ಸ್ನೇಹಿತೆಯೊಬ್ಬಳು ನನ್ನಲ್ಲಿ “ನೀನೇಕೆ ಕ್ಯಾರಿಯರ‍್ ಮೀಲ್ಸ್ ಕಾನ್ಸೆಪ್ಟ್ ಅನ್ನು ಪ್ರಾರಂಭ ಮಾಡಬಾರದು?ಹೇಗಿದ್ದರೂ ರುಚಿ ರುಚಿಯಾಗಿ ಅಡುಗೆ ಮಾಡುತ್ತಿಯಾ.”ಎಂದಾಗ ಅದುವರೆಗೂ ನನ್ನ ತಲೆಯಲ್ಲಿ ಯೋಚಿಸದ ವಿಷಯವೊಂದು ತಲೆಯಲ್ಲಿ ಹೊಕ್ಕಿತು.ಅದನ್ನೇ ಯೋಚಿಸುತ್ತಾ ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ.ನನ್ನ ಗೆಳತಿಯಂತೆ ನಮ್ಮ ಮನೆಯ ನೆರೆಮನೆಯಾಕೆಯೂ ಒಮ್ಮೆ ನನ್ನಲ್ಲಿ “ನೀವೇನಾದರೂ ಮನೆಯಲ್ಲೇ ಅಡುಗೆ ಮಾಡಿ ಕ್ಯಾರಿಯರ್ ಮೀಲ್ಸ್ ತಯಾರಿಸಿ ಕೊಡುವುದಾದರೆ ನಾನು ಮೊದಲು ನಿಮ್ಮ ಗಿರಾಕಿಯಾಗುತ್ತೇನೆ”ಎಂದಿದ್ದರು.ಅವರ ಮಾತಿಗೂ ನಾನೇನು ಹೇಳಿರಲಿಲ್ಲ.ಪುನಃ ಇನ್ನೊಬ್ಬ ಗೆಳತಿ ನನ್ನಲ್ಲಿ “ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಯಾರುದ್ದಾದರೂ ಮನೆಯಲ್ಲಿ ಅಡುಗೆ ಜಾಸ್ತಿಯಾಗಿ ಉಳಿದಿದ್ದರೇ ವಾಟ್ಸಾಪ್ ಮೆಸೇಜ್ ಮಾಡಿ,ಇಂತಹ ಅಡುಗೆ ಇಷ್ಟು ಉಳಿದಿದೆ ಬೇಕಾದವರು ಬಂದು ತೆಗೆದುಕೊಂಡು ಹೋಗಬಹುದು”ಎಂದು ತಿಳಿಸಿದಾಗ ನನ್ನ ಮನಸ್ಸಿನಲ್ಲಿ ಜನರು ಈಗ ಎಷ್ಟೊಂದು ಮುಂದುವರಿದ್ದಾರೆಂದು ಅರ್ಥವಾಯಿತು.ಆದರೆ ನನಗೆ ಅದರ ಬಗ್ಗೆ ಇಷ್ಟವಿಲ್ಲದ ಕಾರಣ ಅವರಲ್ಲರ ಮಾತುಗಳನ್ನು ಅಲ್ಲಿಯೇ ಬಿಟ್ಟೆನೆಂದು ಹೇಳಬಹುದು.
