ಬಾನಿನಲ್ಲಿ ಬಣ್ಣಗಳು ಮಾತಾಡತೊಡಗಿದ್ದವು.
ಹೋಳಿ ಹಬ್ಬದ ಸಂಜೆ. ಅವನು ಒಂದರ ಹಿಂದೊಂದು ಸಿಗರೇಟುಗಳನ್ನು ಸುಡುತ್ತಾ ಸುಮ್ಮನೆ ಸಮುದ್ರವನ್ನು ದಿಟ್ಟಿಸುತ್ತಿದ್ದ. ಮಾತನಾಡುವುದಕ್ಕೇನೂ ಇಲ್ಲವೆಂಬಂತೆ ಅವಳೂ ತುಟಿ ಬಿಚ್ಚಲಿಲ್ಲ. ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ನಂತರ ಇಬ್ಬರೂ ಆಕಸ್ಮಿಕವಾಗಿ ಪಣಂಬೂರಿನ ಸಮುದ್ರತಟದಲ್ಲಿ ಎದುರುಬದುರಾಗಿದ್ದರು. ಅವನು ಸರಕಾರಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಅವಳು ನಗರದಲ್ಲಿ ತಳವೂರುತ್ತಿರುವ ದಂತ ವೈದ್ಯೆ. ಅಂದಹಾಗೆ ಇಬ್ಬರೂ ಒಂದಾನೊಂದು ಕಾಲದಲ್ಲಿ ಪ್ರೇಮಿಗಳು.
ಎಷ್ಟು ಚೆನ್ನಾಗಿದ್ದ ಇವ ಥೇಟು ಶಾರೂಖನಂತೆ, ಚಾಕ್ಲೇಟು ಬಾಯ್ ಇಮೇಜ್ ಇದ್ದ ಹುಡುಗ. ಒಣಕಲಾಗಿ ಹೋಗಿದ್ದಾನೆ. ಗಡ್ಡ ಬಿಟ್ಕೊಂಡು ಫಿಲಾಸಫರ್ ಥರ ಕಾಣ್ತಾ ಇದ್ದಾನೆ. ಅವಳು ಸುಮ್ಮನೆ ಮರುಗಿದಳು.
ಡಾರ್ಕ್ ಸರ್ಕಲ್ ಎಂದರೆ ಹೌಹಾರುತ್ತಿದ್ದ, ಹೆಚ್ಚಿದ ಸೌತೆಕಾಯಿಯ ಹೋಳುಗಳನ್ನು ಬ್ಯಾಗಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ ಹುಡುಗಿಗೆ ಈಗ ಕನ್ನಡಕವೂ ಬಂದಿದೆ. ಅವನೂ ಸುಮ್ಮನೆ ಯೋಚಿಸಿದ. ಆದರೂ ಏನೂ ಅನ್ನಲಿಲ್ಲ.
"ಈಗಲೂ ಪದ್ಯ ಬರೆಯುತ್ತೀಯಾ ನೀನು?", ಅವಳು ಕೇಳಿದಳು.
"ಇಲ್ಲ. ಪೆನ್ನು ಹಿಡಿದರೆ ಸಾಕು, ಶೋಕಗೀತೆಗಳೇ ಬರುತ್ತಿದ್ದವು. ಕವಿತೆಗಳಿಗೆ ಗುಡ್ ಬೈ ಹೇಳಿಬಿಟ್ಟೆ. ಗದ್ಯವೇ ಓಕೆ ನಂಗೆ", ಮರಳಿನ ನಡುವೆ ಸಿಕ್ಕಿದ ಒಂದು ಚಿಕ್ಕ ಕಲ್ಲನ್ನು ನಿರ್ಲಿಪ್ತನಾಗಿ ಅವನು ಸಮುದ್ರಕ್ಕೆಸೆದ.
"ಒಳ್ಳೇ ದೇವದಾಸ್ ನೀನು", ಅವಳಂದಳು.
ಅವನು ಈ ಬಾರಿ ಮಾತಾಡಲಿಲ್ಲ.
