗಳ ಅಕ್ಕಿ, ತೋಟದಲ್ಲಿರುವ ಸೊಪ್ಪು, ಹಿತ್ತಲಲ್ಲಿ ಬೆಳೆದ ತರಕಾರಿ, ಕೊಟ್ಟಿಗೆಯಲ್ಲಿ ಹಾಲು ಕರೆಯುವ ದನಗಳು, ತೆಂಗಿನ ಮರದಲ್ಲಿರುವ ಕಾಯಿಗಳು, ಪಪ್ಪಾಯ, ಚಿಕ್ಕು, ಬಾಳೆ ಹಣ್ಣುಗಳು ಲಾಕ್ ಡೌನ್ ‘ನ ಬಿಸಿ ತಾಗದಂತೆ ಶಂಕರಪ್ಪನನ್ನು ಉಳಿಸಿದವು. ಇದು ಶಂಕರಪ್ಪನ ಕಥೆ.
ಲಾಕ್ ಡೌನ್ ನಿಂದ ರಜೆಯಿದ್ದರೂ ಬೆಳಿಗ್ಗೆ ಬೇಗ ಎದ್ದು ಅಡುಗೆ ಕೆಲಸ ಮಾಡುತ್ತಿದ್ದ ಶ್ರಾವಣಿಯನ್ನು ಕಂಡ ಸುಮಂತ್ “ಯಾಕೆ ಇಷ್ಟು ಬೇಗ ಅಡುಗೆ ಮಾಡ್ತಾ ಇದ್ದಿ? ಆರಾಮವಾಗಿ ಅಡುಗೆ ಮಾಡಿ ಬಿಸಿಬಿಸಿಯಾಗಿ ಊಟ ಮಾಡಬಹುದಿತ್ತು ಅಲ್ವಾ ?ಎಂದಾಗ ಕಣ್ಣಂಚಿನಲಿ ನೀರು ಬಂದರೂ ಏನೂ ಮಾತನಾಡದೇ ಉಳಿದ ಕೆಲಸ ಮಾಡಲು ಹೋದಳು. ರಜೆಯಿದ್ದರೂ ಪತ್ನಿ ತನ್ನ ಜೊತೆ ಸಹಕರಿಸುತ್ತಿಲ್ಲ ಎಂದು ಸಿಟ್ಟು ಮಾಡಿಕೊಂಡ ಸುಮಂತ್ ಮೌನಕ್ಕೆ ಶರಣಾಗಿ ಶ್ರಾವಣಿಯನ್ನು ಗಮನಿಸುತ್ತಾ ತನ್ನ ಕೋಣೆಯೊಳಗೆ ಹೋಗಿ ಕೂತ.
ಸುಮಂತ್ ಬೆಳಗಿನ ಉಪಹಾರ ಮುಗಿಸಿ ಏಳುವಷ್ಟರಲ್ಲಿ ಮಗುವಿನ ಅಳು ಕೇಳಿ ಅರ್ಧತಿಂಡಿಯನ್ನು ಬಿಟ್ಟು ಓಡಿ ಹೋಗಿ ಮಗುವನ್ನು ಎತ್ತಿಕೊಂಡು ಬಂದು, ಮಗುವಿಗೆ ಹೊಟ್ಟೆಗೆ ಕೊಟ್ಟು ಒಂದು ಕೈಯಲ್ಲಿ ಮಗುವನ್ನು ಹಿಡಿದು ಕೊಂಡು ಮತ್ತೊಂದು ಕೈಯಲ್ಲಿ ಅಡುಗೆ ಮಾಡುವುದನ್ನು ನೋಡಿದ ಸುಮಂತ್ ಗೆ ತಾನು ಮಾಡಿದ ತಪ್ಪಿನ ಅರಿವಾಗಿ ಹೋಗಿತ್ತು. ತಾನು ಬೆಳಿಗ್ಗೆ ಹೋದರೆ ರಾತ್ರಿಯ ವರೆಗೂ ತನ್ನದೇ ಅಂಶವಾದ ಮಗುವನ್ನು ಒಬ್ಬಳೇ ನೋಡಿಕೊಳ್ಳುವ ಶ್ರಾವಣಿಯ ಬಗ್ಗೆ ಹೆಮ್ಮೆ ಎನಿಸಿತು. ಇನ್ನಾದರೂ ಸಮಯ ಸಿಕ್ಕಾಗ ತಾನು ಮನೆ ಕೆಲಸದಲ್ಲಿ ಕೈ ಜೋಡಿಸಬೇಕೆಂದು ಯೋಚಿಸಿ ಶ್ರಾವಣಿಗೆ ಕೆಲಸದಲ್ಲಿ ಸಹಾಯ ಮಾಡಿ ಅವಳ ಮನಸ್ಸನ್ನು ಗೆದ್ದ. ಇದು ಶ್ರಾವಣಿ ಸುಮಂತ್ ಕಥೆ.
ದಿನಗೂಲಿ ಮಾಡಿ ಬಂದ ಹಣದಲ್ಲಿ ಸಾರಾಯಿ ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುವ ಗಂಡನಿಂದ ಹಿಂಸೆ ಪಡುತ್ತಿದ್ದ ರೇಣುಕಾಳಿಗೆ ಲಾಕ್ ಡೌನ್ ನಿಂದ ಹೊರಹೋಗಲಾಗದೇ ಮನೆಯಲ್ಲೇ ಉಳಿದ ಗಂಡನಿಂದ ಹೊಡೆತದ ಜೊತೆಗೆ ಊಟವಿಲ್ಲದೇ ಬದುಕುವುದು ಹೇಗೆ ?ಎಂಬ ಚಿಂತೆಯಿಂದಲೇ ಹಣ್ಣಾದಳು.ದಿನಗೂಲಿ ಕೆಲಸದವರಿಗೆ ಸರಕಾರದ ವತಿಯಿಂದ ಉಚಿತ ರೇಷನ್ ಎಂಬ ಸ್ಕೀಮ್ ನಿಂದಾಗಿ ರೇಣುಕಾಳಿಗೆ ಹೊಟ್ಟೆಯ ಸಮಸ್ಯೆ ತೀರಿತೆಂದು ಸಮಾಧಾನವಾಯಿತು. ಲಾಕ್ ಡೌನ್ ನಿಂದ ಶರಾಬು ಸಿಗದೇ ಇದ್ದಾಗ ತನ್ನ ಗಂಡನಲ್ಲಾದ ಬದಲಾವಣೆಯಿಂದ ಎಂದೂ ಕಾಣದ ಪ್ರೀತಿಯ ಸವಿಯನ್ನು ರೇಣುಕಾ ಕಂಡಳು. ಇದು ರೇಣುಕಾಳ ಕಥೆ.
ಇವೆಲ್ಲವೂ ಕಾಲ್ಪನಿಕ ಕಥೆಗಳಾದರೂ ಯಾರದೋ ಜೀವನದಲ್ಲಿ ನಡೆದಿರಬಹುದು. ಲಾಕ್ ಡೌನ್ ನಿಂದ ನನ್ನ ಬದುಕಿನಲ್ಲಾದ ಬದಲಾವಣೆ ಹೇಳಬೇಕೆಂದರೆ ವಿಶೇಷತೆ ಏನು ಇಲ್ಲ… ನಾನೊಬ್ಬಳು ಕೃಷಿಕನ ಪತ್ನಿ ಕಾರಣ ಇಷ್ಟೇ.. ! ಐಟಿ ಬಿಟಿಯವರಂತೆ ಲಾಕ್ ಡೌನ್ ಅಥವಾ ಅನಾರೋಗ್ಯದ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಅಲ್ಲ ನಮ್ಮ ಜೀವನ . ದಿನ ಬೆಳಗಾದರೆ ದನದ ಕೊಟ್ಟಿಗೆ, ದನಗಳಿಗೆ ಮೇವು, ಹಾಲು ಕರೆಯುವುದು,ಅಡಿಕೆ ಗಿಡಗಳಿಗೆ ನೀರು ಬಿಡುವುದು, ಮಳೆಗಾಲಕ್ಕಾಗಿ ಸೌದೆ ಸಂಗ್ರಹಿಸಿಡುವುದು ಇವು ನಿತ್ಯದ ಕೆಲಸಗಳು.
ಲಾಕ್ ಡೌನ್ ಸಮಯದಲ್ಲಿ ಯಾರಿಗೆ ಏನು ಸಮಸ್ಯೆಯೋ ತಿಳಿಯದು. ಈ ಲಾಕ್ ಡೌನ್ ಮಾತ್ರ ನನ್ನನ್ನು ತುಂಬಾ ಕಾಡಿದೆ. ಎರಡು ದಿನ ಹೈನುಗಾರರಿಂದ ಕೆಎಂಎಫ್ ನವರು ಹಾಲು ಖರೀದಿ ಮಾಡದ ಕಾರಣ ಡೈರಿಗೆ ಹಾಕುವ ಸುಮಾರು ಆರವತ್ತು ಲೀಟರ್ ನಷ್ಟು ಹಾಲಿಗೆ ಒಂದು ಗತಿ ಕಾಣಿಸುವುದೇ ದೊಡ್ಡ ಸಾಧನೆಯಾಯಿತು. ಯಾರಿಗಾದರೂ ಉಚಿತವಾಗಿ ಕೊಡೊಣವೆಂದರೆ ನೆರೆಹೊರೆಯವರ ಬಳಿ ಹಾಲು ಕರೆಯುವ ದನಗಳಿವೆ. ಯೋಚಿಸಿ ಯೋಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ಸ್ವಲ್ಪ ಪನ್ನೀರ್, ಬರ್ಫಿ, ಮೊಸರು, ಕುಲ್ಫಿ ಮಾಡುವುದೆಂದು. ಮನೆಯಲ್ಲಿ ಗೋಬರ್ ಗ್ಯಾಸ್ ಇದ್ದದ್ದರಿಂದ ಒಂದು ರೂಪಾಯಿ ಖರ್ಚಿಲ್ಲದೇ ಇವೆಲ್ಲವನ್ನೂ ಮಾಡಿದೆ.
ನನ್ನಂತೆ ಎಷ್ಟೋ ರೈತ ಕುಟುಂಬಗಳು ಬೆಳಸಿದ ಬೆಳೆಯನ್ನು ಮಾರಲಾಗದೇ ಒದ್ದಾಡಿದೆಯೋ? ಎಷ್ಟೋ ಕಾರ್ಮಿಕರು ಒಂದು ಹೊತ್ತಿನ ಊಟವಿಲ್ಲದೇ ಒದ್ದಾಡಿದ್ದಾರೋ? ನಮ್ಮನ್ನು ರಕ್ಷಿಸಲು ಆರಕ್ಷಕರು , ವೈದ್ಯರು, ದಾದಿಯರು ತಮ್ಮ ಕುಟುಂಬದಿಂದ ದೂರ ಇದ್ದಾರೋ ?
ಬದುಕು ನಿಂತ ನೀರಲ್ಲ… ತಿರುಗುವ ಭೂಮಿಯಂತೆ ಆಗಬೇಕಾದರೆ ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಮನೆ ಬಿಟ್ಟು ಹೊರಬರದೇ ಕರೋನಾ ಮಹಾಮಾರಿಯನ್ನು ಓಡಿಸೋಣ. ದೇಶವನ್ನು ಸುಭಿಕ್ಷೆಯಲ್ಲಿಡುವೆವೆಂದು ಪಣ ತೊಡೋಣ.
–ಜ್ಯೋತಿ ಬಾಳಿಗ