ಅವರೆಲ್ಲರ ಮಾತುಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ಮೂಡಿರುವುದೆನೆಂದರೆ ಇದಕ್ಕೆಲ್ಲಾ ಕಾರಣ ಹೆಣ್ಣು ಹೊರ ಜಗತ್ತಿನಲ್ಲಿ ದುಡಿಯಲು ಪ್ರಾರಂಭ ಮಾಡಿದ ಪರಿಣಾಮವಿರಬಹುದೆಂದು.ಯಾವಾಗ ಹೆಣ್ಣು ಹೊರ ಜಗತ್ತಿನಲ್ಲಿ ಸಾಕಷ್ಟು ಹೆಸರನ್ನು ಗಳಿಸಬೇಕೆಂದು ಹೊರಟಳೊ ಅಂದು ಮನೆಯಲ್ಲಿರುವ ಅಡುಗೆ ಮನೆಯು ಮೂಲೆ ಗುಂಪಾಗಲು ಪ್ರಾರಂಭವಾಯಿತು.ಇದರಲ್ಲಿ ಅವಳ ತಪ್ಪೇನು ಇಲ್ಲವಾದರೂ ಎರಡೂ ಕಡೆಗಳಲ್ಲಿ ಬ್ಯಾಲೆನ್ಸ್ ಮಾಡುವುದು ಅವಳಿಂದ ಸಾಧ್ಯವಾಗದೇ ಇಂತಹ ಸಂದರ್ಭ ಬಂದಿತೆನ್ನಬಹುದು.ನಂತರ ದಿನಗಳಲ್ಲಿ ತನ್ನ ಮನೆಮಂದಿಗೆ ಅವಳಿಂದ ಸಮಯವನ್ನು ವಿನಿಯೋಗಿಸಲು ಕಷ್ಟವಾಗುತ್ತಾ ಬಂದಿತು.ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮ್ಮ ಗುರಿಯನ್ನೇ ಮುಟ್ಟುವುದರಲ್ಲಿ ದಿನ ಕಳೆಯುವಾಗ ಅವರಿಗೆ ಅಡುಗೆ ತಿಂಡಿಗಳನ್ನು ತಯಾರಿಸುವ ಬಗ್ಗೆ ಅಸಕ್ತಿ ಕಡಿಮೆಯಾಗುತ್ತಾ ಬಂದಿತು.ಹಣವನ್ನು ಕೊಟ್ಟರೆ ಬೇಕಾದ ರೀತಿಯಲ್ಲಿ ಹೊರ ಜಗತ್ತಿನಲ್ಲಿ ಹಸಿವನ್ನು ನಿಗಿಸಲು ಆಹಾರಗಳು ಸಿಗುವುದರಿಂದ ತಾವೇ ತಯಾರಿಸುವ ಅವಶ್ಯಕತೆಯಿಲ್ಲವೆಂಬ ಭಾವನೆ ಅವರಲ್ಲಿ ಮೂಡಿತು.ಅದರೆ ಎಲ್ಲಾ ದುಡಿಯುವ ಮಹಿಳೆಯರು ಒಂದೇ ರೀತಿಯಲ್ಲಿ ಇರುತ್ತಾರೆಂದು ಹೇಳಲು ಆಗುವುದಿಲ್ಲ.ಕೆಲವೊಂದು ಮನೆಯಲ್ಲಿ ದೊಡ್ಡ ಹುದ್ದೆಯಲ್ಲಿರುವ ಹೆಂಗಸರುಗಳು ಗಂಡ ಮಕ್ಕಳಿಗೆ ಊಟದ ಡಬ್ಬಿಗಳನ್ನು ಕಟ್ಟಿ ಕಳುಹಿಸುವುದನ್ನು ನೋಡಿದ್ದೇನೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಮನೆಯೂಟದ ಕಾನ್ಸೆಪ್ಟ್ ಜಾಸ್ತಿಯಾಗುತ್ತಿದೆ.