"ಮೈಸೂರಿನಲ್ಲಿ ಎಮ್. ಬಿ. ಬಿ. ಎಸ್ ಮುಗಿಸಿ ಐದು ವರ್ಷ ಸಿಂಗಾಪುರದಲ್ಲಿದ್ದೆ. ಈಗ ಇಲ್ಲೇ ಡೆಂಟಲ್ ಕ್ಲಿನಿಕ್ ಇಟ್ಕೊಂಡಿದ್ದೀನಿ. ಗಂಡ ಬೆಂಗಳೂರಿನಲ್ಲಿದ್ದಾರೆ"
"ಹೂಂ. ಗುಡ್"
"ಎರಡು ವರ್ಷದ ಹಿಂದೆ ಫೇಸ್ ಬುಕ್ಕಿನಲ್ಲಿ ನಿಂಗೆ ನಂಬರ್ ಕೊಡು ಅಂತ ಮೆಸೇಜ್ ಹಾಕಿದ್ದೆ.", ಅವಳ ದನಿಯಲ್ಲಿ ಕಂಪ್ಲೇಂಟಿತ್ತು.
"ನನ್ನ ಫೇಸ್ ಬುಕ್ ಅಕೌಂಟಿನಲ್ಲೇ ಫೋನ್ ನಂಬರ್ ಹಾಕಿಟ್ಟಿದ್ದೇನೆ ನಾನು. ನೀನೇನು ಸೆಪರೇಟಾಗಿ ಕೇಳೋದು"
ಈ ಬಾರಿ ಅವಳು ಮಾತನಾಡಲಿಲ್ಲ.
"ಹೋಗುವಾಗ ನಂಬರ್ ಕೊಟ್ಟು ಹೋಗುತ್ತೇನೆ. ಡೋಂಟ್ ವರಿ", ಅವನಿಂದ ವಿನಾಕಾರಣ ಒಂದು ನಿರ್ಲಕ್ಷ್ಯದ ಧಾಟಿ.
"ಮಹದುಪಕಾರ ಮಾಡ್ಬಿಟ್ರು ಸಾಹೇಬ್ರು. ಯಾಕೋ ಮದುವೆಯಾಗಲಿಲ್ಲ ನೀನು ಪೆದ್ ಮುಂಡೇದು?"
"ಹಲೋ ಮ್ಯಾಡಮ್. ನೆಟ್ಟಗೆ ಮೂವತ್ತೂ ಆಗಲಿಲ್ಲ ನಂಗೆ ಓಕೆ!!"
"ಇನ್ನೇನು ನಲವತ್ತಾಗೋದಿಕ್ಕೆ ಕಾಯ್ತಾ ಇದೀಯಾ?"
"ಕೌನ್ಸಿಲಿಂಗ್ ತಗೊಳ್ತಾ ಇದೀನಿ. ಇನ್ನೊಂದು ವರ್ಷದಲ್ಲಿ ಮುಗೀಬೋದು. ಆಮೇಲೆ ಮದುವೆ, ಮುಂಜಿ ಎಲ್ಲಾ"
"ಕೌನ್ಸಿಲಿಂಗಾ, ಅದೇನೋ ಆಗಿದೆ ನಿಂಗೆ ದೊಡ್ರೋಗ?"
"ನೀನು ಇದ್ದಕ್ಕಿದ್ದಂತೆ ಮಾಯವಾದ ಮೇಲೆ ಬದುಕುವುದೇ ಕಷ್ಟವಾಗಿ ಹೋಯಿತು. ಮೊದಲು ಹಾಳು ಇನ್ಫಾಚುವೇಷನ್ ಅಂದ್ಕೊಂಡೆ. ಅನಂತರ ಟೈಮ್ ವಿಲ್ ಹೀಲ್ ಅಂತ ನಂಗೇ ಹೇಳ್ಕೊಂಡೆ. ಗವರ್ಮೆಂಟ್ ಜಾಬ್ ಅಂತ ಚಂಡೀಗಢ್ ನಲ್ಲಿ ಸೆಟಲ್ ಆಗ್ಬಿಟ್ಟೆ. ವರ್ಷಗಳು ಕಳೆದಂತೆ ಎಲ್ಲಾನೂ ಸರಿಯಾಗೋದು ಬಿಟ್ಟು ಇನ್ನಷ್ಟು ಡಿಪ್ರೆಶನ್ ಗೆ ಬಿದ್ದುಬಿಟ್ಟೆ. ಯಾವ ಸಂಬಂಧಗಳಲ್ಲೂ ಗಟ್ಟಿತನ ಬರಲಿಲ್ಲ. ಇನ್ ಸೆಕ್ಯೂರಿಟಿಯ ಕೆಟ್ಟಶಾಪ ತಗಲ್ಹಾಕ್ಕೊಂಡು ಬಿಡ್ತು."
