ಕಥಾಲೋಕ

ಬಡತನ: ಅಣ್ಣಪ್ಪ ಆಚಾರ್ಯ

ಸುತ್ತಲೊಮ್ಮೆ ನೋಡಿದರೆ ಗವ್ವೆನ್ನುವ, ಬೆಳಕನ್ನೇ ನುಂಗಿ ನೀರ್ ಕುಡಿಯುವ, ನಿಂತಲ್ಲೇ ಉಚ್ಚೆ ಹುಯ್ಯಿಕೊಳ್ಳುವ ಕತ್ತಲು; ಕಗ್ಗತ್ತಲು. ಅಮಾವಾಸ್ಯೆಯಾದ್ದರಿಂದ ನರಮನುಷ್ಯರು ಓಡಾಡಿದ ವಾಸನೆಯೂ ಬರುತ್ತಿಲ್ಲ. ಒಂದೆರಡು ನಾಯಿ-ಪಕ್ಕಿಗಳ ಕೂಗು, ನರಿಗಳ ಊಳಿಡುವಿಕೆ ಬಿಟ್ಟರೆ ಉಳಿದಂತೆ ಇಡೀ ಊರಿಗೆ ಊರೇ ಮೌನವಾಗಿದೆ. ಜಗವೆಲ್ಲ ಬೇಕಾಗಿದ್ದು, ಬೇಡವಾಗಿದ್ದನ್ನೆಲ್ಲ ತಿಂದು, ಬಕ್ಕ ಬೋರಲಾಗಿ ಮಲಗಿದೆ. ಆದರೆ ಈ ಗುಡಿಸಲಿನಲ್ಲಿ..?!

ಆಗಲೋ, ಈಗಲೋ ಆರಿಹೋಗುವಂತಹ ಚಿಮಣಿ ಬುಡ್ಡಿಯನ್ನು ಎದುರಿಗಿಟ್ಟುಕೊಂಡು ಬಾಗಿಲ ಬಳಿ ಅವ್ವ ಕುಳಿತಿದ್ದಾಳೆ. ಮಕ್ಕಳೆಲ್ಲವೂ ‘ಪಿಳಿ-ಪಿಳಿ’ ಕಣ್ಣ್ ಬಿಡುತ್ತಾ, ತೆಂಗಿನ ಗರಿಯ ಮಾಡನ್ನೇ(ಛಾವಣಿ) ನೋಡುತ್ತ, ಸ್ವಲ್ಪ ಹೊತ್ತಿಗೆ ಕತ್ತು ಸರಿಸಿ ಬಾಗಿಲ ಕಡೆ ಇಣುಕಿ, “ಅಪ್ಪ ಬಂದನೇನೋ..?!” ಎಂದು ನೋಡುತ್ತ, ನಿರಾಶರಾಗಿ ಮತ್ತೆ ಮಲಗುತ್ತಿವೆ.

“ಕಾಗೆ ಕರ್ರ್ಗುಡುವ ಮೊದಲೇ ಗುಡಿಸಲು ಬಿಟ್ಟು ಹೋದ ‘ಅಪ್ಪನೆಂಬೋ ಅಪ್ಪ’ ಇನ್ನೂ ಬರಲಿಲ್ಲವಲ್ಲ…” ಎಂಬ ಚಿಂತೆ ಅವಕ್ಕೆ. ನಿಜವಾಗಿ ಅವರೆಲ್ಲ ನಿರೀಕ್ಷಿಸುತ್ತಿರುವುದು ಅಪ್ಪನನ್ನಲ್ಲ. ಬದಲಾಗಿ ಆತ ಹಿಡಿದು ಬರುವ ಚೂರು-ಪಾರು ತಿಂಡಿಯನ್ನು… ಜೊತೆಗೆ ಒಂದರ್ಧ ಕೆಜಿ ಅಕ್ಕಿಯನ್ನು..!

ಹೌದು, ಅಪ್ಪ ಅಕ್ಕಿ ಹಿಡಿದು ಬರುವವರೆಗೆ ಪುರುಸೊತ್ತಿಲ್ಲ. ಬೆಳಿಗ್ಗೆ ಅವ್ವ ಕೊಟ್ಟ ಒಣ ಅವಲಕ್ಕಿ ಮತ್ತು ಸಿಹಿಯಿಲ್ಲದ ‘ಚಾ ಕಣ್ಣು’ ಕುಡಿದು, ಮಧ್ಯಾಹ್ನ ಅದ್ಯಾವುದೋ ಭಟ್ರ ಮನೆಯಲ್ಲಿ ಕೊಟ್ಟ ಸ್ವಲ್ಪ ಹಳಸಿದ ಅನ್ನ, ಮಜ್ಜಿಗೆ ತಂಬುಳಿಯನ್ನು ತಿಂದು, ಈ ಅಪಾರಾತ್ರಿಯವರೆಗೆ ಜೀವ ಹಿಡಿದುಕೊಂಡಿರಬೇಕಲ್ಲ..!

ಬಡತನಕ್ಕೆ ಇವರ ಮೇಲೆ ತುಂಬಾನೇ ಪ್ರೀತಿ..! ಅದಕ್ಕೆ ಇಲ್ಲೇ ಇವರನ್ನೆಲ್ಲ ಅಪ್ಪಿಕೊಂಡು ಕುಳಿತಿದೆ. ಸಾಲದ್ದಕ್ಕೆ ಮಕ್ಕಳ ಸಂಖ್ಯೆಯೂ ಬರೋಬ್ಬರಿ ಎಂಟು..! ಈಗಲೂ ಅವ್ವನ ಮೇಲೆ ಅಪ್ಪ ‘ಸವಾರಿ’ ನಡೆಸುತ್ತಿರುವುದರಿಂದ ಅವಳ ಹೊಟ್ಟೆಯಲ್ಲೊಂದು ‘ಬಡ ಪಿಂಡ’ ಬೆಳೆಯುತ್ತಿದೆ. ಆದರೂ ಮಕ್ಕಳಾಗದಂತೆ ಆಪರೇಷನ್ ಮಾಡಿಸ್ಕೊಳ್ಳಲು ಅವ್ವನಿಗೆ ಧೈರ್ಯವಿಲ್ಲ; ಅಪ್ಪನಿಗೆ ಮನಸ್ಸಿಲ್ಲ..!

ಸಾಲದ್ದಕ್ಕೆ ಮೊದಲ ಐದೂ ಹೆಣ್ಣುಮಕ್ಕಳೇ. ಎಲ್ಲರೂ ದೊಡ್ಡವರಾಗಿದ್ದಾರೆ. ಮೈ-ಕೈ ತುಂಬಿಕೊಳ್ಳದಿದ್ದರೂ ವಯಸ್ಸಂತೂ ತುಂಬಿ ಬಂದಿದೆ.
ಅವ್ವನಿಗೋ… ಯಾವಾಗಿನಿಂದಲೂ ಚಿಂತೆ. ಅದರಲ್ಲೂ ಬೆಳೆದ ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಕೆಂಡವನ್ನು ಸೆರಗಲ್ಲಿ ಕಟ್ಟಿಕೊಳ್ಳುವುದು ಎರಡೂ ಒಂದೇ ಅಲ್ಲವೇ..? ಹುಟ್ಟಿಸಿದ ಅಪ್ಪನಿಗಂತೂ ಅವರ ಮೇಲೆ ಪ್ರೀತಿಯಾಗಲಿ, ಕಾಳಜಿಯಾಗಲಿ ಇಲ್ಲ. ಅವನ ಕಾಳಜಿಯಿರುವುದು ಆ ಹೆಣ್ಮಕ್ಕಳು ದುಡಿದು ಕೂಡಿಡುವ ಪುಡಿಗಾಸಿನ ಮೇಲೆ. ಅವನಿಗೆ ಬೀಡಿ ಸೇಯೋದಕ್ಕೆ, ಎಲೆ-ಅಡಿಕೆ ತಿನ್ನೋದಕ್ಕೆ, ಓಸಿ ಆಡೋದಕ್ಕೆ, ಸಾರಾಯಿ ಕುಡಿಯೋದಕ್ಕೆ ಕಾಸು ಸಿಕ್ಕರೆ ಸಾಕು. ಅದು ಯಾರದ್ದಾದರೇನು..?!