ಅದೇ ರೀತಿಯಲ್ಲಿ ಯಾರದ್ದೊ ಮನೆಯಲ್ಲಿ ಅಡುಗೆ ತಿಂಡಿಗಳು ಉಳಿದಿದ್ದರೆ ಬೇರೊಂದು ಮನೆಯವರು ಹಣ ಕೊಟ್ಟು ಕೊಂಡು ತಿನ್ನುತ್ತಿದ್ದಾರೆ.ಅದೇನೇ ಇರಲಿ.ಹೋಟಲ್ ಊಟಕ್ಕಿಂತ ಮನೆಯಲ್ಲಿ ಮಾಡಿರುವ ಊಟವೇ ದೇಹಕ್ಕೆ ಒಳ್ಳೆಯದು.ಮನೆಯಲ್ಲಿ ತಯಾರಿಸಿದ ಊಟದ ಬೆಲೆಯೂ ಹೋಟಲ್ ಊಟಕ್ಕಿಂತ ಕಡಿಮೆಯಾಗಿರುವುದರಿಂದ ಜನರು ಈಗ ಅದರ ಕಡೆಗೆ ಅಕರ್ಷಿತರಾಗುತ್ತಿದ್ದಾರೆ.ನಮ್ಮ ಸುತ್ತಮುತ್ತಲಿನಲ್ಲಿ ಮನೆಯಲ್ಲೇ ಇರುವ ಗೃಹಿಣಿಯರು ಈಗೀಗ ಇಂತಹ ಬಿಸಿನೆಸ್ ಕಡೆಗೆ ವಾಲುತ್ತಿದ್ದಾರೆ.ಅವರು ತಯಾರಿಸುವ ಮನೆಯೂಟದಲ್ಲಿ ಹಪ್ಪಳ,ಸಂಡಿಗೆ,ಉಪ್ಪಿನಕಾಯಿ,ಸಾರು,ಸಾಂಬಾರ್,ಒಂದು ಪಲ್ಯ ಇಷ್ಟಿರುತ್ತದೆ.ಇಷ್ಟಕ್ಕೆಲ್ಲಾ ಬೆಲೆಯೂ ದುಭಾರಿಯಾಗಿರದೆ ಒಂದು ಕ್ಯಾರಿಯರ್ ಊಟ ಒಬ್ಬರಿಗೆ ೮೦ರಿಂದ೧೦೦ ರೂಪಾಯಿಯೊಳಗೆ ಇರುತ್ತದೆ.
ಇದನ್ನೇಲ್ಲಾ ತಿಳಿದ ಉದ್ಯೋಗಸ್ಥ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಇಂತಹ ಮನೆ ಅಡುಗೆಗಳಿಗೆ ಮಾರುಹೋಗಿದ್ದಾರೆ.ಅವರು ಹಗಲಿಡೀ ದುಡಿದು ದಣಿದು ಬಂದಾಗ ಮನೆಯಲ್ಲಿ ಅಡುಗೆಯನ್ನು ತಾವೇ ತಯಾರಿಸಿ ತಿನ್ನಬೇಕೆಂದರೆ ಅವರಿಗೂ ಕಷ್ಟವಾಗುವುದು ಸಹಜವೇ! ಏನಾದರೊಂದು ಅಡುಗೆಯನ್ನು ತಯಾರಿಸಿ ತಿನ್ನುವ ಬದಲು ತಮ್ಮ ಅಕ್ಕಪಕ್ಕದಲ್ಲಿ ಇಂತಹ ರುಚಿಕರವಾದ ಮನೆ ಅಡುಗೆಯನ್ನು ತಯಾರಿಸುವರಿದ್ದರೆ ಅವರೊಂದಿಗೆ ಸ್ನೇಹ ಬೆಳೆಸಿ ತಮ್ಮ ಮನೆಯಿಂದ ಒಬ್ಬೊಬ್ಬರಿಗೆ ಒಂದೊಂದು ಕ್ಯಾರಿಯರ‍್ ಕಳುಹಿಸಿ ಅದರೊಂದಿಗೆ ಹಣವನ್ನು ಕಳುಹಿಸಿ ಕೊಡುತ್ತಾರೆ.ಇದರಿಂದ ಅಡುಗೆ ಮನೆಯೊಳಗೆ ಹೋಗುವ ತಾಪತ್ರೆಯಗಳು ಅವರಿಗೆ ಇಲ್ಲವಾಗುತ್ತದೆ.
ಈಗೀಗ ಮನೆಯಲ್ಲಿರುವ ಹೆಂಗಸರು ಸುಮ್ಮನೇ ಕುಳಿತು ಕಾಲಹರಣ ಮಾಡದೇ ಇಂತಹ ಬಿಸಿನಸ್ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.ಬೆಂಗಳೂರು ಎಷ್ಟು ಬೆಳೆಯುತ್ತಿದೆಯೋ ಅಷ್ಟೇ ಜನಜೀವನದಲ್ಲೂ ಬದಲಾವಣೆಗಳಾಗುತ್ತಿದೆ.ಪ್ರತಿಯೊಬ್ಬರೂ ಹಣಗಳಿಸುವುದರಲ್ಲೇ ನಿರತರಾಗಿದ್ದಾರೆ.ಮುಂದೊಂದು ದಿನ ಮನೆಯೊಳಗೆ ಅಡುಗೆ ಮನೆಯೆಂಬುದನ್ನು ಬಳಕೆ ಮಾಡದ ದಿನಗಳು ಬರಬಹುದು.ನಮ್ಮ ಪೀಳಿಗೆಯವರಿಗೆ ಅಡುಗೆ ತಯಾರಿಸಿ ಮನೆಯವರಿಗೆ ಊಟ ಬಡಿಸಲು ಸಮಯದ ಅಭಾವ ಬಂದಿರುವಾಗ ನಮ್ಮ ಮುಂದಿನ ಪೀಳಿಗೆಯ ನಮ್ಮ ಮಕ್ಕಳು ನಮ್ಮಿಂದ ಅಡುಗೆ ತಯಾರಿಸಿ ತಿನ್ನುವುದನ್ನು ಕಲಿಯುವುದು ಎಲ್ಲಿಂದ ಸಾಧ್ಯ?ಏನೇ ಇರಲಿ ಹಣ ಗಳಿಸುವುದು ಹೊಟ್ಟೆಗೆ ನೆಮ್ಮದಿಯಾಗಿ ಮೂರು ಹೊತ್ತು ಊಟ ಮಾಡಲಿಕ್ಕಾಗಿ ಅಲ್ಲವೇ?ಅದನ್ನೇ ತಯಾರಿಸಿ ತಿನ್ನಲು ನಮಗೆ ಸಮಯದ ಅಭಾವ ಬಂದಿರುವಾಗ ಮುಂದೊಂದು ದಿನ ಎಲ್ಲದಕ್ಕೂ ಬೇರೆಯವರನ್ನು ಆಸರಿಸಬೇಕಾಗುತ್ತದೆ.ಹಿಂದೆ ಮನೆಯಲ್ಲಿ ಹಿರಿಯರಿರುತ್ತಿದ್ದರು.ಇಂದು ಹಿರಿಯರೊಂದಿಗೆ ಒಗ್ಗೂಡಿ ಜೀವನ ನಡೆಸುವುದು ಕಡಿಮೆಯಾಗಿದೆ.ಇಂದು ಏನಿದ್ದರೂ ಮಾಡ್ರನ್ ಜೀವನಕ್ಕೆ ಮನಸೋತು ಬರಬಾರದ ರೋಗಕ್ಕೆ ತುತ್ತಾಗಿ ವೈದ್ಯರ ಮೊರೆಹೋಗುವುದು ಜಾಸ್ತಿಯಾಗುತ್ತಿದೆ.
ಎಷ್ಟೇ ಬಿಡುವಿಲ್ಲದ ಜೀವನವಿರಲಿ ಹೆಣ್ಣಾಗಲಿ ಗಂಡಾಗಲಿ ಇಬ್ಬರೂ ತಾವು ದುಡಿಯುವುದು ಹೊಟ್ಟೆಗೊಸ್ಕರವೆಂದು ತಿಳಿದು ದಿನದಲ್ಲಿ ಕಡಿಮೆಯೆಂದರೂ ಒಂದರಿಂದ ಎರಡು ಗಂಟೆಗಳ ಕಾಲ ತಮಗೆ ಬೇಕಾದ ರೀತಿಯಲ್ಲಿ ರುಚಿ ರುಚಿಯಾಗಿ ಮನೆಯಲ್ಲೇ ಅಡುಗೆಯನ್ನು ತಯಾರಿಸಿ ಸವಿದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.ಬೇರೆಯವರ ಕೈ ಅಡುಗೆಯ ರುಚಿಗಿಂತ ನಾವು ನಮಗೆ ಏನು ಬೇಕು ಅದನ್ನು ತಯಾರಿಸಿ ಸವಿಯುವುದರಿಂದ ಮನೆಯಲ್ಲಿರುವ ಜನರು ನಮಗೆ ಇನ್ನೂ ಹತ್ತಿರವಾಗುತ್ತಾರೆ.ತಾವೇ ತಯಾರಿಸಿ ಬಡಿಸಿದ ಅಡುಗೆಯ ರುಚಿಯನ್ನು ಮನೆಯ ಮಕ್ಕಳು ಮತ್ತು ಗಂಡನು ಹೊಗಳಿ ತಿನ್ನುವಾಗ ಸಿಗುವ ಸಂತೃಪ್ತಿಯೂ ಎಷ್ಟು ಹಣ ಸಂಪಾದನೆ ಮಾಡಿದರೂ ಸಿಗಲಾರದು.ಹಿಂದಿನ ಕಾಲದಲ್ಲಿ ಅಡುಗೆ ತಯಾರಿಸುವುದು ಒಂದು ಯಜ್ಞದಂತೆಂದು ಭಾವಿಸಿದ್ದರು.ಮನೆಯಲ್ಲಿ ಎಷ್ಟೇ ಜನರು ಊಟಕ್ಕೆ ಕುಳಿತರು ಮನೆ ಮಂದಿಗೆಲ್ಲಾ ರುಚಿಕಟ್ಟಾದ ಊಟವನ್ನು ಬಡಿಸುವ ತಾಕತ್ತು ಆ ಮನೆಯ ಹೆಣ್ಣಿಗಿತ್ತು.ಊಟದಿಂದ ಬಾಂಧವ್ಯವೂ ಬೆಳೆಯುತ್ತಿತ್ತು.
ನಮ್ಮ ಕೈಯಾರೆ ತಯಾರಿಸಿ ಸವಿಯುವ ಅಡುಗೆಯು ಅಮೃತಕ್ಕೆ ಸಮಾನವಾಗಿರುತ್ತದೆ.ಆ ಅಡುಗೆಯಲ್ಲಿ ನಮಗೆ ಇಷ್ಟವಾದ ಸಾಮಾಗ್ರಿಗಳನ್ನೇ ಬಳಸಿ ತಯಾರಿಸುತ್ತೇವೆ,ನಮ್ಮಿಷ್ಟದಂತೆ ನಮ್ಮ ಅಡುಗೆ ಅಲ್ಲಿರುತ್ತದೆ.ಬೇರೊಂದು ಮನೆಯಲ್ಲಿ ತಯಾರಿಸಿದ ಅಡುಗೆಯು ರುಚಿಯಿದ್ದರೂ ಅದು ತಮ್ಮಿಷ್ಟಂತೆ ಇರಲು ಸಾಧ್ಯವಿಲ್ಲ.ಅದು ಆ ಹೊತ್ತಿನ ಹಸಿವನ್ನು ತಣಿಸಲು ಮಾತ್ರ ಸಾಧ್ಯವೆಂದು ನನ್ನ ಭಾವನೆ.