"ನೀವು ಹಾಳು ಹುಡುಗರೇ ಹೀಗೆ. ಕೆಲವು ನೆನಪುಗಳನ್ನು ಹಂಗೇ ಬಿಡಬೇಕು ಕಣೋ"
"ಸುಮ್ಮನೆ ಉಸಿರಾಡುತ್ತಿದ್ದೆ, ಜೀವಂತವಾಗಿದ್ದೇನಷ್ಟೇ ಅನ್ನೋ ಹಾಗೆ. ನಾಲ್ಕೈದು ವರ್ಷ ತಾನೇ ಸರಿಯಾಗುತ್ತೇನೋ ಅಂತ ಕಾದೆ. ಕಣ್ಣು ಕಿತ್ತು ಬರುವಷ್ಟು ಓದಿದೆ. ಪುಟಗಟ್ಟಲೆ ಬರೆದು ರಾಶಿ ಹಾಕಿದೆ. ಬೋರ್ ಡಮ್ ಕಿಲ್ಡ್ ಮಿ. ಇಟ್ ಸ್ಟಿಲ್ ಕಿಲ್ಸ್ ಮಿ"
"ಮತ್ತೆ?"
"ಮತ್ತೇನೂ ಇಲ್ಲ. ಡಾಕ್ಟರು ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಅಂತ ಲೇಬಲ್ ಹಾಕಿಬಿಟ್ಟಿದ್ದರು. ಅದ್ಕೇ ಮೂರು ವರ್ಷದಿಂದ ಕೌನ್ಸೆಲಿಂಗ್ ತಗೊಳ್ತಾ ಇದೀನಿ"
ನಡುವಿನಲ್ಲೊಂದು ನೀರವ ಮೌನ. ಸಮುದ್ರದ ಚಿಕ್ಕ ಅಲೆಯೊಂದು ಬಂದು ತೀರದ ಒದ್ದೆ ಮರಳಿನ ಮೇಲೆ ತನ್ನಷ್ಟಕ್ಕೆ ತಾನು ಹಾಯಾಗಿ ಓಡಾಡಿಕೊಂಡಿದ್ದ ಒಂದು ಅರ್ಧ ಇಂಚಿನ ಪುಟಾಣಿ ಏಡಿ ಮರಿಯೊಂದನ್ನು ಸದ್ದಿಲ್ಲದೆ ನುಂಗಿಹಾಕಿತು.
"ಐ ಡೋಂಟ್ ನೋ ವ್ಹಾಟ್ ಟು ಸೇ! ಫಾರ್ಗಿವ್ ಮಿ ಇಫ್ ಪಾಸಿಬಲ್"
"ಹಾಗೇನೂ ಇಲ್ಲ. ನೀನು ನನ್ನ ಲೈಫ್ ನಲ್ಲಿ ಬಂದು ಹೋಗಿ ಎಲ್ಲಾ ಅಲ್ಲೋಲಕಲ್ಲೋಲವಾದ ಮೇಲೆ ನನಗೆ ಇದು ಗೊತ್ತಾಯಿತಷ್ಟೇ. ಅಂದ ಹಾಗೆ ಬಾಲ್ಯದಿಂದಲೇ ಇದು ನನ್ನನ್ನು ಮೈಲ್ಡ್ ಆಗಿ ಆವರಿಸಿಕೊಂಡಿತ್ತು ಅಂತ ನಿಧಾನಕ್ಕೆ ನಂಗೆ ಕೌನ್ಸೆಲಿಂಗ್ ಮೂಲಕ ಗೊತ್ತಾಯ್ತು. ನೀನೊಂದು ಒಣ ನೆಪ ಆದೆ ಅಷ್ಟೇ ನಂಗೆ"
ಅವನು ಜೇಬಿನಿಂದ ಪುನಃ ಸಿಗರೇಟೊಂದನ್ನು ತೆಗೆದು ಲೈಟರ್ ನಿಂದ ಹೊತ್ತಿಸಿದ. ಅವಳ ಕಣ್ಣಿಗೆ, ಅವನ ಸಿಗರೇಟಿನ ಹೊಗೆಯ ತೆಳ್ಳನೆಯ ಪರದೆ ಅಸ್ತಮಿಸುತ್ತಿದ್ದ ಸೂರ್ಯನನ್ನು ಒಂದು ಕ್ಷಣ ಮಬ್ಬಾಗಿಸಿತು. ಅವಳ ಕೈ ಬೆರಳುಗಳು ಸೀರೆಯ ಸೆರಗಿನ ತುದಿಯೊಂದಿಗೆ ಬಿಗಿಯಾಗಿ ಬೆಸೆಯುತ್ತಾ, ಬಿಡಿಸಿಕೊಳ್ಳುತ್ತಾ ಬ್ಯುಸಿಯಾಗಿದ್ದವು.
