ಲೇಖನ

ಬಂಧಗಳು, ಸಂಬಂಧಗಳು. ಸತ್ಯ… ಆದರೆ ಶಾಶ್ವತ ಅಲ್ಲ… : ಭಾರ್ಗವಿ ಜೋಶಿ

ಬದುಕಿನ ದೋಣಿಯ ಪಯಣದಲ್ಲಿ ಹಲವಾರು ರೀತಿಯ ಬಂಧಗಳು, ಸಂಬಂಧಗಳು ಬೆಸೆದಿರುತ್ತವೆ. ಕೆಲವು ಗಟ್ಟಿಯಾಗಿ ಬೇರೂರಿರುತ್ತವೆ ನಮ್ಮ ಮನಸಲ್ಲಿ ಮತ್ತು ಜೀವನದಲ್ಲಿ. ಕೆಲವು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಹುಟ್ಟಿದಾಗ ಜೊತೆಯಲ್ಲಿ ಬಂದ ಸಂಬಂಧಗಳನ್ನು ರಕ್ತ ಸಂಬಂಧಗಳು ಎನ್ನುತ್ತೇವೆ. ಅವು ಎಂದಿಗೂ ಮಾಸದವು. ಬೇಕಾಗಲಿ, ಬೇಡವಾಗಲಿ ಮುಗಿಯದ ಅನುಬಂಧ ಅದು. ಯಾವುದೊ ಕೋಪ, ಬೇಜಾರು ಏನೇ ಬಂದ್ರು ಮತ್ತೆ ಸ್ವಲ್ಪ ಸಮಯಕ್ಕೆ ತಾನಾಗೇ ಎಲ್ಲ ಮರೆತು ಬೆಸೆವಂತೆ ಮಾಡುತ್ತದೆ. ಕೆಲವು ಸಂಬಂಧಗಳು ಎಂದೂ ಬೆಸೆಯದ ಹಾಗೆ ದ್ವೇಷ -ಅಸೂಹೆ ಸುತ್ತಿಕೊಂಡಿರುತ್ತವೆ, ಅಂತಹ ಕೆಲವನ್ನು ಹೊರತು ಪಡಿಸಿ ಉಳಿದೆಲ್ಲ ಸಂಬಂಧಗಳು ತುಂಬಾ ಸುಂದರವಾಗಿ ಇರುತ್ತದೆ.

ಇನ್ನು ರಕ್ತ ಸಂಬಂಧವನ್ನು ಹೊರತುಪಡಿಸಿ ಅಷ್ಟೇ ವಿಶ್ವಾಸ ಉಳ್ಳ ಬಾಂಧವ್ಯ ಅಂದ್ರೆ ಈ ಸ್ನೇಹ ಸಂಬಂಧ. ಬಹುಷಃ ಈ ಸ್ನೇಹದಲ್ಲಿ ಸರಿ -ತಪ್ಪು, ಒಳ್ಳೇದು ಕೆಟ್ಟದ್ದು ಅನ್ನೋದು ಇರೋದೇ ಇಲ್ಲ ಅನಿಸತ್ತೆ.. ಸ್ನೇಹ ಅಂದ್ರೆ ಸ್ನೇಹ.. ಸ್ನೇಹಿತರು ಅಂತ ಒಮ್ಮೆ ಒಪ್ಪಿಕೊಂಡ್ರೆ ಒಳ್ಳೆಯವರೋ ಕೆಟ್ಟವರೋ ಸ್ನೇಹ ನಿಭಾಯಿಸಲೇಬೇಕು. ಅದಕ್ಕೆ ಸ್ನೇಹ ಮಾಡುವ ಮುನ್ನ ಯೋಚಿಸಿ ಸ್ನೇಹ ಮಾಡಬೇಕು.

ಇನ್ನು ಬದುಕಿನ ದಾರಿಯಲ್ಲಿ ಸಾಗುತ್ತ ಎಷ್ಟೋ ಹೊಸ ಬಂಧಗಳು, ಸಂಬಂಧಗಳು ಹುಟ್ಟುತ್ತವೆ, ಗೆಳತಿಯ ಅಕ್ಕಾ, ನಮ್ಮ ಅಕ್ಕಾ ಆಗ್ತಾರೆ, ಅಣ್ಣನ ಗೆಳೆಯಂದಿರು ನಮ್ಮ ಅಣ್ಣಂದಿರು ಆಗ್ತಾರೆ, ಪಕ್ಕದ ಮನೆಯ ಮಾಮಿ, ಆ ಅಂಗಡಿ uncle ಮಾವ ಆಗ್ತಾರೆ, ಹೀಗೆ ಹೊಸ ಹೊಸ ಸಂಬಂಧಗಳು ಹುಟ್ಟುತ್ತಾ ಹೋಗುತ್ತವೆ. ಅವೆಲ್ಲ ಖಂಡಿತ ಸುಳ್ಳು ಅಲ್ಲ. ನಿಜ ನೇ. ಆದರೆ ಸಮಯ ಕಳೆದಂತೆ ನಮ್ಮ ಬದುಕಿನ ಓಟ ಓಡುತ್ತ ಎಲ್ಲರಿಗು ಒಂದೇ ರೀತಿಯ ಪ್ರೀತಿ, ಸಮಯ ಕೊಡಲು ಸಾಧ್ಯವಾಗುವದಿಲ್ಲ, ಹಾಗಂತ ಆ ಬಾಂಧವ್ಯಗಳೆಲ್ಲ ಅಲ್ಲಿಗೆ ಮುಗಿದವು ಅಂತ ಅಲ್ಲ. ಅವು ಎಂದಿಗೂ ಅಳಿಸದ ಛಾಪು ಮೂಡಿಸಿರುತ್ತವೆ ನಮ್ಮ ಬದುಕಲ್ಲಿ.

ಒಂದು ಸಂಬಂಧಗಳನ್ನು ಇನ್ನೊಂದು ಸಂಬಂಧದ ಅನುಬಂಧವನ್ನು ಇನ್ನೊಂದು ಸಂಬಂಧದಿಂದ replace ಮಾಡಲು ಆಗುವದಿಲ್ಲ. ಇನ್ನು ಇತ್ತೀಚಿಗೆ ತುಂಬಾ ಜನಪ್ರಿಯ ಆಗಿರೋದು ಈ ಫೇಸ್ಬುಕ್, ಸೋಶಿಯಲ್ ಮೀಡಿಯಾ, ಸಂಬಂಧಗಳು. ಸೋಶಿಯಲ್ ಮೀಡಿಯಾ ಗಳಲ್ಲಿ ಕೆಲವೊಮ್ಮೆ ಒಂದೇ ರೀತಿ ಯೋಚಿಸುವ ಮನಸ್ಥಿತಿಗಳು ಸಿಗುತ್ತವೆ. ಮನಸ್ತಾಪ ಗಳು ಬಂದರು ಅವುಗಳಿಗೆ ಬೆಲೆ ಇರುವದಿಲ್ಲ. ಕೆಲವು ಒಳ್ಳೆ ಉದ್ದೇಶದ ಸ್ನೇಹ ಸಂಬಂಧಗಳು, ಕೆಲವು ಕೆಟ್ಟ ಉದ್ದೇಶದ ಜನರು ಇರುತ್ತಾರೆ. ಅದನ್ನು ಗುರುತಿಸಲಾಗದೆ ಎಷ್ಟೋ ಜನ ಆ ರೀತಿ ಜಾಲ ಗಳಲ್ಲಿ ಬಲಿ ಆಗಿದ್ದು ಇದೆ. ಸರಿ ತಪ್ಪು ಗುರುತಿಸುವಷ್ಟು ಪ್ರೌಢಿಮೆ ಇದ್ದಾರೆ ಸಾಕು. ಅಪಾಯಗಳಿಂದ ದೂರ ಉಳಿಯಬಹುದು. ಅಪಾಯವಿಲ್ಲದ ಎಷ್ಟೋ ಒಳ್ಳೆ ಮನಸುಗಳು ಸಿಗುತ್ತವೆ.

