ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ ಸಂಬಂಧ ಉಂಟಾಗೋ ನಷ್ಟಗಳನ್ನ ಬಂದ್ಗಳಿಗೆ ಕರೆ ಕೊಟ್ಟೋರೆ ತುಂಬಿಕೊಡಬೇಕು ಅಂತ ಸರ್ವೋಚ್ಚ ನ್ಯಾಯಾಲಯವೇ ತೀರ್ಪಿತ್ತರೂ ಬಂದ್ಗಳಿಂದ ಜನಸಾಮಾನ್ಯ ಪಡೋ ಪರಿಪಾಟಲು ತಪ್ಪಿಲ್ಲ. ವಾರದ ಮಧ್ಯದಲ್ಲಿ ಆಗೋ ಬಂದ್ಗಳಲ್ಲಿ ಬೆಳಗ್ಗೆ ಆರಕ್ಕೇ ಆಫೀಸಿಗೆ ಬಂದು ಸಂಜೆ ಆರರವರೆಗೆ ಆಫೀಸಲ್ಲೇ ಕೊಳೆಯಬೇಕಾದ ಪರಿಸ್ಥಿತಿಯಲ್ಲಿರುವ ಐ.ಟಿಗರು, ಯಾವುದೋ ಕೆಲಸದ ನಿಮಿತ್ತ ಪರವೂರಿಗೆ ತೆರಳಬೇಕಾಗಿ ಬಂದು ಅತ್ತಲೂ ತಲುಪದೇ, ವಾಪಾಸ್ ಮರಳಲೂ ಆಗದೇ ಬಸ್ಟಾಂಡಲ್ಲೇ ಕೊಳೆಯುತ್ತಾ, ಇಲ್ಲದ ಬಸ್ಸುಗಳಿಗಾಗಿ ಶಪಿಸೋ ಸಾಮಾನ್ಯ ವ್ಯವಹಾರಸ್ಥರು, ರಜೆ ಮೇರೆಗೆ ಊರಿಗೆ ತೆರಳೋಕೆ ಪ್ರಯತ್ನಿಸಿ ಅರ್ಧದಾರಿಯವರೆಗೆ ತಲುಪಿ ಮುಂದಿನ ಬಸ್ಸ್ ಸಿಗದೇ ಒದ್ದಾಡೋ ವಿದ್ಯಾರ್ಥಿಗಳು ಮತ್ತಿತ್ತರರು.ಅನಿವಾರ್ಯ ಪ್ರಯಾಣದ ನಿಮಿತ್ತ ಹಿಂದಿನ ದಿನವೇ ಪೆಟ್ರೋಲ್ ಹಾಕಿಸಿಕೊಂಡಿದ್ದರೂ ಮಧ್ಯದಾರಿಯಲ್ಲೇ ಅದು ಖಾಲಿಯಾಗಿ ಎಲ್ಲೂ ಸಿಗದ ಪೆಟ್ರೋಲ್. ಡೀಸೆಲ್ಗಳಿಗಾಗಿ ಸಿಕ್ಕಿಹಾಕಿಕೊಂಡಲ್ಲೇ ಒಂದು ದಿನ ದೂಡಬೇಕಾದ ಪರಿಸ್ಥಿತಿಯವರು..ಸಿಕ್ಕಿದ್ದೇ ಚಾನ್ಸಂತ ವಿಪರೀತ ದುಡ್ಡಿಗೆ ಪೆಟ್ರೋಲು, ಡೀಸೆಲ್ ಮಾರೋ ಕಾಳಸಂತೆಕೋರರು, ಡಬ್ಬಲ್ಲು, ತ್ರಿಬ್ಬಲ್ಲು ಕೇಳೋ ಆಟೋದವರು..ಉಫ್.. ಬಂದ್ ಒಂದೇ ಆದರೂ ಆ ಸಮಯದಲ್ಲಿ ಜನಸಾಮಾನ್ಯನಿಗಾಗೋ ಗೋಳು ಒಂದೆರಡಲ್ಲ. ಈ ತರದ ಬಂದೊಂದರಲ್ಲಿ ಸಿಕ್ಕವನದ್ದೊಂದು ಕತೆ ನಿಮ್ಮ ಮುಂದೆ.
ಬರ್ಕೀದಿನ ಆರ್.ಎಚ್ ರಜಾ ತಗೊಂಡ್ ಬಿಡ್ಬೇಕಿತ್ತು. ಒಂದಿನ ಮುಂಚೆನಾದ್ರೂ ಊರಿಗೆ ಹೋಗ್ಬೋದಿತ್ತು, ಮತ್ತೆ ಈ ತರ ಬಸ್ಸಿದೆಯೋ ಇಲ್ವೋ ಅಂತ ತಲೆಬಿಸಿ ಮಾಡ್ಕೊಳ್ಳೋದೂ ತಪ್ತಾ ಇತ್ತು..ಶುಕ್ರವಾರ ರಾತ್ರೆ ಹನ್ನೊಂದೂಕಾಲಿಗೆ ಖಾಲಿ ಬಸ್ಟಾಂಡಲ್ಲಿ ಕೂತು ಮೆಜೆಸ್ಟಿಕ್ಕಿಗೆ ತೆರಳೋ ಬಸ್ಸಿಗಾಗಿ ಕಾಯ್ತಿದ್ದ ಗುಂಡಣ್ಣನ ತಲೆಯಲ್ಲಿ ಮೇಲಿನ ಆಲೋಚನಾ ಲಹರಿ ಹರೀತಾ ಇತ್ತು. ಬರ್ಕೀದಾದ್ದರಿಂದ ಹೆಚ್ಚಿನ ಟ್ರಾಫಿಕ್ಕಿರಲ್ಲ, ಕೆಲಸವೂ ಇರಲ್ಲ, ಬೇಗ ಬರ್ಬೋದು ಅಂತ ಹಾಕಿದ್ದ ಲೆಕ್ಕಾಚಾರದ ಮೊದಲಾರ್ಧ ಮಾತ್ರ ಸತ್ಯವಾಗಿತ್ತು ! ಬೆಳಗ್ಗೆ ಹತ್ತಕ್ಕೆ ಆಫೀಸಿಗೆ ಹೋಗಿದ್ರೂ ಬರೋ ಹೊತ್ತಿಗೆ ರಾತ್ರಿ ಹತ್ತೂವರೆ. ಎಂದೂ ಇಲ್ಲದ ಕೆಲಸಗಳು ತಾ ಊರಿಗೆ ಹೊರಡೋ ದಿನವೇ ಯಾಕೆ ಒಕ್ಕರಿಸಿಕೊಳ್ಳುತ್ವೆ ಅನ್ನೋದು ಗುಂಡಣ್ಣನಿಗೆ ಎಂದೂ ಬಗೆಹರಿಯದ ಗೊಂದಲ ! ತಗೋ, ಆಗಿದ್ದಾಗ್ಲಿ ಅಂತ ಗಡಿಬಿಡಿಯಲ್ಲೇ ಊಟದ ಶಾಸ್ತ್ರ ಮುಗಿಸಿ ಊರಿಗೆ ತೆರಳೋ ಆಸೆಯಿಂದ ಕುಂದಲಹಳ್ಳಿಯ ಬಸ್ಟಾಂಡಿಗೆ ಬಂದು ನಿಂತರೆ ಒಂದೂ ಬಸ್ ಬರಬಾರದೇ ? ದಿನಾ ಹನ್ನೊಂದೂವರೆ, ಹನ್ನೆರಡರವರೆಗೆ ಇರೋ ವೋಲ್ವೋಗಳಲ್ಲಿ ಒಂದೂ ಇತ್ತ ಸುಳೀತಿಲ್ಲ ಇವತ್ತು. ನಾಳೆಯಿಂದ ಬಂದ್ ಅಂತ ಇವತ್ತೇ ಗಾಡಿಗಳನ್ನೂ ಬಂದ್ ಮಾಡಿಬಿಟ್ರಾ ಅನ್ನೋ ಟೆನ್ಷನ್ನು ಶುರುವಾಗೋದ್ರೊಳಗೆ ಒಂದು ಆಫೀಸಿನ ಟಿಟಿ ಬಂದು ನಿಂತಿತು. ಇಡೀ ಟಿ.ಟಿ ಖಾಲಿ ಖಾಲಿ. ಟ್ರೈವರನ್ನ ಬಿಟ್ಟರೆ ಮತ್ತೊಬ್ಬನಿದ್ದ ಅಷ್ಟೇ. ಟಿ.ಟಿಯೊಂದರಲ್ಲಿ ಐಟಿ ಉದ್ಯೋಗಿಯ ದರೋಡೆ ಅಂತ ಹಿಂದೊಮ್ಮೆ ಓದಿದ್ದ ಗುಂಡನಿಗೆ ಈ ಗಾಡಿ ಹತ್ತಲೋ ಬೇಡವೋ ಎಂಬ ಭಯ. ಮೆಜೆಸ್ಟಿಕ್ ಹೋಗುತ್ತಾ ಅಂತ ಮತ್ತೊಮ್ಮೆ ಕೇಳಿದ. ಹೂಂ ಅಂದ ಟಿ.ಟಿಯವ. ಟಿ.ಟಿಯ ಬೋರ್ಡ್ ನೋಡಿದ ಒಮ್ಮೆ. ಓ, ತನ್ನ ಆಫೀಸಿಗೆ ಜನರನ್ನ ಡ್ರಾಪ್ ಮಾಡೋ ಕಂಪೆನಿಯವರದ್ದು, ಪರವಾಗಿಲ್ಲ ಅಂದುಕೊಂಡ. ಮತ್ತೊಮ್ಮೆ ಒಳಗೆ ಕೂತಿದ್ದವನನ್ನು ನೋಡಿದ. ಅವನ ಕೊರಳಲ್ಲಿ ನೇತಾಡುತ್ತಿದ್ದ ಐಡಿಯ ಆಕಾರ ಕಂಡಿತು. ಪರವಾಗಿಲ್ಲ ತಗೋ ಅಂತ ಗಾಡಿ ಹತ್ತಿ ಕೂತ ಗುಂಡಣ್ಣ.
ಕುಂದಲಹಳ್ಳಿ ಗೇಟು ಬರುತ್ತಲೇ ಗಾಡಿಯಲ್ಲಿದ್ದ ಒಬ್ಬನೂ ಬಸ್ಸಿಳಿದ ಕೂಡಲೇ ಒಂಟಿ ಟಿಟಿಯಲ್ಲಿ ಮೆಜೆಸ್ಟಿಕ್ ತನಕ ಹೋಗೋದು ಸೇಫಾ ಅಲ್ಲವಾ ಅಂತೊಂದು ಆಲೋಚನಾ ಧಾರೆ ಬರೋಕೆ ಶುರುವಾಯ್ತು ಗುಂಡಣ್ಣಂಗೆ. ಆ ಆಲೋಚನೆಯಲ್ಲಿದ್ದಾಗಲೇ ಮುಂದಿನ ಸ್ಪೈಸ್ ಗಾರ್ಡನ್ ಸ್ಟಾಪ್ ಬಂತು. ಅಲ್ಲೊಂದಿಷ್ಟು ಜನ ಕಾಯ್ತಾ ನಿಂತಿದ್ರು . ಸುಮಾರು ಹೊತ್ತಿನಿಂದ ಬಸ್ಸಿಗಾಗಿ ಕಾಯ್ತಿದ್ದರು ಅಂತ ಕಾಣಿಸುತ್ತೆ ಅವರೆಲ್ಲಾ. ಮೆಜೆಸ್ಟಿಕ್ ಅಂತ ಕೂಗಿದ ಡ್ರೈವರನ ಕೂಗಿಗೆ ಅದರಲ್ಲಿಬ್ಬರು ಅನುಮಾನಿಸುತ್ತಲೇ ಟಿ.ಟಿ ಹತ್ತಿದರು .ಅವರೂ ಗುಂಡಣ್ಣನ ಮುಖ ನೋಡಿ ಅವರ ಮನದಲ್ಲೂ ಗುಂಡಣ್ಣನ ತರಹದ್ದೇ ಆಲೋಚನಾ ಲಹರಿ ಮೂಡಿರಬಹುದು. ನಂತರದ ಮಾರತ್ತಳ್ಳಿ ನಿಲ್ದಾಣದಲ್ಲಿ ಬ್ಯಾಂಡ್ ಸೆಟ್ಟಿನ ಆರು ಜನ ಗಾಡಿ ಹತ್ತೋದ್ರೊಂದಿಗೆ ಗಾಡಿಯೊಂದು ರೀತಿಗೆ ತುಂಬಿಕೊಂಡ್ತು. ಮೆಜೆಸ್ಟಿಕ್ಕಿನ ಪಯಣ ಇನ್ನು ಸೇಫು ಬಿಡಪ್ಪಾ ಅನ್ನೋ ಭಾವ ಗುಂಡಣ್ಣನಲ್ಲೂ ಮೂಡಿತು. ಆಮೇಲೆ, ಮುನ್ನೇಕೊಳ್ಳಾಲದಲ್ಲಿ ಇಳಿಯೋರು, ರಾಜೇಶ್ವರಿಯ ಹತ್ತಿರ ಇಳಿಯೋರು, ಎಚ್.ಎ.ಎಲ್ ಹತ್ರ ಇಳಿಯೋರು ಅಂತ ಗಾಡಿ ಫುಲ್ ಜನರಾದ್ರೂ ಧೈರ್ಯ ತರಿಸಿದ್ದು ಮೊದಲ ಹೇಳಿದ ಜನರೇ ಅಂತ ಮತ್ತೆ ಹೇಳೋಬೇಕಿಲ್ಲಾ ಅನಿಸುತ್ತೆ. ಅಲ್ವಾ ? ಖಾಲಿ ರಸ್ತೆಗೆ ದೃಷ್ಟಿಯಾಗಬಾರದು ಅಂತ ಬೊಟ್ಟಿಟ್ಟಂತೆ ಅಲ್ಲೊಂದು ಇಲ್ಲೊಂದು ವಾಹನಗಳು ಕಾಣಿಸಿಕೊಳ್ಳುತ್ತಿದ್ದ ಆ ರಾತ್ರೆಯ ರಸ್ತೆಯಲ್ಲಿ ವಿಜಯನಗರದ ಆ ಚಾಲಕ ಹನ್ನೊಂದೂ ಐವತ್ತಕ್ಕೇ ಮೆಜೆಸ್ಟಿಕ್ ತಲುಪಿಸಿದ್ದ. ಮಾರನೇ ದಿನ ಬಂದ್. ಅದೂ ಶನಿವಾರವಾದ್ದರಿಂದ ತನಗೆ ರಜಾ. ಇಂದಾದ್ರೂ ಬೆಳಗ್ಗೆ ಐದಕ್ಕೇ ಎದ್ದು ಪಿಕಪ್ಗೆ ಹೋಗೋ ತಲೆನೋವಿಲ್ಲ. ಒಂದಿನವಾದ್ರೂ ಆರಾಮಾಗಿ ಮಲಗಬಹುದೆಂಬ ಖುಷಿಯಲ್ಲಿ ಬೇಗ ಮನೆ ತಲುಪೋ ಅವಸರದಲ್ಲಿದ್ದ ಅವ. ಆಗಾಗ ಬಂದ್ ಆಗ್ತಾ ಇದ್ರೆ ನಿಮಗೊಂದಿಷ್ಟು ರಜಾ ಸಿಗುತ್ತಲ್ವಾ ? ಹಂಗಾಗಿ ಒಂದಿಷ್ಟು ಬಂದ್ ಬರ್ತಾ ಇರ್ಲಿ ಅಂತ ಅಂದ್ಕೊಳ್ತಾ ಇರ್ತೀರ ಅಲ್ವಾ ಅಣ್ಣಾ ಎಂಬ ಗುಂಡಣ್ಣನ ಮಾತಿಗೆ ಡ್ರೈವರನ ಮುಗುಳ್ನಗೆಯೇ ಉತ್ತರವಾಗಿತ್ತು.