ಹೀಗಾಗಿಯೇ ಅವ್ವನಿಗೆ ಚಿಂತೆ ಹೆಚ್ಚಾಗುತ್ತಿದೆ. ಅಲ್ಲದೇ ಅವಳು ಕೆಲವು ಬಾರಿ ನೋಡಿದ್ದಾಳೆ. ದಿನಸಿ ಅಂಗಡಿಯವ ಸಾಮಾನು ಕೊಡುವಾಗ ಬೇಕಂತಲೇ ಮೈತಾಗಿಸಿದ್ದು… ಬೀದಿಯ ಹುಡುಗರು “ಚೆಂಡಾಡೋಣ್ವಾ..?” ಅಂತ ಹಲ್ಲ್ ಕಿಸಿದಿದ್ದು… ಬಸ್ ಕಂಡಕ್ಟರ ಟಿಕೇಟ್ ಕೊಡುವಾಗ ಮೈ ಉಜ್ಜಿಕೊಂಡು ಮುಂದೆ ಹೋಗಿದ್ದು… “ಹೆಣ್ಣು ಅಂತಾದ್ರೆ ಹೆಣವನ್ನೂ ಬಿಡದ ಹಲ್ಕಟ್ಟು ಹುಡ್ಗರು ನನ್ನ ಹೆಣ್ಮಕ್ಳನ್ನ ಬಿಟ್ಟಾರ..? ಊಟ-ತಿಂಡಿ, ಬಟ್ಟೆ-ಒಡವೆಗೆ ಎಷ್ಟೇ ಬಡತನವಿದ್ದರೂ, ಶೀಲಕ್ಕೆ, ಮಾನ-ಮರ್ಯಾದೆಗೆ ಎಂದೂ ಬಡತನ ಬಂದಿದ್ದಿಲ್ಲ. ಆದರೆ ಮುಂದೇ…? ಅದಕ್ಕೂ ಬಡತನ ಬರಬಹುದಲ್ಲವೇ..?!” ಹಾಗಂತ ಅವ್ವ ಚಿಂತಿಸುತ್ತಲೇ ಇರುತ್ತಾಳೆ.

ಇಲ್ಲ… ‘ಜಪ್ಪಯ್ಯ’ ಅಂದ್ರೂ ನಿದ್ದೆ ಮಾತ್ರ ಬರುತ್ತಿಲ್ಲ ಮಕ್ಕಳಿಗೆ. ಹೊಟ್ಟೆ ಹಸಿವಿನಿಂದ ತಾಳಹಾಕುತ್ತಿರುವಾಗ ನಿದ್ದೆಯಾದರೂ ಹೇಗೆ ಬಂದೀತು..? ಅವ್ವನಿಗೆ ಮಕ್ಕಳ ಮುಖ ನೋಡುವ ಧೈರ್ಯವಿಲ್ಲ. ಅವರ ಹಸಿವನ್ನು ನೋಡಿ ಅವಳು ಸುಮ್ಮನಿರಲಾರಳು, ಹಾಗೆಯೇ ಏನೂ ಮಾಡಲಾರಳೂ ಕೂಡ..!

ಅಷ್ಟರಲ್ಲಿಯೇ ಆ ಕುರುಡು ದೀಪವೂ ಸಹ ಆರಿಹೋಗಿ, ಕಮಟು ವಾಸನೆ ಹೊಡೆಯುತ್ತಿತ್ತು. ಅವ್ವ ಹಿಂದೆ ಸರಿದು, ಗೋಡೆಗೊರಗಿ ಕುಳಿತಳು. ಮಕ್ಕಳೆಲ್ಲರೂ ಗಟ್ಟಿಯಾಗಿ ಒಬ್ಬರನ್ನೊಬ್ಬರು ಹಿಡಿದುಕೊಂಡರು. ಒಂದೆರಡು ನಿಮಿಷ ಮನೆಯೆಲ್ಲ ನಿಶ್ಯಬ್ದ. ಸ್ವಲ್ಪ ಸಮಯದ ನಂತರ ಯಾರದ್ದೋ ಹೆಜ್ಜೆಯ ಸದ್ದು. ಅಪ್ಪ ಬಂದನೇ..? ಕಾಣಿಸುತ್ತಿಲ್ಲ. ಆದರೆ ಯಾರೋ ಒಂದಿಷ್ಟು ಜನ ಬಂದಿದ್ದಂತೂ ನಿಜ..! ಎಲ್ಲಾ ಬರೀ ಗಂಡು ಆಕೃತಿಗಳೇ… ಇಡೀ ಮನೆ ಘಾಟು ಬೆವರಿನ ವಾಸನೆಯಲ್ಲಿ, ಬೀಡಿ-ಸಿಗರೇಟು, ಪಾನ್-ಗುಟ್ಕಾ, ಸಾರಾಯಿ, ಮತ್ತೆಂತದ್ದೋ ಮತ್ತೇರಿಸುವಂತ ಅತ್ತರಿನ ಪರಿಮಳದಲ್ಲಿ ತುಂಬಿಹೋಯ್ತು.

