ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ. ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ ನಗರವಾಸಿಗಳಾಗುತ್ತಿದ್ದಾರೆ. ನಗರದ ಸೆಳೆತವೇ ಅಂತದ್ದು. ನಮ್ಮ ನರನಾಡಿಗಳಲ್ಲಿ ಅದಮ್ಯ ತೀರದ ಹುಚ್ಚು ಹತ್ತಿಸಿ, ಗಕ್ಕನೆ ಮಾಯಾವಿಯಂತೆ ನಮ್ಮನ್ನು ಅದರ ಕದಂಬ ಬಾಹುಗಳಲ್ಲಿ ಬಂಧಿಸಿಕೊಂಡು, ಬದುಕಿರುವವರೆಗೂ ವಿಲವಿಲನೇ ಒದ್ದಾಡಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಹಳ್ಳಿಗಳೂ ನಗರಗಳಾಗುವ ಕನಸು ಹೊತ್ತು ಸಾಗುತ್ತಿವೆ. ಹಳ್ಳಿಯೆಂಬ ಕಲ್ಪಿತ ಚಿತ್ರಣವೇ ಬದಲಾಗುತ್ತಿದೆ. ಅಂತಹುದರಲ್ಲಿ,ನಗರದಿಂದ,ಊರಿನಿಂದ,ಹಳ್ಳಿಯಿಂದ. . ಅಷ್ಟೇಕೆ ಜನವಸತಿಯಿರುವ ಪ್ರದೇಶದಿಂದಲೇ ದೂರ ನಿಂತು ರಕ್ಷಿತಾರಣ್ಯವಾದ ಬಂಟಮಲೆಯ ತಪ್ಪಲಿನಲ್ಲಿ ನೆಲೆನಿಂತ ನಾವುಗಳು ತುಂಬಾ ಸುಖಿಗಳು ಅನ್ನಿಸುತ್ತಿದೆ ಈ ಹೊತ್ತಲ್ಲಿ.
ಬಂಟಮಲೆಯೆಂಬ ಅಗಾಧ ಅರಣ್ಯ ಪ್ರದೇಶದ ಅಂಚಿನಲ್ಲಿ,ನಾಗರೀಕತೆಯಿಂದ ದೂರ ನಿಂತು,ಕಾಡುಪ್ರಾಣಿಗಳು,ಪಕ್ಷಿಗಳು,ಹೆಸರೇ ತಿಳಿಯದ ಸಹಸ್ರ ಜೀವ ಜಂತುಗಳ ಎಡೆಯಲ್ಲಿ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸು ನಮ್ಮ ಪೂರ್ವಿಕರಿಗೆ ಅದ್ಯಾಕೆ ಬಂತೋ ತಿಳಿದಿಲ್ಲ. ತಿಳಿದುಕೊಳ್ಳೋಣವೆಂದರೆ ಅವರ್‍ಯಾರೂ ಇವತ್ತು ಉಳಿದಿಲ್ಲ. ಅವರ ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳಾದ ನಮಗೂ ಕೂಡ ಬಂಟಮಲೆಯ ಹವೆಯನ್ನು ಬಿಟ್ಟು ಹೊರ ಹೋಗುವುದು ಅಸಾಧ್ಯದ ಮಾತು. ಇದು ವಂಶಪಾರಂಪರ್ಯ ಬಳುವಳಿಯಾಗಿ ಬಂದ ಭಾವವೇ ಆಗಿರಬೇಕು. ಪಳಂಗಾಯ ಎಂಬ ಬದುಕ ತಾಣ ಈವತ್ತಿಗೂ ಎಲ್ಲಕ್ಕಿಂತ ಸುಂದರವಾಗಿ ಗೋಚರಿಸುವುದು ಬಹುಷ; ಇದೇ ಕಾರಣಕ್ಕಾಗಿಯೇ ಏನೋ.
ನಮ್ಮ ಅಜ್ಜಂದಿರು ಶಾಲೆಯ ಮುಖ ಕಂಡಿದ್ದಾರೋ ಗೊತ್ತಿಲ್ಲ. ಆದರೂ ಯಾವುದೇ ಕೃಷಿ ವಿಶ್ವವಿದ್ಯಾಲಯದ ಪದವಿ ಪಡೆಯದಿದ್ದರೂ,ಯಾರಿಗೂ ಕಡಿಮೆಯಿಲ್ಲವೆನ್ನುವಂತೆ,ಅನುಭವ ಪರಿಶ್ರಮದ ಜೊತೆಗೆ ಅತೀವ ಆಕಾಂಕ್ಷೆಯಿಂದ, ಇಲ್ಲಿ ಕಾಡು ಕಡಿದು ಸಮತಟ್ಟು ಮಾಡಿ,ಅಡಿಕೆ ತೋಟ,ಗೇರು ತೋಟ ಮಾಡಿ ಅದನ್ನು ತಲೆತಲಾಂತರದವರೆಗೆ ಅನುಭವಿಸುವಂತೆ ಮಾಡಿದ ಯಶೋಗಾಥೆ ಅವರದು. ಇನ್ನು ನಮ್ಮ ಅಪ್ಪಂದಿರು ಕಾಡ ದಾರಿಯಲ್ಲಿ ಇಂಬಳ ಕಚ್ಚಿಸಿಕೊಳ್ಳುತ್ತಾ, ನಡುವೆ ಕಾಡೆಮ್ಮೆ ಅಡ್ಡ ಬಂದಾಗ ಮರ ಹತ್ತಿ ಕುಳಿತುಕೊಳ್ಳುತ್ತಾ,ದೂರದ ಪಂಜಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಶಾಲೆಯ ಮುಖ ಕಂಡಿದ್ದಾರೆ. ವಾಹನವಿಲ್ಲದೇ ಬದುಕಿದ ನಮ್ಮ ತಲೆಮಾರು ಇತ್ತೀಚೆಗೆ ಕಿಂಚಿತ್ತು ಬದಲಾಗಿದೆ. ನಾವುಗಳು ಎಷ್ಟೋ ಪುಣ್ಯವಂತರು ಅಂತ ಅನ್ನಿಸಿಕೊಳ್ಳುತ್ತಿದ್ದೇವೆ. ಆಧುನಿಕ ಸೌಲಭ್ಯಗಳಾದ ಕರೆಂಟು, ಫೋನ್,ಟಿ. ವಿ., ಮೊಬೈಲ್ ಎಲ್ಲವೂ ಈಗ ಈ ತಪ್ಪಲಿಗೆ ಬಂದು,ನಮ್ಮ ಕಾಡಮೂಲೆಗೂ ನಗರಕ್ಕೂ ದಾರಿ ಹತ್ತಿರವನ್ನಾಗಿಸಿದೆ.
ನಾವುಗಳೆಲ್ಲರೂ ನಗರಗಳಲ್ಲಿ ವಿದ್ಯಾಭ್ಯಾಸ ಪಡೆದು ಕೊಂಡು ಬಂದಿದ್ದೇವೆ. ಪೇಟೆಯ ಆಧುನಿಕ ಜೀವನ ಶೈಲಿ,ಅಲ್ಲಿನ ಕಣ್ಣುಕುಕ್ಕುವ ಚಿತ್ರಣಗಳು,ಮನರಂಜನೆಗಳು ಯಾವುದೂ ನಮ್ಮನ್ನು ಈ ಬಂಟಮಲೆಯ ಅಡಿಯಿಂದ ಮಿಮುಖರಾಗುವಂತೆ ಮಾಡಿಲ್ಲ. ದೂರದ ಹಾಸ್ಟೇಲ್‌ನಲ್ಲಿ ನಿಂತು ಕಾಲೇಜಿ ಗೆ ನಾವುಗಳು ಹೋಗುತ್ತಿದ್ದ ಸಮಯದಲ್ಲಿ ರಜೆ ಸಿಕ್ಕಾಗ ನಮ್ಮ ಗುರಿ ಇದ್ದದ್ದು ಯಾವಾಗ ಬಂಟಮಲೆಯ ತಪ್ಪಲಿಗೆ,ನಮ್ಮ ಪಳಂಗಾಯದ ಗೂಡಿಗೆ ಬಂದು ಸೇರುತ್ತೇವೋ ಎಂದು. ಪಳಂಗಾಯಕ್ಕೆ ಬರುವುದೆಂಬ ಕಲ್ಪನೆಯೇ ನಮ್ಮೊಳಗೆ ಎಂತ ಚೆಂದದ ಕನಸುಗಳನ್ನ, ಆಲೋಚನೆಗಳನ್ನ ಹುಟ್ಟುಹಾಕುತ್ತಿತ್ತು ಎಂಬುದನ್ನು ನೆನೆದರೆ ಈಗ ಅಚ್ಚರಿಯಾಗಿ ಮನಸ್ಸು ಬಾಲ್ಯಕ್ಕೆ ಹೊರಳಿಕೊಳ್ಳುತ್ತದೆ. ಚೋಮ ಚೆನಿಯರ ಜತೆಗೂಡಿ ಕಾಡು ಸುತ್ತಬೇಕು,ತೆಂಗಿನ ಮರಕ್ಕೆ ಹತ್ತಿ ಅದರ ತುದಿಯಿಂದ ಕೆರೆಗೆ ಧುಮುಕಿ ಮನಸೋ ಇಚ್ಚೆ ಈಜಬೇಕು,ಉರುಂಬಿ ಗುಂಡಿ ಜಲಪಾತ ಹತ್ತಿ ಅದರ ಮೂಲ ಅರಸಬೇಕು. ಅಂಚ ಕುಂಚ ಪಾದೆಯನ್ನು ಮಂಗಗಳ ತರಹ ಹತ್ತಬೇಕು. ಆ ಪಾದೆಗೆ ಗೊರಿಲ್ಲಾ ಮೆಟ್ಟಿ ಕುಳಿಯಾದ ಹೆಜ್ಜೆ ಯನ್ನು ತದೇಕಚಿತ್ತದಿಂದ ದಿಟ್ಟಿಸಬೇಕು. ಇಕ್ಕೆಲಗಳಲ್ಲಿ ಬೆಳೆದ ಪಾಂಡವರು ನೆಟ್ಟು ಹೋದ ಪಾಂಡು ಅಡಿಕೆ ಮರದ ಅಡಿಯಲ್ಲಿ ಕುಳಿತು, ಮತ್ತೊಮ್ಮೆ ಮುದದಿಂದ ಅದರ ಪೌರಾಣಿಕ ಐತಿಹ್ಯಗಳನ್ನು ಕೇಳಿ ತಿಳಿದು ಕೊಳ್ಳಬೇಕು. ಇಂತಹವೇ ಮುಗಿಯದಷ್ಟು ರೋಚಕ ಕಲ್ಪನೆಗಳು. ಮುದಕೊಡುವ ಈ ಕಲ್ಪನೆಗಳು ಇವತ್ತಿಗೂ ಕೂಡ ಬತ್ತಿಲ್ಲವೆಂಬುದು ಮಾತ್ರ ಅಷ್ಟೇ ಸತ್ಯ. ಅನಿವಾರ್ಯ ಕಾರಣಗಳಿಂದ ಬದುಕ ಕಟ್ಟಿಕೊಳ್ಳುವ ಭರದಲ್ಲಿ ದೂರ ತೆರಳಿದ ನನ್ನ ಒಡಹುಟ್ಟಿದವರದ್ದೂ ಇದೇ ವಾಂಛೆ. ಬಂಟಮಲೆಯ ಮಡಿಲಲ್ಲಿ ಮತ್ತೆ ಮಗುವಾಗಿಬಿಡುವ ಆಸೆ. ಕೊಟ್ಟ ಹೆಣ್ಣು ಮಕ್ಕಳು ಕುಲದಿಂದ ಹೊರಗೆ ಎಂಬ ಆಡು ಮಾತಿದೆ. ಇಷ್ಟಿದ್ದೂ ಹೆಣ್ಣು ಮಕ್ಕಳಿಗೆ ಅಡಿಗಡಿಗೆ ತನ್ನ ಬಂಧು ಬಾಂಧವರನ್ನೆಲ್ಲಾ ಕರೆತಂದು ಇಲ್ಲಿನ ಕಾನನದ ಮೌನಕ್ಕೆ ಕಿವಿಯಾಗಿಸುವುದೆಂದರೆ ಬಲು ಪ್ರಿಯವಾದ ಕೆಲಸ.
ಬಂಟಮಲೆಯ ಆಕರ್ಷಣೆಯೇ ಅಂತದ್ದು. ಬಂಟಮಲೆಯ ತಪ್ಪಲಿನಲ್ಲಿ ಬದುಕುತ್ತಿರುವ ನಮಗೆ ಏನೆಲ್ಲಾ ದಕ್ಕಿಲ್ಲ?ಇಲ್ಲಿಂದ ಚಿಮ್ಮಿ ಹರಿಯುವ ಪುಟ್ಟ ಪುಟ್ಟ ತೊರೆಗಳಲ್ಲಿ ಸಂಗೀತದ ನಾದವಿದೆ. ಸುಯ್ಯುವ ಗಾಳಿಯಲ್ಲಿ ಸಾಹಿತ್ಯದ ಗಂಧವಿದೆ. ಹಕ್ಕಿಗಳ ಕಂಠದಲ್ಲಿ ಬದುಕಿನ ಮಾಧುರ್ಯವಿದೆ. ದಟ್ಟ ಕಾನನದ ಎಡೆಯಿಂದ ನುಸುಳಿ ಬರುವ ಸೂರ್ಯನ ಕಿರಣಗಳಲ್ಲೂ ಸಮಸ್ತ ಬ್ರಹ್ಮಾಂಡವನ್ನು ಬೆಳಗಿಸುವ ಅಗಾಧ ಪ್ರಭೆಯಿದೆ. ಇಲ್ಲಿನ ಕಾಡಿನೊಳಗೆ ಬದುಕುತ್ತಿರುವ ಬುಡಕಟ್ಟು ಜನರ ನಡುವೆ ಅಪಾರ ಜಾನಪದ ಸಿರಿಯೇ ಇದೆ. ಇಷ್ಟೆಲ್ಲಾ ಬದುಕಿನ ಸಿರಿವಂತಿಕೆಯನ್ನು ಕಟ್ಟಿಕೊಟ್ಟ ಬಂಟಮಲೆ ಯಾವುದನ್ನೂ ಹೇಳಿಕೊಳ್ಳದೆ ಒಂದು ಪ್ರತಿಮೆಯಂತೆ,ಕವಿತೆ ಸಾಲಿನಂತೆ ನಮ್ಮ ಮುಂದೆ ನಿರ್ಲಿಪ್ತವಾಗಿ ನಿಂತುಕೊಂಡು, ಆವರಿಸಿಕೊಂಡು ಕಾಡುತ್ತಿದೆ. ಅನೇಕ ಮೇದಾವಿಗಳನ್ನ,ಸಾಹಿತ್ಯ ದಿಗ್ಗಜರನ್ನ,ನಾನ ರಂಗಗಳಲ್ಲಿ ಹೆಸರು ಮಾಡಿದಂತಹ ಸಾಧಕರನ್ನು ಬಂಟಮಲೆ ಕೊಡಮಾಡಲಿಕ್ಕೆ ಕಾರಣವಾಗಿದ್ದಕ್ಕೆ ಬೇರ್‍ಯಾವ ಕಾರಣಗಳನ್ನು ಕೊಡಬೇಕು ಅಂತನ್ನಿಸುವುದಿಲ್ಲ.
ಅಡಿಕೆಗೆ ಕೊಳೆರೋಗ ಭಾದಿಸುತ್ತಿದೆ. ರೇಟು ಪಾತಳಕ್ಕಿಳಿದಿದೆ. ಕೆಲಸಗಾರರ ಅಭಾವ ಹೆಚ್ಚಾಗುತ್ತಿದೆ. ರಬ್ಬರ್ ಗಿಡಗಳನ್ನು ರಾತ್ರೋ ರಾತ್ರಿ ಆನೆ ನುಗ್ಗಿ ತಿಂದು ದ್ವಂಸ ಮಾಡುತ್ತಿದೆ. ಇದ್ಯಾವುದೂ ನಮ್ಮನ್ನು ಕಂಗೆಡಿಸುತ್ತಿಲ್ಲ. ನಗರಮುಖಿಗಳಾಗುವಂತೆ ಪ್ರೇರೇಪಿಸುತ್ತಿಲ್ಲ. ನಾವು ನೆಮ್ಮದಿಯಿಂದ ಬದುಕುತ್ತೇವೆ. ಬಂಟಮಲೆಯೆಂಬ ಮಹಾತಾಯಿ ನಮ್ಮನ್ನು ಪೊರೆಯುತ್ತಾಳೆ. ಅವಳಿರುವವರೆಗೂ ನಾವು ಅವಳ ಮಡಿಲಲ್ಲಿ ನಿಶ್ಚಿಂತರು ಎಂಬ ಭಾವ ಸದ್ದಿಲ್ಲದೇ ನಮ್ಮೆದೆಯೊಳಗೆ ಹರಿಯುತ್ತಿದೆ.
-ಸ್ಮಿತಾ ಅಮೃತರಾಜ್.
*****
Wow….Sundara bantam ale. .matthu palangaya…my all tìme favourite place
Lekhana chennagide. Palangayada suthamuthalina kaadina parisara kan-mana seleyuvanthaddu. Nimma hiriyaru alli nelryuriddu nijavagiyu dodda sahasa ..
ಅಯ್ಶೋ, ನಾನೇಕೆ ಪೇಟೆಗೆ ಬಂದೆ ಅನ್ನಿಸ್ತೆ
ayyo,,,,,,,, naaneke petege bande amta annisthe
ಲೇಖನ ಬಹಳ ಚೆನ್ನಾಗಿ ಮೂಡಿದೆ.ನಮ್ಮ ಅಜ್ಜಂದಿರು ಶಾಲೆಯ ಮುಖ ಕಂಡಿದ್ದಾರೋ ಗೊತ್ತಿಲ್ಲ. ಆದರೂ ಯಾವುದೇ ಕೃಷಿ ವಿಶ್ವವಿದ್ಯಾಲಯದ ಪದವಿ ಪಡೆಯದಿದ್ದರೂ,ಯಾರಿಗೂ ಕಡಿಮೆಯಿಲ್ಲವೆನ್ನುವಂತೆ,ಅನುಭವ ಪರಿಶ್ರಮದ ಜೊತೆಗೆ ಅತೀವ ಆಕಾಂಕ್ಷೆಯಿಂದ, ಇಲ್ಲಿ ಕಾಡು ಕಡಿದು ಸಮತಟ್ಟು ಮಾಡಿ,ಅಡಿಕೆ ತೋಟ,ಗೇರು ತೋಟ ಮಾಡಿ ಅದನ್ನು ತಲೆತಲಾಂತರದವರೆಗೆ ಅನುಭವಿಸುವಂತೆ ಮಾಡಿದ ಯಶೋಗಾಥೆ ಅವರದು – ನಿಜವಾಗಿಯೂ ನಮ್ಮ ಹಿರಿಯರು ನಮಗೆ ಅನ್ನದ ತಟ್ಟೆಯಂತಿರುವ ಹೊಲಗದ್ದೆ ಮಾಡಿ ಕೊಡಲು ತಮ್ಮ ಜೀವನವನ್ನೇ ಸವೆದಿದ್ದರಲ್ಲವೇ? ಇಂದು ನಾವು ಆ ಬಗ್ಗೆ ಒಂದಿಷ್ಟು ಯೋಚನೆ ಮಾಡುದಿಲ್ಲ. ಸಮಯೋಚಿತ ಲೇಖನ.
hasirina siri thoridha lekana…. prakruthiya tholinalli yellaru manthra mugdharaguvanthidhey