ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.


ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು.
“ಥತ್, ಎಂತ ಮಳಿಯೊ , ಜಿರಾಪತಿ ಸುರಿತಲ್ಲ, ಇಷ್ಟು ಬೇಗ ಬಂದು ಹಿಡ್ಕಂಡ್ರೆ ಹ್ಯಾಂಗೆ, ಮದಿಗಿದಿ ಇಟ್ಕಂಡರ್ ಕಥಿ ಹ್ಯಾಂಗೆ” ಹೋಟೆಲ್ ಚಾ ಹೀರುತ್ತಿದ್ದ ಸುಬ್ಬಾ ಹೋಟೆಲ್ ಮಾಲೀಕರಾದ ರಾಜೀವ ಶೆಟ್ರ ಹತ್ರ ಹೇಳುತ್ತಿದ್ದ.
“ಇನ್ನು ಗದ್ದಿಗೆ ಗೊಬ್ರ ಹಾಕಿಲ್ಲ, ಬೀಜ ಹಾಕುಕೆ ಗದ್ದೆ ಹೂಡಿಯಾಗಿಲ್ಲ, ಹಿಂಗೇ ಮಳೆ ಹಿಡ್ಕಂಡ್ರೆ ಈ ವರ್ಷ ಬೇಸಾಯ ಮಾಡಿದಾಂಗೆ” ಸುಬ್ಬ ಒಂದೇ ಸಮನೆ ರೋದಿಸುತ್ತಿದ್ದ.
ಇತ್ತ ಮಳೆಯ ಅಬ್ಬರ ಹೆಚ್ಚಾಗುತ್ತಿತ್ತು, ” ಸುಬ್ಬ ಹೀಗೆ ಮಳೆ ಬಂದ್ರೆ ನಾಳೆ ಹೊಗೆ ಮೀನು ಏಳುದು ಗ್ಯಾರಂಟಿ, ಮೀನು ಹಿಡುಕು ಐಟಂ ರೆಡಿ ಮಾಡ್ಕೋ ಮಾರಾಯ ,” ಹೋಟೆಲ್ ಒಳಗೆ ಮಸಾಲೆ ದೋಸೆ ತಿನ್ನುದಿದ್ದ ನಾಗು ನುಡಿದ
“ಹೊಗೆ ಮೀನಿನ ಮನೆ ಹಾಳಾಗ್ಲಿ ಮಾರಾಯ , ನಮ್ ಕಥಿ ಹೆಂಗೆ ಹೇಳ್, ಸ್ವಲ್ಪ ದುಡಿಕಾಂಬುಕೆ ಇದೆ ಟೈಮ್, ಈಗ್ಲೇ ಮಳೆ ಶುರುವಾದ್ರೆ ಹೆಂಗೆ , ನಮ್ಮ ಹೊಟ್ಟೆ ಮೇಲೆ ಕಲ್ಲೇ ” ಗಾರೆ ಕೆಲಸ ಮಾಡುತ್ತಿದ್ದ ಸುಬ್ಬನ ಆತಂಕ ಮಳೆಯ ಜೊತೆಗೆ ಹೆಚ್ಚಾಯಿತು.
ಮಳೆ ಜೋರಾಗಿದ್ದರಿಂದ ಹೋಟೆಲ್ ನಲ್ಲಿ ಜನ ಇರಲಿಲ್ಲ. ಸಂಜೆಯಲ್ಲ ಗಿರಾಕಿಗಳಿಂದ ಗಿಜಿಗಿಜಿ ಅನ್ನುತ್ತಿದ ರಾಜೀವ ಶೆಟ್ರ ಹೋಟೆಲ್ ಇಂದು ಅಲ್ಲೊಂದು ಇಲ್ಲೊಂದು ಗಿರಾಕಿಗಳಿಂದ ಬಿಕೋ ಎನ್ನುತ್ತಿದ್ದು.
“ನರಸಿಂಹ ದೋಸೆ ನಿಲ್ಸು, ಯಾರು ಕಾಣ್ಸ್ತ ಇಲ್ಲ . ಇನ್ನೇನು ಅರ್ಧ ಗಂಟೆ , ಆ ಮೇಲೆ ರಸ್ತೆ ಮೇಲೆ ನೀರ್ ಬರುತ್ತೆ. ಹೋಟೆಲ್ ಬೇಗ ಮುಚ್ಚಿ ಬಾ ಇವತ್ತು. ನಾನ್ ಮನಿಗ್ ಹ್ವಾತಿ ” ಅಂತ ರಾಜೀವ ಶೆಟ್ರು ಹೋಟೆಲಿನ ಅಡುಗೆಮನೆಯಲ್ಲಿ ದೋಸೆ ಹಿಟ್ಟು ರುಬ್ಬುತ್ತಿದ್ದ ಕುಕ್ ನರಸಿಂಹನಿಗೆ ಕೂಗಿ ಹೇಳಿದರು.
ನರಸಿಂಹನಿಗೂ ಅದೇ ಬೇಕಾಗಿತ್ತು. ಬೆಳಿಗ್ಗೆಯಿಂದ ಯಾಕೋ ಕೆಲಸದಲ್ಲಿ ಮನಸ್ಸಿರಲಿಲ್ಲ . ” ಆಯಿತು ಬಿಡಿ,ಈ ಮಳೆ ರಾಪ್ ನೋಡಿದ್ರೆ ನಾಳೆಗೂ ದೋಸೆ ಹಿಟ್ಟು ರುಬ್ಬುದು ಬೇಡ ಅನ್ಸುತ್ತೆ, ” ಅಂತ ಗ್ಯಾಸ್ ಬಂದ್ ಮಾಡಿದ.
“ಎಂತ ಆಯ್ತ್ ನಿಂಗ್ ನರಸಿಂಹ, ದೋಸೆ ಸರಿ ಬರ್ತಾ ಇಲ್ಲ , ಗಿರಾಕಿಗಳು ಕುಂಯ್ ಕುಣ್ಯಾ ಅಂತಾರ ಕಣ್ ” ಬೆಳ್ಳಿಗ್ಗೆಯಿಂದ ಸುಸ್ಪ್ಲೇಯರ್ ನಾಗೇಶ ಒಂದೇ ಸಮನೆ ಕುಂಯೋ ಅಂತಿದ್ದ. ” ಮೈ ಹುಷಾರಿಲ್ಲ ಅಂದ್ರೆ ಮನೆಗ್ ಹೋಗಿ ರೆಸ್ಟ್ ತಗೋ” ಅಂತ ರಾಜೇವ ಶೆಟ್ರು ಮದ್ಯಾಹ್ನ ಹೇಳಿಯಾಗಿತ್ತು.
“ಹಂಗೇನಿಲ್ಲ , ಸ್ವಲ್ಪ ತಲೆನೋವು, ಅಮೃತಾಂಜನ್ ಹಚ್ಕಂಡಿದಿ ಎಲ್ಲಾ ಸರಿ ಅತ್ ” ಅಂತ ಎಲ್ಲರನ್ನು ಸಮಾಧಾನಪಡಿಸಿ ದೋಸೆ ಹೆಂಚಿನತ್ತ ಚಿತ್ತ ಹಾರಿಸಿದ್ದ ನರಸಿಂಹ.
ದೇಹಕ್ಕಾದ ನೋವು ಔಷದಿಗೆ ಗುಣ ಆಗುತ್ತೆ, ಆದರೆ ಮನಸಿಗೆ ಆದ ನೋವು, ವರ್ಷದಲ್ಲಿ ಮೊದಲ ಬಾರಿಗೆ ಮಳೆ ಬರ್ತಾ ಇದೆ, ಅದನ್ನು ಖುಷಿಯಿಂದ ಅನುಭವಿಸುವ ಮನಸ್ಥಿತಿ ಅವನಿಗಿಲ್ಲ. ಹೊಗೆ ಮೀನು ಹಿಡಿಯುವುದೆಂದರೆ ನರಸಿಂಹನಿಗೆ ಹಬ್ಬ. ಇವತ್ತು ಮಧ್ಯಾಹ್ನ ಖಾಯಂ ಗಿರಾಕಿಯೊಬ್ಬ ಈ ಬಗ್ಗೆ ಕೇಳಿದರೆ ಸಿಡಿಮಿಡಿಗೊಂಡಿದ್ದ. ಬೆಳಿಗ್ಗೆಯಿಂದ ಕದಡಿ ಕಳಕಾಗಿದ್ದ ಮನಸ್ಸನ್ನು ತಳಹದಿಗೆ ತರಲು ನರಸಿಂಹನಿಗೆ ಸಾದ್ಯಾವಾಗಲೇ ಇಲ್ಲ. ಬಾತುರೂಮಿಗೆ ಹೋಗಿ ಒಂದೆರಡು ಸಲ ಜೋರಾಗಿ ಅತ್ತು ಮನಸ್ಸನ್ನು ಹಗುರಮಾಡಿಕೊಳ್ಳುವ ಯತ್ನವೂ ಕೈಹಿಡಿಯಲ್ಲಿಲ್ಲ. ಮನಸ್ಸನ್ನು ಹೊಕ್ಕಿದ್ದ ಆತಂಕದ ಬೀಜ ಮೊಳಕೆಯೊಡೆಯುತ್ತಲ್ಲೇ ಇತ್ತು.
ನರಸಿಂಹ, ರಾಜೀವ ಶೆಟ್ರ ಹೋಟೆಲ್ ಸೇರಿ ಸುಮಾರು ನಲವತ್ತು ವರ್ಷ ಕಳೆದಿತ್ತು. ರಾಜೀವ ಶೆಟ್ರ ತಂದೆ ಪಿಣಿಯ ಶೆಟ್ರು ಹೋಟೆಲು ಅದು, ನಾಲ್ಕನೇ ಕ್ಲಾಸ್ಸಿಗೆ ನಮಸ್ಕಾರ ಹೇಳಿದ ನರಸಿಂಹ ಆ ಹೋಟೆಲಿನಲ್ಲಿಕ್ಲೀನರ್ ಆಗಿ ಸೇರಿಕೊಂಡಿದ್ದ. ಕೆಲಸದಲ್ಲಿ ಬಹಳ ಚುರುಕ, ಹಾಗೇನೇ ಕ್ಲೀನರ್ ನಿಂದ ಸುಪ್ಪ್ಲೆಯರ್ ಆದ , ಆಮೇಲೆ ಕೌಂಟರ್ ಗೆ ಬಂದ , ಅಲ್ಲಿಂದ ಕುಕ್ ಆಗಿ ಪ್ರಮೋಷನ್ , ಹೀಗೆ ಸಾಗಿತ್ತು ಅವನ ನಲವತ್ತು ವರ್ಷದ ಅನುಬಂಧ. ಪಿಣಿಯ ಶೆಟ್ರ ಕಾಲಾನಂತರ ರಾಜೀವ ಶೆಟ್ರು ಹೋಟೆಲಿನ ಜವಾಬ್ದಾರಿ ಹೊತ್ತ ನಂತರ ನರಸಿಂಹ ಹೋಟೆಲಿಗೆ ಮ್ಯಾನೇಜರ್ ಆಗ್ತಾನೆ . ಒಂದೇ ವಯಸ್ಸಿನವರಾದ ಇವರಿಬ್ಬರ ನಡುವೆ ಒಳ್ಳೆ ಗೆಳೆತನ ಇತ್ತು. ಆದರೆ ಈ ಗೆಳೆತನದ ಸಲುಗೆ ಎಲ್ಲೂ ಕೆಲಸದ ವಿಷಯದಲ್ಲಿ ರಾಜಿಗೆ ಬಾರದ ತರಹ ನರಸಿಂಹ ನೋಡಿಕೊಂಡಿದ್ದ. ಎಷ್ಟೋ ಸಲ ರಾಜೀವ ಶೆಟ್ರು ಇಡೀ ಹೋಟೆಲನ್ನು ನರಸಿಂಹನ ಕೈಲಿಟ್ಟು ಸಂಸಾರ ಸಮೇತ ಊರೂರು ತಿರುಗಲು ಹೋಗುತ್ತಿದ್ದರು.