"ಅದೆಷ್ಟೋ ಸಿಗರೇಟು ಸೇದ್ತೀಯಾ. ತುಟಿಯೆಲ್ಲಾ ಕಪ್ಪಗಾಗಿ ಬಿಟ್ಟಿದೆ ನೋಡು"
"ಯಾವತ್ತೂ ಇಲ್ಲ. ಸ್ವಲ್ಪ ಟೆನ್ಷನ್ ಆಗ್ಬಿಟ್ರೆ ಅಷ್ಟೆ", ಹೊಗೆಯ ಜೊತೆ ಸುಳ್ಳೂ ಸಲೀಸಾಗಿ ಅವನ ತುಟಿಯಿಂದ ಹೊರಬಿತ್ತು.
"ಬೇಗ ಮದುವೆ ಆಗ್ಬಿಡು ಮಾರಾಯ. ಒಬ್ಳು ಸೋಲ್ ಮೇಟ್ ಅಂತ ಬಂದ್ಬಿಟ್ರೆ ಎಲ್ಲಾನೂ ಸರಿಹೋಗುತ್ತೆ. ತುಂಬಾ ಲೋನ್ಲಿ ಆಗ್ಬಿಟ್ಟಿದ್ದೀಯ ನೀನು ಅಷ್ಟೇ"
"ಹೂಂ…"
"ಅದ್ಯಾವ ಟೈಪು ಹುಡುಗಿ ಬೇಕೋ ನಿಂಗೆ?"
"ಗೊತ್ತಿಲ್ಲ. ಎಕ್ಸ್ಪೆಕ್ಟೇಷನ್ನು ಅಂದ್ರೆ ಭಯವಾಗುತ್ತೆ. ದೇ ಆಲ್ವೇಸ್ ಹರ್ಟ್. ಸೋ ಅಂಥಾ ಕನಸುಗಳು ಬೇಡ್ವೇ ಬೇಡ"
ಗಾಳಿಯ ಬಿಂಕದ ಚಲನೆಗೆ ತೀರದ ತೆಂಗಿನಮರದ ಉದ್ದುದ್ದ ಗರಿಗಳು ತಲೆದೂಗಿದವು. ದೂರದ ಮಸೀದಿಯೊಂದರಿಂದ ಮೌಲ್ವಿಯೊಬ್ಬ ಮೈಕಿನಲ್ಲಿ ಅಲ್ಲಾನನ್ನು ಕರೆದಂತಾಯಿತು.
"ನೋಡ್ತಾ ಇದೀಯಾ ಅಲ್ಲಿ. ಬಣ್ಣಗಳ ಹಬ್ಬ ಕಣೋ ಇವತ್ತು. ಮುಖ ಊದಿಸ್ಕೊಂಡು ಕೂತಿದೀಯ ನೋಡು ನೀನಿಲ್ಲಿ. ಆ ಪಾನಿಪುರಿ ಸ್ಟಾಲ್ ಪಕ್ಕದಲ್ಲಿ ಏನೋ ಹೋಳಿ ಫೆಸ್ಟಿವಲ್ ಈವೆಂಟ್ ಆಗ್ತಾ ಇದೆ ಅನ್ಸುತ್ತೆ. ಬಾ ಹೋಗೋಣ.", ಅವಳು ಎದ್ದು ಅವನ ಕೈ ಹಿಡಿದೆಳೆದಳು. ಅವಳ ಬಣ್ಣದ ಗಾಜಿನ ಬಳೆಗಳು ಅವನ ಕಿವಿಯ ಪಕ್ಕದಲ್ಲೇ ತನಗರಿವಿಲ್ಲದಂತೆ ಘಲ್ಲೆಂದವು.