ಕೆಲವೊಮ್ಮೆ ಇಂತಹ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ ಅವರವರ ಮನೆಯಲ್ಲಿ ಉಳಿದ ಊಟವನ್ನು ಒಬ್ಬರಿಗೊಬ್ಬರು ತಿಳಿಸುವಾಗ ನನಗೆ ನಮ್ಮ ಮನೆಯ ಹಿರಿಯರ ನೆನಪು ಕಾಡುವುದಿದೆ.ನಮ್ಮ ಮನೆಯಲ್ಲಿ ಅನ್ನ,ಸಾರು ಅಥವಾ ಯಾವುದೇ ಹೊಟ್ಟೆ ತುಂಬುವ ವಸ್ತುಗಳು ಮನೆಯಲ್ಲಿ ಎಲ್ಲರೂ ತಿಂದುಳಿದ ನಂತರ ಮನೆಕೆಲಸದವರಿಗೆ ಹೊಟ್ಟೆ ತುಂಬಾ ಊಟವನ್ನು ಹಾಕಿ ಮಿಕ್ಕ ಆಹಾರವನ್ನು ಅವರ ಮನೆಯಲ್ಲಿರುವ ಮಕ್ಕಳಿಗೆ ಕಳುಹಿಸುವುದಿತ್ತು. “ಅನ್ನ ದಾನಂ ಪರಂ ದಾನಂ” ಎನ್ನುವುದು ಅಂದಿನ ದಿನಗಳಾಗಿದ್ದವು.ಅಂದು ಯಾರೇ ಮನೆಗೆ ಹಸಿದು ಬರಲಿ ಊಟವನ್ನು ಹಾಕಿ ಕಳುಹಿಸುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಮನೆಗಳಲ್ಲಿ ಉಳಿದ ಅನ್ನವನ್ನೂ ಮಾರಿ ಹಣ ಸಂಪಾದನೆ ಮಾಡುವ ದಿನಗಳು ಬಂದಿವೆ.ಉಳಿದ ಅಡುಗೆಗಳನ್ನು ಕೊಂಡು ತಿನ್ನವವರು ಇರುವಾಗ ಅದನ್ನು ಮಾರಿದರೆ ಮನೆಯಲ್ಲಿರುವ ಹೆಂಗಸರಿಗೂ ಸಂಪಾದನೆ ಆಗುತ್ತದೆ.ಹಣವು ಜೀವನದಲ್ಲಿ ಏನೆಲ್ಲಾ ಆಟವಾಡಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ.ಮುಂದೆ ಇನ್ನೂ ಬಹಳಷ್ಟು ನೋಡುವ ದಿನಗಳು ಬರಲೂಬಹುದು.ಇಂದಿನ ದಿನಗಳಲ್ಲಿ ಜನರು ಹಣವನ್ನು ಸಂಪಾದನೆ ಮಾಡುತ್ತಾ ತನ್ನ ಹೊಟ್ಟೆಗೆ ಏನು ತಿನ್ನುತ್ತಿದ್ದೇನೆ ಎನ್ನುವುದನ್ನು ಮರೆಯುತ್ತಿದ್ದಾನೆ.ಆದರೆ ಹಿಂದಿನವರು ಮೊದಲು ಹೊಟ್ಟೆ ಕಡೆಗೆ ಗಮನಹರಿಸುತ್ತಿದ್ದರು.ಹೊಟ್ಟೆಗಾಗಿ ಬಗೆಬಗೆಯ ರುಚಿಕಟ್ಟಾದ ಅಡುಗೆ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿ ಸವಿಯುತ್ತಿದ್ದರು.ಇದಕ್ಕೆ ಹೇಳುವುದು “ಕಾಲೈ ತಸ್ಮೈ ನಮಃ”ಎಂದು.ಕಾಲಕ್ಕೆ ನಾವೆಲ್ಲರೂ ತಲೆಬಾಗಲೇ ಬೇಕು.
– ವೇದಾವತಿ ಹೆಚ್.ಎಸ್.