ಅದರ ಹಿಂದಿರಬಹುದಾದ ಅರ್ಥಗಳ ಗ್ರಹಿಸೋ ಗೋಜಿಗೆ ಹೋಗದೇ ಬಸ್ಟಾಂಡಿನತ್ತ ಹೆಜ್ಜೆ ಹಾಕಿದ ಗುಂಡಣ್ಣನಿಗೆ ಹೊರಬರುತ್ತಿದ್ದ ಶಿವಮೊಗ್ಗ ಬಸ್ಸೇ ಎದುರಾಯ್ತು. ಸಖತ್ ಬಾಯಾರಿದ್ದವನಿಗೆ ಯಾರೋ ಬಿಸ್ಲೇರಿ ಬಾಟಲಿ ದಾನ ಮಾಡಿದಾಗ ಅವನಿಗಾಗುವಷ್ಟೇ ಖುಷಿಯೀಗ ಗುಂಡಣ್ಣನಿಗೆ ! ಶಿವಮೊಗ್ಗದಿಂದ ಮುಂದೆ ತನ್ನೂರಿಗೆ ಬಸ್ ಸಿಗುತ್ತೋ ಇಲ್ಲವೋ ಅನ್ನೋದು ನಂತರದ ಮಾತು. ಮೊದಲು ಶಿವಮೊಗ್ಗದವರೆಗೂ ತಲುಪುವೆನಲ್ಲ ಅನ್ನೋ ಖುಷಿಯಲ್ಲಿ ಮಲಗಿದವನಿಗೆ ಆಫೀಸಿಂದೇ ಕನಸುಗಳು. ಥೋ. ಎರಡು ದಿನ ಆರಾಮವಾಗಿ ಇರೋಣ ಅಂತ ಹೊರಟರೂ ಬಿಡದೇ ಹಿಂಬಾಲಿಸ್ತಿದೆಯಲ್ಲಾ ಆಫೀಸ್ ಆಲೋಚನೆಗಳು ! ಬಿಟ್ಟರೂ ಬಿಡದೀ ಮಾಯೆ ಅನ್ನುವಂತೆ ಅಂದುಕೊಂಡ. ಶಿವಮೊಗ್ಗ ತಲುಪೋ ಹೊತ್ತಿಗೆ ಬೆಳಗ್ಗಿನ ಜಾವ ಆರು ದಾಟಿತ್ತು. ಇಡೀ ಕೆ.ಎಸ್.ಆರ್ಟಿಸಿ ಬಸ್ಟಾಂಡ್ ಖಾಲಿ ಖಾಲಿ.ಬೆಂಗಳೂರಿಂದ ಬಂದ ಬಸ್ಸುಗಳನ್ನ ಬಿಟ್ಟರೆ ಬೇರ್ಯಾವ ಬಸ್ಸುಗಳೂ ಇಲ್ಲ !
ಆದ್ರೆ ಪಕ್ಕದ ಖಾಸಗಿ ನಿಲ್ದಾಣದಿಂದ ಹೊರಬಂದ ತೀರ್ಥಹಳ್ಳಿಯ ಬಸ್ಸೊಂದು ತನ್ನೂರಿಗೂ ಬಸ್ಸು ಸಿಗಬಹುದೆಂಬ ಆಸೆ ಕೆರಳಿಸಿ ಖಾಸಗಿ ನಿಲ್ದಾಣದತ್ತ ದಾಪುಗಾಲಿಕ್ಕಿದ ಗುಂಡಣ್ಣ. ತನ್ನೂರು ಸಾಗರ ಅಂತ ಬರೆದುಕೊಂಡಿದ್ದ ಬಸ್ಸೊಂದು ನಿಂತಿತ್ತು ನಿಲ್ದಾಣದ ಮೂಲೆಯಲ್ಲಿ. ಆದ್ರೆ ಬಸ್ಸೊಳಗೆ ಯಾರೂ ಇಲ್ಲ. ಎಷ್ಟೊತ್ತಿಗೆ ಹೊರಡುತ್ತೆ ಅಂದ್ರೆ ಆರೂವರೆಗೆ ಹೊರಡುತ್ತೆ , ಜನ ತುಂಬುತ್ತಿದ್ದಂಗೆ ಹೊರಡೋದೇ ಅಂದ ಡ್ರೈವರ. ಬಸ್ಸೊಳಗೆ ಹತ್ತಿ ಕೂತ ಗುಂಡಣ್ಣಂಗೆ ಜನ ತುಂಬೋವರೆಗೂ ಹೊರಡೋಲ್ಲ ಅಂತ ಹೇಳೋಕೆ ಹೊರಟನಾ ಅಂತನಿಸೋಕೆ ಶುರು ಆಯ್ತು. ಸಮಯ ಆರೂಕಾಲು.
ಬಸ್ಸಲ್ಲಿ ಸೀಟು ಬೇಕು ಅಂತ ಇತ್ತು.ಆದ್ರೆ ಬಸ್ಸಲ್ಲಿರೋ ಸೀಟೆಲ್ಲಾ ತಂಗೇ ಬೇಕಂತಿರಲಿಲ್ಲ! ಹೆಂಗಾದ್ರೂ ಮನೆ ತಲುಪಿದ್ರೆ ಸಾಕಂತಾ ಬಂದ ತನಗೆ ವಿಘ್ನನಿವಾರಕನ ಹೆಸರಿನ ಗಜಾನನ ಬಸ್ಸೇ ಸಿಕ್ಕಿದೆ.ಆದ್ರೆ ಅದರಲ್ಲಾದ್ರೂ ಒಂದಿಷ್ಟು ಜನ ತುಂಬದೆ ಮುಂದೆ ಹೋಗೋದೇಗೆ ? ಆಗಷ್ಟೇ ಬಸ್ಸು ಹತ್ತಿದ ಡ್ರೈವರ್ ಬೇರೆ ಜನರೇ ಇಲ್ಲ, ಇನ್ನೇನು ಹೋಗೋದು ಅಂತ ಗೊಣಗುತ್ತಾ ಕೆಳಗಿಳಿದಿದ್ದ. ಜನರ ಬರವಿಕೆಗೆ ಕಾಯೋ ತನಕ
ಮನೆಗಾದ್ರೂ ಫೋನ್ ಮಾಡಿ ಊರಿನ ಬಸ್ಸು ಸಿಕ್ಕಿದೆ ಅಂತ ಹೇಳೋಣ ಅಂತ ಪ್ರಯತ್ನ ಪಟ್ರೆ ಮೊದಲ ರಿಂಗಾಗೋ ಮೊದಲೇ ಫೋನ್ ಕಟ್ಟಾಯ್ತು. ಏನಾಯ್ತಪ ಇದು ಅಂತ ಅಂದ್ಕೊಳೋ ಹೊತ್ತಿಗೆ ಬಿ.ಎಸ್.ಎನ್.ಎಲ್ನಿಂದ ಮೆಸೇಜು. ನಿಮ್ಮ ಬ್ಯಾಲೆನ್ಸ್ ೦.೦೮ ಪೈಸೆಗಳಿದೆ. ಕರೆ ಮಾಡ್ಬೇಕು ಅಂದ್ರೆ ರೀಚಾರ್ಚ್ ಮಾಡಿಸಿ ಅಂತ ! ಇಷ್ಟು ಖಾಲಿ ಆಗೋವರೆಗೆ ಏನು ಮಾಡ್ತಿದ್ರಪ್ಪ ಕಂಪೆನಿಯವ್ರು ಅಂತ ಬಯ್ಕೊಳ್ತನೇ ಡುಯಲ್ ಸಿಮ್ಮಾದ ಮೊಬೈಲಿನಲ್ಲಿ ಮತ್ತೊಂದು ಸಿಮ್ಮಾದ ಡೊಕೋಮೋವನ್ನ ಬಳಸಿ ಫೋನ್ ಮಾಡೋಕೆ ಹೋದ್ರೆ ನಿಮ್ಮ ಬ್ಯಾಲೆನ್ಸು ಐದು ರೂಪಾಯಿ ಇಂತಿಷ್ಟು ಪೈಸೆ ಅಂತ ಹುಡುಗಿಯೊಬ್ಬಳು ಉಲೀತಾ ಇದ್ದಾಳೆ ಬಿಟ್ರೆ ಅತ್ತಲಿಂದ ಯಾರೂ ಫೋನ್ ಎತ್ತತಾ ಇಲ್ಲ. ಫೋನನ್ನಲ್ಲೇ ಕುಕ್ಕರುಬಡಿದು ಜನರಾದ್ರೂ ಬಂದ್ರೆ ತನ್ನ ಬಸ್ಸಾದ್ರೂ ಹೊರಡುತ್ತೆ.ಇಲ್ಲಾಂದ್ರೆ ಅದೂ ಇಲ್ಲವಲ್ಲಪ್ಪ ಅಂತ ಗುಂಡಣ್ಣ ಜನರ ಬರ ಕಾಯತೊಡಗಿದ.
೬:೨೦: ಎರಡನೇ ಪಯಣಿಗ ಬಸ್ಸೊಳಗೆ ಅಡಿಯಿಟ್ಟ.ಅವನ ಮನದಲ್ಲೂ ಗುಂಡನ ಮನದಲ್ಲಿರುವಂತದ್ದೇ ಆಲೋಚನಾ ಲಹರಿಗಳಿರಬಹುದು.
೬:೨೪:ಮೂರನೇ ಪ್ರಯಾಣಿಕನ ಆಗಮನದೊಂದಿದೇ ಸೀಟಿಗೆ ಮೂವತ್ತು ಕೊಡಿ ಸಾಕು ಅಂತ ಕೆಳಗಿನಿಂದ ಕೇಳಿದ ಮಾತುಗಳ ಕೇಳಿ ಗುಂಡಣ್ಣ ಕೆಳಕ್ಕೆ ತಲೆಹಾಕಿದ. ಹೆಂಗಾದ್ರೂ ಬಸ್ಸು ತುಂಬಿಸಬೇಕು ಅಂತ ಮೂವತ್ತು ರೂಪಾಯಿಗೇನಾದ್ರೂ ಟಿಕೇಟ್ ಹೇಳ್ತಾ ಇದ್ದಾರಾ ಬಸ್ಸೋರು ಅಂತ ಅಂದುಕೊಂಡ. ಹಿಂದೊಮ್ಮೆ ಹತ್ತು ರೂಪಾಯಿ ಶಿವಮೊಗ್ಗ ಅಂತೆಲ್ಲಾ ಬಸ್ಸೋರು ದರಸಮರ ಸಾರಿದ್ದು ನೆನಪಾಗಿ ಆಗೋದೆಲ್ಲಾ ಒಳ್ಳೇದಕ್ಕೇ ಅಂತ ಖುಷಿಪಡೋ ಹೊತ್ತಿಗೆ ಮೂವತ್ತು ರೂಪಾಯಿ ಕೊಡ್ರಿ ಸಾಕು. ಈಗ ಬೇರೆ ಯಾವ ಗಾಡಿಯೂ ಸಿಕ್ಕೋಲ್ಲ ಅನ್ನೋ ಮಾತುಗಳು ಕೇಳಿದ್ವು. ಒಳ್ಳೇ ವ್ಯವಹಾರ ಪ್ರಜ್ಞೆ ಇದೆ ಬಿಡಪ್ಪಾ ಇವರಿಗೆ, ಅಷ್ಟಕ್ಕೂ ಯಾರಿದು ಅಂತ ನೋಡಿದ್ರೆ ಬಸ್ಸು ಬಿಟ್ಟರೆ ಯಾರಿಗೂ ಪ್ರವೇಶವಿಲ್ಲ ಅನ್ನೋ ಬೋರ್ಡನ್ನು ಉಲ್ಲಂಘಿಸಿ ನಿಲ್ದಾಣದೊಳಕ್ಕೆ ನುಗ್ಗಿದ್ದ ಆಟೋವಾಲ !
ಟೈಂಪಾಸ್ ಪೇಪರ್, ಟೈಂಪಾಸ್ ಪೇಪರ್, ಅಣ್ಣಾ ಪೇಪರ್ ತಗೋಳ್ಳಿ, ಬೋಣಿ ಮಾಡಿ ಅಂತ ಮೂರು ಜನರ ಬಸ್ಸಿಗೂ ನುಗ್ಗಿದ ಒಬ್ಬ ಪೇಪರ್ ಬಾಲ. ಟೈಂಪಾಸ್ ಕಡ್ಲೆ ಕಾಯಿ ಗೊತ್ತು. ಇದ್ಯಾವುದಿದು ಟೈಂಪಾಸ್ ಪೇಪರ್ರು ಅಂದ್ಕೊಳ್ಳೋ ಹೊತ್ತಿಗೆ ಗುಂಡಣ್ಣನತ್ರನೇ ಬಂದ ಅವ. ನಮ್ಮನೇಲೇ ಪೇಪರ್ ತರಿಸ್ತೀವಿ ಕಣಪ್ಪಾ ಅಂದ್ರೆ , ಬೇರೆ ಪೇಪರ್ ತಗೋಳ್ಳಿ ಅನ್ನಬೇಕೇ ಆ ಪೇಪರಿನವ್ನು ! ಹೆ ಹೆ, ಬೇಡಪ್ಪಾ ಅಂತಿದ್ದ ಹಾಗೇ ಮುಂದೆ ಹೋದ. ಬಂದಿನಿಂದ ಆಟೋ, ಬಸ್ಸಿನವರ ತರಹ ಆತನ ಪೇಪರ್ ವ್ಯಾಪಾರವೂ ಥಂಡಾ ಹೊಡೆಯುತ್ತಿತ್ತು.ತಿಂಗಳಿಗೆ ಹಿಂಗೆ ಎರಡು ಮೂರು ಬಂದು ಮಾಡಿದ್ರೆ ದಿನಗೂಲಿಯವ್ರ, ಮಂಡಿ ಹಮಾಲಿಗಳ, ಗಾಡಿ ತಳ್ಳುವಂತಹ ಕೆಲಸ ಮಾಡುವ, ಅವತ್ತು ದುಡಿದರೆ ಮಾತ್ರ ಅವತ್ತು ಉಣ್ಣೋಕೆ ಸಾಧ್ಯವಾಗುವಂತಹ ಜನರ ಹೊಟ್ಟೆಪಾಡಿನ ಗತಿಯೇನು ? ಅವತ್ತಿಡೀ ಯಾವುದೇ ಕೆಲಸವಿಲ್ಲದೇ ಉಪವಾಸ ಮಲಗೋ ಆತನ ಕುಟುಂಬದ ಕಣ್ಣೀರ ನೋವು, ಹಸಿದ ಹೊಟ್ಟೆಯ ಯಾತನೆ ಈ ಬಂದ್ ಮಾಡೋರಿಗೆ, ಅದ್ರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಹೊಟ್ಟೆ ತುಂಬಿದ ಜನಕ್ಕೆ ಅರ್ಥವಾಗೋದು ಯಾವಾಗ ಅನ್ನೋ ವಿಚಾರಧಾರೆ ಹಾದುಹೋಯ್ತೊಮ್ಮೆ.
೬:೨೮:ಪಕ್ಕದಲ್ಲೇ ಇನ್ನೊಂದು ಸಾಗರದ ಬಸ್ ಬಂದು ನಿಂತಾಗ ಈ ಬಸ್ಸು ಅವನಿಗೆ ಕಾಂಪಿಟೇಷನ್ ಕೊಡೋಕೆ ಅಂತಾದ್ರೂ ಹೊರಡ್ತಾನೆ ಅನ್ನೋ ಧೈರ್ಯ ಬಂತು ಗುಂಡಣ್ಣಂಗೆ. ಅದಕ್ಕೆ ಸರಿಯಾಗಿ ನಾಲ್ಕನೇ ಪಯಣಿಗ ಬಂದು ಆಸೀನನಾಗೋದಕ್ಕೂ ಡ್ರೈವರ್ರು ರಣೋತ್ಸಾಹದಿಂದ ಗಾಡಿ ಸ್ಟಾರ್ಟ್ ಮಾಡೋದಕ್ಕೂ ಸರಿಯಾಯ್ತು. ಗಾಡಿ ಶುರುವಾಗುತ್ತಿದ್ದಂತೆಯೇ ಎಲ್ಲೋ ಇದ್ದಂತಿದ್ದ ೫,೬,೭ನೇ ಪಯಣಿಗರು ಬಂದು ಗಾಡಿ ಹತ್ತಿದರು. ಗೆದ್ದೆತ್ತಿನ ಬಾಲ ಹಿಡಿಯೋರು ಅನ್ನುವಂತಹ ಇವರು ಗಾಡಿ ಶುರುವಾದ ಮೇಲೆ ಆ ಶುರುವಾದ ಆ ಗಾಡಿಗೆ ಬಂದು ಹತ್ತುತ್ತಾ ಇದ್ದಾರೆ. ಮುಂಚೆಯೇ ಹತ್ತಿದ್ರೆ ಗಾಡಿ ಮುಂಚೆಯೇ ಹೊರಡುತ್ತಿರಲಿಲ್ಲವೇ ಅಂದುಕೊಂಡ ಗುಂಡಣ್ಣ ! ಗಾಡಿಯಲ್ಲಿ ಹತ್ತುತ್ತಿದ್ದ ಜನರೊಂದಿಗೆ ಗುಂಡಣ್ಣನಿಗೆ ಮನೆ ಸೇರೋ ಭರವಸೆಯೂ ಹೆಚ್ಚಾಗುತ್ತಿತ್ತು
೬:೩೦: ಇನ್ನಿಬ್ಬರ ಜಮಾವಣೆಯಾಯ್ತು ಬಸ್ಸಿಗೆ
೬:೩೧:ಹಿಂದಿನ ಮತ್ತು ಮುಂದಿನ ಬಾಗಿಲುಗಳಿಂದ ತಲಾ ಇಬ್ಬರೆಂಬಂತೆ ಒಟ್ಟು ನಾಲ್ಕು ಜನ ಬಸ್ಸು ಮುಂದೆ ಸಾಗಿತು. ಬೇರೆ ಸಮಯದಲ್ಲಾಗಿದ್ರೆ ಒಂದು ನಿಮಿಷ ಲೇಟಾಗಿದೆ ಅಂತ ಬಸ್ಸು ಬಡಿಯೋದೇನು, ಗಲಾಟೆ ಮಾಡೋದೇನು, ಡ್ರೈವರಿಗೆ ಬಯ್ಯೋದೇನೋ, ಇಂತದ್ದೆಲ್ಲಾ ಅವಾಂತರ ಮಾಡುತ್ತಾ ಬಸ್ಸಲ್ಲಿದ್ದವರಿಗೆಲ್ಲಾ ಕಿರಿಕಿರಿ ಹುಟ್ಟಿಸಿಬಿಡುತ್ತಿದ್ದ ಹಿಂದಿನ ಬಸ್ಸಿನ ಏಜೆಂಟು. ಆದ್ರೆ ಬಂದಿನ ಕಾರಣ ಇವೆಲ್ಲಾ ಜಗಳಗಳೂ ಬಂದಾಗಿತ್ತು. ಬಸ್ಟಾಂಡಲ್ಲಿದ್ದೋರದ್ದೆಲ್ಲಾ ಅದೆಷ್ಟು ಅನ್ಯೋನ್ಯ ಭಾವ !
ಆಟೋ ಸ್ಟಾಂಡ್ ಹತ್ರ ಹೋಗೋವಷ್ಟರಲ್ಲಿ ಹುಂಚದ ಬಸ್ಸು ಹತ್ತೋ ಬದ್ಲು ನಮ್ಮ ಬಸ್ ಹತ್ತಿದ್ದ ಒಬ್ಬ ಇಳಿಯೋದಕ್ಕೂ ಮತ್ತೊಬ್ಬ ಹೊಸಬ ಹತ್ತೋದಕ್ಕೂ ಸರಿಯಾಯ್ತು.ಹದಿಮೂರು ಜನರ ಪಯಣ ಅಂತ ಹೊರಟಿದ್ದ ನಮ್ಮ ಸಕಲೇಶಪುರದ ಪ್ರವಾಸ ಪ್ರಯಾಸವಾದ್ದು ನೆನಪಾಗಿ ಸೇಫಾಗಿ ಮನೆಸೇರಲಪ್ಪಾ ಅನ್ನೋ ಬೇಡಿಕೆ ಆ ಗಣೇಶನಲ್ಲಿ. ಹದಿನೈದು ಜನರಾದ್ರೂ ಇದ್ದಿದ್ರೆ ಬಸ್ ಓಡಿಸಿದ ಖರ್ಚಾದ್ರೂ ಹುಟ್ಟುತ್ತಿತ್ತು ಅಂದ ಏಜೆಂಟರ ಮಾತಿಗೆ ಕಂಡೆಕ್ಟರು, ಡ್ರೈವರನ್ನೂ ಸೇರಿಸಿ ಟಿಕೇಟ್ ಮಾಡಿ. ಹದಿನೈದಾಗತ್ತೆ ಅಂದ್ರು ಒಬ್ರು ! ಆಟೋರಿಕ್ಷಾದಂತೆ ಸಾಗುತ್ತಿದ್ದ ಬಸ್ಸಿಗೆ ಸರ್ಕಿಟ್ ಹೌಸಿನಲ್ಲಿ ಇಬ್ಬರು ಹತ್ತುತ್ತಿದ್ದಂಗೆ ಕೊನೆಗೂ ಹದಿನೈದಾದ ಖುಷಿಯಲ್ಲಿ ಬಸ್ಸಿನ ವೇಗ ಹೆಚ್ಚಿತು. ಸಮಯ ೬:೩೮
ಹೆಚ್ಚುತ್ತಿದ್ದ ಗಾಡಿಯ ವೇಗದೊಂದಿಗೆ ಬೀಸುತ್ತಿದ್ದ ತಂಗಾಳಿಯಲ್ಲಿ ನಿದ್ದೆಗೆ ಜಾರುತ್ತಿದ್ದ ಗುಂಡಣ್ಣನಿಗೆ ಹಾಲ್ಕೊಳ ಅಂತ ಬಸ್ಸು ನಿಲ್ಲಿಸಿದಂತೆ , ಅಲ್ಲೊಬ್ಬ ಬಸ್ಸು ಹತ್ತಿದಂತೆ ಅನಿಸಿತು. ಅವಾಗಿಂದ ಜನರ ಬಗ್ಗೆಯೇ ಯೋಚಿಸ್ತಿರೋ ತನಗೆ ಕನಸಲ್ಲೂ ಅವರೇ ಬರ್ತಾ ಇದ್ದಾರಾ ಅಂತ ಗುಂಡಣ್ಣ ಕಣ್ಣುಜ್ಜಿ ಏಳೋ ಹೊತ್ತಿಗೆ ಬಸ್ಸು ಮುಂದೆ ಹೊರಟಾಗಿತ್ತು. ಸುತ್ತಲಿನ ಹಸಿರು ಗದ್ದೆಗಳ ಮೇಲೆ ಹಾರ್ತಿರೋ ಹಕ್ಕಿಗಳು, ಕರೆಂಟ್ ಲೈನಿನ ಮೇಲೆ ಕೂತು ಅತ್ತಿತ್ತ ಸರ್ಕಸ್ ಮಾಡ್ತಿದ್ದ ಬಾನಾಡಿಗಳು ಇದು ಕನಸಲ್ಲ ವಾಸ್ತವ ಎಂದು ಹಾಡುತ್ತಿದ್ದಂಗೆ ಅನಿಸಿತು. ಅವುಗಳದೇ ದಾಟಿಯಲ್ಲಿ..ಕೊನೆಗೂ ಕಾಂಕ್ರೀಟ್ ಕಾಡಿನ ಉಸಿರುಗಟ್ಟಿಸೋ ಧೂಳಿನಿಂದ, ತಲೆಬಿಸಿಯಿಂದ ಹೊರಬಂದಿದ್ದ ಗುಂಡಣ್ಣ ಸಾಗುತ್ತಿದ್ದ, ತನ್ನ ನೆಚ್ಚಿನ ಹುಟ್ಟೂರಿನತ್ತ, ಮಲೆನಾಡ ಮಡಿಲಿನತ್ತ.
-ಪ್ರಶಸ್ತಿ.ಪಿ,
೨೬/೯/೨೦೧೫
ಸಾಗರ
super !!