– 1 –
ಡಿಶಂಬರ್ – 25, ಕ್ರಿಸಮಸ್ ಹಬ್ಬ. ಯೇಸು ಈಗಲೂ ಆ ಗೋಡೆಯ ಮೇಲೆ ನೇತಾಡುತ್ತಿದ್ದ. ಪ್ರತಿ ಹೊಸ ವರ್ಷದಂದು ಯೇಸು ಚಿತ್ರವಿರುವ ದಿನದರ್ಶಿಕೆ ತಂದು ಪವಿತ್ರ ತನ್ನ ಮನೆಯಲ್ಲಿ ನಿತ್ಯ ಆರಾಧನೆ ಸಲ್ಲಿಸುವದನ್ನು ರೂಡಿಸಿಕೊಂಡಿದ್ದಳು. ಮನುಕುಲವನ್ನೇ ಉದ್ಧರಿಸಿದ ಯೇಸುತನ್ನನ್ನು ಕೂಡ ಒಂದಿಲ್ಲ ಒಂದು ದಿನ ಉದ್ಧರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಅವಳದು. ಆ ಕ್ಯಾಲೆಂಡರದಲ್ಲಿ ಡಿಶೆಂಬರ 1980 ಎಂದು ಅಚ್ಚಾದ ಕೊನೆ ತಿಂಗಳ ಪುಟದ ಬಣ್ಣವೆಲ್ಲ ಮಾಸಹೋಗಿ ಹೊಗೆ ಹಿಡದವರಂತೆ ಬಣ್ಣ ಬದಲಾಗಿ ಸ್ಪಷ್ಟವಾಗಿ ಕಾಣದ ದಿನಾಂಕಗಳ ನಡುವೆ ಕೆಂಪು ಬಣ್ಣದಿಂದ ಅಚ್ಚಾದ ಕೆಲವು ರಜಾ ದಿನಗಳು ಮಾತ್ರ ಎದ್ದು ಕಾಣುತ್ತಿದ್ದವು. ಇವುಗಳಲ್ಲಿ ಈಗ ಅವಳ ಕಣ್ಣಿಗೆ ಗೋಚರಿಸಿತ್ತಿದ್ದದು ಡಿಶಂಬರ್ – 25 ಕ್ರಿಸಮಸ್ ಹಬ್ಬ ಇರುವುದನ್ನು ನೆನಪಿಸುತ್ತಿತ್ತು.
ಇದೇ ವರ್ಷದ ಆರಂಭದ ಜನೇವರಿ ಮೊದಲ ವಾರದಲ್ಲಿ ಈ ಕ್ಯಾಲೇಂಡರ್ ತುಂದು ಯೇಸುನನ್ನು ಆರಾಧಿಸಿ ಪ್ರಾಥಿಸಿದ್ದಳು. “ಓ ಜಿಸಸ್ ನೀನು ಇಡೀ ಲೋಕವನ್ನೇ ಉದ್ಧರಿಸಿದ ಹಾಗೇ ನನ್ನನ್ನು ಉದ್ಧರಿಸು ಮೈ ಮಾರಿ ಬದುಕುವ ಈ ಕಾಯಕದಿಂದ ನನ್ನ ವಿಮೋಚನೆ ಮಾಡು…ನನ್ನ ಈ ಪಾಪದ ನರಕದಿಂದ ಪಾರು ಮಾಡಲು ಇನ್ನೊಮ್ಮೆ ಅವತರಿಸಿ ಬಾ… ಪಾಪಿಗಳ ಪಾಲಿನ ಪ್ರೀತಿಯ ದೇವರು ನೀನು.. ಈ ಪಾಪಿಯನ್ನು ರಕ್ಷಿಸಲು ದಯವಿಟ್ಟು ಇನ್ನೊಮ್ಮೆ ಬಂದು ಬಿಡು….” ಎಂದು ಪ್ರಾರ್ಥಿಸಿದ್ದಳು. ಹಾಗೇ ಪ್ರತಿದಿನ ತಪ್ಪದೇ ಪ್ರಾರ್ಥಿಸುವದು ರೂಢಿಸಿಕೊಂಡಿದ್ದಳು. ಹಾಗೇ ತನ್ನಲ್ಲಿ ಬರುವ ಪಾಪಿ ಮನುಷ್ಯರ ಮುಖದಲ್ಲಿ ಪಾಪಿಗಳ ಪಾಲಿನ ದೇವರನ್ನು ಹುಡುಕಲು ಹೋಗಿ ಸೋಲುತ್ತಿದ್ದಳು. ಪವಿತ್ರ ಒಮ್ಮೊಮ್ಮೆ ಮನುಷ್ಯ ರೂಪದ ರಾಕ್ಷಸರನ್ನು ಕಂಡು ನಡಗುತ್ತಿದ್ದರೂ ತನ್ನ ಕಾಯಕ ಮುಂದುವರಸಿಕೊಂಡು ಹೋಗುವದು ಅವಳಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಬರುವ ಗಿರಾಕಿಗಳು ಆದಷ್ಟು ಸುಶಿಕ್ಷಿತರೂ ಉತ್ತಮರೂ ಆಗಿರಬೇಕು ಎನ್ನುವ ಬದ್ಧತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಳು. ತನ್ನ ಗಳಿಕೆ ಸ್ವಲ್ಪ ಕಡಿಮೆಯಾದರು ಕುಡುಕರು ಕ್ರೂರಿಗಳು ಬಂದರರ ಮುಲಾಜಿಲ್ಲದೆ ಇಲ್ಲ ಎಂದು ನಿರಾಕರಿಸುತ್ತಿದ್ದಳು.
ತನ್ನನು ಉದ್ಧರಿಸಬಲ್ಲ ಭಗವಂತನ ನಿರೀಕ್ಷೆಯಲ್ಲಿ ಒಂದು ದಿನ ಯಾರದೋ ರೂಪದಲ್ಲಿ ಪವಾಡ ಸದೃಶ್ಯವಾಗಿ ಯೇಸು ತನ್ನ ಮನೆಗೆ ಬಂದೇ ಬರುತ್ತಾನೆ ಎನ್ನುವ ಬಲವಾದ ನಂಬಿಕೆಯೊಂದಿಗೆ ದಿನ ದೂಡುತ್ತಿದಗದಳು. ಪ್ರತಿ ವರ್ಷದಂತೆ ಈ ವರ್ಷವೂ ಜನವರಿ … ಫೆಬ್ರುವರಿ…. ಮಾರ್ಚ್ ಹೀಗೆ ತಿಂಗಳುಗಳು ಕಳೆದು ವರ್ಷದ ಕೊನೆ ತಿಂಗಳು ಡಿಸೆಂಬರ ಬಂದಿತ್ತು. ಈಗ ಕ್ರಿಸ್ಮಸ್ ಹಬ್ಬ, ಈ ಹಬ್ಬದ ಸುಂದರ ಮುಂಜಾವು ನೂರಾರು ಆಸೆ ನಿರೀಕ್ಷೆ…. ಹೊಸ ..ಹೊಸ ಕನಸುಗಳೊಂದಿಗೆ ಎಚ್ಚರವಾದ ಕೇರಿಯ ದಾರಿಗುಂಟ ದೃಷ್ಟಿ ಹರಿಸಿದಳು. ಕೇರಿಯ ತುಂಬೆಲ್ಲ ಹಬ್ಬದ ಸಂಭ್ರಮ. ಚಿಕ್ಕವರು… ದೊಡ್ಡವರು… ಬಣ್ಣ ಬಣ್ಣದ ಬಟ್ಟೆಗಳು ತೊಟ್ಟು ಆಗಲೇ ಸಂಭ್ರಮಿಸುತ್ತಿದ್ದರು. ದೂರದ ಚರ್ಚ್ ಮೇಲಿನ ಶಿಲುಬೆಯೂ ಬೆಳಗಿನ ಮಬ್ಬುಗತ್ತಲೆಯಲ್ಲು ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ಅದನ್ನು ನೋಡುತ್ತ ಪವಾಡವೆಂಬಂತ್ತೆ ತನ್ನ ಕನಸಿನ ಏಸು ಚರ್ಚ್‍ನಿಂದ ಹೊರಬಂದು ತನ್ನ ಮನೆಯತ್ತ ಹೆಜ್ಜೆ ಹಾಕಬಹುದೆ ಎಂದು ಯೋಚಿಸುತ್ತ ನಿಂತವಳಿಗೆ ಆತುರಾತುರವಾಗಿ ಬಂದ ಜಾನ್ ಎಚ್ಚರಿಸಿದ್ದ.
ಜಾನ್ ! ಇದೇ ಕೇರಿಯ ಹುಡುಗ. ಕೇರಿಗೆ ಬರುವ ಗೀರಾಕಿಗಳು ಮತ್ತು ಗಿರಾಕಿಗಳು ಬಯಸುವ ಹೆಂಗಸರಿನ ನಡುವೆ ಒಂದು ಕೊಂಡಿ ಇದ್ದಂತೆ, ಅಂದರೆ ಒಂದತರಾ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದವನು. ಹೊಸ ಹೊಸ ಶ್ರೀಮಂತ ಗಿರಾಕಿಗಳನ್ನು ಹುಡುಕಿ ತರುವದು ಮತ್ತು ವ್ಯವಹಾರ ಕುದರಿಸುವಲ್ಲಿ ಈತ ನಿಸ್ಸೀಮ!. ಯಾರನ್ನ ಯಾರ ಬಳಿಗೆ ಕಳಿಸಬೇಕು, ಯಾರು ಎಷ್ಟು ದುಡ್ಡು ಕೊಡಬಹುದು ಯಾರಿಗೆ ಯಾವ ಹೆಣ್ಣು ಮ್ಯಾಚ್ ಆಗಬಹುದು ಎನ್ನುವದು ಎಲ್ಲ ಅಳೆದು ತೂಗಿ ನೋಡಿ ನಿರ್ಧರಿಸುತ್ತಿದ್ದ. ಈ ಜಾಯಮಾನದ ಈ ಜಾನನೇ ಈಗ ಪವಿತ್ರಳ ಮುಂದೆ ಬಂದು ನಿಂತು-
“ಅಕ್ಕಾ ಇಂದು ರಾತ್ರಿ ನಮ್ಮಣ್ಣಾ ಚೇತನ್ ಬರ್ತಾನೆ’ ಎಂದಾಗ ಜಾನ್ ಬರುವ ಗಿರಾಕಿಯನ್ನು ಅಣ್ಣಾ ಎಂದು ಹೊಗಳುತ್ತಿರುವುದು ಕಂಡು ಪವಿತ್ರ ಕುತೂಹಲದಿಂದ ಕೇಳಿದಳು.
“ಯಾರೋ … ಆ ನಿನ್ನ ಅಣ್ಣ ?”
“ಅದೇ ನಮ್ಮ ಊರ ಹೀರೋ ಅಕ್ಕ ಚೇತನ್… ನಮ್ಮಂಥ ಬಡವರ ಪಾಲಿನ ಸಾಕ್ಷಾತ್ ದೇವರು” ಎಂದು ಹೊಗಳಿದ್ದು ಕಂಡು –
“ಸುಮಸುಮ್ಮನೆ ಏನಾದರೂ ಹೇಳಿ ಯಾರನ್ನಾದರೂ
ಕರಕೊಂಡು ಬರಬೇಡ ಇಲ್ಲಿ” ಎಂದಾಗ-
“ಅಕ್ಕ ನೀನು ಟೇನಷನ್ ತಗೋಬೇಡಾ ನಿನ್ನ ಟೇಸ್ಟ್ ನನಗೆ ಗೊತ್ತಿಲ್ವಾ…. ಮತ್ಯಾಕೆ ಚಿಂತೆ…ಅದೆಲ್ಲ ನನಗೆ ಬಿಡು” ಎಂದು ಹೇಳುತ್ತ ಜಾನ್ ಅಲ್ಲಿಂದ ಹೊರಟು ಹೋಗಿದ್ದ.
ಹೌದು! ಪವಿತ್ರ ಎಲ್ಲರಿಗೂ ಒಪ್ಪಿಕೊಳ್ಳುವಳಲ್ಲ. ಅದು ಜಾನಗೂ ಗೊತ್ತಿದ್ದ ಮಾತು. ಅವಳು ಉಪವಾಸ ಇರಬಲ್ಲಳು. ಆದರೆ ಕೊಳಕು, ಹೊಲಸು ಗಿರಾಕಿಗಳನ್ನೆಲ್ಲ ಎಂದಿಗೂ ಒಪ್ಪಿಕೊಳ್ಳುವಳಲ್ಲ. ಅವಳಿಗೆ ಒಳ್ಳೆಯ ಜಂಟಲ್‍ಮ್ಯಾನ್ ಥರಾ ಕಾಣೋ ಸುಶಿಕ್ಷಿತ ವ್ಯಕ್ತಿಗಳೊಂದಿಗೆ ಮಾತ್ರ ಬೆರೆಯುತ್ತಿದ್ದಳು. ಅವಳು ತನ್ನ ವ್ಯಕ್ತಿತ್ವ ಕೂಡ ಅಷ್ಟೇ ನೀಟಾಗಿ ನಿರ್ವಹಿಸಿದ್ದಳು. ನೋಡಲು ತೆಳ್ಳಗೆ, ಬೆಳ್ಳಗೆ, ತುಂಬ ಲಕ್ಷಣವಾಗಿ ಸಂಪ್ರದಾಯ ಮನೆತನದ ಹೆಣ್ಣಿನಂತೆ ತೋರುತ್ತಿದ್ದಳು. ಅವಳ ಸಾಮಿಪ್ಯ ಸಿಕ್ಕವರಿಗೆಲ್ಲ ಅದೃಷ್ಟವಂತರು ಎಂದು ಭಾವಿಸಲಾಗುತ್ತಿತ್ತು. ಅಂಥವಳ ಮನೆಗಿಂದು ಚೇತನನ ಆಗಮನ. ಅದು ಪವಿತ್ರ ಮತ್ತು ಚೇತನನ್ನು ಒಂದುಗೂಡಿಸಲು ಜಾನ್ ಮಾಡಿದ ಉಪಾಯವಾಗಿತ್ತು. ಪವಿತ್ರಳ ಮೂಲಕ ಭಗ್ನಗೊಂಡ ತನ್ನ ಗುರುವಿನ ಹೃದಯಕ್ಕೆ ಮುಲಾಮು ಸವರಿ ತನ್ನ ಗುರುವಿನ ಋಣ ತೀರಿಸುವ ಒಂದು ಪ್ರಯತ್ನ ಜಾನದಾಗಿತ್ತು. ಚೇತನ ಸಾಮಾಜಿಕ ಕಳಕಳಿಯುಳ್ಳ ಯುವಕ ತನ್ನೂರಿನ ಹಲವಾರು ಸುಧಾರಣೆಗಳಿಗೆ ಕಾರಣನಾದವ. ಜನರ ಹಕ್ಕುಗಳಿಗಾಗಿ, ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ, ಚಳುವಳಿಗಳನ್ನು ನಡೆಸಿ ಭ್ರಷ್ಟ ಅಧಿಕಾರಿಗಳಿಗೆ, ದುಷ್ಟ ರಾಜಕಾರಣಿಗಳಿಗೆಲ್ಲ ಸಿಂಹಸ್ವಪ್ನನಾದವ ದೀನ ದಲಿತರ ಪಾಲಿಗೆ ದೇವರಾಗಿದ್ದ. ಇಂಥ ಚರಿತ್ರೆಯ ಚೇತನನಿಗೆ ಜಾನ್ ಒಬ್ಬ ಅನುಯಾಯಿ ಆಗಿದ್ದ.
ಜಾನ್ ಚೇತನನ ಮುಖಾಂತರ ತನ್ನ ಕೇರಿಗೆ ಬೇಕಾಗುವ ನಲ್ಲಿ, ಬೀದಿ ದೀಪ, ರಸ್ತೆ, ಚರಂಡಿ ಎಲ್ಲ ಹೋರಾಟದ ಮೂಲಕ ಮಾಡಿಸಿದ್ದ. ಕೇರಿ ಜನರಿಗೆ ಯಾರಿಂದಾದರೂ ತೊಂದರೆಯಾದಲ್ಲಿ ಜಾನ್ ತಕ್ಷಣ ಚೇತನನ್ನೇ ಸಂಪರ್ಕಿಸುತ್ತಿದ್ದ. ಚೇತನ ತನ್ನ ಸಾಮಾಜಿಕ ಕಾರ್ಯಕರ್ತ ಗೆಳೆಯರೊಂದಿಗೆ ಸೇರಿ ತೊಂದರೆ ನಿವಾರಿಸುವಲ್ಲಿ ಯಶಸ್ವಿಯಾಗುತ್ತಿದ್ದ. ಇಂಥ ಸಮಾಜವಾದಿ ಚೇತನ ಈ ಹಿಂದೆ ಯಾವದೇ ವೇಶ್ಯೆ ಮನೆಗೆ ಸುಖಬಯಸಿ ಎಂದೂ ಹೋಗಿಲ್ಲ. ಆದರೆ ಇಂದವನು ಪವಿತ್ರಳ ಮನೆಗೆ ಬರುವುದಕ್ಕೆ ಅವನ ಜೀವನದಲ್ಲಿ ನಡೆದ ಒಂದು ಪ್ರೇಮ ಪ್ರಸಂಗವೇ ಕಾರಣವಾಗಿತ್ತು.ಹಲವು ದಿನಗಳ ಹಿಂದೆ ಚೇತನ ನಗರದ ಕಾಲೇಜವೊಂದರಲ್ಲಿ ಓದುತ್ತಿರಬೇಕಾದರೆ ಪ್ರೇಮಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಪ್ರೇಮಾ ನೋಡಲು ಅಷ್ಟೇನು ಸೌಂದರ್ಯವತಿಯಲ್ಲದಿದ್ದರೂ ನೋಡಲು ತುಂಬ ಲಕ್ಷಣವಾಗಿ, ಆಕರ್ಷಕವಾಗಿದ್ದಳು. ಕಾಲೇಜು ಸಹಪಾಠಿ ಅಷ್ಟೇಯಲ್ಲ ಅಂತರಂಗದ ಗೆಳತಿ ಕೂಡ…. ಕಾಲೇಜು ದಿನಗಳ ಆರಂಭದಿಂದಲೇ ಆರಂಭವಾದ ಚೇತನನ ಹೋರಾಟಗಳಿಗೆಲ್ಲ ಸ್ಪೂರ್ತಿಯಾಗಿದ್ದಳು. ಕಾಲೇಜ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅನ್ಯಾಯವಾದಾಗಲೆಲ್ಲ ಆಡಳಿತ ಮಂಡಳಿ ವಿರುದ್ಧ, ಸರಕಾರದ ವಿರುದ್ಧ ಸಮರ ಸಾರುತ್ತಿದ್ದ ಚೇತನ ವಿದ್ಯಾರ್ಥಿಗಳ ನಾಯಕನಾಗಿ ಆಗಲೇ ರೂಪಗೊಂಡಿದ್ದ. ಹೀಗೆ ಚೇತನ ವಿದ್ಯಾರ್ಥಿ ನಾಯಕನಾಗಿ ಮುಂದೆ ಬರಲು ಅವನ ಹಲವಾರು ಗೆಳೆಯರು ಅವನ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿದ್ದರು. ಅಂಥವರಲ್ಲಿ ಪ್ರತೀಕ ಮತ್ತು ಪ್ರೇಮಾ ಪ್ರಮುಖರಾಗಿದ್ದರು. ಪ್ರತೀಕ ಚೇತನನ ಪ್ರಾಣಸ್ನೇಹಿತ ಒಬ್ಬ ಉತ್ತಮ ಬರಹಗಾರನಾಗಿದ್ದ.