ಮಳೆ ಮತ್ತಷ್ಟು ಜೋರಾಗುತ್ತಿತ್ತು. ನರಸಿಂಹ , ಹೋಟೆಲಿನ ಹುಡುಗರನ್ನೆಲ್ಲಾ ಸ್ಟಾಫ್ ರೂಮ್ ಗೆ ಕಳುಹಿಸಿ ಹೋಟೆಲಿಗೆ ಬಾಗಿಲು ಹಾಕಿ ತನ್ನ ಹಳೆ ಆಕ್ಟಿವ್ ಹೋಂಡಾದಲ್ಲಿ ರೈನ್ ಕೋಟ್ ಹಾಕಿಕೊಂಡು ಸುರಿಯುವ ಮಳೆಯನ್ನೂ ಛೇಡಿಸಿಕೊಂಡು ಮನೆಯತ್ತ ತೆರಳಿದ.
ಮಳೆಯಲ್ಲಿ ಗಾಡಿ ಓಡಿಸುವುದೆಂದರೆ ತುಂಬಾನೇ ಮಜಾ. ರಸ್ತೆಯಲ್ಲಿ ಹರಿಯುವ ಮಳೆನೀರನ್ನು ಬೈಕಿನ ಟೈಯರ್ ಸೀಳಿಕೊಂಡು ಹೋಗುತ್ತಿರುವಾಗ, ಆಕಾಶದಿಂದ ಮುಖದಮೇಲೆ ಮುತ್ತಿಕ್ಕುವ ಮಳೆಯ ಹನಿಗಳ ತಣ್ಣನೆಯ ಸ್ಪರ್ಶ ವರ್ಣಿಸಲಾತೀತ ಅನುಭವ. ಇಂತಹದನ್ನು ಯಾವಾಗಲೂ ಆನಂದಿಸುವ ನರಸಿಂಹ ಇಂದು ಅದರತ್ತ ಚಿತ್ತಹರಿಸುವ ಮನಸ್ಥಿತಿಯಲ್ಲಿ ಇಲ್ಲ . ಮುಖದ ಮೇಲೆ ಬೀಳುತ್ತಿದ್ದ ಮಳೆಹನಿಗಳು ಯಾಕೋ ಯಾರೋ ಭಾನಿನಿಂದ ಇವನನ್ನೇ ಗುರಿಯಾಗಿಸಿಕೊಂಡು ಬಿಟ್ಟ ಬಾಣದಂತೆ ಭಾಸವಾಗುತ್ತಿತ್ತು.

“ಬೇಗ ಬಂದ್ರ, ಒಳ್ಳೆದಾಯಿತು, ಸ್ವಲ್ಪ ಲೇಟ್ ಆಗಿದ್ರೆ ಈ ಮಳೆಯಲ್ಲಿ ಬಪ್ಪುದು ಯಾಪಾರವೆ ಅಲ್ಲ , ಕರೆಂಟ್ ಬೇರೆ ಇಲ್ಲ, ಬಿಸಿ ನೀರ್ ರೆಡಿ ಇದೆ ಮೀನಿ ” ಹೆಂಡತಿ ಸಾವಿತ್ರಿ ಮನೆಗೆ ಬಂದ ನರಸಿಂಹನ ಕೈಗೆ ಟವೆಲ್ ನೀಡುತ್ತಾ ನುಡಿದಳು.
“ಶಾಲಿನಿ ಎಲ್ಲಿ ” ನರಸಿಂಹನ ಕಣ್ಣುಗಳು ಮನೆಯಲ್ಲಾ ಹುಡುಕಾಡಿದವು
“ರೂಮಿನಲ್ಲಿದ್ದಾಳೆ, ಮಳೆ ಅಂತ ಆಫೀಸ್ನಲ್ಲಿ ಬೇಗ ಬಿಟ್ರಂತೆ , ಬಂದ್ ಎರಡ್ ಗಂಟೆ ಐತ್ ” ಅಂದ ಸಾವಿತ್ರಿ ಅಡುಗೆ ಮೆನೆಯತ್ತ ನೆಡೆದಳು
ನರಸಿಂಹ ಸ್ನಾನ ಮುಗಿಸಿದ. ಬಿಸಿನೀರು ಮಳೆಯಿಂದ ಅರೆಬರೆ ಒದ್ದೆಯಾದ ಮೈಗೆ ಹಿತ ನೀಡಿತು. ಸಾವಿತ್ರಿ ಕೊಟ್ಟ ಟೀ ಕುಡಿಯುತ್ತಾ ಆತ ಮಾತಿಗೆ ಪೀಠಿಕೆ ಹಾಕಿದ
“ಶಶಿಧರ ಫೋನ್ ಮಾಡಿದ್ನಾ ?”
“ಇಲ್ಲ , ಯಾಕೆ, ಏನಾದರೂ ವಿಷಯ ಇತ್ತಾ ” ಸಾವಿತ್ರಿ ಮಗನ ಕರೆಯ ಬಗ್ಗೆ ವಿಚಾರಿಸಿದ ಗಂಡನನ್ನು ಪ್ರಶ್ನಿಸಿದಳು .
“ಹಾಗೇನಿಲ್ಲ , ನಿನ್ನೆ ನಾನೇ ಅವ್ನಿಗೆ ಫೋನ್ ಮಾಡಿದ್ದೆ, ಶಾಲಿನಿಗೆ ಬೆಂಗಳೂರಲ್ಲಿ ಒಂದ್ ಒಳ್ಳೆ ಹುಡ್ಗ ಇದ್ರೆ ನೋಡು ಅಂತ , ಅದಕ್ಕೆ ಏನಾದರೂ ಫೋನ್ ಮಾಡಿದ್ನಾ ಅಂತ ಕೇಳ್ದೆ ”
“ನೀವು ನಿನ್ನೆ ಅವಂಗೆ ವಿಷಯ ಹೇಳಿದ್, ಇವತ್ ಗಂಡ ಸಿಕ್ಕುಕ್ಕೆ ಅದೇನು ಅಂಗಡಿಯಲ್ಲಿ ಇತ್ತಾ ಸಾಮಾನ , ಬೆಳ್ಳಿಗೆಯಿಂದ ಸಾಯಂಕಾಲ ತನಕ ಬೇಕರಿಯಲ್ಲಿ ಒದ್ದಾಡ್ತಾ ಇರ್ತಾನೆ, ಟೈಮ್ ತಕಂಡ್ ಹೇಳ್ತ ಬಿಡಿ, ಗಡಿಬಿಡಿ ಎಂತಕೆ, ಶಾಲಿನಿಗೆ ಇನ್ನು ಚಿಕ್ಕ್ಕ ವಯಸ್ಸು ಅಷ್ಟೇ ಅಲ್ದಾ ” ಸಾವಿತ್ರಿ ಯಾಕೆ ಮಗಳ ಮದುವೆ ವಿಷಯದಲ್ಲಿ ನಿರಾಸಕ್ತಿಯಿಂದ ಮಾತಾಡಿದ್ದನ್ನು ನರಸಿಂಹ ಸೂಕ್ಷವಾಗಿ ಗಮನಿಸಿದ .

“ಸರಿ, ನಾಳೆಯೇನಾದರೂ ಅಂವ ಫೋನ್ ಮಾಡ್ರೆ ನಂಗೆ ಹೇಳುಕ್ ಮರೀಬೇಡ ” ಅಂದ ಆತ ಮನೆಯ ಪದಾಸಾಲೆಗೆ ಬಂದು ಕುಳಿತ . ಹೌದು ಮಗಳ ಮದುವೆಗೆ ಏನು ಗಡಿಬಿಡಿ ಇರಲಿಲ್ಲ , ಅವಳಿಗಿನ್ನು ಇಪ್ಪತ್ತೆರಡು ವರ್ಷ ಅಷ್ಟೇ, ಆದರೆ ಪರಿಸ್ಥಿತಿ ಹಾಗಿರಲಿಲ್ಲ, ನರಸಿಂಹನ ಮನಸ್ಸು ಎಲ್ಲೆಲ್ಲೋ ಓಡುತ್ತಿತ್ತು.

ನರಸಿಂಹನಿಗೆ ಇಬ್ಬರು ಮಕ್ಕಳು, ದೊಡ್ಡವ ಶಶಿಧರ, ಚಿಕ್ಕವಳು ಶಾಲಿನಿ. ಶಾಲೆಯಲ್ಲಿ ಮೇಸ್ಟ್ರು ಎಷ್ಟು ಕಷ್ಟ ಪಟ್ಟರೂ ಶಶಿಧರ ಓದಲಿಲ್ಲ. ಅಂತೂ ಏಳನೇ ಕ್ಲಾಸಿನ ವರೆಗೆ ತೆವಳಿದ , ಆತ ಮುಂದೆ ಹೈ ಸ್ಕೂಲ್ ಮೆಟ್ಟಿಲು ತುಂಬಾ ಜಾರುತ್ತೆ ಅಂತ ಹಠ ಹಿಡಿದ. ಸರಿ ಅಂತ ನರಸಿಂಹ ಅವನನ್ನು ಬೆಂಗಳೂರಿನಲ್ಲಿರುವ ರಾಜೀವ ಶೆಟ್ರ ಹೆಂಡತಿಯ ತಮ್ಮನ ಹೋಟೆಲಿಗೆ ಸೇರಿಸಿದ. ಅಲ್ಲಿ ಸುಮಾರು ಹತ್ತು ವರ್ಷ ದುಡಿದು ಕೊಡಿತ್ತ ಹಣದಲ್ಲಿ ಒಂದು ಬೇಕರಿ ಮಾಡಿಕೊಂಡು ಕಳೆದ ಎರಡು ವರ್ಷದಿಂದ ವ್ಯವಹಾರ ಮಾಡಿಕೊಂಡಿದ್ದಾನೆ.
ಇನ್ನು ಮಗಳು ಶಾಲಿನಿ ಕುಂದಾಪುರದಲ್ಲಿ ಃ.ಛಿom ಮುಗಿಸಿ ತಾಲೂಕ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಂಡಳು. ಅವಳ ಸಂಬಳವನ್ನು ನರಸಿಂಹ ಒಂದಿಷ್ಟು ಮನೆ ವ್ಯವಹಾರಕ್ಕೆ ಇಟ್ಟುಕೊಳ್ಳದೆ ಅವಳ ಮದುವೆಗೆಂದು ಕೂಡಿಟ್ಟುಕೊಳ್ಳುತ್ತಿದ್ದ. ಮಗಳ ಮದುವೆಗಾಗಿ ದಿನ ಇನ್ನೂರು ರೂಪಾಯಿಯನ್ನು ಎತ್ತಿಡುವಂತೆ ಮಗನಿಗೆ ತಾಕಿತ್ತು ಮಾಡಿದ್ದ ಬೇರೆ. ಮಳೆಯ ಅಬ್ಬರ ಇನ್ನಷ್ಟು ಜೋರಾಗುತ್ತಿತ್ತು. ಮಳೆಯ ಹನಿಗಳ ಅಬ್ಬರಕ್ಕೆ ಮನೆಯ ಮಾಡಿನ ಹಂಚುಗಳ ರೋದನೆ ಜಾಸ್ತಿಯಾಗಿತ್ತು. ಜೊತೆಗೆ ನರಸಿಂಹನ ಮನಸ್ಸಲ್ಲಿನ ಆತಂಕ ಸಹ.
ಅದು ಮೊನ್ನೆಯ ಸಂಜೆ, ಮುಂಗಾರು ಆರಂಭದ ಸೂಚನೆ ಎಂಬುವಂತೆ ಗಾಳಿ ಜೋರಾಗಿತ್ತು , ಹಾಗೇನೇ ಮೋಡಗಳ ಸೈನ್ಯ ಯುದ್ಧಕ್ಕೆ ಸಜ್ಜಾದಂತೆ ಆಗಸದಲ್ಲಿ ಒಟ್ಟುಗೂಡುತ್ತಿದ್ದವು. ಅಂದು ನರಸಿಂಹ ತನ್ನ ಅಕ್ಕನ ಗಂಡನ ತಂಗಿಯ ಮಗಳ ಮದುವೆಗೆಂದು ಬ್ರಹ್ಮವಾರಕ್ಕೆ ಹೋಗಿದ್ದವ ಹಿಂತಿರುಗುವಾಗ ಸೊಸೈಟಿ ಸಾಲದ ನವೀಕರಣಕ್ಕಾಗಿ ಕುಂದಾಪುರದ Sಅಆಅಅ ಬ್ಯಾಂಕ್ ಗೆ ಹೋಗಿದ್ದ. ಕೆಲಸ ಮುಗಿಸಿ ಪಕ್ಕದಲ್ಲೇ ಇದ್ದ ಪಾರಿಜಾತ ಹೋಟೆಲಿಗೆ ಚಾ ಕುಡಿಯಲು ತೆರಳಿದವನಿಗೆ ಆಘಾತ ಕಾದಿತ್ತು. ಮಸಾಲೆ ದೋಸೆ ತಿಂದು ಚಾ ಕುಡಿಯುವಾಗ ಹೋಟೆಲಿನ ಮೂಲೆಯ ಟೇಬಲ್ ನಲ್ಲಿ ಕುಳಿತ್ತಿದ ಒಂದು ಗಂಡು ಹೆಣ್ಣಿನ ಜೋಡಿ ಕಣ್ಣಿಗೆ ಬಿತ್ತು. ನರಸಿಂಹನಿಗೆ ಅಲ್ಲಿದ ಹುಡುಗಿ ಯಾಕೋ ಹತ್ತಿರದವಳು ಅನಿಸಿತ್ತು, ಆಕೆ ಹಾಕಿದ ಬಟ್ಟೆ ಎಲ್ಲೊ ಬೆಳಿಗ್ಗೆ ಮಗಳು ಆಫೀಸ್ ಗೆ ಹೋಗುವಾಗ ಹಾಕಿದ ಬಟ್ಟೆ ತರಹ ಇತ್ತು. ಗಾಬರಿಯಾದ ಆತ ನಿಧಾನವಾಗಿ ಅವರಿಗೆ ಕಾಣದಂತೆ ಹತ್ತಿರಹೋಗಿ ಮರೆಯಲ್ಲಿ ನಿಂತ.
ಹೌದು ಅವಳು ನನ್ನ ಮಗಳೇ ! ನನ್ನ ಮುದ್ದಿನ ಶಾಲಿನಿಯೇ. ಪಕ್ಕದಲ್ಲಿದ್ದ ಹುಡುಗನ ಕೈ ಹಿಡಿದುಕೊಂಡು ಕುಳಿತಿದ್ದಳು. ಆ ಹುಡುಗ ಅವಳ ಹೆಗಲಮೇಲೆ ಕೈ ಹಾಕಿಕೊಂಡು ಲಲ್ಲೆಗೆರೆಯುತ್ತಿದ್ದ. ಇಬ್ಬರು ಸೇರಿ ಗಡ್ ಬಡ್ ಐಸ್ ಕ್ರೀಮ್ ನ್ನು ಯಾವುದೇ ಗಡಿಬಿಡಿ ಇಲ್ಲದೆ ತಿನ್ನುತ್ತಿದ್ದರು. ನರಸಿಂಹ ನೋಡಿತ್ತಿದ್ದಂತೆ ಆ ಹುಡುಗ ಶಾಲಿನಿಗೆ ಕಿಸ್ ಕೊಟ್ಟ. ನರಸಿಂಹನಿಗ್ಯಾಕೋ ತಲೆ ಸುತ್ತಂತೆ ಭಾಸವಾಯಿತು. ನಿಲ್ಲಲ್ಲಾಗಲಿಲ್ಲ, ಅಲ್ಲಿಂದ ಹೊರಡುವ ಮುನ್ನ ಆತನ ಕಣ್ಣಿಗೆ ಆ ಹುಡುಗನ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಸರದಲ್ಲಿದ್ದ ಶಿಲುಬೆ ಯಾಕೋ ಮಿಂಚಿನಂತೆ ಕಣ್ಣನ್ನು ಕುಕ್ಕುತ್ತಿತ್ತು.

“ಅಪ್ಪ ನಾನೇನು ತಪ್ಪು ಮಾಡಿಲ್ಲ , ಜಾನ ನನ್ನೂ ಪ್ರೀತಿಸುತ್ತಿದ್ದೇನೆ ಅಷ್ಟೇ , ಹೊರತು ಓಡಿಹೋಗಿಲ್ಲ , . ಅದು ತಪ್ಪಾ ? ನೀವು ನೋಡಿ ಮಾಡುವೆ ಮಾಡಿಸಿದ ಗಂಡು ನಾಳೆ ನನ್ನನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನುವುದೇ ಏನು ಗ್ಯಾರಂಟಿ. ಜಾನ್ ನನ್ನು ಪ್ರೀತಿವುವ ಮೊದಲು ಮುರು ವರ್ಷ ನೋಡಿದ್ದೇ, ಕಾಲೇಜಿನಲ್ಲಿ ನನಗಿಂತ ಎರಡು ವರ್ಷ ದೊಡ್ಡವ, ಒಳ್ಳೆ ಹುಡುಗ ಅಂತ ಇಡೀ ಕಾಲೇಜು ಹೇಳುತ್ತಿತ್ತು, ನನ್ನ ಹತ್ರ ಬಂದು ಪ್ರೀತಿಸುತ್ತೀಯಾ ಅಂತ ಕೇಳಿದ , ಇಲ್ಲ ಅನ್ನಲು ಮನಸ್ಸಾಗಲಿಲ್ಲ .ಯಾಕೆಂದ್ರೆ ಅವನಷ್ಟು ಒಳ್ಳೆಯ ಹುಡುಗ ನೀವು ಎಲ್ಲಿ ಹುಡುಕಿದರೂ ನಮ್ಮ ಲೆವೆಲ್ಡ್ನಲ್ಲಿ ಸಿಗಲಾರ. ದಯವಿಟ್ಟು ನನಗೆ ಬೇರೆ ಹುಡುಗನನ್ನು ಹುಡುಕುವ ಯತ್ನ ಮಾಡಬೇಡಿ. ನಾನು ನಿನ್ನೆ ಅಣ್ಣನಲ್ಲಿ ನಮ್ಮಿಬ್ಬರ ಪ್ರೀತಿಯ ವಿಷಯ ಹೇಳಿದ್ದೆ. ಅವನೇ ಅಪ್ಪಯ್ಯನಿಗೆ ವಿಷಯ ಬೇಗ ತಿಳಿಸು, ಅವರು ಇಲ್ಲಿ ನನಗೆ ಕುಳಿತುಕೊಳ್ಳಲು ಬಿಡುತ್ತಿಲ್ಲ ಶಾಲಿನಿಗೆ ಹುಡುಗ ನೋಡು ಹುಡುಗ ನೋಡು ಅಂತ ತಲೆ ತಿಂತಾರೆ ಅಂದಿದ್ದ , ಅದಕ್ಕೆ ಹೇಳಿದ್ದೇನೆ, ಒಂದಲ್ಲ ಒಂದು ದಿನ ನಿಮಗೆ ಗೊತ್ತಾಗುತ್ತೆ, ಅದಕ್ಕೆ ಮೊದಲೇ ನಾನು ಹೇಳಿದರೆ ಚೆನ್ನಾಗಿರುತ್ತೆ ಅಂತ ಹೇಳಿದೆನೆ ” ಶಾಲಿನಿ ಬೆಳ್ಳಿಗ್ಗೆ ತಿಂಡಿತಿನ್ನುವಾಗ ನರಸಿಂಹನಿಗೆ ತನ್ನ ಪ್ರೀತಿಯ ವಿಷಯ ಅರುಹಿದಳು
ಎಲ್ಲವನ್ನೂ ಕೇಳಿಸಿಕೊಂಡ ನರಸಿಂಹ ನಿರ್ಲಿಪ್ತನಾಗಿ ಹೆಂಡತಿಯ ಕಡೆಗೆ ನೋಡಿದ. ಸಾವಿತ್ರಿ ವಿಷಯ ತನಗೆ ಗೊತ್ತಿಲ್ಲದಂತೆ ತನ್ನ ಮುಂದೆ ನಟಿಸುತ್ತಿದ್ದಾಳೆ ಎಂದು ಅರಿಯಲು ಅವನಿಗೆ ಬಹಳ ಸಮಯ ಹಿಡಿಯಲ್ಲಿಲ್ಲ
“ಹಾಗಾದ್ರೆ ದೊಡ್ಡವರು ಅಂತ ನಾವಿರುಹುದು ಯಾಕೆ, ಎಲ್ಲವನ್ನೂ ನೀವೇ ನಿರ್ದರಿಸುವುದಾದರೆ, ಅವನ ಜಾತಿ ಬೇರೆ, ಧರ್ಮ ಬೇರೆ, ನಮಗೆ ಸರಿ ಹೊಂದೊಲ್ಲ, ಜನ ಏನಂದಾರು ? ಇಲ್ಲಿ ತನಕ ಊರಲ್ಲಿ ನಾನು ಕಾಪಾಡಿಕೊಂಡು ಬಂದ ಕುಟುಂಬದ ಗೌರವ , ಮರ್ಯಾದೆಯ ಗತಿ ಏನು. ಯಾಕೋ ಇದು ನನಗೆ ಸರಿ ಕಾಣಿಸ್ತಾ ಇಲ್ಲ, ಇರು ಸಾಲ ಮಾಡಿಯಾದರೂ ಅವನಿಗಿಂತ ಚೆನ್ನಾಗಿರುವ ಹುಡುಗನನ್ನು ಮದುವೆ ಮಾಡ್ಸ್ತೀನಿ , ಸ್ವಲ್ಪ ನನ್ನ ಮಾತು ಕೇಳು ಮಗ ” ನರಸಿಂಹನ ಕಣ್ಣಲ್ಲಿ ನೀರಿನ ಪ್ರವಾಹ ಉಕ್ಕುತ್ತಿತ್ತು