"ಹೇಯ್, ಬಣ್ಣದೋಕುಳಿ ಕಣೇ, ಇನ್ನೇನಿರುತ್ತೆ. ಬಟ್ಟೆ ಹಾಳಾಗುತ್ತಪ್ಪ"
"ಬಣ್ಣಗಳ ಬಗ್ಗೆ ಅದೆಷ್ಟು ಚಂದ ಕವನ ಬರೀತಿದ್ದೆ ನೀನು. ಬಾರೋ ಸುಮ್ನೆ ನನ್ ಜೊತೆ. ಎಲ್ಲದಕ್ಕೂ ಗೋಳು ನಿಂದು"
"ಗೋಲ್ ಗಪ್ಪಾ ತಿನ್ಸು ಮೊದ್ಲು. ಆಮೇಲೆ ನೋಡೋಣಂತೆ"
"ಬಾ ಮತ್ತೆ. ಪಾನಿಪುರಿ ಚೆನ್ನಾಗ್ ಮಾಡ್ತಾನೆ ಈಯಪ್ಪ"
"ಗೋಲ್ ಗಪ್ಪಾ ಅನ್ನು. ಇಟ್ ಸೌಂಡ್ಸ್ ಕ್ಯೂಟ್", ಅವನು ರೊಳ್ಳೆ ತೆಗೆದ.
"ಎದ್ದೇಳು ಮಹಾನುಭಾವ", ಅವಳು ಜೋರಾಗಿ ಅವನ ಕೈ ಹಿಡಿದೆಳೆದಳು. ಅವನು ಎದ್ದು ಪ್ಯಾಂಟಿಗೆ ಅಂಟಿಕೊಂಡಿದ್ದ ಅಲ್ಪ ಸ್ವಲ್ಪ ಮರಳನ್ನು ಕೊಡವಿ ಹಾಕಿದ. ಷರ್ಟಿನ ಮೇಲೆ ತೆಳ್ಳನೆ ಹರಡಿಕೊಂಡಿದ್ದ ಬೂದಿಯ ಬಗ್ಗೆ ಅವನಿಗೆ ಪರಿವೆಯಿರಲಿಲ್ಲ. ಕೊನೆಯ ಪಫ್ ಎಂಬಂತೆ ದೀರ್ಘವಾಗಿ ಕಣ್ಮುಚ್ಚಿ ಸೇದಿ ಸಿಗರೇಟನ್ನು ತನ್ನ ಬೂಟುಕಾಲಿನಲ್ಲಿ ಹೊಸಕಿಹಾಕಿದ.
ಇಬ್ಬರೂ ಮೆಲ್ಲಗೆ ಒದ್ದೆ ಮರಳಿನ ಮೇಲೆ ಮೂಡಿ, ನೀರಿನೊಂದಿಗೆ ಮರೆಯಾಗುವ ಹೆಜ್ಜೆಗುರುತುಗಳನ್ನು ನೋಡುತ್ತಾ ಜೊತೆಜೊತೆಯಾಗಿ ಹೆಜ್ಜೆ ಹಾಕತೊಡಗಿದರು.
"ಅ ವಾಕ್ ಟು ರಿಮೆಂಬರ್" ಮೂವೀ ನೆನಪಿದ್ಯಾ ಅಂದ ಅವನು.
"ಹಲೋ, ಫ್ಲರ್ಟ್ ಮಾಡೋ ಕಾಲ ಮುಗಿದ್ಹೋಯ್ತು ನಂಗೆ", ಅಂದಳು ಅವಳು.
"ನನ್ಹಂಗೆ ಪೋಯೆಟಿಕ್ ಆಗಿ ಯಾವ ಹುಡುಗ ಫ್ಲರ್ಟ್ ಮಾಡ್ತಾನೆ ಹೇಳು", ಅವನ ತುಟಿಯಂಚಿನಲ್ಲೊಂದು ತುಂಟನಗೆ.
ಕ್ಷಣಗಳು ಸುಂದರವಾಗಿದ್ದಾಗ ಸಮಯಕ್ಕೂ ವಿನಾಕಾರಣ ಮುಂದಕ್ಕೋಡುವ ಅಧಿಕ ಪ್ರಸಂಗ. ಅಂತೂ ಇಂತೂ ಸ್ಟಾಲ್ ಬಂದೇ ಬಿಡ್ತು.
ಅವಳ ಫೋನು ಅದ್ಯಾವುದೋ ಹಿಂದಿ ಹಾಡಿನ ಟ್ಯೂನಿನಲ್ಲಿ ಅವಳ ವ್ಯಾನಿಟಿ ಬ್ಯಾಗಿನೊಳಗಿನಿಂದಲೇ ಹೊಡೆದುಕೊಳ್ಳಲಾರಂಭಿಸಿತು. ಅವಳು ಕ್ಯಾರೇ ಅನ್ನಲಿಲ್ಲ. ಐದು ಸೆಕೆಂಡುಗಳ ನಂತರ ಪುನಃ ಅದೇ ಟ್ಯೂನು. ಅದ್ಯಾರು ನೋಡೇ ಅಂತ ಅವನು ಕಣ್ಣಲ್ಲೇ ಅಂದ. ಒಲ್ಲದ ಮನಸ್ಸಿನಿಂದಲೇ ಅವಳು ಬ್ಯಾಗಿನ ಝಿಪ್ ತೆಗೆದಳು. ಹೋಮ್ ಸ್ಕ್ರೀನಿನಲ್ಲಿ ಕರೆ ಮಾಡುತ್ತಿರುವವರು ಯಾರೆಂದು ನೋಡುತ್ತಾ ಸುಮ್ಮನೆ ಕಟ್ ಮಾಡಿ ಮರುಮಾತಿಲ್ಲದೆ ಫೋನನ್ನು ಬ್ಯಾಗ್ ನಲ್ಲಿರಿಸಿದಳು. ಪತಿರಾಯನಿಗೆ ಒಂದು ಘಳಿಗೆಯೂ ಬಿಟ್ಟಿರಲಾಗುತ್ತಿಲ್ಲವೋ ಏನೋ ಎಂದು ಅವನು ಮನಸ್ಸಿನಲ್ಲೇ ಅಂದುಕೊಂಡ. ಮೊಂಡ ಬಿಲ್ಡಿಂಗ್ ಓನರ್! ನಾಳೆಯವರೆಗೂ ಬಾಡಿಗೆಗೆ ಕಾಯಬಾರದೇ, ದಿನಕ್ಕೆ ಹತ್ತು ಸಲ ಕಾಲ್ ಮಾಡುತ್ತಾನೆ ಎಂದು ಅವಳು ಮನದಲ್ಲೇ ತನ್ನ ಮನೆ ಮಾಲಿಕನಿಗೆ ಹಿಡಿಶಾಪ ಹಾಕಿದಳು. ಅವನೂ ಯಾರೆಂದು ಕೇಳಲಿಲ್ಲ. ಅವಳೂ ಸಮಜಾಯಿಷಿಯ ಗೋಜಿಗೆ ಹೋಗಲಿಲ್ಲ. ಇಬ್ಬರ ಅದೃಷ್ಟವೋ ಏನೋ, ಫೋನು ಇನ್ನೊಮ್ಮೆ ರಿಂಗಾಗಲಿಲ್ಲ.
"ಏಕ್ ಪ್ಲೇಟ್ ಗೋಲ್ ಗಪ್ಪಾ ಪ್ಲೀಸ್", ಅವನು ಸ್ಟೈಲಾಗಿ ಆರ್ಡರ್ ಕೊಟ್ಟ. ಅವನ ಪಂಜಾಬಿ ಮಿಶ್ರಿತ ಆಕ್ಸೆಂಟ್ ಗೆ ಅವಳು ಸುಮ್ಮನೆ ಮುಗುಳ್ನಕ್ಕಳು.