ಮತ್ತೆ ಸ್ವಲ್ಪ ಹೊತ್ತಿನ ನಂತರ ಹಿರಿಯ ಹೆಣ್ಮಗು ಕಿರಿಚಿದ್ದು, ಎರಡನೇಯವಳು ಅತ್ತಿದ್ದು, ಮೂರನೇಯವಳು ಕೊಸರಾಡಿದ್ದು, ನಾಲ್ಕನೇಯವಳು ಚೀರಿದ್ದು, ಐದನೇಯವಳು “ಅವ್ವಾ.., ಯಾರೋ ನನ್ ಮೈಮ್ಯಾಲೆ ಬಿದ್ಕೊಂಡಿದ್ದಾರೆ…” ಅಂತ ಹೇಳಿದ್ದು ಮಾತ್ರ ಕೇಳಿಸಿತು..! ಅವ್ವನಿಗೆ ಕಾಣಿಸುವುದಾದರೂ ಏನು, ಅದೂ ಈ ರಾತ್ರಿಯಲ್ಲಿ..?
ಆ ಕಿರುಚಾಟ, ಕೊಸರಾಟ, ಚೀರಾಟವೆಲ್ಲ ಸ್ವಲ್ಪ ಹೊತ್ತಿನವರೆಗೂ ಕೇಳಿಸುತ್ತಲೇ ಇತ್ತು. ಆ ನಂತರ ನಾಲ್ಕೈದು ಆಕೃತಿಗಳು ಹೊರ ಹೋಗಿದ್ದು ಕಾಣಿಸಿತು. ಆಗಲೇ ಒಂದು ಕಡ್ಡಿ ಗೀರಿ ಮೇಣದ ಬತ್ತಿಯನ್ನು ಹೊತ್ತಿಸಲಾಯ್ತು. ಅಪ್ಪನೇ ಹೊತ್ತಿಸಿದ್ದು. ಅರೇ, ಅಪ್ಪ ಯಾವಾಗ್ಬಂದ..?!
ಅವ್ವ ನೋಡಿದಳು… ಐದೂ ಜನ ಹೆಣ್ಣುಮಕ್ಕಳ ಕೂದಲೆಲ್ಲ ಕೆದರಿದೆ, ಬಟ್ಟೆಯೆಲ್ಲ ಹರಿದಿದೆ, ಆ ಕಪ್ಪು ಕೆನ್ನೆಯ ಮೇಲೆ, ಎದೆಯ ಸಿಳುವಿನ ಮೇಲೆಲ್ಲ ಗಾಯದ ಗುರುತುಗಳಾಗಿವೆ. ಅವರೆಲ್ಲರ ಕಣ್ಣಿಂದ ನೀರಂತೂ ದಳ-ದಳನೆ ಸುರಿಯುತ್ತಿದೆ. ಹಾಗೆಯೇ ಅಪ್ಪನ ಕೈಯಲ್ಲೊಂದಿಷ್ಟು ನೋಟಿನ ಕಂತೆ, ತಿಂಡಿಯ ಪೊಟ್ಟಣ ಮತ್ತು ಚೀಲದ ತುಂಬ ದಿನಸಿ ಸಾಮಾನಿದೆ. ಅಂದರೇ.., ಹೇಗೆ ಬಂತು ಇವೆಲ್ಲ..? ಛೀ… ಯೋಚಿಸಿ ಮುಖ ಮುಚ್ಚಿಕೊಂಡು ರೋಧಿಸತೊಡಗಿದಳು ಅವ್ವ.

ಎಷ್ಟೋ ಹೊತ್ತಿನ ನಂತರ ಅವಳು ಸಮಾಧಾನ ತಂದುಕೊಂಡು ನೋಡಿದಾಗ ಮಕ್ಕಳೆಲ್ಲರೂ ಕಣ್ಣು-ಮೂಗು ಒರೆಸಿಕೊಳ್ಳುತ್ತ, ಅಪ್ಪ ತಂದಿದ್ದ ತಿಂಡಿಯನ್ನು ‘ಬಕ-ಬಕನೆ’ ತಿನ್ನುತ್ತಿದ್ದರು..! ಅಪ್ಪ ಇನ್ನೂ ಹಣವನ್ನು ಎಣಿಸುತ್ತಲೇ ಇದ್ದ…

ಕೊನೆಗೆ ಅವ್ವನ ಬಾಯಿಂದ ಮಾತೊಂದು ಹೊರಡಿತು, “ಇಷ್ಟು ದಿನ ಊಟ-ತಿಂಡಿಗೆ ಬಡತನವಿತ್ತು. ಆದ್ರೆ ಈಗ ಶೀಲಕ್ಕೆ, ಮಾನ-ಮರ್ಯಾದೆಗೆ ಬಡತನ ಬಂದಿದೆ..!”

-ಅಣ್ಣಪ್ಪ ಆಚಾರ್ಯ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *