ಕಥಾಲೋಕ

ಬಂಜೆ ಪದಕ್ಕೆ ಪುಲ್ಲಿಂಗ ಏನು?: ಗಿರಿಜಾ ಜ್ಞಾನಸುಂದರ್

“ಚಪಾತಿ ಹೊತ್ತಿಹೋಗ್ತಿದೆ, ಸ್ವಲ್ಪ ನೋಡ್ಬಾರ್ದಾ?” ತನ್ನ ಅತ್ತೆಯ ಕೂಗಿನಿಂದ ವರ್ತಮಾನಕ್ಕೆ ಬಂದಳು ಪ್ರೀತಿ. “ಅಡುಗೆಮನೆಲ್ಲಿದೀಯ….. ಮಾಡೋ ಕೆಲ್ಸದ ಕಡೆ ಗಮನ ಇರ್ಲಿ” ಅಂದು ಯಾಕೋ ಅವಳ ಅತ್ತೆ ಕಮಲಾ ಸ್ವಲ್ಪ ಖಾರವಾಗಿಯೇ ಇದ್ದಳು. ಪ್ರೀತಿಗೆ ಏನು ಹೇಳಲು ತೋಚದೆ ಸುಮ್ಮನೆ ತಲೆ ಬಗ್ಗಿಸಿ ಚಪಾತಿ ಮಾಡುವ ಕಡೆ ಗಮನ ಮಾಡಿದ್ದಳು.

” ಏನ್ರಿ, ನೆನ್ನೆ ಸೀತಮ್ಮನ ಮನೆಗೆ ಕುಂಕುಮಕ್ಕೆ ಹೋಗಿದ್ದೆ. ಅವಳ ಮಗನ ಮಾಡುವೆ ಮಾಡಿ ಇನ್ನು ೩ ವರ್ಷ ಆಗಿಲ್ಲ…. ಆಗ್ಲೇ ಮನೆಲ್ಲಿ ಅವಳಿ ಜವಳಿ ಮಕ್ಕಳು. ಎಂಥ ಚಂದ ಅಂತೀರಾ… ಮನೆ ಕಳೆಕಳೆಯಾಗಿದೆ” ತನ್ನ ಗಂಡನಿಗೆ ಅವಳು ಹೇಳುತ್ತಿರುವುದು ಇದು ಆರನೇ ಬಾರಿ. ಅದನ್ನು ಕೇಳಿ ಕೇಳಿ ಅವನಿಗೂ ಸಾಕಾಗಿತ್ತು. ಸುಮ್ಮನೆ ಕುಳಿತಿದ್ದ. ಪ್ರೀತಿಗೆ ಈಗ ಚೆನ್ನಾಗಿಯೇ ಅರ್ಥವಾಯಿತು, ಅತ್ತೆಯ ಮಾತು ಏಕೆ ಖಾರವಾಗಿತ್ತು ಎಂದು. ಪ್ರೀತಿ ವರುಣ್ ಇಬ್ಬರು ಮದುವೆ ಆಗಿ ೮ ವರ್ಷ ಆಗಿತ್ತು. ಇನ್ನು ಮಕ್ಕಳ ಸುದ್ದಿ ಇರಲಿಲ್ಲ. ಮೊದಮೊದಲು ಎಲ್ಲವು ಚೆನ್ನಾಗಿತ್ತು. ಸ್ವಲ್ಪ ವರ್ಷ ಕಳೆಯುತ್ತಾ ಎಲ್ಲದರಲ್ಲೂ ತಪ್ಪು ಹುಡುಕುವುದು, ಮೂದಲಿಸಿ ಮಾತನಾಡುವುದು ಶುರುವಾಯಿತು. ಮಾವ ಸ್ವಲ್ಪ ಮಿತ ಭಾಷಿ, ಹಾಗಾಗಿ ಏನು ಮಾತಾಡುತ್ತಿರಲಿಲ್ಲ. ಆದರೂ ಅವರ ಭಾವನೆಗಳು ಅವರ ಸಣ್ಣ ಪುಟ್ಟ ಮಾತುಗಳಲ್ಲಿ ಕಾಣುತ್ತಿತ್ತು. ಇವನ್ನು ಸಹಿಸಲಾರದೆ ಪ್ರೀತಿ ಆಫೀಸ್ ಕೆಲಸ ಮುಗಿಸಿ ಬೇಕಂತಲೇ ತಡವಾಗಿ ಬರುತ್ತಿದ್ದಳು. ಆದರೂ ಅವರ ಮಾತುಗಳು ಕಿವಿಗೆ ಬಿದ್ದು ಹಿಂಸೆ ಆಗುತ್ತಿತ್ತು. ವರುಣ್ ಗೆ ಹೇಳಿ ಏನು ಪ್ರಯೋಜನವಾಗುತ್ತಿರಲಿಲ್ಲ. ಅವನು ಆಫೀಸ್ ನಿಂದ ಬಂಡ ತಕ್ಷಣ ಮೊಬೈಲ್ ಹಿಡಿದು ಕುಳಿತರೆ ಇನ್ನು ಊಟಕ್ಕೆ ಕರೆಯುವ ವರೆಗೂ ಹಾಗೆ ಕುಳಿತಿರುತ್ತಿದ್ದ. ಅವನಿಗೆ ಇವ್ಯಾವ ಮಾತು ಕಿವಿಗೆ ಬೀಳುತ್ತಿರಲಿಲ್ಲ.