ಅಂಗಡಿಯವನು ನಸುನಗುತ್ತಾ ಗೋಲ್ ಗಪ್ಪಾ ತೆಗೆಯುತ್ತಾ ಖಾರದ ನೀರು ಅದರೊಳಗೆ ಸುರಿಯುವ ಬದಲು, ಬಣ್ಣದ ನೀರು ಸುರಿದ. ಸಮುದ್ರವನ್ನು ಕಣ್ಣಲ್ಲೇ ಅಳೆಯುತ್ತಾ, ಅವಳ ಜೊತೆ ಮಾತನಾಡುತ್ತಾ ನಿಂತ ಅವನಿಗೆ ಏನಾಗುತ್ತಿದೆಯೆಂದು ಗೊತ್ತಾಗುವಷ್ಟರಲ್ಲೇ ಬಣ್ಣದ ನೀರು ತುಂಬಿದ ಗೋಲ್ ಗಪ್ಪಾಗಳು ಅವನ ಮೇಲೆರಗಿದವು. ಅವನು ಸಾವರಿಸಿಕೊಂಡು ನೋಡುವಷ್ಟರಲ್ಲೇ ಅಂಗಡಿಯವನು "ಹ್ಯಾಪೀ ಹೋಲೀ" ಎಂದು ದೊಡ್ಡದಾಗಿ ನಗುತ್ತಾ ಬಣ್ಣದ ಮೂಟೆಯೊಂದಿಗೆ ಓಡೋಡುತ್ತಾ ಗುಂಪಿರುವ ಕಡೆಗೆ ಮರೆಯಾಗುತ್ತಿದ್ದ.
ಅವನನ್ನು ನೋಡಿ ಅವಳು ಈಗ ಬಿದ್ದು ಬಿದ್ದು ನಗತೊಡಗಿದಳು.
"ಯೂ ಮೇಡ್ ಆನ್ ಆಸ್ ಆಫ್ ಮೈಸೆಲ್ಫ್ ಹಾ", ಎಂದು ಹುಸಿನಗೆ ಬೀರುತ್ತಾ ಬಣ್ಣದ ನೀರಿನ ಬಾಲ್ದಿಯಲ್ಲಿ ತೋಯುತ್ತಾ ಇದ್ದ ತನ್ನ ತುಂಬು ತೋಳಿನ ಬಿಳಿ ಷರ್ಟನ್ನೂ ಲೆಕ್ಕಿಸದೆ ಅವನು ಬಣ್ಣಗಳನ್ನು ತುಂಬುತ್ತಾ ಅವಳೆಡೆಗೆ ಎಸೆಯಲು ಓಡತೊಡಗಿದ. ಅವಳೂ ತನ್ನ ಕಾಲೇಜು ದಿನಗಳು ಬಂದೇ ಬಿಟ್ಟಿತೇನೋ ಎಂಬಂತೆ ಬಿದ್ದು ಬಿದ್ದು ನಗುತ್ತಾ, ಎಡಗೈಯಲ್ಲಿ ಸೆರಗನ್ನೂ ಸಾವರಿಸಿಕೊಳ್ಳುತ್ತಾ, ಬಲಗೈಯಲ್ಲಿ ತನ್ನ ವ್ಯಾನಿಟಿ ಬ್ಯಾಗನ್ನೂ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ ಬಣ್ಣದಾಟ ಆಡುತ್ತಿರುವ ಗುಂಪಿನೆಡೆಗೆ ಖುಷಿಖುಷಿಯಾಗಿ ಓಡತೊಡಗಿದಳು.
ಅವಳೆಡೆಗೆ ಓಡುತ್ತಾ, ದೂರದಲ್ಲಿ ಮೆಲ್ಲಗೆ ಸಮುದ್ರದೆಡೆಗೆ ಜಾರುತ್ತಿರುವ ಕೆಂಪನೆಯ ಸೂರ್ಯನನ್ನು ಕಂಡು ಅವನಿಗೇಕೋ ತುಂಬಾನೇ ಖುಷಿಯಾಯಿತು. ಷರ್ಟಿನ ಮೇಲೆ ಸಣ್ಣಗೆ ಬಣ್ಣದ ನೀರಿನೊಂದಿಗೆ ಹರಿಯುತ್ತಿರುವ ಸಿಗರೇಟಿನ ಬೂದಿಯನ್ನು ಕಂಡು ಅಚ್ಚರಿಪಟ್ಟ.
ಮೊದಲಬಾರಿಗೆ ಅವನಿಗೆ ಸಿಗರೇಟಿನ ಆಷ್ ಸುಮ್ಮನೆ ಬೂದು ಬಣ್ಣದಷ್ಟೇ ಕಂಡಿತು.
ಧರೆಯಲ್ಲಿ ಬಣ್ಣಗಳು ಮಾತಾಡತೊಡಗಿದ್ದವು.
*****