ಹೊರಗೆ ಮಳೆಯ ಅಬ್ಬರ ಜೋರಾಗಿತ್ತು. ರಸ್ತೆಯಿಂದ ಮಳೆಯ ನೀರು ಮನೆಯ ಅಂಗಳಕ್ಕೆ ನುಗ್ಗಿಬಿಟ್ಟತ್ತು, ಭಾನುವಾರ ಆಗಿದ್ದರಿಂದ ಶಾಲಿನಿ ಮನೆಯಲ್ಲೇ ಇದ್ದಳು. ರಾಜೀವ ಶೆಟ್ರು ಫೋನ್ ಮಾಡಿ ಹೋಟೆಲು ಓಪನ್ ಮಾಡೋದು ಬೇಡ ಅಂದಿದ್ರು. ಪಕ್ಕದಮನೆ ಶ್ಯಾಮ ಬಂದು ರಾತ್ರಿ ಹೊಗೆ ಮೀನು ಹಿಡಿಯೋಕೆ ತಯ್ಯಾರಾಗಿರು ಅಂತ ನರಸಿಂಹನಿಗೆ ಕೂಗಿ ಹೇಳಿಹೋಗಿದ್ದ.
“ಅದೇನು ಗೊಂಬೆ ಆಟನಾ, ಆ ಗೊಂಬೆಗೆ ಈ ಗೊಂಬೆ , ಈ ಗೊಂಬೆಗೆ ಇನ್ನೊಂದು ಗೊಂಬೆ ಜೋಡಿ ಮಾಡಿಸೋಕೆ. ನಾನು ಮದ್ವೆ ಆಗೋದಾದ್ರೆ ಜಾನ್ ನನ್ನೇ , ಬಿಟ್ಟು ಬಿಡಿ. ಇಲ್ಲಿ ತನಕ ನೀವು ಹೇಳಿದ್ದನ್ನೇ ಮಾಡಿದ್ದೇನೆ. ಈ ವಿಷಯದಲ್ಲಿ ದಯವಿಟ್ಟು ನನ್ನ ಮಾತು ಕೇಳಿ. ಇನ್ನೂ ನಿಮ್ಮ ಹಠ ಜಾಸ್ತಿ ಆದ್ರೆ ನಾನು ಮನೆ ಬಿಟ್ಟು ಹೋಗಬೇಕಾಗುತ್ತೆ ” ಅಂತ ಕಡ್ಡಿ ಮುರಿದಂತೆ ನುಡಿದ ಶಾಲಿನಿ ಮೊಬೈಲ್ ಎತ್ತಿಕೊಂಡು ರೂಮಿನತ್ತ ನೆಡೆದಳು.

ನರಸಿಂಹ ಒಂದು ಕ್ಷಣ ನಿಸ್ತೇಜನಾದ. ಮಗಳು ಅವನೆದುರು ಬೃಹದಾಕಾರವಾಗಿ ಬೆಳೆದು ನಿಂತಿದ್ದಳು. ಕೈಗೆ ಸಿಗದಷ್ಟು ಎತ್ತರದಲ್ಲಿ ಹಾರುತ್ತಿದ್ದಾಳೆ ಅನ್ನಿಸಿತ್ತು. ಮಳೆಯ ಪ್ರವಾಹದಲ್ಲಿ ಎಲ್ಲರನ್ನು ಬಿಟ್ಟು ನಾನೆಲ್ಲೋ ಕೊಚ್ಚಿ ಹೋಗುತ್ತಿದ್ದೇನೆ ಅನ್ನಿಸಿ ಬೆವೆತು ಹೋದ.
” ನರಸಿಂಹ ಇವತ್ತು ರಜೆ ಏನು . ಈ ಮಳೆಯಂಗ್ ಹೋಟ್ಲಿಗ್ ಯಾರ್ ಬರ್ತಾರೆ ಹೇಳ್. ರಾತ್ರಿ ಹೊಗೆ ಮೀನು ಬಿಳುದ್ ಗ್ಯಾರಂಟಿ ಕಾಣ್. ಬ್ಯಾಟರಿಗೆ ಚಾರ್ಜ್ ಮಾಡಿ ಇಟ್ಕೋ, ಏಳ್ ಗಂಟೆಗೆ ಬತ್ತಿ , ಮೀನ್ ಹಿಡುಕ್ ಹ್ವಾಪ. ಶ್ಯಾಮ ಆಗ್ಲೇ ಒಂದ್ ಕಾಲ್ ಹೊರಗ್ ಇತ್ತ ಐತ್ ಕಾಣ್ ” ಮನೆ ಪಕ್ಕ ಗದ್ದೆ ಅಂಚಿನಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಎದುರು ಮನೆಯ ಸಂಜೀವ ಅಲ್ಲಿಂದಲೇ ಮೀನು ಹಿಡಿಯಲು ರಣಕಹಳೆ ಊದಿದ್ದ.

“ಜಾನ್ ಬಂದುಬಿಟ್ಟು ಹಂಗಳೂರಿನವನಂತೆ, ಅವನ ತಂದೆಯದ್ದು ಕುಂದಾಪುರ ಪೇಟೆಯಲ್ಲಿ ಸ್ಟೀಲ್ ಅಂಗಡಿಯೆಂತೆ. ತುಂಬಾ ಶ್ರೀಮಂತರಂತೆ, ಅವನ ತಂದೆ ದುಬೈಯಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿ ಬಂದಿದ್ದರಂತೆ. ಕುಂದಾಪುರ ಪೇಟೆಯಲ್ಲಿ ಜಾಗ ತಕ್ಕೊಂಡು ಒಂದ್ ದೊಡ್ಡ ಕಾಂಪ್ಲೆಕ್ಸ್ ಕಟ್ಟಿಸ್ತಾ ಇದ್ದರಂತೆ. ಸ್ಟೀಲ್ ಅಂಗಡಿನ ಈಗ ಇವನೇ ನೋಡಿಕೊಳ್ಳುದಂತೆ. ಒಬ್ಬನೇ ಮಗ ಬೇರೆ . ಮಗಳನ್ನು ದುಬೈ ಯಲ್ಲಿ ಇರುವ ಹುಡುಗನಿಗೆ ಮದುವೆ ಮಾಡಿಸಿದ್ದರಂತೆ. ಶಾಲಿನಿ ನಿನ್ನೆ ರಾತ್ರಿ ಹೇಳ್ತ ಇದ್ಲು, ಅವ್ನೆ ಎಲ್ಲ ಖರ್ಚು ಹಾಕಿಕೊಂಡು ಮಾಡಿ ಆತ ಅಂಬ್ರ. ” ಗಂಡನ ಪಕ್ಕಕ್ಕೆ ಬಂದು ಕುಳಿತ ಸಾವಿತ್ರಿ ಮದ್ಯಸ್ತಿಕೆಯ ಮಾತು ಉಸುರಿದಳು.
“ಒಹ್ ಹೋ. ನೀನು ಅವಳ ಜೊತೆ ಸೋರಿಕೊಂಡಿದ್ಯಾ. ಸರಿ ಹೋಯ್ತು. ನಿಮಗೆಲ್ಲ ಏನೋ ಮಂಕುಬೂದಿ ಬಿದ್ದಿದ್ದೆ. ಮತ್ತಿನೇನಾದರೂ ಹೇಳೋಕೆ ಇದೆಯಾ ” ನರಸಿಂಹ ಉಗ್ರನಾದ.
” ಮತ್ತೆ ಜಾನ್ ಶಾಲಿನಿ ಹತ್ರ ಹೇಳ್ತಿದ್ದಂತೆ ನಮ್ಮ ಶಶಿಗೆ ಬೆಂಗಳೂರಿನಲ್ಲಿ ಒಂದು ಹೋಟಲ ಮಾಡಿ ಕೊಡ್ತಾನಂತೆ, ಮದಿ ಆದ್ಮೇಲೆ ಈ ಮನಿ ಜಾಗದಲ್ಲಿ ಹೊಸ ಮನೆ ಕಡ್ಸತಾನಂತೆ, ಆಮೇಲೆ ಕುಂದಾಪುರದಲ್ಲಿ ಅವ್ರದ್ ಬಿಲ್ಡಿಂಗ್ ಆದ್ಮೇಲೆ ಅದ್ರಲ್ಲಿ ನಿಮಗೊಂದು ಹೋಟೆಲ್ ಹಾಕಿ ಕೊಡ್ತಾ ಅಂಬ್ರ. ಜಾನ್ ನ ಅಪ್ಪ ಅಮ್ಮಂಗೆ ನಮ್ಮ ಶಾಲಿನಿ ತುಂಬಾ ಇಷ್ಟ ಆಗಿದ್ದಾಳೆ ಅಂತೇ. ಅವರ ಮನೆಯಲ್ಲಿ ಏನು ತಕರಾರು ಇಲ್ಲ ಅಂತೇ. ಮಳೆಗಾಲ ಮುಗಿದ ಮೇಲೆ ಮದುವೆ ಮಾಡ್ಸಿ ಕೊಡ್ಬೇಕಂತೆ. ಈಸ್ಟ್ ಟೈಮ್ ನಾವೆಲ್ಲಾ ಒದ್ದಾಡಿದ್ದು ಸಾಕು. ದೇವರು ಜಾನ್ ನನ್ನು ನಮ್ಮ ಕಷ್ಟ ಓಡಿಸೋಕ್ಕೆ ಅಂತ ಕಳುಹಿಸಿರಬೇಕು. ಮದುವೆಗೆ ಒಪ್ಪಿ. ಈಗ ಜಾತಿ ಧರ್ಮ ಯಾರು ನೋಡ್ತಾರೆ. ಊರಿನವರು ನಾಲ್ಕು ದಿನ ಆಡಿಕೊಳ್ತಾರೆ, ಆಮೇಲೆ ಎಲ್ಲ ಸರಿ ಹೋಗುತ್ತೆ. ಸುಮ್ನೆ ಹಠ ಮಾಡ್ಬೇಡಿ ” ಸಾವಿತ್ರಿ ಆಗಲೇ ಜಾನ್ ನನ್ನು ಒಪ್ಪಿಕೊಂಡಿದ್ದನ್ನು ಪರೋಕ್ಷವಾಗಿ ಈ ಮಾತುಗಳಲ್ಲಿ ಪ್ರತಿಫಲಿಸಿದಳು.

ಮಳೆ ನಿಂತಿತ್ತು. ಕಾಲಾವಧಿಗಿಂತ ಹದಿನೈದು ದಿನ ಮೊದೆಲೇ ಅಬ್ಬರಿಸಿದ ಮುಂಗಾರು ಆಷಾಡ ತಿಂಗಳಲ್ಲಿ ರಜೆ ಹಾಕಿತ್ತು. ಪಂಪ್ ಸೆಟ್ ಮೂಲಕ ನಾಟಿಮಾಡಿದ ಎತ್ತರದ ಗದ್ದೆಗಳಿಗೆ ನೀರುಬಿಡುವ ಪರಿಸ್ಥಿತಿ ಊರಲ್ಲೆಲ್ಲ. ರಾಜೇವ ಶೆಟ್ರ ಹೋಟೆಲಿನಲ್ಲಿ ಮತ್ತೆ ಎಂದಿನಂತೆ ಗಿರಾಕಿಗಳ ಕಲರವ ಜೊತೆಗೆ ಮೋಡ ಬಿತ್ತನೆಯ ಗಂಭೀರ ಚರ್ಚೆ ಖಾಯಂ ಆಗಿತ್ತು. ಶಾರ್ಟ್ ಬ್ರೇಕ್ ನ ನಡುವಿನ ಜಾಹೀರಾತಿನಂತೇ ನರಸಿಂಹ ಮಸಾಲಾ ದೋಸೆಯ ನರ್ತನ ನಿರಂತರವಾಗಿತ್ತು.
“ಅಪ್ಪಯ್ಯ ಹಿಂಗ್ಯಾಕೆ ಆಡ್ತೀರಾ. ಈಗ ಆಗಬಾರದ್ದು ಏನಾಗಿದೆ ” ಬೆಳಿಗ್ಗೆ ಬೆಂಗಳೂರಿನಿಂದ ಬಂದಿದ್ದ ಮಗ ಶಶಿಧರ ಹೋಟೆಲಿಗೆ ರಜೆ ಹಾಕಿ ತೆಂಗಿನ ಮರದ ಬುಡ ಮಾಡುತ್ತಿದ್ದ ನರಸಿಂಹನಲ್ಲಿ ಮಾತಿಗಿಳಿದ.
“ಜಾನ್ ಜಾತಿ ಧರ್ಮ ಬೇರೆಯಾಗಿರಬಹುದು, ಆದರೆ ಒಳ್ಳೆ ಮನುಷ್ಯ . ನನ್ ಫ್ರೆಂಡ್ ನಾಗರಾಜನ ಮನೆಹತ್ತಿರದವ, ಅವರೆಲ್ಲ ಅವನ ಬಗ್ಗೆ ಒಳ್ಳೆ ಮಾತು ಆಡಿದ್ದಾರೆ. ಶ್ರೀಮಂತ ಬೇರೆ. ನಾವು ಎಷ್ಟೇ ಅಂತ ಹುಡುಕಿದರೂ ಇಷ್ಟು ಒಳ್ಳೆ ಹುಡುಗ ಶಾಲಿನಿಗೆ ಸಿಗೋಲ್ಲ. ನಾನು ಯೋಚನೆ ಮಾಡ್ದೆ, ಎಷ್ಟು ದಿನ ಅಂತ ಕಷ್ಟ ಪಡೋದು. ನನ್ನ ಬೇಕರಿಯಲ್ಲಿ ಎಷ್ಟೇ ಒದ್ದಾಡಿದರು ತಿಂಗಳಿಗೆ ಹದಿನೈದು ಸಾವಿರಗಿಂತ ಜಾಸ್ತಿ ಉಳಿಸೋಕೆ ಆಗೋಲ್ಲ. ನಾನಗೂ ಸಾಕಾಗಿ ಹೋಗಿದೆ. ಕಳೆದ ತಿಂಗ್ಳು ಜಾನ್ ಬೆಂಗಳೂರಿಗೇರ್ ಬಂದವ ಕತ್ರಿಗುಪ್ಪೆಯಲ್ಲಿ ನನಗಾಗಿ ಒಂದು ನಾನ್ ವೆಜ್ ಹೋಟೆಲ್ ನೋಡಿ ಟೋಕನ್ ಅಡ್ವಾನ್ಸ್ ಕೊಟ್ಟು ಹೋಗಿದ್ದ. ನಾವು ಕೂಡ ಎಲ್ಲರ ಹಾಗೆ ದುಡ್ಡು ಕಾಸು ಅಂತ ಸ್ವಲ್ಪ ನೋಡುವ. ದೇವರು ದಾರಿ ತೋರಿಸಿದ್ದಾನೆ, ಇಲ್ಲ ಅನ್ನಬೇಡಿ. ನೀವು ಇಲ್ಲ ಅಂದರೂ ಶಾಲಿನಿ ಅವನನ್ನು ಬಿಡುವುದಿಲ್ಲ. ನಾನು ಮತ್ತು ಅಮ್ಮ ಶಾಲಿನಿ ಜೊತೆಗೆ ಇರುತ್ತೇವೆ. ” ಶಶಿಧರ ಬೆಂಗಳೂರಿನಿಂದ ಬಾಯಿಪಾಠ ಮಾಡಿಕೊಂಡು ಬಂದಿದ್ದ ಬಾಷಣವನ್ನು ಅಪ್ಪನ ಮುಂದೆ ಒದರಿದ.
ನರಸಿಂಹನಿಗೆ ನಿಜಕ್ಕೂ ಶಾಕ್ ಆಗಿತ್ತು. ಎಲ್ಲರೂ ನಿರ್ಧರಿಸಿ ಆಗಿದೆ. ತನಗೇನು ಉಳಿದಿಲ್ಲ. ಇನ್ನು ಬೇಕಾಗಿರುವುದು, ನನ್ನ ಔಪಚಾರಿಕ ಒಪ್ಪಿಗೆ ಅಷ್ಟೇ. ನಾಳೆ ಹುಡುಗಿ ಅಪ್ಪ ಮದುವೆಗೆ ಒಪ್ಪಿಲ್ಲ ಅನ್ನುವ ಅಪವಾದ ಬರಬಾರದಲ್ಲ, ಅದಕ್ಕೆ ಇವರೆಲ್ಲ ನನಗೆ ದುಂಬಾಲು ಬಿದ್ದಿದ್ದಾರೆ ಹೊರತು ಅಪ್ಪನ ಮೇಲಿನ ಕಾಳಜಿಯಿಂದ ಅಲ್ಲ. ಮನುಷ್ಯನ ಜೀವನ ಅಂದ್ರೆ ಇಷ್ಟೇನಾ.

‘ಇಷ್ಟು ವರ್ಷ ನಾನು ರಾತ್ರಿ ಹಗಲು ಅನ್ನದೆ ದುಡಿದದ್ದು ಯಾರಿಗಾಗಿ, ಇವರನ್ನು ಬೆಳೆಸಿ, ಓದಿಸಿ, ಬದುಕಿಗೊಂದು ದಾರಿ ಮಾಡಿ ಕೊಟ್ಟ ನಾನೀಗ ಇವರಿಗೆ ಲೆಕ್ಕಕ್ಕೆ ಇಲ್ಲ . ಆತನ ಸಂಪತ್ತು, ದುಡ್ಡಿನ ಮುಂದೆ ಈ ಅಪ್ಪ ಚಲಾವಣೆ ಇಲ್ಲದ ನೋಟಾಗಿಬಿಟ್ಟನಲ್ಲ!.
ತೆಂಗಿನ ಮರಕ್ಕೆ ಒರಗಿ ನಿಂತ ನರಸಿಂಹ ಆಕಾಶವನ್ನೇ ದಿಟ್ಟಿಸುತ್ತಿದ್ದ. ಬೇಸಿಗೆಯ ಬಿಸಿಲನ್ನು ನಾಚುವಂತೆ ಆಷಾಡದ ಬಿಸಿಲಿತ್ತು, ಆಷಾಡ ಒಡ್ರ್ ಅನ್ನೋ ಮಾತಿಗೆ ಅರ್ಥವೇ ಇಲ್ಲದಂತಾಗಿದೆ. ಆಗಸದಲ್ಲಿ ಮೋಡಗಳ ದೀರ್ಘಾವಧಿ ರಜೆ. ದೈವಗಳು ಆಷಾಢದಲ್ಲಿ ಊರು ಬಿಟ್ಟಂತೆ ಮೋಡಗಳು ಊರು ಬಿಟ್ಟಿವೆ. ಯಾರಿಗೆ ಬೇಡ ಸಂಪತ್ತು , ಐಷಾರಾಮಿ ಜೀವನ. ಹಾಗಂತ ನಮ್ಮ ನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ಸಾಧ್ಯವೇ ? ಎದುರಿಗೆ ಜನ ಏನು ಅನ್ನದ್ದಿದ್ದರು ಬೆನ್ನಹಿಂದೆ ಮಾತಿನಿಂದ ತಿವಿಯದೇ ಬಿಟ್ಟಾರಾ ?. ಮೇಲ್ಮನೆ ಪ್ರಶಾಂತ ಬೇರೆ ಜಾತಿ ಹುಡುಗಿಯನ್ನು ಮದುವೆಯಾದಾಗ ನಾನೇ ಎಲ್ಲರ ಹತ್ತಿರ ಆಡಿಕೊಳ್ಳಲಿಲ್ಲವೇ ? ಜನ ಆಡಿಕೊಳ್ಳುವ ವಿಷಯ ಬದಿಗಿರಲಿ, ನನ್ನ ಸ್ವಂತಿಕೆಗೆ ಇದು ದೊಡ್ಡ ಹೊಡೆತ , ಆದರೆ ಮದುವೆ ಬೇಡ ಅಂದು ಮಗಳ ಮತ್ತು ಮನೆಯವರ ಕನಸು ಮತ್ತು ಬದುಕಿಗೆ ವಿಲನ್ ಆಗಬೇಕಾ ?
“ಇಲ್ಲ ಶಶಿ , ನಂಗೆ ಯಾಕೋ ಈ ಮದುವೆಗೆ ಮನಸ್ಸು ಒಪ್ಪುತ್ತಿಲ್ಲ, ನಾನು ನಿಮ್ಮಷ್ಟು ದೊಡ್ಡ ಮನಸಿನವನಲ್ಲ , ನನ್ನ ಮನ್ಸಿನ್ ಪುಟ್ಟ ಲೋಕದ ಬೇಲಿ ದಾಟಿ ಮನಸ್ಸು ಹೊರಗೆ ಬರ್ತಾ ಇಲ್ಲ. ಕಷ್ಟ ಆಗ್ತಾ ಇದೆ ಕಾಣೋ. ” ನರಸಿಂಹನ ಧ್ವನಿ ಕುಗ್ಗಿ ಹೋಗಿತ್ತು.
“ನಿನ್ನ ಕಷ್ಟ ಅರ್ಥ ಆಗುತ್ತೆ ಅಪ್ಪಯ್ಯ .ಆದರೆ ನಮ್ಮ ಭವಿಷ್ಯ ನೋಡು. ಒಂದು ಕಡೆ ಶಾಲಿನಿ ನಮಗಾಗಿ ಒಳ್ಳೆ ಕೆಲಸ ಮಾಡಿದ್ದಾಳೆ ಅಂತ ಅನ್ನಿಸುತ್ತಿಲ್ಲವೇ ? ಮನಸ್ಸು ಗಟ್ಟಿ ಮಾಡಿ ಒಪ್ಪಿಕೊಳ್ಳಿ. ಯಾಕೆ ಸುಮ್ನೆ ರಗಳೆ ಮಾಡ್ತೀರಾ ? ಆಮೇಲೆ ಎಲ್ಲ ಸರಿ ಹೋಗುತ್ತೆ ” ಶಶಿಧರನ ಮಾತಿನಲ್ಲಿ ವಿನಂತಿ ಮತ್ತು ಆದೇಶ ಎರಡು ತುಂಬಿತ್ತು.
.ನರಸಿಂಹನಿಗೆ ಬೇರೆ ದಾರಿನೇ ಇರಲಿಲ್ಲ , ” ಸರಿ ಏನು ಬೇಕಾದರೂ ಮಾಡಿಕೊಳ್ಳಿ , ಯಾವುದಕ್ಕೂ ನನ್ನನ್ನು ಕರಿಬೇಡಿ, ನನಗೆ ಮನಸ್ಸಾದರೆ ನಾನೇ ಮುಂದಾಗಿ ಬರುತ್ತೇನೆ ಲೆಕ್ಕಕ್ಕುಂಟು ಆಟಕ್ಕಿಲ್ಲದ ತರ ಇರ್ತೇನೆ ” ಮಾತುಮುಗಿಸಿದ ನರಸಿಂಹ ಆಗಸದಲ್ಲಿ ಮೋಡ ಹುಡುಕತೊಡಗಿದ.
“ಸರಿ ಅಪ್ಪ , ಜಾನ್ ಮತ್ತು ಅವನ ಅಪ್ಪ ಬರೋದಕ್ಕೆ ಹೇಳಿದ್ದಾರೆ. ಮದುವೆಗೆ ಹಾಲ್ ಬುಕ್ ಮಾಡಬೇಕಿದೆ, ಸೆಪ್ಟೆಂಬರ್ ಕೊನೆ ವಾರ ಇಟ್ಟ್ಕೊಳ್ಳೋಣ ಅಂತಿದ್ದಾರೆ, ಬರ್ತೀನಿ, ಬೇರೆ ವಿಷ್ಯ ಆಮೇಲೆ ಮಾತಾಡೋಣ ” ಅಂದ ಶಶಿ ಅಪ್ಪನ ಪ್ರತಿಕ್ರಿಯೆಗೂ ಕಾಯದೆ ಅಲ್ಲಿಂದ ತೆರಳಿದ.

“ಶಾಲು ಅಪ್ಪನ ಮದುವೆಗೆ ಒಪ್ಸಿದ್ದೀನಿ ಕಣೆ” ಅಂತ ಶಶಿ ತಂಗಿಗೆ ಫೋನ್ ನಲ್ಲಿ ಬೈಕ್ ಹತ್ತಾ
ಹೇಳಿದ್ದನು ಕೇಳಿಸಿಕೊಂಡ ನರಸಿಂಹ ಮನಸ್ಸಲ್ಲೆ ನಕ್ಕ. ಅಪರೂಪಕ್ಕೆ ಆಗಸದಲ್ಲಿ ದೂರದಲ್ಲಿ ಆಗಷ್ಟೇ ಕಾಣಿಸಿಕೊಂಡ ಮೋಡ ಈತನನ್ನು ನೋಡಿ ನಕ್ಕಿತ್ತು

ಆಷಾಢದಲ್ಲಿ ಕೈಕೊಟ್ಟ ಮುಂಗಾರು ಸೋಣೆ ತಿಂಗಳಲ್ಲಿ ಮತ್ತೆ ಅಬ್ಬರಿಸಿತು . ಕನ್ಯಾ ಮಾಸದ ಆರಂಭದಲ್ಲಿ ಎಲ್ಲೆಡೆ ಹಬ್ಬಗಳ ಹೆಬ್ಬಾಗಿಲಿಗೆ ತೋರಣದ ಸಿದ್ಧತೆ ನೆಡೆದಿದ್ದತು. ಉತ್ತಮ ಮಳೆಯಿಂದ ಎಲ್ಲೆಡೆ ಸಂತೃಪ್ತಿಯ ಹರುಷವಿತ್ತು. ಆಗಷ್ಟೇ ಚಿಗುರೊಡೆದ ಬತ್ತದ ತೆನೆಗಳ ಮೆರೆವಣಿಗೆ ಹಕ್ಕಿಗಳ ಕಲರವದ ಜುಗಲ್ಬಂದಿ ಕರ್ಣಾನಂದ ನೀಡುತ್ತಿತ್ತು. ಬೆಳಗಿನ ಜಾವ ಮೂರು ಗಂಟೆ. ಮದುವೆಗೆ ಸಿಂಗಾರಗೊಂಡಿದ್ದ ಮನೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು . ಬೆಳಗಾದರೆ ಮನೆಯಲ್ಲಿ ಮದುವೆಯ ಸಂಭ್ರಮ. ಮಗಳಿಗೆ ಇಷ್ಟಪಟ್ಟವನನ್ನು ಕಟ್ಟಿಕೊಳ್ಳುವ ತವಕವಾದರೆ, ಹೆಂಡತಿ ಮತ್ತು ಮಗನಿಗೆ ಜಾನ್ ರೂಪದಲ್ಲಿ ಬರುವ ಸಿರಿವಂತಿಕೆಯನ್ನು ಸ್ವಾಗತಿಸುವ ಸಂಭ್ರಮ. ನಿನ್ನೆ ರಾತ್ರಿ ಮೆಹಂದಿ ಹೆಸರಲ್ಲಿ ಕುಡಿದು ,ಕುಣಿದವರೆಲ್ಲ ಇಹದ ಪರಿವಿಲ್ಲದೆ ದಣಿದು ಮಲಗಿದ್ದಾರೆ . ಮನೆಯ ತುಂಬೆಲ್ಲ ಸಂಭ್ರಮದ ಮೌನ. ಆದರೆ ನರಸಿಂಹನಿಗೆ ರಾತ್ರಿಯೆಲ್ಲ ನಿದ್ದೆ ಬರಲೇ ಇಲ್ಲ . ಬೆಳಗಾದರೆ ಬರುವ ನಾಳೆಯನ್ನು ಎದುರಿಸುವ ಧೈರ್ಯ ಆತನಿಗಿರಲಿಲ್ಲ. ಒಳಗೆ ಜನ ಜಾಸ್ತಿ ಅಂದ ಆತ ಹೊರಗೆ ಜಗಲಿ ಮೇಲೆ ಮಲಗಿದ್ದ. ಬೆಳಗಿನ ಜಾವದ ನಿರೀಕ್ಷೆಯಲ್ಲಿದ್ದ ಆತನಿಗೆ ನಿದ್ದೆ ಹತ್ತಲಿಲ್ಲ. ತಲೆದಿಂಬಿನ ಜಾಗದಲ್ಲಿದ್ದ ಬಟ್ಟೆತುಂಬಿದ ಬ್ಯಾಗು ರಾತ್ರಿಯಿಡಿ ನರಸಿಂಹನನ್ನು ಚುಚ್ಚುತ್ತಿತ್ತು. ಮದುವೆಯ ಗುಂಗಿನಲ್ಲಿದ್ದ ಮನೆಯವರಿಗೆ ನರಸಿಂಹ ಬಟ್ಟೆಯನ್ನು ಬ್ಯಾಗಿಗೆ ತುಂಬಿಕೊಂಡಿದ್ದನು ಯಾರು ಗಮನಿಸಿರಲಿಲ್ಲ. ಮನೆಯನ್ನೆಲ್ಲಾ ತನ್ನ ಬಣ್ಣ ಬಣ್ಣದ ಕೈಗಳಿಂದ ತಬ್ಬಿಕೊಂಡಿದ್ದ ವಿದ್ಯುತ್ ದೀಪಗಳು ಇದನ್ನೆಲ್ಲಾ ನೋಡಿಯೂ ನೋಡದನ್ನೇ ತನ್ನ ಬಣ್ಣದ ರಂಗು ಚೆಲ್ಲುವ ಕಾಯಕದಲ್ಲಿ ಮಗ್ನವಾಗಿದ್ದವು.
“ಸ್ವಾಮಿ ತಲೆ ಸ್ವಲ್ಪ ಆಕಡೆ ಹಾಕಿಕೊಳ್ಳಿ ” ಪಕ್ಕದ ಸೀಟಿನಲ್ಲಿ ಕುಳಿತ್ತಿದ ವ್ಯಕ್ತಿ ಹೇಳಿದಾದ ನರಸಿಂಹ ಎಚ್ಚರಗೊಂಡ. ಕಣ್ಣುಜ್ಜಿ ಕೊಂಡ ಬಸ್ಸಿನ ಕಿಟಕಿಯಾಚೆ ನೋಡಿದ. ಬಸ್ಸು ಆಗಲೇ ಹೊನ್ನಾವರ ದಾಟಿಯಾಗಿತ್ತು. ಬೆಳಗಿನ ಜಾವ ಕುಂದಾಪುರದಿಂದ ಬಸ್ಸು ಹತ್ತಿದ ನರಸಿಂಹನಿಗೆ ಗಡದ್ದು ನಿದ್ದೆ ಬಂದಿತ್ತು. ಇನ್ನೇನ್ನು ಮೂರೂ ನಾಲ್ಕು ಗಂಟೆಯೊಳಗೆ ಬಸ್ಸು ಹುಬ್ಬಳ್ಳಿ ತಲುಪುತ್ತೆ. ಬದುಕಿನ ಹೊಸ ನಿಲ್ದಾಣ ಹುಬ್ಬಳ್ಳಿ ಶಹರದ ಮೂಲೆಯಲ್ಲಿ ಎಲ್ಲೊ ತನಗಾಗಿ ಕಾಯುತ್ತಿರುವಂತೆ ನರಸಿಂಹನಿಗೆ ಬಾಸವಾಗುತ್ತಿತ್ತು.
“ಇಷ್ಟು ಹೊತ್ತಿಗೆ ಮನೆಯವರೆಲ್ಲ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗುತ್ತಿರಬಹುದು ಅಥವಾ ಕಾಣಿಸದ ನನ್ನ ಹುಡುಕುತ್ತಿರಬಹುದಾ. ? ” ನರಸಿಂಹನ ಮನದ ಮೂಲೆಯಲ್ಲಿ ಪ್ರಶ್ನೆಯೊಂದು ಹಾಗೆ ಹುಟ್ಟಿ ಮರೆಯಾಯಿತು. “ನಿರ್ಗಮನದ ಹೆಜ್ಜೆ ಇಟ್ಟಿರುವವನಿಗೆ ಏನಾದರೇನಂತೆ ” ನೀರು ಕುಡಿದು ಸೀಟಿಗೆ ತಲೆಯೊರಗಿದ ನರಸಿಂಹನಿಗೆ ಮತ್ತೆ ನಿದ್ದೆ ಹತ್ತಿತು ಮತ್ತು ಬಸ್ಸು ಅಂಕೋಲದಲ್ಲಿ ತಿರುವು ತಗೆದುಕೊಂಡ ಹುಬ್ಬಳ್ಳಿಯತ್ತ ಮುನ್ನುಗ್ಗಿತ್ತು.

ಸತೀಶ್ ಶೆಟ್ಟಿ ವಕ್ವಾಡಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
1.5 2 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Ravi palegar
Ravi palegar
5 years ago

Dear Satish sir,

I was really impressed by your writing. The way of narration about nature along with our life style is too good. A commen man’s life going with seasons of inner & outerworld is very nice. The imagination & creativity is too good. You revealed a ups & downs of life in a short story. Life has to go on. Thanks for giving an experience of putting my leg in other man’s shoe.

Good job
Ravi Palegar.

Veena
Veena
5 years ago

Parisara premi……,,nice story

2
0
Would love your thoughts, please comment.x
()
x