ಹುಟ್ಟಿದಾಗಿನಿಂದ ಜೊತೆಗೆ ಇಲ್ಲದ ಸಂಬಂಧಗಳು ಈಗ ಬಂದರೆ ಅದು ಸತ್ಯ ವಾಗುತ್ತದೆಯೇ?? ನಮ್ಮ ಹುಟ್ಟಿನಿಂದ ಜೊತೆಯಾದ ಸಂಬಂಧಗಳು ಮಾತ್ರ ನಮ್ಮವೇ? ಹುಟ್ಟಿದಾಗ ಜೀವಿಯ ಜೊತೆ ಏನು ಬಂದಿರುವದಿಲ್ಲ, ಹೋಗುವಾಗಲೂ ಜೊತೆಗೆ ಏನನ್ನು ತೆಗೆದುಕೊಂಡು ಹೋಗುವದಿಲ್ಲ. ಇಲ್ಲಿ ಇರುವಷ್ಟು ದಿನ ಮಾತ್ರ ನಮ್ಮದು. ಹಾಗೆ ಇರುವಷ್ಟುದಿನ ಎಲ್ಲ ಬಂಧಗಳಿಗೂ, ಬಂಧುಗಳಿಗೂ ಸ್ವಲ್ಪ, ಪ್ರೀತಿ ಹಂಚಿ, ಪೋಷಿಸಿ ಇರುವಷ್ಟು ದಿನ ಖುಷಿಯಿಂದ ಬದುಕುವುದು ಮುಖ್ಯ.

ಸೋಶಿಯಲ್ ಮೀಡಿಯಾ ಇತ್ತೀಚಿಗೆ.ಅದೊಂದು ಸ್ನೇಹ, ಸಂಬಂಧಗಳ ಅಲೆಯನ್ನು ಸೃಷ್ಟಿಸುತ್ತಿದೆ. ಅಕ್ಕಾ – ತಂಗಿ, ಅಣ್ಣಾ -ತಮ್ಮ, ತಾಯಿ -ಮಗಳು, ಸ್ನೇಹ, ಇನ್ನು ಅನೇಕ ಸಂಬಂಧಗಳ ಕೊಂಡಿಯನ್ನು ಬೆಸೆಯುತ್ತಿದೆ.. ಆದರೆ ಈ ಎಲ್ಲ ಸಂಬಂಧ ಗಳು ಸತ್ಯವೇ? ನಾವು ಇರುವುದು ಸತ್ಯ, ಉಸಿರಾಡುತ್ತಿರುವುದು ಸತ್ಯ, ಬಂಧಗಳ ಕೊಂಡಿ ಬೆಸೆದಿರುವುದು ಸತ್ಯ. ಆದ್ರೆ ಸಂಬಂಧಗಳು ಮಾತ್ರ ಸುಳ್ಳಾಗಲು ಸಾಧ್ಯವೇ? ಖಂಡಿತ ಈ ಎಲ್ಲ ಸಂಬಂಧಗಳು ಸತ್ಯವೇ, ಆದರೆ ಶಾಶ್ವತ ಅಲ್ಲ ಅನ್ನೋದು ಮಾತ್ರ ವಿಷಾದನೀಯ. ಹಾಗೆ ಸಮಯ ಬದಲಾಗುತ್ತ ಹೊಸ ತಿರುವು, ಹೊಸ ಸ್ನೇಹ, ಸಂಬಂಧಗಳಿಗೆ ನಾವು ಒಗ್ಗಿಕೊಂಡು ಹೋಗಬೇಕಾಗುತ್ತದೆ ಅಷ್ಟೇ.

ಮಮತೆ ತೋರಿದ ಸಂಬಂಧಗಳು ಅನ್ ಫ್ರೆಂಡ್ ಮಾಡೋದರಿಂದ ಮುಗಿದು ಬಿಡುತ್ತವೆ ಅನ್ನೋದಾದ್ರೆ ಯಾವ ಸಂಬಂಧಗಳಿಗೂ ಅರ್ಥವೇ ಇರುವದಿಲ್ಲ.

ಲೈಕ್ಸ್ -ಕಾಮೆಂಟ್ ಹೊರತಾಗಿಯೂ ಒಂದು ಭಾವನೆ ಬೆಸೆದಿರುತ್ತದೆ, ಆ ಭಾವನೆ ಸತ್ಯ.. ಆದ್ರೆ ಶಾಶ್ವತ ಅಲ್ಲ..

ಬೆಸೆದ ಬಂಧಗಳು ಸಂಬಂಧಗಳು
ಕೊನೆಯಾಗದಿರಲಿ ಕೆಟ್ಟಸಮಯಕೆ
ನಾನು ನೀನು ಎಷ್ಟು ಸತ್ಯವೋ
ನಮ್ಮ ಬಂಧವು ಅಷ್ಟೇ ಸತ್ಯ.
ಆದರೆ ಶಾಶ್ವತ ಅಲ್ಲ ಅನ್ನೋದು
ಅಷ್ಟೇ ಸತ್ಯ..

ಭಾರ್ಗವಿ ಜೋಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *