ಬಂದೂಕು ಹಿಡಿದ ಕೈಗಳು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕವನ ಸಂಕಲನ: ಬಂದೂಕು ಹಿಡಿದ ಕೈಗಳು
ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ

ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)…..

ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ ಸಾಹಿತ್ಯವನ್ನು ತಮ್ಮ ಕೈಗಳಿಂದ ಬಂದೂಕಿನಲ್ಲಿ ತುಂಬಿ ಸತ್ವಯುತವಾದ ಗಟ್ಟಿಯಾದ ಗುಂಡನ್ನು ಈ ಮೂಲಕ ಹಾರಿಸಿದ್ದಾರೆ. ಬಂದೂಕು ಹಿಡಿದ ಕೈಗಳು ಅನ್ನೊ ಶಿರ್ಷಿಕೆಯೇ ಒಂದು ಭಯಾನಕ ಸನ್ನಿವೇಶವನ್ನು ಸೃಷ್ಟಿಸಬಹುದು ಆದರೆ ಕವನಸಂಕಲನದ ಕವಿತೆಗಳನ್ನು ಓದಿದಾಗ ಬಂದೂಕು ಹಿಡಿಯಲೇಬೇಕಾಗಿದೆ ಎಂಬ ಸ್ಪಷ್ಟ ನಿಲುವಿಗೆ ಓದುಗರನ್ನು ತಂದು ನಿಲ್ಲಿಸುವಲ್ಲಿ ಕವಯಿತ್ರಿ ಅಂಜಲಿಯವರ ಕವಿತೆಗಳು ಸಾಗುತ್ತವೆ.

ಕವನಸಂಕಲನದ ಕವಿತೆಗಳು ತೀರಾ ಕೆಳಮಟ್ಟದಲ್ಲಿ ಬದುಕುವ ಜನರ ಎತ್ತರದ ದ್ವನಿಯಾಗಿ ಪ್ರತಿದ್ವನಿಸುತ್ತವೆ. ಜೊತೆಗೆ ಕವಯಿತ್ರಿಯವರಿಗೆ ಸಾವನ್ನು ಚಿತ್ರಿಸುವ ಕಲೆ ಕರಗತವಾದಂತೆ ಬಾಸವಾಗುತ್ತದೆ ಈ ವಿಷಯಕ್ಕೆ ಸಂಬಂದಿಸಿದ ಕವಿತೆಗಳು ಕವನಸಂಕಲನ ಒಳಗೊಂಡಿದೆ. ಪ್ರಸ್ತುತ ಸಮಾಜದಲ್ಲಿನ ತವಕ ತಲ್ಲನಗಳ ಬೇರುಹಿಡಿದು ನೋಡಿದಾಗ ಇವರ ಕವಿತೆಗಳು ಬೇರುಗಳನ್ನೂ ಜಾಲಾಡಿಸುವಷ್ಟು ನಿಷ್ಟುರವಾಗಿ ಹೇಳುವ ಮತ್ತು ಕೇಳುವ ದಿಟ್ಟತನಕ್ಕೆ ಸಾಕ್ಷಿಯಾಗುತ್ತವೆ. ಇನ್ನು ಬದುಕಿನ ಜೊತೆಗಾರನನ್ನು, ಗೆಳೆಯನನ್ನು ಹುಡುಕುವಲ್ಲಿ ಕವಯಿತ್ರಿ ತುಂಬಾ ಗೊಂದಕ್ಕೂ ಈಡಾಗಿರುವದಲ್ಲದೇ ಅಷ್ಟೇ ಎಚ್ಚರದ ಹೆಜ್ಜೆ ಇಡುವಲ್ಲಿ ತಮ್ಮನ್ನು ತಾವು ಎದುರಿಗೆ ನಿಲ್ಲಿಸಿಕೊಂಡು ಕವಿತೆಯಲ್ಲಿ ಮಾತನಾಡುವ ಬಗೆಯು ಚನ್ನಾಗಿ ಮೂಡಿಬಂದಿದೆ.

೩೯ ಕವಿತೆಗಳನ್ನುಳ್ಳ(ಗುಂಡುಗಳನ್ನುಳ್ಳ) ಬಂದೂಕಿನ ಮೊಲ ಕವಿತೆಯಲ್ಲೇ ‘ಅವನ ಹೆಜ್ಜೆ ಹುಡುಕುತ್ತಾ’ ಹೊರಟ ಕವಯಿತ್ರಿ ಅಂಜಲಿಯವರು ಓದುಗರನ್ನು ಅಂಜಿಸಿ ಅಳಿಸಿಬಿಡುತ್ತಾರೆ. ಸಾವಿನ ಮೆರವಣಿಗೆಯಲ್ಲಿ ನೋವಿನ ಪಲ್ಲಕ್ಕಿ, ನೋವಿನ ಪಲ್ಲಕ್ಕಿಯಲಿ ಬಿಕ್ಕುವ ದಿಕ್ಕು ತೋಚದೇ ಕುಳಿತ ಜೀವ. ನೆಲದ ಗುಂಡಿಯು ಬೆವರಿ ಕಣ್ಣೀರ ಹಾಕುವ ಪರಿಗೆ ತಂದು ನಿಲ್ಲಿಸುವ ಕವಿತೆ ಹುಡುಕಾಟದ ಕುರಿತು ಹುಡುಕಾಡುವಂತೆ ಕಾಡುತ್ತದೆ.

ದೇವರ ನೆಪದಲ್ಲಿ ಜನರು ಮುಳುಗಿರುವ ಮೂಢ ನಂಬಿಕೆಯ ಕುರಿತು ಹೇಳುವಾಗ ಕಣ್ಣಿಗೆ ಕಾಣಲು ದೇವರು ನರನಲ್ಲ ಎಂಬುದನ್ನು ‘ನರನಲ್ಲದ ದೇವರು’ ಕವಿತೆಯಲಿ ಹೇಳುತ್ತಾ ಮಾನವೀತೆಯತ್ತ ಮುಖಮಾಡುತ್ತಾರೆ. ‘ನನ್ನ ಹೆಣದ ಸುತ್ತ’, ‘ಇರುಳಲ್ಲಿ ಸತ್ತಾಗ’, ‘ಬಿದ್ದ ಹೆಣಗಳು’, ‘ಅವಳ ಗೋರಿ’, ‘ಗೋರಿಯೊಳಗಿನ ನಾನು’, ‘ಸತ್ತ ಕನಸುಗಳು’, ಈ ಎಲ್ಲ ಕವಿತೆಗಳಲ್ಲಿ ಅಂಜಲಿಯವರು ಸಾವಿಗೆ ಅಂಜದೇ ಅಳುಕದೆ ನಿಲ್ಲುವ ಪರಿ ಪ್ರತಿಫಲಿಸುತ್ತದೆ ಸಾವನ್ನು ಚಿತ್ರಿಸುವ ಧೈರ್ಯ ಮತ್ತು ಸಾವನ್ನು ಸಾರ್ಥಕಗೊಳಿಸುವ ರೀತಿ, ಜೊತೆಗೆ ಸತ್ತವರ ಬದುಕಿನ ತೊಳಲಾಟಗಳನ್ನು ತನ್ನದೇ ಎಂದುಕೊಂಡು ತನ್ನನ್ನೇ ಸಾಯಿಸಿಕೊಂಡು ಹೇಳುವ ವಿಭಿನ್ನವಾದ ಅನುಭವವನ್ನು ಕಟ್ಟಿಕೊಡುತ್ತವೆ.

 

ದೇವದಾಸಿಯರ ಬದುಕಿನ ಕುರಿತು ‘ಮುತ್ತು ಕೊಟ್ಟವಳು’ ಕವಿತೆಯಲ್ಲಿ ಹೇಳಿದರೆ, ‘ರಥದ ಬೀದಿ’ ಕವಿತೆಯು ಮೌಢ್ಯತೆಯ ಕುರಿತು ಬಿಂಬಿಸುತ್ತದೆ. ‘ಅವನಲ್ಲದೇ ಅವಳಾಗಿ’ ಕವಿತೆಯು ಮಂಗಳಮುಖಿಯರ ಬದುಕಿನ ಚಿತ್ರಣವನ್ನು ಕಣ್ಮುಂದಿರಿಸಿದರೇ, ‘ಗರತಿ ಗೌರವ್ವ’ ಕವಿತೆಯು ಈ ನೆಲದ ಹೆಣ್ಣಿನ ದುಡಿಮೆ ಪ್ರತಿಮೆಯಾಗಿ ನಿಲ್ಲುತ್ತದೆ.

“… ಬಾಸಿಂಗ ಕಟ್ಟಿದ ನನ್ನ ಒಳಗೊಳಗೆ
ವರದಕ್ಷಿಣೆಯನ್ನು ವರಿಸಿದ ನಿನ್ನ
ಏಳು ಹೆಜ್ಜೆಗಳಿಂದ ನಾ ಹಿಂದೆ ಸರಿಯುತ್ತಿದ್ದೇನೆ..”
‘ಬಾಗಿನ’ ಕವಿತೆಯ ಈ ಸಾಲುಗಳು ವರದಕ್ಷಿಣೆ ಪದ್ಧತಿಗೆ ಪ್ರತಿರೋಧವಾಗಿ ನಿಲ್ಲುತ್ತವೆ.

“… ಒಂದಗಳು ಅನ್ನದ ಗಂಟಲಿಗೆ
ಗೌರವಧನದ ಗುಟುಕು ನೀರ ಹನಿ ಚೆಲ್ಲುವ
ಸರ್ಕಾರದ ಚಲ್ಲಾಟಕ್ಕೆ ಮಾಹಿತಿ ಕಳಿಸುವ
ಸರ್ಕಾರದ ಮೀನ ಮೇಷದ ಮುಂಗೈ ಆಟಕ್ಕೆ
ಬಳೆ ತೊಡಿಸಿ ಚಳಿ ಬಿಡಿಸುವ ಚಾಮುಂಡಿಯವಳು
ಬಾಲವಾಡಿಯ ತಾಯಿಯವಳು..”

ಎನ್ನುವ “ಗೂಡು ಕಟ್ಟಿದವಳು” ಕವಿತೆಯ ಸಾಲುಗಳು ಸರಕಾರದ ಆಳಾಗಿ ದುಡಿಯುವ ಅಂಗನವಾಡಿಯ ಶಿಕ್ಷಕಿಯರ ಬದುಕಿನ ಚಿತ್ರಣದ ಜೊತೆಗೆ ಸರಕಾರದ ಕಿವಿ ಹಿಂಡುವ ಗಟ್ಟಿ ಧೈರ್ಯವನ್ನು ಬಿಂಬಿಸುತ್ತವೆ.

‘ಅಮ್ಮ ನೀ ನನ್ನ ದೀವಿಗೆ’ ಕವಿತೆಯಲಿ ಜಗದ ಮಾತೆ ಭರತಮಾತೆಯ ಸದ್ಯದ ಪರಿಸ್ಥಿತಿಯ ಕುರಿತು ವಿಷಾದ ಮತ್ತು ಭಾರತಮಾತೆಯನ್ನು ಭದ್ರಗೊಳಿಸುವತ್ತ ಹೆಜ್ಜೆ ಇಡುವ ಭರವಸೆಯ ಭಾವಗಳನ್ನು ಬಿತ್ತಿದ್ದಾರೆ.

ಕಲ್ಲೆದೆಯ ಗುಂಡಿಗೆ ಸೀಳಿ
ಹೊತ್ತುರಿಯುವ ಬೆಂಕಿಯಲಿ ಬಾಳಿ
ಹಗಲು ರಾತ್ರಿ ಮಾಡುತ ಕೂಲಿ
ನಮ್ಮನ್ನು ಸಾಕಿ ಸಲುಹಿದಳು
ಅಮ್ಮ ಗಂಡೆದೆಯ ಗುಂಡಿಗೆಯವಳು…”

ಎಂಬ ‘ಗಂಡೆದೆಯ ಗುಂಡಿಗೆಯವಳು’ ಕವಿತೆಯ ಈ ಸಾಲುಗಳು ಅಮ್ಮನ ಕುರಿತು ಅಮ್ಮನ ಕಷ್ಟದ ಜೊತೆಗೆ ಬದುಕನ್ನು ಮತ್ತು ಬದುಕಿನ ಅಂದಿನ ಸ್ಥಿತಿಯನ್ನು ಕವಿತೆಯಲ್ಲಿ ಹೇಳುವ ಮೂಲಕ ಅಮ್ಮನನ್ನು ಕಣ್ಣಮುಂದೆ ನಿಲ್ಲಿಸುತ್ತಾರೆ.

“ಬೆಟ್ಟ ಗುಡ್ಡಗಳ ನಡುವೆ
ತಗ್ಗುಗುಂಡಿಗಳ ತೋಡಿ
ಕಲ್ಲು ಮಣ್ಣು ದೋಚಿದವರು ಅವರು
ಆದರೆ ನಾವಿಲ್ಲಿ ಕಲ್ಲು ಒಡೆಯುವವರು….”

‘ನಾವು ಕಲ್ಲು ಒಡೆಯುವವರು’ ಎಂಬ ಕವಿತೆಯ ಈ ಸಾಲುಗಳು ಗಣಿಗಾರಿಕೆಯನ್ನು ಪ್ರಶ್ನಿಸುತ್ತವೆ ಮತ್ತು ವಿರುದ್ಧವಾಗಿ ನಿಲ್ಲಲಾದಿದ್ದರೂ ದುಡಿದು ಬದುಕುತ್ತಿದ್ದೇವೆ ಎಂಬುದರ ಜೊತೆಗೆ ವಿರೋಧಿಸಲಾಗಲು ಆಗುತ್ತಿಲ್ಲ ಏಕೆಂದರೆ ನಾವಿಲ್ಲಿ ಕಲ್ಲು ಒಡೆಯುವವರು ಎಂಬ ಅಸಹಾಯಕತೆಯನ್ನು ಕವಿತೆ ತುಂಬಾ ಚನ್ನಾಗಿ ಕಟ್ಟಿಕೊಟ್ಟಿದೆ.
‘ಗಿಲ್ಲಿದಾಂಡು ಮೊಬೈಲ್ ನ ದಂಡು’ ಕವಿತೆ ಹೊಸಪೀಳಿಗೆ ಮಕ್ಕಳು ಆಟಗಳಿಂದ ವಂಚಿತರಾಗಿರುವ ರೀತಿಯನ್ನು ಹಾಗು ‘ಕಾಡ್ಗಿಚ್ಚು’ ಕವಿತೆಯು ಪಕ್ಷಿ ಸಂಕುಲ, ವನ್ಯ ಸಂಪತ್ತು, ಭೂ ಹಗರಣದ ಕುರಿತು ಮಾತಿಗಿಳಿಯುತ್ತದೆ.

ನಿನ್ನ ಮೇಲಿನ ಪ್ರೀತಿ ಈ ರೀತಿ ಅಪಾರವಾಗಿರುವಾಗ
ನೀನೇಕೆ ನನ್ನ ಪ್ರೀತಿಯ ತೊರೆದೆ ಗೆಳತಿ
ಪ್ರೀತಿಯನ್ನು ಮನಸಿನಿಂದ ಪ್ರೀತಿಸು, ಕ್ಷಣಿಕ ಆಸೆಯಿಂದಲ್ಲ….

‘ಹೆಜ್ಜೆ ಗುರುತು’ ಕವಿತೆಯಲ್ಲಿ ಕವಯತ್ರಿಯವರು ಪ್ರೇಮದ ಬಗ್ಗೆ ತನ್ನ ಗೆಳೆಯನನ್ನು ಮನದಲ್ಲಿರಿಸಿಕೊಂಡು ಗೆಳತಿಯ ಮೂಲಕ ತಿಳಿಸುವ ವಿಭಿನ್ನ ಪ್ರಯತ್ನವನ್ನು ಕೈಗೊಂಡಿದ್ದಾರೆ ಜೊತೆಗೆ ಮನದಲ್ಲೊಬ್ಬ ಮನಸೋರೆಗೊಂಡವನಿರುವ ಕುರಿತು ಸುಳಿವನ್ನೂ ನೀಡುತ್ತಾರೆ. ಮುಂದುವರೆದು..
‘ಯಾರಿಗೆಂದು ಕೊಡಲಿ ನಾ ಈ ಹೃದಯ..’
ಕವಿತೆಯಲಿ

ಬಣ್ಣ ಬಣ್ಣದ ವೇಷ ಧರಿಸಿ
ಕಂಡ ಕಂಡವರನ್ನು ಮೋಹಿಸಿ
ಉಂಡು ಭಂಡರಂತೆ ತಿರುಗುವ
ಕಾಮ ರಾಲ್ಷಸರ ಈ ಜಗದಲ್ಲಿ
ಯಾರಿಗೆಂದು ಕೊಡಲಿ ನಾ ಈ ಹೃದಯ…

ಎಂಬ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳುವ ಮೂಲಕ ಹುಡುಗಿಯರು ಪ್ರೀತಿಸುವ ಮೊದಲು ಯೋಚಿಸುವ ರೀತಿಯನ್ನು ತಮ್ಮದೇ ಮನದ ಗೊಂದಲಗಳ ಮೂಲಕ ನಮ್ಮ ಮುಂದಿಡುತ್ತಾರೆ.

‘ರೈತನ ಪ್ರಾಣ ರಾಜಕೀಯ ಗಾನ..’
ಕವಿತೆಯು ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮೊಸಳೆಗಳಿಗೆ, ನರಿಗಳಿಗೆ ಹೋಲಿಸಿ
ರೈತನ ಬದುಕನ್ನು ಅವನು ಬದುಕುತ್ತಿರುವ ರೀತಿಯನ್ನು ಪಡುತ್ತಿರುವ ಕಷ್ಟವನ್ನು ಕವಿತೆಯ ಗುಂಡಿನ ಮೂಲಕ ಎದೆಗೆ ತಾಕುತ್ತಾರೆ. ಹೀಗೆ ಹಲವಾರು ರೀತಿಯ ವಿಭಿನ್ನವಾದ ಗುಂಡುಗಳನ್ನು ಮೈದುಂಬಿಕೊಂಡು ಲೋಡ್ ಆಗಿರುವ ಬಂದೂಕನ್ನು ತಮ್ಮ ಕೈಲಿ ಹಿಡಿದುಕೊಂಡು ನಮ್ಮ ಕೈಗಿಟ್ಟು ಗುಂಡು ಹೊಡೆಯಬೇಕೊ ಬೇಡವೋ ಅನ್ನೊ ಕೊನೆಯ ಪ್ರಶ್ನೆಗೆ ಉತ್ತರವನ್ನು ಓದುಗರಿಂದಲೇ ನಿರಿಕ್ಷಿಸುವಂತೆ ನಮ್ಮೆದುರು ನಿಲ್ಲುತ್ತಾರೆ..

ಬಂದೂಕನ್ನು ಕೈಗೆತ್ತಿಕೊಂಡರೆ ಪ್ರೇಮದ ಗುಂಡುಗಳು, ನೋವಿನ ಗುಂಡುಗಳು, ಎಚ್ಚರಿಕೆಯ ಗುಂಡುಗಳು, ಹೋರಾಟಕ್ಕೆ ಅಣಿಯಾಗುವ ಗಟ್ಟಿ ಗುಂಡುಗಳು, ಸಾವಿಗೂ ಹೆದರದ ಬದುಕಿನ ಗುಂಡುಗಳು ತಾಕುತ್ತಲೇ ಇರುತ್ತವೆ. ಇವರ ಸಾಹಿತ್ಯಿಕ ಬಂದೂಕಿನಲ್ಲಿ ಮತ್ತಷ್ಟು ಮತ್ತಷ್ಟು ಹಿತವಾದ ಗುಂಡುಗಳು ಸಿಡಿಗುಂಡುಗಳು ಕವಿತೆಗಳು ನಮ್ಮೆದೆಗೆ ಹಾರಿ ಬರಲಿ ಸಾಹಿತ್ಯಿಕ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟುಮಾಡಲಿ ಎಂದು ಆಶಿಸುವೆ. ಬದುಕಿನ, ಪ್ರೀತಿಯ, ಸಮಾಜದ ಏಳುಬೀಳುಗಳ, ಭ್ರಷ್ಟರ, ರಾಜಕಾರಣಿಗಳ, ಕಾಮುಕರ, ಮೋಸಗಾರರ, ಕಷ್ಟಗಳ ಜೊತೆಗೆ ಯುದ್ಧಕ್ಕಿಳಿಯುವವರು ಒಮ್ಮೆ ಈ “ಬಂದೂಕು ಹಿಡಿದ ಕೈಗಳ”ನ್ನು ಓದಿಕೊಳ್ಳಿ ಮತ್ತು ಕವಯಿತ್ರಿಯವರ ಮೊದಲ ಹೆಜ್ಜೆಗೆ ಹರಸಿ ಹಾರೈಸಿ ಪ್ರೋತ್ಸಾಹಿಸಿ..

ಕವನಸಂಕಲನದ ಪ್ರತಿಗಳಿಗಾಗಿ ಸಂಪರ್ಕಿಸಿ:
ಅಂಬೆ ಪ್ರಕಾಶನ
ಚಪ್ಪರದಹಳ್ಳಿ, ೨೮ ನೇ ವಾರ್ಡ, ಹೊಸಪೇಟೆ.
ದೂರವಾಣಿ ೮೧೪೭೪೭೦೦೧೪.

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ದೊಡ್ಡಕಲ್ಲಹಳ್ಳಿ ನಾರಾಯಣಪ್ಪ
ದೊಡ್ಡಕಲ್ಲಹಳ್ಳಿ ನಾರಾಯಣಪ್ಪ
5 years ago

ಕೃತಿಯನ್ನು ಓದುವಂತೆ ಒತ್ತಾಯಿಸುತ್ತದೆ ಲೇಖನ.

1
0
Would love your thoughts, please comment.x
()
x