ಕವಿ, ಕಥೆಗಾರ, ನಾಟಕಕಾರ ಹಡವನಹಳ್ಳಿ ವೀರಣ್ಣಗೌಡರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತರು. ಇವರ ಹೊಸಸೃಷ್ಟಿ ‘ಶಬರಿಯರು’ ಕವನ ಸಂಕಲನದ ಬಗ್ಗೆ ಹೇಳಬೇಕೆಂದರೆ ಇಲ್ಲಿನ ಕವಿತೆಗಳಲ್ಲಿ ಕವಿಯು ವರ್ತಮಾನದ ಜಟಿಲತೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ಸಾಲುಗಳು ಸರಳವಾಗಿದ್ದರೂ ಕವಿತೆಗಳು ಹತ್ತು ಹಲವು ಭಾವಗಳನ್ನ ಧ್ವನಿಸುತ್ತವೆ. ಸಂಕಲನದಲ್ಲಿರುವ ಕವಿತೆ, ಕಥನಕಾವ್ಯ ಮತ್ತು ವಚನ ಪ್ರಾಕಾರಗಳಲ್ಲಿ ಒಂದು ವಿಭಿನ್ನತೆಯನ್ನು ಗುರುತಿಸಬಹುದಾಗಿದೆ.
‘ಶಬರಿಯರು’ ಸಂಕಲನದಲ್ಲಿರುವ ಕೆಲವು ಕವಿತೆಗಳು ಸಾಮಾಜಿಕ ನ್ಯಾಯದ ಹಕ್ಕೊತ್ತಾಯದ ಜೊತೆಗೆ ದಲಿತ-ಬಂಡಾಯದ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದವರ ತತ್ವಾದರ್ಶಗಳನ್ನು ಅನುಸರಿಸಬೇಕೆಂಬ ಬಯಕೆ ಅತಿಯಾಗಿ ಕಾಡಿರುವುದು ಸಮಸಮಾಜದ ನಿರ್ಮಾಣದ ಬಗ್ಗೆ ಕವಿಗಿರುವ ತುಡಿತವನ್ನು ಎತ್ತಿ ತೊರಿಸುತ್ತದೆ. ಮಾನವನ ದುರಾಸೆ, ಸಮಯ ಸಾದಕತನದ ಸಂಬಂಧಗಳು, ರೈತರ ಸಂಕಷ್ಟಗಳು, ರಾಜಕಾರಣಿಗಳ ಡೋಂಗಿತನ, ಮಕ್ಕಳ ನಿರೀಕ್ಷೆಯಲ್ಲಿ ವೃದ್ಧಾಶ್ರಮದಲ್ಲಿರುವ ಹಿರಿಯಜೀವಗಳು, ಅಂತರ್ಜಲದ ಸಮಸ್ಯೆ, ಪರಿಸರ ಹೀಗೆ ಎಲ್ಲಾ ಸಮಕಾಲೀನ ಸಮಸ್ಯೆಳೂ ಕವಿಯನ್ನು ಕಾಡಿವೆ.
ಈ ಸಂಕಲನದ ಮೊದಲ ಕವನ 'ವಿಶ್ವದ ಮಹಾಬೆಳಕು' ಬಸವಣ್ಣನವರನ್ನು ಕುರಿತದ್ದು. ಅವರು ಮಾಡಿದ ಲೋಕ ಕಲ್ಯಾಣ ಕೆಲಸಗಳು ಇನ್ನೂ ಫಲನೀಡಿಲ್ಲವೆಂಬ ವಿಷಾದದಲ್ಲಿ ಈ ಕವನ ಮೂಡಿದಂತಿದೆ. ಆದರೆ ಆ ಮಹಾ ಚೇತನದ ಆಶಯಗಳನ್ನು ವರ್ತಮಾನದ ಜಗತ್ತು ಅರಿತಿಲ್ಲವೋ, ಅರಿಯಲು ಬಯಸುತ್ತಿಲ್ಲವೋ, ಆಲೋಚಿಸಬೇಕು.
‘ಮನುಕುಲದ ಕಮ್ಮಾರ’ ಕವಿತೆಯ ಕೆಳಗಿನ ಸಾಲುಗಳು ವಿಶ್ವದ ಮಹಾ ಬೆಳಕು, ಸಮಾಜವಾದಿ , ಶರಣ ಬಸವಣ್ಣನವರ ಇಡೀ ವ್ಯಕ್ತಿತ್ವವನ್ನೆ ಅನಾವರಣಗೊಳಿಸುತ್ತವೆ.
“ ಜಾತ್ಯಾಂಧರ ಉಪಟಳದೊಳಗೂ
ಜಾತಿ-ವಿಜಾತಿ ಎನ್ನುತ್ತಿದ್ದವರೆಲ್ಲರನು
ಕೈ ಹಿಡಿದು ಕರೆತಂದು
ಮನುಷ್ಯತ್ವದ ಮರದಡಿಯಲ್ಲಿ
ಬೆಸುಗೆ ಹಾಕಿದ ಮನುಕುಲದ ಕಮ್ಮಾರ ."
'ಶಬರಿಯರು' ಈ ಕವಿತೆಯ ವೈಶಿಷ್ಟ್ಯ ವನ್ನು ಇಲ್ಲಿ ಹೇಳಲೇಬೇಕು . ನಮ್ಮ ಪುರಾಣದ ಶಬರಿ ತನಗೆ ಗೊತ್ತಿಲ್ಲದ ಅಪರಿಚಿತ ರಾಮನಿಗೆ ಕಾಯುತ್ತಾಳೆ. ಶಬರಿಯನ್ನು ರಾಮನಾಗಲಿ, ಅವನ ವ್ಯಕ್ತಿತ್ವವಾಗಲಿ ಅವಳನ್ನು ನೂಕಲಿಲ್ಲ. ಕಾಯಲು, ಕಾಣಲು ತವಕಿಸುವ ಹಂಬಲಕ್ಕೆ ಸಜ್ಜುಗೊಳಿಸುವ ಅನಿವಾರ್ಯತೆಯದು. ಆದರೆ ಈ ಕವಿತೆಯಲ್ಲಿ ಬರುವ ಶಬರಿಯರನ್ನು ಕರುಳಬಳ್ಳಿಗಳು, ಬಂಧು-ಬಳಗ ಮತ್ತು ತಮ್ಮವರೆಂಬುವರು ಕೈಬಿಟ್ಟು ಹೋಗಿರುವವರು ಅಂದರೆ ತಳ್ಳಲ್ಪಟ್ಟವರು, ಇತ್ಯಾದಿಯಾಗಿ ಗೋಚರಿಸುತ್ತಾರೆ. ಈ ಕವಿತೆ ಓದುಗರಿಗೆ ಈ ಕವಿತೆಯ ಶಬರಿಯನ್ನು ನಾವಾಗೇ ಅವರನ್ನು ಮಕ್ಕಳಾಗಿ, ಬಂಧುಗಳಾಗಿ ನೋಡಿಕೊಳ್ಳುವಂತಾದರೆ ಎಂಥ ಚಂದ ಅನ್ನಿಸತೊಡಗುತ್ತದೆ. ಇದೇ ವೇಳೆ ನಮ್ಮ ಪುರಾಣಗಳಲ್ಲಿ ಕಾದಿರುವ ಶಬರಿಗೆ ರಾಮ ಬಂದದ್ದರಿಂದ ಅವಳಿಗೆ ಗೌರವ ಬಂತು. ಪ್ರೀತಿ ಹುಟ್ಟಿತು. ಆದರೆ ಈ ಕವಿತೆಯಲ್ಲಿ ಮಕ್ಕಳು ಬಂದರೂ ಪ್ರೀತಿ ಹುಟ್ಟುವುದಿಲ್ಲ! ಕವಿಗೆ ಇದು ಬಹುವಾಗಿ ಕಾಡಿದೆ. ನಮ್ಮ ಪುರಾಣದ ಶಬರಿಗೆ ರಾಮ ಬಂದೇ ಬರುವನೆಂಬ ಖಾತ್ರಿ ಇದೆ. ಆದರೆ ಇಂದು ಕಾಯುವ ಶಬರಿಯರಿಗೆ ಆಸೆ ಹಿಂಗಿ ಹೋಗಿರುವಂತೆ ತೋರುತ್ತದೆ!! ಆದರೂ ಈ ಕವಿತೆಯ ಶಬರಿಯರಿಗೆ ತಮ್ಮ ಮಕ್ಕಳ ಬಗ್ಗೆ ಪ್ರೀತಿ ಇದೆ!
ಮಾನವನು ಸ್ವಾರ್ಥಕ್ಕಾಗಿ ದೇವರುಗಳನ್ನೆ ತಮ್ಮ ಸೇವೆಗಾಗಿ ನೇಮಿಸಿಕೊಂಡಿರುವುದರ ಬಗ್ಗೆ ‘ನಮ್ಮ ಸೇವೆಗೆ’ ಎಂಬ ಕವನದಲ್ಲಿ ಕವಿ ಕಳಗಿನ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
“ ಮೂವತ್ಮೂರು ಕೋಟಿ ದೈವಗಳ ಪೈಕಿ
ಯಾರನ್ನೂ ಬಿಟ್ಟಿಲ್ಲ
ಒಬ್ಬೊಬ್ಬರಿಗೊಂದೊಂದು
ಕೆಲಸಗಳ ಕೊಟ್ಟಿದ್ದೇವೆ
ನಿರುದ್ಯೋಗಿಗಳಲ್ಲ ಅವರಿಂದು.”
ತಾನು ಬದುಕುವ ಸಲುವಾಗಿ ಮನುಷ್ಯ ಏನೆಲ್ಲಾ ಮಾಡುತ್ತಾನೆ, ದೇವರಲ್ಲಿ ಅವನಿಗಿರುವುದು ಭಕ್ತಿಯೊ ಅಥವಾ ಭಯವೊ ಎಂಬುದನ್ನು ಸರಳವಾಗಿ ಹಾಗೂ ಅಷ್ಟೆ ಮನಸ್ಸಿಗೆ ತಾಕುವಂತೆ ಚಿತ್ರಿಸಿದ್ದಾರೆ
ಹಳ್ಳಿ ಬದುಕಿನಲ್ಲಿ ಇನ್ನು ಕೇಳದೆ ಉಳಿದಿರುವ ಪಾಠಗಳು ಅನೇಕ ಇವೆ. ಹಾಗೆಯೇ ಕೇಳಲೇಬೇಕಾದ ಪಾಠಗಳು ಕೂಡ. ಜಾನಪದ ಮತ್ತು ಅದನ್ನು ಬದುಕು ಮಾಡಿಕೊಂಡಂಥ ಜನಪದರು ಲೋಕ ಕಲ್ಯಾಣವನ್ನು ಬೆಸೆದು ಬದುಕು ಹಸನಗೊಳಿಸಿಕೊಂಡಿರುವವರು ಜಾನಪದ ವಿಶಿಷ್ಟ ಪ್ರತಿಭೆಗಳು. 'ಸಿರಿಯಜ್ಜಿ' ಕವಿತೆ ಅಂಥ ನೆನಪಿಗೆ ಒತ್ತುಕೊಡುವ ಭಿನ್ನ ಜಾಡಿನ ಕವಿತೆ.
“ ಸಾಧಕನು ನಾನೆಂದು ಸದ್ದು ಮಾಡದಿರು
ಇಂದಿನ ಗುಂಗಲ್ಲಿ ನಾಳೆಯ ಮರೆಯದಿರು.”
ಈ ಸಾಲುಗಳು ಅಲ್ಪನ ಅಹಂಕಾರಕ್ಕೆ ತಡೆಯೊಡ್ಡಿದರೆ, ‘ವಲಸೆ ಹಕ್ಕಿಯ ಪಯಣ’, ಕವಿತೆಯಲ್ಲಿ ಕವಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಉದ್ಯೋಗ ಹುಡುಕಿ ಅಂಡಲೆಯುವ ಪ್ರಸ್ತುತದ ನೈಜ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಅನಾವರಣ ಮಾಡಿದ್ದಾರೆ.ಇದು ವಲಸೆಯ ಬದುಕಿಗೆ ಕನ್ನಡಿಯಂತಿದೆ. ಗ್ರಾಮ ಭಾರತವು ನಿಧಾನಕ್ಕೆ ತನ್ನ ಕನಸನ್ನು ಕಳೆದುಕೊಳ್ಳುತ್ತಿರುವ ಅಸಹಾಯಕ ಸ್ಥಿತಿಯನ್ನು ಈ ಕವಿತೆ ಸಂಕೇತಿಸುವಂತಿದೆ.
"ಜೋಗಪ್ಪ ಬಂದೀವ್ನಿ", "ಜಗವ ಉಳಿಸಿರಣ್ಣ", "ನೆನಪಿಡ ಬೇಕು ನಮ್ಮೊಳಗೆ" ಇತ್ಯಾದಿ. ಇವು ಪರಿಸರ-ನೆಲ-ಜಲ ಕುರಿತಂತೆ ಕವಿಯ ತವಕಗಳನ್ನು, ಕಾಳಜಿಗಳನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ಗಾಂಧಿ ತತ್ವ ವಿಚಾರದಲ್ಲಿ ಉಳಿಸಿಕೊಳ್ಳುವ ಹಂಬಲವೂ ಇದೆ. 'ಪರಾಧೀನತೆ'ಯಲ್ಲಿದ್ದ ನಮಗೆ ಸ್ವಾತಂತ್ರ್ಯ ಬಂದಿದ್ದರೂ ಇನ್ನು ನಮ್ಮೊಳಗೆ ಉಳಿದಿರುವ 'ಒಳಗಿನ ಪರಾಧೀನತೆ'ಯ ಸ್ಥಿತಿಗತಿ ಕವಿಗೆ ಸಾಕಷ್ಟು ಬಾಧಿಸುತ್ತಿರುವುದನ್ನು ನೋಡಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ ವರ್ತಮಾನಕ್ಕೆ ಸಹ ಸ್ಪಂದನೆಯಾಗಿ ಇಲ್ಲಿನ ಅನೇಕ ಕವಿತೆಗಳು ಬಂದಿವೆ.
ಡಾ. ಎಸ್. ತುಕಾರಾಮ್ ಅವರು ಈ ಪುಸ್ತಕಕ್ಕೆ ಅರ್ಥಪೂರ್ಣವಾದ ಮುನ್ನುಡಿ ಬರೆದಿದ್ದಾರೆ. ಪುಸ್ತಕದ ಮುಖಪುಟ ಸುಂದರವಾಗಿ ಪ್ರಕಟಗೊಂಡಿದೆ. ಪತ್ರಕರ್ತ ದಂಡಿನಶಿವರ ಮಂಜುನಾಥ್ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ.
ಒಟ್ಟಾರೆ ಕವಿ ವೀರಣ್ಣಗೌಡರ ಕವಿತೆಗಳಲ್ಲಿ ಸಮಾಜದ ಅಂಕುಡೊಂಕುಗಳ ಅನಾವರಣವಾಗಿವೆ. ಹಾಗೆಯೇ ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸುವ ಇಲ್ಲಿನ ಕವಿತೆಗಳು ಉಪಯುಕ್ತ ಸಂದೇಶವನ್ನು ಕೂಡ ನೀಡುವಲ್ಲಿ ಸಫಲವಾಗಿವೆ.
ಶಬರಿಯರು ( ಕವನ ಸಂಕಲನ )
ಲೇಖಕರು- ಹಡವನಹಳ್ಳಿ ವೀರಣ್ಣಗೌಡ
ಪ್ರಕಾಶಕರು – ಅಪೂರ್ವ ಪ್ರಕಾಶನ
ನಂ. 458. ಮೊದಲನೇ ಕ್ರಾಸ್, ಆಳನಹಳ್ಳಿ,
ಮೈಸೂರು – 28.
ಪುಟಗಳು- 108.
ಬೆಲೆ- 80 ರೂ.