ಮದುವೆಯ ಮಾರನೆಯ ದಿನವೇ ಪ್ರೀತಿಯ ಬಳಿ ಒಪ್ಪಂದ ಮಾಡಿಕೊಂಡಿದ್ದ ಅವನ ಅಪ್ಪ ಅಮ್ಮನ ಮೇಲೆ ಯಾವುದೇ ರೀತಿಯ ದೂರುಗಳನ್ನು ಅವಳು ಹೇಳಬಾರದು ಎಂದು. ಹಾಗೇನಾದರೂ ಇದ್ದಾರೆ ಅವಳೇ ಅವರೊಡನೆ ಮಾತನಾಡಿ ಸರಿಪಡಿಸಿಕೊಳ್ಳಬೇಕು ಅಂದು. ಹಾಗಾಗಿ ಇಂಥ ವಿಷಯಗಳಲ್ಲಿ ಪ್ರೀತಿ ಅವನ ಸಹಾಯ ಕೋರುವ ಹಾಗಿರಲಿಲ್ಲ. ಮೊದಮೊದಲು ಬಹಳ ಬೇಜಾರಾಗುತ್ತಿತ್ತು. ಆಮೇಲೆ ಇಂಥ ಮಾತುಗಳು ಸಾಮಾನ್ಯವಾಗುತ್ತ ಬಂದವು. ಅವಳಿಗೂ ಮಕ್ಕಳೆಂದರೆ ಬಹಳ ಇಷ್ಟ, ಆದರೆ ಇನ್ನು ಮಕ್ಕಳಾಗದ ವಿಷಯಕ್ಕೆ ಸ್ವಲ್ಪ ನೋವಿತ್ತು. ಹಾಗಾಗಿ ವರುಣ್ ನನ್ನ ಒಪ್ಪಿಸಿ ಡಾಕ್ಟರ್ ಬಳಿ ಹೋದರು. ಪ್ರತಿಯೊಂದು ಪರೀಕ್ಷೆಗಳನ್ನು ಮಾಡಿ ಡಾಕ್ಟರ್ ವರದಿಯೊಂದಿಗೆ ಅವರನ್ನು ಕಾಣಲು ಕರೆದಿದ್ದರು. ವರುಣನಿಗೆ ತೊಂದರೆ ಇರುವುದಾಗಿ ತಿಳಿಸಿದ್ದರು. ಆದರೆ ಅದನ್ನು ಒಪ್ಪಲು ಅವನು ಹಾಗು ಅವನ ಮನೆಯವರು ತಯಾರಿರಲಿಲ್ಲ. ಬಹಳಷ್ಟು ಬಾರಿ ಅವನ ಬಳಿ ಚಿಕಿತ್ಸೆ ತೆಗೆದುಕೊಳ್ಳುವ ಬಗ್ಗೆ ಮಾತಾಡಿದ್ದಳು. ಆದರೆ ಅವನು ಸುತಾರಾಂ ಒಪ್ಪಿರಲಿಲ್ಲ. ಹಾಗಾಗಿ ಈ ವಿಷಯ ಅಲ್ಲಿಗೆ ಬಿಟ್ಟು ಸುಮ್ಮನಾಗಿದ್ದಳು.

ಇಷ್ಟೆಲ್ಲಾ ನಡೆದಿದ್ದರೂ ಅವಳನ್ನು ತಪ್ಪಿತಸ್ಥಳನ್ನಾಗಿಸುವುದು ಪದೇ ಪದೇ ನಡೆದಿತ್ತು. ವರುಣ್ ಮನೆಗೆ ತಡವಾಗಿ ಬರುವುದು ಸಾಮಾನ್ಯವಾಗಿತ್ತು. ಅದಕ್ಕೂ ಅವಳೇ ಕಾರಣ ಎಂದು ದೋಷಿಸಿದ್ದರು. ಅವಳು ಒಂದು ಮಗುವನ್ನು ಕೊಟ್ಟಿದ್ದಿದ್ದರೆ ವರುಣ್ ಸರಿಯಾಗಿರುತ್ತಿದ್ದ ಎಂದೆಲ್ಲ ಮಾತುಗಳು ಕೇಳಬರುತ್ತಿತ್ತು. ಪ್ರೀತಿಗೆ ಇದನ್ನೆಲ್ಲಾ ಕೇಳಿ ಮನಸ್ಸು ಬಹಳ ನೊಂದಿತ್ತು. ಅವಳ ತವರಿನವರು ಬಂದಾಗಲೂ ಇಂಥ ಮಾತುಗಳನ್ನಾಡಿ ಅವರ ಮನಸ್ಸನ್ನು ನೋಯಿಸುತ್ತಿದ್ದರು. “ಎಂಥ ಮಗಳನ್ನು ಕೊಟ್ಟು ಮದುವೆ ಮಾಡಿದ್ದೀರಿ…. ನಮ್ಮ ಮನೆಯನ್ನು ಬರಡು ಮಾಡಿಬಿಟ್ಟಳು!” ಎಂದು ಕಮಲಾ ತನ್ನ ಸೊಸೆಯನ್ನು ಅವಳ ತಾಯಿಯ ಬಳಿ ಮೂದಲಿಸುತ್ತಿದ್ದಳು. ಇದೆಲ್ಲ ಕೇಳಿ ಅವರು ನೊಂದು ಇವರ ಮನೆಗೆ ಬರುವುದನ್ನು ಬಿಟ್ಟಿದ್ದರು.

ತನ್ನ ಆಫೀಸಿನಿಂದ ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ ಪ್ರೀತಿಗೆ ಒಂದು ಪುಟ್ಟ ನಾಯಿಮರಿ ಅಪಘಾತದಿಂದ ನರಳುತ್ತಿರುವುದು ಕಂಡಿತು. ತಕ್ಷಣವೇ ಅದೆಕ್ಕೆ ಪ್ರಥಮ ಚಿಕಿತ್ಸೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅದರ ಕಾಲಿಗೆ ಬಲವಾಗಿ ಪೆಟ್ಟುಬಿದ್ದದ್ದರಿಂದ ಮೂಳೆ ಮುರಿದಿತ್ತು. ಎರಡು ತಿಂಗಳ ಪುಟ್ಟ ಮರಿ ಆದ್ದರಿಂದ ಅದಕ್ಕೆ ಆರೈಕೆ ಬೇಕಿತ್ತು. ಪ್ರೀತಿ ಅದನ್ನು ತನ್ನ ಜೊತೆಯೇ ಮನೆಗೆ ಕರೆದು ಕೊಂಡು ಬಂದಳು. ಅದು ಅವಳನ್ನು ತುಂಬ ಹಚ್ಚಿಕೊಂಡಿತ್ತು. ಅವಳೊಡನೆ ದಿನವೂ ಆಟವಾಡುವುದು, ಅವಳ ಬರುವನ್ನೇ ಕಾಯುವುದು. ಅವಳ ಮನಸ್ಸು ಉಲ್ಲಾಸಮಯವಾಗಿರುತ್ತಿತ್ತು. ಪುಟ್ಟ ನಾಯಿಗೆ ‘ಮುದ್ದು’ ಎಂದು ಹೆಸರಿಟ್ಟು ಅದನ್ನು ತುಂಬ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅವಳಿಗೆ ಜೀವನದಲ್ಲಿ ಸಂತೋಷ ಸಿಕ್ಕಿತ್ತು. ಮುದ್ದು ಅವಳಿಗೆ ಹೊಸ ಜೀವನ ಕೊಟ್ಟಿತ್ತು. ಅವಳ ಮನೆಯವರು ಅದನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಅದರ ಪ್ರೀತಿಗೆ ಮಾರು ಹೋಗದವರು ಯಾರು ಇರಲಿಲ್ಲ.

ಇದೆಲ್ಲರದ ಮಧ್ಯೆ ಅವಳ ಅತ್ತೆಯ ಮೂದಲಿಕೆ ಸ್ವಲ್ಪ ಕಡಿಮೆ ಆಗಿತ್ತು. ಅಷ್ಟರಲ್ಲಿ ಪಕ್ಕದ ಮನೆಯ ಅವಳಿ ಮಕ್ಕಳನ್ನು ಕಂಡು ಆಗಾಗ ಕೊಂಕು ಮಾತು ಕೇಳಿಬರುತ್ತಿತ್ತು. ಒಮ್ಮೆ ಗಟ್ಟಿ ಮನಸ್ಸು ಮಾಡಿ “ನೋಡಿ, ನಿಮಗೆ ಮೊಮ್ಮಕ್ಕಳೇ ಬೇಕೆಂದು ಅನಿಸಿದ್ದರೆ ಯೋಚನೆ ಮಾಡಿ. ನಿಮ್ಮ ಮಗನಿಗೆ ಚಿಕಿತ್ಸೆ ಮಾಡಿಸಿ. ಇಲ್ಲದಿದ್ದರೆ ನಾನು ದೊಡ್ಡ ಮನಸ್ಸು ಮಾಡಬೇಕಾಗುತ್ತದೆ. ನನಗೆ ಮುದ್ದು ಸಾಕು. ನಿಮ್ಮ ಆಸೆ ಪೂರೈಸಬೇಕೆಂದರೆ, ನೀವು ವರುಣ್ ಗೆ ಚಿಕಿತ್ಸೆ ಕೊಡಿಸದಿದ್ದರೆ ನಾನು ಬೇರೆ ದಾರಿ ಹಿಡಿಯಲು ನಿಮಗೆ ಒಪ್ಪಿಗೆ ಇದೆಯೇ? ” ಅವಳ ಅತ್ತೆಯ ಬಾಯಿಂದ ಮುಂದೆಂದೂ ಮಕ್ಕಳ ಬಗ್ಗೆ ಮಾತು ಬರಲಿಲ್ಲ.

-ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಬಂಜೆ ಪದಕ್ಕೆ ಪುಲ್ಲಿಂಗ ಏನು?: ಗಿರಿಜಾ ಜ್ಞಾನಸುಂದರ್

  1. ತುಂಬಾ ಸುಂದರವಾದ ಕಥೆ ಪ್ರೀತಿಯ ಏನು ತಪ್ಪು ಎಲ್ಲದಿದರು ಅವಳ ಆತಿಯ ಕೊಂಕು ಮತೆಗೆಗುರಿಯಾಗುತಿದಲ್ಲೂ ಆವಳ ತಪ್ಪಈಲ್ಲದಿದರು.ಈ ಸಮಾಜದಲ್ಲಿ ಗಂಡನ ತಪಿದರು ಹೆಣಿನ ಶೋಷಣೆ ತಪಿದಲ್ಲ

Leave a Reply

Your email address will not be published. Required fields are marked *