ಪ್ರೇಮಾ ಚೇತನನ ಪ್ರಚಂಡ ವ್ಯಕ್ತಿತ್ವಕ್ಕೆ ಮನಸೋತಿದ್ದಳು. ಚೇತನ-ಪ್ರೇಮಾ ಇಬ್ಬರೂ ಓದಿನಲ್ಲೂ ಅಷ್ಟೇ ಚುರಕಾಗಿದ್ದರು… ಹೀಗಾಗಿ ಶಿಕ್ಷಕ ವರ್ಗಕ್ಕೂ ವಿದ್ಯಾರ್ಥಿ ವರ್ಗಕ್ಕೂ ಇವರಿಬ್ಬರೂ ಅಚ್ಚು-ಮೆಚ್ಚಿನವರಾಗಿದ್ದರು. ಅರದಲ್ಲಿ ಸ್ನೇಹಿತರಾದ ರಾಕೇಶ, ಸುರೇಶ, ಶಂಕರ, ಸಿದ್ದು ಅಂತೂ ಇವರ ಪ್ರೇಮಕ್ಕೆ ಫುಲ್ ಸಪೋರ್ಟ ನೀಡಿದವರು. ಪದವಿ ಅಂತಿಮ ವರ್ಷದ ಫಲಿತಾಂಶದ ನಂತರ ಈ ಸ್ನೇಹಿತರೆಲ್ಲ ಅಗಲಬೇಕಾದ ಅನಿವಾರ್ಯತೆ ..ಮುಂದಿನ ಓದಿಗಾಗಿ ಕೇಲವು ಸ್ನೇಹಿತರು ಬೆಂಗಳೂರಿನ ಕಾಲೇಜುಗಳು ಸೇರಿದರು. ಚೇತನ ಮಾತ್ರ ತನ್ನ ಕುಟುಂಬದ ಮುಖ್ಯ ಉದ್ಯೋಗ ಕೃಷಿ ಸಂಭಾಳಿಸುವ ಜವಾಬ್ದಾರಿಯಿಂದಾಗಿ ಮರಳಿ ಹಳ್ಳಿ ಸೇರಿದ. ಪ್ರೇಮಾ ಓದು ಅಲ್ಲಿಗೆ ನಿಲ್ಲಿಸಿ ಅಡುಗೆ ಮನೆ ಸೇರಿದಳು. ಇವರಿಬ್ಬರೂ ಅವಕಾಶ ಸಿಕ್ಕಾಗಲೆಲ್ಲ ಪಾರ್ಕಿನಲ್ಲಿ ರೆಸ್ಟಾರೆಂಟನಲ್ಲಿ ಸಿನೇಮಾ ಮಂದಿರದಲ್ಲಿ ಸಂಧಿಸುತ್ತ ಪ್ರೀತಿ ಹಂಚಿಕೊಳ್ಳುತ್ತಿದ್ದರು. ಮತ್ತು ಆನಂದವಾಗಿ ಕಾಲ ಕಳೆಯುತ್ತಿದ್ದರು. ಪರಸ್ಪರ ವಿವಾಹವಾಗುವ ಕನಸು ಕಾಣುತ್ತಿದ್ದರು. ಆದರೆ ಇದೇ ಸಮಯಕ್ಕೆ ಪ್ರೇಮಾಳ ತಂದೆ-ತಾಯಿ ಅವಳನ್ನು ತನ್ನ ಜಾತಿಯ ವರ ಹುಡುಕುಲು ಆರಂಭಿಸಿದ್ದೇ ಸಮಸ್ಯೆಯ ಉದ್ಭವಕ್ಕೆ ಕಾರಣವಾಯ್ತು. ಪ್ರೇಮಾ ಶುದ್ಧ ಬ್ರಾಹ್ಮಣ ಹುಡುಗಿ!. ಆದರೆ ಚೇತನನದು ಜಾತ್ಯಾತೀತ ಜಾತಿ. ತನ್ನನು ವರ ಹುಡುಕುತ್ತಿರುವ ವಿಷಯ ಪ್ರೇಮಾ ಚೇತನ ಮುಂದೆ ಪ್ರಸ್ತಾಪಿಸಿದಾಗಗ ಚೇತನ ಕಂಡ ಕನಸಿಗೆ ಯಾರೋ ಬಾಂಬ್ ಇಟ್ಟು ಅಸ್ಪೋಟಿಸಿದಂತೆ ಭಾಸವಾಗಿತ್ತು.
‘ಇಲ್ಲ… ನಾನು…. ಹೀಗೆಲ್ಲ ಆಗುವದಕ್ಕೆ ಬಿಡುವುದಿಲ್ಲ… ನಗೆ ನನ್ನ ಪ್ರೇಮಾ ನನಗೆ ಬೇಕೇ ಬೇಕು … ನನ್ನ ಶಕ್ತಿ ಸ್ಪೂರ್ತಿ ಹೋರಾಟ ಚಳವಳಿ… ಸರ್ವಸ್ವವೇ ಪ್ರೇಮಾ…ಅವಳಿಲ್ಲದೇ ನಾನು ಬದುಕಲು ಸಾಧ್ಯವೇ ಇಲ್ಲ…” ಎಂದು ಹುಚ್ನಂತೆ ಅರಚಲು ಪ್ರಾರಂಭಿಸಿದಾಗ ಪ್ರೇಮಾ ಚೇತನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಳು-
“ಚೇತನ ಸುಮ್ನಾಗು, ಶಾಂತನಾಗು… ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದು ಬಿಟ್ಟು ಹುಚ್ಚನಂತೆ ವರ್ತಿಸಿದರೆ ಏನು ಪ್ರಯೋಜನ?” ಎಂದು ಪ್ರಶ್ನೆಸಿದಾಗ ಆವೇಶವನ್ನು ಸ್ವಲ್ಪ ನಿಗ್ರಹಿಸಿಕೊಂಡ ಚೇತನ –
“ಹೌದು… ನೀ ಹೇಳಿದಂತೆ ಏನೂ ಪ್ರಯೋಜವಿಲ್ಲ… ಮುಂದೆ ಏನು ಮಾಡಬೇಕೆಂದು ಯೋಚಿಸಬೇಕು” ಎಂದು ಹೇಳಿದಾಗ-ಇಬ್ಬರ ನಡುವೆಯೂ ಒಂದು ದೀರ್ಘ ಮೌನ! ಇಬ್ಬರೂ ಚಿಂತಾಕ್ರಾಂತರು !! ಕೊನಗೆ ಮೌನ ಮುರಿದು ಚೇತನ-
“ಈಗಲೇ ನಾವಿಬ್ಬರೂ ಯಾವುದಾದರೂ ರಜಿಸ್ಟಾರ್ ಆಫೀಸಕ್ಕೆ ಹೋಗಿ ಮದವೆಯಾಗೋಣ” ಎಂದು ಪ್ರಕಟಿಸಿದಾಗ ಪ್ರೇಮಾ ಒಂದು ಕ್ಷಣ ತಬ್ಬಿಬ್ಬಾದಳು. ಆ ಕ್ಷಣಕ್ಕೆ ಏನು ಹೇಳಬೇಕೆಂದು ಅವಳಿಗೆ ತಿಳಿಯದಾಗಿತ್ತು. ಏಕೆಂದರೆ ಅವಳ ನಿರ್ಧಾರವೇ ಬೇರೆಯಾಗಿತ್ತು.
“ಇಲ್ಲ ನನಗೆ.. ಹೆತ್ತವರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡು ಅವರ ಮನಸ್ಸು ನೋಯಿಸುವ ಮನಸಿಲ್ಲ…” ಸ್ವಲ್ಪ ತಡೆದು ಮತ್ತೇ ಮುಂದವರಿಸಿದಳು “ನಮ್ಮದು ತುಂಬಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ… ನಾನೇನಾದರೂ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುತ್ತೇನೆಂದರೆ.. ನಮ್ಮ ತಂದೆತಾಯಿ ಇಬ್ಬರು ಉರುಳು ಹಾಕಿಕೊಂಡು ಸತ್ತೇ ಹೋಗ್ತಾರೆ…’ ಎಂದಾಗ ಚೇತನ ಹೃದಯ ಚೂರು ಚೂರಾಗಿತ್ತು. ಅವನ ಎದೆ ಭಾಗದಲ್ಲಿ ಯಾರೋ ಚೂರಿಯಿಂದ ಬಲವಾಗಿ ತಿವಿದಂತೆ ಭಾಸವಾಗುತ್ತಿತ್ತು.
ಆದರೂ ಸುಧಾರಿಸಿಕೊಳ್ಳುತ್ತ ಹೇಳಿದ್ದ.
“ಪ್ರೇಮಾ ಇದು ನೀನು ಹೇಳುವ ಮಾತಾ…? ಒಬ್ಬ ಪ್ರಗತಿಪರ ಚಿಂತಕಿ, ಒಬ್ಬ ಹೋರಾಟಗಾರ್ತಿಯಾಗಿ ನೀನು ಹೀಗೆ ಜಾತಿ ವಿಷಯ ಮಾತಾಡುವುದೇ…ಛೇ! ನನಗೆ ನಾಚಿಕೆಯಾಗುತ್ತೆ” ಎಂದು ಸಿಟ್ಟಿನಿಂದ ಸಾರಿದ್ದ…
“ನೀ ಹೇಳಿದಂತೆ ನಂಗೂ ಈ ಜಾತಿಗೀತಿಗಳಲ್ಲಿ ನಂಬಿಕೆಯಿಲ್ಲ ಅನ್ನುವುದೂ ನಿನಗೂ ಗೊತ್ತು… ಆದರೆ ಇವೆಲ್ಲಕ್ಕಿಂತ್ ಮುಖ್ಯ ನನ್ನ ತಂದೆ-ತಾಯಿ, ನನ್ನ ಕುಟುಂಬ ನನಗೆ ಜನ್ಮ ನೀಡಿ ತಮ್ಮ ಪ್ರೀತಿ ಮಮತೆ ವಾತ್ಸಲ್ಯ ಧಾರೆಯರೆದು ಬೆಳೆಸಿ ಪೋಷಿಸಿದ ನನ್ನ ತಂದೆ ತಾಯಿಯೇ ನನಗೆ ಮುಖ್ಯ.. ನನ್ನ ತಪ್ಪು ನಿರ್ಧಾರದಿಂದ ಅವರಿಗೇನಾದರೂ ಆದರೆ ಜೀವನ ಪರ್ಯಂತ ಅಪರಾಧ ಭಾವನೆಯಿಂದ ನಾನು ನರಳಬೇಕಾಗುತ್ತೆ…”
“ಅವರು ಹೇಳಿದಂತೆ ನೀನು ಮದ್ವೆಯಾದರೆ ನನ್ನ ಭವಿಷ್ಯವೇನು?… ನಿಜಕ್ಕೂ ನಾನು ಸತ್ತೇ ಹೋಗುತ್ತೇನೆ… ಆಗ ನನ್ನನ್ನು ಕೊಂದ ಪಾಪ ನಿನಗೆ ಕಾಡುವುದಿಲ್ಲವೇನು?”
“ನನ್ಗೆ ಗೊತ್ತು ನೀನೊಬ್ಬ ಹೋರಾಟಗಾರ ಹೇಡಿಯಂತೆ ಸಾಯುವದಿಲ್ಲ ನನಗಾಗಿ ಅಲ್ಲದಿದ್ದರು.. ನಿನ್ನನ್ನೂ ನಂಬಿದವರಿಗಾಗಿ… ಸಮಾಜದಲ್ಲಿ ನೊಂದವರಾಗಿ, ದೀನದಲಿತರಿಗಾಗಿ, ನಿನ್ನನ್ನು ನಂಬಿದವರಿಗಾಗಿ ನೀನು ಬದುಕೇ ಬದುಕ್ತಿಯಾ ಅನ್ನುವ ನಂಬಿಕೆ ನನ್ನದು..”
“ಇದ್ದೂ ಸತ್ತಂತೆ ಬದುಕುವ ಬದುಕುದಾದರೂ ಯಾರಿಗೆ ಬೇಕು?”
“ನೀನು ಸತ್ತರೂ ಸಾವಿಗೊಂದು ಅರ್ಥವಿರುತ್ತದೆ. ಅಲ್ವಾ” ಎಂದು ಪ್ರೇಮಾ ನಕ್ಕಾಗ ಅವಳು ನಗು ಚೇತನನ್ನನ್ನು ರೊಚ್ಚಿಗೇಳುವಂತೆ ಮಾಡುತ್ತದೆ.
“ಈ ಗೊಡ್ಡ ವೇದಾಂತವೆಲ್ಲ ನನಗೆ ಬೇಡ…ನನಗೆ ಕೇವಲ ನೀನು ಬೇಕು.. ಏನಾದರೂ ಸರಿ… ನಾನು ನಿನ್ನನ್ನೂ ಬಿಡುವದಿಲ್ಲ, ಪಡದೇ ತೀರುತ್ತೇನೆ…” ಎಂದು ಸಿಟ್ಟಿನ ಭರದಲ್ಲಿ ಘೋಷಿಸಿದಾಗ ಪ್ರೇಮಾ ಅವನನ್ನು ಸಮಾಧಾನಿಸಲು ಪ್ರಯತ್ನಿಸಿ ವಿಫಲವಾದಳು.
ಚೇತನ್ ಯಾವುದಕ್ಕೂ ಹೆದರುವನಲ್ಲ ಎನ್ನುವುದು ಅವಳಿಗೂ ಗೊತ್ತಿರುವ ವಿಷಯವಾದರೂ ಬೇರೆ ದಾರಿ ಕಾಣದ ಪ್ರೇಮಾ ಭಾರವಾದ ಹೆಜ್ಜೆ ಹಾಕುತ್ತ ಮನೆ
ದಾರಿ ಹಿಡಿದಳು. ಅವಳೆದೆಯ ಪ್ರೇಮಜ್ಯೋತಿ ಕೂಡ ಆರಿ ಹೋಗುತ್ತಿರುವಂತೆ ಅವಳಿಗೆ ಭಾಸವಾಗುತ್ತದೆ. ಚೇತನ-
“ನೀನು ನನ್ನನ್ನು ಬಿಟ್ಟು ಬೇರೆಯವನ ಜೊತೆ ಹೇಗೆ ಮದುವೆ ಆಗುತಿಯೋ ನೋಡೇ ಬಿಡುತ್ತೇನೆ. ಎಂದು ಘರ್ಜಿಸುತ್ತಾನೆ. ಆ ಘರ್ಜನೆ ಅವಳ ಕಿವಿಗಪ್ಪಳಿಸಿದರು ಕಿವಡಿಯಂತೆ ಅವಳು ಹೊರಟು ಹೋಗುತ್ತಾಳೆ.
– 2 –
ಎರಡ್ಮೂರು ದಿನಗಳು ಕಳೆದರೂ ಮರಳಿ ಪ್ರೇಮಾಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವಳು ಬಂದು ತನ್ನ ಬದಲಾದ ನಿರ್ಧಾರ ತಿಳಿಸುತ್ತಾಳೆ ಎಂದು ಕಾದಿದ್ದ ಚೇತನಿಗೆ ಈಗ ಒಳಗೊಳಗೆ ತಳಮಳ ಶುರು ಆಗಿತ್ತು. ಅವಳ ಪಾಲಕರು ಅವಳನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾರೆ ಎನ್ನುವ ಸುದ್ದಿ ಬೇರೆ ಗೆಳೆಯರ ಮೂಲಕ ತಲುಪಿದಾಗ ಸುನಾಮಿಯಂತೆ ಬಂದಪ್ಪಳಿಸಿದ ಆ ಸುದ್ದಿ ರಭಸಕ್ಕೆ ಕೊಚ್ಚಿ ಹೋಗುತ್ತಿರುವಂತೆ ಚೇತನನಿಗೆ ಅನಿಸಿದರೂ ಸುಧಾರಿಸಿಕೊಂಡು ಸತ್ಯದ ಅನ್ವೇಷಣೆಗಾಗಿ ಅವಳ ಮನೆಯತ್ತ ಹೆಜ್ಜೆ ಹಾಕುತ್ತಾನೆ. ಮನೆ ಗೇಟಿಗೆ ದೊಡ್ಡ ಬೀಗ! ಕಸಕಡ್ಡಿಗಳಿಂದ ತುಂಬಿದ್ದ ಮನೆಯ ಆವರಣ, ಎರಡ್ಮೂರು ದಿನಗಳಿಂದ ಅಲ್ಲಿ ಯಾರು ಇಲ್ಲ ಎನ್ನುವ ಸುಳಿವು ಸಿಗುವಂತಿದ್ದರೂ ಪಕ್ಕದ ಮನೆಯವರಿಗೊಮ್ಮೆ ವಿಚಾರಿಸಿ ಬಿಡಬೇಕೆಂದು ವಿಚಾರಿಸಲಾಗಿ- “ಅವರು ಊರಿಗೆ ಹೋಗಿ ನಾಲ್ಕೈದು ದಿನವಾಯ್ತು… ಎಲ್ಲಿಗೆ ಅನ್ನುದು ಗೊತ್ತಿಲ್ಲ… ಯಾರದೋ ಸಂಬಂಧಿಕರ ಮದ್ವೆ ಎನ್ನುತ್ತಿದ್ದರು…
ಒಂದು ವಾರದ ನಂತರ ಮರಳಿ ಬರುವದಾಗಿ ಹೇಳಿದ್ದಾರೆ” ಎನ್ನುವ ವಿಷಯ ಸ್ವಲ್ಪ ಸಮಾಧಾನಕಾರಕವೇ ಆಗಿದ್ದರೂ ಅವರು ಹೀಗೆ ಇದ್ದಕ್ಕಿದ್ದಂತೆ ಹೋಗಲು ಕಾರಣ ಸಂಬಂಧಿಕರ ಮದ್ವೆಯೇ ಆಗಿರಬಹುದೇ? ಪ್ರೇಮಾ ಮೊದಲು ಎಲ್ಲಿಗೆ ಹೋದರೂ ತನ್ನ ಅನುಮತಿ ಇಲ್ಲದೆ ಹೋಗುತ್ತಿರಲಿಲ್ಲ. ಆದರೀಗ ಅವಳು ಹೇಳದೆ ಕೇಳದೇ ಹೋಗಿದ್ದಾಳೆಂದರೆ ಇದರ ಅರ್ಥವೇನು? ಎಲ್ಲರೂ ಒಟ್ಟಿಗೆ ಹೋಗಿದ್ದರ ಹಿಂದೆ ಬೇರೆ ಏನಾದರೂ ಉದ್ದೇಶವಿರಬಹುದೇ? ಎನ್ನುವ ಹಲವಾರು ಪ್ರಶ್ನೆಗಳು ಸಂದೇಹಗಳು ಒಮ್ಮಿಲೆ ಚೇತನನ ತೆಲೆಗೆ ದಾಳಿಯಿಟ್ಟದ್ದವು. ಮುಂದೆ ಒಂದು ಮಾಸ ಕಳೆದು ಹೋದರೂ ಪ್ರೇಮಾಳ ಪತ್ತೆ ಇಲ್ಲವಾಗಿತ್ತು. ಆಗ ವಿಚಲಿತನಾದ ಚೇತನ ತನ್ನ ಸ್ನೇಹಿತರ ಮುಖಾಂತರ ಪತ್ತೆ ಹಚ್ಚುವ ಕೆಲಸ ಆರಂಭಿಸಿಯೇ ಬಿಟ್ಟಿದ್ದ. ಅವನ ಗೆಳೆಯರು ಅವರ ಸಂಬಂಧಿಕರ ಊರುಗಳಿಗೆಲ್ಲ ಹೋಗಿ ತಲಾಶ್ ಮಾಡಿಯಾಯ್ತು ಆದರೂ ಅವಳು ಪತ್ತೆಯಾಗಲಿಲ್ಲ. ಹೀಗಾಗಿ ಚೇತನ ನೀರು ಊಟ ಎಲ್ಲ ಬಿಟ್ಟು ಅವಳ ಹಿಂದಿರುಗುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತ ಕುಳಿತ ಬಿಟ್ಟಿದ್ದ…!
–ಅಶ್ಫಾಕ್ ಪೀರಜಾದೆ
ಮುಂದುವರೆಯುವುದು…
[…] ಇಲ್ಲಿಯವರೆಗೆ […]