ಬಂಡಿ ಯಲ್ಲವ್ವ: ಭೀಮಣ್ಣ ಮಾದೆ

ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ ಹರಕೆ ಸುರುವಾಗಿದ್ದು ಆನೆಯನ್ನ ಹೋಲುತ್ತಿದ್ದ ದೊಡ್ಡಮಗ ಲಚಮನಿಗೆ ಕಜ್ಜಿ ಗಾಯ ಜಾಸ್ತಿಯಾಗಿ ಊರು ಬ್ಯಾಡರ ಬಸ್ಯಾನ ಕಾಲಿಡಿದು ಬಂಡಿ ಬಿಡಿಸಿಕೊಂಡು ಕಲಬುರಗಿ, ರಾಯಚೂರು, ಗದ್ವಾಲಿನ ಗಿಡಮೂಲಿಕೆಯ ಪಂಡಿತರಿಂದ ತೋರಿಸಿದರು. ಗುಣಮುಖವಾಗದ್ದು ಹನುಮಂತನ ಚಿಂತೆ ಜಾಸ್ತಿ ಮಾಡಿತ್ತು. ಅದಾಗಲೇ ಸವದತ್ತಿಯ ಯಲ್ಲವ್ವನ ಬೆಟ್ಟಕ್ಕೋಗಿ ಗಂಡು ಜೋಗಮ್ಮನಾಗಿ ಬಂದು ಊರಿನ ಮಂದಿಗೆ ದೇವರೇಳಿದ್ದ ಜೋಗುತಿಯ ಕಿವಿಗೆ ಗುಣಮುಖವಾಗದ ಸುದ್ದಿ ಬಿದ್ದು ಭಕ್ತನ ಮೂಲಕ ಹನುಮಂತನನ್ನು ಕರೆಯಿಸಿದಳು “ಕುಂತಗಪ್ಪ ಹನುಮಂತ ನಿನ್ನ ಕಷ್ಟ ಎಲ್ಲ ನನಗ ಗೊತ್ತಯಿತಿ” ದಿವ್ಯದೃಷ್ಟಿಯಲಿ ಕಂಡವಳಂತೆ ಹೇಳಿದಳು.

ಹನುಮಂತ ತಲೆ ಅಲ್ಲಾಡಿಸಿ ಯಲ್ಲವ್ವನಿಗೆ ಕೈ ಮುಗಿದು ಜೋಗುತಿಯಿಂದ ಸ್ವಲ್ಪ ದೂರದಲ್ಲಿ ಕುಳಿತನು. ಬಿಕ್ಕುಗಳ ಸೂಚನೆಯ ಮೂಲಕ ಯಲ್ಲವ್ವ ಜೋಗುತಿಯ ಮೈ ಮೇಲೆ ಬಂದು ಕುಣಿಯ ಹತ್ತಿದಳು. ಬಿಕ್ಕುಗಳ ಮೂಲಕ ಸೂಚನೆಯರಿತ ಹನುಮಂತನು ಅದಾಗಲೇ ಎದ್ದು ಕೈ ಮುಗಿದು ದೈನ್ಯೆ ಸ್ಥಿತಿಯಲ್ಲಿ ನಿಂತಿದ್ದ. ಎಲ್ಲರು ರೆಪ್ಪೆ ಬಡಿಯದೇ ಅವಳನ್ನೆ ನೋಡುತ್ತಿದ್ದರು. ಜೋಗುತಿಯು ” ಕುದುರೆ ಹೇಳತದ ಕೇಳು” ಎಂದಳು ಇನ್ನು ದೈನ್ಯ ಭಾವದಿಂದ “ಹೇಳು ತಾಯಿ” ಎಂದ “ಮಗನೇ ಹೋಗು ನಿನ್ನ ಲಚಮನ ಕರಕೊಂಡು ನಾಕು ಮಂಗಳವಾರ ನನಗ ನೆಡಕ ಎಲ್ಲ ಸರಿ ಹೋಗುತದ” ಎಂದಳು ಊರಿನ ಜನ ಭಂಡಾರವನ್ನು ಜೋಗುತಿಯ ಹಣಿಗಿ ಹಚ್ಚಿದ ಕ್ಷಣದಲ್ಲಿ ಭಂಡಾರದ ಪ್ರಭಾವವೆಂಬಂತೆ ಸಾಮಾನ್ಯ ಸ್ಥಿತಿಗೆ ಬಂದಳು. ಹನುಮಂತ ಜೇಬಿನಿಂದ ಬಿಡಿಗಾಸು ತೆಗೆದು ಯಲ್ಲವ್ವನ ಮುಂದಿಟ್ಟು ಕೈ ಮುಗಿದು ಗುಡಿಸಲಿನ ಕಡೆಗೆ ಹೆಜ್ಜೆ ಹಾಕಿದ. ಹೊನ್ನವ್ವ ತೊಡೆಯ ಸಂದಿಯಲಿ ಮಗನ ಮುಖವಿಟ್ಟುಕೊಂಡು ಬಗ್ಗಿಸಿ ಗೊಣಗುತ್ತ ಮಗನ ಹೇಸಿಗೆ ತೊಳಿಯುತ್ತಿದ್ದಳು. ಲಚಮ ಮನೆಯ ಮೂಲೆಯಲ್ಲಿ ಗಾಯವನ್ನು ತುರಿಸಿಕೊಳ್ಳುತ್ತ ನರಳುತ್ತಿದ್ದ. ಸೀದಾ ಹೋದವನೆ ಅವನ ಹಾಸಿಗೆ ಹತ್ತಿರ ಕುಳಿತು ಸೂಗುರೆಡ್ಡೆಪ್ಪ ಸಾಹುಕಾರನಿಂದ ಬೈಗುಳ ಬೈಸಿಕೊಂಡು ತಂದ ರಟ್ಟಿನಿಂದ ಗಾಯಕ್ಕೆ ಗಾಳಿ ಬೀಸಿದ ಮೇಲೆ ಹುರಿ ಕಡಿಮೆಯಾದವನಂತೆ ನರಳಿಕೆಯನ್ನು ಕಡಿಮೆ ಮಾಡಿದ ಲಚಮ. ಹೇಸಿಗೆ ತೊಳೆದ ಮಗನನ್ನು ಎಳೆದುಕೊಂಡು ಗೊಣಗುತ್ತ ಒಳಬಂದ ಹೊನ್ನವ್ವಳಿಗೆ ಜೋಗುತಿಯ ಹೇಳಿದ್ದನ್ನೆಲ್ಲವನ್ನ ಹೇಳಿ ” ನಾಳೆ ಲಚಮನ ಕರೆದುಕೊಂಡು ಬಂಡಿ ಯಲ್ಲವ್ವನ ಗುಡಿಗೋಗಿ ಕೋಣಗರವ ವರ್ಷ ಬಲಿ ಕೊಡುತ್ತೇನೆಂದು ಬೇಡಿಕೊಂಡು ಬಾ” ಎಂದೇಳಿದನು. ಹೊನ್ನವ್ವ ” ಆಯ್ತು ಅಂತೇಳು ಲಚಮ” {ಗಂಡನನ್ನು ಮಗನ ಹೆಸರಿನ ಮೂಲಕ ಸಂಭೋದಿಸುತ್ತಿದ್ದಳು} ಎಂದು ತಲೆ ಅಲ್ಲಾಡಿಸಿದಳು.

ಮುಂಜಾನೆಯಿಂದ ಊಟನೇ ಮಾಡಿಲ್ಲ ಊಟಕ್ಕೆ ಬರುವಂತೆ ಕರೆದಳು ಹನುಮಂತ ಲಚಮನನ್ನು ಎಬ್ಬಿಸಿ ಕುಳಿಸಿ ಅಲ್ಲಿಗೆ ರೊಟ್ಟಿ ತರುವಂತೇಳಿದ ಸಜ್ಜೆರೊಟ್ಟಿ, ಪುಂಡೆಪಲ್ಲೆ, ಶೇಂಗಿನಕಾರವನ್ನು ತಂದು ಹನುಮಂತನ ಮುಂದಿಟ್ಟಿದ್ದೇ ತಡ ಮಕ್ಕಳು ಹನುಮಂತನ ಗಂಗಳದಲ್ಲಿ ಕೈ ಹಾಕಿ ರೊಟ್ಟಿಗಿಂತ ಜಗ್ಗಿಪುಂಡೆಪಲ್ಲೆಯನ್ನೆ ತಿಂದು ಕಾಲಿ ಮಾಡಿದವು. ಲಚಮ ಒಂದು ಕೈಯಿಂದ ಕಜ್ಜಿ ಕೆರಕೊಂಡು ಇನ್ನೊಂದು ಕೈಯಿಂದ ಮೂರು ಚೂರು ರೊಟ್ಟಿಗೆ ಸಾಕು ಮಾಡಿ ಕುಳತಲ್ಲಿಯೇ ನೆಲಕ್ಕ ಉರುಳಿದ. ಹಸಿವಿದ್ದರು ಹನುಮಂತ ಮಗನ ಕಷ್ಟ ನೋಡದೆ ಅರ್ಧಕ್ಕೆ ಗಂಗಳದಾಗ ಕೈ ತೊಳೆದು ಲಚಮನ ಬಗಲಲ್ಲಿಯೇ ಕಂಬಕ್ಕೊರಗಿದ. ಹನುಮಂತನ ತಲೆಯನ್ನು ಯಾವತ್ತೋ ಲಚಮನ ಕಜ್ಜಿಹುಳು ಮೇಯಲು ಸುರುವಿಟ್ಟುಕೊಂಡಿತ್ತು. ಮೂರು ದಿನದಿಂದ ಗೌಡರಿಗೂ ಮಾರಿ ತೋರಿಸಿಲ್ಲ.ಅದೇನೂ ಬೈಯತಾನೊ, ಲಚಮವ್ವನಿಗೆ ಹಾಳ್ ಹೊಟ್ಟೆಗಿರೊದನ್ನ ಅವರ ಮನೀ ಬಡತನನೇ ಸಣ್ಣವರಿದ್ದಾಗ ಕಲಿಸಿತ್ತು ಅದನ್ನ ಇಲ್ಲಿ ಮುಂದುವರಿಸೋದಕ್ಕ ಅಷ್ಟ್ ಕಷ್ಟ ಆಗಲಿಲ್ಲ. ಬರೀ ಹೊಟ್ಯಾಗ ಇರದೊರಿಂದ ಗೊಡ್ಡು ಮಲೀಗಿ ಚಿಕ್ಕವನನ್ನು ಹಾಕ್ಕೊಂಡು ಕುಳಿತಲ್ಲಿಯೇ ತೂಕಡಿಸುತ್ತಿದ್ದಳು. ಹಗಲೆಲ್ಲ ಮೈ ಮುರಿದು ದುಡಿದ ಮಂದಿ ಆಯಾಸನ್ನು ಅರಗಿಸಿಕೊಳ್ಳಲು ಊರ ಹನುಮಂತನಗುಡಿ, ಮಾರೆಮ್ಮನಗುಡಿ ಅಂಗಳದಲ್ಲಿ ಗಾಳಿಗೆ ಮೈಯೊಡ್ಡಿ ಪೈಪೋಟಿಗೆ ಬಿದ್ದವರಂತೆ ಗೊರಕೆ ಸುರುವಿಟ್ಟುಕೊಂಡಿದ್ದರು. ಊರಿನ ಬೆನ್ನಿಗಿದ್ದ ಗುಡ್ಡ ಕತ್ತಲೆಯ ನಿಶ್ಯಬ್ದದತೆಯನು ಸೀಳಿಕೊಂಡು ಬರುತ್ತಿದ್ದ ನರಿಗಳ ಕೂಗು ಮಕ್ಕಳ ಚೊಣ್ಣವನು ತೋಯಿಸಿ ಬಿಡುತ್ತಿತ್ತು. ಕುರುಚಲು ಜಾಲಿ, ಜೀರುಂಡೆ ಕತ್ತಲೆಯನು ದಟ್ಟವಾಗಿಸುತ್ತ ನಡೆದಿತ್ತು. ಮಗು ಲಚಮವ್ವನ ಮೊಲೆಯಿಂದ ಬಾಯಿ ತೆಗೆಯದೇ ನಿದ್ದೆಗೆ ಜಾರಿ ಮೂತ್ರಶಯ ತುಂಬಿಸಿಕೊಂಡು ತೊಟ್ಟಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಹನುಮಕ್ಕನ ಹುಂಜದ ಕೂಗು, ಊರು ಮುಲ್ಲಾ ಸಾಬನ ಅಜಾ ಲಚಮವ್ವನ ಕಿವಿಗೆ ಬಿದ್ದು ಎಚ್ಚರಗೊಂಡು ಮಗನನ್ನು ನೆಲಕ್ಕಾಕಿ ಮಲಗಿಸಿ, ಕಸಬಳಿದು ಕಬ್ಬೇರು ಮನೆಗೋಗಿ ಹೆಂಡೆ ತಂದು ಮನೆ ಸಾರಿಸಿಕೊಳ್ಳುವಷ್ಟರಲ್ಲಿ ಪೂರ್ವದಲಿ ಸೂರಪ್ಪ ನಾಚಿಕೊಳ್ಳುವವನಂತೆ ನುಲಿಯುತ್ತ ಮೇಲೆ ಬರತೊಡಗಿದ್ದ. ಲಚಮನನ್ನು ಹೆಬ್ಬಿಸಿ ಮೈ ತೊಳಿಸಿ ಬಗಲಿಗೇರಿಸಿಕೊಂಡು ಎಣ್ಣೆ ತಗೊಂಡು ಊರಾಚೆಯ ಬಂಡಿ ಎಲ್ಲವ್ವನ ಗುಡಿಯ ಪಾದದ ಕಟ್ಟೆಗೆ ಹಣೆಯೂರಿ ನಮಸ್ಕರಿಸಿ ಲಚಮನ ಕಜ್ಜಿ ಕಡಿಮೆಯಾದರೆ ಕೋಣಗರವ ಬಲಿಕೊಡುತ್ತೇನೆಂದು ಬೇಡಿಕೊಂಡು ಭಂಡಾರವನ್ನು ಚಿಟ್ಟಿಗಾಕಿಕೊಂಡು ಬಂದಳು. ಜೋಗುತಿ ಹೇಳಿದಂಗ ಮನೆಯ ಮುಂದಿನ ಮರದ ಬೇವಿನ ಎಲೆಗಳನು ಬಿಸಿ ನೀರಿಗಾಕಿ ಲಚಮನ ಮೇಲೆ ಸುರಿದಾಗ ಅವನು ನಿಂತಲ್ಲಿಯೇ ಕುಣಿಯುತ್ತಿದ್ದ ಮೂರು ನಾಲ್ಕು ದಿನ ಹಿಂಗೆ ಮಾಡಲು ಕ್ರಮೇಣ ಕಜ್ಜಿಗಾಯ ಲಚಮನ ಮೈಯಿಂದ ದೂರವಾಗುತ್ತಿದದ್ದನ್ನು ಕಂಡ ಹನುಮಂತನ ಮೊಗವರಳಿ ಯಲ್ಲವ್ವ ದೊಡ್ಡಾಕಿ ಎಂದು ನಿಂತಲ್ಲಿಯೇ ಕೈ ಮುಗಿದ. ವರ್ಷ ಕೋಣಗರವ ಬಲಿ ಕೊಡುವುದಾಗಿ ಮನಸ್ಸಿನಲ್ಲಿಯೇ ಬೇಡಿಕೊಂಡಿದ್ದ. ಆವಾಗಿನಿಂದ ಗೌಡರಿಂದಿಡಿದು ಊರಿನ ಜನರಿಗೆ ಎಲ್ಲವ್ವ, ಜೋಗುತಿ ಮೇಲೆ ಅಪಾರವಾದ ಭಕ್ತಿ, ಭಯ ಹುಟ್ಟಿಕೊಂಡಿದ್ದು. ಈ ಹರಕೆ ಅವನನ್ನು ಶಾಶ್ವತ ಜೀತಗಾರನ್ನಾಗಿಸಿ ಬಿಟ್ಟಿತ್ತು ಎನ್ನುವುದು ಅವನ ಅರಿವಿಗೆ ಬರಲೇಯಿಲ್ಲ. ಈ ಊರಿನ ಯಲ್ಲವ್ವನ ಅವಿಷ್ಕಾರ ವಿಶಿಷ್ಟವಾದುದಂತೆ ಒಂದು ಸಾರಿ ಬೇಡರ ಸಿದ್ಧನು ನಿಸರ್ಗಕ್ರಿಯೆಗೆ ತುರ್ತಾಗಿ ಹಳ್ಳದ ದಂಡೆಗೋಗಿ ಸಂಕಟ ತೀರಿಸಿಕೊಂಡು ಮನೆಗೆ ಬಂದಾಗ ಗುಪ್ತಾಂಗಗಳು ಊದುಕೊಂಡಿದನ್ನು ಕಂಡು ಭಯಬೀತನಾಗಿ ಮನೆಯಿಂದ ಹೆಜ್ಜೆಯೇ ಕಿತ್ತದಿದ್ದಾಗ ಊರಿನಲ್ಲಿ ಗುಸು ಗುಸು ಸುರುವಾಗಿ ಊರಿನಲ್ಲಿಯೇ ಠಿಕಾಣಿ ಹೂಡಿದ್ದ ಮಂತ್ರ ಮಾಡುವವನನ್ನ ಕರೆಯಿಸಿದಾಗ. ಮಂತ್ರವಾದಿಯು ಸಿದ್ದನನ್ನು ಪರಿಕ್ಷ್ಯಿಸಿ ” ಕವಡೆಯನು ನೆಲಕ್ಕಾಕಿ ಕಣ್ಣುಮುಚ್ಚಿ ಅದೇನನ್ನೊ ಗೊಣಗುತ್ತ. ಈ ಊರಿನಲ್ಲಿ ನೆಲದಲ್ಲಿ ಹೂತು ಹೋದ ಎಲ್ಲವ್ವನ ಗುಡಿಯಿದೆ ಅದರ ಹತ್ತಿರದಲ್ಲಿಯೇ ಸಿದ್ದ ಬಾದೆತೀರಿಸಿಕೊಂಡಿದ್ದರಿಂದ ತಾಯಿ ಕೋಪಿಸಿಕೊಂಡಿದ್ದಾಳೆ ” ಎಂದನು ಊರಿನ ಜನರೆಲ್ಲ ಕೈ ಜೋಡಿಸಿ ನಡುಗ ಹತ್ತಿದ್ದರು. ಮಂತ್ರವಾದಿ ಹೊಳಿ ಕಡಿಗಿ ತುರುವು ಓಡಿದ ಅವನನ್ನು ಊರಿನ ಜನ ಮಂತ್ರಮುಗ್ಧರಂತೆ ಹಿಂಬಾಲಿಸಿದರು.

ಮಂತ್ರವಾದಿ ಒಂದು ಮರದ ಹತ್ತಿರ ಮಣ್ಣನ್ನು ಕೆದರಿದನು. ನೆಲಕ್ಕೆ ನಮಸ್ಕರಿಸಿ ಹೊರಟು ಹೋದ ಹಳೆ ಪಾಳು ಬಿದ್ದ ಮನೆಯನ್ನು ಕುಂಕುಮ ಅರಿಶಿಣದಿಂದ ಸಿಂಗಾರ ಮಾಡಿಕೊಂಡ ಬೇವಿನ ಮರ ಸೀಳಿಕೊಂಡು ಮ್ಯಾಕ ಬಂದಿತ್ತು. ಊರಿನ ಜನರಿಂದ ಪಟ್ಟಿಎತ್ತಿ ಆಗ ತಾನೇ ಲಿಂಗಸೂರಿನಿಂದ ಊರಿಗೆ ಬಂದಿದ್ದ ವಡ್ಡರ ಭೀಮಣ್ಣನ ಬೀಗ ಸಣ್ಣ ಹನುಮಂತ ಮರಾಮುರಿ ಆಳುಗಳಾದ ಕಬ್ಬೇರು ನಾಗಪ್ಪ, ಮಲ್ಲಪ್ಪನನ್ನು ಕರಕೊಂಡು ಮಲ್ಕಂದಿನ್ನಿಯಿಂದ ಹಾಳ್ಮಣ್ ತಂದು ಒಂದೇ ವಾರದಾಗ ಗುಡಿ ಮುಗಿಸಿದ್ದ, ಅದಕ್ಕ ಪ್ರತಿಫಲ ಅಂಬೊಂಗ ಲಿಂಗಸೂರಿನ ಸಣ್ಣ ಹನುಮಗ ಗುಡಿಸಿಲಿ ಹಾಕೊಂಡು ಇರೋಕ ಗೌಡ ಜಾಗ ಕೊಟ್ಟಿದ್ದ, ಬ್ಯಾಡರ ಸಾಬಯ್ಯ ದಿನ ಒಂದು ಕಟ್ಟು ಸೌನಂಬರ್ ಬೀಡಿಗೆ ಗುಡಿಗೆ ನಿರೋಡಿಯಾಕ ಒಪ್ಪಕೊಂಡ. ಊರಿನ ಪೇಟಿ ಮಾಸ್ತರ ಹನುಮಂತ್ರಾಯ, ವಡ್ಡರ ತಿಮ್ಮಯ್ಯ, ಕಂಬಾರು ಗೂಳಪ್ಪ ದೇವದುರ್ಗದ ಎಂಎಲ್ಎ ಶಿವಣ್ಣನ ಬೆನ್ನುಬಿದ್ದು ಮೈಕುತಂದು ಹಗಲು ರಾತ್ರಿ ಭಜನೀ ಮಾಡಕತ್ತಿದರು. ಹೀಗೆ ಅವಿಷ್ಕಾರಗೊಂಡ ಯಲ್ಲವ್ವ ಅರಿವೆಗೆ ಬರದಾಂಗ ಅದೇಷ್ಟೊ ಜನರನ್ನು ಜೀತಕ್ಕಚ್ಚಿದಲು. ಅದ್ಯಾಕೋ ಆ ವರ್ಷ ಮಳೀನೇ ಇಲ್ಲದಂಗಾಗಿ ಊರಿನ ಜನ ಎಲ್ಲಾ ಬೆಂಗಳೂರು, ಪುಣೆ ಅಂತ ಗುಳೆ ಹೊಗಕತ್ತಿದರು. ಗೌಡರ ಮನ್ಯಾಗಿನ ತಂಗಳು ರೊಟ್ಟಿ ಅಳಿಸಿದ ಅನ್ನ ಹನುಮಂತನಿಗೆ ಬರಗಾಲನ ನೆಪ್ಪು ಮಾಡದಂಗ ಮಾಡಿದ್ರೂನು ಬೆಂಗಳೂರಿನ್ಯಾಗ ದುಡ್ಯಾಕಂತ ಹೋಗಿ ಸಾಲಿ ಕಲಿತು ಒಂದಂದು ಕಸಬು ಮಾಡತಿದ್ದ ಅವರ ದೊಡ್ಡಪ್ಪನ ಮೊಮ್ಮಕ್ಕಳಂಗ ನನ್ನ ಮಕ್ಕಳನು ಓದಸ್ಬೇಕು ಅನ್ನೋ ಆಸೆ ಕೈಬೀಸಿ ಕರೆದಿತ್ತು. ಗುಡ್ಡದಾಗ ಏಕ್ದಮ್ಲೆ ನಡರಾತ್ರಿನೇ ಡಮ್, ಡಮ್ ಅನ್ನೋ ಸಬ್ಧ ಊರಿನ ಜನರನ್ನ ನಿದ್ದೀ ಮಾಡಕ ಬಿಡಲಿಲ್ಲ. ಊರು ಗುಡ್ಡಕ್ಕ ಓದಿರೋ ಕಳ್ಳರು ಬಂದರನ್ನ ವಿಷ್ಯಾ ಮುಂಜಾನೆ ಬೀಡಿ ಸೆದೋಕೆ ಬಂದಿದ್ದ ಪೊಲೀಸಪ್ನಿಂದ ಗೊತ್ತಾತು.

ಸ್ವಲ್ಪ ದಿನ ಹೆಣ್ಮಕ್ಳು ತಂಬಿಗೆತಗೊಂಡು ಹೋಗಾಕ ಅಂಜತಿದ್ರು. ಕಜ್ಜಿ ಕಡಿಮೆಯಾದ ಮ್ಯಾಲ ಲಚಮ ತುಂಬಾ ಚುರುಕಾಗಿದ್ದ, ದೋಸ್ತರನ್ನ ಕರಕೊಂಡು ಗುಡ್ಡ ಗುಡ್ಡ ಸುತ್ತಾಡಿ ಮರವನ್ನತ್ತಿ ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ದಿನಕ್ಕೊಂದು ಜಗಳ ತರೊದರಿಂದ ಜಾತಿಎತ್ತಿ ಬಯ್ಯುತ್ತಿದದ್ದು ಹನುಮಂತನನ್ನ ಚಿಂತೆಗೀಡು ಮಾಡಿತ್ತು. ಲಚಮನ ಸಾಲಿಕಾಕೋ ನಿರ್ಧಾರ ಕೈಗೊಂಡನು. ಶಾಲೆಗಾಕುವ ವಿಷಯವನ್ನು ಹನುಮಂತ ಗೌಡರ ಮುಂದಿರಿಸುತ್ತಾ “ಎಪ್ಪಾ ಲಚಮನ್ನ ಸಾಲಿಗಾಕಬೇಕು ಅನಕೊಂಡಿನಿ, ಇಲ್ಲಾ ಬೆಂಗಳೂರಿಗೆ ದುಡ್ಯಾಕ ಹೋತೀನಿ ” ಅಂದ ಗೌಡ ” ನಿಮ್ಮವ್ವನ ಹೊಲಸು ಕುಲ ನಿಮಗ್ಯಾಕ ಬೇಕಲೆ ಸಾಲಿ, ನಿನಗೂ ವಯಸ್ಸಾತು ಲಚಮನ ಜೀತಕ್ಕ ಕಳಿಸು” ಎಂದ ಕುಕ್ಕರ ಕಾಲಿನಿಂದ ಕೈ ಜೋಡಿಸಿ ಕುಳಿತಿದ್ದ ಹನುಮಂತ ಮಾತನಾಡದೇ ಎದ್ದು ಹೊಳಿದಂಡಿಯ ಅವ್ವನ ಕಡೆ ನಡೆದ. ಮನೆಗೊಗಾಕ ಮನಸ್ಸಿಲ್ದ ಹೊಳಿ ದಂಡಿ ಮ್ಯಾಗನೇ ಪೇಟಿ ಮಾಸ್ತರನ ಧ್ವನೀಗಿ ಕೀವಿಯಾದ. ರಾತ್ರಿಯಾದರು ಮನೆಗೆ ಗಂಡ ಮನೆಗೆ ಬರದಿದ್ದರಿಂದ ಹೊನ್ನವ್ವ ಮಕ್ಕಳ ಎತ್ತಿಕೊಂಡು ಗೌಡರ ಮನೆಗೆ ಬಂದಳು ದೂರದಿಂದಲೆ ಹೊನ್ನವ್ವನ ಗಮನಿಸಿದ ಗೌಡರ ನಾಯಿ ಬೊಗಳಿಕೆಗೆ ದನ, ಎಮ್ಮೆಗಳೆಲ್ಲ ಬೆದರಿದವು ಹೊನ್ನವ್ವ ” ಎಪ್ಪಾ ಎಪ್ಪಾ ” ಎಂದು ಕೂಗಿದಳು ಆಗತಾನೆ ಉಂಡು ಕುಂತಿದ್ದ ಗೌಡ ಯಾರದು ಎಂದು ಗಟ್ಟಿ ಧನಿಯಾಗ ಕೇಳಿದ ಪ್ರತ್ಯುತ್ತರ ಎಂಬಂತೆ ನಾನು ಧಣಿ ಹೊನ್ನವ್ವ ಎಂದಳು ” ಏನು ಹೊನ್ನವ್ವ ಎಂದ ” ಲಚಮನ ಅಪ್ಪ ಮನೆಗೆ ಬಂದಿಲ್ಲ ಎಂದು ಮಾತು ಮುಗಿಸುವಷ್ಟರಲ್ಲಿ ಅವನು ಎಲ್ಲಿ ಹಾಳಾಗ ಹೋದನು ಬೆಳಿಗ್ಗೆಯಿಂದ ಹೆಂಡೆನೂ ಹಂಗೆಯಿದೆ ನಿಮಗೆಲ್ಲ ಸೊಕ್ಕು ಬಂದಾದ ಸಣ್ಣ ಕುಲ. ಎಂದ ಹೊನ್ನವ್ವ ಮರುಮಾತನಾಡದೆ ಮಕ್ಕಳನ್ನು ಕರೆದುಕೊಂಡು ಎಲ್ಲ ಕಡೆ ಹುಡುಕಿದಳು. ಭಜನೀ ಮುಗಿಸಿಕೊಂಡ ಮನೆಕಡೀ ಹೋಗತಿದ್ದ, ವಡ್ಡರ ತಿಮ್ಮಯ್ಯನ್ನ ಕೇಳಿದಾಗ ನಾನು ನೋಡಿಲ್ಲ ಎನ್ನೊ ಉತ್ತರಬಂತು. ಹುಡುಕಿ, ಹುಡುಕಿ ಸುಸ್ತಾಗಿ ಕೊನೆಗೆ ಹೊಳಿ ದಂಡಿಯಿಡದು ಹೊರಟಳು ದೂರದಲ್ಲಿ ಹನುಮಂತ ಮಲಗಿರೋದು ಕಂಡು ನಿಟ್ಟುಸಿರು ಬಿಟ್ಟಳು. ಮಕ್ಕಳು ಅಪ್ಪನನ್ನು ಹೆಬ್ಬಿಸಿದವು. ಮನೆಗೆ ಬಂದು ಎಲ್ಲಾ ವಿಚಾರವನ್ನು ಹೇಳಿದ. ಅದಕ್ಕೆ ಲಚಮವ್ವ ನಮಗ್ಯಾಕ್ ಬೇಕು ಸಾಲಿ ನಮ್ಮಂಗ ಜೀತ ಮಾಡಕೊಂಡು ಉಣತಾವ ಬಿಡು ಅಂದಳು, ಅದಕ್ಕೆ ಹನುಂತ ಲಚಮವ್ವನ ಜೊತೆ ಮಾತಡೊದನ್ನೆ ಬಿಟ್ಟು. ಎರಡು ದಿನ ಕತ್ತಲೆಗೆ ಆಶ್ರಯ ನೀಡಿದ್ದ ಗುಡಿಸಲ ಮೂಲೆಯಲ್ಲಿಯೇ ಮಲಗಿಬಿಟ್ಟಿದ್ದ ಅವನ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಗಿರಕಿ ಹೊಡೆಯುತ್ತಿದ್ದವು.

ಗೌಡರ ತಾಯಿ ಎಲ್ಲಿ ಹಾಳಗೊದ್ರೊ ಸುವ್ವರ್ ಸೂಳೆ ಮಕ್ಕಳು ಹೆಂಡೆ ಹಂಗೆ ಅದೇ ಎಂದು ಗೊಣಗುತ್ತಿದನ್ನು ಕೇಳಿ ಗೌಡ ಊರಿನ ಚಪ್ಪರಾಸಿಯನು ಕಳಿಸಿ ಹನುಮಂತನನ್ನು ಕರೆಯಿಸಿ ” ಹನುಮ ಆಯ್ತು ನಿನ್ನ ಮಗನ್ನ ಸಾಲಿಗಾಕೊವಂತೆ ಆದರೆ ಒಂದು ಷರತ್ತು ಎಂದ” ಅದಕ್ಕೆ ಏನು ಧಣಿ ಅದು ಎಂದಾಗ ಸಣ್ಣವನೂ ನಿನ್ ಜೊತೆ ಜೀತ ಮಾಡಬೇಕು. ಎಂದಾಗ ಕಣ್ಣಿರಾಕಿ ಗೌಡರ ಕಾಲಿಗಿಬಿದ್ದು ಬಿಕ್ಕಿ ಬಿಕ್ಕಿ ಹತ್ತಿದ್ದ. ಇರಲಿ ನಾಳೆ ಪೇಟಿ ಮಾಸ್ತರನ ಕರಕೊಂಡು ಹೋಗಿ ಸರಕಾರಿ ಸಾಲಿಗೀ ಹೆಸರಚ್ಚಿ ಬಾ” ಹೊನ್ನವ್ವ ಲಚಮನ ಹರಕು ಚೊಣ್ಣದ ಮೇಲ ಉಡದಾರ ತಂದು ಕಟ್ಟಿಗೆಯಿಂದ ಪೋಟಿಕೊಟ್ಟು ಒಲೆಯಲ್ಲಿಯ ಬೂದಿಯನು ಮಾರಿಗಚ್ಚಿ ರೆಡಿ ಮಾಡಿದಳು. ಹನುಮಂತನು ರೆಡಿಯಾಗಿ ಲಚಮನ ಕರಕೊಂಡು ಪೇಟಿ ಮಾಸ್ತರನ ಮನೀಗಿ ಬಂದ ಅಷ್ಟೋತ್ತಿಗಾಗಲೇ ಪೇಟಿ ಮಾಸ್ತರ ರೆಡಿಯಾಗಿ ನಿಂತ್ತಿದ್ದ, ನಡಕೊಂಡು ಹೋಗಿ ಮಧ್ಯಾಹ್ನ ಸಾಲಿ ಮಾಸ್ತರನತ್ರ ಹೆಸರಚ್ಚೊವಾಗ ಪೇಟಿ ಮಾಸ್ತರ ಹನುಮಂತ ಲಚಮನ ಸಾಲಿಗಕಾಕ ಮಾಡಿದ ಸರ್ಕಸ್ಸನ್ನು ಹೇಳಿ ಹೆಸರಚ್ಚಿ ಬಂದಿದ್ದ. ಸಾಲಿಗೀ ಸೇರಿದ ನಾಲ್ಕೇ ದಿನದಲ್ಲಿ ದೂರದ ಮೈಸೂರಿನಿಂದ ಬಂದಿದ್ದ ನಕ್ಸಲ್ ಸಂಪರ್ಕದಲ್ಲಿದ್ದ ಶ್ಯಾಮಣ್ಣ ಮಾಸ್ತರಗ ಲಚಮ ತುಂಬಾ ಇಷ್ಟ ಆಗಿಬಿಟ್ಟಿದ್ದ. ಲಚಮ ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ, ಅವನು ಮಂತ್ರದಂತೆ ಮಗ್ಗಿಯನೇಳುತ್ತಿದ್ದರೆ ಹೊನ್ನವ್ವ ಕಣ್ಣು ಕಣ್ಣು ಬಿಟ್ಟು ಮಗನನು ನೋಡುತ ಕಣ್ಣಿರಾಕಿ ಬಿಡುತ್ತಿದ್ದಳು. ಶ್ಯಾಮಣ್ಣ ಮಾಸ್ತರ 8 ನೇ ತರಗತಿಯಿಂದಲೇ ಲಚಮನಿಗೆ ಕಾರ್ಲ್ಮಾಕ್ರ್ಸರನ್ನು ಪರಿಚಯ ಮಾಡಿಸುತ್ತ ಬಂದ ಕಾರಣ ಲಚಮ ಅಪ್ಪನನ್ನು ಉದ್ಧೇಶಿಸಿ ” ಅಪ್ಪ ನೀನು ನಗು ನಗುತಾ ಮುಳ್ಳು ಚುಚ್ಚಿಕೊಂಡು ಯೇಸು ಕ್ರಿಸ್ತನಾಗಿದ್ದೀಯ” ಅವರ ಪಾಲಿಗೆ ಅದು ನಿನಗೆ ಗೊತ್ತಾಗುತ್ತಿಲ್ಲ” ಎಂದೇಳಿದಾಗ ಏನು ತಿಳಿಯದೇ ರೆಪ್ಪೆ ಬಡಿಯದೇ ಮಗನನ್ನು ದಿಟ್ಟಿಸುತ್ತಿದ್ದ. ಲಚಮ ಊರಿನ ಜನರಿಗೆ ಸಹಾಯ ಮಾಡುತ್ತಿದ್ದ, ಎಲ್ಲವ್ವನ ಗುಡಿ ಹತ್ತಿರ ಲಚಮ ಮಾಕ್ರ್ಸನ ಸಿದ್ಧಾಂತವನ್ನು ಸರಳವಾಗಿ ಜನರಿಗೆ ಹೇಳಿತ್ತಿದ್ದ. ಗೌಡನೇ ದೇವರೆಂದುಕೊಂಡ ಅವರ ಅಪ್ಪನಿಗೆ ಸಿಟ್ಟು ನತ್ತಿಗೇರಿ ಲಚಮನನ್ನು ಮನಸ್ಸಿಗೆ ಬಂದಂಗ ಬಡಿದು ಗೌಡ ಮಾಡಿದ ಸಹಾಯವನ್ನು ಕಕ್ಕಿ ಬಿಟ್ಟಿದ್ದ. ಅಪ್ಪನ ಜೊತೆ ಸದಾ ಜಗಳಕ್ಕಿಳಿಯುತ್ತ ಜೀತಕ್ಕೊಗೊದು ಬೇಡ ಎಂದಾಗಲೂ ಪೆಟ್ಟುತಿಂದು. ” ಈ ಸೂಳೆ ಮಗನ್ ಸಾಲಿಗಾಕಿದ್ದು ತಪ್ಪಾಯ್ತು” ಎಂದು ಹೊನ್ನವ್ವನ ಡುಬ್ಬ ಮುರಿಯುತ್ತಿದ್ದ. ಲಚಮ ಬಗಲಿಗೊಂದು ಚೀಲವನೇರಿಸಿಕೊಂಡು ಆಗಾಗ ವಾರಗಟ್ಟಲೇ ಶ್ಯಾಮಣ್ಣ ಮಾಸ್ತರನೊಂದಿಗೆ ಕಾಣೆಯಾಗುತ್ತಿದ್ದ ಹನುಮಂತ ಕೇಳಿದರೆ ” ಸ್ನೇಹಿತರ ಮನೆಗೋಗುತ್ತೇನೆ ” ಎಂದಷ್ಟೇ ಹೇಳುತ್ತಿದ್ದ.

ಎಲ್ಲವ್ವನ ಗುಡಿಯತ್ರ ಇವನ ಮಾತುಗಳನ್ನೆ ಕೇಳಲೆಂದು ಗೌಡನ ಮಗಳು ಸಾವಿತ್ರಿ ಹುಡುಕಿಕೊಂಡು ಬರುತ್ತಿದ್ದಳು. ಹೀಗೆ ಅದು ಪ್ರೀತಿಗೆ ತಿರುಗಿ ಒಳಗೊಳಗೆ ಪಕ್ವವಾಗಿದ್ದು. ಊರಿನಲ್ಲಿ ಗುಸು ಗುಸು ಸುರುವಾಗಿ ಅಷಾಢದ ಗಾಳಿಯ ಜೊತೆ ಸೇರಿ ಗೌಡರ ಮನೆಯ ಪಡಸಾಲೆಯನು ತಲುಪಲು ತಡವಾಗಲಿಲ್ಲ. ಹನುಮಂತನ ವಿರುದ್ಧ ಎಂದೂ ಕೋಪ ಮಾಡಿಕೊಂಡಿರದ ಗೌಡ ಅಂದು ಏಕಏಕಿ ” ಈ ಹೇಸಿಗೆ ತಿನ್ನೋ ಸೂಳೆ ಮಕ್ಕಳನ ಚಪ್ಪಲಿ ಬಿಡೋ ಜಾಗದಲ್ಲಿಬಿಡಬೇಕಿತ್ತು ಸಲಿಗೆ ಕೊಟ್ಟಿದ್ದಕ್ಕೆ ನನ್ನ ತಲಿ ಮೇಲೆನೆ ಏತು ಬಿಟ್ಟಾರ ” ಎಂದು ಚಪ್ಪಲಿಯಿಂದ ಕೈ ಜೋಡಿಸಿ ನಡಗುತ್ತ ನಿಂತಿದ್ದ ಹನುಮಂತನಿಗೆ ದಪ ದಪ ಹೊಡೆದು ಬಿಟ್ಟ, ಒಂದು ಕಾಲದಲ್ಲಿ ಪಟ್ಟದ ಕೋಣವನ್ನು ಒಬ್ಬನೇ ಕೆಡುವಿ ಗೌಡರಿಂದಲೇ ಸೈ ಎನಿಸಿಕೊಳ್ಳುತ್ತಿದ್ದ ಹನುಮಂತ ಜೀತಕ್ಕೆ ಸೇರಿದ ನಂತರ ಕೃಷವಾಗಿದ್ದ, ಅವನ ದೇಹ ಗೌಡನ ಕಾಲಿನ ಮೇಲೆ ಬಿದ್ದಿತು. ಜಾತ್ರೆಗೊಮ್ಮೆ ಎಮ್ಮೆಯ ಚರ್ಮದಿಂದ ತಾನೇ ತಯಾರಿಸಿಕೊಡುತ್ತಿದ್ದ ಚಪ್ಪಲಿ ಕರುಣೆಯಿಲ್ಲದೇ ಹನುಮಂತನ ಮೈಯಿಂದ ರಕ್ತ ಒಸರಿಸಿತ್ತು. ರಕ್ತ ಮೆತ್ತಿಕೊಂಡ ಗುಬ್ಬಚ್ಚಿಯನು ಊರಿನವರು ಗುಡಿಸಲಿಗೆ ಎಸೆದುಬಂದರು ಗುಡಿಸಿಲು ದುಖ:ದ ಮಡುವಾಗಿ ಯಾರು ಅರ್ಥಮಾಡಿಕೊಳ್ಳದ ಭಾಷೆಯಾಗಿ ಮಲಗಿತ್ತು. ಎಲ್ಲವ್ವನನು ಅವಿಷ್ಕರಿಸಿದ್ದ ಆಂಧ್ರದ ಮಂತ್ರವಾದಿ ಎರಡು ದಿನದ ಹಿಂದೆ ಗುಡಿಯ ಹತ್ತಿರ ಬೀಡುಬಿಟ್ಟಿದ್ದನವನ ಕಿವಿಗೆ ಹಾಕಿದ್ದರು. ಇಬ್ಬರು ಪ್ರೇಮಿಗಳನು ಹೇಗೆ ಸೇರಿಸುವುದೆಂದು ರಾತ್ರಿಯೆಲ್ಲ ಯೋಚಿಸಿದವನಿಗೆ ಅದೇನು ಒಳದಿತ್ತೊ ಗೊತ್ತಿಲ್ಲ. ಒಂದು ದಿನ ಕುಣಿಯುತ್ತ ಊರೋಳಗೆ ಬಂದವನೆ ಗೌಡರ ಮನೆಮುಂದೆ ಬಂದುನಿಂತ, ಜನರೆಲ್ಲ ಸೇರಿದರು ಮಂತ್ರವಾದಿ ದೇವರು ಮೈಮೆಲೆ ಬಂದಂತೆ ” ಗೌಡ ನಿನ್ ಮಗಳನ್ನು ಹನುಮನ ಮಗನಿಗೆ ಮದುವೆ ಮಾಡಿದ್ರೆ ಊರು ಚಂದ್, ಇಲ್ಲ ಕೇಡುಗಾಲ ಕಟ್ಟಿಟ್ಟ ಬುತ್ತಿ ಕುದುರೆ ಹೇಳತೈತಿ ” ಎಂದು ಎಲ್ಲವ್ವನ ಗುಡಿಕಡೆ ಓಡಿಹೋದ. ಊರಿನ ಜನರೆಲ್ಲ ಭಯಬೀತರಾಗಿ ಗೌಡನಿಗೆ ಮದುವೆ ಮಾಡುವಂತೆ ಪಟ್ಟುಹಿಡಿದರು ಗೌಡನ ತಾಯಿ ಗೊಣಗುತ್ತಿತ್ತು. ತಾತನ ಕಾಲದಿಂದಲೂ ಊರಿನ ಜನರ ಪ್ರೀತಿಗಳಿಸಿದ ಮನೆತನದ ಕುಡಿಗೆ ನೂರು ಸಾರಿ ಮಗ್ಗಲು ಬದಲಿಸಿದರು ನಿದ್ದೆಬರಲಿಲ್ಲ, ಊರಿನ ಮಂದಿಯೆಲ್ಲ ಕಣ್ಣಮುಂದೆ ಬರಹತ್ತಿದರು. ನಾಳೆ ಮದುವೆ ಮಾಡಿಬಿಟ್ಟರಾಯಿತೆಂಬ ನಿರ್ಧಾರಕ್ಕೆ ಬಂದು ಬಿಟ್ಟ.

ಕೋಳಿ ಕೂಗಿದ್ದೆ ತಡ ಆಳಿನ ಮೂಲಕ ಮದುವೆಯ ವಿಷಯವನ್ನು ಡಂಗೂರ ಸಾರಿಸಿದ. ಅರ್ಧ ಜನ ಹನುಮ, ಲಚಮನನ್ನು ಕರಕೊಂಡು ಊರಿನ ಗುಡಿ ಹತ್ತಿರ ಬಂದರೆ, ಅರ್ಧ ಜನ ಗೌಡನ ಮಗಳ ಸಂಗಡ ಸೇರಿದರು ಉಟ್ಟಬಟ್ಟೆಯಲ್ಲಿಯೇ ಮಂತ್ರವಾದಿಯ ನೇತೃತ್ವದಲ್ಲಿ ಮದುವೆ ನೆರವೇರಿ ಗೂಡು ಸೇರಿದರು. ಸಾವಿತ್ರಿ, ಲಚಮನಿಗಾಗಿಯೇ ಪ್ರತ್ಯೇಕ ಮನೆಮಾಡಿಕೊಡಲಾಯಿತು. ಲಚಮ, ಸಾವಿತ್ರಿ ಶ್ಯಾಮಣ್ಣ ಮಾಸ್ತರನ ಜೊತೆ ಊರು ಬಿಟ್ಟರೆ ಬರುತ್ತಿದ್ದು ತಿಂಗಳಾದ ಮೇಲೆಯೇ ಎರಡು ದಿನ ಮಾತ್ರ ಊರಲ್ಲುಳಿಯುತ್ತಿದ್ದರು. ಜೊತೆಗೆ ಮಂತ್ರವಾದಿಯು ಇರುತ್ತಿದ್ದು ಊರಿನವರ ಅನುಮಾನಕ್ಕೆ ಕಾರಣವಾಯಿತು. ಊರಿನ ಗೌಡ ಆಳುಗಳಿಗೆ ” ಮಂತ್ರವಾದಿಯನ್ನು ಎಳಕೊಂಡ ಬರ್ರಿಲ್ಲ ” ಎಂದ ಆಳುಗಳು ಲಚಮ ಸಾವಿತ್ರಿ ಇರದ ಸಮಯದಲ್ಲಿ ಮಂತ್ರವಾದಿಯನ್ನು ಎಳೆದುಕೊಂಡು ಬಂದರು ಮಂತ್ರವಾದಿಯ ಚೀಲದಿಂದ ಚೆಲ್ಲಾಪಿಲ್ಲಿಯಾದ ಕರಪತ್ರಗಳು ಅವನ ಕತೆಯನೇಳಿದವು. ಅವನು ಶ್ಯಾಮಣ್ಣ ಮಾಸ್ತರನ ಸ್ನೇಹಿತ, ಸುಮಾರು ದಿನಗಳ ಹಿಂದೆ ಆಂಧ್ರದ ಗುತ್ತಿಯ ಹತ್ತಿರ ನಡೆದ ಪೊಲೀಸ್ ಕಾರ್ಯಚರಣೆಯಲ್ಲಿ ತಪ್ಪಿಸಿಕೊಂಡು ಬಂದು ವೇಷ ಮರಚಿಕೊಂಡು ಊರೂರು ಸುತ್ತುತ್ತಿದ್ದ, ನಕ್ಸಲ್ ಎಂದು ತಿಳಿದಾಗ ಗೌಡ ಉರಿದು ಹೋಗಿ ಪೋಲಿಸರಿಗೆ ಹೇಳಿ ಕಳಿಸಿದ ಪೋಲಿಸರು ಬರುವಷ್ಟರಲ್ಲಿ ಆಳುಗಳು ಮಂತ್ರವಾದಿಯನ್ನು ತಳಿಸಿಬಿಟ್ಟಿದ್ದರು. ಲಚಮನ ಕುಟುಂಬ ಗೌಡನ ಸೇಡಿನ ಬೆಂಕಿಗೆ ಅಂದು ರಾತ್ರಿಯೇ ಬೂದಿಯಾಯಿತು. ಸಾವಿತ್ರಿ, ಲಚಮ ಆಂಧ್ರ ಸರಕಾರ ನೆಲ್ಲಗೊಂಡದ ಅಡವಿಯಲ್ಲಿ ಕೈಗೊಂಡ ಕೂಂಬಿಂಗ್ ಕಾರ್ಯಚರಣೆಯ ಸೂಟೌಟಿನಲ್ಲಿ ಹೆಣವಾದ ಸುದ್ದಿ ಕೊತ್ತದೊಡ್ಡಿಗೆ ತಲುಪಿತು. ಜುಳು ಜುಳು ಸದ್ದು ಮಾಡುತ್ತ ಹರಿಯುತ್ತಿದ್ದ ಹೊಳೆಯ ನೀರು ಕೆಂಪಾಯಿತು. ನಮ್ಮೂರಿನ ಸೂರ್ಯ ಕೆಂಪು ಬಾವುಟವನಿಡಿದು ನೆಲ್ಲಮಲದ ಮುಳ್ಳಿನ ಕಂಟೆಯಲಿ ಅಸ್ತಮಿಸಿದ್ದನು ಯಲ್ಲವ್ವನನು ಸ್ತುತಿಸುತ್ತಿದ್ದ ಚೌಡಿಕೆಯ ನಾದ ಚರಮಗೀತೆಯಂತೆ ಒಂದೆ ಸಮನೇ ಕಣ್ಣೀರಾಕಿ ಅಳುತಿತ್ತು.

ಭೀಮಣ್ಣ ಮಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x